ಅಂಕಣಗಳು

ಏನೋ ಹೇಳಲು ಹೋಗಿ ಏನೋ ಆಯಿತು!

ಸ್ನೇಹಿತರಾದ ಎಸ್. ಷಡಕ್ಷರಿ ಅವರು ಮೊನ್ನೆ ಫೋನ್ ಮಾಡಿ, 'ಉಡುಪಿ ಪರ್ಯಾಯದಲ್ಲಿ...

ಸ್ನೇಹಿತರಾದ ಎಸ್. ಷಡಕ್ಷರಿ ಅವರು ಮೊನ್ನೆ ಫೋನ್ ಮಾಡಿ, 'ಉಡುಪಿ ಪರ್ಯಾಯದಲ್ಲಿ ನಿಮ್ಮನ್ನು ಸನ್ಮಾನಿಸುತ್ತಿರುವ ಫೋಟೋವನ್ನು ಪತ್ರಿಕೆಯಲ್ಲಿ ನೋಡಿದೆ' ಎಂದರು. ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ಅದಾದ ನಂತರ ಮತ್ತೊಂದನ್ನು ಸೇರಿಸಿದರು. 'ಆ ಫೋಟೋದಲ್ಲಿ ನೀವು ಬಹಳ ಸಭ್ಯರಂತೆ, ಸಂಭಾವಿತರಂತೆ ಕಾಣುತ್ತಿದ್ದಿರಿ' ಎಂದರು. ಅದಕ್ಕೆ ನಾನು 'ಏನ್ಸಾರ್, ಇದು ಪ್ರಶಂಸೆಯೋ, ತಕರಾರೋ, ಟೀಕೆಯೋ ಗೊತ್ತಾಗುತ್ತಿಲ್ಲ' ಎಂದೆ. 'ಹಾಗಲ್ಲ. ನೀವು ಸದಾ ಪ್ಯಾಂಟು, ಶರ್ಟನ್ನು ಧರಿಸಿರುತ್ತೀರಿ. ಆದರೆ ಫೋಟೋದಲ್ಲಿ ನೀವು ಬಿಳಿ ಶರ್ಟು ಹಾಗೂ ಪಂಚೆ ಧರಿಸಿದ್ದೀರಿ. ಅದಕ್ಕೆ ಹಾಗಂದೆ' ಎಂದು ಸಮಜಾಯಿಷಿ ನೀಡಿದರು. 'ನೀವು ಸಭ್ಯರಂತೆ ಕಾಣುತ್ತೀರಿ' ಎಂಬ ಹೊಗಳಿಕೆಯ ಮಾತು ಸಹ ಬೇರೆ ಅರ್ಥ ಕೊಡುವಂತಿತ್ತು.
ಒಮ್ಮೆ ಯೂನಿಫಾರ್ಮ್‌ನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಭೇಟಿಯಾದ ಸುಂದರ ತರುಣಿಯೊಬ್ಬಳು, 'ಸಾರ್, ತಾವು ಪಾಟೀಲರು ಅಲ್ವಾ?' ಎಂದು ಕೇಳಿದಳಂತೆ. ಅದಕ್ಕೆ ಆ ಪೊಲೀಸ್ ಅಧಿಕಾರಿ, 'ಇಲ್ಲ... ಇಲ್ಲ... ನಾನು ಹಿರೇಮಠ' ಎಂದು ಹೇಳಿದರಂತೆ. ತಕ್ಷಣ ಆ ತರುಣಿ' ಹೌದಾ? ನೀವು ಹಿರೇಮಠರಾ? ಸಾರಿ...ಸಾರಿ... I had seen you without dress...ಅದಕ್ಕೆ ಗುರುತು ಸಿಗಲಿಲ್ಲ' ಎಂದಳಂತೆ. ಅಕ್ಕಪಕ್ಕದಲ್ಲಿದ್ದವರೆಲ್ಲ ಜೋರಾಗಿ ನಕ್ಕರಂತೆ.  without dress ಅಂದ್ರೆ ಬೆತ್ತಲೆ ಅಂತ ಭಾವಿಸಿದರೆ ಅಪಾರ್ಥವಾಗುವುದು ಸಹಜ. ಆದರೆ ಆ ತರುಣಿwithout dress ಎಂಬ ಪದಪ್ರಯೋಗವನ್ನು without uniform ಎಂಬ ಅರ್ಥದಲ್ಲಿ ಬಳಸಿದ್ದಳು.
