ಮೊನ್ನೆ ಸೋಮವಾರ ಬೆಳಗ್ಗೆ ನನ್ನ ತಾಯಿ 'ಕನ್ನಡಪ್ರಭ' ಪತ್ರಿಕೆಯ ಶೀರ್ಷಿಕೆಯನ್ನು ನಿಧಾನವಾಗಿ, ಒಂದೊಂದೇ ಪದವನ್ನು ಹೆಕ್ಕಿ ಹೆಕ್ಕಿ ಓದುತ್ತಿದ್ದರು-"ಖುಷಿಗೊಂದು ನೆಪ ಸಿಕ್ಕಿದೆ. ಇನ್ನು ಮುಂದೆ ಯಾವ ಮಗುವಿಗೂ ಪೋಲಿಯೋ ಬಾಧಿಸಲ್ಲ. ಭಾರತ ಇನ್ನು ಪೋಲಿಯೋ ಮುಕ್ತ" ಈ ಶೀರ್ಷಿಕೆಯನ್ನು ಇನ್ನೊಮ್ಮೆ ದಿಟ್ಟಿಸಿ, ಕನ್ನಡಕ ತೆಗೆದು ನಿರಾಳವಾಗಿ ಉಸಿರು ತೆಗೆದುಕೊಳ್ಳುತ್ತಿದ್ದಂತೆ ಅವರಿಗೆ ಅರಿವಿಲ್ಲದಂತೆ ಎರಡು ಕಣ್ಣೀರ ಹನಿ ಕೆನ್ನೆಗೆ ಇಳಿದಿತ್ತು. ಆ ಶೀರ್ಷಿಕೆ ಅವರಲ್ಲಿ ಮೂಡಿಸಿದ ಭಾವಧಾರೆಯ ಒರತೆಯ ಮೂಲ ಯಾವುದಿರಬಹುದು ಎಂಬುದನ್ನು ಊಹಿಸಲು ನನಗೆ ಕಷ್ಟವಾಗಲಿಲ್ಲ. ಹಾಗೆ ನೋಡಿದರೆ ಆ ಶೀರ್ಷಿಕೆ ನನ್ನಲ್ಲೂ ಒಂದು ಭಾವಸಂಚಲನವನ್ನು ಮೂಡಿಸಿತ್ತು. 'ಎಂಥ ಒಳ್ಳೆಯ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದೀರಿ. ಇನ್ನು ಮುಂದೆ ಯಾರೂ ನಮ್ಮ ದೇಶದಲ್ಲಿ ಪೋಲಿಯೋದಿಂದ ಸಾಯುವುದಿಲ್ಲ. ಇದು ಎಲ್ಲ ತಾಯಂದಿರ ನೆಮ್ಮದಿಯ ನಿಟ್ಟುಸಿರಿನ ಕ್ಷಣ' ಎಂದರು ನನ್ನ ತಾಯಿ ಕಣ್ಣೊರೆಸಿಕೊಳ್ಳುತ್ತಾ. ನಾನೂ ಆ ಕ್ಷಣ ಭಾವುಕನಾದೆ.
ನನ್ನ ತಾಯಿಯ ಆ ಕ್ಷಣದ ಕಣ್ಣೀರ ಹಿಂದೆ ಎಂಥ ಮನಕಲಕುವ ಪ್ರಸಂಗ ತೇಲುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳಲು ನಾನು ಮೂರು -ನಾಲ್ಕು ದಶಕಗಳ ಹಿಂದೆ ಹೋಗಿ ರಿವೈಂಡ್ ಮಾಡಲು ಪ್ರಯತ್ನಿಸಿದೆ. ನನಗೊಬ್ಬಳು ಅಕ್ಕ ಇದ್ದಳು. ಅವಳ ಹೆಸರು ಪುಷ್ಪಲತಾ. ಬಾಲ್ಯದಲ್ಲೇ ಪೋಲಿಯೋ ಪೀಡಿತೆ. ಐವತ್ತು ವರ್ಷಗಳ ಹಿಂದೆ, ಆಕೆ ಪೋಲಿಯೋದಿಂದ ನರಳುತ್ತಿದ್ದಾಳೆಂದು ಆ ಹಳ್ಳಿಯಲ್ಲಿ ಗೊತ್ತಾಗುವ ಹೊತ್ತಿಗೆ ಅವಳಿಗೆ ಹತ್ತು-ಹನ್ನೆರಡು ವರ್ಷ ತುಂಬಿದ್ದವು. ನನ್ನ ತಂದೆ -ತಾಯಿ ಆಗ ಸಂಪರ್ಕಿಸದ ವೈದ್ಯರಿಲ್ಲ, ಭೇಟಿ ಕೊಡದ ಆಸ್ಪತ್ರೆಯಿಲ್ಲ, ಅವಳ ಮುಂದಿನ ಬದುಕಿನ ಗತಿಯೇನು ಎಂದು ಶಾಸ್ತ್ರ ಕೇಳದ ಜ್ಯೋತಿಷಿಗಳು ಇರಲಿಕ್ಕಿಲ್ಲ. ಹನ್ನೆರಡು ವರ್ಷವಾದರೂ ಅವಳಿಗೆ ಮಾತಾಡಲು, ನಡೆದಾಡಲು ಆಗುತ್ತಿರಲಿಲ್ಲ. ಕೈ ಕಾಲುಗಳು ಕೊಕ್ಕೆಯಾಗಿದ್ದವು. ಕುಳಿತಲ್ಲೇ ಕುಳಿತಿರುತ್ತಿದ್ದಳು. ಊಟ, ತಿಂಡಿ ಮಾಡುವುದಿರಲಿ, ಗುಟುಕು ನೀರು ಬೇಕಾದರೂ ಬೇರೆಯವರೇ ಕುಡಿಸಬೇಕಿತ್ತು. ಪ್ರತಿದಿನ ತಂದೆಯವರು ಆಕೆಯನ್ನು ಅನಾಮತ್ತು ಬಚ್ಚಲು ಮನೆಗೆ ಎತ್ತಿಕೊಂಡು ಹೋಗಿ ಸ್ನಾನ ಮಾಡಿಸುತ್ತಿದ್ದರು. ಮಲ-ಮೂತ್ರ ವಿಸರ್ಜನೆಯೂ ಕುಳಿತಲ್ಲೇ. ತಂದೆಯವರಿಲ್ಲದಾಗ ಈ ಎಲ್ಲ ಕೆಲಸ ತಾಯಿ ಮಾಡುತ್ತಿದ್ದರು.
