ಶಾಸನಸಭೆ ಎನ್ನುವುದು ಒಂದು ರಾಜ್ಯದ ಪ್ರಗತಿಯ ರೂಪುರೇಷೆಗಳನ್ನು ಪ್ರತಿಬಿಂಬಿಸುವ ಪವಿತ್ರ ಸ್ಥಳ. ಅದೇ ಕಾಲಕ್ಕೆ ಜ್ಞಾನಾರ್ಜನೆಯ ಶಿಕ್ಷಣಸೌಧವೂ ಹೌದು. ಇಲ್ಲಿ ನಾಡು, ನುಡಿ, ಪ್ರಜೆಗಳ ಹಿತಾಸಕ್ತಿ ರಕ್ಷಣೆ ಬಗ್ಗೆ ಚಿಂತನ-ಮಂಥನವಾಗುತ್ತದೆ. ನೀತಿ-ನಿಲುವುಗಳು ರೂಪಿತವಾಗುತ್ತವೆ. ಹತ್ತು ಹಲವು ಸತ್ಸಂಪ್ರದಾಯಗಳ ಪ್ರತಿರೂಪವಾಗಿರುವ ಶಾಸನಸಭೆ ತನ್ನದೇ ಆದ ಘನತೆ-ಗೌರವ ಹೊಂದಿದೆ. ಆದರೆ ಇತ್ತೀಚೆಗೆ ಸದಸ್ಯರ ನಿರಾಸಕ್ತಿ, ಉಪೇಕ್ಷೆ, ಕಲಿಕೆ ಆಸಕ್ತಿಯ ಕೊರತೆಯಿಂದಾಗಿ ವಿಧಾನ ಮಂಡಲ ಕಲಾಪದ ಘನತೆ, ಪಾವಿತ್ರ್ಯ, ಮೂಲ ಉದ್ದೇಶ ಕರಗುತ್ತಿರುವುದು ನೋವಿನ ಸಂಗತಿ.
ಒಂದೆಡೆ ಹೊಸಬರಿಗೆ ಕಲಾಪದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು, ಅಲ್ಲಿ ಏನಾದರೂ ಕಲಿಯಬೇಕು, ಅಲ್ಲಿ ಕಲಿತದ್ದನ್ನು ನಾಡಿನ ಏಳ್ಗೆಗೆ ಬಳಸಬೇಕು ಎಂಬ ಆಸಕ್ತಿ ಇಲ್ಲ. ಇನ್ನೊಂದೆಡೆ ಹಿರಿಯರಿಗೆ ತಾವು ಈಗಾಗಲೇ ಬೇಕಾದಷ್ಟು ಸಾಧಿಸಿದ್ದೇವೆ. ಸಾಕಷ್ಟು ಕಲಾಪ ಕಂಡಿದ್ದೇವೆ. ತಮ್ಮ ಅನುಭವದಲ್ಲಿ ಅನೇಕ ವಿಚಾರಗಳು ಸರಿದು ಹೋಗಿವೆ. ಹೀಗಾಗಿ ಅದರ ಗೊಡವೆಯೇ ಬೇಡ ಎಂಬ ನಿರಾಸಕ್ತಿ. ಇನ್ನೂ ಕೆಲವು ಹಿರಿಯರು ಸಕ್ರಿಯರಾಗಿ ಪಾಲ್ಗೊಳ್ಳುತ್ತಾರೆ. ಆದರೆ ಅಲ್ಲಿ ವೈಯಕ್ತಿಕ ಹಿತಾಸಕ್ತಿ ರಕ್ಷಣೆ ಉದ್ದೇಶ ಇರುತ್ತದೆ. ರಾಗ-ದ್ವೇಷ ಸಾಧಿಸಲು ಇದನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಲಾಪದ ಗಾಂಭೀರ್ಯವೇ ಕಳೆದು ಹೋಗುತ್ತಿದೆ.
