ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸುನಂದಾರನ್ನು ಕೊಂದವರು ಯಾರು? ಪ್ರತಿಷ್ಠಿತರನ್ನು ಸಂಶಯಿಸಿದರೆ ಹುಷಾರು!

Srinivasa Murthy VN
Updated On : 4 Jul 2014, 11:38 am

ಆಗಿನ್ನೂ ಪ್ರಧಾನಿಯಾಗಿರದಿದ್ದ ನರೇಂದ್ರ ಮೋದಿ ತಮ್ಮ ಹೇಳಿಕೆಯೊಂದರ ಮೂಲಕ ಭಾರಿ ವಿವಾದಕ್ಕೆ ತುತ್ತಾಗಿದ್ದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಟೀಕಿಸುತ್ತ, 'ಸ್ನೇಹಿತರೇ ಇವರಿಗೆ 50 ಕೋಟಿ ರುಪಾಯಿಗಳ ಗರ್ಲ್‌ಫ್ರೆಂಡ್ ಇದ್ದಾರೆ. ತಮಾಷೆಯಲ್ಲ' ಎಂದುಬಿಟ್ಟಿದ್ದರು. ಹೀಗೆ ಹೇಳುವುದಕ್ಕೆ ಮುಂಚೆ ಅವರು ಪ್ರಸ್ತಾಪಿಸಿದ ವಿಷಯ ಹೀಗಿತ್ತು- 'ಕಾಂಗ್ರೆಸ್‌ನ ಸಂಸದರೊಬ್ಬರು ಕ್ರಿಕೆಟ್‌ನಿಂದ ಭಾರಿ ಹಣವನ್ನೇ ಒಟ್ಟುಗೂಡಿಸಿದ್ದಾರೆ. ಆದರೆ ಆ 50 ಕೋಟಿ ರುಪಾಯಿಗಳು ಆ ಮಹಿಳೆಗೆ ಸಂಬಂಧಿಸಿದ್ದೇ ಹೊರತು ತಮಗಲ್ಲ ಎನ್ನುತ್ತಿದ್ದಾರೆ. ಐವತ್ತು ಕೋಟಿ ರುಪಾಯಿಗಳ ಗರ್ಲ್‌ಫ್ರೆಂಡ್ ಬಗ್ಗೆ ನೀವೆಲ್ಲಾದರೂ ಕೇಳಿದ್ದೀರೇನ್ರೀ?'
ಅಷ್ಟೇ. ಉದಾರವಾದಿಗಳು, ಸ್ತ್ರೀಪರ ಕಾಳಜಿಯವರು ಎಂದು ಕರೆದುಕೊಳ್ಳುವವರೆಲ್ಲ ಮೋದಿಯವರದ್ದು ಎಂಥ ಹೀನ ಟೀಕೆ ಅಂತ ಖಂಡಿಸುವುದರಲ್ಲಿ ನಿರತರಾದರು. ನಿಜಕ್ಕೂ ಇಲ್ಲಿನ ಕಾಳಜಿ ಏನಾಗಿತ್ತೆಂದರೆ, ಇವತ್ತು ಸಂಬಂಧಗಳು ದುಡ್ಡಿನ ಸಲುವಾಗಿ ರೂಪುಗೊಳ್ಳುತ್ತಿವೆ. ಇಲ್ಲಿ ನೈಜ ಬದ್ಧತೆ ಏನೂ ಇಲ್ಲ ಎಂಬುದಾಗಿತ್ತು. ಈ ಅರ್ಥವನ್ನು ಮರೆಮಾಚಿ ಮೋದಿ ನಿಂದನೆಯಲ್ಲಿ ಎಲ್ಲರೂ ತೊಡಗಿಕೊಂಡರು. 