ಅಂಕಣಗಳು

ನಾವು ಕ್ಷೇಮ. ನಿಮ್ಮ ಕ್ಷೇಮಕ್ಕೆ ಕಾಗದ ಬರೆಯುವುದು

ಎರಡು ದಶಕಗಳ ಹಿಂದಿನ ಮಾತು. ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ನನಗೆ ಪ್ರಾಥಮಿಕ ಶಿಕ್ಷಣ ದೊರಕಿದ್ದು ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿದ್ದುದು ಸರ್ಕಾರಿ ಶಾಲೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ? ಆವತ್ತಿನ ಸಂದರ್ಭದಲ್ಲಿ ಐದನೇ ತರಗತಿ ಆರಂಭವಾಗುತ್ತಿದ್ದಂತೆಯೇ ಇಂಗ್ಲಿಷ್ ಅಕ್ಷರಗಳನ್ನೂ, ಆರನೇ ತರಗತಿಯಲ್ಲಿ ಹಿಂದಿ ಅಕ್ಷರಗಳನ್ನೂ ಹೇಳಿ ಕೊಡುತ್ತಿದ್ದರು. ಈಗಿನ ಕಾಲದ ಪೋಷಕರಂತೆ ನಮ್ಮ ಮಗು, ಒಂದನೇ ತರಗತಿಯಲ್ಲಿರುವಾಗಲೇ ಇಂಗ್ಲಿಷ್ ಹಾಗೂ ಹಿಂದಿ ವರ್ಣಮಾಲೆಯನ್ನು ಬರೆದು ತೋರಿಸಲಿ ಎಂಬ ಧಾವಂತ ಆ ಕಾಲದವರಿಗೆ ಇರಲಿಲ್ಲ. ಹಾಗಾಗಿ ಪ್ರಾಥಮಿಕ ಶಾಲೆಯ ಮಕ್ಕಳು ವರ್ಷಕ್ಕೊಂದು ಹೊಸ ವಿಷಯವನ್ನು ಕಲಿಯುತ್ತಿದ್ದರು.
ಬಾಲ್ಯ ಅಂದಾಕ್ಷಣ ನನ್ನನ್ನು ಮತ್ತೆ ಮತ್ತೆ ಕಾಡುವ ಪ್ರಸಂಗವೆಂದರೆ, ಅಜ್ಜನಿಗೆ ಅಮ್ಮ ಬರೆಸುತ್ತಿದ್ದ ಕಾಗದಗಳ ವಿಚಾರ. ಬೇರೊಂದು ಜಿಲ್ಲೆಯ ಹಳ್ಳಿಯಲ್ಲಿದ್ದ ಅಜ್ಜನಿಗೆ ಪ್ರತಿ ಹದಿನೈದು ದಿನಕ್ಕೊಂದು ಪತ್ರ ಬರೆಸುವುದು ಅಮ್ಮನ ಅಭ್ಯಾಸವಾಗಿತ್ತು. 'ನನ್ನ ಅಕ್ಷರ ಚೆನ್ನಾಗಿರುವುದಿಲ್ಲ. ವ್ಯಾಕರಣದ ತಪ್ಪುಗಳೂ ಆಗುತ್ತವೆ. ಜೊತೆಗೆ, ಇಡೀ ದಿನ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುವ ಕಾರಣದಿಂದ ಕೈ ಮಸಿಯಾಗಿರುತ್ತದೆ. ಹಾಗಾಗಿ ನೀನೇ ಬರೆದರೆ ಚೆಂದ' ಅನ್ನುತ್ತಿದ್ದಳು ಅಮ್ಮ.
ಪತ್ರ ಬರೆಯುವ ಮೊದಲು ಕ್ಷೇಮ, ಶ್ರೀ, ದಿನಾಂಕ ಎಂದು ತಪ್ಪದೇ ಬರೆಯಬೇಕಿತ್ತು. ಆನಂತರ- ' ಅಮ್ಮಾ, ನಾನು ರೆಡೀ, ನೀನು ವಿಷಯ ಹೇಳು' ಅಂದರೆ, ಅಡುಗೆ ಮನೆಯಲ್ಲಿ ಕೂತು ಅಥವಾ ಎದುರಿಗೆ ತರಕಾರಿಗಳನ್ನು ಇಟ್ಟುಕೊಂಡು ಅಮ್ಮ ಶುರು ಮಾಡುತ್ತಿದ್ದಳು: 'ತೀರ್ಥರೂಪ ತಂದೆಯವರಿಗೆ, ನಿಮ್ಮ ಪ್ರೀತಿಯ ಮಗಳು ಸರಸ್ವತಿ ಮಾಡುವ ನಮಸ್ಕಾರಗಳು. ಇಲ್ಲಿ ನಾವೆಲ್ಲ ಕ್ಷೇಮ. ನಿಮ್ಮ ಯೋಗಕ್ಷೇವುಕ್ಕೆ ಈ ಕಾಗದ ಕಂಡ ತಕ್ಷಣ ಉತ್ತರ ಬರೆಯುವುದು...' ಇಷ್ಟನ್ನು ಹೇಳಿ ತಕ್ಷಣ ನಿಲ್ಲಿಸುತ್ತಿದ್ದ ಅಮ್ಮ, ಮುಂದಿನ ಸಾಲಿನಲ್ಲಿ 'ಉಭಯ ಕುಶಲೋಪರಿ ಸಾಂಪ್ರತ' ಎಂದು ಬರೆಸುತ್ತಿದ್ದಳು. ನಂತರದ ಸಾಲಿನಿಂದ ಆಕೆಯ ಡಿಕ್ಟೇಶನ್ ಮುಂದುವರಿಯುತ್ತಿತ್ತು.
ಅಮ್ಮ ಬರೆಸುತ್ತಿದ್ದ ಪತ್ರಗಳಲ್ಲಿ ಅಂಥಾ ಮಹತ್ವದ ಸುದ್ದಿಗಳೇನೂ ಇರುತ್ತಿರಲಿಲ್ಲ. ಸಂತೆಯಿಂದ ಮೇಕೆ ಮರಿಗಳನ್ನು ತಂದದ್ದು, ವಿಪರೀತ ಮಳೆ ಬಂದು ಬೆಳೆ ಹಾಳಾಗಿದ್ದು, ಅಪ್ಪ ಎಲ್ಲರಿಗೂ ಶುಭ ಹಾರೈಕೆ ತಿಳಿಸಿರುವುದು, ಕೃಷಿ ಕೆಲಸಕ್ಕೆ ಜನ ಬೇಕಾಗಿರುವುದರಿಂದ ಯಾರನ್ನಾದರೂ ಹುಡುಕಿ ನೋಡಿ ಎಂದು ವಿನಂತಿಸುವುದು, ಹತ್ತಿರದ ನೆಂಟರು ಮನೆಗೆ ಬಂದು ಹೋಗಿದ್ದು, ಮನೆಮಂದಿಯೆಲ್ಲಾ ಜಾತ್ರೆಗೆ ಹೋಗಿ ಬಂದಿದ್ದು...ಇಂಥವೇ ವಿವರಣೆಗಳಿಂದ ಪತ್ರ ತುಂಬಿ ಹೋಗುತ್ತಿತ್ತು. ಬರೆದು ಮುಗಿಸಿದ ನಂತರ ಎಲ್ಲವನ್ನೂ ಅಮ್ಮನಿಗೆ ಓದಿ ಹೇಳಬೇಕಿತ್ತು. ಯಾವುದಾದರೂ ವಿಷಯ ಬಿಟ್ಟು ಹೋಗಿದ್ದರೆ, ಅದನ್ನೂ ತಕ್ಷಣವೇ ಸೇರಿಸಲು ಹೇಳುತ್ತಿದ್ದಳು. ಮುಂದಿನ ತಿಂಗಳು ಹಬ್ಬ ಇದೆ. ನೀವು ತಪ್ಪದೇ ಬಂದು ಹೋಗಿ ಎಂದು ಬರೆಸುತ್ತಿದ್ದಳು. ಕಡೆಯಲ್ಲಿ 'ತಿಳಿದವರಿಗೆ ಹೆಚ್ಚಿಗೆ ಬರೆಯಲು ಶಕ್ತಳಲ್ಲ'. ಇಂತಿ ನಿಮ್ಮ ಪ್ರೀತಿಯ ಮಗಳು ಸರಸ್ವತಿ ಎಂಬ ಒಕ್ಕಣೆಯೊಂದಿಗೆ ಅಮ್ಮನ ಪತ್ರ ಮುಗಿಯುತ್ತಿತ್ತು.
ಇದಾಗಿ ಹದಿನೈದು ದಿನ ಕಳೆಯುವುದರೊಳಗೆ ತಾತನ ಊರಿಂದಲೂ ಪತ್ರ ಬರುತ್ತಿತ್ತು. ಅನಕ್ಷರಸ್ಥನಾಗಿದ್ದ ತಾತ, ಪಕ್ಕದ ಮನೆಯವರಿಗೆ ಹೇಳಿ ಪತ್ರ ಬರೆಸುತ್ತಿದ್ದರು. 'ಪ್ರೀತಿಯ ಮಗಳು ಸರಸ್ವತಿಗೆ, ನಿಮ್ಮ ತಂದೆ ಮಾಡುವ ಆಶೀರ್ವಾದಗಳು' ಎಂದೇ ಆ ಪತ್ರ ಶುರುವಾಗುತ್ತಿತ್ತು. ಆನಂತರದಲ್ಲಿ ಬಹುಪಾಲು ಅಮ್ಮನ ಪತ್ರಗಳಲ್ಲಿ ಇದ್ದಂಥ ವಿವರಗಳೇ ತಾತನ ಪತ್ರದಲ್ಲೂ ಕಾಣಿಸುತ್ತಿದ್ದವು. ಪತ್ರ ತಲುಪಿದೆ ಎಂದು ಅಜ್ಜನಿಗೆ ತಿಳಿಸಬೇಕಿತ್ತಲ್ಲವೇ? ಅದಕ್ಕೆ ಅಮ್ಮ ಮತ್ತೊಂದು ಪತ್ರ ಬರೆಸುತ್ತಿದ್ದಳು. ಆ ಕಡೆಯಿಂದ ತಾತನೂ ಅದೇ ಕೆಲಸ ಮಾಡುತ್ತಿದ್ದರು.
ಹುಡುಗಾಟದ ಆ ದಿನಗಳಲ್ಲಿ ನನಗೋ, ಏನಾದರೂ ವಿಶೇಷ ಸಾಲುಗಳನ್ನು ಬರೆಯಬೇಕು ಎಂಬ ಆತುರವಿತ್ತು. ಹಾಗಾಗಿ, ಒಮ್ಮೆ ಅಡ್ರೆಸ್ ಬರೆಯುವಾಗ ಒಂದು ಸಾಲನ್ನು ಇಂಗ್ಲಿಷಿನಲ್ಲಿ, ಒಂದು ಸಾಲನ್ನು ಕನ್ನಡದಲ್ಲಿ ಬರೆದಿದ್ದೆ. ಅಮ್ಮ ಆಕ್ಷೇಪಿಸಲಿಲ್ಲ. ಏನನ್ನೇ ಬರೆದರೂ ಅರ್ಥವಾಗುವ ಹಾಗೆ, ಅಕ್ಷರಗಳನ್ನು ಬಿಡಿಸಿ ಬರೆಯಬೇಕು ಎಂದಿದ್ದಳು. ಈ ಪ್ರೋತ್ಸಾಹದ ಮಾತುಗಳಿಂದ ಉಬ್ಬಿ ಹೋದ ನಾನು ಆನಂತರ ಬರೆದ ಪತ್ರದಲ್ಲಿ -'ಪ್ರೀತಿಯ ತಂದೆಯವರಿಗೆ ನಿಮ್ಮ ಮಗಳು ಸರಸ್ವತಿ ಮಾಡುವ ಆಶೀರ್ವಾದಗಳು' ಎಂದು ಬರೆದು ಬಿಟ್ಟಿದ್ದೆ. ಈ ಬಾರಿಯೂ ಒಂದು ಹೊಸ ಪ್ರಯೋಗ ಮಾಡಿದ್ದೇನೆ ಎಂಬ ಹೆಮ್ಮೆ ನನ್ನದಾಗಿತ್ತು. ಅವತ್ತಿನ ಆ ಚಿಕ್ಕ ವಯಸ್ಸಿಗೆ ನಮಸ್ಕಾರ ಹಾಗೂ ಆಶೀರ್ವಾದದ ಮಧ್ಯೆ ಇದ್ದ ವ್ಯತ್ಯಾಸವೇ ನನಗೆ ಗೊತ್ತಿರಲಿಲ್ಲ. 'ಅಮ್ಮಾ ನಾನು ಬರೆದು ಆಯ್ತು' ಎಂದದ್ದಲ್ಲದೆ, ಬರೆದದ್ದನ್ನು ಖುಷಿಯಿಂದಲೇ ಓದಿ ಮುಗಿಸಿದಾಗ ಸರಸರನೆ ಬಂದ ಅಮ್ಮ, ಬೆನ್ನಿಗೆ ಎರಡು ಗುದ್ದು ಹಾಕಿ, ದೊಡ್ಡವರಿಗೆ ಚಿಕ್ಕವರು ಆಶೀರ್ವಾದ ಮಾಡಲು ಸಾಧ್ಯವೇನೇ? ಇದನ್ನೇನಾ ನೀನು ಸ್ಕೂಲಲ್ಲಿ ಕಲಿತದ್ದು ಎಂದು ಪ್ರಶ್ನಿಸಿದ್ದಳು. ಆನಂತರದಲ್ಲಿ ನಮಸ್ಕಾರ ಹಾಗೂ ಆಶೀರ್ವಾದಕ್ಕೆ ಇರುವ ವ್ಯತ್ಯಾಸದ ಬಗೆಗೂ ವಿವರಿಸಿದ್ದಳು.
ಮುಂದೆ, ಪತ್ರ ಬರೆಯುವುದು ನನ್ನ ಪಾಲಿಗೆ ಒಂದು ಕೆಲಸವೇ ಆಗಿಹೋಯಿತು. ನಮ್ಮ ಊರಿನ ಹತ್ತಿಪ್ಪತ್ತು ಮನೆಯ ಜನರಿಗೆ ಐದಾರು ವರ್ಷಗಳ ಕಾಲ ಪತ್ರ ಬರೆದು ಕೊಟ್ಟೆ. ಈ ಕಾರಣದಿಂದ ನನ್ನ ಅಕ್ಷರಗಳು ಮುದ್ದಾದವು. ಬರವಣಿಗೆಯಲ್ಲಿ ತಪ್ಪುಗಳಾಗುವುದೂ ಕಡಿಮೆಯಾಯಿತು. ಅದಕ್ಕಿಂತ ಹೆಚ್ಚಾಗಿ, ಯಾರೊಂದಿಗೆ ಹೇಗೆ ಮಾತಾಡಬೇಕು, ಯಾವುದು ಅತಿ ಮುಖ್ಯ ವಿಷಯ ಎಂಬುದನ್ನೆಲ್ಲಾ ಅಮ್ಮ ಬರೆಸಿದ ಪತ್ರಗಳು ಪರೋಕ್ಷವಾಗಿ ಹೇಳಿಕೊಟ್ಟವು .
ಪತ್ರ ಬರೆಯುವ ನೆಪದಲ್ಲಿ, ನನಗೆ ಆಗಿರುವಂಥ ಮಧುರ ಅನುಭವವೇ ಈಗ ಇಪ್ಪತ್ತೈದು ದಾಟಿರುವ ಹಲವು ಮಂದಿಗೆ ಆಗಿರಬಹುದು. ಹಾಗೆಂದುಕೊಂಡೇ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ಹಿಂದೆಲ್ಲಾ ಪತ್ರ ಬರೆಯುವಾಗ- 'ಉಭಯ ಕುಶಲೋಪರಿ ಸಾಂಪ್ರತ' ಎಂದು ಬರೆಸುತ್ತಿದ್ದರು. ಅದರ ಅರ್ಥವಾದರೂ ಏನು? ಹೇಳಿ ನೋಡೋಣ...



- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