ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಂಗೀತಕಲಾನಿಧಿಯೊಂದಿಗೆ ಸಂವಾದ

ಮೈಸೂರು ಆಕಾಶವಾಣಿಯಲ್ಲಿ ನನಗೆ ಕೆಲಸ ದೊರಕಿದ್ದು ನನ್ನ ಮುಂದಿನ ಸಂಗೀತಾಭಿವೃದ್ಧಿಗೆ ಸೋಪಾನವಾಯಿತು.

Srinivasa Murthy VN
Updated On : 18 Feb 2014, 11:14 am

ಸಂಗೀತಕಲಾನಿಧಿ ಡಾ. ಆರ್. ಕೆ. ಶ್ರೀಕಂಠನ್ ಅವರು ವಾಷಿಂಗ್ಟನ್ಗೆ ಒಂದೆರಡು ಸರ್ತಿ ಬಂದಿದ್ದರು. 2004ರಲ್ಲಿ ನಾನು ಇಲ್ಲಿನ ಕನ್ನಡಸಂಘದ ವಾರ್ಷಿಕ ಸಂಚಿಕೆಗೋಸ್ಕರ ಅವರದೊಂದು ಸಂದರ್ಶನವನ್ನೂ ಮಾಡಿದ್ದೆ. ಈ ವಯೋವೃದ್ಧ ಹಾಗೂ ಜ್ಞಾನವೃದ್ಧರ ಎದುರು ಕುಳಿತು ಮಾತನಾಡುವುದೇ ಒಂದು ಪುಣ್ಯ ಎಂಬ ಧನ್ಯತೆ ಆಗ ನನಗೆ ಬಂದಿತ್ತು. ಅವರು ತೀರಿಕೊಂಡಿರುವ ಈ ಸಂದರ್ಭದಲ್ಲಿ ಆ ಸಂದರ್ಶನವನ್ನು ನುಡಿ ನಮನವೆಂಬಂತೆ ಓದುಗರ ಮುಂದಿಡುತ್ತಿದ್ದೇನೆ.
-ತಮ್ಮ ಹುಟ್ಟು, ಜನ್ಮಸ್ಥಳ, ಮತ್ತು ಪೂರ್ವಜರ ಬಗ್ಗೆ ಕೆಲವು ವಿವರಗಳು, ರುದ್ರಪಟ್ಟಣದೊಂದಿಗೆ ತಮ್ಮ ಸಂಬಂಧ, ವಂಶದಲ್ಲಿ ಸಂಗೀತದ ಹಿನ್ನೆಲೆ ಇನ್ನೂ ಮುಂತಾದ ವಿಷಯಗಳನ್ನು ಹಾಗೂ ತಮ್ಮ ಬಾಲ್ಯವೃತ್ತಾಂತಗಳ ಕೆಲವು ಮುಖ್ಯ ವಿವರಗಳನ್ನು ತಿಳಿಸುವಿರಾ...