'ನರೇಂದ್ರ ಮೋದಿಯವರೇ ನಿಮಗೆ ಪ್ರೀತಿಯ ಅರ್ಥ ಏನ್ರೀ ಗೊತ್ತು. ನನ್ನ ಗರ್ಲ್‌ಫ್ರೆಂಡ್‌ಗೆ ಬೆಲೆ ಕಟ್ಟಲಾಗದು ತಿಳ್ಕೊಳಿ' ಅಂತ ಮೂರು ಮದುವೆ ಮಾಡಿಕೊಂಡಿದ್ದ ಶಶಿ ತರೂರ್ ಗುಟುರು ಹಾಕಿದ್ದೂ ಆಯಿತು. ಅಂಥ 'ಅಮೂಲ್ಯ' ಗರ್ಲ್‌ಫ್ರೆಂಡ್ ಸಂಶಯಾಸ್ಪದವಾಗಿ ಮರಣಿಸಿದ್ದಾಗಿದೆ. ತಮ್ಮ ಬೆಲೆಕಟ್ಟಲಾಗದ ಪ್ರೇಮವನ್ನು ಹೆಂಡತಿಯಾಗಿ ಬಂದ ಸುನಂದಾ ಪುಷ್ಕರ್‌ಗೆ ಸೀಮಿತಗೊಳಿಸದೇ ಪಾಕ್ ಪತ್ರಕರ್ತೆಗೂ ಧಾರೆ ಎರೆಯುವುದಕ್ಕೆ ಹೋಗಿದ್ದರಲ್ಲೇ ಸುನಂದಾ ಸಾವಿನ ಮುನ್ನುಡಿ ಇತ್ತು ಎಂಬುದು ಮೇಲ್ನೋಟದ ಕಾರಣಗಳಿಂದ ಸ್ಪಷ್ಟ!
ಪಾಕ್ ಪತ್ರಕರ್ತೆ ಮೆಹೆರ್ ತರಾರ್ ಮೋಡಿಗೆ ಮರುಳಾದ ತರೂರ್ ಪತ್ನಿಯನ್ನು ನಿರ್ಲಕ್ಷಿಸಲು ಆರಂಭಿಸಿದ್ದರಂತೆ. ಇದರಿಂದ ಬೇಸರಗೊಂಡ ಸುನಂದಾ ತರೂರ್ ಟ್ವಿಟರ್ ಖಾತೆಯನ್ನು ಪರಿಶೀಲಿಸಿದಾಗ ತನ್ನ ಪತಿ ಮೆಹೆರ್ ಜತೆ ಫ್ಲರ್ಟ್ ಮಾಡುತ್ತಿರುವುದು ಸ್ಪಷ್ಟವಾಯಿತು. ಇದರಿಂದ ಕುಪಿತಗೊಂಡ ಸುನಂದಾ ತರೂರ್ ಬಳಿ ಉತ್ತರ ಕೇಳಿದಾಗ ತನ್ನ ಟ್ವಿಟರ್ ಖಾತೆ 'ಹ್ಯಾಕ್‌' ಆಗಿರುವುದಾಗಿ ತಿಳಿಸಿ ಕೆಲ ಕಾಲ ಆಫ್‌ಲೈನ್ ಆಗಿಬಿಟ್ಟರು. ಇದಲ್ಲದೆ ತರೂರ್ ಮೆಹೆರ್‌ಗೆ ಈಮೇಲ್ ಮೂಲಕವೂ ಪ್ರೇಮಪತ್ರ ಕಳುಹಿಸುತ್ತಿದ್ದರಂತೆ. ಆಗ ಇನ್ನಷ್ಟೂ ನೊಂದುಕೊಂಡ ಸುನಂದಾ ವಿಚ್ಛೇದನೆ ನೀಡುವುದಾಗಿ ಬೆದರಿಸಿದ್ದರು. ಮೆಹೆರ್ ವಿಚಾರವಾಗಿ ಬಹಿರಂಗವಾಗಿ ಜಗಳ ನಡೆಯುತ್ತಿದ್ದ ಕಾರಣ, ಮೆಹೆರ್ ಸ್ಪಷ್ಟನೆ ನೀಡಬೇಕಾಯಿತು. ತರೂರ್ ಜತೆ ಯಾವ ಅಕ್ರಮ ಸಂಬಂಧವೂ ಇಲ್ಲ ಎಂದು ಮೆಹೆರ್ ಹೇಳಿಕೆ ನೀಡಿದರೂ ಅವರಿಬ್ಬರು ದುಬೈನಲ್ಲಿ ಭೇಟಿ ಮಾಡಿದ್ದು ಸುನಂದಾ ಅವರಿಗೆ ಸಾಕಷ್ಟು ನೋವು ತಂದಿತು.