ಉಡುಪಿ ಪರ್ಯಾಯದಲ್ಲಿ ಮೊದಲ ಬಾರಿಗೆ ನನ್ನನ್ನು ನೋಡಿದವರು ಅಥವಾ ಪರಿಚಯ ಮಾಡಿಕೊಂಡವರು ಕೆಲ ವರ್ಷಗಳ ನಂತರ ಸಿಕ್ಕಾಗ, ನನ್ನ ಗುರುತು, ಪತ್ತೆ ಹಿಡಿಯಲಿಲ್ಲ ಅಂತ ಇಟ್ಟುಕೊಳ್ಳಿ. ಆಗ ಅವರು ಸಮಜಾಯಿಷಿ ಕೊಡುತ್ತಾ 'ಸಾರ್, ತಪ್ಪು ಭಾವಿಸಬೇಡಿ, ನಿಮ್ಮ ಗುರುತೇ ಸಿಗಲಿಲ್ಲ. ಉಡುಪಿ ಪರ್ಯಾಯದಲ್ಲಿ ನಾನು ನಿಮ್ಮನ್ನು ಪ್ಯಾಂಟ್ ಇಲ್ಲದೇ ನೋಡಿದ್ದೆ' ಅಂತ ಹೇಳಿದರೆ, ಅದನ್ನು ಅಕ್ಕಪಕ್ಕದವರು ಕೇಳಿಸಿಕೊಂಡರೆ ನನ್ನ ಕತೆ ಏನು? ಅವರು ಹೇಳಿದ್ದರಲ್ಲಿ ತಪ್ಪಿಲ್ಲ. ಆದರೆ ಅವರ ಮಾತು ತಪ್ಪು ಭಾವಿಸುವುದಕ್ಕೆ ಅವಕಾಶ ಕಲ್ಪಿಸುವುದಂತೂ ನಿಜ.
ಇಂಥದೇ ಇನ್ನೊಂದು ಪ್ರಸಂಗ: ಗಂಡ-ಹೆಂಡತಿ ಮದುವೆಗೆ ಹೋಗಲು ಅವಸರದಲ್ಲಿ ಸಿದ್ಧರಾಗುತ್ತಿದ್ದರು. ಗಂಡ ತಯಾರಾಗಿ ಜಗುಲಿಗೆ ಬಂದ. ಹೆಂಡತಿ ಸಲ್ವಾರ್ ಧರಿಸಿ ಬಂದಳು. ಗಂಡನಿಗೆ ಆಕೆಯ ದಿರಿಸು ಸರಿ ಕಾಣಲಿಲ್ಲ. ಆಗ ಹೆಂಡತಿ 'ಹಾಗಾದ್ರೆ ಸಲ್ವಾರ್ ಕಳಚಿ ಬರುತ್ತೇನೆ' ಎಂದಳು. ತಕ್ಷಣ ಗಂಡ 'ಸಲ್ವಾರ್ ಕಳಚಿ ಬಂದು ಬಿಡಬೇಡ. ಸೀರೆಯನ್ನು ಉಟ್ಟುಕೊಂಡು ಬಾ' ಎಂದ.
ಒಮ್ಮೆ ಉಬ್ಬು ಹಲ್ಲು ಇರುವ ಮಹಾಶಯರೊಬ್ಬರು ಜೋಕನ್ನು ಕೇಳಿ ಜೋರಾಗಿ ನಗುತ್ತಿದ್ದರಂತೆ. ಅದನ್ನು ನೋಡಿದ ಮಹನೀಯರೊಬ್ಬರು, 'ನೀವು ಬಾಯಿ ಮುಚ್ಚಿಕೊಂಡು ನಕ್ಕರೆ ಚೆನ್ನಾಗಿ ಕಾಣುತ್ತೀರಿ. ಬೇಕಾದರೆ ಪ್ರಯತ್ನಿಸಿ' ಎಂದರಂತೆ. ಅದಕ್ಕೆ ಆ ಮಹಾಶಯರು 'ಹಲ್ಲನ್ನು ನಿಮ್ಮಪ್ಪನ ಕಿಸೆಯಲ್ಲಿ ಇಡಲಾ?' ಎಂದು ಕೇಳಿದರಂತೆ. ಅದಕ್ಕೆ ಮಹನೀಯರು, 'ನೀವ್ಯಾಕೆ ಆ ಕಷ್ಟ ತೆಗೆದುಕೊಳ್ತೀರಾ, ನಿಮ್ಮ ಹಲ್ಲನ್ನು ಉದುರಿಸುವ ಕೆಲಸವನ್ನು ನನಗೆ ಬಿಡಿ' ಎಂದಾಗ ಮಹಾಶಯರು ರೇಗುತ್ತಾ ಹೊಡೆಯಲು ಬಂದರಂತೆ. ಆಗ ಮಹನೀಯರು 'ನಾನು ಆ ಅರ್ಥದಲ್ಲಿ ಹೇಳಿದ್ದಲ್ಲ ನಾನು ಹಲ್ಲಿನ ಡಾಕ್ಟರ್‌' ಎಂದು ಹೇಳಿ ಬಚಾವಾದರಂತೆ.