ನಾನು ಹುಟ್ಟಿದ್ದು ಮಕರಸಂಕ್ರಮಣದ ದಿನ, ಜನವರಿ 14, 1920ರಂದು, ಕಾವೇರೀ ತೀರದಲ್ಲಿರುವ ರುದ್ರಪಟ್ಟಣದಲ್ಲಿ. ನಮ್ಮ ತಂದೆ ದಿವಂಗತ ಶ್ರೀ. ಆರ್. ಕೃಷ್ಣಶಾಸ್ತ್ರಿಗಳು, ಪ್ರವಚನಕಾರರು, ಗಮಕಿಗಳು, ನಾಟಕಕಾರ, ಕವಿ, ಹರಿಕಥಾವಿದ್ವಾಂಸರು. ಅವರು, ಅವರಣ್ಣ ಶಾಮಶಾಸ್ತ್ರಿಗಳೂ ಉಪಾಧ್ಯಾಯ ವೃತ್ತಿಯಲ್ಲಿದ್ದವರು. ನಮ್ಮ ಅಜ್ಜ (ತಾಯಿಯವರ ತಂದೆ) ಬೆಟ್ಟದಪುರದ ನಾರಾಯಣಸ್ವಾಮಿ (ವೀಣೆ ನಾರಾಯಣಸ್ವಾಮಿ ಎಂತಲೂ ಪ್ರಸಿದ್ಧರಾಗಿದ್ದವರು) ವೀಣೆ ಶೇಷಣ್ಣ, ಸುಬ್ಬಣ್ಣ ಇವರುಗಳ ಸಮಕಾಲೀನರು. ನಮ್ಮ ತಾಯಿ ಸಣ್ಣಮ್ಮನವರು ಸಹ ಚೆನ್ನಾಗಿ ಹಾಡುತ್ತಿದ್ದರಂತೆ. ಒಳ್ಳೆಯ ಶಾರೀರವಂತೆ, ಆದರೆ ನಾನು ಚಿಕ್ಕವನಿದ್ದಾಗಲೇ ಅವರನ್ನು ಕಳೆದುಕೊಂಡದ್ದರಿಂದ ನನಗೆ ಯಾವ ನೆನಪೂ ಇಲ್ಲ. ಚಿಕ್ಕ ವಯಸ್ಸಿನಲ್ಲಿ ನಮ್ಮಕ್ಕನೆ ನನ್ನನ್ನು ನೋಡಿಕೊಂಡರಂತೆ. ನಮ್ಮ ತಂದೆ ಕೇರಳಾಪುರ, ರಾಮನಾಥಪುರ ಮುಂತಾದ ಊರುಗಳಲ್ಲಿ ಅಧ್ಯಾಪಕ ವೃತ್ತಿ ಮುಗಿಸಿದಮೇಲೆ, ನಮ್ಮ ತಾಯಿ ತೀರಿಕೊಂಡಮೇಲೆ ಮೈಸೂರಿನಲ್ಲಿ ಬಂದು ನೆಲೆಸಿದರು.
ನನ್ನ ದೊಡ್ಡಣ್ಣ ಶ್ರೀ. ಆರ್. ಕೆ. ವೆಂಕಟರಾಮ ಶಾಸ್ತ್ರಿ. ಅವರೇ ನನಗೆ ತಾಯಿ ತಂದೆ, ಗುರು ಎಲ್ಲವೂ ಆಗಿ ನನ್ನನ್ನು ಸಲಹಿದರು. ನಾರಾಯಣಸ್ವಾಮಿ ಮತ್ತು ರಾಮನಾಥನ್ ಇನ್ನಿಬ್ಬರು ಅಣ್ಣಂದಿರು, ನಾನೇ ಕೊನೆಯವನು. ಮೈಸೂರಿನಲ್ಲಿ, ಸದ್ವಿದ್ಯಾ ಪಾಠಶಾಲೆ, ಬನುಮಯ್ಯ ಪ್ರೌಢಶಾಲೆ ಮತ್ತು ಮಹಾರಾಜಾ ಕಾಲೇಜಿನಲ್ಲಿ ಓದಿ ಬಿ.ಎ. ಪಾಸ್ ಮಾಡಿ ವಿದ್ಯಾಭ್ಯಾಸ ಮುಗಿಸಿದೆ.
-ಸಂಗೀತದ ಬಗ್ಗೆ ಒಲವು ಬೆಳೆದದ್ದು ಹೇಗೆ, ಎಲ್ಲಿ, ಯಾವಾಗ?
