ಎಷ್ಟೋ ಬಾರಿ ಯೋಚಿಸಿದ್ದಿದೆ, ನೀರಿನ ಬಗ್ಗೆ ನಾನು ಬರೆಯುತ್ತಿರುವುದೇಕೆ? ಇದರಿಂದ ಯಾರು ಪ್ರಯೋಜನ ಪಡೆದಿದ್ದಾರು? ಕೊನೇ ಪಕ್ಷ ನಾನಾದರೂ ನೀರನ್ನು ಪೂರ್ಣ ಅರಿತುಕೊಳ್ಳಲು ಸಾಧ್ಯವಾಗಿದ್ದಿದೆಯೇ? ಖಂಡಿತಾ ಉತ್ತರ ಸಿಕ್ಕಲೇ ಇಲ್ಲ. ಏಕೆಂದರೆ ಅದರ ಮುಖಗಳು ಹಲವು. ಅದು ವಿಜ್ಞಾನವಾಗಿ ಕಂಡಾಗ ಹತ್ತಿರ ಸುಳಿಯಲೂ ಹೆದರಿದ್ದಿದೆ. ಸಾಮಾಜಿಕ ಕೋನದಲ್ಲಿ ಕಂಡಾಗ ಮಾನವತೆ ಜಾಗೃತಗೊಳ್ಳುತ್ತದೆ. ಅದೊಂದು ಸೃಷ್ಟಿಯ ಭಾಗ, ಪರಿಸರದ ಅಂಗ ಎಂದುಕೊಂಡಾಗ ಕೌತುಕವನ್ನು ಮೂಡಿಸುತ್ತದೆ. ಒಂದೊಂದು ಕ್ಷಣವೂ ಒಂದೊಂದು ಮಜಲನ್ನು ಬಿಚ್ಚಿಕೊಳ್ಳುವ ನೀರಿನ ಬಗ್ಗೆ ಇಷ್ಟೆಲ್ಲಾ ಬರೆಯುವುದು ನೀವು ಹೇಗೆ ಎಂಬ ಪ್ರಶ್ನೆ ಓದುಗರಿಂದಲೂ ಸದಾ ಎದುರಾಗುತ್ತಲೇ ಇರುತ್ತದೆ. ಪೂರ್ಣ ಪ್ರೀತಿಯೊಂದಿಗೆ ಈ ಪರಿಯಾಗಿ ನಾನು ನೀರಿನೊಳಗೆ ಮುಳುಗಿ ಹೋಗಿರದಿದ್ದರೆ ನನ್ನಿಂದ ಇಷ್ಟರವರೆಗೆ ಅಂಥದ್ದೊಂದು ಕೌತುಕದ ಬಗ್ಗೆ ಬರೆಯಾಲಾಗುತ್ತಿತ್ತೋ ಇಲ್ಲವೋ? ಆದರೆ ಆ ಪ್ರೀತಿ ನನ್ನಲ್ಲಿ ಈವರೆಗೆ ಬತ್ತಿಲ್ಲ.
