ಶಾಮರಾವ್ ಆತ್ಮಕತೆ ಅಪರೂಪದ ನಡೆ
9.2.14ರ ಖುಷಿ ಸಂಚಿಕೆಯು ಬಹಳ ಚೆನ್ನಾಗಿತ್ತು. 'ಹತ್ತುವರೆ ನಿಯಮ' ಮತ್ತು ಭರವಸೆಯ 25 ಪತ್ರಕರ್ತರು ಲೇಖನವು ಮುಖ್ಯವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿತ್ತು ಮತ್ತು ಆ ಪತ್ರಕರ್ತರ ಪರಿಚಯ ಸಮಾಜಕ್ಕೆ ಮಾಡಿಕೊಟ್ಟಿದ್ದು ಶ್ಲಾಘನೀಯ. ಹತ್ತುವರೆ ನಿಯಮದಲ್ಲಿ 'ಪತ್ರಿಕೋದ್ಯಮವನ್ನು ಕಲಿಯಬೇಕೇ ವಿನಾ ಕಲಿಸಲು ಸಾಧ್ಯವಿಲ್ಲ' ಎಂಬ ಮಾತು ಔಚಿತ್ಯಪೂರ್ಣವಾಗಿತ್ತು.
-ಶರತ್ ಎಂ.ಆರ್. ಮಳವಳ್ಳಿ, ಪತ್ರಿಕೋದ್ಯಮ ವಿದ್ಯಾರ್ಥಿ, ಭಾರತೀ ಕಾಲೇಜು, ಭಾರತೀನಗರ
ಕನ್ನಡಪ್ರಭದ ಮುಖಪುಟದ ಚಿತ್ರಗಳು 3ಡಿ ಎಫೆಕ್ಟ್ನಲ್ಲಿ ಅಚ್ಚಾಗಿ ಬರುತ್ತಿರುವುದು ಹೊಸದೇನಲ್ಲ. ಇದರ ಬಗ್ಗೆ ಬಹಳ ಹಿಂದೆಯೇ ನಾನು ಗೋಡೆಗೆ ಬರೆದಿದ್ದೆ. ಆದರೆ ಇಂದಿನವರೆಗೂ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಹಾಗಾಗಿ ಇನ್ನು ಮುಂದೆ ಪ್ರತಿ ಭಾನುವಾರ ಖುಷಿಯ ಜೊತೆಗೆ ಒಂದು 3ಡಿ ಕನ್ನಡಕ ನೀಡುವ ವ್ಯವಸ್ಥೆ ಮಾಡಿ.
-ವಿನಾಯಕ್ ಕಾಮತ್, ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ವಿ.ವಿ., ಧಾರವಾಡ., ಮೊ. 810 5795 725
ಶಾಮರಾವ್ ಅವರ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಬರೆಯುವ ಮೂಲಕ ಉತ್ತಮ ಕೆಲಸ ಮಾಡಿದ್ದೀರಿ. ಒಂದು ಪತ್ರಿಕೆ ಬೇರೊಂದು ಸಮೂಹದ ಪತ್ರಿಕೆಯ ಬಗ್ಗೆ, ಬೇರೊಂದು ಪತ್ರಿಕೆಯ ಸಂಪಾದಕರ ಬಗ್ಗೆ ಬರೆಯುವುದು ವಿರಳ. ಕನ್ನಡಪ್ರಭ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿದೆ.