ಮನೆಯಲ್ಲಿ ಪ್ರತಿ ಶುಕ್ರವಾರ ಮತ್ತು ಶನಿವಾರ ಭಜನೆ ನಡೆಯುತ್ತಿತ್ತು. ನಮ್ಮ ಅಣ್ಣಂದಿರು, ರಾಮನಾಥ ಮತ್ತು ನಾರಾಯಣಸ್ವಾಮಿ ಹಾಡುತ್ತಿದ್ದರು, ದೊಡ್ಡಣ್ಣ ವೆಂಕಟರಾಮಶಾಸ್ತ್ರಿಗಳೂ ಜೊತೆಗೆ ಹಾಡುತ್ತಿದ್ದರು, ಅಥವಾ ಪಿಟೀಲು ನುಡಿಸುತ್ತಿದ್ದರು. ಅದನ್ನು ಕೇಳುತ್ತಾ ಕೂರುತ್ತಿದ್ದೆ. ಹೈಸ್ಕೂಲು ಕಾಲೇಜುಗಳಲ್ಲಿ ಓದುತ್ತಿದ್ದಾಗ ಅನೇಕ ಕಛೇರಿಗಳಿಗೆ ಹೋಗುತ್ತಿದ್ದೆ. ರಾಮೋತ್ಸವ ಮತ್ತು ಇತರ ಸಂದರ್ಭಗಳಲ್ಲಿ ದೊಡ್ಡ ದೊಡ್ಡ ವಿದ್ವಾಂಸರು ಮೈಸೂರಿಗೆ ಬಂದು ಹಾಡುತ್ತಿದ್ದರು, ಇವರೆಲ್ಲರ ಪ್ರಭಾವ ನನ್ನ ಮೇಲಾಯಿತು. ಅದು ಅರಸರ ಕಾಲ, ಮಹಾ ವೈಭವದಿಂದ ಕೂಡಿರುತ್ತಿತ್ತು. ಸ್ವಯಂ ಮಹಾರಾಜರೇ ಕಲಾವಿದರನ್ನು ಬರಮಾಡಿಕೊಂಡು ಆದರಿಸುತ್ತಿದ್ದರು. ಹೀಗಾಗಿ, ಅನೇಕ ವಿದ್ವಾಂಸರ ಕಛೇರಿಗಳನ್ನು ಕೇಳುವ ಅವಕಾಶವಿತ್ತು. ಅದರಲ್ಲೂ ಒಳ್ಳೊಳ್ಳೆ ಓಲಗದವರು ಬರುತ್ತಿದ್ದರು, ಅವರ ನಾಗಸ್ವರ ವಾದನ ಈಗಲೂ ಕಿವಿಯಲ್ಲಿದೆ. ಆ ನಾಗಸ್ವರ ವಾದನ ಸಹ ನನ್ನ ಹಾಡುವ ರೀತಿಯನ್ನು ರೂಪಿಸಿದೆ ಅನ್ನಬಹುದು.
-ತಮ್ಮ ಗುರುಪರಂಪರೆ....
ನನ್ನ ತಂದೆಯವರೇ ನನ್ನ ಮೊದಲ ಗುರು. ನಮ್ಮಣ್ಣ ವೆಂಕಟರಾಮಶಾಸ್ತ್ರಿಗಳೇ ನನಗೆ ವಿದ್ಯೆಕಲಿಸಿದವರು. ಹದಿಹರಯದ ವಯಸ್ಸಿನಲ್ಲೇ ಸಣ್ಣ ಸಣ್ಣ ಕಛೇರಿ ಮಾಡುತ್ತಿದ್ದೆ. ಬೇಸಿಗೆ ರಜಾದಿನಗಳಲ್ಲಿ ರುದ್ರಪಟ್ಟಣಕ್ಕೆ ಹೋಗುತ್ತಿದ್ದೆ. ನನ್ನ ಸ್ವಂತ ಸಾಧನೆಯೇ ನನಗೆ ದಿಕ್ಕು ತೋರಿಸಿತು. ಮುಂದೆ ಅನೇಕ ದೊಡ್ಡ ವಿದ್ವಾಂಸರ ಮಾರ್ಗದರ್ಶನ ನನಗೆ ಲಭಿಸಿತು. 