ಹಾಗೊಮ್ಮೆ ನೋಡಲು ಹೊರಟರೆ, ಭೂಮಿಯ ಮೇಲಿನ ಯಾವ ಜೀವಿಗೂ ನೀರು ಹೊಸತೇನಲ್ಲ. ಹುಟ್ಟುತ್ತಲೇ ನೀರ ಸನ್ನಿಧಿಯನ್ನು ಆವಾಹಿಸಿಕೊಳ್ಳುತ್ತೇವೆ. ಕುಂತಲ್ಲಿ-ನಿಂತಲ್ಲಿ, ಹೋದಲ್ಲಿ- ಬಂದಲ್ಲಿ ಹೀಗೆ ಎಲ್ಲೆಡೆಯಲ್ಲೂ ನೀರು ಹರಿದಾಡುತ್ತಿರುತ್ತದೆ. ಎಷ್ಟೋ ಮಂದಿಗೆ ಮಳೆಯೆಂದರೆ ಅದೊಂದು ಬಕ್ಕಬೇಜಾರಿನ ಸಂಗತಿ. ಆದರೆ ಮಳೆಯ ಮಹತ್ವವನ್ನು ಅರಿತವರ ಪಾಲಿಗೆ ಮಾತ್ರ ಅದು ಸಂಭ್ರಮ. ರಚ್ಚೆ ಹಿಡಿದು ಹುಯ್ಯುವ ಮಳೆಯನ್ನು ಹುಚ್ಚು ಹಿಡಿಸಿಕೊಂಡು ಅಚ್ಚರಿಯ ಕಣ್ಣುಗಳಲ್ಲಿ ತುಂಬಿಕೊಳ್ಳುವುದಿದೆಯಲ್ಲಾ, ಅದಕ್ಕೆ ಸಾಟಿಯಾಗಬಲ್ಲ ಸಂತಸ ಈವರೆಗೆ ಜೀವನದಲ್ಲಿ ಸಿಕ್ಕಿಲ್ಲ. ಪ್ರತಿ ಕ್ಷಣದ ಕುತೂಹಲದೊಂದಿಗೆ ಮಳೆಯನ್ನು ಗಮನಿಸುತ್ತಾ ಹೋದರೆ ಅದರ ಅವಸ್ಥಾಂತರಗಳು ಬಿಚ್ಚಿಕೊಳ್ಳುತ್ತ ಸಾಗುತ್ತವೆ. ಒಂದು ಮಳೆಯಲ್ಲಿ ದಕ್ಕಿದ ಅನುಭವ, ಇನ್ನೊಂದರಲ್ಲಿ ತೀರಾ ಭಿನ್ನವಾಗಿರುತ್ತದೆ. ಅದು ಆ ಹೊತ್ತಿನ ಅನುಭಾವ.
ಇನ್ನು ಮಳೆ ನೀರ ಹಿಡಕೊಳ್ಳವವರ ಪಾಲಿಗಂತೂ ಮಳೆಯೆಂಬುದು ಸದಾರ್ಚಿತ. ಒಮ್ಮೆ ಅಂಥ ಹುಚ್ಚು ಹಿಡಿಸಿಕೊಂಡವರನ್ನು ಕೇಳಿ ನೋಡಿ, ದಿನಗಟ್ಟಲೇ ಅವರು ಮಳೆಯ ಬಗ್ಗೆ, ನೀರಿನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅಂಥ ಹುಚ್ಚು ಇರುವವರನ್ನು ಏನೇನೋ ಸಂಶೋಧನೆಗಳಿಗೆ, ಪ್ರಯೋಗಗಳಿಗೆ ಅವರನ್ನು ತೊಡಗಿಸುತ್ತಲೇ ಇರುತ್ತದೆ. ನಿಜಕ್ಕೂ ಅವರ ಕೆಲಸಕ್ಕೆ ಬೆಲೆ ಕಟ್ಟಲಾಗುವುದೇ ಇಲ್ಲ. ಮೂಲೆಯಲ್ಲೆಲ್ಲೋ ಕುಳಿತು ತಮ್ಮ ಪಾಡಿಗೆ ತಾವು ಹೊಸನೀರ ಚಿಮ್ಮಿಸುವ, ಹೊಸ ಆವಿಷ್ಕಾರಕ್ಕೆ ಕಾರಣರಾಗುವ ಮಂದಿ ಇನ್ನಿಲ್ಲದ ಬೆರಗು ಹುಟ್ಟಿಸುತ್ತಾರೆ. ಕೃಷಿಯನ್ನೇ ಬದುಕಾಗಿಸಿಕೊಂಡ ಅಂಥವರಿಗೆ ನೀರ ಪ್ರಯೋಗಗಳು ಅನಿವಾರ್ಯವಾಗಿರಬಹುದು. ಆದರೆ ಅದರ ಹಿಂದಿರುವ ಪರಿಶ್ರಮ, ಕ್ರಿಯಾಶೀಲತೆ ಅನಿವಾರ್ಯತೆಯನ್ನೂ ಮೀರಿ ಸುತ್ತಲಿನ ಸಮುದಾಯಕ್ಕೆ ಪ್ರಯೋಜನವನ್ನು ಕಟ್ಟಿಕೊಡುತ್ತದೆ.
ಓದುಗ ಮಿತ್ರ ನಾರಾಯಣ ಅವರು ಗಮನ ಸೆಳೆದ ಆವಿಷ್ಕಾರವೊಂದನ್ನು ನಿಮ್ಮೊಂದಿಗೂ ಹಂಚಿಕೊಳ್ಳಲು 'ಖುಷಿ' ಆಗುತ್ತಿದೆ. ಈ ಆವಿಷ್ಕಾರ ಆರಂಭವಾಗುವುದೇ ನೀರೆಯಿಂದ. ನೀರು ಹೊರುವ ನೀರೆಯರಿಗಾಗಿ ನ್ಯೂಯಾರ್ಕ್‌ನ ನೀರೆಯೊಬ್ಬಳು ಮಾಡಿದ ಆವಿಷ್ಕಾರವಿದು. ಆಕೆಯ ಹೆಸರು ಸಿಂಥಿಯಾ ಕೊನಿಗ್.
ಹೆಣ್ಣಿಗೂ ನೀರಿಗೂ ಬಹಳ ಹತ್ತಿರದ ನಂಟು. ಒಂದರ್ಥದಲ್ಲಿ ಅವಳ ಬದುಕು ಬೆಸೆದುಕೊಂಡಿರುವುದೇ ನೀರಿನೊಂದಿಗೆ. ಬೆಳೆದ ತವರು ಮನೆ ಇರಲಿ, ಬಾಳುವ ಗಂಡನ ಮನೆ ಇರಲಿ. ಅವಳ ನಿತ್ಯದ ಚಟುವಟಿಕೆ ಶುರುವಾಗುವುದು, ದಿನದ ಬಹು ಹೊತ್ತು ವ್ಯಯವಾಗುವುದು, ಕೊನೆಗೆ ರಾತ್ರಿ ಮುಸುರೆ ತಿಕ್ಕುವುದರೊಂದಿಗೆ ದಿನಚರಿ ಮುಕ್ತಾಯವಾಗುವುದು ಕೂಡ ನೀರಿನೊಂದಿಗೇ. ಹೀಗಾಗಿಯೇ ಹೆಣ್ಣಿಗೆ 'ನೀರೆ' ಎಂದೂ ಹೇಳುವುದು ಶುರುವಾಯಿತೇನೋ. ತನ್ನಂಥ ಲಕ್ಷಾಂತರ ಹೆಣ್ಣುಮಕ್ಕಳು ನೀರು ತರುವುದಕ್ಕಾಗಿ ಪ್ರಯಾಸ ಪಡುವುದನ್ನು ತಪ್ಪಿಸಲು, 'ನೀರು ಸಾಗಣೆ'ಯನ್ನು ಸುಲಭಗೊಳಿಸಲು ಕೊನಿಗ್ ರೂಪಿಸಿದ್ದು 'ಜಲಚಕ್ರ'ವನ್ನು. ಅದೂ ಪ್ರಾಯೋಗಿಕವಾಗಿ ಜಾರಿಗೆ ಬಂದಿರುವುದು ಭಾರತದಲ್ಲೇ. ಕೊಡ ನೀರನ್ನು ಮೈಲುಗಟ್ಟಲೆ ದೂರದಿಂದ ಹೊತ್ತು ತರಬೇಕಾದ ಸ್ಥಿತಿ ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ ಸಾಮಾನ್ಯ. ನಮ್ಮಲ್ಲಿ ಮಾತ್ರವಲ್ಲ, ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬಹಳಷ್ಟು ರಾಷ್ಟ್ರಗಳಲ್ಲೂ ಇದೇ ಸ್ಥಿತಿ. ಜಾಗತಿಕವಾಗಿ ಸ್ತ್ರೀಯರು ಪ್ರತಿನಿತ್ಯ 200 ದಶಲಕ್ಷ ಗಂಟೆಗಳನ್ನು ಕೇವಲ ದೂರದಿಂದ ಮನೆಗೆ ನೀರು ತರಲಿಕ್ಕಾಗಿಯಷ್ಟೇ ವ್ಯಯಿಸುತ್ತಾರೆ ಎನ್ನುತ್ತದೆ ಒಂದು ವರದಿ. ಇದು ಆ ಯುವತಿಯ ಮನಸ್ಸು ಘಾಸಿಗೊಳಿಸಿತು. ಹೇಗಾದರೂ ಮಾಡಿ 'ನೀರ ಭಾರ' ಕಡಿಮೆ ಮಾಡಬೇಕು ಎಂದು ಯೋಚಿಸುತ್ತಿದ್ದವಳಿಗೆ ಹೊಳೆದದ್ದು 'ಜಲಚಕ್ರ'ದ ಕಲ್ಪನೆ. ಇದು ಅವಳಿಗೆ ಗ್ರ್ಯಾಂಡ್ ಚಾಲೆಂಜಸ್ ಕೆನಡಾ ಎನ್ನುವ ಪ್ರತಿಷ್ಠಿತ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಆ ಹಣದಿಂದಲೇ ಆಕೆ 'ಜಲಚಕ್ರ' ತಯಾರಿಸುವ ಕಂಪನಿ 'ವೆಲ್ಲೊ' ಸ್ಥಾಪಿಸಿ, ಭಾರತದಲ್ಲಿಯೇ ಪೈಲಟ್ ಪ್ರಾಜೆಕ್ಟ್ ಅನ್ನೂ ಆರಂಭಿಸಿದ್ದಾಳೆ. 'ಜಲಚಕ್ರ' ಹೆಣ್ಣುಮಗಳೊಬ್ಬಳು ನೀರು ತರಲು ವ್ಯಯಿಸಬೇಕಾದ ಸಮಯವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುವುದಷ್ಟೇ ಅಲ್ಲ, ಇದನ್ನು ಶ್ರಮರಹಿತವಾಗಿಯೂ ಪರಿವರ್ತಿಸುತ್ತದೆ.
ಕೊನಿಗ್ ಮಾಡಿದ್ದೇನೆಂದರೆ 50 ಲೀಟರ್ ಸಾಮರ್ಥ್ಯದ ಕಂಟೇನರ್ ಅನ್ನು ತಳ್ಳುಬಂಡಿಯ ರೂಪದಲ್ಲಿ ಸಿದ್ಧಪಡಿಸಿದಳು. ಒಂದು ಕೊಡಪಾನದಲ್ಲಿ ಹೆಚ್ಚೆಂದರೆ 15 ಲೀಟರ್ ನೀರು ಹಿಡಿಯುತ್ತದೆ. ಮೂರು ಕೊಡ ನೀರು ತರವುದೂ ಒಂದೇ, ಒಂದು ಸಲ ಕಂಟೇನರ್‌ನಲ್ಲಿ ತುಂಬಿಕೊಂಡು ಬರುವುದೂ ಒಂದೇ. ಮುಖ್ಯವಾಗಿ ತಲೆ ಮೇಲೆ ಹೊತ್ತುಕೊಂಡು ನಡೆಯುವ ಪ್ರಸಂಗವಿಲ್ಲ! ಇದನ್ನು ಬಳಸಿದರೆ ಒಂದು ವಾರಕ್ಕೆ ಒಬ್ಬ ಮಹಿಳೆ ಉಳಿಸಬಹುದಾದ ಸರಾಸರಿ ಸಮಯ 35 ಗಂಟೆ! ಇದೇ ಅವಧಿಯನ್ನು ಆಕೆ ತನಗೆ ಆರ್ಥಿಕವಾಗಿ ಆದಾಯ ತಂದುಕೊಡಬಹುದಾದ ಯಾವುದಾದರೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಲ್ಲವೆ ಎಂದು ಪ್ರಶ್ನಿಸುವ ಕೊನಿಗ್ ಪ್ರಯತ್ನ ಇಲ್ಲಿಗೇ ನಿಂತಿಲ್ಲ. ಕಂಟೇನರ್‌ಗೆ ನೀರು ಶುದ್ಧೀಕರಿಸುವ ಫಿಲ್ಟರ್ ಅಳವಡಿಸುವ, ಅದು ತಾನಾಗಿಯೇ ಚಲಿಸುವಂತೆ ಮಾಡುವ ಚಾರ್ಜರ್ ಅಳವಡಿಸುವ ಕನಸುಗಳೂ ಅವಳ ಕಣ್ಣುಗಳಲ್ಲಿ ತುಂಬಿಕೊಂಡಿವೆ.