ಇದು ಸುನಂದಾ- ತರೂರ್‌ಗೆ ಸಂಬಂಧಿಸಿದ ಖಾಸಗಿ ದುರಂತವಾದ್ದರಿಂದ ಇದರಲ್ಲಿ ಅನುಮಾನದ ಎಳೆಗಳನ್ನು ಹುಡುಕಬಾರದು ಎಂದು ನೀವು ಹೇಳುತ್ತೀರೇನೋ. ಹಾಗೆನ್ನಲು ಸಾಧ್ಯವಿಲ್ಲ. ಏಕೆಂದರೆ ಶಶಿ ತರೂರ್ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದವರು. ಇದನ್ನು ಗಮನದಲ್ಲಿಟ್ಟುಕೊಂಡು ಸಾಯುವ ಮುನ್ನ ಸುನಂದಾ ಹೇಳಿದ್ದನ್ನು ಗಮನಿಸಿ. 'ಮೆಹೆರ್ ಗೂಢಾಚಾರಿಯಾಗಿ ಪಾಕಿಸ್ತಾನಕ್ಕೆ ಕೆಲಸ ಮಾಡುತ್ತಿರಬೇಕು. ತರೂರ್‌ನಿಂದ ಮಾಹಿತಿ ಪಡೆಯಲು ಅವರನ್ನು ಹಿಂಬಾಲಿಸುತ್ತಿರಬಹುದು. ಗಂಡಸರು ಹೇಗೆಂದು ನಿಮಗೆ ಗೊತ್ತು ತಾನೆ? ಹೆಂಗಸರಿಂದ ಸ್ವಲ್ಪ ಗಮನ ಸಿಕ್ಕರೂ ಸಾಕು ಅವರಿಗೆ. ಆದರೆ ನನಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನಾನು ಇದನ್ನು ಸಹಿಸಲಾರೆ' ಎಂದು ಸುನಂದಾ ಹೇಳಿಕೆ ನೀಡಿದ್ದರು.
ಹಿರಿಯ ಪತ್ರಕರ್ತೆ ನಳಿನಿ ಸಿಂಗ್ ಬಳಿ ಮಾತನಾಡುವ ಸಲುವಾಗಿ ಸುನಂದಾ ಕರೆ ಮಾಡಿ ಬಿಕ್ಕಿ-ಬಿಕ್ಕಿ ಅತ್ತರಂತೆ. ಬಹಳಷ್ಟು ಗಾಬರಿಗೊಂಡಿದ್ದ ಸುನಂದಾ ಸಿಂಗ್ ಬಳಿ ಸಹಾಯ ಕೇಳಿದ್ದರು. ಅಂದು ಜ. 17, ಸಮಯ ಮಧ್ಯರಾತ್ರಿ 12:10. ತನ್ನ ಬ್ಲ್ಯಾಕ್‌ಬೆರಿ ಮೆಸೆಂಜರ್‌ನಲ್ಲಿದ್ದ ಎಲ್ಲಾ ಸಂದೇಶಗಳನ್ನು ತರೂರ್ ಆಳಿಸಿ ಹಾಕಿರುವುದಾಗಿ ಸುನಂದಾ, ಸಿಂಗ್ ಬಳಿ ಹೇಳಿಕೊಂಡರು. ಆಗಲೂ ಟ್ವಿಟರ್‌ನಲ್ಲಿ ನಡೆಯುತ್ತಿದ್ದ ಸಮರದಿಂದ ಬೇಸರಗೊಂಡಿರಬಹುದು ಎಂದು ಸಿಂಗ್ ಭಾವಿಸಿದ್ದರು. ಸಿಂಗ್ ಮಾಧ್ಯಮಕ್ಕೆ ಸೇರಿದ್ದವರಾದರಿಂದ ಆ ಸಂದೇಶಗಳನ್ನು ಮರಳಿ ಪಡೆಯಲು ಹೇಗಾದರೂ ಸಹಾಯ ಮಾಡುವಂತೆ ಸುನಂದಾ ವಿನಂತಿಸಿದ್ದರು. ಆದರೆ, ಕೆಲವೇ ಗಂಟೆಗಳ ಬಳಿಕ ಸುನಂದಾ ತಾವು ತಂಗಿದ್ದ ಹೊಟೆಲ್‌ನಲ್ಲಿ ಶವವಾಗಿ ಪತ್ತೆಯಾದರು!