-ಕೊ.ಸು. ನರಸಿಂಹಮೂರ್ತಿ, ಮೈಸೂರು
ಇತ್ತೀಚೆಗೆ ತಮ್ಮ ಕನ್ನಡಪ್ರಭ -ಇನ್ನುಳಿದ ರಾಜ್ಯದ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿಯೂ -ಪ್ರಕಟವಾದ -"ಅಶ್ವಿನಿ ಅಂಗಡಿ" ಅಂಧ ವಿದ್ಯಾರ್ಥಿನಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಕುರಿತ ಸುದ್ದಿ ಗಮನ ಸೆಳೆಯಿತು. ಪ್ರಶಸ್ತಿ ಪಡೆದು ತಾನೇ ಸ್ವತಃ ಹಾವೇರಿ-ಕೊಪ್ಪಳದಲ್ಲಿ ಅಂಧ ಮಕ್ಕಳಿಗೆ ವಸತಿ ಶಾಲೆಯನ್ನು ತೆರೆಯಲು ಸರ್ಕಾರಕ್ಕೆ ಸಹಾಯ ನೀಡಲು ಕೋರಿದ ವಿಷಯ ನಿಜಕ್ಕೂ ಶ್ಲಾಘನೀಯ. ಅದನ್ನು ಓದಿದ ತಕ್ಷಣವೇ ನಾವು ಪ್ರತಿ ವರ್ಷ ಆಕೆಯು ಪ್ರಾರಂಭಿಸುವ ಶಾಲೆಗೆ ನಮ್ಮಿಂದಾದಷ್ಟು ಧನಸಹಾಯ ಮಾಡಬೇಕೆಂದು ತೀರ್ಮಾನಿಸಿದೆವು. ಆಕೆ ಹಾಗೂ ಅವರ ತಂದೆಗೆ ಕರೆ ಮಾಡಿ ಅಭಿನಂದನೆಗಳನ್ನು ಹೇಳಿದೆವು. ಇಂತಹ ಅದೆಷ್ಟೊ ಪ್ರತಿಭೆಗಳಿಗೆ ಇಂದಿನ ಪತ್ರಿಕೆಗಳು ಕನ್ನಡಿಯಾಗಲಿ. -ಶ್ರೀ ಚಿದಂಬರ ಪಿ. ನಿಂಬರಗಿ, ಗದಗ, ಮೊ. 900 8201422
ಬೈಟು ಕಾಫಿಯಲ್ಲಿ ಪ್ರಕಟವಾಗುತ್ತಿರುವ 'ಸಲ್ಲಾಪ' ಅಂಕಣ ಬಹಳ ರಸಭರಿತವಾಗಿ ಕಾಡುತ್ತಿದೆ. ಈ ಅಂಕಣದಲ್ಲಿ ಪ್ರಕಟವಾಗುವ ಲೇಖನಗಳು ಪುಸ್ತಕರೂಪದಲ್ಲಿ ಚಿತ್ರಸಹಿತ ಮೂಡಿ ಬರಬೇಕೆಂದು ನನ್ನ ಆಶಯವಾಗಿದೆ. ಸಂಪಾದಕರು ಈ ಬಗ್ಗೆ ಮಾಹಿತಿ ನೀಡುವಿರಾಗಿ ನಂಬುತ್ತೇನೆ.
-ಎನ್. ಮಣಿಪದವು ರವೀಂದ್ರ ನಾಯಕ್, ಪಿರ್ಕಳ
ಚೈತನ್ಯರವರೇ ನಿಮ್ಮ ಲೇಖನಗಳನ್ನು ಕೆಲವಾರು ವರ್ಷಗಳಿಂದ ಓದಿ ಸಂತಸ ಪಟ್ಟಿದ್ದೇನೆ. 'ಒಂದು ಕ್ಷಣಕ್ಕಾದರೂ ಅವರಂತೆ ಪ್ರೀತಿಸುವುದು ಸಾಧ್ಯವಾದರೆ...' ಲೇಖನ (ಕ.