ಸೇವೆಯೇ ಜೀವನ ಎಂದು ನಂಬಿ, ಹಾಗೆಯೇ ಬದುಕುತ್ತಿರುವವರು ಚೆನ್ನೈನ ವಿದ್ಯಾಕರ್. ಉದವುಂ ಕರಂಗಳ್ ಎಂಬ ಹೆಸರಿನ ಅವರ ಸಂಸ್ಥೆಯಲ್ಲಿ ಈಗ 1600 ಮಂದಿ ಆಶ್ರಯ ಪಡೆದಿದ್ದಾರೆ. ದಿಕ್ಕು ತಪ್ಪಿದ ಎಲ್ಲರಿಗೂ ದಿಕ್ಕಾಗಿರುವ, ಒಂದು ತಲೆಮಾರಿಗೇ ರೋಲ್ ಮಾಡೆಲ್ ಆಗುವಂಥ ವ್ಯಕ್ತಿತ್ವದ ವಿದ್ಯಾಕರ್ ಬೆಳೆದು ಬಂದ ಬಗೆಯನ್ನು ಅವರದೇ ಮಾತುಗಳಲ್ಲಿ ಕೇಳೋಣ...
'ನಾನು ಹುಟ್ಟಿದ್ದು 1953ರಲ್ಲಿ, ಮೈಸೂರು ಜಿಲ್ಲೆ ಕೊಳ್ಳೇಗಾಲಕ್ಕೆ ಸಮೀಪದ ಹಳ್ಳಿಯಲ್ಲಿ. ಆಕಸ್ಮಿಕವಾಗಿ ಪೆಟ್ಟು ಮಾಡಿಕೊಂಡು ನರಳುವವರು, ಅನಾರೋಗ್ಯದಿಂದ ಹಾಸಿಗೆ ಹಿಡಿದವರು, ಆಸ್ಪತ್ರೆಗಳಲ್ಲಿ ನೋಡಿಕೊಳ್ಳುವವರಿಲ್ಲದೆ ಕಂಗಾಲಾದವರು... ಇಂಥವರ ಸೇವೆ ಮಾಡುವುದರಲ್ಲಿ ತುಂಬಾ ಖುಷಿಯಾಗುತ್ತಿತ್ತು. ಕಷ್ಟದಲ್ಲಿದ್ದವರಿಗೆ ನೆರವಾಗಬೇಕೆಂಬ ಕಾರಣದಿಂದಲೇ ಶಾಲೆಯನ್ನು ತಪ್ಪಿಸಿಕೊಳ್ಳುತ್ತಿದ್ದೆ. ನನ್ನ ಈ ವರ್ತನೆ, ಮನೆಯಲ್ಲಿ ಯಾರಿಗೂ ಇಷ್ಟವಾಗುತ್ತಿರಲಿಲ್ಲ. 'ಅವರಿವರಿಗೆ ಹೆಲ್ಪರ್ ಥರಾ ಇದ್ದು ಬದುಕೋಕೆ ಸಾಧ್ಯ ಇಲ್ಲ ಕಣೋ. ಈ ಕೆಲಸ ನಿಲ್ಲಿಸಿ ಬಿಡೋ' ಎಂದೆಲ್ಲಾ ಮನೆಯಲ್ಲಿ ಬೈದು ಬುದ್ಧಿ ಹೇಳಿದರು. ಉಹುಂ, ಅಂಥಾ ಮಾತುಗಳಿಗೆ ನಾನು ಕಿವಿಗೊಡಲಿಲ್ಲ.
ಹೀಗಿರುವಾಗಲೇ ಅದೊಮ್ಮೆ ನಮ್ಮ ಊರಿನ ದಾರಿಯಲ್ಲಿ ಕಾರು ಅಪಘಾತಕ್ಕೀಡಾಯಿತು. ಕಾರಿನಲ್ಲಿದ್ದ ವ್ಯಕ್ತಿಗೆ, ತೀವ್ರವಾದ ಗಾಯಗಳಾಗಿವೆಯೆಂದೂ, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆಂದೂ, ತಮಿಳ್ನಾಡು ಮೂಲದ ಆ ವ್ಯಕ್ತಿಯೊಂದಿಗೆ ಮತ್ಯಾರೂ ಇಲ್ಲವೆಂದೂ ಗೊತ್ತಾಯಿತು. ತಕ್ಷಣವೇ ಆಸ್ಪತ್ರೆಗೆ ಹೋದೆ. ಆ ವ್ಯಕ್ತಿಯ ಬಂಧುವಿನಂತೆಯೇ ಸೇವೆಗೆ ನಿಂತೆ. ಹೀಗೇ ಎರಡು ವಾರ ಕಳೆಯಿತು. ಆ ವ್ಯಕ್ತಿಯೊಂದಿಗೆ ಯಾರೂ ಇರದಿದ್ದ ಕಾರಣ, ನಾನು ಮನೆಗೇ ಹೋಗಲಿಲ್ಲ. ಈ ಸಂದರ್ಭದಲ್ಲಿಯೇ, ಗಾಯಗೊಂಡಿದ್ದ ವ್ಯಕ್ತಿಯ ಹೆಸರು ರಾಮಕೃಷ್ಣನ್ ಎಂದೂ, ಮದ್ರಾಸ್‌ನಲ್ಲಿ ಅವರು ಆಟೋಮೊಬೈಲ್ ಬಿಡಿ ಭಾಗಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದಾರೆಂದೂ ತಿಳಿದುಬಂತು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ನನಗೆ ತಮಿಳು ಗೊತ್ತಿರಲಿಲ್ಲ. ಹೀಗಿದ್ದರೂ 15 ದಿನಗಳ ಕಾಲ ನಿರಂತರವಾಗಿ ಅವರ ಸೇವೆ ಮಾಡಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಕೂಡಲೇ, ಮದ್ರಾಸ್‌ನಲ್ಲಿದ್ದ ಅವರ ಬಂಧುಗಳಿಗೆ ಸುದ್ದಿ ತಲುಪಿಸಿದ್ದಾಯ್ತು. ಮರುದಿನವೇ ಅವರೆಲ್ಲ ಧಾವಿಸಿ ಬಂದರು. ಪರಿಚಯವಿಲ್ಲದಿದ್ದರೂ, ಭಾಷೆ ಅರ್ಥವಾಗದಿದ್ದರೂ15 ದಿನಗಳ ಕಾಲ ರಾಮಕೃಷ್ಣನ್‌ರ ಸೇವೆ ಮಾಡಿದ ನನ್ನನ್ನು ಕಂಡು ಆ ಕುಟುಂಬದವರಿಗೆ ಆಶ್ಚರ್ಯ, ಆನಂದ. ನನ್ನ ಸೇವೆಗೆ ಪ್ರತಿಯಾಗಿ ಏನಾದರೂ ಕೊಡಬೇಕೆಂದು ಅವರೆಲ್ಲ ಆಸೆಪಟ್ಟರು. ಅಂಥ ನಿರೀಕ್ಷೆಗಳೇ ನನಗಿರಲಿಲ್ಲ. ಅದನ್ನು ನೇರವಾಗಿಯೇ ಹೇಳಿದೆ. ಅವರೆಲ್ಲ ಮದ್ರಾಸ್‌ಗೆ ಹೋಗುವ ಮೊದಲು, ತಮ್ಮ ಅಡ್ರೆಸ್ ಕೊಟ್ಟು, ನಿನಗೆ ಕಷ್ಟ ಬಂದ್ರೆ ನಮ್ಮನ್ನು ಸಂಪರ್ಕಿಸು. ಸಹಾಯ ಮಾಡ್ತೇವೆ ಎಂದರು.
ಆಸ್ಪತ್ರೆಯಿಂದ ಮನೆಗೆ ಬಂದರೆ, ಎಲ್ಲರಿಂದ ಛೀಮಾರಿಯ ಸ್ವಾಗತ ದೊರೆಯಿತು. ಆನಂತರದಲ್ಲೂ ನನ್ನ ವರ್ತನೆ ಬದಲಾಗಲಿಲ್ಲ. ಈ ಕಾರಣಕ್ಕಾಗಿಯೇ ಹೆತ್ತವರೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಅದೊಂದು ದಿನ-'ನಾನು ಮದ್ರಾಸಿಗೆ ಹೋಗಿ, ಏನಾದ್ರೂ ಕೆಲ್ಸ ಮಾಡಿಕೊಂಡು ಬದುಕುತ್ತೇನೆ' ಎಂದವನೇ ಮದ್ರಾಸ್‌ನ ರೈಲು ಹತ್ತಿ ಬಿಟ್ಟೆ. ರಾಮಕೃಷ್ಣನ್‌ರ ಅಡ್ರೆಸ್ ಇದ್ದ ಚೀಟಿ ಬಿಟ್ಟರೆ, ನಯಾಪೈಸೆಯೂ ಇರಲಿಲ್ಲ. ಟಿಕೆಟ್ ಇಲ್ಲದ ಪ್ರಯಾಣ! ಮದ್ರಾಸ್ ರೈಲು ನಿಲ್ದಾಣದಿಂದ ಅವರಿವರಲ್ಲಿ ವಿಚಾರಿಸುತ್ತಾ ರಾಮಕೃಷ್ಣನ್‌ರ ಮನೆ ತಲುಪಿದರೆ ಶಾಕ್ ಕಾದಿತ್ತು: ಅವರು ಮನೆ ಖಾಲಿ ಮಾಡಿ ಬೇರೊಂದು ಏರಿಯಾಕ್ಕೆ ಹೋಗಿ ಬಿಟ್ಟಿದ್ದರು. ರಾಮಕೃಷ್ಣನ್ ಸಿಕ್ಕರೆ ಎಲ್ಲ ಸಮಸ್ಯೆಗೂ ಪರಿಹಾರವಿದೆ ಅಂದುಕೊಂಡೇ ನಾನು ಮನೆ ಬಿಟ್ಟು ಬಂದಿದ್ದೆ. ಆದರೆ, ನನ್ನ ಅಂದಾಜುಗಳೆಲ್ಲಾ ಉಲ್ಟಾ ಆಗಿದ್ದವು. ಹೀಗೆಲ್ಲಾ ಆದಾಗ ನನಗೆ 13 ವರ್ಷ. ಊರಿಗೆ ಹಿಂದಿರುಗುವ ಮನಸ್ಸಿರಲಿಲ್ಲ. ಹಾಗಾಗಿ, ಮುಂದಿನ 15 ದಿನ ರಾಮಕೃಷ್ಣನ್‌ರನ್ನು ಹುಡುಕಿಕೊಂಡು ಬೀದಿ ಬೀದಿ ಅಲೆದೆ. ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿದೆ. ಯಾವುದೋ ಮೂಲೆಯಲ್ಲಿ ಮಲಗಿ ರಾತ್ರಿ ಕಳೆದೆ. ತಮಿಳು ಗೊತ್ತಿಲ್ಲದ ಕಾರಣ, ತುಂಬಾ ತೊಂದರೆಯಾಯ್ತು. ಆದರೂ ಎದೆಗುಂದದೆ ಹುಡುಕಾಟ ಮುಂದುವರಿಸಿದೆ. ಕಡೆಗೊಂದು ದಿನ ರಾಮಕೃಷ್ಣನ್ ಸಿಕ್ಕಿ ಬಿಟ್ಟರು. ನನ್ನನ್ನು ಕಂಡು ಅವರಿಗೆ ಅಚ್ಚರಿ. ಎಲ್ಲವನ್ನೂ ಅವರಲ್ಲಿ ಹೇಳಿಕೊಂಡೆ. 