1947ರಲ್ಲಿ ಬಿ.ಎ ಪದವಿಯಾದ ಮೇಲೆ, ಮೈಸೂರು ಆಕಾಶವಾಣಿಯಲ್ಲಿ ನನಗೆ ಕೆಲಸ ದೊರಕಿದ್ದು ನನ್ನ ಮುಂದಿನ ಸಂಗೀತಾಭಿವೃದ್ಧಿಗೆ ಸೋಪಾನವಾಯಿತು. ಅನೇಕ ಅಗ್ರಗಣ್ಯರ ನಿಕಟ ಸಂಪರ್ಕ, ಸಹವಾಸ ಮತ್ತು ಮಾರ್ಗದರ್ಶನ ದೊರಕಿತು. ಏಕೆಂದರೆ ಅವರಲ್ಲನೇಕರು ನಮ್ಮ ಮನೆಯಲ್ಲೇ ಬಂದಿರುತ್ತಿದ್ದರು. ಅನೇಕ ಬಾರಿ ಮದ್ರಾಸಿನಲ್ಲಿ ನಡೆಯುವ ಕಛೇರಿಗಳಿಗೆ ಹೋದಾಗ ನಮ್ಮಣ್ಣನವರ ಜೊತೆಯಲ್ಲಿ ಸಹ ಅನೇಕ ವಿದ್ವಾಂಸರೊಂದಿಗೆ ಬೆರೆಯುವ ಮತ್ತು ಅವರಿಂದ ಕಲಿಯುವ ಸದವಕಾಶ ದೊರೆಯಿತು. ಅವರಲ್ಲನೇಕರಿಂದ ಕೃತಿಗಳನ್ನು ಅವಕಾಶ ಸಿಕ್ಕಾಗಲೆಲ್ಲ ಹೇಳಿಸಿಕೊಂಡು ನನ್ನ ಕೀರ್ತನೆಗಳ ಭಂಡಾರವನ್ನು ವರ್ಧಿಸಿಕೊಂಡೆ. ಅಂಥ ಹಿರಿಯ ಮಹನೀಯರ ಹಾಡುಗಾರಿಕೆಯಲ್ಲಿ ಕಂಡುಬಂದ ಉತ್ತಮಾಂಶಗಳನ್ನು ನನ್ನ ಹಾಡುಗಾರಿಕೆಯಲ್ಲಿ ಅಳವಡಿಸಿಕೊಂಡೆ.
-ನೀವು ಭಾವ ಮತ್ತು ಮಾಧುರ್ಯಕ್ಕೆ ಹೆಚ್ಚು ಒತ್ತು ಕೊಡುತ್ತೀರೋ, ಸಾಹಿತ್ಯಶುದ್ಧಿಗೆ ಹೆಚ್ಚು ಗಮನ ಕೊಡುತ್ತೀರೋ, ತಾಳಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತೀರೋ? ಯಾವುದು ಮುಖ್ಯ, ನಿಮ್ಮ ದೃಷ್ಟಿಯಲ್ಲಿ?