ನೀರ ಕೆಲಸವೆಂದರೆ ಹಾಗೆಯೇ, ಅದು ಒಬ್ಬ ವ್ಯಕ್ತಿಯಿಂದಲೇ ಆಗಿದ್ದಿರಬಹುದು. ಆದರೆ ಅದರ ಪ್ರಯೋಜನ ಮಾತ್ರ ಹಲವರಿಗೆ ದಕ್ಕುತ್ತದೆ. ಕೆಲ ಸಂದರ್ಭದಲ್ಲಿ ಕೆಲಸ ಮಾಡಿದವರಿಗಿಂತ ಇತರರಿಗೇ ಹೆಚ್ಚು ಉಪಯುಕ್ತವೆನಿಸುತ್ತದೆ. ಹಾಗೆಂದು ಆವನೊಬ್ಬನೇ ಕೆಲಸ ಮಾಡಿ, ಇನ್ನೊಬ್ಬರಿಗೇಕೆ ಅನುಕೂಲ ಮಾಡಿಕೊಡಲಿ ಎಂಬ ಸಿನಿಕತನದಿಂದ ಯಾವತ್ತೂ ನೀರ ಗೆಳೆಯರು ದೂರವಿರುತ್ತಾರೆ. ಸಾಮುದಾಯಿಕ ಉದ್ದೇಶವೇ ಅಲ್ಲಿ ಪ್ರಾಮುಖ್ಯ ಪಡೆದಿರುತ್ತದೆ. ಎಲ್ಲರೂ ಸುಖವಾಗಿರಲಿ, ಎಲ್ಲರಿಗೂ ಸಮೃದ್ಧಿ ದೊರೆಯಲಿ ಎಂಬ ವಿಶಾಲಾರ್ಥದಲ್ಲಿಯೇ ನೀರ ಕೆಲಸಗಳು ಸಾಗಿದಾಗಲೇ ಗಂಗೆ ಒಲಿದು ಬರುವುದು. ಸ್ವಾರ್ಥಕ್ಕೆ ಅಲ್ಲಿ ಸ್ಥಾನವಿಲ್ಲ.
ನೀರೆಚ್ಚರ ಎಂಬುದು ವ್ಯಕ್ತಿಗತವಾಗಿ, ತೀರಾ ವೈಯಕ್ತಿಕ ಮಟ್ಟದಲ್ಲಿ ಮೂಡಬೇಕಾದದ್ದೇ ಆದರೂ, ಒಂದಿಡೀ ಸಮುದಾಯ ಜಲ ಸಾಕ್ಷರತೆಯೆಡೆಗೆ ತುಡಿದಾಗ, ನೈಜ ಕಳಕಳಿಯೊಂದಿಗೆ ದುಡಿದಾಗ ಮಾತ್ರವೇ ಗರಿಷ್ಠ ಮತ್ತು ಸುಸ್ಥಿರ ಅಭಿವೃದ್ಧಿಯ ಸಾಧನೆಯಾಗಲು ಸಾಧ್ಯ. ಈ ದೃಷ್ಟಿಯಿಂದಲೇ ನೀರು ಎಂಬುದು ಪಾರಂಪರಿಕ ಸಮಾಜ ವ್ಯವಸ್ಥೆಯಲ್ಲಿ ಸಮುದಾಯದ ಆಸ್ತಿಯಾಗಿ ಘೋಷಣೆಯಾಗಿತ್ತು. ವಸಾಹತುಶಾಹಿ ಆಡಳಿತ ವ್ಯವಸ್ಥೆ, ಆನಂತರದ ಸ್ವಾತಂತ್ರ್ಯೋತ್ತರ ಭಾರತದ ಆಡಳಿತ ಸನ್ನಿವೇಶದಲ್ಲಿ ಇಂಥ ಸಾಮೂಹಿಕ ಹೊಣೆಗಾರಿಕೆಯ ಪರಿಕಲ್ಪನೆ ಬದಲಾಗಿ ಸರಕಾರಿ ಇಲಾಖೆಗಳ ಸುರರ್ದಿಗೆ ಒಳಪಟ್ಟಿತು. ಬಹುಶಃ ನೀರ ನಿರ್ಲಕ್ಷ್ಯ ಎಂಬುದು ಆರಂಭವಾದದ್ದೇ ಇಲ್ಲಿಂದ. ಬಳಕೆಗೆ ಮಾತ್ರ ಹಕ್ಕುದಾರರೆಂದುಕೊಂಡ ಮಂದಿ, ನೀರ ನಿರ್ಮಿತಿಗಳ ನಿರ್ವಹಣೆ ಸರ್ಕಾರಿ ವ್ಯವಸ್ಥೆಗೆ ಸೇರಿದ್ದೆಂಬ ನಿರ್ಧಾರಕ್ಕೆ ಬಂದುಬಿಟ್ಟರು. ಇಂಥ ಮನೋಭಾವ ವ್ಯವಸ್ಥೆಯನ್ನು ಹದಗೆಡಿಸುತ್ತ ಬಂತು. ನೀರನ್ನು ಉಳಿಸುವುದು, ಅದನ್ನು ಸಂಗ್ರಹಿಸುವುದು, ಇಲ್ಲವೇ ಇಂಗಿಸುವುದು ಇತ್ಯಾದಿ 'ರಗಳೆ'ಗಳೆಲ್ಲ ನಮಗೇಕೆ? ಅದನ್ನೇನು ನಮಗೊಬ್ಬರಿಗೇ ಗುತ್ತಿಗೆ ಕೊಟ್ಟಿದ್ದಾರೆಯೇ? ಊರಿಗೆಲ್ಲ ಉಪಯೋಗಕ್ಕೆ ನಾವೊಬ್ಬರೇ ಏಕೆ ನೀರಿಂಗಿಸಬೇಕು ಇತ್ಯಾದಿ ಪ್ರಶ್ನೆ ಕೇಳಿಕೊಂಡು ತಮ್ಮ ಪಾಡಿಗೆ ತಾವಿದ್ದು ಬಿಡುವುದನ್ನು ರೂಢಿಸಿಕೊಂಡ ನಂತರವೇ ಪಾರಂಪರಿಕ ನೀರು ನಿರ್ವಹಣೆ ವ್ಯವಸ್ಥೆ ಪಳೆಯುಳಿಕೆಗಳಾದವು. ಇದರ ಫಲವಾಗಿ ಮಲೆನಾಡು ಸಹ ಬೇಸಿಗೆ ಬರಕ್ಕೆ ತುತ್ತಾಯಿತು. ಯಾವಾಗ ಕುಡಿಯುವ ನೀರಿಗೇ ತತ್ವಾರ ಎಂಬುದು ಕಾಣಿಸಿಕೊಂಡಿತೋ ಆಗ ಜನ ಹುಯಿಲೆಬ್ಬಿಸಲಾರಂಭಿಸಿದರು.
ಇಷ್ಟಾದರೂ ವಿಸ್ಮೃತಿಯಿಂದ ಸಂಪೂರ್ಣ ಹೊರಬಂದಿಲ್ಲ. ನೀರ ಕೆಲಸಗಳು ಅಲ್ಲೊಂದು ಇಲ್ಲೊಂದು ಆದರ್ಶ ಎಂಬಂತೆ ಸಾಗುತ್ತಿದೆಯೇ ಹೊರತೂ ಅದು ನಿತ್ಯದ ಕೆಲಸದ ಭಾಗವಾಗಿ, ಸಹಜ ಮನೋಧರ್ಮವಾಗಿ ಇಂದಿಗೂ ಅನುಷ್ಠಾನಗೊಳ್ಳುತ್ತಿಲ್ಲ. ನೈಜ ಕಳಕಳಿಯೊಂದಿಗೆ ಕಾರ್ಯಕ್ಷೇತ್ರಕ್ಕಿಳಿದ ಮನಸ್ಸುಗಳ ಪ್ರಯೋಗಶೀಲತೆ. ಸಂಕಷ್ಟ ಸನ್ನಿವೇಶದಲ್ಲಿ ಅವರು ಏನು ಮಾಡಬೇಕೋ ಅದನ್ನು ಮಾಡಿದ್ದಾರೆ, ಉಳಿದವರು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅವು ಗಮನ ಸೆಳೆಯುತ್ತವೆ. ಇಂಥವನ್ನು ಸಾರಿ ಹೇಳಿ ಇನ್ನು 10 ಮಂದಿ ಸಜ್ಜು ಗೊಳಿಸಿದಾಗಲೇ ಅದು ಸಾರ್ಥಕ್ಯ ಕಾಣುವುದು. ನಾನೂ ಏನಾದರೊಂದು ಮಾಡಲೇಬೇಕು ಎಂಬ ಕೆಚ್ಚು ಮೂಡದಿದ್ದರೂ, ನೀರಿಗೆ ಕಂಟಕವಾದುದನ್ನು ಮಾಡದಿರುವ ನಿಲುವು ಮೊಳೆತರೆ ಕಾರ್ಯ ಸಾರ್ಥಕ.
ಇನ್ನೊಂದು ಗಮನಿಸಲೇಬೇಕಾದ ಸಂಗತಿಯೆಂದರೆ, ಬಂಡವಾಳಶಾಹಿ ನಾಗರಿಕತೆಯ ಪರಿಕಲ್ಪನೆಯಡಿಯಲ್ಲಿ ಸಮಕಾಲೀನ ಜೀವನ ಕ್ರಮದಲ್ಲಿ ವೈಯಕ್ತಿಕ ಬದುಕಿಗಷ್ಟೇ ಪ್ರಾಧಾನ್ಯ ನೀಡುವುದರೊಂದಿಗೆ ಅದೇ ಬದುಕು ಎಂದುಕೊಂಡು ಬಿಟ್ಟಿದ್ದೇವೆ. ಇಂಥ ನಿರ್ಣಯದ ಮಾನದಂಡ ಸರ್ವಸಮಸ್ತ ಸಮಾಜಕ್ಕೂ ಹಬ್ಬಿಬಿಟ್ಟಿದೆ. ಸಮಾಜದ ಇಂಥ ವಿಚಾರಪರ ನಿಲುವು, ತಂತ್ರಜ್ಞಾನದ ಬೆಳವಣಿಗೆ ಎಂದು ನಾವೇನು ಇಂದು ಗುರುತಿಸುತ್ತಿದ್ದೇವೋ ಅದರೊಂದಿಗೆ ಬೆಳೆದು ಬಂದುಬಿಟ್ಟಿದೆ. ಪಾರಂಪರಿಕ ಜ್ಞಾನ ವಲಯಗಳು, ಭಾವನಾ ಲಹರಿಗಳ ಮೇಲೆ ಸೊಲ್ಲೆತ್ತಲಾಗದಂಥ ಆಕ್ರಮಣವನ್ನದು ನಡೆಸಿಬಿಟ್ಟಿದೆ.
ಅದನ್ನಾದರೂ ಸಹಿಸಿಕೊಂಡು ಬಿಡಬಹುದಿತ್ತು. ಆದರೆ ತೀರಾ ಅಗತ್ಯ, ಅನಿವಾರ್ಯವೆಂದೆನಿಸಿರುವ ತಂತ್ರಜ್ಞಾನ ಇಂದಿನ ನಮ್ಮ ಅಂತರಂಗದ ಒತ್ತಡ-ಸಂಘರ್ಷಗಳನ್ನು ಪರಿಹರಿಸುತ್ತಿಲ್ಲ. ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿ ನಿಲ್ಲುತ್ತಿಲ್ಲ. ಹಾಗೊಮ್ಮೆ ನಿಂತಿದ್ದೇ ಹೌದಾದರೆ ಇಂದು ನೀರಿನ ಸಮಸ್ಯೆ ಎಂಬ ಪ್ರಮೇಯವೇ ಸೃಷ್ಟಿಯಾಗುತ್ತಿರಲಿಲ್ಲ. ವೃತ್ತಿ ಕೌಶಲವೇ ತಾಂತ್ರಿಕ ಶಿಕ್ಷಣದ ಅಂತಿಮ ಗುರಿಯೆಂಬ ಭ್ರಮೆಯೇ ಬಹುಶಃ ಇದಕ್ಕೆಲ್ಲ ಕಾರಣವೆಂದೆನಿಸುತ್ತದೆ. ಅದೇನೇ ಇದ್ದರೂ ನಮ್ಮತನದ ಅರಿವಿಲ್ಲದ ತಾಂತ್ರಿಕತೆ ಏಕತಾನತೆಗೆ ಕಾರಣವಾಗಿದೆ. ಅಂಥ ಏಕತಾನತೆಯೇ ಬದುಕಿನ ಅಭದ್ರತೆಗೆ ದಾರಿ ಮಾಡಿಕೊಟ್ಟಿದೆ. ಅದರ ಪರಿಣಾಮವೇ ನೀರು ನಿರ್ವಹಣೆಯಂಥ ಪ್ರಮುಖ ಸಂಗತಿಯಲ್ಲೂ ನಾವು ಇನ್ನಿಲ್ಲದ ವೈಫಲ್ಯವನ್ನು ಕಾಣುತ್ತಿದ್ದೇವೆ. ನಾವೇ ಸೃಷ್ಟಿಸಿಕೊಂಡ ಭೀಕರ ಬರಗಾಲ ಒಟ್ಟಾರೆ ಮಾನವ ಕುಲವನ್ನು ಕಾಡುತ್ತಿದೆ.
ಇಷ್ಟಾದರೂ ನಮ್ಮ ಪಾರಂಪರಿಕ ಜ್ಞಾನದ ಸುವಿಶಾಲ ಹರಹು ನಮಗೆ ನಿಲುಕುತ್ತಿಲ್ಲ. ಅನುಭವಗಳು ದಕ್ಕುತ್ತಿಲ್ಲ. ಸಮಗ್ರ ಜೀವನ ಹಾಗೂ ಕ್ರಿಯಾಶೀಲತೆಗಳಿಂದ ನಾವಿಂದು ಬಹುದೂರ ಬಂದುಬಿಟ್ಟಿದ್ದೇವೆ. ಈಗೇನಿದ್ದರೂ ನಮ್ಮ ಜೀವಂತಿಕೆಗಿರುವ ಏಕೈಕ ಸಾಕ್ಷಿಯೆಂದರೆ ಆಕ್ರಮಣಶೀಲತೆ. ಅದನ್ನೇ ನಾವು ನೀರಿನ ವಿಚಾರದಲ್ಲೂ ಪ್ರಯೋಗಿಸುತ್ತಿದ್ದೇವೆ.
ಕೊನಿಗ್‌ರಂಥವರ ಸಂಶೋಧನೆಗಳು ಮುಂದುವರಿಯಲಿ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in