ಪ್ರ. 04.02.14) ಓದಿ ನಿಮ್ಮನ್ನು ಅಭಿನಂದಿಸದೆ ಇರಲು ಸಾಧ್ಯವಿಲ್ಲ. ಈ ನಿಮ್ಮ ಬರವಣಿಗೆಯ ಬಗ್ಗೆ ಮನಸ್ಸಿಗೆ ಬಂದ ಭಾವವನ್ನು ಕಾಗದದ ಮೇಲೆ ಇಳಿಸಲು ನನಗೆ ಸಾಧ್ಯವಾಗುತ್ತಿಲ್ಲ. ರಂಗನಾಥಶರ್ಮರು ಡಿವಿಜಿ, ಗೋಖಲೆ ಸಂಸ್ಥೆ, ಕಗ್ಗ, ಜೀವನ ಧರ್ಮಯೋಗ ಇವುಗಳ ಮಧ್ಯೆ ಈಜಾಡಿದ ಸುಸಂಸ್ಕೃತ ಕನ್ನಡ ಮಹಾನ್ ಚೇತನ. ಅವರಂತೆ ಉತ್ಕಟವಾಗಿ ಪ್ರೀತಿಸಲು ಮುಕ್ತವಾದ ಮನಸ್ಸು ಬೇಕು. ತೀಕ್ಷ್ಣ ತೀವ್ರ ಬರವಣಿಗೆಯ ಪ್ರತಾಪಸಿಂಹ, ನೀರಿನೊಡನೆ ತದಾತ್ಮ್ಯದ ಬಡ್ತಿ, ಪ್ರಪಂಚದ ಹೊಸ ಹೊಸ ಸಾಹಿತ್ಯಕ, ವೈಚಾರಿಕ, ಬೆಡಗುಗಳನ್ನು ಸರಳವಾಗಿ ತಿಳಿಸುವ ವಿಶ್ವೇಶ್ವರಭಟ್ಟರು ಈ ನಿಮ್ಮೆಲ್ಲರ ಶೈಲಿ ಓದಿ ಒಂದು ರೀತಿಯ ಅಸೂಯೆ ನನಗೆ. ಇರಲಿ ನಾನು ಅಸೂಯೆ ಪಡುತ್ತಿರುತ್ತೇನೆ. ನೀವು ಇಷ್ಟು ಚಂದಾಗಿ ಬರೆಯುತ್ತಲೇ ಇರಿ.
-ಎಸ್. ವೆಂಕಟೇಶ್ ಮುಡಿಯನೂರು, ನಂ, 148, ಶ್ರೀಲಲಿತೆ, 3ನೇ ಬಿ ಮುಖ್ಯರಸ್ತೆ, ಗೆಳೆಯರ ಬಳಗ, ಬೆಂಗಳೂರು- 560086
ದಿ.26ರ ವಿಶ್ವೇಶ್ವರಭಟ್ರವರ "ಏನೋ ಹೇಳಲು ಹೋಗಿ ಏನೋ ಆಯಿತು?" ಎಂಬ ಲೇಖನ ಹಾಸ್ಯಮಯವಾಗಿದ್ದು ಮನಸೆಳೆಯಿತು. ಈ ಲೇಖನ ಓದುತ್ತಿದ್ದಾಗ ಪದಗಳ ಪಲ್ಲಟದಿಂದ ಆಗುವ ಪರಿಣಾಮವನ್ನು ಮಾಸ್ಟರ್ ಹಿರಣ್ಣಯನವರು ಸಮಾರಂಭಗಳಲ್ಲಿ ಹಾಸ್ಯವಾಗಿ ಈ ಪ್ರಸಂಗವನ್ನು ಹೇಳುತ್ತಾ ಇದ್ದದ್ದು ನೆನಪಿಗೆ ಬಂತು. ಒಂದು ದಿನ ಮಾಸ್ಟರ್ ಹಿರಣ್ಣಯನವರು ಮನೆ ಬಳಿ ಇದ್ದ ಕಾಂಪ್ಲೆಕ್ಸ್ಗೆ ಹೊರಟರು. ಆಗ ಅವರ ಹೆಂಡತಿ "ಪಂಚೆ ಬೇರೆ ಬೇಕಾ?" ಎಂದರಂತೆ. ಆಗ ಹಾಸ್ಯ ಸ್ವಭಾವದ ಹಿರಣ್ಣಯ ಬೇಡಮ್ಮಾ, ತಗೋ ಈ ಪಂಚೇನೂ ನೀನೇ ಇಟ್ಕೋ ಎಂದರಂತೆ. ಅವರ ಹೆಂಡತಿಯ ಮನಸ್ಸಿನಲ್ಲಿ ಇದ್ದದ್ದು ಬೇರೆ ಪಂಚೆ ಬೇಕಾ? ಎಂದು ಕೇಳಬೇಕಾಗಿತ್ತು. ಆದರೆ ಪದಗಳ ಪಲ್ಲಟದಿಂದ ಬೇರೆ ಅರ್ಥವೇ ಉಂಟಾಗಿತ್ತು.
-ಕೆ. ಪ್ರಾಣೇಶರಾವ್, 395, 42ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು
ನೀವು ಏನ್ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.