ಇವೆಲ್ಲವೂ ಮುಖ್ಯ, ಯಾವುದೂ ಔಚಿತ್ಯವನ್ನು ಮೀರಬಾರದು. ಸ್ವರಸ್ಥಾನಗಳು ಶುದ್ಧವಾಗಿರಬೇಕು. ಅಪಸ್ವರಕ್ಕೆ ಅವಕಾಶವಿರಕೂಡದು. ಸಂಗತಿಗಳನ್ನು ಸ್ವಚ್ಚವಾಗಿ, ವಿರಳವಾಗಿ ಉಚ್ಚರಿಸಬೇಕು. ಹಾಡುಗಾರಿಕೆಯಲ್ಲಿ ಯಾವ ರಹಸ್ಯವೂ ಇರಕೂಡದು, ಎಲ್ಲ ಪಾರದರ್ಶಕವಾಗಿರಬೇಕು. ಕೃತಿಯನ್ನು ಅರ್ಥಮಾಡಿಕೊಂಡು ಸ್ವತಃ ಅನುಭವಿಸಿಕೊಂಡು ಭಾವಯುಕ್ತವಾಗಿ ಹಾಡಬೇಕು. ನಾನೇ ತ್ಯಾಗರಾಜ, ನಾನೇ ದೀಕ್ಷಿತ, ನಾನೇ ಪುರಂದರದಾಸ ಎಂದು ತಿಳಿದು ತನ್ಮಯರಾಗಿ ಭಕ್ತಿಯಿಂದ ತಮ್ಮನ್ನು ತಾವೇ ತೊಡಗಿಸಿಕೊಂಡು ಹಾಡಿದಾಗ ಉತ್ತಮ ಸಂಗೀತ ಉತ್ಪತ್ತಿಯಾಗುತ್ತದೆ. ಲಯಕ್ಕೆ ಪ್ರಾಧಾನ್ಯವಿರಬೇಕು. ಅದು ಪ್ರಾಣಸ್ವರೂಪ ನಿಜ, ಆದರೆ ರಸಕ್ಕೆ ಭಂಗವಾಗದಂತೆ ಹಾಡಬೇಕು. ಶ್ರೋತೃಗಳಿಗೆ ಆನಂದವನ್ನು ಕೊಡುವುದೇ ಸಂಗೀತಗಾರನ ಮುಖ್ಯ ಉದ್ದೇಶವಾಗಬೇಕು. ಮಧುರವಾಗಿ ಹಾಡಿದರೆ ಕೇಳುವವರಿಗೂ ತೃಪ್ತಿಯಾಗುತ್ತದೆ.
-ತಮಗೆ ಅನೇಕ ಬಿರುದುಬಾವಲಿಗಳು ಬಂದಿವೆ. ನೀವು ಲೆಕ್ಕವಿಡಲಾರದಷ್ಟು ಕಛೇರಿಗಳನ್ನು ಮಾಡಿದ್ದೀರಿ. ಅವುಗಳಲ್ಲಿ ಹೆಚ್ಚಿನ ತೃಪ್ತಿತಂದ ಬಿರುದುಗಳು, ಕಛೇರಿಗಳು ಯಾವುವು ತಿಳಿಸುವಿರಾ?
1979ರಲ್ಲಿ ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡಮಿಯವರು ಕೊಟ್ಟ ಪ್ರಶಸ್ತಿ, 1996ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯವರು ಕೊಟ್ಟ ಸಂಗೀತಕಲಾನಿಧಿ ಬಿರುದು, ಮತ್ತು ಕರ್ನಾಟಕ ಸರ್ಕಾರದ ಕನಕ-ಪುರಂದರ ಪ್ರಶಸ್ತಿ ನನಗೆ ಅತ್ಯಂತ ಸಂತೋಷವನ್ನು ಕೊಟ್ಟ ಬಿರುದು-ಬಾವಲಿಗಳು. ಮೊದಲ ಬಾರಿ 1954ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ಆಹ್ವಾನಿತನಾಗಿ ಮಾಡಿದ ಕಛೇರಿ, ಅನೇಕ ಆಹ್ವಾನಿತ ಅತಿಥಿಶ್ರೋತೃಗಳ ಸಮ್ಮುಖದಲ್ಲಿ ದೆಹಲಿ ಕೇಂದ್ರದ ಆಕಾಶವಾಣಿಯಲ್ಲಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮೊದಲಬಾರಿ 1954ರಲ್ಲಿ ಹಾಡಿದ್ದು, ಮತ್ತು 1978ರಲ್ಲಿ ತಿರುವಾಂಕೂರು ಸಂಸ್ಥಾನದ ರಾಜ ಪರಿವಾರದ ನವರಾತ್ರಿ ಉತ್ಸವದಲ್ಲಿ ದೇವಿಯ ಸನ್ನಿಧಿಯಲ್ಲಿ ಮಹಾರಾಜ ಸ್ವಾತಿ ತಿರುನಾಳರ ಕೃತಿಗಳನ್ನು ಆರೇಳು ವರ್ಷಗಳು ಹಾಡಿದ್ದು, ಇವೆಲ್ಲ ಮರೆಯಲಾಗದ ಅನುಭವಗಳು.