ಒಂದು ದಿನ ಸಹ ಅವರಿಬ್ಬರೂ ಮುಖ ಕಿವುಚಿಕೊಳ್ಳಲಿಲ್ಲ. ದೇವರ ಸೇವೆ ಮಾಡುವಂತೆ ಮಾಡಿದರು. ಮನೆಗೆ ಬಂದವರು 'ಆ ಊರಿನಲ್ಲಿ ಒಬ್ಬರು ವೈದ್ಯರಿದ್ದಾರೆ, ಅವರು ಎಣ್ಣೆ ಮಂತ್ರಿಸಿ ಕೊಡ್ತಾರೆ, ಅದನ್ನು ಎರಡು ತಿಂಗಳು ತಿಕ್ಕಿದರೆ ಪೋಲಿಯೋ ಮರೆಯಾಗುತ್ತದೆ' ಎಂದು ತಂದೆಯವರ ಮುಂದೆ ಹೇಳಿದರೆ, ಅಕ್ಕನನ್ನು ಎತ್ತಿಕೊಂಡು ನೂರಾರು, ಸಾವಿರಾರು ಕಿಮಿ ದೂರವಾದರೂ ಸೈ, ಹೋಗಿ ಆ ನಾಟಿವೈದ್ಯರನ್ನೋ, ಮಾಂತ್ರಿಕನನ್ನೋ ಭೇಟಿಯಾಗಿ ಆ ಮಂತ್ರದ ಎಣ್ಣೆಯನ್ನು ತರುತ್ತಿದ್ದರು. ಜಗತ್ತಿನಲ್ಲಿ ಪೋಲಿಯೋ ಔಷಧ ಕಂಡು ಹಿಡಿದಿಲ್ಲ ಎಂದು ಡಾಕ್ಟರರು ಎಷ್ಟೇ ಹೇಳಿದರೂ, ಅಕ್ಕನ ಪೋಲಿಯೋ ಗುಣವಾಗುವುದಾದರೆ ಯಾವ ಛಾನ್ಸ್‌ನ್ನೂ ಕಳೆದುಕೊಳ್ಳಲು ತಂದೆಯವರು ಸಿದ್ಧರಿರಲಿಲ್ಲ. ಯಾರೋ ಬಂದು 'ಪುಟಪರ್ತಿಗೆ ಹೋಗಿ ಸಾಯಿಬಾಬಾನ ದರ್ಶನ ಪಡೆದು, ವಿಭೂತಿಯನ್ನು ತಿನ್ನಿಸಿ ನಿಮ್ಮ ಮಗಳ ಕಾಯಿಲೆ ವಾಸಿಯಾಗುತ್ತದೆ' ಎಂದರು. ಅಕ್ಕನನ್ನು ಎತ್ತಿಕೊಂಡು ಪುಟಪರ್ತಿಗೆ ಹೋದರು. ಬಾಬಾ ಅಕ್ಕನ ತಲೆ ಮೇಲೆ ಕೈಯಿಟ್ಟು, ವಿಭೂತಿ ಕೊಟ್ಟರು. ಅದನ್ನು ಆರು ತಿಂಗಳು ತಿನ್ನಿಸಿದರು. ಸೊಟ್ಟಗಾಗಿದ್ದ ಕೈ ಕಾಲು ನೆಟ್ಟಗಾಗಲಿಲ್ಲ.