'ನಮ್ಮ ಮನೆಯ ಸದಸ್ಯರಲ್ಲಿ ನೀನೂ ಒಬ್ಬ. ಇನ್ನು ಮುಂದೆ ನಮ್ಮಲ್ಲಿಯೇ ಇರು' ಅಂದರು. ಮದ್ರಾಸ್‌ನ ಕನ್ನಡ ಸಂಘದ ಶಾಲೆಗೆ ಸೇರಿಸಿದ್ರು. ಮುಂದೆ, ಮದ್ರಾಸ್ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನಿಂದ, ಸೈಕಿಯಾಟ್ರಿಯಲ್ಲಿ ಮಾಸ್ಟರ್ಸ್ ಪದವಿ ಪಡೆದೆ. ಅಪರಿಚಿತರಾದರೂ ಸರಿ, ಕಷ್ಟ ಎಂದವರಿಗೆ ಸಹಾಯ ಮಾಡಬೇಕು ಎಂಬ ನಿಲುವು ಆಗಲೂ ನನ್ನೊಂದಿಗಿತ್ತು. ಇದನ್ನು ಗಮನಿಸಿದ ರಾಮಕೃಷ್ಣನ್ - 'ಕೌನ್ಸೆಲಿಂಗ್ ಮಾಡಿಕೊಂಡೇ ಬದುಕು ಕಟ್ಟಿಕೊಳ್ಳಬಹುದು. ಆ ಬಗ್ಗೆ ಯೋಚಿಸು' ಅಂದರು.
ಮದರ್ ಥೆರೇಸಾ, ನನ್ನ ರೋಲ್ ಮಾಡೆಲ್. ನನ್ನ ಬದುಕಿಗೆ ಅವರೇ ಆದರ್ಶ. ಅವರ ಟೀಂಗೆ ಸೇರಿಕೊಂಡು ಸೇವೆ ಸಲ್ಲಿಸಬೇಕು ಎಂಬುದು ನನ್ನ ಮಹದಾಸೆಯಾಗಿತ್ತು. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನೂ ಮಾಡಿದೆ. ಆ ಸಂದರ್ಭದಲ್ಲಿ ಹಲವರು -'ಥೆರೇಸಾರ ಟೀಂನಲ್ಲಿ ಕ್ರಿಶ್ಚಿಯನ್ನರಿಗೆ ಮಾತ್ರ ಪ್ರವೇಶ' ಅಂದರು. ಅದು ನಿಜವೋ, ಸುಳ್ಳೋ ಗೊತ್ತಾಗಲಿಲ್ಲ. ಆದರೆ ಆ ಮಾತು ಕೇಳಿ ನಿರಾಸೆಯಾಯ್ತು. ಅವರ ಟೀಂ ಸೇರದಿದ್ರೂ ಪರವಾಗಿಲ್ಲ. ಆದರೆ, ಅವರಂತೆಯೇ ಸೇವೆ ಮಾಡಬೇಕೆಂದು ನಿರ್ಧರಿಸಿದೆ. ಈ ಮಧ್ಯೆ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನಲ್ಲಿ ಮನಶ್ಯಾಸ್ತ್ರಜ್ಞ ಆಗಿ ಸೇರಿಕೊಂಡೆ. ಈ ಸಂದರ್ಭದಲ್ಲಿ ಬಗೆಬಗೆಯ ರೋಗಿಗಳೊಂದಿಗೆ, ಅವರ ಕುಟುಂಬದೊಂದಿಗೆ ಚರ್ಚಿಸುವ ಅವಕಾಶ ಸಿಕ್ತು. ರೋಗಿಗಳು ಕೂಡ ಉಳಿದವರ ಥರಾನೇ ಮನುಷ್ಯರೇ. ಅವರನ್ನು ಅಸ್ಪೃಶ್ಯರ ಥರಾ ನೋಡಬೇಡಿ ಎಂದೆಲ್ಲಾ ಕುಟುಂಬಗಳ ಸದಸ್ಯರಿಗೆ ಬುದ್ಧಿ ಹೇಳಿದ್ದೆ. ಬೇಗ ಚೇತರಿಸಿಕೊಂಡು ಹೊಸ ಬದುಕು ಆರಂಭಿಸುವ ಬಗ್ಗೆ ರೋಗಿಗಳಿಗೂ ಹೇಳಿಕೊಡ್ತಾ ಇದ್ದೆ. ಇವೆಲ್ಲಾ ನನ್ನ ಮೇಲಧಿಕಾರಿಗಳಿಗೆ ಇಷ್ಟವಾಗಲಿಲ್ಲ. ನಿಮಗೆ ವಹಿಸಿರ್ತೇವಲ್ಲ, ಅಷ್ಟು ಕೆಲಸ ಮಾಡಿದ್ರೆ ಸಾಕು ಎಂಬರ್ಥದ ಮಾತುಗಳನ್ನಾಡಿದರು. ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದೇ ಬೇಡ ಅನ್ನಿಸಿತು. ಕೆಲವೇ ದಿನಗಳಲ್ಲಿ ಆ ಕೆಲಸ ಬಿಟ್ಟೆ.