-ಸಂಕೇತಿಗಳಿಗೂ ಸಂಗೀತಕ್ಕೂ ಇರುವ ಅಪೂರ್ವ ಸಂಬಂಧದ ಬಗ್ಗೆ ನಿಮ್ಮ ಅಭಿಪ್ರಾಯ?
ವ್ಯವಸಾಯ, ವೇದಾಭ್ಯಾಸ ಮತ್ತು ಶಾಸ್ತ್ರೀಯ ಸಂಗೀತ ಇವುಗಳ ನಂಟು ಅದು ಹೇಗೆ ಬಂತೋ ಹೇಳಲು ಬರುವುದಿಲ್ಲ. ಆದರೂ ಸಂಕೇತಿಗಳಿಗೂ ಸಂಗೀತಕ್ಕೂ ಬಾಂಧವ್ಯವಿರುವುದಂತೂ ನಿಜ. ಪ್ರಾಯಶಃ ತಮಿಳುನಾಡಿನ ಮತ್ತು ಮಲಯಾಳದ ನಮ್ಮ ಪೂರ್ವಜರಿಂದ ಬಂದಿರಬಹುದು.

- ಸಂಗೀತ ಸಾಧಕರಿಗೆ ನಿಮ್ಮ ಕಿವಿಮಾತುಗಳು...
ಸಾಧನೆ ಮಾಡುವಾಗ ಒಡ್ಡೊಡ್ಡಾಗಿ ಅಭ್ಯಾಸ ಮಾಡಬಾರದು. ನಯ ಇರಬೇಕು. ಅಂಗಚೇಷ್ಟೆಗಳಿಲ್ಲದಂತೆ ಅಭ್ಯಾಸ ಮಾಡಿಕೊಳ್ಳಬೇಕು. ಆಕಾಶ ನೋಡಿಕೊಂಡು ಹಾಡುವುದು, ತಲೆ ತಗ್ಗಿಸಿ ನೆಲನೋಡಿಕೊಂಡು ಹಾಡುವುದು, ಕಣ್ಮುಚ್ಚಿಕೊಂಡು ಹಾಡುವುದು, ಮುಖ ಸಿಂಡರಿಸಿಕೊಂಡು ಹಾಡುವುದು ಮುಂತಾದ ದುರಭ್ಯಾಸಗಳಿಗೆ ಎಡೆ ಇಲ್ಲದಂತೆ ಅಭ್ಯಾಸ ಮಾಡಿಕೊಳ್ಳಬೇಕು. ಭಾಷಣಕಾರ ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡುವಂತೆ ಸಂಗೀತಗಾರನೂ ಮಾಡಬೇಕು. ರಾಗಾಲಾಪನೆಯ ಕ್ರಮದಲ್ಲಿ ಯಾವುದಾದರೂ ಒಂದು ರಾಗವನ್ನು ನಿತ್ಯ ಅಭ್ಯಾಸಮಾಡಬೇಕು. ರಾಗಾಲಾಪನೆಯಲ್ಲಿ ಯಾವಯಾವ ಸಾಧ್ಯತೆ ಇದೆ, ಹೀಗೆ ಹಾಡಿದರೆ ಅದು ಶ್ರೋತೃಗಳಿಗೆ ಹಿತವಾಗಿರುತ್ತದೆಯೋ, ಶೈಲಿ ಆಕರ್ಷಕವಾಗಿರುತ್ತದೆಯೋ, ಎಂದು ತಮ್ಮನ್ನು ತಾವೆ ಕೇಳಿಕೊಂಡು ಆತ್ಮಪರೀಕ್ಷೆ ಮಾಡಿಕೊಳ್ಳಬೇಕು. ಸಭೆಯಲ್ಲಿ ಹಾಡುವಾಗ ನಗುಮುಖದಿಂದ ಹಾಡಬೇಕು. ಕಛೇರಿ ಎಂದರೆ ಅದೊಂದು 'ಟೀಂ ವರ್ಕ್' ಎಂಬುದನ್ನು ನೆನಪಿಡಬೇಕು. ಹಾಡುಗಾರರು ಪಕ್ಕವಾದ್ಯದವರು ಪರಸ್ಪರ ಮೆಚ್ಚುಗೆ ವ್ಯಕ್ತ ಪಡಿಸಬೇಕು. ಸಭಾಸದರೊಂದಿಗೆ ಸಂಪರ್ಕ ಬೆಳೆಸಿಕೊಂಡು ಹಾಡುತ್ತ ಅವರ ಪ್ರತಿಕ್ರಿಯೆ ಏನೆಂದು ತಿಳಿದು ಸ್ಪಂದಿಸಬೇಕು. ಮೇಲೆಮೇಲೆ ಕಛೇರಿಗಳನ್ನು ಒಪ್ಪಿಕೊಳ್ಳಬಾರದು. ಒಂದರಮೇಲೊಂದು ಕಛೇರಿ ಮಾಡಿದರೆ ಉತ್ಸಾಹ ಇರುವುದಿಲ್ಲ. ಮನೋಧರ್ಮ ಸಹಕರಿಸುವುದಿಲ್ಲ. ಶಾರೀರವೂ ಮಾಧುರ್ಯವನ್ನು ಕಳೆದುಕೊಳ್ಳುತ್ತದೆ.
ನಾನು ಮೊದಲೇ ಹೇಳಿದಂತೆ, ಹಾಡುವವರಿಗೆ ತಾಳ ಬಹಳ ಮುಖ್ಯ. ಅದು ಪ್ರಾಣಸ್ವರೂಪ, ಆದರೆ ಸ್ವರಕಲ್ಪನೆಯಲ್ಲಿ ಗಣಿತಕ್ಕೆ ಅನುಗುಣವಾಗಿ ಮಾಡುವ ಸ್ವರವಿನ್ಯಾಸಕ್ಕೆ ನಾನು ಹೆಚ್ಚಿನ ಪ್ರಾಧಾನ್ಯ ಕೊಡುವುದಿಲ್ಲ. ಗಣಿತದ ಮೇಲೇ ಗಮನ ಇಟ್ಟರೆ ಭಾವನಷ್ಟವಾಗುತ್ತದೆ. ಔಚಿತ್ಯಕ್ಕೆ ಗಮನ ಕೊಡಬೇಕು. ಔಚಿತ್ಯಪ್ರಮಾಣ ಬಹಳ ಮುಖ್ಯ. ಹಾಡುವ ಕೃತಿಗಳಲ್ಲಿ ವೈವಿಧ್ಯವಿರಬೇಕು. ಹತ್ತು ನಿಮಿಷದಲ್ಲಿ ಸಂಪೂರ್ಣ ರಾಗಸ್ವರೂಪವನ್ನು ತೋರಿಸಿಬಿಡಬೇಕು. ಹೆಚ್ಚು ಎಳೆದರೆ ಪುನರುಕ್ತಿಯಾಗುತ್ತದೆ. ನಮ್ಮ ದಕ್ಷಿಣಾದಿ ಸಂಗೀತದಲ್ಲಿ ಗಮಕಕ್ಕೆ ಪ್ರಾಧಾನ್ಯ, ಉತ್ತರಾದಿ ಶೈಲಿಯಲ್ಲಿ ದಕ್ಷಿಣದ ರಾಗಗಳನ್ನು ಎಳೆದರೆ ಕೇಳುವುದಕ್ಕಾಗುವುದಿಲ್ಲ.

- ನೀವ್ಯಾಕೆ ಸ್ವಂತ ಕೃತಿಗಳನ್ನು ರಚಿಸಲಿಲ್ಲ?