ಈ  ಪ್ರಸಂಗಗಳನ್ನು ಹೇಳಿದಾಗ ನನಗೆ ಬೀchi ಅವರ ಒಂದು ಜೋಕು ನೆನಪಾಗುತ್ತದೆ. ಇಬ್ಬರ ನಡುವೆ ಈ ರೀತಿ ಸಂಭಾಷಣೆ ನಡೆದಿತ್ತು.
ಒಬ್ಬ: ಅವನು ಹಾಕಿದ, ನಾನು ನಾಲ್ಕು ಹಾಕಿದೆ.
ಮತ್ತೊಬ್ಬ: ಹೌದಾ?
ಒಬ್ಬ: ಹೌದಲ್ಲದೇ ಮತ್ತೇನು? ಅವನು ಹಾಕಿದ್ದು ಪೆಟ್ಟು ನಾನು ಹಾಕಿದ್ದು ಬೊಬ್ಬೆ.

ಗೀಟು ಚಿಹ್ನೆ
ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ, 'ನಾನು ಚರಿತ್ರೆಯಲ್ಲಿ ಬರಿಯ ಕಾಮ. ಮಹಾತ್ಮಗಾಂಧಿಯಂಥವರು ಫುಲ್‌ಸ್ಟಾಪ್‌' ಎಂದು ಹೇಳಿದಾಗ, ಆಗ 'ಕನ್ನಡಪ್ರಭ'ದ ಸಂಪಾದಕರಾಗಿದ್ದ ವೈಯೆನ್ಕೆಯವರು 'ಚಂದ್ರಶೇಖರ್ ಅವರು ತಮಗೆ ಪ್ರಮೋಶನ್ ಕೊಟ್ಟುಕೊಂಡಿದ್ದಾರೆ. ಹಾಗೆ ನೋಡಿದರೆ ಅವರು ಕಾಮ (comma) ಅಲ್ಲ ,Foot note (ಅಡಿಟಿಪ್ಪಣಿ)' ಎಂದು ಹೇಳಿದ್ದರು. ಅಡಿಟಿಪ್ಪಣಿ ಅಂದರೆ ಅಷ್ಟೇನೂ ಮಹತ್ವದಲ್ಲ ಎಂಬ ಅರ್ಥದಲ್ಲಿ ಹೇಳಿದ್ದು. ಚಂದ್ರಶೇಖರ್‌ಗೆ 'ಅಡಿಟಿಪ್ಪಣಿ' ಹೋಲಿಕೆ ಹೆಚ್ಚು ಅನ್ವಯವಾಗುತ್ತದೆ ಎನ್ನುವುದಕ್ಕೆ ಕಾರಣ ಅವರು ಭಾರತದಲ್ಲಿ ನಡೆಸಿದ ದೀರ್ಘ ಪಾದ (ಅಡಿ) ಯಾತ್ರೆ ಇರಬಹುದಾ ಎಂದು ವೈಯೆನ್ಕೆ ಹೇಳಿದ್ದರು.