ಇಷ್ಟಕ್ಕೆಲ್ಲ ಮೂಲ ಕಾರಣ ಶಾಸನಸಭೆ ಉದ್ದೇಶ ತಿರುಗ-ಮುರುಗಾಗಿರುವುದು. ಇಲ್ಲಿ ನಾಡಿನ ಪ್ರಗತಿಗಾಗಿ ರಾಜಕೀಯ ಪ್ರೌಢಿಮೆ ಮೆರೆಯಬೇಕಿತ್ತು. ತಂತ್ರಗಾರಿಕೆ ಅದಕ್ಕೆ ಪೂರಕ ಆಗಿರಬೇಕಿತ್ತು. ಆದರೆ ಈಗ ಏನಾಗುತ್ತಿದೆ? ಬರೀ ದ್ವೇಷ, ಅಸೂಯೆ, ಈರ್ಷೆಯೇ ರಾರಾಜಿಸುತ್ತಿದೆ. ಒಬ್ಬರ ಉನ್ನತಿ ಮತ್ತೊಬ್ಬರ ಕಣ್ಣಿನ ಬೆಂಕಿ, ಕರುಳಿನ ಉರಿ. ಎದುರಾಳಿ ಚಿಗಿತರೆ ಈತನ ಆತ್ಮ ದ್ವೇಷಾಗ್ನಿಯಲ್ಲಿ ಬೆಂದು ಚೀರುತ್ತದೆ. ರೋಷ ಉಕ್ಕುತ್ತದೆ. ಆತನ ಅವನತಿಗೆ ಏನಾದರೂ ಮಾಡಬೇಕು ಎಂದು ಹೃದಯ ಹಪಾಹಪಿಸುತ್ತದೆ. ಕುತಂತ್ರ ಯೋಜನೆಗಳನ್ನು ರೂಪಿಸುತ್ತದೆ. ಅದೇ ರೀತಿ ಒಬ್ಬನಿಂದ ಪೀಡಿತನಾದ ವ್ಯಕ್ತಿ ಸಮಯ ಕೂಡಿ ಬಂದಾಗ ತನ್ನ ವರಸೆ ತೋರುತ್ತಾನೆ. ಇಂಥ ಮನಸ್ಥಿತಿ ಇರುವವರಿಂದಾಗಿ ಕಲಾಪದ ಮಾತುಗಳು ನಂಜು ಸವರಿದಂತೆ, ಮಂಜುಕಟ್ಟುತ್ತಿವೆ.
ಈಗಿನ ಅಧಿವೇಶನದ ಕಲಾಪವನ್ನು ನೋಡಿದಾಗ ಬೇಸರ ಉಂಟಾಗುತ್ತದೆ. ವಿಧಾಸನಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುವಾಗ ಸಾಮಾಜಿಕ ಕಾರ್ಯಕರ್ತ ಹಿರೇಮಠ್ ಅವರನ್ನು ಏಕವಚನದಲ್ಲಿ ಜರಿದರು. ಅವನೇನು ತನ್ನನ್ನು ತಾನು ಜಯಪ್ರಕಾಶ ನಾರಾಯಣ್ ಎಂದುಕೊಂಡಿದ್ದಾನಾ? ಅಂದುಕೊಂಡವರ ಮೇಲೆಲ್ಲಾ ಸಿಕ್ಕಸಿಕ್ಕಂತೆ ಆಪಾದನೆ ಮಾಡುತ್ತಾನಾಲ್ಲಾ ಎಂದು ಕಾರಿದರು. ಕೋಲಾರದ ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್ 54 ಎಕರೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹಿರೇಮಠ ಅವರು ಆರೋಪ ಮಾಡಿರುವುದು ಇದಕ್ಕೆ ಕಾರಣ.
ರಮೇಶ್‌ಕುಮಾರ್ ವಿಧಾನಸಭೆ ಸ್ಪೀಕರ್ ಆಗಿದ್ದವರು. ಅವರು ವಿಧಾನಸಭೆ ಕಲಾಪ ನಡೆಸುತ್ತಿದ್ದ ರೀತಿಗೆ ಸದನವೇ ತಲೆದೂಗುತ್ತಿತ್ತು. ಅವರ ಆ ಆವಧಿಯಲ್ಲಿ ವಿಷಯಾಧಾರಿತ ಅರ್ಥಪೂರ್ಣ ಚರ್ಚೆ, ಆಡಳಿತ-ಪ್ರತಿಪಕ್ಷ ಎಂಬ ಬೇಧವಿಲ್ಲದೆ ಚರ್ಚೆಯಲ್ಲಿ ಭಾಗವಹಿಸಲು ಎಲ್ಲರಿಗೂ ಸಮಾನ ಅವಕಾಶ, ಅದೇ ರೀತಿ ತಪ್ಪು ಮಾತು, ವರ್ತನೆ ತೋರಿದವರಿಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಗದ್ದಲದ ಸಂದರ್ಭದಲ್ಲಿ ಸದಸ್ಯರು ತಮ್ಮ ಮಾತಿಗೆ ಬೆಲೆ ಕೊಡದೆ ಹೋದಾಗ ಭಾವೋದ್ವೇಗಕ್ಕೆ ಒಳಗಾಗಿ ಅವರೇ ಸಭಾತ್ಯಾಗ ಮಾಡಿದ್ದೂ ಉಂಟು. ಅಷ್ಟು ಸೂಕ್ಷ್ಮ ಮನಸ್ಸಿನ ರಮೇಶ್‌ಕುಮಾರ್ ಅವರು ಹಿರೇಮಠ ಅವರನ್ನು ಏಕವಚನದಲ್ಲಿ ಜರಿದದ್ದು ಖಂಡಿತವಾಗಿಯೂ ಕಿರಿಯ ಸದಸ್ಯರಿಗೆ ಮಾದರಿ ಅಲ್ಲವೇ ಅಲ್ಲ.
ವಿಧಾನ ಮಂಡಲದ ಒಳಗಿನ, ಹೊರಗಿನ ಕಾನೂನು ಕಟ್ಟಳೆಗಳನ್ನು ಅರೆದು ಕುಡಿದಿರುವ ರಮೇಶ್‌ಕುಮಾರ್ ಅವರಿಗೆ ಸದನದ ಸದಸ್ಯರಲ್ಲದವರ ಬಗ್ಗೆ ಸಲ್ಲದ ಮಾತಾಡುವುದು ಸರಿಯಲ್ಲ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಏಕೆಂದರೆ ಆ ಮನೆಯ ಸದಸ್ಯರಲ್ಲದ ಹಿರೇಮಠ ಅವರಿಗೆ ಅಲ್ಲಿ ಪ್ರತಿಕ್ರಿಯೆ ನೀಡಲಾಗಲಾಗಲಿ, ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳಲಾಗಲಿ ಸಾಧ್ಯವಾಗುವುದಿಲ್ಲ. ಹಿಂದೆ ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ, ಇದೇ ರೀತಿ ಸದನದ ಸದಸ್ಯರಲ್ಲದವರ ಬಗ್ಗೆ ಪ್ರಸ್ತಾಪ ಆದ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದೂ ಉಂಟು. ಆ ರೀತಿಯ ಪ್ರಸ್ತಾಪಕ್ಕೆ ಅವಕಾಶ ನಿರಾಕರಿಸಿರುವುದೂ ಉಂಟು. ಆದರೆ ಈಗ ಅವರೇ ಆ ಕೆಲಸ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
ರಮೇಶ್‌ಕುಮಾರ್ ಅವರು ಹಿರೇಮಠ ಅವರ ಬಗ್ಗೆ ಟೀಕೆ-ಟಿಪ್ಪಣಿ, ಪ್ರತಿ ಆರೋಪ ಮಾಡಲು ಸದನದ ಹೊರಗೆ ಅವಕಾಶ ಇದ್ದೇ ಇದೆ. ಪತ್ರಿಕಾಗೋಷ್ಠಿಯಲ್ಲೋ, ಪತ್ರಿಕಾ ಹೇಳಿಕೆ ಮೂಲಕವೋ ಆ ಕೆಲಸ ಮಾಡಬಹುದು. ಆದರೆ ಅವರು ಸಾಮಾನ್ಯವಾಗಿ ತಮ್ಮ ವಿರೋಧಿಗಳಿಗೆ ಉತ್ತರ ಕೊಡಲು ಸದನವನ್ನೇ ವೇದಿಕೆ ಮಾಡಿಕೊಳ್ಳುತ್ತಾರೆ. ಅದನ್ನೇ ಗುರಾಣಿಯಾಗಿಯೂ ಬಳಸಿಕೊಳ್ಳುತ್ತಾರೆ.
ಇಲ್ಲಿ ಇನ್ನೊಂದು ವಿಷಯ. ರಮೇಶ್‌ಕುಮಾರ್ ಅವರದ್ದು ಈ ಕತೆಯಾದರೆ, ಅವರ ಗುರಿಯಾಗಿರುವ ಹಿರೇಮಠ ಪರ ನಿಂತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವರಸೆಯೇ ಬೇರೆ. ಹಿರೇಮಠ ಪರ ನಿಂತಿದ್ದಾರೆ ಎನ್ನುವುದಕ್ಕಿಂತ ರಮೇಶ್‌ಕುಮಾರ್ ವಿರುದ್ಧ ಹಳೇ ಜಿದ್ದು ಸಾಧಿಸುತ್ತಿದ್ದಾರೆ ಎನ್ನುವುದೇ ಸರಿ. ಹಿಂದೆ ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರಕಾರದ ಮುಖ್ಯಮಂತ್ರಿಯಾಗಿದ್ದಾಗ ಅವರು ಗಣಿ ಉದ್ಯಮಿಗಳಿಂದ 150 ಕೋಟಿ ರುಪಾಯಿ ಕಪ್ಪ ಕೇಳಿದ್ದಾರೆ ಎಂದು ಜನಾರ್ದನರೆಡ್ಡಿ ವಿಧಾನ ಪರಿಷತ್‌ನಲ್ಲಿ ಆಪಾದನೆ ಮಾಡಿದ್ದರು. ಅವರು ಈ ಆಪಾದನೆ ಮಾಡುವ ಕಾಲಕ್ಕೆ ವಿಧಾನಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ರಮೇಶ್‌ಕುಮಾರ್ ಅವರು 'ಆಪರೇಷನ್ ಸಕ್ಸಸ್' ಅಂತ ಕೈಕುಲುಕಿಕೊಂಡಿದ್ದರು ಎಂದು ಯಾರೋ ಕುಮಾರಸ್ವಾಮಿ ಅವರ ಕಿವಿ ಕಚ್ಚಿದ್ದರು. ಈಗ ಹಿರೇಮಠ ಅವರು ಡಿ.ಕೆ. ಶಿವಕುಮಾರ್ ಹಾಗೂ ರಮೇಶ್‌ಕಮಾರ್ ಅವರ ಮೇಲೆ ಆಪಾದನೆಗಳ ಸುರಿಮಳೆಗರೆಯುತ್ತಿರುವುದರ ಹಿಂದೆ ಕುಮಾರಸ್ವಾಮಿ ಅವರ ಪ್ರತೀಕಾರ ಕೆಲಸ ಮಾಡುತ್ತಿದೆ ಎಂಬುದು ಮತ್ತೊಂದು ಆರೋಪ. ಏಕೆಂದರೆ ಹಿರೇಮಠ ಅವರು ರಮೇಶ್‌ಕುಮಾರ್ ವಿರುದ್ಧ ಬಿಡುಗಡೆ ಮಾಡಿರುವ ದಾಖಲೆ ಪತ್ರಗಳಿಗೂ ಹಿಂದೊಮ್ಮೆ ಕುಮಾರಸ್ವಾಮಿ ಅವರೂ ಬಿಡುಗಡೆ ಮಾಡಿದ್ದ ದಾಖಲೆಗಳಿಗೂ ಸಾಮ್ಯ ಇದೆಯಂತೆ.
ಅದೇ ರೀತಿ ಮತ್ತೊಂದು ನಿದರ್ಶನ. ಡಿ.ಕೆ. ಶಿವಕುಮಾರ್ ಅವರು ಸಂಪುಟ ಸೇರುವ ಮೊದಲು ಅವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಎಣ್ಣೆ-ಸೀಗೆಕಾಯಿ ಸಂಬಂಧ. ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಅವಕಾಶ ಸಿಗದೇ ಹೋದಾಗ ಶಿವಕುಮಾರ್ ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿಯೇ ಕೆಂಡ ಕಾರಿದ್ದರು. ಮುಖ್ಯಮಂತ್ರಿ ವಿರುದ್ಧ ಅವರಿಗಿದ್ದ ಸಿಟ್ಟುಸೆಡವು ಅವರನ್ನು ಭಿನ್ನಮತೀಯ ಗುಂಪಿನ ನಾಯಕನ ಪಟ್ಟಕ್ಕೆ ತಂದು ಕೂರಿಸುವ ಮಟ್ಟಕ್ಕೆ ಹೋಗಿತ್ತು. ಆದರೆ ಈಗ ಶಿವಕುಮಾರ್ ಸಂಪುಟ ಸೇರಿದ ನಂತರ ವರಸೆಯೇ ಬದಲು. ಈಗ ಸಿದ್ದರಾಮಯ್ಯ ಕಣ್ಸನ್ನೆ ಮಾಡಿದರೆ ಸಾಕು ಶಿವಕುಮಾರ್ ಅವರು ಕುಮಾರಸ್ವಾಮಿ ಮೇಲೆ ವಾಗ್ಯುದ್ಧಕ್ಕೆ ಬೀಳುತ್ತಾರೆ. ದೇವೇಗೌಡರ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲ ಶಿವಕುಮಾರ್ ಅವರಲ್ಲಿ ಸಿದ್ದರಾಮಯ್ಯ 'ಪರಕಾಯ ಪ್ರವೇಶ' ಮಾಡುತ್ತಾರೆ. ಶಿವಕುಮಾರ್ ಮಾತಲ್ಲಿ ಸಿದ್ದರಾಮಯ್ಯ ಕುಣಿಯುತ್ತಿರುತ್ತಾರೆ. ಆದರೆ ನೋಡುವವರಿಗೆ ಮೌನದ ಮೂರ್ತಿಯಾಗಿ ಕಾಣುತ್ತಾರೆ.
ವಿಧಾನ ಮಂಡಲ ಹೇಗೆ ಸದಸ್ಯರ ವೈಯಕ್ತಿಕ ರಾಗ-ದ್ವೇಷ ಪ್ರದರ್ಶನಕ್ಕೆ ಬಳಕೆ ಆಗುತ್ತಿದೆ ಎಂಬುದಕ್ಕೆ ಇವು ಸಾಮಾನ್ಯ ಉದಾಹರಣೆಗಳು. ರಾಜಕೀಯದ ಮೂಲ ಮಂತ್ರವೇ ತಂತ್ರ ಹಾಗೂ ಪ್ರತಿತಂತ್ರ. ಆದರೆ ಅದನ್ನು ಎಲ್ಲಿ ಪ್ರದರ್ಶನ ಮಾಡಬೇಕು, ಯಾವ ವೇದಿಕೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಜನಪ್ರತಿನಿಧಿಗಳಿಗೆ ಅರಿವಿರಬೇಕು. ವ್ಯಕ್ತಿಗತ ಹೋರಾಟಕ್ಕೆ ಪಕ್ಷದ ವೇದಿಕೆ ಇದೆ. ಅದನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ಅದನ್ನು ಬಿಟ್ಟು ಬಜೆಟ್ ಮೇಲಿನ ಚರ್ಚೆಯನ್ನು ಸೇಡಿನ ರಾಜಕಾರಣಕ್ಕೆ ಬಳಸಿಕೊಳ್ಳುವುದೇ?