ಮಹಾನುಭಾವರು ರಚಿಸಿದ ಕೃತಿಗಳನ್ನೇ ಹಾಡುವವರು ದಿಕ್ಕಿಲ್ಲ, ಇನ್ನು ಎಲ್ಲರೂ ಯಾಕೆ ರಚನೆ ಮಾಡಬೇಕು? ಮಾಡಿದರೆ ಹಾಡುವವರು, ಕೇಳುವವರು ಯಾರು? ತ್ಯಾಗರಾಜರು, ದಾಸರು ರಚಿಸಿದ ಕೃತಿಗಳಲ್ಲಿ ವೈವಿಧ್ಯ ಇದೆ. ತ್ಯಾಗರಾಜರು ತೋಡಿ ರಾಗ ಒಂದರಲ್ಲೆ ಸುಮಾರು ಮುವ್ವತ್ತು ಕೃತಿ ರಚಿಸಿದ್ದಾರೆ. ಒಂದೊಂದೂ ಒಂದೊಂದು ಬಗೆ. ತ್ಯಾಗರಾಜರು ಒಮ್ಮೆ ವೀಣಾ ಕುಪ್ಪಯ್ಯರ್ ಮನೆಗೆಬಂದಿದ್ದಾಗ ಎಂಟು ದಿನಗಳಲ್ಲಿ ದೇವಗಾಂಧಾರಿ ಒಂದೇ ರಾಗದಲ್ಲಿ ಎಂಟು ಭವ್ಯವಾದ ವೈವಿಧ್ಯಮಯವಾದ ಕೃತಿಗಳನ್ನು ರಚಿಸಿದರು. ಅವರ ಭಾಷಾಜ್ಞಾನ, ಛಂದಸ್ಸಿನ ಅರಿವು, ಕಾವ್ಯ ಶಕ್ತಿ ಸಂಗೀತಜ್ಞಾನ ಇವೆಲ್ಲದರ ಮುಂದೆ ನಮ್ಮದೇನು ಲೆಕ್ಕ? ನವವಿಧ ಭಕ್ತಿಯನ್ನು, ಸಮಾಜ ಸುಧಾರಣೆಯ ಮಾರ್ಗವನ್ನು ನಿತ್ಯ ಜೀವನಕ್ಕೆ ಬೇಕಾದ ಉಪದೇಶ ಇವೆಲ್ಲವನ್ನೂ ವಾಗ್ಗೇಯಕಾರರು ಆಗಲೇ ನಮಗೆ ಕೊಟ್ಟಾಗಿದೆ. ದೊಡ್ಡವರು ಮಾಡಿದ್ದನ್ನು ಸರಿಯಾಗಿ ಹಾಡಿ ಆ ನಿಧಿಯನ್ನು ಚೆನ್ನಾಗಿ ಕಾಪಾಡಿಕೊಂಡು ಬಂದರೆ ಸಾಕು.

-ನಿಮ್ಮ ಶಿಷ್ಯಪರಂಪರೆ ಬಗ್ಗೆ ಹೇಳಿ...
ನನ್ನ ಅನೇಕ ಶಿಷ್ಯರಲ್ಲಿ ನನ್ನ ಮಗ ರಮಾಕಾಂತ್, ಎಮ್.ಎಸ್. ಶೀಲಾ, ಸತ್ಯವತಿ, ಎಚ್.ಕೆ.ನಾರಾಯಣ ಮುಂತಾದವರಿದ್ದಾರೆ. ನನ್ನ ಮಗಳು ರತ್ನಮಾಲ ಸಹ ನನ್ನ ಶಿಷ್ಯಳೇ, ಅವಳು ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿಲ್ಲವಾದರೂ ಸಹ.

-ಡಾ. ಮೈ.ಶ್ರೀ.ನಟರಾಜ, ವಾಷಿಂಗ್ಟನ್ ಡಿಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement