ವೆಂಡಿ ಡೊನಿಗರ್ ಮತ್ತಾಕೆಯ ಬೆಂಬಲಿಗರ ವಿಕೃತ ಮನಸ್ಥಿತಿ
ಅಮೆರಿಕದ ಲೇಖಕಿ ವೆಂಡಿ ಡೊನಿಗರ್ ಬರೆದ "ದಿ ಹಿಂದೂಸ್- ಆ್ಯನ್ ಆಲ್ಟರ್ನೇಟಿವ್ ಹಿಸ್ಟರಿ" ಎಂಬ ವಿವಾದಾತ್ಮಕ ಪುಸ್ತಕವನ್ನು ಮಾರುಕಟ್ಟೆಯಿಂದ ಹಿಂಪಡೆಯಲು, ಅದರ ಬಿಡುಗಡೆ ಮತ್ತು ವಿತರಣೆಯ ಹೊಣೆ ಹೊತ್ತಿದ್ದ "ಪೆಂಗ್ವಿನ್ ಇಂಡಿಯಾ" ಒಪ್ಪಿಕೊಂಡಿದೆ. ಆ ಪುಸ್ತಕದಲ್ಲಿ ಹಿಂದುಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ ಅಂಶಗಳಿವೆ ಎಂಬ ಕೆಲವು ಹಿಂದು ಸಂಘಟನೆಗಳ ಆರೋಪದ ಹಿನ್ನೆಲೆಯಲ್ಲಿ ಪೆಂಗ್ವಿನ್ ಈ ಹೆಜ್ಜೆಯಿಟ್ಟಿದೆ. ಅದಾಗಲೇ ನಮ್ಮ ಅನೇಕ ಬುದ್ಧಿಜೀವಿಗಳು ವೆಂಡಿಯ ಪರ ವಾದ್ಯ ಬಾರಿಸತೊಡಗಿದ್ದಾರೆ. ಇನ್ನು ಅರುಂಧತಿ ರಾಯ್ ಅವರಂತೂ ಬುಧವಾರ ಪೆಂಗ್ವಿನ್ ಇಂಡಿಯಾಕ್ಕೆ ಪತ್ರ ಬರೆದು, "ನೀವು ಮಾಡಿರುವ ಕೆಲಸದಿಂದ ನಮಗೆಲ್ಲ ಆಘಾತವಾಗಿದೆ. ವೆಂಡಿಯ ಪುಸ್ತಕ ಹಿಂಪಡೆಯಲು ಕಾರಣವೇನು? ನನ್ನ ಪುಸ್ತಕಗಳನ್ನೂ ಪೆಂಗ್ವಿನ್ನಿಂದಲೇ ಪ್ರಕಟಿಸಿದ್ದೇನೆ. ಈ ಕಾರಣಕ್ಕಾಗಿಯಾದರೂ ಏಕೆ ಹೀಗೆ ಮಾಡಿದಿರಿ ಎನ್ನುವ ವಿವರಣೆಯನ್ನಾದರೂ ನಿಮ್ಮ ಲೇಖಕರಿಗೆ(ತಮಗೆ) ಕೊಡಬೇಕು" ಎಂದಿದ್ದಾರೆ. ಅವರ ಈ ಪ್ರಶ್ನೆಗೆ 'ಆಲ್ಟರ್ನೇಟಿವ್' ಆಗಿ ಉತ್ತರಿಸುವ ಧಾಟಿಯಲ್ಲಿದೆ 2002ರಲ್ಲಿ 'ರಾಜೀವ್ ಮಲ್ಹೋತ್ರಾ' ಅವರು ಬರೆದ RISA Lila - 1: Wendy's Child Syndrome ಎನ್ನುವ ಲೇಖನ. ಲೇಖನದ ಆಯ್ದ ಭಾಗ ಇಲ್ಲಿದೆ...