ಹಿರಿಯರ 'ಕತೆ' ಹೀಗಾದರೆ ಇನ್ನು ಕಿರಿಯ ಸದಸ್ಯರ 'ಕವನ'ಗಳೇ ಬೇರೆ. ಗಮನ ಸೆಳೆವ ಸೂಚನೆ ಹಾಗೂ ಪ್ರಶ್ನೋತ್ತರ ಕಲಾಪದಲ್ಲಿ ಅವರು ಸರಿಯಾಗಿ ಭಾಗವಹಿಸುವುದಿಲ್ಲ. ಸ್ಟೈಲಾಗಿ ಪ್ರಶ್ನೆಗಳನ್ನು ಕೇಳಿರುತ್ತಾರೆ. ಆದರೆ ಆ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರು ಹೋಮ್‌ವರ್ಕ್ ಮಾಡಿಕೊಂಡು ಬಂದು ಉತ್ತರ ನೀಡುವಾಗ ಪ್ರಶ್ನೆ ಕೇಳಿದ ಸದಸ್ಯರೇ ಸದನದಿಂದ ನಾಪತ್ತೆ ಆಗಿರುತ್ತಾರೆ. ಪ್ರಶ್ನೆ ಕೇಳುವಾಗ ಇರುವ ಹುಮ್ಮಸ್ಸು ಉತ್ತರ ಪಡೆಯುವ ಹೊತ್ತಿಗೆ ಮಾಯವಾಗಿರುತ್ತದೆ. ಇದು ಕಾಟಾಚಾರದ ಪ್ರಕ್ರಿಯೆ ಎನ್ನುವಷ್ಟರ ಮಟ್ಟಿಗೆ. ಈ ಕಾರಣಕ್ಕಾಗಿಯೇ ಸ್ಪೀಕರ್ ಅವರು ಹೊಸ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿರುವುದೂ ಉಂಟು.
ಸದನದ ಕಲಾಪದಲ್ಲಿ ಸಕ್ರಿಯರಾಗಿ ಹೇಗೆ ಭಾಗವಹಿಸಬೇಕು? ಸದನ, ಕಲಾಪದ ನಿಯಮಗಳು ಏನು? ಯಾವ ರೀತಿ ಚರ್ಚೆ ಮಾಡಬೇಕು? ವಾದ ಮಂಡನೆ ಹೇಗಿರಬೇಕು? ಯಾವ ಅಂಶಗಳಿಗೆ ಪ್ರಾಧಾನ್ಯತೆ ಕೊಡಬೇಕು - ಇವೇ ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುವುದು ಹೊಸಬರಲ್ಲಿ ಅಪೇಕ್ಷಿತ ಬೆಳವಣಿಗೆ. ಆದರೆ ಹೊಸ ಶಾಸಕರಿಗೆ ಇದು ಬೇಕಿಲ್ಲ. ಅವರ ಆದ್ಯತೆಗಳೇ ಬೇರೆ. ಅವರ ಗತ್ತು-ಗೈರತ್ತೇ ಬೇರೆ. ಶಾಸನ ಸಭೆಗೆ ಬಂದು ಇನ್ನೂ ವರ್ಷವಾಗಿಲ್ಲ. ಆಗಲೇ ಔತಣಕೂಟದ ನೆಪದಲ್ಲಿ ಗುಂಪು ರಾಜಕೀಯ ಮಾಡುವುದನ್ನು ಕಲಿತಿದ್ದಾರೆ. ಅಧಿಕಾರ ರಾಜಕಾರಣದ ಹಾಳೆಗಳನ್ನು ಪಟಪಟನೇ ತಿರುವಿ ಹಾಕುವುದರಲ್ಲಿ ನಿಸ್ಸೀಮರಾಗಿದ್ದಾರೆ. ಅಧಿಕಾರ ಗಳಿಸಲು ಹೇಗೆ ಬ್ಲ್ಯಾಕ್‌ಮೇಲ್ ಮಾಡಬೇಕು ಎಂಬುದನ್ನು ಅರಿತಿದ್ದಾರೆ. ಹಿರಿಯ ನಾಯಕರ ದ್ವೇಷ ರಾಜಕಾರಣ ಬತ್ತಳಿಕೆಯ ಅಸ್ತ್ರಗಳಾಗುವುದನ್ನು ಅರಗಿಸಿಕೊಂಡಿದ್ದಾರೆ.
ಹಿಂದೆಲ್ಲ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಎಂಬುದು ವ್ಯವಸ್ಥೆಯ ದೃಷ್ಟಿಗಷ್ಟೇ ಸೀಮಿತವಾಗಿತ್ತು. ಆಗೆಲ್ಲ ಪಕ್ಷಬೇಧವಿಲ್ಲದೆ ಸದನದ ಘನತೆ-ಗೌರವ ಎತ್ತಿ ಹಿಡಿಯುತ್ತಿದ್ದರು. ಪ್ರತಿಪಕ್ಷ ನಾಯಕರ ವಾದ ಸರಣಿಗೆ ಆಡಳಿತ ಪಕ್ಷದವರು, ಅದೇ ರೀತಿ ಆಡಳಿತ ಪಕ್ಷದವರ ಮಾತಿಗೆ ಪ್ರತಿಪಕ್ಷದವರು ಕಿವಿಯಾಗುತ್ತಿದ್ದರು. ಅಲ್ಲಿ ವಾದ ಇರುತ್ತಿತ್ತು, ಪ್ರತಿವಾದ ಇರುತ್ತಿತ್ತು. ಆದರೆ ವೈಯಕ್ತಿಕ ದ್ವೇಷ, ಆಸೂಯೆ, ಪ್ರತೀಕಾರದ ಮನೋಭಾವ ಇರುತ್ತಿರಲಿಲ್ಲ. ಎಲ್ಲರಿಗೂ ಸಮಾನ ಗೌರವ ಸಿಗುತ್ತಿತ್ತು. ಅದರಿಂದಾಗಿ ಸದನದ ಗೌರವವೂ ಇಮ್ಮಡಿಯಾಗಿತ್ತು. ಆದರೆ ಈಗೀಗ ವಿಧಾನ ಮಂಡಲದ ಅಧಿವೇಶನ ಕರ್ತವ್ಯ ಪರಿಪಾಲನೆ ದೃಷ್ಟಿಗಷ್ಟೇ ಸೀಮಿತ ಎಂಬುವಂತಾಗಿದೆ. ಅದು ಬಜೆಟ್ ಇರಲಿ, ನೀತಿ-ನಿರೂಪಣೆ ವಿಷಯಗಳಿರಲಿ, ವಿಧೇಯಕಗಳಿರಲಿ, ವಿಧೇಯಕಗಳಿಗೆ ತಿದ್ದುಪಡಿ ತರುವುದಿರಲಿ ಅರ್ಥಪೂರ್ಣ ಚರ್ಚೆಗಳು ವಿರಳವಾಗುತ್ತಿವೆ. ಕಿರಿಯರಿಗೆ ಮಾದರಿ ಆಗುವುದು ಹಿರಿಯರಿಗೆ ಬೇಕಿಲ್ಲ. ಅದೇ ರೀತಿ ಕಲಿಕೆಯ ಆಸಕ್ತಿ ಕಿರಿಯರಿಗೆ ಇಲ್ಲ. ಶಾಸನಸಭೆ ಸದಸ್ಯರಾಗಿ ದತ್ತಕವಾಗಿರುವ ಅಧಿಕಾರ ಚಲಾವಣೆಗಷ್ಟೇ ತಮ್ಮ ಕರ್ತವ್ಯ ಸೀಮಿತ ಎಂದು ಭಾವಿಸಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳ ಸಭೆಯ 'ಗೌರವ ನಿಧಿ' ಸದ್ದಿಲ್ಲದೇ ಕರಗುತ್ತಿದೆ.
ಲಗೋರಿ : ತಾವೇ ಕಲಿಯದವರು ಇತರರಿಗೆ ಕಲಿಸುವುದಾದರೂ ಹೇಗೆ?
-ಪಿ. ತ್ಯಾಗರಾಜ್
thyagarjun@gmail.com