'ಹುಚ್ಚು ಕೋಡಿ ಮನಸು, ಅದು ಹದಿನಾರರ ವಯಸು' ಎಂದು ಕವಿತೆಯ ಒಂದು ಸಾಲು. ಇತ್ತೀಚೆಗೆ ಪೇಪರ್ರು-ಟಿವಿಗಳಲ್ಲಿ ವರದಿಯಾಗುತ್ತಿರುವ ಕೆಲ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಈ ಹಾಡು ಬಿಟ್ಟೂಬಿಡದೇ ಕಾಡತೊಡಗಿತು.
ಆಕರ್ಷಣೆ- ಪ್ರೀತಿ ಇವನ್ನೆಲ್ಲ ಹರೆಯದಲ್ಲಿ ಮೆಟ್ಟಿ ನಿಲ್ಲುವವರು ಯಾರಿದ್ದಾರೆ ಹೇಳಿ? ಹಾಗೆಲ್ಲ ನಿಗ್ರಹದ ಮಾತಾಡಿದರೆ ಇವಳ್ಯಾರೋ ಔಟ್‌ಡೇಟೆಡ್ ಅಮ್ಮಣ್ಣಿ ಅಂತ ನೀವು ನನ್ನನ್ನೂ ತೆಗೆದಿರಿಸುತ್ತೀರಿ. ಅಂಥ ಉಪದೇಶವೇನೂ ನನ್ನಲ್ಲಿಲ್ಲ. ಪ್ರೀತಿ- ಬ್ರೇಕ್‌ಅಪ್ ಎಲ್ಲ ಬದುಕಿನ ಸಹಜ ಸಂಗತಿಯಂತಾಗಿಬಿಟ್ಟಿವೆ. ಅದೇನೋ ಹಾಗಿರಲಿ. ಆದರೆ ಸಂಬಂಧ ಹಳಸಿದ ಕೂಡಲೇ ಈಗೀಗ ಇಂಟರ್‌ನೆಟ್ ಅಂಗಳದಲ್ಲಿ ತಮ್ಮ ಸಲ್ಲಾಪದ ದಿನಗಳ ಎಂಥೆಂಥದೋ ಫೋಟೊಗಳನ್ನು ತೇಲಿಸಿ ಮುಯ್ಯಿ ತೀರಿಸುವ ಆತಂಕದ ಬೆಳವಣಿಗೆ ಆಗುತ್ತಿದೆ. ಹುಡುಗಿಯಿಂದ ದೂರಾದ ಹತಾಶೆಯಲ್ಲಿ ಹುಡುಗನೇ ಇಂಥ ಕೃತ್ಯಕ್ಕೆ ಇಳಿದ ಉದಾಹರಣೆಗಳು ಹಲವು. ಇನ್ನು ಕೆಲವು ಪ್ರಕರಣಗಳಲ್ಲಿ ಇಬ್ಬರ ಸಂಬಂಧ ಚನ್ನಾಗಿರುವಾಗಲೇ ಯಾರೋ ಮೂರನೆಯವರ ಕುತಂತ್ರಕ್ಕೆ 'ಅಂಥ' ಚಿತ್ರಗಳು ಎಲ್ಲೆಲ್ಲೊ ಪ್ರಕಟವಾಗಿ ಆ ಸಂಬಂಧಕ್ಕೆ ಸುಖಾಸುಮ್ಮನೇ ಎಳ್ಳುನೀರು ಬಿಡಬೇಕಾದ ಪ್ರಸಂಗಗಳೂ ಆಗಿವೆ.
ಇಂಥ ಹುಡುಗರ ಮನಸ್ಥಿತಿಯನ್ನು ಯಾರೂ ಸಮರ್ಥಿಸಲಾರರು. ಆದರೆ ಈ ವಿಷಯದಲ್ಲಿ ಹುಡುಗಿಯರಿಗೂ ಕೆಲ ಎಚ್ಚರದ ಮಾತುಗಳನ್ನು ಹೇಳಬೇಕಿದೆ. ಹರೆಯದ ಅಮಲಿನಲ್ಲಿ ಹುಡುಗಿಯರು ಅತಿರೇಕದಿಂದ ವರ್ತಿಸುವುದುಂಟು. ಹುಡುಗರನ್ನು ಮೆಚ್ಚಿಸಬೇಕು ಎಂಬ ಆಸೆಯಿಂದ, ಅವರಲ್ಲಿ ಆಕರ್ಷಣೆ ಹುಟ್ಟಿಸಬೇಕು ಎಂಬ ಯೋಚನೆಯಿಂದ, ಅವರ ಮನಸ್ಸು ಗೆಲ್ಲಬೇಕು ಎಂಬ ಹಪಹಪಿಯಿಂದ ಚಿತ್ರ ವಿಚಿತ್ರ ಭಂಗಿಯಲ್ಲಿ ಡ್ರೆಸ್ ಮಾಡಿಕೊಳ್ಳುವುದುಂಟು. ಅವನು ಖುಷಿಪಡಲಿ ಅಂತ ಕೆಲವು ಹುಡುಗಿಯರು 'ಮೈ ಕಾಣಸುವಂಥ' ಉಡುಗೆಯಲ್ಲಿ ಜೊತೆಯಾಗುವುದೂ ಉಂಟು. ಅಷ್ಟಕ್ಕೇ ನಿಲ್ಲದೇ ಅವನಿಗೆ ಖುಷಿಯಾಗಲಿ ಅಂತ ಆ ಅವಸ್ಥೆಯಲ್ಲಿ ಫೋಟೊ ತೆಗೆಸಿಕೊಂಡಿರುತ್ತಾರೆ. ಇಲ್ಲವೇ ತಾವೇ ಕ್ಲಿಕ್ಕಿಸಿಕೊಂಡ ಫೋಟೊ ಅವನಿಗೆ ಕಳುಹಿಸಿಬಿಡುತ್ತಾರೆ.
ಈ ಯೌವನ ಕೋಲಾಹಲವನ್ನು ಸೂಕ್ಷ್ಮವಾಗಿ ಗಮನಿಸಿದ ತಾಯಿಯೊಬ್ಬಳು, ಹರೆಯದ ಬೆಡಗಿಯರಿಗೆ ಬರೆದ ಪತ್ರವೊಂದನ್ನು ಮೊನ್ನೆ ಇಂಟರ್‌ನೆಟ್‌ನಲ್ಲಿಯೇ ಓದಿಕೊಂಡೆ. ಆ ಪತ್ರ ಹೀಗಿದೆ:
ಮುದ್ದು ಹುಡುಗಿಯರೇ, ನಮಸ್ಕಾರ. ನಿಮ್ಮೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲೇಬೇಕು ಅನಿಸಿದ್ದರಿಂದ ಈ ಪತ್ರ ಸಮಾಧಾನದಿಂದ ಓದಬೇಕೆಂದು ವಿನಂತಿ.
ನನಗೆ ಮೂವರು ಮಕ್ಕಳಿದ್ದಾರೆ. ಎರಡು ಗಂಡು, ಒಂದು ಹೆಣ್ಣು. ಮೊನ್ನೆ, ನನ್ನ ಮಗ, ತನ್ನ ಫೇಸ್‌ಬುಕ್ ಜಾಲ ತಾಣವನ್ನು ಕ್ಲೋಸ್ ಮಾಡುವುದನ್ನೇ ಮರೆತು ಹೊರಗೆ ಹೋಗಿದ್ದಾನೆ. ಆಗ, ಕುತೂಹಲಕ್ಕೆಂದು ಕಂಪ್ಯೂಟರಿನ ಮುಂದೆ ಕೂತ ನನ್ನ ಮಗಳು, ಎರಡೇ ನಿಮಿಷಕ್ಕೆ-ಅಮ್ಮಾ, ಇಲ್ಲಿಗೆ ಓಡಿ ಬಾ. ನಿಂಗೆ ಏನೋ ತೋರಿಸಲಿಕ್ಕಿದೆ ಎಂದಳು. ಅವಳ ದನಿಯಲ್ಲಿ ಅವಸರವಿತ್ತು.
ಅಲ್ಲಿಗೆ ಹೋದಾಗ ನನಗೆ ಕಂಡಿದ್ದೇನು ಗೊತ್ತೆ? ನೀವು, ನಿಮ್ಮ ಮಲಗುವ ಕೋಣೆಯ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದೀರಿ. ನೀವು ನೈಟ್ ಡ್ರೆಸ್‌ನಲ್ಲಿ ಇದ್ದಿರಿ. ಅದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ನೀವು ಬ್ರಾ ಧರಿಸಿಲ್ಲ ಎಂಬುದು ಚಿಕ್ಕಮಕ್ಕಳಿಗೂ ಅರ್ಥವಾಗುವಂಥ ಕೆಟ್ಟ ಭಂಗಿಯಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ರಿ! ನೆನಪಿರಲಿ. ಹೆಣ್ಣಾಗಿ ಒಂದು ಮಾತು ಹೇಳುತ್ತಿದ್ದೇನೆ. ಇಂಥ ಫೋಟೋ ನೋಡುವಾಗ ಗಂಡಸರು ನಿಮ್ಮ ಮುಖ, ವ್ಯಕ್ತಿತ್ವ ನೋಡುವುದಿಲ್ಲ. ಬದಲಿಗೆ, ಬೇರೇನನ್ನೋ ನೋಡುತ್ತಾರೆ. ಒಂದು ಅನಾಹುತಕ್ಕೆ ಸಿದ್ಧರಾಗಲು ಇಂಥ ದೃಶ್ಯಗಳು ಗಂಡಸರನ್ನು ಖಂಡಿತ ಪ್ರೇರೇಪಿಸುತ್ತವೆ. ಅರ್ಥವಾಯಿತೆ?
'ಬಹುಶಃ ಹುಡುಗರನ್ನು ಆಕರ್ಷಿಸಬೇಕು ಎಂಬುದು ನಿಮ್ಮ ಉದ್ದೇಶ ಆಗಿದೆಯೇನೋ. ಫೇಸ್‌ಬುಕ್‌ನಲ್ಲಿ ನೀವು ಶೇರ್ ಮಾಡುವ ಮತ್ತಷ್ಟು ಚಿತ್ರಗಳನ್ನು ಕಂಡಾಗ ಹಾಗನ್ನಿಸಿತು. ಒಂದು ಫೋಟೋ ಅಂತೂ ಸ್ನಾನದ ಮನೇಲಿ ನಿಂತು ಕ್ಲಿಕ್ ಮಾಡಿದ್ದೀರ! ಹೌದು ತಾನೆ? ಎಂಥ ಮಕ್ಕಳೂ ಕೂಡ ಸ್ನಾನದ ಮನೆಯಿಂದ ಹೊರಬರುವಾಗ, ನೀವು ಟವಲ್ ಸುತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದೀರಿ! ಅದನ್ನು ಗಂಡು ಹುಡುಗರೊಂದಿಗೆ ಶೇರ್ ಮಾಡಿಕೊಂಡಿದ್ದೀರಿ! ಸುಮ್ಮನೇ ಒಮ್ಮೆ ಯೋಚಿಸಿ. ಸ್ನಾನದ ಮನೆಯಿಂದ ಹೊರಗೆ ಬರುವಾಗ, ಅಪರಿಚಿತರೊಬ್ಬರ ದೃಷ್ಟಿ ಬಿದ್ದರೆ, ನಾಚಿಕೆಯೂ, ಸಂಕಟವೂ ಒಟ್ಟಿಗೇ ಆಗುವುದಿಲ್ಲವೇ? ಪರಿಚಯದವರೇ ಎದುರಾದರೂ, ನಾಚಿಕೆಯಿಂದ ಓಡಿ ಹೋಗಿ ರೂಂನಲ್ಲಿ ಅಡಗಿಕೊಳ್ಳುವುದಿಲ್ಲವೆ? ವಾಸ್ತವ ಹೀಗಿರುವಾಗ, ಅರೆಬರೆ ಚಿತ್ರವನ್ನು ನೀವು ಶೇರ್ ಮಾಡಿದರೆ, ಅದನ್ನು ನೋಡಿದವರು ನಿಮ್ಮ ವಿಷಯವಾಗಿ ಹೇಗೆಲ್ಲಾ ಯೋಚಿಸಬಹುದೆಂದು ಲೆಕ್ಕ ಹಾಕಿದ್ದೀರಾ?
ಉಹುಂ, ಹಾಗಂತ ನಾನು ನಿಮ್ಮನ್ನು ಬೈಯ್ಯುತ್ತಿಲ್ಲ, ನಾನು ಹುಡುಗಿಯರ ದ್ವೇಷಿಯೂ ಅಲ್ಲ. ನನ್ನ ಮಕ್ಕಳಿಗೆ ಮುದ್ದಾದ ಹುಡುಗಿಯರೇ ಬಾಳಸಂಗಾತಿಗಳಾಗಿ ಸಿಗಲಿ ಎಂದು ದೇವರನ್ನು ಪ್ರಾರ್ಥಿಸುವಾಕೆ ನಾನು. ಅಂಥ ಹುಡುಗಿಯರು ನೀವೇ ಆದರೆ ಅದಕ್ಕೂ ನನ್ನ ಆಕ್ಷೇಪವಿಲ್ಲ. ಆದರೆ ನೆನಪಿರಲಿ: ನನ್ನ ಮಕ್ಕಳ ಗೆಳತಿಯರಾಗಬೇಕೆಂದರೆ ಪಾಲಿಸಲೇಬೇಕಾದ ಷರತ್ತುಗಳಿವೆ. ಅವು ಯಾವುದೆಂದರೆ-ಹುಡುಗಿಯರು ವಿಚಿತ್ರವಾಗಿ ಮತ್ತು ವಿಕಾರವಾಗಿ ವರ್ತಿಸಬಾರದು. ಹದ್ದುಮೀರಿ ನಡೆದುಕೊಳ್ಳಬಾರದು. ನಿಮ್ಮ ಚೆಂದವನ್ನು ನನ್ನ ಹುಡುಗ ಹೊಗಳುವಂತಾಗಲಿ. ಆದರೆ ಕೇವಲ ನಿಮ್ಮ ದೇಹದ ಹಸಿವೆಗೆ ಆತನನ್ನು ನೂಕದಂತೆ ನಿಮ್ಮ ನಡತೆ ಇರಲಿ..
ನನ್ನ ಮಾತುಗಳ ಹಿಂದಿರುವ ಕಳಕಳಿ ನಿಮಗೆ ಅರ್ಥವಾಗಿದೆ ಎಂಬ ನಂಬಿಕೆಯೊಂದಿಗೆ ಈ ಪತ್ರ ಮುಗಿಸಿದ್ದೇನೆ.
-ಒಬ್ಬಳು ತಾಯಿ.
ಈ ಕಾಳಜಿಯನ್ನು ನೀವೂ ಒಪ್ತೀರಲ್ವಾ?
-ನಾನು ಪ್ರಣತಿ