----
"ಅಮೆರಿಕನ್ನರು ತಿಳಿದಿರುವಂತೆ ಭಗವದ್ಗೀತೆ ಉತ್ತಮ ಕೃತಿಯಲ್ಲ. ಮಹಾಭಾರತದ ತುಂಬೆಲ್ಲ ಕೃಷ್ಣ, ತನ್ನ ಸುತ್ತಲಿರುವವರಿಗೆಲ್ಲ ಕೊಲೆ ಮತ್ತು ಸ್ವಯಂ ನಾಶಕ್ಕೆ ಕಾರಣವಾಗುವ "ಯುದ್ಧ" ಮಾಡಲು ಪ್ರಚೋದಿಸುತ್ತಾನೆ. ಭಗವದ್ಗೀತೆ ಒಂದು ಅಪ್ರಾಮಾಣಿಕ ಕೃತಿ" - ವೆಂಡಿ ಡೊನಿಗರ್, ಚಿಕಾಗೋ ವಿಶ್ವವಿದ್ಯಾಲಯ, 19 ನವೆಂಬರ್ 2000
ಅಮೆರಿಕದಲ್ಲಿ ಯಾವುದೇ ಒಂದು ದೊಡ್ಡ ಶೈಕ್ಷಣಿಕ ಕ್ಷೇತ್ರದಲ್ಲಿರುವಂತೆ, ಅಲ್ಲಿ ಧಾರ್ಮಿಕ ಕ್ಷೇತ್ರದ ಅಧ್ಯಯನ ಹಾಗೂ ಸಂಶೋಧನಾ ವಲಯದ ರಚನೆಯೂ ಅತ್ಯಂತ ವ್ಯವಸ್ಥಿತವಾಗಿದೆ. ಬುದ್ಧಿಜೀವಿಗಳು, ಪ್ರೊಫೆಸರ್ಗಳು, ಧಾರ್ಮಿಕ ಅಧ್ಯಯನಗಳ ವಿದ್ವಾಂಸರು ಈ ವಲಯದಲ್ಲಿದ್ದಾರೆ. ಭಾರತೀಯ ಧರ್ಮಗಳಿಗೆ ಸಂಬಂಧಿಸಿದ ಕ್ಷೇತ್ರದ ನಿಯಂತ್ರಣ RISA(Religions In South Asia) ಎಂಬ ಸಂಸ್ಥೆಯ ಹಿಡಿತದಲ್ಲಿದೆ. ಈ ಸಂಸ್ಥೆ ಅಮೆರಿಕನ್ ಆಕಾಡೆಮಿ ಆಫ್ ರಿಲಿಜನ್(AAR) ನ ಪ್ರಮುಖ ಭಾಗ. ಸುಮಾರು 10,000 ವಿದ್ವಾಂಸರ ಸದಸ್ಯತ್ವವಿರುವ, ದಿನದಿನಕ್ಕೂ ಬೆಳೆಯುತ್ತಿರುವ ಆಆಖನ ಪ್ರಭಾವ ಭವಿಷ್ಯದ ಧಾರ್ಮಿಕ ಅಧ್ಯಯನಗಳ ದಿಕ್ಕಿನ ಮೇಲೆ ಮತ್ತು ಒಟ್ಟಾರೆಯಾಗಿ ಮಾನವ ಸಮಾಜದ ಮೇಲೆ ನಿಸ್ಸಂಶಯವಾಗಿಯೂ ಪ್ರಭಾವ ಬೀರಲಿದೆ.
ಇಂಥ ವಿದ್ವಾಂಸರ ತತ್ವಗಳು ಅಂತಾರಾಷ್ಟ್ರೀಯ ಅಧ್ಯಯನಗಳಲ್ಲಿ, ಮಹಿಳಾ ಅಧ್ಯಯನದಲ್ಲಿ, ತತ್ವಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ, ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿದೆ. ಈ ಕಾರಣಕ್ಕಾಗಿಯೇ ಅವರ ಒಂದು ಚಿಕ್ಕ ತಪ್ಪೂ ಕೂಡ ಅತಿದೊಡ್ಡ ಹಾನಿಮಾಡಬಲ್ಲದು. ಭಾರತೀಯ ಸಮಾಜದ ಬಗ್ಗೆ ಈ ರಿಸಾ ಸಂಸ್ಥೆಯ ಪಂಡಿತರೆಲ್ಲ ಹುಟ್ಟುಹಾಕಿರುವ ಸುಳ್ಳುಗಳನ್ನೆಲ್ಲ ಬೆತ್ತಲೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.