ಇನ್ಯಾರೋ ಬಂದು, 'ಶಿರಡಿಗೆ ಕರೆದುಕೊಂಡು ಹೋಗಿ ಬನ್ನಿ. ಎಲ್ಲ ಸರಿ ಹೋಗುತ್ತದೆ' ಎಂದರು. ತಂದೆಯವರು ಶಿರಡಿಗೆ ಎರಡು ಟಿಕೆಟ್ ತೆಗೆದರು. ಪ್ರಯೋಜನವಾಗಲಿಲ್ಲ. ಮತ್ತ್ಯಾರೋ ಬಂದು, 'ತಮಿಳುನಾಡಿನ ಕುಂಭಕೋಣಂದಲ್ಲಿ ಒಬ್ಬರು ಮಾಂತ್ರಿಕರಿದ್ದಾರೆ. ಸಾವಿರಾರು ಜನರನ್ನು ಗುಣಪಡಿಸಿದ್ದಾರೆ. ಅಲ್ಲಿಗೇಕೆ ಕರೆದು ಕೊಂಡು ಹೋಗಬಾರದು?' ಅಂದರು. ಎರಡು ದಿನಗಳೊಳಗೆ ತಂದೆಯವರು ಅಕ್ಕನನ್ನು ಎತ್ತಿಕೊಂಡು ಕುಂಭಕೋಣಂದಲ್ಲಿದ್ದರು. ಉಫ್... ಏನೂ ಪ್ರಯೋಜನವಾಗಲಿಲ್ಲ.
ಇನ್ಯಾರಾದರೂ ಬಂದು ಹಿಮಾಲಯದ ಶಿಖರದ ಮೇಲೆ ಒಬ್ಬ ಯೋಗಿಯಿದ್ದಾನೆ, ಆತ ನಿಮ್ಮ ಮಗಳ ತಲೆ ಮೇಲೆ ಕೈಯಿಟ್ಟರೆ ಪೋಲಿಯೋ ವಾಸಿಯಾಗುತ್ತದೆ, ಮಣ್ಣು ಮಂತ್ರಿಸಿ ಕೊಡ್ತಾನೆ ದಿನಾಲೂ ತಿನ್ನಿಸಿ ಎಂದು ಹೇಳಿದ್ದರೂ 'ಹೌದಾ? ಅದೊಂದನ್ನು ಮಾಡಲಿಲ್ಲ ಅಂತ ಯಾಕೆ ಕೊರಗಬೇಕು. ಮಗಳ ಕಾಯಿಲೆ ವಾಸಿಯಾಗುವುದಾದರೆ ಅದನ್ನೂ ಮಾಡೋಣ. ಇಷ್ಟೆಲ್ಲ ಮಾಡಿದವನಿಗೆ ಅದೊಂದು ಹೆಚ್ಚಾ?' ಎಂದು ಅಕ್ಕನನ್ನು ಎತ್ತಿಕೊಂಡು ಹಿಮಾಲಯಕ್ಕೆ ಪಾದ ಬೆಳೆಸಲು ಹಿಂದೇಟು ಹಾಕುತ್ತಿರಲಿಲ್ಲ. ಕುಳಿತಲ್ಲೇ ಕುಳಿತು, ಮಲಗಿದ್ದಲ್ಲಿಯೇ ಮಲಗಿ ಅಕ್ಕನಿಗೆ ಬೆಡ್ ಸೋರ್ ಆಗಿ ಮೈ, ಬೆನ್ನು ಹುಣ್ಣಾದರೂ ತಂದೆ-ತಾಯಿ ಅವಳ ಸೇವೆಯನ್ನು ಪ್ರೀತಿಯಿಂದ ಮಾಡಿದರು. ಮನೆಗೆ ಬಂದವರೆಲ್ಲ ಅವಳನ್ನು ನೋಡಿ ಕನಿಕರ ಪಟ್ಟಾಗ ಇವರಿಗೆ ಅತೀವ ಹಿಂಸೆಯಾಗುತ್ತಿತ್ತು. ಎಲ್ಲವನ್ನೂ ನುಂಗಿಕೊಂಡರು. ಆದರೆ ತಮಗಾಗುತ್ತಿದ್ದ ಬೇಸರದ ಒಂದು ಹನಿಯನ್ನೂ ಅಕ್ಕನ ಮುಂದೆ ತೊಟ್ಟಿಕ್ಕಲು ಬಿಡಲಿಲ್ಲ. ನನ್ನ ಅಕ್ಕನಿಗೆ ಬದುಕು ಅಸಹನೀಯವಾಗಿತ್ತು. ಯಾವ ತಂದೆ-ತಾಯಿ ಮಗಳ ಈ ಪಾಡನ್ನು ಕಣ್ಣಾಕಣ್ಣೆದುರೆ ನೋಡಿ ನೆಮ್ಮದಿಯಿಂದ ಇರಲು ಸಾಧ್ಯ? ಬರೋಬ್ಬರಿ ಹದಿನೆಂಟು ವರ್ಷ ಮಗಳ ಸೇವೆಯನ್ನು ಮಾಡಿದರು. ನಾನು ಆಗ ಪಿಯುಸಿಯಲ್ಲಿ ಓದುತ್ತಿದ್ದೆ. ಸುಮಾರು ಮೂವತ್ತೊಂದು ವರ್ಷಗಳ ಹಿಂದೆ ಅಕ್ಕನನ್ನು ಪೋಲಿಯೋ ಬಲಿ ತೆಗೆದುಕೊಂಡಿತ್ತು.
ಪುನಃ ಕಣ್ಣೀರನ್ನು ಒರೆಸಿಕೊಳ್ಳುತ್ತಾ ನನ್ನನ್ನು ಕರೆದು 'ಭಾರತದಲ್ಲಿ ಇನ್ನು ಮುಂದೆ ಪೋಲಿಯೋದಿಂದ ಯಾರೂ ಸಾಯುವುದಿಲ್ಲವಂತೆ. ಪುಷ್ಪಲತಾಳ ಆತ್ಮಕ್ಕೆ ಸಮಾಧಾನವಾಗುತ್ತದೆ. ಅವಳು ಹುಟ್ಟಿದಾಗ ಪೋಲಿಯೋ ಲಸಿಕೆ ಇದ್ದಿದ್ದರೆ ಬದುಕಿಕೊಳ್ಳುತ್ತಿದ್ದಳು. ದೇವರ ಪಾದ ಸೇರಿದವಳು ಅಲ್ಲಿ ಸುಖದಿಂದ ಇರಲಿ. ಯಾವ ತಾಯಿಗೂ ಪೋಲಿಯೋ ಪೀಡಿತ ಮಕ್ಕಳು ಹುಟ್ಟದಿರಲಿ' ಎಂದರು. ಮನಸ್ಸು ಕಣ್ಣೀರಲ್ಲಿ ಮುಖಕ್ಕೆರಚಿಕೊಳ್ಳುತ್ತಿತ್ತು. ಕೋಟಿ ಕೋಟಿ ಜನರಲ್ಲಿ ಈ ಸುದ್ದಿ ಎಂಥ ಸಾಂತ್ವನ, ತಂಗಾಳಿ, ನೆಮ್ಮದಿಯನ್ನು ಹೊತ್ತು ತರಬಹುದೆಂಬುದನ್ನು ನೆನೆದು ಮನಸ್ಸು ರೋಮಾಂಚನಗೊಂಡಿತು. ನನ್ನ ತಂದೆಯವರೇನಾದರೂ ಬದುಕಿದ್ದಿದ್ದರೆ ಈ ಸುದ್ದಿ ಕೇಳಿ ಅದೆಷ್ಟು ಸಂತಸಪಡುತ್ತಿದ್ದರೇನೋ ಎಂದು ಅಂದುಕೊಂಡೆ.
ಇದು ಕೇವಲ ನನ್ನ ತಂದೆ-ತಾಯಿ ಅನುಭವಿಸಿದ ಯಾತನೆ-ಹಿಂಸೆಯಲ್ಲ. ಕೋಟ್ಯಂತರ ಜನ ಜೀವಂತ ಅನುಭವಿಸಿದ, ಅನುಭವಿಸುತ್ತಿರುವ ನರಕ. ಪೋಲಿಯೋ ಪೀಡಿತ ಹೆಣ್ಣು ಮಗಳು ಮನೆಯಲ್ಲಿದ್ದರೆ ಆ ಮನೆಯಲ್ಲಿ ಸುಡುವ ಬೆಂಕಿಯೇನೆಂಬುದನ್ನು ಕಣ್ಣಾರೆ ಕಂಡ ನಾನು ಅರ್ಥೈಸಿಕೊಳ್ಳಬಲ್ಲೆ. ಆ ಮನೆಯ ಸಂಕಟ, ತುಮುಲ, ವಿಷಾದ, ಅಸಹಾಯಕತೆಯನ್ನು ಅನುಭವಿಸಿದವರಿಗೇ ಗೊತ್ತು. ಅಂಥ ಪ್ರತಿ ಮನೆಯಲ್ಲೂ ಒಂದು ಸುಪ್ತ ಕುದಿ ಜ್ವಾಲಾಮುಖಿಯಿರುತ್ತದೆ. ನಮ್ಮ ದೇಶದಲ್ಲಿ ಅಂಥ ಅವೆಷ್ಟು ಕೋಟಿ ಜ್ವಾಲಾಮುಖಿಗಳಿದ್ದಿರಬಹುದು, ಕ್ಷಣ ಯೋಚಿಸಿ.
