ಏನ್ರೀ ಮೊನ್ನೆ ಮದುವೆ ಆಗ್ತೀನಿ ಅಂದ್ರಂತೆ, ಈಗ ಆಗಲ್ಲ ಅಂತಿದೀರಂತೆ? ಅಲ್ಲ ರೀ, ಯಾರೋ ಸುದ್ದಿ ಬರೆದ್ರು ಅಂತ ಮದುವೆನೇ ಕ್ಯಾನ್ಸಲ್ ಮಾಡಿಬಿಡ್ತೀರಾ?
ಅಯ್ಯೋ ಈಗಿನ್ ಕಾಲದಲ್ಲಿ ಮದುವೆಗಳೇ ಮೂರು ದಿನಕ್ಕೆ ಬಿದ್ದುಹೋಗುವಾಗ ಮದುವೆ ಸುದ್ದಿಗಳು ಬಿದ್ದು ಹೋಗೋದು ಯಾವ ಲೆಕ್ಕ ಬಿಡಿ.
- ಮುಂದೆ ನಿಂತು ಮದುವೆ ಕ್ಯಾನ್ಸಲ್ ಮಾಡಿಸೋ ಹಿರಿಯರು ಇರ್ತಾರೆ ಬಿಡಿ. ಆದ್ರೆ, ಯಾರೇನೇ ಅಂದ್ರೂ, ನಿಮ್ಮಿಬ್ರಲ್ಲಿ ಯಾರಾದ್ರೂ ಒಬ್ರು ಬೇರೆಯವರನ್ನ ಮದುವೆ ಆಗಿ ಲೈಫಲ್ಲಿ ಸೆಟ್ಲ್ ಆಗೋವರೆಗೆ ಆ ಸುದ್ದಿಗೆ ಲೈಫ್ ಇದ್ದೇ ಇರುತ್ತೆ. ಅಲ್ವಾ?
ಇಲ್ಲರೀ, ನಾವಿಬ್ರೂ ಮದುವೆ ಆಗ್ತಾ ಇದೀವಿ. ಆದರೆ, ಬೇರೆ ಬೇರೆ ಮದುವೆ ಆಗ್ತಾ ಇದೀವಿ. ಅಷ್ಟೆ.
- ಅಯ್ಯೋ, ನೀವು ಮದುವೆ ಆಗ್ತಿದೀರೋ ಅಥವಾ ಬೇರೆ ಆಗ್ತಾ ಇದೀರೋ ಕನ್‌ಫ್ಯೂಸ್ ಆಗ್ತಿದೆ. ನೀವು ಯಾರನ್ನ ಮದ್ವೆ ಆಗ್ತಿರಾ ಅನ್ನೋದೇನೂ ಮಿಲಿಯನ್ ಡಾಲರ್ ಕ್ವೆಶ್ಚನ್ ಅಲ್ಲ ಬಿಡಿ. ಆದ್ರೆ, ಇನ್ನೊಬ್ರು, ಕಂಗ್ರಾಟ್ಸ್ ಹೇಳೋಕೆ ಫೋನ್ ಮಾಡಿದ್ರೆ ಸುದ್ದಿನೇ ಸುಳ್ಳು ಅಂದ್ರಂತೆ?
ಮದುವೆ ಆಗೋದು ಲೇಟ್ ಅಲ್ವಾ, ಸದ್ಯಕ್ಕೆ ಹಿಂಗೆ ಹೇಳಿ. ಅವರಿಗೆ ಮೇಕಿಂಗ್ ನ್ಯೂಸ್, ನಮಗೆ ಬ್ರೇಕಿಂಗ್ ನ್ಯೂಸ್ ಅಂತದ್ರು. ಹೋಗ್ಲಿ ಬಿಡಿ. ಬ್ರೇಕ್ ಆಗಿದ್ದಕ್ಕೆ ನೀವು ಕಂಗ್ರಾಟ್ಸ್ ಹೇಳಲ್ವಾ?