ವೆಂಡಿ ಡೊನಿಗರ್ ಅವರು ನಿಸ್ಸಂಶಯವಾಗಿಯೂ ಹಿಂದು ಧರ್ಮ ಅಧ್ಯಯನದಲ್ಲಿ ಇಂದು ದೊಡ್ಡ ಮತ್ತು ಬಲಿಷ್ಠ ಹೆಸರು. ಅಮೆರಿಕನ್ ಅಕಾಡೆಮಿ ಆಫ್ ರಿಲಿಜನ್ನ ಮುಖ್ಯಸ್ಥ ಪಾತ್ರವನ್ನು ನಿರ್ವಹಿಸಿದ ಪ್ರಭಾವಿ ವ್ಯಕ್ತಿಯಾಕೆ. ಅವರ ಇನ್ನೊಂದು ಕೀರ್ತಿಯೆಂದರೆ, ತಮ್ಮ ಅನೇಕ ಶಿಷ್ಯಂದಿರಿಗೆ ಹಿಂದು ಧರ್ಮಾಧ್ಯಯನದಲ್ಲಿ ಪಿಹೆಚ್ಡಿ ಪ್ರದಾನ ಮಾಡಿ ಪ್ರಪಂಚದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲೆಲ್ಲ ಅವರನ್ನು ಕೂರಿಸಿರುವುದು. ಈ ಶಿಷ್ಯರ ಕೆಲಸ ತಮ್ಮ ಗುರುವಿನ ಮಹಿಮೆಯನ್ನು, ಆಕೆಯ ಬರಹಗಳನ್ನು ಎಲ್ಲೆಡೆ ಪಸರಿಸುವುದು. ರಿಸಾದಿಂದ ಹುಟ್ಟಿಕೊಂಡಿರುವ ಈ ಶಿಕ್ಷಣ ತಜ್ಞರು ಭಾರತದ ಮಹಾನ್ ಪುರುಷರ ಬಗ್ಗೆ ತಮ್ಮದೇ ಆದ ಕಥೆಯನ್ನು ಹೇಳುತ್ತಾರೆ.
ಖಐಖಆದ ಸುಳ್ಳುಗಳಿಂದ ಭಾರತೀಯ ಸಮಾಜಕ್ಕೆ ಹಾನಿಯೇನೂ ಆಗಲಾರದು ಎಂದು ನೀವು ಭಾವಿಸಿದ್ದರೆ, ಅದರಂಥ ದೊಡ್ಡ ತಪ್ಪು ಯಾವುದೂ ಇರಲಿಕ್ಕಿಲ್ಲ. ಇಂದು ಅನೇಕ ಭಾರತೀಯರು ಅಮೆರಿಕದಲ್ಲಿದ್ದಾರೆ. ಅವರ ಮಕ್ಕಳು ಅಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿನ ಪಠ್ಯಪುಸ್ತಕಗಳ ರೂಪಣೆಯಲ್ಲಿ RISA ದ ತಲೆಗಳೇ ಕೆಲಸಮಾಡುತ್ತವೆ. ಮೈಕ್ರೋಸಾಫ್ಟ್ನ ಎನ್ಕಾರ್ಟಾದಲ್ಲಿ ಮತ್ತು ಇನ್ನುಳಿದ ಎನ್ಸೈಕ್ಲೋಪೀಡಿಯಾಗಳಲ್ಲಿ ಹಿಂದು ಧರ್ಮದ ಕುರಿತು ಬರುವ ಮಾಹಿತಿ ಮತ್ತು ಲೇಖನಗಳಲ್ಲಿ ವೆಂಡಿ ಮತ್ತು ಆಕೆಯ ಶಿಷ್ಯರ ಪಾಲೂ ಬಹಳಷ್ಟಿದೆ. ಇದೇ ಕಾರಣಕ್ಕಾಗಿಯೇ ಇಂದು ಬಹುತೇಕ ಅಮೆರಿಕನ್ನರು ಭಾರತೀಯರನ್ನು ಮತ್ತು ನಮ್ಮ ಸಂಸ್ಕೃತಿಯನ್ನು ವಿಕೃತವೆಂದು ಭಾವಿಸುತ್ತದೆ. ಅವರೇಕೆ ಹೀಗೆ ಯೋಚಿಸುತ್ತಾರೆ ಎನ್ನುವುದಕ್ಕೆ RISA ಎಂಬ ಸಂಸ್ಥೆಯೇ ಉತ್ತರವಾಗಬಲ್ಲದು!
ವೆಂಡಿಯವರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಲ್ಲೊಬ್ಬ ಜೆಫ್ರಿ ಕ್ರಿಪಾಲ್. ತನ್ನ ಪಿಹೆಚ್ಡಿಗಾಗಿ ಈತ ಆಯ್ದುಕೊಂಡದ್ದು ರಾಮಕೃಷ್ಣರ ಜೀವನವನ್ನು! ಸಂಶೋಧನೆಗಾಗಿ ಆತ ರಾಮಕೃಷ್ಣ ಮಿಷನ್ಗೂ ಭೇಟಿಕೊಟ್ಟ. ಆ ಮಠದವರು ಸಂತೋಷದಿಂದಲೇ ಆತನಿಗೆ ಆತಿಥ್ಯ ನೀಡಿದರು. ಆತ ಕೇಳಿದ ಎಲ್ಲಾ ಮಾಹಿತಿಗಳನ್ನೂ ಒದಗಿಸಿದರು. ಆತ ತನ್ನ ಥೀಸಿಸ್ ಅನ್ನೂ ಸಿದ್ಧಗೊಳಿಸಿದ. ಆದರೆ ಯಾವುದೇ ಕಾರಣಕ್ಕೂ(ದೋಷಗಳ ತಿದ್ದುಪಡಿಗೂ) ಅದನ್ನು ರಾಮಕೃಷ್ಣ ಮಿಷನ್ನ ವಿದ್ವಾಂಸರಿಗೆ ತೋರಿಸಲಿಲ್ಲ!
ವರ್ಷಗಳ ನಂತರ ರಾಮಕೃಷ್ಣ ಮಿಷನ್ನ ವಿದ್ವಾಂಸರಿಗೆ ಕ್ರಿಪಾಲ್ನ ಕುಟಿಲ ಕೃತಿಯ ಬಗ್ಗೆ ತಿಳಿಯಿತು. Kali's Child ಎಂಬ ಆತನ ಪುಸ್ತಕ ವೆಂಡಿ ವಲಯದಲ್ಲಿ ಎಷ್ಟು ಪ್ರಖ್ಯಾತವಾಯಿತೆಂದರೆ ಕೂಡಲೇ ಆತನಿಗೆ ಅಮೆರಿಕನ್ ಆಕಾಡೆಮಿ ಆಫ್ ರಿಲಿಜನ್ನಿಂದ ಪ್ರಶಸ್ತಿ, ಹಾರ್ವರ್ಡ್ನಲ್ಲಿ ಕೆಲಸ ಹಾಗೂ ರೈಸ್ ವಿಶ್ವವಿದ್ಯಾಲಯದ ಸಲಹಾ ಸಮಿತಿಯಲ್ಲಿ ದೊಡ್ಡ ಹುದ್ದೆ ಸಿಕ್ಕಿತು! ತನ್ನ ಥೀಸಿಸ್ಗೆ ಬೆಂಗಾಲಿ ಪುಸ್ತಕಗಳ ಆಧಾರವಿದೆಯೆಂದು ಆತ ಹೇಳಿದನಾದರೂ, ತಪ್ಪು ಮತ್ತು ಪ್ರಮಾದದ ಅನುವಾದವೇ ಅದರಲ್ಲಿ ತುಂಬಿತ್ತು. ತಲೆಕೆಟ್ಟ ಕೆಲವು ಎಡಪಂಥೀಯ ಬೆಂಗಾಲಿಗಳ ಪುಸ್ತಕವನ್ನೇ ಆಧಾರವಾಗಿಟ್ಟುಕೊಂಡು, ಅದಕ್ಕೆ ತನ್ನದೇ ಒಂದಿಷ್ಟು ಕಲ್ಪನೆಯನ್ನು ಸೇರಿಸಿ, "ಭಾರತೀಯ ಸಂತ ರಾಮಕೃಷ್ಣ ಸಲಿಂಗ ಕಾಮಿಯಾಗಿದ್ದರು, ಶಿಶು