ಕಾಮ, ಫುಲ್‌ಸ್ಟಾಪ್ ಮಹತ್ವ ನಿಮಗೆ ಗೊತ್ತಿರಬಹುದು, ಆದರೆ ಗೀಟು (-) ಚಿಹ್ನೆಯ ಮಹತ್ವ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಗೀಟು ಚಿಹ್ನೆ ಬಗ್ಗೆ ವೈಯೆನ್ಕೆ ಹೇಳಿದ್ದು-'ನನ್ನ ದೃಷ್ಟಿಯಲ್ಲಿ ಇದು ಅತ್ಯಂತದ ಮಹತ್ವದ ಚಿಹ್ನೆ. 1948-1992ಎಂದಾಗ ಮೊದಲಿನದು ಹುಟ್ಟಿದ ವರ್ಷ ಹಾಗೂ ಎರಡನೆಯದು ಸತ್ತ ವರ್ಷ ಅಂದಾಗ ನಡುವಿನ ಗೆರೆಯೇ ಜೀವನ ಎಂದಾಗುತ್ತದೆ. ಅಲೆಕ್ಸಾಂಡರ್ ಡರ್ಲ್ ಬರೆದಿದ್ದ-Like a sterile hyphen that divides and joins the dates of birth and death in a biography ಜೀವನ ಚರಿತ್ರೆಯಲ್ಲಿ ಹುಟ್ಟು ಸಾವಿನ ದಿನಗಳನ್ನು ಬೇರ್ಪಡಿಸುವ, ಸೇರಿಸುವ ಬರಡು ಗೀಟಿನಂತೆ ... ಒಂದು ಗೀಟಿಗೆ ಜೀವನವನ್ನು ಪ್ರತಿನಿಧಿಸುವ ಶಕ್ತಿಯಿದೆ.'

ಮತ್ತೆ ಖುಷವಂತಸಿಂಗ್
ಖುಷವಂತಸಿಂಗ್ ಬರೆಯದೇ ಹೆಚ್ಚು-ಕಮ್ಮಿ ಏಳೆಂಟು ತಿಂಗಳುಗಳೇ ಆಗಿದ್ದವು. ವಾರಕ್ಕೆ ಎರಡು ಅಂಕಣಗಳನ್ನು ಬರೆಯುತ್ತಿದ್ದ 'ಅಜ್ಜ', ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. 'ನಾನು ಬರೆಯುತ್ತಲೇ ಇದ್ದರೆ ನನಗೆ ಮುಪ್ಪಾಗಲಿ, ರೋಗವಾಗಲಿ ಹತ್ತಿರ ಸುಳಿಯುವುದಿಲ್ಲ. ನನ್ನ ಬರವಣಿಗೆ ನಿಂತ ದಿನ ಇವೆರಡೂ ನನ್ನನ್ನು ತಬ್ಬಿಕೊಳ್ಳುತ್ತವೆ. ಆಗ ನನ್ನ ಕತೆ ಮುಗಿದಂತೆ' ಎಂದು ಅವರು ಹಿಂದಿನ ವರ್ಷ ಬರೆದಿದ್ದರು. ಏಳೆಂಟು ತಿಂಗಳಿನಿಂದ ಅವರನ್ನು ಮುಪ್ಪು ಹಾಗೂ ಅನಾರೋಗ್ಯ ವಿಪರೀತವಾಗಿ ಬಾಧಿಸಿರಬೇಕು. ಇನ್ನು ಖುಷವಂತಸಿಂಗ್ ಬರೆಯಲಿಕ್ಕಿಲ್ಲ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಆಶ್ಚರ್ಯಕರ ರೀತಿಯಲ್ಲಿ ಖುಷವಂತಸಿಂಗ್ (ಫೆಬ್ರವರಿ ಎರಡರಂದು ಅವರಿಗೆ ತೊಂಬತ್ತೊಂಬತ್ತು ವರ್ಷ ಪೂರ್ಣವಾಗಲಿದೆ) ಮುಪ್ಪು ಹಾಗೂ ಅನಾರೋಗ್ಯದ ತೆಕ್ಕೆಯಿಂದ ಬಿಡಿಸಿಕೊಂಡಿದ್ದಾರೆ. ಎರಡು ವಾರಗಳಿಂದ ಬರೆಯಲಾರಂಭಿಸಿದ್ದಾರೆ. ಹಾಗೆ ನೋಡಿದರೆ ಅವರು ಬರೆಯಲಾರಂಭಿಸಿದ್ದೇ ತಡವಾಗಿ.  ಎಲ್ಲರೂ 'ಇನ್ನು ಸಾಕು' ಎಂದು ಲೇಖನಿಯನ್ನು ಕೆಳಕ್ಕಿಡುವ ವಯಸ್ಸು ಸಮೀಪಿಸುತ್ತಿದ್ದಾಗ (55 ವರ್ಷವಾದಾಗ) ಅವರು ಬರೆಯಲಾರಂಭಿಸಿದರು. ತೊಂಬತ್ತಾದರೂ ಅವರಿಗೆ ಬರೆಯುವ ತುಡಿತ. ಬರವಣಿಗೆಯೊಂದರಿಂದ ಮಾತ್ರ ಸಾವನ್ನು ಮುಂದೂಡಬಹುದು ಎಂಬುದು ಅವರಿಗೆ ಮತ್ತೊಮ್ಮೆ ಮನವರಿಕೆಯಾಗಿದೆ. ಈ ದೃಷ್ಟಿಯಿಂದ ನೋಡಿದರೆ ಅವರು ಈ ಏಳೆಂಟು ತಿಂಗಳಲ್ಲಿ ಎಷ್ಟೊಂದು ಮಾನಸಿಕ ಹಿಂಸೆ, ಯಾತನೆ ಅನುಭವಿಸಿರಬಹುದು ಎಂಬುದನ್ನು ಊಹಿಸಬಹುದು.