ಈ ಹೊತ್ತಿಗೆ ರಾಮಕೃಷ್ಣನ್ ಅವರಿಗೆ ಮದುವೆಯಾಗಿತ್ತು. ಹೊಸ ಜವಾಬ್ದಾರಿಗಳು ಅವರ ಹೆಗಲೇರಿದ್ದವು. ಹಾಗಾಗಿ ಕೊಳೆಗೇರಿಯಲ್ಲಿದ್ದ ಪುಟ್ಟ ಮನೆಗೆ ವಾಸ್ತವ್ಯ ಬದಲಿಸಿದೆ. ಹೀಗಿರುವಾಗಲೇ ಅದೊಂದು ರಾತ್ರಿ ಸೈಕಲ್ ರಿಕ್ಷಾ ಓಡಿಸುವ ವ್ಯಕ್ತಿಯೊಬ್ಬ, ನ್ಯೂಸ್ ಪೇಪರ್‌ಗಳಲ್ಲಿ ಸುತ್ತಿ ಇಡಲಾಗಿದ್ದ ಪುಟ್ಟ ಮಗುವನ್ನು ನನ್ನ ಕೈಗಿಟ್ಟು ಹೇಳಿದ; 'ಸರ್, ಸಿನಿಮಾ ಥಿಯೇಟರಿನಲ್ಲಿ ಯಾರೋ ಈ ಮಗೂನ ಬಿಟ್ಟು ಹೋಗಿದ್ದಾರೆ. ಈ ಮಗುವಿಗೆ ಇನ್ಮೇಲೆ ನೀವೇ ದಿಕ್ಕು...'
ಹೀಗೆ ನನಗೆ ಸಿಕ್ಕಿದ್ದು 6 ತಿಂಗಳ ಮಗು. ಎಳೆಯ ಮಕ್ಕಳನ್ನು ಸಾಕುವುದು ಹೇಗೆ ಎಂದು ಆಗ ನನಗೆ ಖಂಡಿತ ಗೊತ್ತಿರಲಿಲ್ಲ. ಆದರೆ, ಅದೊಂದೇ ಕಾರಣ ಹೇಳಿ, ಮಗುವನ್ನು ತಿರಸ್ಕರಿಸಲು ಮನಸ್ಸು ಬರಲಿಲ್ಲ. ಆ ಮಗುವನ್ನು ಜೊತೆಗಿಟ್ಟುಕೊಂಡೆ. ಅದಕ್ಕೆ ಪ್ರಭು ಎಂದು ಹೆಸರಿಟ್ಟೆ. ಹೊಟ್ಟೆಪಾಡಿಗೆ, ರಾಮಕೃಷ್ಣನ್‌ರ ಅಂಗಡಿಯ ನೌಕರಿಯಿತ್ತು. ಇಂಗ್ಲಿಷ್ ಮೀಡಿಯಂನಲ್ಲಿ ಡಿಗ್ರಿ ಆಗಿದ್ದರೂ, ತಮಿಳನ್ನು ಓದಲು-ಬರೆಯಲು ಬರುವುದಿಲ್ಲ ಎಂಬ ಕಾರಣ ನೀಡಿ ನನಗೆ ಸರ್ಕಾರಿ ನೌಕರಿಯನ್ನು ನಿರಾಕರಿಸಲಾಯಿತು. ಆನಂತರದ ದಿನಗಳಲ್ಲಿ ನನ್ನ ಮಡಿಲಿಗೆ ಬಂದ ಮಕ್ಕಳ ಸಂಖ್ಯೆ 20ಕ್ಕೇರಿತು. ಎಲ್ಲವೂ ಅನಾಥ ಮಕ್ಕಳೇ. ಅವರ ಆರೈಕೆಗೆ ಹಣ ಸಾಲದೇ ಹೋದಾಗ ಪರಿಚಯದ ಮಂದಿಗೆ ಎಲ್ಲವನ್ನೂ ವಿವರಿಸಿ ಸಹಾಯ ಮಾಡುವಂತೆ ವಿನಂತಿಸುತ್ತಿದ್ದೆ. ಹಲವರು, ತಕ್ಷಣವೇ ಸ್ಪಂದಿಸುತ್ತಿದ್ದರು. ಸೇವೆಯೇ ಬದುಕು ಎಂದು ಆ ಹೊತ್ತಿಗೆ ನಿರ್ಧರಿಸಿ ಆಗಿತ್ತು. ಹಾಗಾಗಿ, ಮದುವೆಯಾಗಬಾರದು ಎಂದು ನಿರ್ಧರಿಸಿ ಬಿಟ್ಟಿದ್ದೆ. ಕೊಳೆಗೇರಿಯ ಜನರಿಗೆ ಆರೋಗ್ಯ ತಪಾಸಣೆ ಮಾಡಿಸುವುದು, ಪೆನ್ಶನ್ ಕೊಡಿಸುವುದು, ಬ್ಯಾಂಕ್‌ನಿಂದ ಸಾಲ ಕೊಡಿಸುವುದು,. ಮಕ್ಕಳಿಗೆ ಉಚಿತವಾಗಿ ಪಾಠ ಹೇಳುವುದು... ಹೀಗೆಲ್ಲಾ ಸೇವೆ ಮಾಡಲು ಮುಂದಾಗ್ತಾ ಇದ್ದೆ. ಇದನ್ನು ಕಂಡು ಹಲವರಿಗೆ ಅನುಮಾನ. ಕೆಲವರು ನೇರವಾಗೇ ಕೇಳಿಬಿಟ್ರು: 'ಸ್ವಾಮೀ, ನೀವು ಓದಿಕೊಂಡವರು. ನೌಕರೀಲಿ ಇರುವವರು. ಹಾಗಿದ್ರೂ ಇಂಥ ಸೇವೆಯ ಹುಚ್ಚು ಯಾಕೆ? ಇದರಿಂದ ನಿಮಗೆ ಏನು ಅನುಕೂಲ ಇದೆ?' ಮುಂದೆ ನನ್ನ ಕೆಲಸ ಗಮನಿಸಿದ ಮೇಲೆ ಎಲ್ಲರಿಗೂ ನಂಬಿಕೆ ಬಂತು.
ಹೀಗಿರುವಾಗಲೇ ಅದೊಂದು ರಾತ್ರಿ ನಾವು ವಾಸವಿದ್ದ ಕೊಳೆಗೇರಿಗೆ ಬೆಂಕಿ ಬಿದ್ದು ಎಲ್ಲ ಮನೆಗಳೂ ಸುಟ್ಟು ಹೋದವು. ಪುಣ್ಯವಶಾತ್ ಯಾವುದೇ ಪ್ರಾಣಾಪಾಯವಾಗಲಿಲ್ಲ. 20 ಪುಟ್ಟ ಪುಟ್ಟ ಮಕ್ಕಳೊಂದಿಗೆ ಇಡೀ ರಾತ್ರಿಯನ್ನು ರಸ್ತೆ ಬದಿಯಲ್ಲೇ ಕಳೆದೆ. ಮರುದಿನ ಮುಂಜಾನೆ, ಅದೇ ದಾರಿಯಲ್ಲಿ ಜಾಗಿಂಗ್ ಬಂದ ಶ್ರೀಮಂತರೊಬ್ಬರು ನನ್ನನ್ನು ಗುರುತಿಸಿದರು. ನಡೆದದ್ದನ್ನೆಲ್ಲ ವಿವರಿಸಿದೆ. ನಮ್ಮ ಮನೆಯಲ್ಲಿ ಔಟ್‌ಹೌಸ್ ಖಾಲಿಯಿದೆ. ಅಲ್ಲಿಗೆ ಬಂದು ಬಿಡಿ ಎಂದರು. ಹಾಗೆಯೇ ಮಾಡಿದೆ. ನಂತರದ ಕೆಲವೇ ತಿಂಗಳಲ್ಲಿ ಶ್ರೀಮಂತರ ಮೂಲಕವೇ ದೊಡ್ಡದೊಂದು ಮನೆಗೆ ಶಿಫ್ಟ್ ಆದೆ.
ಈ ಹೊತ್ತಿಗೆ, ನಾನು ಅನಾಥರು, ಆಶ್ರಯ ತಪ್ಪಿದವರು, ರೋಗಿಗಳು, ಭಿಕ್ಷುಕರು... ಹೀಗೆ ಹಲವರಿಗೆ ಪೋಷಕನಾಗಿರುವ ಸುದ್ದಿ ಅವರಿವರ ಮೂಲಕವೇ ಹರಡಿ ಮದ್ರಾಸ್‌ನ ಗಡಿ ದಾಟಿ ಸುದ್ದಿಯಾಗಿತ್ತು. ಆಶ್ರಯ ಬೇಡಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚತೊಡಗಿತು. ಆಗ, ಶುರುವಾದದ್ದೇ ಉದವುಂ ಕರಂಗಳ್! ಇದು ನನ್ನ ಮನೆಯ ಹೆಸರು, ಸಂಸ್ಥೆಯ ಹೆಸರು. ಉದವುಂ ಕರಂಗಳ್ ಎಂದರೆ ತಮಿಳಿನಲ್ಲಿ ನೆರವಿನ ಹಸ್ತ ಎಂದು ಅರ್ಥವಿದೆ. ಕಷ್ಟ ಎಂದವರಿಗೆಲ್ಲ ನೆರವಾಗಬೇಕು ಎಂಬ ಸದಾಶಯ ಇದ್ದುದರಿಂದ ಈ ಹೆಸರನ್ನೇ ಆಯ್ಕೆ ಮಾಡಿಕೊಂಡೆ. ದಿನಗಳು ಉರುಳುತ್ತಾ ಹೋದಂತೆಲ್ಲ ನನ್ನೊಂದಿಗೆ ಬದುಕುವವರ ಸಂಖ್ಯೆ ಹೆಚ್ಚಾಗಬಹುದು ಅನಿಸಿದ್ದರಿಂದ ಮದ್ರಾಸ್‌ನ ಹೊರವಲಯದಲ್ಲಿ 1983ರ ಸಂದರ್ಭದಲ್ಲಿಯೇ ಸ್ವಲ್ಪ ಜಮೀನು ಖರೀದಿಸಿದೆ. ಆಗ ಖರೀದಿಸಿದ್ದ ಜಾಗದಲ್ಲಿಯೇ ಈಗ ಉದವುಂ ಕರಂಗಳ್‌ನ ಬಿಲ್ಡಿಂಗ್ ಎದ್ದು ನಿಂತಿದೆ. ದಾನಿಗಳು ಹಾಗೂ ಹಿತೈಷಿಗಳ ನೆರವಿನಿಂದಲೇ ಇದೆಲ್ಲಾ ಸಾಧ್ಯವಾಗಿದೆ.
ಉದವುಂ ಕರಂಗಳ್‌ನಲ್ಲಿ ಈಗ ಒಟ್ಟು 1600 ಮಂದಿ ಇದ್ದಾರೆ. ಎಲ್ಲರೂ ನನ್ನನ್ನು 'ಪಪ್ಪಾ' ಎಂದು ಕರೆಯುತ್ತಾರೆ. ಚೆನ್ನೈನ ಹಲವರ ಪಾಲಿಗೆ ನಾನು ಪಪ್ಪಾ ವಿದ್ಯಾಕರ್! ಬ್ರಹ್ಮಚಾರಿಯಾಗಿದ್ದೂ ಪಪ್ಪಾ ಅನ್ನಿಸಿಕೊಂಡಿದ್ದಕ್ಕೆ ಒಂದು ಹಿನ್ನೆಲೆಯಿದೆ. ಏನೆಂದರೆ - ಆರಂಭದಲ್ಲಿ ನನ್ನ ಮಡಿಲಿಗೆ ಬಂದವರೆಲ್ಲ ಹಾಲುಗಲ್ಲದ ಅನಾಥ ಮಕ್ಕಳು. ದೊಡ್ಡವರಾದ ನಂತರ ಅವರಿಗೆ ತಂದೆಯ ಸ್ಥಾನದಲ್ಲಿ ನಾನಿದ್ದೆ. ಹಾಗಾಗಿ, ಎಲ್ಲ ಮಕ್ಕಳೂ ಪಪ್ಪಾ ಅನ್ನಲು ಪ್ರಾರಂಭಿಸಿದರು. ಕಾಲಕ್ರಮೇಣ, ಮಲತಾಯಿಯ ಕಾಟದಿಂದ ಬೇಸತ್ತವರು, ಕಾಮಾಟಿಪುರದಿಂದ ತಪ್ಪಿಸಿಕೊಂಡವರು, ಹೆತ್ತ ಮಕ್ಕಳಿಂದಲೇ ಹೊರದಬ್ಬಿಸಿಕೊಂಡ ಹಿರಿಯರು, ಏಡ್ಸ್ ಪೀಡಿತರು, ಕ್ಯಾನ್ಸರ್ ಇದ್ದವರು, ಭಿಕ್ಷುಕರು, ನಿರ್ಗತಿಕರು,... ಹೀಗೆ ಹಲವು ವೆರೈಟಿಯ ಜನ ಉದವುಂ ಕರಂಗಳ್‌ನಲ್ಲಿ ಆಶ್ರಯ ಪಡೆದರು. ಹಿರಿಯರ ಪಾಲಿಗೆ ನಾನು ಮಗನಾದೆ. ಕಿರಿಯರ ಪಾಲಿಗೆ ಅಣ್ಣನಾದೆ. ಮಕ್ಕಳ ಪಾಲಿಗೆ ಅಪ್ಪ-ಅಮ್ಮ ಎರಡೂ ಆದೆ. ಆಗ ನನ್ನನ್ನು ಎಲ್ಲರೂ ಪ್ರೀತಿಯಿಂದ ಕರೆದ ಪದವೇ-ಪಪ್ಪಾ ವಿದ್ಯಾಕರ್.
ಒಂದು ಮಾತನ್ನು ಸ್ಪಷ್ಟಪಡಿಸಬೇಕು. ಉದವುಂ ಕರಂಗಳ್ ಎಂಬುದು ಅನಾಥಾಶ್ರಮವಲ್ಲ. ಅದೊಂದು ಮನೆ. ಆಟದ ಅಂಗಳ. ಆಶ್ರಯತಾಣ. ಎಲ್ಲ ವಯಸ್ಸಿನವರಿಗೂ ಅಲ್ಲಿ ಪ್ರವೇಶ ಉಂಟು. 1600 ಮಂದಿಯನ್ನು ಸಾಕುವುದು ಅಂದರೆ ತಮಾಷೆಯಲ್ಲ. ಆದರೆ ಇವತ್ತಿನವರೆಗೂ -'ಸ್ವಾಮೀ, ನಮಗೆ ಸಹಾಯ ಮಾಡಿ' ಎಂದು ಯಾರ ಮುಂದೆಯೂ ಕೈ ಜೋಡಿಸಿ ನಿಂತಿಲ್ಲ. ವಿದೇಶಿ ಫಂಡ್‌ಗೆ ಆಸೆಪಟ್ಟಿಲ್ಲ. ಉದವುಂ ಕರಂಗಳ್‌ನ ಬಗ್ಗೆ ಪತ್ರಿಕೆಗಳು ಅಭಿಮಾನದಿಂದ ಬರೆದಿವೆ. ಸಾವಿರಾರು ಜನರು ಉದಾರವಾಗಿ ನೀಡುತ್ತಿರುವ ದೇಣಿಗೆಯೇ ಈವರೆಗೂ ನಮ್ಮನ್ನು ಸಲಹಿದೆ. ಈಗ ಚೆನ್ನೈನಲ್ಲಿ ಮಾತ್ರವಲ್ಲ, ಕೊಯಮತ್ತೂರಿನಲ್ಲೂ ನಮ್ಮ ಬ್ರಾಂಚ್ ಇದೆ. ನಮ್ಮಲ್ಲಿ ಆಶ್ರಯ ಪಡೆದವರ ಪಟ್ಟಿಯಲ್ಲಿ ದೇಶದ ಎಲ್ಲ ರಾಜ್ಯಗಳ, ಎಲ್ಲ ಧರ್ಮಗಳ ಜನ ಇದ್ದಾರೆ. ಅನಾರೋಗ್ಯದ ಕಾರಣ ಬೀದಿ ಪಾಲಾಗಿ, ನಂತರ ನಮ್ಮಲ್ಲಿ ಆಶ್ರಯ ಪಡೆದು ಗುಣಮುಖರಾಗಿ ಮರಳಿದ ವಿದೇಶಿಯರೂ ಇದ್ದಾರೆ.
ಉದವುಂ ಕರಂಗಳ್‌ಗೆ ಈಗ 30 ವರ್ಷದ ಸಂಭ್ರಮ. ಈಗ ನಮ್ಮದೇ ಸ್ವಂತ ಶಾಲೆಯಿದೆ. ಆಸ್ಪತ್ರೆಯಿದೆ. ಎರಡರಲ್ಲೂ ಉಚಿತ ಪ್ರವೇಶವಿದೆ. ದೇವರು ನಾನಾ ವೇಷದಲ್ಲಿ ಬಂದು ಭಕ್ತರನ್ನು ಪರೀಕ್ಷಿಸುತ್ತಾನೆ ಎಂದು ನಾವೆಲ್ಲಾ ಓದಿದ್ದೇವೆ ತಾನೆ? ಅದೇ ದೇವರು, ನನ್ನ ಸಂಸ್ಥೆಗೆ ಮಕ್ಕಳು, ವೃದ್ಧರು, ಭಿಕ್ಷುಕರು, ರೋಗಿಗಳು, ಮಾತು ಬಾರದವರು... ಹೀಗೆ ನಾನಾ ವೇಷದಲ್ಲಿ ಬಂದು ಜೊತೆಗೇ ಉಳಿದಿದ್ದಾನೆ ಎಂಬುದು ನನ್ನ ನಂಬಿಕೆ. ದೇವರು ದಿನದಿನವೂ ಪರೀಕ್ಷೆ ನಡೆಸುತ್ತಾನೆ. ಪ್ರತಿ ಬಾರಿಯೂ ಅವನನ್ನು ಮೆಚ್ಚಿಸಬೇಕು ಎಂಬುದು ನನ್ನ ಹಿರಿಯಾಸೆ.
'ಸಾರ್, ನೀವು ಬ್ರಹ್ಮಚಾರಿ. ಅಂದ ಮೇಲೆ, ನಿಮ್ಮ ನಂತರ ಈ ಸಂಸ್ಥೆ ನಿಂತು ಹೋಗುತ್ತಾ? ಇದನ್ನು ಮುಂದುವರೆಸಿಕೊಂಡು ಹೋಗುವವರು ಯಾರು?' ಎಂಬುದು ಹಲವರ ಪ್ರಶ್ನೆ. ಯಾವುದೇ ಪ್ರತಿಫಲ ಬಯಸದೆ ಕೆಲಸ ಮಾಡುವ ಮೂವತ್ತಕ್ಕೂ ಹೆಚ್ಚು ಮಂದಿ ಈಗ ನನ್ನೊಂದಿಗಿದ್ದಾರೆ. ನನ್ನ ನಂತರ ಕೂಡ ಅವರು ಉದವುಂ ಕರಂಗಳ್ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗ್ತಾರೆ ಎಂಬ ವಿಶ್ವಾಸ ನನ್ನದು.
30 ವರ್ಷದ ಹಿಂದೆ ಪಿಳಿಪಿಳಿ ಕಣ್ಣು ಬಿಡುವ ಕಂದಮ್ಮಗಳಾಗಿ ನನ್ನ ಸುಪರ್ದಿಗೆ ಬಂದ ಮಕ್ಕಳು ಈಗ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ, ಯೋಧರಾಗಿ, ಹೋಟೆಲುಗಳ ಮಾಲೀಕರಾಗಿ, ಚಾರ್ಟರ್ಡ್ ಅಕೌಂಟೆಂಟ್‌ಗಳಾಗಿ ದುಡಿಯುತ್ತಿದ್ದಾರೆ. ಸ್ವತಂತ್ರ ಬದುಕು ಆರಂಭಿಸಿದ್ದಾರೆ. ಬಿಡುವಿನ ದಿನಗಳಲ್ಲಿ ಉದವುಂ ಕರಂಗಳ್‌ಗೆ ತಪ್ಪದೇ ಬರುತ್ತಾರೆ. ನಿಜ ಹೇಳಬೇಕೆಂದರೆ, ಆಶ್ರಯ ಕೋರಿ ಜನ ಬಂದಾಗ ಸಂಕಟ ಆಗುವುದಿಲ್ಲ. ಹೀಗೆ ಬಂದವರು ಅನಾರೋಗ್ಯದಿಂದ ದಿಢೀರ್ ಸತ್ತು ಹೋದಾಗ ದುಃಖವಾಗುತ್ತದೆ. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳಿಸುವಾಗ ಕರುಳು ಕತ್ತರಿಸಿಕೊಂಡ ಅನುಭವವಾಗುತ್ತದೆ. ನಾವೇನೋ ಆ ಮಕ್ಕಳನ್ನು ತುಂಬ ಮುದ್ದಿನಿಂದ, ಅಕ್ಕರೆಯಿಂದ ಸಾಕಿದ್ದೇವೆ. ಆದರೆ, ಗಂಡ ಅನ್ನಿಸಿಕೊಂಡವನು ಈ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳದೇ ಹೋದರೆ? ಬೈ ಛಾನ್ಸ್ ಹೊಡೆದು ಬಿಟ್ಟರೆ ಅನ್ನಿಸಿದಾಗೆಲ್ಲ ಆಗುವ ಸಂಕಟವನ್ನು ವಿವರಿಸಲು ಸಾಧ್ಯವಿಲ್ಲ. ಕಡೆಗೊಮ್ಮೆ, ಗಂಡನ ಮನೆಗೆ ಹೊರಟ ಮಕ್ಕಳು-'ಪಪ್ಪಾ, ಆರೋಗ್ಯ ಹುಷಾರು. ಟೇಕ್ ಕೇರ್. ಹೋಗಿ ಬರ್ಲಾ' ಅನ್ನುತ್ತಲೇ ಬಿಕ್ಕಿ ಬಿಕ್ಕಿ ಅಳುವಾಗ ನಾನಾದರೂ ಹೇಗೆ ಸುಮ್ಮನಿರಲಿ?' ಮತ್ತೊಂದು ಸಂದರ್ಭ ಕೇಳಿ: ಇತ್ತೀಚೆಗೊಮ್ಮೆ ವಿಪ್ರೋದಲ್ಲಿ ಎಂಜಿನಿಯರ್ ಆಗಿರುವ ಹುಡುಗನೊಬ್ಬ ಬಂದು, ಪಪ್ಪಾ, ಒಂದು ಸರ್‌ಪ್ರೈಸ್ ತೋರಿಸ್ತೇನೆ. ಆ ಕಡೆ ತಿರುಗಿ ಅಂದ. ಹಾಗೇ ಮಾಡಿದೆ. ನಂತರ ಅವನು ತೋರಿಸಿದ್ದೇನು ಗೊತ್ತೆ? ಅವನ 7ನೇ ತರಗತಿಯ ಪ್ರೊಗ್ರೆಸ್ ರಿಪೋರ್ಟು! ಅದರಲ್ಲಿ ತಂದೆಯ ಹೆಸರು ಎಂಬ ಜಾಗದಲ್ಲಿ ಪಪ್ಪಾ ವಿದ್ಯಾಕರ್ ಎಂದು ಬರೆದಿದ್ದ. ತಾಯಿಯ ಹೆಸರು ಎಂಬ ಜಾಗದಲ್ಲೂ ಅದೇ ಹೆಸರಿತ್ತು! ಅವನನ್ನು ಬಾಚಿ ತಬ್ಬಿಕೊಂಡು 'ಕಂದಾ' ಅನ್ನುವುದರೊಳಗೆ ನಾನು ಅಳತೊಡಗಿದ್ದೆ. ಅವನೂ...
ಕಡೆಯದಾಗಿ ಒಂದು ಮಾತು ಹೇಳಲು ಆಸೆಪಡ್ತೇನೆ. ಏನೆಂದರೆ, ಉದವುಂ ಕರಂಗಳ್ ಥರದ ಸಂಸ್ಥೆಗಳ ಸಂಖ್ಯೆ ಹೆಚ್ಚಬಾರದು. ಕಡಿಮೆ ಆಗಬೇಕು. ಜಗತ್ತಿನಲ್ಲಿ ಅನಾಥರು, ರೋಗಿಗಳು, ನಿರ್ಗತಿಕರು ಇಲ್ಲದಂತಾಗಬೇಕು. ಮಕ್ಕಳನ್ನೂ ಹಿರಿಯರೂ, ಹಿರಿಯರನ್ನು ಮಕ್ಕಳೂ ಪ್ರೀತಿಯಿಂದ ನೋಡಿಕೊಂಡ್ರೆ ಯಾರೂ ಅನಾಥರೇ ಆಗೋದಿಲ್ಲ ಅಲ್ವಾ? ಎನ್ನುತ್ತಾ ಮಾತು ಮುಗಿಸಿದರು ವಿದ್ಯಾಕರ್. ಅಂದಹಾಗೆ, ಉದವುಂ ಕರಂಗಳ್‌ಗೆ ನೀವೂ ನೆರವಾಗಬಹುದು. ವಿದ್ಯಾಕರ್ ಅವರನ್ನು udavum@vsnl.comನಲ್ಲಿ ಸಂಪರ್ಕಿಸಬಹುದು.
-ಎ.ಆರ್. ಮಣಿಕಾಂತ್
armanikanth@gmail.com