ಪೀಡಕನಾಗಿದ್ದರು. ಸ್ವಾಮಿ ವಿವೇಕಾನಂದರನ್ನೂ ಅವರು ಹಿಂಸಿಸಿದರು" ಎಂದು ಘೋಷಿಸಿದ. ಇಷ್ಟೆಲ್ಲ ಹೇಳಿ ಕೊನೆಗೆ ಆತ ಹೇಳುವುದು "ನವ ಭಾರತೀಯ ಸಮಾಜದ ಮನಸ್ಥಿತಿಯನ್ನು ಅರಿತುಕೊಳ್ಳಬೇಕಾದರೆ, ಇಡೀ ಹಿಂದು ಸಮಾಜದ ಲೈಂಗಿಕ ವರ್ತನೆಯ ಬಗ್ಗೆ ವಿಶ್ಲೇಷಣೆ ನಡೆಸುವ ಅಗತ್ಯವಿದೆ" ಎಂದು!
ವೆಂಡಿ ರೋಗದಿಂದ ಬಳಲುತ್ತಿರುವ RISAದ ಇನ್ನೊಬ್ಬ ಪ್ರಮುಖ ಬುದ್ಧಿಜೀವಿಯೆಂದರೆ ಸರಾ ಕಾಲ್ಡ್ವೆಲ್. ಈಕೆ ತನ್ನ ಸಂಶೋಧನಾ ಪ್ರಬಂಧ “The Blood thirsty tongue and the self fed breast, homosexual fellatio fantasy in a south Indian ritual tradition” Væ ಪ್ರತಿಷ್ಠಿತ ರಾಬರ್ಟ್ ಸ್ಟೋಲರ್ ಪ್ರಶಸ್ತಿ ಪಡೆದಿದ್ದಾಳೆ. ಇಷ್ಟೇ ಅಲ್ಲದೆ ಹಿಂದು ದೇವತೆಯನ್ನು ಕಾಮೋನ್ಮತ್ತಳು, ರಕ್ತಪಿಪಾಸು ಎಂದು ಬಿಂಬಿಸುವ Oh Terrifying Mother: Sexuality, Violence and Worship of the Mother Kali ಎನ್ನುವ ಪುಸ್ತಕವೂ ಅಮೆರಿಕದ ಬೌದ್ಧಿಕ ವಲಯದಲ್ಲಿ ಹೆಚ್ಚು ಖ್ಯಾತಿ ಪಡೆದಿದೆ.
ಸಿಂಥಿಯೂ ಹ್ಯೂಮ್ಸ್ ಎನ್ನುವವರು ಕಾಲ್ಡ್ವೆಲ್ರನ್ನು ಸಂದರ್ಶಿಸಿ ಲೇಖನವೊಂದನ್ನು ಪ್ರಕಟಿಸಿದ್ದರು. ಹೇಗೆ ಕಾಲ್ಡ್ವೆಲ್ ಕಾಳಿಯ ಕುರಿತಾದ ಪ್ರಬಂಧಗಳಲ್ಲಿ ಮತ್ತು ಪುಸ್ತಕಗಳಲ್ಲಿ ತನ್ನ ವೈಯಕ್ತಿಕ ಘಟನೆಗಳ ಸ್ಪರ್ಶ ಕೊಡುವ ಕೆಲಸ ಮಾಡುತ್ತಾಳೆ ಎನ್ನುವುದನ್ನು ಹ್ಯೂಮ್ಸ್ ಹೇಳಿದ್ದರು.