- ಹಲೋ, ಮದುವೆ ಆಗೊ, ಸಿನಿಮಾ ಹೀರೋ ಹೀರೋಯಿನ್‌ಗಳಿಗೆಲ್ಲ ಕಂಗ್ರಾಟ್ಸ್ ಹೇಳೋದೆ ನಮ್ ಕೆಲಸ ಅಂದ್ಕೊಂಡಿದ್ದೀರಾ? ಅದ್‌ಬಿಡಿ, ಅದೇನೋ ಸಕ್ಸಸ್ ಸಿಕ್‌ಮೇಲೆ ಈ ಥರಾ 'ಸಿಕ್'ಸಿಕ್‌ಸುದ್ದಿ ಕಾಮನ್ ಅಂದ್ರಂತೆ, ನೀವು ಯಾವ ಸಕ್ಸಸ್ ಬಗ್ಗೆ ಹೇಳಿದ್ರಿ ಅಂತ ಗೊತ್ತಾಗ್‌ಲಿಲ್ಲ..
ಅದೇ ರೀ, ಇತ್ತೀಚೆಗೆ ಸುಸ್ತಾದ್ರೂ ಬೋನಿಗೆ ಬೀಳೋವರೆಗೂ 'ಯಶ'ಸ್ವಿಯಾಗಿ ಓಡ್ತಾನೇ ಇತ್ತಲ್ಲ. ಆ ಸಿನಿಮಾ..
- ಓ, ಆ ಪಿಕ್ಚರ್‌ನಲ್ಲಿ ನೀವೂ ಆ್ಯಕ್ಟಿಂಗ್ ಮಾಡಿದ್ರಲ್ವಾ... ಸರಿ, ಸರಿ, ಮರ್ತೇ ಹೋಗಿತ್ತು ನೋಡಿ.. ಸರಿ, ನೀವು ಈ ಮುಂಚೆ ಕೇರಳದಲ್ಲೂ 'ಡ್ಯುಯೆಟ್' ಹಾಡಿದ್ರಿ ಅಂತ ಕೇಳ್ದೆ, ಕನ್ನಡದಲ್ಲೂ, ಮಲಯಾಳಂನಲ್ಲೂ ಸಿಂಗರ್ ಆಗಿ ಹೊಸ ಹೊಸ ಹಾಡು ಹಾಡ್ತಾ, ದಿನಕ್ಕೊಂದ್ ಹೊಸರಾಗ ತೆಗೀತಿದೀರಂತೆ?
ಏನ್ ಜೋಕ್ ಮಾಡ್ತಾ ಇದೀರಾ, ನಂಗೆ ಹಾಡೋಕೇ ಬರಲ್ಲ. ನನ್ ಮದುವೆ ಸುದ್ದಿ ಥರ, ಇದೆಲ್ಲ ನಂಗೆ
ಆಗದೇ ಇರೋರು ಹಬ್ಬಿಸಿರೋ ಸುಳ್ಳು ಸುದ್ದಿ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಪೀಸ್ ಆಫ್ ಮೈಂಡ್ ಅನ್ನೋದು ಪ್ಲೀಸ್ ಲೀವ್ ಮಿ ಅಲೋನ್ ಎನ್ನುವುದರಿಂದ ಮಾತ್ರ ಸಿಗೊಲ್ಲ. ಜೀವನ ಅಂದ್ರೆ ಮಳೆ ನಿಲ್ಲಲಿ ಅಂತ ಕಾಯೋದಲ್ಲ, ಮಳೆಯಲ್ಲಿ ನಿಂತು ನರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎನ್ನುವ ಮಾತಿಗೆ ಪೂರಕವಾಗಿ ಇಲ್ಲಿನ ವೆಬ್‌ಸೈಟ್‌ಗಳಲ್ಲಿ ಮನಸ್ಸಿನ ನೆಮ್ಮದಿಗೆ ತಂದುಕೊಳ್ಳುವ ಕೆಲವು ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ.