ಮದುವೆಯಾಗಿ 3 ವರ್ಷಗಳ ಒಳಗೆ ವಧು ಮೃತಪಟ್ಟರೆ, ವರದಕ್ಷಿಣೆ ಕಿರುಕುಳ ಎಂದು ಶಂಕಿಸಲಾಗುತ್ತದೆ. ಅಷ್ಟೆ ಅಲ್ಲ, ಮೊದಲ ಆರೋಪಿ ಹೆಚ್ಚಾಗಿ ವರನೇ ಆಗಿರುತ್ತಾನೆ. ಆದರೆ ಇಲ್ಲಿ, ಶಶಿ ತರೂರ್ ಮೇಲೆ ಕರುಣೆ ತೋರಿಸಲಾಯಿತು ಹೊರತು, ಅವರನ್ನು ಆರೋಪಿ ಎಂಬ ದೃಷ್ಟಿಯಲ್ಲಿ ನೋಡಲೇ ಇಲ್ಲ. ಸುನಂದಾ ಪುತ್ರ ಕೂಡ ತರೂರ್ ಬಗ್ಗೆ ಸಂದೇಹವಿಲ್ಲ ಎಂಬ ಹೇಳಿಕೆ ನೀಡಿದ್ದರಿಂದ ತರೂರ್ ಗೊಂದಲದಿಂದ ಪಾರಾದರು. ಆದರೀಗ ಮತ್ತೇ ಸುನಂದಾ ಸಾವಿನ ಬಗ್ಗೆ  ಸಂದೇಹ ಮೂಡಿದೆ. ಇದಕ್ಕೆ ಕಾರಣ ಎಐಐಎಂಎಸ್‌ನ ಫೊರೆನ್ಸಿಕ್ ಇಲಾಖೆಯ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಹಜ ಸಾವು ಎಂದು ಬರೆಯುವಂತೆ ಅವರ ಮೇಲೆ ತರೂರ್ ಮತ್ತು ಗುಲಾಂ ನಬಿ ಆಝಾದ್ ಒತ್ತಡ ಹೇರುತ್ತಿದ್ದರಂತೆ. ಸುನಂದಾ ದೇಹದಲ್ಲಿ ವಿಷಕಾರಿ ಪದಾರ್ಥ ಸಿಕ್ಕಿತ್ತು. ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಸುನಂದಾ ತನ್ನ ಔಷಧಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ ಆತ್ಮಹತ್ಯೆ ಮಾಡಿರಬಹುದು ಅಥವಾ ಬೇರೆ ಯಾರೋ ಅವರಿಗೆ ಆ ಔಷಧಿಯನ್ನು ತಿನ್ನಿಸಿ ಅವರನ್ನು ಹತ್ಯೆಗೈದಿರಬಹುದು ಎಂದು ಗುಪ್ತಾ ಹೇಳಿದ್ದಾರೆ. ತಮ್ಮ ಹೇಳಿಕೆ ನಿಜವೆಂದು ಸಾಬೀತು ಪಡಿಸಲು ಗುಪ್ತಾ ತರೂರ್ ಕಳುಹಿಸಿದ್ದ ಈಮೇಲ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸಲ್ಲಿಸಿದ್ದಾರೆ.