ಇಳಿವಯಸ್ಸಿನಲ್ಲೂ ಸರ್ದಾರ್ಜಿಯ ಪೋಲಿತನ ಮಾತ್ರ ಕಡಿಮೆಯಾಗಿಲ್ಲ. ಅವರು ಹಿಂದಿನ ವಾರದ ಅಂಕಣದಲ್ಲಿ ಬರೆದಿರುವುದೇ ಇದಕ್ಕೆ ನಿದರ್ಶನ.
ಗಂಡಸರು ಹೆಂಗಸರ ಹಿಂಭಾಗವನ್ನು ಕಂಡು'what an ass!'' ಎಂದು ಹೇಳುತ್ತಾರಂತೆ. ಹೆಂಗಸರು ಗಂಡಸರ ಮುಂಭಾಗ (ಮುಖ) ನೋಡಿ  'what an ass!'ಎಂದು ಹೇಳುತ್ತಾರಂತೆ. ಈ ಪ್ರಸಂಗಕ್ಕೆ ಖುಷವಂತಸಿಂಗ್ ಕೊನೆಪಂಚ್-'Same comment, different ass- essments.'

ಹೇಳಿದ್ದನ್ನೇ ಯಾಕೆ ಹೇಳುತ್ತಾರೆ?
ಕನ್ನಡದ ಖ್ಯಾತ ಇತಿಹಾಸಕಾರರೊಬ್ಬರು ಹೇಳಿದ್ದನ್ನೇ ಕನಿಷ್ಠ ಮೂರು ಸಲ ಹೇಳುತ್ತಾರೆ. ಅವರಿಗೆ ನೆನಪಿನ ತೊಂದರೆಯೋ, ತಾನು ಹೇಳಿದ್ದು ಬೇರೆಯವರಿಗೆ ಅರ್ಥವಾಗಲಿಕ್ಕಿಲ್ಲ ಎಂಬ ಭಾವನೆಯೋ, ಒಂದಕ್ಕಿಂತ ಹೆಚ್ಚು ಸಲ ಹೇಳಿದರೆ ಅರ್ಥವಾಗಬಹುದೆಂಬ ಚಿಂತನೆಯೋ ಗೊತ್ತಿಲ್ಲ ಹೇಳಿದ್ದನ್ನೇ ಮೂರ್ನಾಲ್ಕು ಸಲ ಹೇಳುತ್ತಾರೆ.
ಇವರಿಂದ ತಪ್ಪಿಸಿಕೊಂಡು ಬಂದ ಸ್ನೇಹಿತರೊಬ್ಬರು, 'ಅಯ್ಯೋ ಆತ ಅದೆಂಥ ಅಸಾಮಿ ಮಾರಾಯ. ಹೇಳಿದ್ದನ್ನೇ ನಾಲ್ಕು ನಾಲ್ಕು ಸಲ ಹೇಳುತ್ತಾರೆ. ಅವರಿಂದ ನಾನು ತಪ್ಪಿಸಿಕೊಂಡು ಬಂದಿದ್ದೇ ದೊಡ್ಡ ಪವಾಡ' ಎಂದರು.
ಅದಕ್ಕೆ ನಾನು ಸಮಾಧಾನ ಹೇಳಿದೆ-
'History repeatsಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಈ ಇತಿಹಾಸಕಾರರು Historians will also repeat  ಎಂಬುದನ್ನು ಸಾಬೀತುಪಡಿಸಿದ್ದಾರೆ.'



-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!