l bit.ly/1d7Fmqn l bit.ly/1djXRCU
l bit.ly/1g7RjKT l bit.ly/1kiBLK6
l bit.ly/1i4HVJf
ಹರಿ-ಕಥೆ
ಖೇಮುಶ್ರೀ ಶಾಪಿಂಗ್ ಮಾಲ್‌ನಿಂದ ಖರೀದಿ ಮುಗಿಸಿ ಹೊರಬಂದಳು. ಕಾರಿನ ಕೀ ತೆಗೆಯಲು ಪರ್ಸ್‌ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ ಎಲ್ಲ ಕಡೆ ಹುಡುಕಿದರೂ ಕಾರ್ ಕೀನ ಸುಳಿವೇ ಇಲ್ಲ. ಅವಳಿಗೂ ಗೊತ್ತಿತ್ತು, ಕಾರ್ ಕೀ ವಿಷಯದಲ್ಲಿನ ತನ್ನ ಬೇಜವಾಬ್ದಾರಿತನ ಇದೇನೂ ಮೊದಲ ಬಾರಿ ಅಲ್ಲ ಎಂಬುದು. ಎಷ್ಟೋ ಸಾರಿ, ಕಾರ್ ಕೀಯನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದಕ್ಕಾಗಿ ಗಂಡ ಖೇಮುವಿನಿಂದ ಸಿಕ್ಕಾಪಟ್ಟೆ ಬೈಸಿಕೊಂಡಿದ್ದು ಅವಳಿಗಿನ್ನೂ ನೆನಪಿತ್ತು. ಈ ಸಲಾನೂ ಹಂಗೇ ಆಯ್ತಾ, ಹಂಗೇ ಆಗಿದ್ರೆ ಆಕಸ್ಮಾತ್ ಯಾರಾದ್ರೂ ಕಾರನ್ನು ಲಪಟಾಯಿಸಿದ್ರೆ ಏನ್ ಗತಿ ಎಂಬ ಆತಂಕದಲ್ಲಿ ಪಾರ್ಕಿಂಗ್‌ಗೆ ಓಡೋಡಿ ಬಂದಳು. ಅವಳಂದುಕೊಂಡ ಹಾಗೇ ಆಗಿತ್ತು. ಅಲ್ಲಿ ಅವಳ ಕಾರ್ ಇರಲಿಲ್ಲ. ತಕ್ಷಣ ಪೊಲೀಸರಿಗೆ ಕಾಲ್ ಮಾಡಿ ಕರೆಸಿ, ಕಾರ್‌ನ ಕಲರ್, ನಂಬರ್ ಮತ್ತಿತರ ವಿವರ ಕೊಟ್ಟು ದೂರು ಕೊಟ್ಟಳು. ಪೊಲೀಸರು ಕಾರು ಹುಡುಕಲು ಹೊರಟರು. ಒಬ್ಬಳೇ ನಿಂತಿದ್ದ ಖೇಮುಶ್ರೀ ಸ್ವಲ್ಪ ಹೊತ್ತಿನ ನಂತರ, ಬೈಸಿಕೊಂಡರೂ ಪರವಾಗಿಲ್ಲ, ಯಾವುದಕ್ಕೂ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸೋದು ಒಳ್ಳೇದು ಎಂದು ಖೇಮುಗೆ ಕಾಲ್ ಮಾಡಿ ಮೆಲ್ಲನೆ ಅಳುಕಿನಿಂದಲೇ ಹೇಳಿದಳು 'ರೀ, ನನ್ನ ಕಾರ್ ಕೀ ಕಾರಲ್ಲೇ ಬಿಟ್ಟಿದ್ದೆ. ಈಗ ಕಾರು ಕಳುವಾಗಿದೆ. ಬಯ್‌ಬೇಡಿ, ನಾನಿಲ್ಲಿ ಶಾಪಿಂಗ್ ಮಾಲ್ ಬಳಿ ಒಬ್ಬಳೇ ಇದೀನಿ ಬರ್ತೀರಾ ಪ್ಲೀಸ್'. ಆ ಕಡೆಯಿಂದ ಗಂಡ ಖೇಮು ರೇಗಿದ, 'ಅಯ್ಯೋ, ನಿನ್ನ, ಲೇ, ಇವತ್ತು ನೀನೆಲ್ಲೇ ಡ್ರೈವ್ ಮಾಡ್ಕೊಂಡ್ ಹೋಗಿದ್ದೆ.. ಬೆಳಿಗ್ಗೆ ನಾನೇ ನಿನ್ನ ಕಾರಲ್ಲಿ ಕರ್‌ಕೊಂಡ್ ಹೋಗಿ ಶಾಪಿಂಗ್ ಮಾಲ್ ಹತ್ರ ಬಿಟ್ ಬರಲಿಲ್ವಾ. ಈಗ ಈ ಪೊಲೀಸ್ನೋರಿಗೆ ನಿನ್ನ ಕಾರನ್ನ ನಾನು ಕದ್ದಿಲ್ಲ ಅಂತ ಕನ್‌ವಿನ್ಸ್ ಮಾಡಿ ಆಮೇಲ್ ಬರ್ತೀನಿ ಇರು'.
ಸ್ಕ್ಯಾಂಡಲ್‌ವುಡ್
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಗಿದಿದೆ. ಅದರ ಜೊತೆಗೆ ಮೂರು ಕನ್ನಡ ಚಿತ್ರಗಳು ಅಲ್ಲಿ ಪ್ರಶಸ್ತಿಗೆ ಭಾಜನವಾಗಿವೆ. ಈ ಮುಂಚೆ ಹೆಚ್ಚು ಸುದ್ದಿ ಮಾಡಿರದಿದ್ದ ಮುನ್ಸೀಫಕ್ಕೆ ಅತ್ಯಧಿಕ ಮನ್ನಣೆ ತೀರ್ಪುಗಾರರಿಂದ ಲಭಿಸಿದೆ. ಇದರ ಜೊತೆಗೆ ಸುಮನಾ ಕಿತ್ತೂರು ಅವರ ಎದೆಗಾರಿಕೆ ಮತ್ತೊಮ್ಮೆ ಪ್ರೂವ್ ಆಗಿದೆ. ಸುದರ್ಶನ್‌ರ ತಲ್ಲಣಕ್ಕೂ ಸಾಂತ್ವನ ದೊರೆತಿದೆ. ಎಲ್ಲವೂ ಸ್ವಾಗತಾರ್ಹವೇ. ಅದರ ಜೊತೆಗೆ ಪ್ರಶಸ್ತಿ ವಂಚಿತರ ಅಸಮಾಧಾನಗಳಿದ್ದರೂ ಅವು ದೊಡ್ಡ ಮಟ್ಟದಲ್ಲಿ ಹೊರಬರಲಿಲ್ಲ ಎಂಬುದು ಸಮಾಧಾನ. ಆದರೆ, ಈ ವರ್ಷ ಹತ್ತು ಕನ್ನಡ ಚಿತ್ರಗಳು ಬಂದಿದ್ದರೂ ಈ ಮೂರನ್ನು ಬಿಟ್ಟು ಇನ್ಯಾವ ಚಿತ್ರಗಳಿಗೂ ಪ್ರಶಸ್ತಿ ಗೆಲ್ಲುವ ಅರ್ಹತೆ ಇರಲಿಲ್ಲ, ಅವು ಚಿತ್ರೋತ್ಸವಕ್ಕೂ ಅರ್ಹ ಚಿತ್ರಗಳಾಗಿರಲಿಲ್ಲ ಎಂಬ ತೀರ್ಪುಗಾರರ ಮಾತು ಬೇಡವಾಗಿತ್ತು. ಗಿರಿರಾಜ್‌ರ ಜಟ್ಟ ಚಿತ್ರಕ್ಕೆ ಚಿತ್ರೋತ್ಸವದಲ್ಲಿ, ಜನರೇ ಅವಾರ್ಡ್ ಕೊಟ್ಟಿದ್ದಾರೆ. ಒಂದು ಶೋಗೆ ಸೀಮಿತವಾಗಿದ್ದ ಜಟ್ಟ, ಹೆಚ್ಚುವರಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಒಂದು ಹೆಚ್ಚುವರಿ ಪ್ರದರ್ಶನ ಕಂಡಿದ್ದು ಇದಕ್ಕೆ ಸಾಕ್ಷಿ. ಪ್ರೇಕ್ಷಕನೇ ಅಂತಿಮ ತೀರ್ಮಾನ ಕೊಡುವವನು ಎಂಬ ಕಮರ್ಷಿಯಲ್ ಚಿತ್ರಗಳ ಸೂತ್ರ ಗಿರಿರಾಜ್‌ರಂಥ ಪ್ರಶಸ್ತಿ ವಂಚಿತರಿಗೆ ಸ್ಫೂರ್ತಿ ತುಂಬಲಿ. ಪ್ರಶಸ್ತಿ ಗೆದ್ದವರಿಗೆ ಇನ್ನಷ್ಟು ಹುರುಪು ತುಂಬಲಿ.
ಡಬ್ಕುಡಬಲ್ ತುದಾಂಡಲ್...
ಯಡಿಯೂರಪ್ಪ ಬಿಜೆಪಿಗೆ ವಾಪಸ್ ಬಂದ್ರು, ಡಿಕೆಶಿ ಸಚಿವರಾದ್ರು, ಎಲ್ಲ ಪಕ್ಷಗಳಲ್ಲೂ ಆಂತರಿಕ ಜಗಳಗಳು ಕಡಿಮೆ ಆಗ್ತಾ ಇವೆ.
ಬಹುಶಃ, ವಿಧಾನಸೌಧಕ್ಕೆ ಕಾಲಿಟ್ಟ, ಜಗಳ ತೀರ್ಮಾನ ಮಾಡುವ ಎಕ್ಸ್‌ಪರ್ಟ್, ಅಜಾತಶತ್ರು ಅಂಬರೀಶ್ ಅವರ ಕಾಲ್ಗುಣ ಇರಬಹುದು.
ಮರಳು ಸಾಗಿಸಿ, ಜೀವನ ಮಾಡುವ ಲಾರಿ ಓಡಿಸೋರಿಗಲ್ಲಾ ಬೇಕಿರೋದು, ಮರಳು ನೀತಿ
ಪಕ್ಷ ಬಿಟ್ಟು ಮತ್ತೆ ಅದೇ ಪಕ್ಷಕ್ಕೆ ವಾಪಸ್ ಹೋಗೋ ಯಡಿಯೂರಪ್ಪನಂಥವರಿಗೆ ಬೇಕು 'ಮರಳು' ನೀತಿ'.
ನಾನು ಬಿಟ್ಟು ಬಂದಿದ್ದು ಯಾವ ಪಕ್ಷವನ್ನು ಅಂತ ಗೊತ್ತಿಲ್ಲದಷ್ಟು ವಯಸ್ಸಾಗಿರೋ ರಾಜಕಾರಣಿಗಳದ್ದು
ಅರಳು ಮರಳು ನೀತಿ
ಇದೆಂಥಾ ನ್ಯಾಯ?
ಕೇಜ್ರಿವಾಲ್ ಪಾಪ, ಈಗ ತಾನೇ ಮುಖ್ಯಮಂತ್ರಿಯಾಗಿದ್ದಾರೆ. ಇಷ್ಟು ಬೇಗ ಅವರನ್ನು 'ಮನೆಗೆ ಕಳಿಸುವ' ಬಗ್ಗೆ
ಚರ್ಚೆಗಳು ಶುರುವಾಗಿವೆ.
ಗಾಂಧಿನಗರದ ಗಲ್ಲಿ ಮಾತು
'ಮೊನ್ನೆ, ಸಿನಿಮಾದವ್ರ್ ಯಾರೋ ಇಬ್ರು ಗಂಡ್ ಹೈಕ್ಳು, ಬೇರೆ ಬೇರೆ ಆಗ್ತಾರೆ ಅಂತ ಸುದ್ದಿ ಆಯ್ತಲ್ಲ'
'ಅವ್ರನ್ನ ಒಂದ್ ಮಾಡಿದ್ರಲ್ಲ...'
'ಆಮೇಲ್ ಯಾರೋ 'ಗಂಡು, ಹೆಣ್ಣು ಒಂದಾಗ್ತಾರೆ' ಅಂತ ಸುದ್ದಿ ಆಯ್ತಲ್ಲ'
'ಅವ್ರನ್ನ ಬೇರೆ ಬೇರೆ ಮಾಡಿದ್ರಲ್ಲ...'
'ಎಂದ, ಗುರುವಾಯೂರಪ್ಪ, ಕಾಲ ಕೆಟ್ಟೋಯ್ತು..!!'
ಹರಿ
harikannadaprabha@gmail.com