ಈಗ ಮೂಡುವ ಪ್ರಶ್ನೆ ಎಂದರೆ, ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪ್ರಕರಣವನ್ನು ಮುಚ್ಚಿ ಹಾಕಲು ಎತ್ನಿಸಿತ್ತೇ? ಹೌದೆಂದಾರೆ, ಏಕೆ? ಸುನಂದಾ ಬಳಿ ಕಾಂಗ್ರೆಸ್ ಭವಿಷ್ಯ ಹಾಳು ಮಾಡುವಂತಹ ಮಾಹಿತಿ ಇತ್ತೇ? ಅಂದು ಬಾಯಿ ಬಿಡದ ಗುಪ್ತಾ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಏಕೆ ಈ ಸತ್ಯವನ್ನು ಹೊರ ಹಾಕಿದರು? ಅದು ಕೂಡ, ತಮ್ಮ ವಿರುದ್ಧ ನಕಲು ಮತ್ತು ಕೆಟ್ಟ ನಡವಳಿಕೆ ದೂರುಗಳು ದಾಖಲಾದಾಗ ತಮ್ಮನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿದ್ದಾರಾ ಗುಪ್ತಾ? ಅಥವಾ ಒತ್ತಡಕ್ಕೆ ಬಗ್ಗಲು ನಿರಾಕರಿಸಿದ್ದಕ್ಕೆ ಇವರನ್ನು ಗುರಿ ಮಾಡಲಾಗುತ್ತಿದೆಯೇ?
ಸುನಂದಾ ಸಾವಿನ ಹಿಂದೆ ಮೆಹೆರ್ ಕೈವಾಡವಿತ್ತೇ? ಇಷ್ಟೆಲ್ಲ ಗೊಂದಲದ ನಡುವೆ ಬಿಜೆಪಿಯ ಸುಬ್ರಮಣ್ಯನ್ ಸ್ವಾಮಿ ಸ್ಫೋಟಕ ಸುದ್ದಿಯನ್ನು ಹೊರಹಾಕಿದ್ದಾರೆ. ಸುನಂದಾ ಅವರನ್ನು ಹತ್ಯೆ ಮಾಡಲಾಗಿತ್ತು. ಕೊಲೆಗಾರ ಯಾರೆಂಬುದು ತರೂರ್‌ಗೆ ಚೆನ್ನಾಗಿ ತಿಳಿದಿದೆ ಎಂದರು! ಸುಸಜ್ಜಿತವಾಗಿ ಸಂಚು ರೂಪಿಸಿ ಸುನಂದಾ ಅವರನ್ನು ಕೊಲ್ಲಲಾಗಿದೆ. ಆಕೆಯ ದೇಹದಿಂದ ರಷ್ಯನ್ ವಿಷ ಪತ್ತೆಯಾಗಿದ್ದು ಸಿಬಿಐ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಅಷ್ಟಕ್ಕೂ ಸುನಂದಾ ಅವರನ್ನು ಕೊಂದವರು ಯಾರು? ಮತ್ತು ಕೊಲ್ಲಲು ಕಾರಣವಾದರೂ ಏನು?