ಫ್ರಾಯ್ಡ್ನ ಮನೋವಿಶ್ಲೇಷಣಾ ವಿಧಾನವನ್ನು ಹಿಂದು ಧರ್ಮಕ್ಕೆ ಅಥವಾ ಅನ್ಯ ಕ್ರಿಶ್ಚಿಯನೇತರ ಧರ್ಮದ ಅಧ್ಯಯನಕ್ಕೆ ಅನ್ವಯಿಸುವುದು ತಪ್ಪು. ಈ ವಿದ್ವಾಂಸರೆಲ್ಲ ತರಬೇತಿ ಪಡೆದ ಮಾನಸಿಕ ವಿಶ್ಲೇಷಕರಂತೂ ಅಲ್ಲ.
ಬಹಳ ಸಡಿಲ ಮತ್ತು ಕ್ರಮವಿಲ್ಲದ ವ್ಯಾಖ್ಯಾನಗಳನ್ನು ಬಳಸಿಕೊಂಡು ತಮ್ಮ ವೈಯಕ್ತಿಕ ರೋಗಲಕ್ಷಣಗಳನ್ನು ಮತ್ತೊಬ್ಬರಲ್ಲಿ ಹುಡುಕಿ ಸತ್ಯವನ್ನು ಎಳೆದಾಡುವುದು ಅಥವಾ ಸುಳ್ಳನ್ನು ಹೇಳುವುದನ್ನು ನಾನು Wendy's Child Syndrome ಎನ್ನುತ್ತೇನೆ. ಹಾಗಾಗೇ ಜೆಫ್ ಕ್ರಿಪಾಲ್ನ ವೈಯಕ್ತಿಕ ತುಮುಲಗಳನ್ನು ತಿಳಿದುಕೊಳ್ಳಬೇಕಾದರೆ ಆತನ Kali's Child ಪುಸ್ತಕವನ್ನು ಓದಬೇಕು. ಅಂತೆಯೇ ಕಾಲ್ಡ್ವೆಲ್ರ ಲೇಖನಗಳಲ್ಲಿ, ಒಬ್ಬ ಮಾನಸಿಕ ಕ್ಷೋಭೆಗೊಳಗಾದ, ಅಪರಾಧ ಪ್ರಜ್ಞೆ ಮತ್ತು ವಿಕ್ಷಿಪ್ತತೆಯಿಂದ ನರಳುತ್ತಿರುವ ಪಾಶ್ಚಾತ್ಯ ಮಹಿಳಾವಾದಿಯ ಆತ್ಮಚರಿತ್ರೆಯನ್ನು ಕಾಣಬಹುದು!
ಒಬ್ಬ ದೇವಿಗೆ ಬಹುರೂಪಗಳಿರುತ್ತವೆ ಎನ್ನುವುದನ್ನು ಹಿಂದುಗಳು ನಂಬುತ್ತಾರೆ. ಈ ಕಾರಣಕ್ಕಾಗಿಯೇ ಕಾಳಿಯಲ್ಲಿ ಆಕೆಯ ಎಲ್ಲಾ ರೂಪಗಳನ್ನು(ಪ್ರೇಮಮಯ, ರೌದ್ರವೊಳಗೊಂಡಂತೆ) ಕಾಣುತ್ತಾರೆ. ಆದರೆ ಪಾಶ್ಚಾತ್ಯರು ಕೆಲವೇ ಕೆಲವು ರೂಪಗಳನ್ನು ವೈಭವೀಕರಿಸಿ, ಅದರಲ್ಲೂ ಮುಖ್ಯವಾಗಿ ಲೈಂಗಿಕ ಮತ್ತು ಹಿಂಸಾತ್ಮಕ ರೂಪವನ್ನೇ ಆ ದೇವಿಯ ನಿಜರೂಪ ಎಂದು ಬಿಂಬಿಸುತ್ತಿದ್ದಾರೆ. ಇದು ಹೇಗಿದೆಯೆಂದರೆ, ಬಿಲ್ ಕ್ಲಿಂಟನ್ನ ಬಗ್ಗೆ ಪಠ್ಯದಲ್ಲಿ ಬರೆಯುವಾಗ, ಆ ಇಡೀ ಅಧ್ಯಾಯವನ್ನು ಕೇವಲ ಮೋನಿಕಾ ಲೆವಿನ್ಸ್ಕಿಗೇ ಮೀಸಲಿಟ್ಟಂತೆ!
ಊಹಿಸಿದಂತೆಯೇ, ಕಾಲ್ಡ್ವೆಲ್ ಕೂಡ ಜೆಫ್ ಕ್ರಿಪಾಲ್ನ ಕೆಲಸವನ್ನು ಬೆಂಬಲಿಸುತ್ತಾಳೆ. ಅದರೊಟ್ಟಿಗೆ ಆಕೆ ಒಂದು ಮಾತನ್ನೂ ಹೇಳುತ್ತಾಳೆ. ಹಿಂದುಗಳು ತಮ್ಮನ್ನು ವಿರೋಧಿಸಲು ಕಾರಣ, ಹಿಂದು ಸಮಾಜದ ಮಾನಸಿಕ ಅಸ್ವಸ್ಥತೆ. ಹಿಂದುಗಳ ತೊಂದರೆಯೇನೆಂದು ಪತ್ತೆಹಚ್ಚಬೇಕಾದರೆ, ಅವರ ಮನೋವಿಶ್ಲೇಷಣೆ ನಡೆಯಬೇಕು ಎನ್ನುವ ಸಲಹೆಯನ್ನೂ ಕೊಡುತ್ತಾಳೆ. ಇದೇ ಮಾತನ್ನೂ ವೆಂಡಿ ಡೊನಿಗರ್ ಪುನರುಚ್ಚರಿಸುತ್ತಾಳೆ.
"ನಾನು ನಿನ್ನ ಬೆನ್ನು ತುರಿಸುತ್ತೇನೆ, ನೀನೂ ನನ್ನ ಬೆನ್ನು ಕೆರಿ" ಎನ್ನುವುದು ಇದಕ್ಕೇ ಇರಬೇಕೇನೋ?
ಪೌಲ್ ಕೋರ್ಟ್ರೈಟ್ ಎನ್ನುವ ಇನ್ನೊಬ್ಬ ಮಹಾಶಯರಿದ್ದಾರೆ. ಎಮೋರಿ ವಿ.ವಿ.ಯಲ್ಲಿ ಭಾರತೀಯ ಧರ್ಮಗಳ ಪ್ರೊಫೆಸರ್ ಇವರು. ಪದವಿ ವಿದ್ಯಾರ್ಥಿಗಳಿಗಾಗಿ ಅವರು ಬರೆದ ಪಠ್ಯವೊಂದು ಗಣೇಶ ಮತ್ತು ಶಿವನನ್ನು ವಿಕೃತವಾಗಿ ಬಿಂಬಿಸುವುದಕ್ಕೇ ರಚಿತವಾಗಿದೆ. "ಶಿವ ಸಾಮೂಹಿಕ ಅತ್ಯಾಚಾರಗಳನ್ನು, ವ್ಯಭಿಚಾರವನ್ನು ಬೆಂಬಲಿಸಿ, ಹಿಂದು ಸಮಾಜದಲ್ಲಿ ಹಿಂಸೆಯ ಪ್ರತೀರೂಪವಾಗಿ ಉಳಿದಿದ್ದಾನೆ" ಎನ್ನುತ್ತದೆ ಪೌಲ್ ಬರೆದ ಪಠ್ಯ. ಈ ಪುಸ್ತಕಕ್ಕೆ ಮುನ್ನುಡಿ ಬರೆದು ಬೆನ್ನು ತಟ್ಟಿದ್ದು ವೆಂಡಿ!
ಡೇವ್ ಫ್ರೀಡ್ಹೊಂ ಎನ್ನುವ ವಿದ್ವಾಂಸರೊಬ್ಬರು ಮೇಲಿನವರ ಬೌದ್ಧಿಕ ರೂಪವನ್ನು ತೀವ್ರವಾಗಿ ಖಂಡಿಸುತ್ತಾರೆ. "ಹಿಂದು ಧರ್ಮವನ್ನು ಅತ್ಯಂತ ಹೀನವಾಗಿ ಬಿಂಬಿಸುವ ಕೆಲಸ ಬೌದ್ಧಿಕವಲಯದಿಂದ ಆಗುತ್ತಿದೆ" ಎಂದವರು ಹೇಳುತ್ತಾರೆ.
ಹಾರ್ವರ್ಡ್ ವಿ.ವಿ.ಯ ಪ್ರೊಫೆಸರ್ ಮಿಚೆಲ್ ವಿಟ್ಜೆಲ್, ವೆಂಡಿ ಡೊನಿಗರ್ಳ ಸಂಸ್ಕೃತ ಜ್ಞಾನವನ್ನು ಪ್ರಶ್ನಿಸುತ್ತಾರೆ. ತಮಗೆ ಸೂಕ್ತವಾದ ಸಾಲುಗಳನ್ನಷ್ಟೇ ಅನುವಾದ ಮಾಡಿ ಅಥವಾ ಅರ್ಥ ಕೆಡಿಸಿ ಹೇಗೆ ವಿಂಡಿ, ಹಿಂದು ಧರ್ಮವನ್ನು ಹಳಿಯುವ ಕೆಲಸ ಮಾಡುತ್ತಿದ್ದಾಳೆ ಎನ್ನುವುದನ್ನು ಮಿಚೆಲ್ ಹೇಳುತ್ತಾರೆ.
50 ವರ್ಷಗಳ ಹಿಂದೆ ಅಮೆರಿಕದ ವಿದ್ವಾಂಸರು ಎರಡು ಸಂಸ್ಥೆಗಳನ್ನು ಹುಟ್ಟುಹಾಕಿದರು, AAR ಮತ್ತು SBL (Society of Biblical Literature). ಕ್ರಿಶ್ಚಿಯನ್ ಧರ್ಮದ ಅಧ್ಯಯನ ಮತ್ತು ಪ್ರಚಾರದ ಕೆಲಸವನ್ನು ಖಇಔ ಮಾಡಿದರೆ, ಒಂದು ಸಂಪ್ರದಾಯವನ್ನು ಹೊರಗೆ ನಿಂತು ವಸ್ತುನಿಷ್ಠವಾಗಿ ವೀಕ್ಷಿಸುವ ಕೆಲಸ ಆಆಖ ನ ಸದಸ್ಯರದ್ದು. ಆದರೆ ನಾನು ಗಮನಿಸಿದಂತೆ ಹಿಂದು ಧರ್ಮದ ಹೊರಗಿರುವ ಇವರೆಲ್ಲ, ಕ್ರಿಶ್ಚಿಯಾನಿಟಿ/ ಮಾರ್ಕ್ಸಿಸಂ/ ಪಾಶ್ಚಾತ್ಯ ಸ್ತ್ರೀವಾದವನ್ನು ಒಳಗಿನಿಂದ ಬೆಂಬಲಿಸುವವರೇ! ವಿದ್ವಾಂಸರು ಇನ್ನೊಂದು ಧರ್ಮವನ್ನು ಟೀಕಿಸುವುದರಲ್ಲಿ ತಪ್ಪಿಲ್ಲ, ಆದರೆ ಅದಕ್ಕೆ ಹೊಸ ವ್ಯಾಖ್ಯಾನ ಕೊಡುವುದಿದೆಯಲ್ಲ ಅದು ದೊಡ್ಡ ಅಪರಾಧ.