'ಭಾರತ ಇನ್ನು ಮುಂದೆ ಪೋಲಿಯೋ ಮುಕ್ತ' ಎಂದಾಗ ಭಾರತ ಸರ್ಕಾರಕ್ಕೆ ಮನಃ ಪೂರ್ವಕವಾಗಿ ಉದ್ದಂಡ ನಮಸ್ಕಾರ ಮಾಡಬೇಕೆನಿಸುತ್ತಿದೆ ಎಂದು ನನ್ನ ತಾಯಿ ಹೇಳಿದರು. ಇಷ್ಟು ವರ್ಷಗಳ ನಂತರ ಈ ಭಯಂಕರ ಮಹಾಮಾರಿಯನ್ನು ಈ ದೇಶದಿಂದ ಓಡಿಸಿದೆವಲ್ಲ, ಇದೆಂಥ ಅದ್ಭುತ ಸಾಧನೆ ಎಂಬ ಹಿರಿಮೆ, ಅಭಿಮಾನ ಎಂಬ ಭಾವ ಅವರಲ್ಲಿ ತುಂಬಿತ್ತು. ನಿಜಕ್ಕೂ ಇದು ಸ್ವತಂತ್ರ ಭಾರತದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಮಹಾನ್ ಸಾಧನೆಗಳಲ್ಲೊಂದು. ಭಾರತ ಅಂದ್ರೆ 'ಪೋಲಿಯೋ ಪೀಡಿತರ ದೇಶ' ಎಂದು ಅಂತಾರಾಷ್ಟ್ರೀಯ ಸಮುದಾಯದೆದುರು ಮುಜುಗರ ಪಟ್ಟುಕೊಂಡ, ಅವಮಾನದಿಂದ ತಲೆತಗ್ಗಿಸಿದ ದೇಶವನ್ನು ವಿಶ್ವ ಆರೋಗ್ಯ ಸಂಸ್ಥೆ (WHO)'ಪೋಲಿಯೋ ಮುಕ್ತ ದೇಶ' ಎಂದು ಘೋಷಿಸಿದೆ. ಸಮಸ್ತ ದೇಶವಾಸಿಗಳು ಸಂಭ್ರಮ ಪಡುವ ಕ್ಷಣವಿದು. ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ದಾಖಲಾಗಿಲ್ಲ. 2011ರ ಜನವರಿಯಲ್ಲಿ ಪಶ್ಚಿಮ ಬಂಗಾಲದ ಹೌರಾದಲ್ಲಿ ಎರಡು ವರ್ಷದ ಬಾಲಕಿಗೆ ಪೋಲಿಯೋ ಇರುವುದು ಖಚಿತವಾಗಿತ್ತು. ಆನಂತರ ರಾಷ್ಟ್ರದಲ್ಲೆಲ್ಲೂ ಪೋಲಿಯೋ ಕಂಡು ಬಂದಿಲ್ಲ.
ಇಪ್ಪತ್ತೈದು ವರ್ಷಗಳ ಹಿಂದೆ, ಭಾರತ ಇಂಥದ್ದೊಂದು ಸಾಧನೆಗೈಯಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಎಂಟು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯೇ ಭಾರತದಿಂದ ಪೋಲಿಯೋ ಓಡಿಸುವ ವಿಷಯದಲ್ಲಿ ಕೈ ಚೆಲ್ಲಿತ್ತು. ಬಡತನ, ಹಸಿವು, ನಿರುದ್ಯೋಗ, ನೈರ್ಮಲ್ಯದ ಕೊರತೆ, ಹೆಚ್ಚಿದ ಜನಸಂಖ್ಯೆ, ದೇಶದ ಅಗಾಧತೆ, ಧಾರ್ಮಿಕ -ಸಾಮಾಜಿಕ ವಿರೋಧಾಭಾಸ, ಕಟ್ಟುಪಾಡು, ಮೂಢನಂಬಿಕೆ, ಧಾರ್ಮಿಕ ಆಚರಣೆ, ಆರೋಗ್ಯ ಕಾಳಜಿ ಕೊರತೆಯಿಂದಾಗಿ ಪೋಲಿಯೋ ಪೀಡಿತರ ಸಂಖ್ಯೆಯನ್ನು ಕಡಿಮೆ ಮಾಡಬಹುದೇ ಹೊರತು, ಅದರಿಂದ ಸಂಪೂರ್ಣ ಮುಕ್ತವಾಗುವುದು ಅಸಾಧ್ಯ ಎಂದು ಅದು (WHO) ಹೇಳಿತ್ತು. ಹೀಗಾಗಿ ಪೋಲಿಯೋ ನಿರ್ಮೂಲನೆಯ ಭಾರತದ ಕನಸು ಕನಸಾಗಿಯೇ ಉಳಿಯಲಿದೆ ಎಂದೇ ನಂಬಲಾಗಿತ್ತು. ಆದರೆ ಈ ಎಲ್ಲ ಅವಸವ್ಯ, ವೈರುಧ್ಯಗಳೆಲ್ಲವನ್ನೂ ಮೀರಿ, ಈ ಸಾಧನೆ ಮಾಡಿರುವುದು ಸಣ್ಣ ಮಾತಲ್ಲ.
ಇಂದಿಗೂ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ದೇಶಗಳಿಗೆ ಹೋಗುವಾಗ ಹಳದಿ ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದು ಅನಿವಾರ್ಯ ಹಾಗೂ ಕಡ್ಡಾಯ. ಈ ಕಾರಣಕ್ಕೆ ಅಲ್ಲಿಗೆ ಹೋಗಲು ಇಂದಿಗೂ ಅನೇಕರು ಹೆದರುತ್ತಾರೆ. 'ಯಾಕೆ ಸುಮ್ಮನೆ ಉಸಾಬರಿ? ಹೇಳಿ ಕೇಳದ, ಗೊತ್ತಿಲ್ಲದ ಕಾಯಿಲೆಯು ಅಂಟಿದರೆ ಏನು ಮಾಡೋದು?' ಎಂದು ಆತಂಕಪಡುತ್ತಾರೆ. ಅಲ್ಲಿಗೆ ಹೋಗುವುದೇ ಇಲ್ಲ. ಆಗ ಆ ದೇಶ, ಅಲ್ಲಿನ ಜನರ ಬಗ್ಗೆ ನಮ್ಮ ಮನಸಿನಲ್ಲಿ ಕೆಟ್ಟ ಭಾವನೆಯೇ ಮೂಡುತ್ತದೆ. ಭಾರತಕ್ಕೆ ಬರಲು ಹೊರಟವರ ಮನಸ್ಸಿನಲ್ಲೂ ಇದೇ ಭಾವ ಆವರಿಸಿರುತ್ತಿತ್ತು. ಭಾರತ ಅಂದ್ರೆ ಪೋಲಿಯೋಪೀಡಿತರ ದೇಶ ಎಂಬ ಭಾವನೆ ವಿದೇಶಗಳಲ್ಲಿದೆ. ಪೋಲಿಯೋ ವೈರಸ್‌ಗಳು ಸೋಂಕಿದರೆ ಗತಿಯೇನು ಎಂಬ ಆತಂಕ ಭಾರತಕ್ಕೆ ಬರುವವರಲ್ಲಿ ಮನೆ ಮಾಡಿರುತ್ತಿತ್ತು. ಈ ಕಾರಣಕ್ಕೆ ಇಲ್ಲಿಗೆ ಬರುವುದನ್ನು ಕೈ ಬಿಟ್ಟಿದ್ದೂ ಉಂಟು. ಅಷ್ಟರಮೇಲೆ ಬರಲೇಬೇಕೆನಿಸಿದಾಗ ಪೋಲಿಯೋ ಬರದಿರಲೆಂದು ಚುಚ್ಚುಮದ್ದು ಹಾಕಿಸಿಕೊಂಡು ಬರುತ್ತಿದ್ದರು. ವಿದೇಶಗಳಲ್ಲಿ ಭಾರತದಿಂದ ಬಂದವರನ್ನು 'ನಿಮ್ಮ ದೇಶದಲ್ಲಿ ಇನ್ನೂ ಪೋಲಿಯೋ ರೋಗ ಇದೆಯಂತೆ?' ಎಂದು ಹಂಗಿಸುತ್ತಿದ್ದರು. ಈ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹೀಗಳೆಯುತ್ತಿದ್ದ ಟೀಕಾಕಾರರ ಬಾಯಿಯನ್ನು ಮುಚ್ಚಿಸಿದಂತಾಗಿದೆ. ವಿಶ್ವದ ಶ್ರೀಮಂತ ಹಾಗೂ ಮೈಕ್ರೋಸಾಫ್ಟ್‌ನ ಮುಖ್ಯಸ್ಥ ಬಿಲ್‌ಗೇಟ್ಸ್ ಈ ಸಾಧನೆ ಕಂಡು 'India's accomplishment in eradicating Polio is the most impressive global health success I have ever seen' ಎಂದು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಬಹಳ ಹಿಂದಲ್ಲ, ಇಪ್ಪತ್ತೈದು ವರ್ಷಗಳ ಹಿಂದೆ ಭಾರತದಲ್ಲಿ ಪೋಲಿಯೋಕ್ಕೆ ಮೂರೂವರೆ ಲಕ್ಷ ಮಕ್ಕಳು ಬಲಿಯಾಗಿದ್ದರು. ಈ ಸಂಖ್ಯೆ 2011ರಲ್ಲಿ ಒಂದಕ್ಕೆ ಬಂದಿತು. ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಭಾರತ ಪೋಲಿಯೋ ವಿರುದ್ಧ ಸಾರಿದ ಸಮರದ ಫಲಶ್ರುತಿಯಿದು.
ಹಾಗೆ ನೋಡಿದರೆ ಭಾರತ 1978ರಲ್ಲಿಯೇ ಪೋಲಿಯೋ ನಿರ್ಮೂಲನೆಗೆ ಕಾರ್ಯಕ್ರಮಗಳನ್ನು ಘೋಷಿಸಿತು. ಆ ಹೊತ್ತಿಗೆ ಅಮೆರಿಕ ತಾನು ಪೋಲಿಯೋ ಮುಕ್ತ ಎಂದು ಹೆಮ್ಮೆಯಿಂದ ಸಾರಿತು. 1985ರಲ್ಲಿ ರೋಟರಿ ಇಂಟರ್ ನ್ಯಾಶನಲ್ ಪೋಲಿಯೋ ವಿರುದ್ಧ ಜಾಗತಿಕ ಸಮರ ಘೋಷಿಸಿತು. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಈ ಸಮರದಲ್ಲಿ ತಾನೂ ಕೈ ಜೋಡಿಸುವುದಾಗಿ ಭಾರತ ಹೇಳಿತು. ಆದರೆ ಮುಂದಿನ ಆರೇಳು ವರ್ಷಗಳವರೆಗೆ ಭಾರತದ ಸಾಧನೆ ಮಾತ್ರ ಶೂನ್ಯ. ಪೋಲಿಯೋದಿಂದ ಪ್ರತಿ ವರ್ಷ ಲಕ್ಷಾಂತರ ಮಂದಿ ಸಾಯುತ್ತಿದ್ದರೂ ಸರ್ಕಾರ ಮಾತ್ರ ಸಹಕರಿಸಲೇ ಇಲ್ಲ.
ಇಲ್ಲಿ ನಾವು ಮೊನ್ನೆ ಮೊನ್ನೆ ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾದ ಡಾ. ಹರ್ಷವರ್ಧನ್ ಅವರನ್ನು ಅಂತರಾಳದಿಂದ ನೆನಪು ಮಾಡಿಕೊಳ್ಳಬೇಕು. ಅವರು ಅಲ್ಲಿಯ ಆರೋಗ್ಯ ಸಚಿವರಾಗಿದ್ದಾಗ ಪೋಲಿಯೋ ನಿರ್ಮೂಲನೆಗೆ ಸಂಕಲ್ಪ ತೊಟ್ಟರು. ಮನೆಮನೆಗೆ ತೆರಳಿ ಪೋಲಿಯೋ ಲಸಿಕೆ ಸಾಮೂಹಿಕ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಐದು ವರ್ಷದೊಳಗಿನ ಮಕ್ಕಳು ಈ ಕಾಯಿಲೆಗೆ ತುತ್ತಾಗುವುದರಿಂದ ಐದರೊಳಗಿನ ಮಕ್ಕಳಿಗೆ ಪೋಲಿಯೋ ಮದ್ದನ್ನು ಕಡ್ಡಾಯಗೊಳಿಸಿದರು. ಆನಂತರ ಮಗು ಆರು ತಿಂಗಳು ತುಂಬುವುದರೊಳಗೆ ಪೋಲಿಯೋ ಡ್ರಾಪ್ಸ್‌ನ್ನು ಬಾಯಿಗೆ ಬಿಡುವ ಕಾರ್ಯಕ್ರಮ ಜಾರಿಗೆ ತಂದರು. ಈ ಕಾರ್ಯಕ್ರಮ ಯಶಸ್ಸಿಗೆ ಲಕ್ಷಾಂತರ ಕಾರ್ಯಕರ್ತರ ಪಡೆಯನ್ನು ಕಟ್ಟಿದರು. ಸಾವಿರಾರು ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದವು. ಒಂದೆರಡು ವರ್ಷಗಳಲ್ಲಿ 'ಪಲ್ಸ್ ಪೋಲಿಯೋ' ಕಾರ್ಯಕ್ರಮ ಬೃಹತ್ ಅಭಿಯಾನ, ಆಂದೋಲನದ ಸ್ವರೂಪವನ್ನು ಪಡೆಯಿತು. ಪಲ್ಸ್ ಪೋಲಿಯೋ ಬಗ್ಗೆ ಜನ ಚರ್ಚಿಸುವಂತಾಯಿತು. ಇದರ ಪರಿಣಾಮ ಗೋಡೆ ಮೇಲಿನ ಅಕ್ಷರಗಳಂತೆ ಸ್ಪಷ್ಟವಾಗಿದ್ದವು. 4 ವರ್ಷಗಳಲ್ಲಿ ಹೊಸ ಪೋಲಿಯೋ ಪ್ರಕರಣಗಳೇ ದಾಖಲಾಗಲಿಲ್ಲ.
ಭಾರತ ಸರ್ಕಾರ ಆಗ ಎಚ್ಚೆತ್ತುಕೊಂಡಿತು!
ದಿಲ್ಲಿ ಸರ್ಕಾರ ಆಚರಣೆಗೆ ತಂದಿದ್ದ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದ ಮಾದರಿಯನ್ನು ದೇಶವ್ಯಾಪಿ ಜಾರಿಗೆ ತರಲು ನಿರ್ಧರಿಸಿತು. 1999ರಲ್ಲಿ ಅಂದಿನ ಸರ್ಕಾರ ಸಲಹಾ ಸಮಿತಿ, ಕಾರ್ಯಪಡೆ, ನಿಗಾಪಡೆ, ಜಾರಿಪಡೆ... ಹೀಗೆ ಹತ್ತಾರು ಸಮಿತಿ, ಪಡೆಗಳನ್ನು ನೇಮಿಸಿ ಈ ಕಾರ್ಯಕ್ರಮಕ್ಕೆ ಚುರುಕಿನ ಚಾಲನೆ ನೀಡಿತು. ಇದರ ಪರಿಣಾಮ ರೋಚಕವಾಗಿತ್ತು. 2002ರ ಹೊತ್ತಿಗೆ ಭಾರತದಲ್ಲಿ ಕೇವಲ 741 ಪ್ರಕರಣಗಳು ದಾಖಲಾದವು. ಅದರ ಮುಂದಿನ ವರ್ಷ ಇದು 42ಕ್ಕೆ ಇಳಿದಿತ್ತು. 2011ರಲ್ಲಿ ಬರೀ ಒಂದೇ ಒಂದು ಪ್ರಕರಣ! ಪೋಲಿಯೋ ನಿರ್ಮೂಲನೆ ಕಾರ್ಯಕ್ರಮ ಎಷ್ಟೊಂದು ಪರಿಣಾಮಕಾರಿಯಾಗಿ ಜಾರಿಯಾಯಿತೆಂದರೆ, ಈ ನೆಪದಲ್ಲಿ ಭಾರತ ಸರ್ಕಾರ ದೇಶದ ಪ್ರತಿ ಊರು, ಹಳ್ಳಿ, ಮನೆಯನ್ನು ತಲುಪಿತು. ಪ್ರಾಯಶಃ ಸ್ವಾತಂತ್ರ್ಯ ಬಂದ ನಂತರ ಕುಟುಂಬ ಯೋಜನೆ ನಂತರ ಸರ್ಕಾರದ ಯೋಜನೆಯೊಂದು ದೇಶವ್ಯಾಪಿ ತಲುಪಿದ್ದು ಇದೇ ಇರಬೇಕು. ರಾಜಕೀಯ ಇಚ್ಛಾಶಕ್ತಿ, ಸಂಘಟಿತ ಮನೋಭಾವ, ಆರ್ಥಿಕ ನೆರವು-ತಾಂತ್ರಿಕ ಆವಿಷ್ಕಾರ... ಇವೆಲ್ಲ ಏಕಕಾಲಕ್ಕೆ ಮಿಳಿತವಾದರೆ ಎಂಥ ಕ್ರಾಂತಿಕಾರಕ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ಪೋಲಿಯೋ ವಿರುದ್ಧದ ಸಮರವೇ ನಿದರ್ಶನ. ದೇಶದೆಲ್ಲೆಡೆ ಈ ಅಭಿಯಾನದಲ್ಲಿ ಸುಮಾರು 28 ಲಕ್ಷ ಕಾರ್ಯಕರ್ತರು (Vaccinators) ಭಾಗವಹಿಸಿದ್ದು ಒಂದೇ ದಿನ 17 ಕೋಟಿ ಮಕ್ಕಳಿಗೆ ಪೋಲಿಯೋ ಹನಿ ಹಾಕಿದ್ದು ಒಂದು ದಾಖಲೆಯೇ.
ಈ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ರೋಟರಿ ಇಂಟರ್ ನ್ಯಾಶನಲ್ ಸಂಸ್ಥೆಯ ಯೋಗದಾನ ಸಣ್ಣದಲ್ಲ. ಇದರ ಜತೆಗೆ ಬಿಲ್‌ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂದಾ ಅವರ ಕೊಡುಗೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬಿಲ್‌ಗೇಟ್ಸ್ ದಿನಂಪ್ರತಿ ಪೋಲಿಯೋ ನಿರ್ಮೂಲನೆ ಕಾರ್ಯಕ್ರಮದ ಪ್ರಗತಿ ಬಗ್ಗೆ ವರದಿ ಪಡೆಯುತ್ತಿದ್ದರು. ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದರು. ಅಲ್ಲದೇ ಸ್ವಲ್ಪವೂ ಚೌಕಾಶಿ ಮಾಡದೇ ಕೇಳಿದಷ್ಟು ಹಣವನ್ನು ತಮ್ಮ ಪ್ರತಿಷ್ಠಾನದಿಂದ ಬಿಡುಗಡೆ ಮಾಡಿದರು.
ಡಾ. ಹರ್ಷವರ್ಧನ್ ಅವರು ಪೋಲಿಯೋ ನಿರ್ಮೂಲನೆ ಕುರಿತು ರೋಚಕ ಅನುಭವಗಳನ್ನು ಆ Tale of Two Drops ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 'ಆ ಎರಡು ಹನಿ' ಮಾಡಿದ ಪವಾಡ ಎಂಥದು ಎಂಬುದನ್ನು ವಿವರಿಸಿದ್ದಾರೆ. ಎಲ್.ಕೆ. ಆಡ್ವಾಣಿ ಕೆಲ ದಿನಗಳ ಹಿಂದೆ ಈ ಕೃತಿ ಕುರಿತು ತಮ್ಮ ಬ್ಲಾಗ್‌ನಲ್ಲಿ ಬರೆದಾಗ ದಿಲ್ಲಿಯಿಂದ ಇದನ್ನು ತರಿಸಿಕೊಂಡಿದ್ದೆ. ಒಬ್ಬ ರಾಜಕಾರಣಿ ಮನಸ್ಸು ಮಾಡಿದರೆ ದೇಶದಲ್ಲಿ ಎಂಥ ಗುಣಾತ್ಮಕ ಬದಲಾವಣೆ ತರಬಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಾ?
ನನ್ನ ಅಕ್ಕನಂತೆ ಕೋಟ್ಯಂತರ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು!
- ವಿಶ್ವೇಶ್ವರ ಭಟ್
vbhat@me.com