ಸ್ವಾಮಿ ಪ್ರಕಾರ ಐಪಿಎಲ್‌ನಲ್ಲಿ ಭಾರಿ ಮೊತ್ತದ ಹಣ ಅವ್ಯವಹಾರ ನಡೆದಿದೆ. ಇದರ ಬಗ್ಗೆ ಸುನಂದಾ ಬಳಿ ಸಂಪೂರ್ಣ ಮಾಹಿತಿ ಇತ್ತು. ಅವ್ಯವಹಾರದ ಬಗ್ಗೆ ಬಾಯಿ ಬಿಡುವುದಾಗಿ ಸುನಂದಾ ಬೆದರಿಸಿದ್ದ ಕಾರಣ, ರಾಬರ್ಟ್ ವಾದ್ರಾ ಹೆಸರು ಎಲ್ಲಿ ಹೊರ ಬರುತ್ತದೋ ಎಂದು ಗಾಬರಿಗೊಂಡವರು ಸುನಂದಾ ಅವರನ್ನು ಮುಗಿಸಿದ್ದಾರೆ. ಅಸಹಜ ಸಾವು ಮತ್ತು ದೇಹದೆಲ್ಲೆಡೆ ಗಾಯಗಳಿದ್ದರೂ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಹಜ ಸಾವೆಂದು ಬರೆಸಲಾಗಿದೆ ಎಂದು ಸ್ವಾಮಿ ಹೇಳಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಡಾ. ಸುಧೀರ್ ಗುಪ್ತಾ ವರದಿ ಬದಲಿಸಲು ತಮ್ಮ ಮೇಲೆ ಒತ್ತಡವಿತ್ತು ಎಂದೂ ಹೇಳಿದ್ದಾರೆ. ಶಶಿ ತರೂರ್ ತನ್ನು ಪತ್ನಿಯನ್ನು ಕೊಂದಿಲ್ಲ. ಆದರೆ ಯಾರು, ಏಕೆ ಕೊಲೆ ಮಾಡಿದರು ಎಂಬುದು ತರೂರ್‌ಗೆ ತಿಳಿದಿದೆ ಎಂದು ಸ್ವಾಮಿ ಹೇಳುತ್ತಲೇ ಇದ್ದಾರೆ. ಇವುಗಳ ಮಧ್ಯೆ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಎಐಐಎಂಎಸ್‌ನಂತಹ ಪ್ರತಿಷ್ಠಿತ ಸಂಸ್ಥೆಯ ವೈದ್ಯರು ಒತ್ತಡಕ್ಕೆ ಒಳಗಾಗಿ ಸುಳ್ಳು ವರದಿ ನೀಡಬೇಕಾಗುತ್ತದೆ ಎಂದರೆ ಭ್ರಷ್ಟ, ಕಪಟ ರಾಜಕಾರಣಿಗಳು ಅದೆಷ್ಟು ಬಲಶಾಲಿ ಇರಬೇಕು! ಶ್ರೀಸಾಮಾನ್ಯ ಇವರನ್ನು ಎದುರು ಹಾಕಿಕೊಂಡರೆ, ಎಲ್ಲಿಯ ನ್ಯಾಯ? ಎಲ್ಲಿಯ ನೀತಿ? ದುಡ್ಡು- ಅಧಿಕಾರ ಮತ್ತು ಸಂಪರ್ಕ ಉಳ್ಳವನು ಯಾರನ್ನು ಹೇಗೆ ಬೇಕಾದರೂ ಆಡಿಸಬಲ್ಲ ಎಂಬ ಆಲೋಚನೆ ಉಂಟಾಗುತ್ತದೆ.
ತನಿಖೆ ಸರಿಯಾದ ರೀತಿಯಲ್ಲಿ ನಡೆದರೆ ಸುನಂದಾ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಹತ್ಯೆಗೆ ಒಳಗಾದರೊ ಎಂಬುದು ಗೊತ್ತಾಗಲಿದೆ. ಹತ್ಯೆ ಎಂದಾದಲ್ಲಿ ಯಾರು ಕೊಂದರು, ಏಕೆ ಕೊಂದರು ಎಂಬುದರ ಬಗ್ಗೆ ಮತ್ತೆ ತನಿಖೆಯಾಗಬೇಕಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವೂ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಗುಟ್ಟು, ಗುಟ್ಟಾಗಿಯೇ ಉಳಿಯುತ್ತದೆ, ದುಡ್ಡು ಆಟವಾಡಿಸುತ್ತಲೇ ಇರುತ್ತದೆ.

-ಅದಿತಿಮಾನಸ. ಟಿ. ಎಸ್
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement