ಅಂಕಣಗಳು

ಪಾತಕವೆಸಗಿ ದೇವನ ನೆನೆದರೆ ಸೂತಕ ಕಳೆದೀತೇ?

ಕಾನೂನು ಎಂಬುದು ಎಲ್ಲರಿಗೂ ಒಂದೇ. ಜನಸಾಮಾನ್ಯರಿಗೆ ಒಂದು, ಜನಪ್ರತಿನಿಧಿ...

ಕಾನೂನು ಎಂಬುದು ಎಲ್ಲರಿಗೂ ಒಂದೇ. ಜನಸಾಮಾನ್ಯರಿಗೆ ಒಂದು, ಜನಪ್ರತಿನಿಧಿಗಳಿಗೆ ಮತ್ತೊಂದು ಎಂಬುದಾಗಿ ಇರುವುದಿಲ್ಲ. ಯಾರು ಮಾಡಿದರೂ ತಪ್ಪು ತಪ್ಪೇ. ತಪ್ಪು ಮಾಡಿದ ಮೇಲೆ ಅದರ ಪ್ರತಿಫಲ ಉಣ್ಣಲೇಬೇಕು. ನಾನು ಜನಪ್ರತಿನಿಧಿ. ಹೀಗಾಗಿ ನನಗೆ ಕಾನೂನು ಅನ್ವಯವಾಗುವುದಿಲ್ಲ ಎಂದು ಪಲಾಯನ ಮಾಡಲು ಸಾಧ್ಯವಿಲ್ಲ.
ಇಷ್ಟೆಲ್ಲ ಪೀಠಿಕೆಗೆ ಕಾರಣ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತವರ ಬೆಂಬಲಿಗರು ಬೆಂಗಳೂರು ಪಬ್ನಲ್ಲಿ ನಡೆಸಿರುವ ದಾಂಧಲೆ. ತಪ್ಪು ಮಾಡಿ ಜನಪ್ರತಿನಿಧಿ ಎಂಬ ಲೇಬಲ್ ಅಡಿ ಬಚಾವಾಗಲು ಒಳಾಟ ಆಡಿದರೆ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಕಾಶಪ್ಪನವರ್ ಪ್ರಕರಣ ಸಿದ್ದರಾಮಯ್ಯನವರ ಸರ್ಕಾರಕ್ಕೆ ಉಂಟು ಮಾಡಿರುವ ಮುಜುಗರವೇ ಸಾಕ್ಷಿ.
ಜನಪ್ರತಿನಿಧಿ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ. ಆ ರೀತಿ ಮಾಡಿ ಜಯಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ಹಿಂದೆ ನಡೆದಿರುವ ಅನೇಕ ಪ್ರಕರಣಗಳು ನಿರೂಪಿಸಿವೆ. ಮಂತ್ರಿ-ಶಾಸಕರ ಸ್ಥಾನದಿಂದ ತಪ್ಪು ಮಾಡಿ ಅಧಿಕಾರ ಕಳೆದುಕೊಂಡವರು ಇದ್ದಾರೆ. ಜೈಲಿಗೆ ಹೋದವರೂ ಇದ್ದಾರೆ. ಜನಮಾನಸದಲ್ಲಿ ಶಾಶ್ವತವಾಗಿ ಸ್ಥಾನ ಕಳೆದುಕೊಂಡವರಿದ್ದಾರೆ. ಆದರೆ, ಒಬ್ಬ ಶಾಸಕನಾಗಿ, ಶಾಸನಸಭೆಯೇ ರೂಪಿಸಿದ ನಿಯಮವನ್ನು ಮುರಿದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಬೊಂಬಡ ಬಾರಿಸುತ್ತಿರುವುದು ಹುಂಬತನದ ಪರಮಾವಧಿಯೇ ಸರಿ.
ರಾತ್ರಿ ಹನ್ನೊಂದು ಗಂಟೆಯ ನಂತರ ಪಂಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ತೆರೆಯುವಂತಿಲ್ಲ. ಅಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಮದ್ಯಪಾನ ಮಾಡುವಂತಿಲ್ಲ. ಒಂದೊಮ್ಮೆ ಮದ್ಯ ಮಾರಾಟ ಮಾಡುವುದಾಗಲಿ, ಸೇವನೆ ಮಾಡುವುದಾಗಲಿ ನಿಯಮ ಬಾಹಿರ. ಇದು ಶಾಸನ ಸಭೆಯೇ ರೂಪಿಸಿದ ನಿಯಮ. ಈ ಕಾಶಪ್ಪನವರ್ ಇದೇ ಶಾಸನಸಭೆಯ 'ಗೌರವಾನ್ವಿತ' ಸದಸ್ಯರು. ಅವರ ಪ್ರತಿನಿಧಿತ್ವ ಇರುವ ಶಾಸನಸಭೆ ರೂಪಿಸಿದ ನಿಯಮವನ್ನು ಅವರೇ ಮುರಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ? ಆ ದಿನ ಅವರು ಮಾಡಿರುವ ತಪ್ಪು ಒಂದೇ ಎರಡೇ..? ಮೊದಲಿಗೆ ಅವಧಿ ಮುಗಿದ ನಂತರ ಮದ್ಯ ನೀಡಲು ಒತ್ತಡ ಹಾಕಿದ್ದಾರೆ. ನಂತರ ಕುಡಿದ ಬಿಲ್ನಲ್ಲಿ 'ಸಬ್ಸಿಡಿ' ಕೇಳಿದ್ದಾರೆ. ಅಂದರೆ ರಿಯಾಯ್ತಿ ಕೇಳಿದ್ದಾರೆ. ಎರಡೂ ಸಾಧ್ಯವಿಲ್ಲ ಎಂದ ಪಬ್ನವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಮೇಲಾಗಿ ಕರ್ತವ್ಯ ನಿರ್ವಹಿಸಲು ಬಂದ ಪೊಲೀಸರ ಮೇಲೇಯೇ ಕೈ ಮಾಡಿದ್ದಾರೆ. ಅವರ ದುಂಡಾವರ್ತನೆಯನ್ನು ಸೆರೆ ಹಿಡಿಯಲು ಬಳಸಿದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇವೆಲ್ಲವೂ ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧವೇ. ಆಗ ಮಾಡಬಾರದ್ದನ್ನೆಲ್ಲ ಮಾಡಿ ಈಗ ಏನೂ ಆಗಿಯೇ ಇಲ್ಲವೆಂಬಂತೆ ವರ್ತಿಸುತ್ತಿರುವ ಶಾಸಕರನ್ನು ಜನಸಾಮಾನ್ಯರು 'ಮಾದರಿ' ಮಾಡಿಕೊಂಡರೆ ಕಾನೂನಿನ ಗತಿಯೇನು? ಕಾನೂನು ಪಾಲಕರ ಸ್ಥಿತಿಯೇನು? ಈಗ ಕಾಶಪ್ಪನವರ್ ಆಣೆ ಪ್ರಮಾಣ ಮಾಡುತ್ತಿರುವ ಆ ಸಂಗಮನೇ ಹೇಳಬೇಕು!
ಅದು ಯಾವುದೇ ಸರ್ಕಾರ ಇರಲಿ. ಬಿಜೆಪಿ ಸರ್ಕಾರವೇ ಆಗಿರಲಿ, ಕಾಂಗ್ರೆಸ್ ಸರ್ಕಾರವೇ ಆಗಿರಲಿ, ಜೆಡಿಎಸ್ದ್ದೇ ಆಗಿರಲಿ ಅಥವಾ ಬೆರಕೆ ಸರ್ಕಾರವೇ ಇರಲಿ ತನ್ನ ಪ್ರತಿನಿಧಿ ಮಾಡಿದ 'ಬೆರಕೆ' ಕೆಲಸವನ್ನು ಸಮರ್ಥನೆ ಮಾಡಿಕೊಂಡ ಕಾರಣಕ್ಕೆ ಪುಂಡನೊಬ್ಬ ಸಾಧುವಾಗಿ ಹೊರಹೊಮ್ಮಲು ಸಾಧ್ಯವಿಲ್ಲ. ಇದರಿಂದ ಸರ್ಕಾರಕ್ಕೂ ಗೌರವ ಬರುವುದಿಲ್ಲ. ಆಡಳಿತ ಪಕ್ಷದ ಸದಸ್ಯ ಎಂಬ ಕಾರಣಕ್ಕೆ ಸಿದ್ದರಾಮಯ್ಯನವರು ಮತ್ತು ಅವರ ಸರ್ಕಾರ ಕಾಶಪ್ಪನವರ್ ಅವರನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಶೀಲ ಆಗಿರುವುದು ಸರಿಯಲ್ಲ. ಹಾಗೆ ಸಮರ್ಥನೆ ಮಾಡಿಕೊಳ್ಳಲು ಕಾಶಪ್ಪನವರ್ 'ಮಹಾಪುರುಷ'ರೂ ಅಲ್ಲ. ಇಂಥ ಶಾಸಕರನ್ನು ಸಮರ್ಥಿಸಿಕೊಳ್ಳುವ ಯಾವುದೇ ದರ್ದು ಸಿದ್ದರಾಮಯ್ಯ ಅವರಿಗೂ ಇಲ್ಲ. ಕಾಶಪ್ಪನವರ್ ಏನು, ಎತ್ತ ಎಂಬುದು ಅವರ ಕ್ಷೇತ್ರದಲ್ಲಿ ಒಮ್ಮೆ ಇಣುಕಿದ ಯಾವುದೇ ಕಣ್ಣುಗಳಿಗೂ ಗೋಚರವಾಗುತ್ತದೆ. ಆ ದೃಷ್ಟಿಯಲ್ಲಿ ದೋಷವಿಲ್ಲದಿದ್ದರೆ ಮಾತ್ರ!
ಗ್ರಾನೈಟ್ ಮತ್ತು ಮರಳು ಮಾಫಿಯಾ ಬಳ್ಳಾರಿ ಗಣಿ ದರ್ಬಾರನ್ನೂ ಹಿಂದಿಕ್ಕುವ ಇಲಕಲ್ ಕೇಂದ್ರಿಕೃತ ಹುನಗುಂದ ಸುತ್ತಮುತ್ತ ವಿಜಯಾನಂದ ಕಾಶಪ್ಪನವರ್ ಅವರದೇ 'ಕಪ್ಪು ಸಾಮ್ರಾಜ್ಯ'. ಒಂದು ಕಾಲದಲ್ಲಿ ಜನಾರ್ದನ ರೆಡ್ಡಿ ಬಳಗ ಕಟ್ಟಿದ್ದ 'ರಿಪಬ್ಲಿಕ್ ಆಫ್ ಬಳ್ಳಾರಿ' ಅಂತೆಯೇ ಕಾಶಪ್ಪನವರ್ ಬಳಗದ 'ರಿಪಬ್ಲಿಕ್ ಆಫ್ ಹುನಗುಂದ' ನಿರ್ಮಾಣವಾಗಿದೆ. ಗ್ರಾನೈಟ್ ಮತ್ತು ಮರಳು ಲಾಬಿ ಇವರ ಕೈಯಲ್ಲಿ ನಲುಗುತ್ತಿದೆ. ಗ್ರಾನೈಟ್ ಮತ್ತು ಮರಳು ಲೂಟಿ ನಡೆದಿದೆ. ಕಾಶಪ್ಪನವರ್ ಪುಂಡಾಟಿಕೆಗೆ ಅಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಮಾನ, ಪ್ರಾಣ ಹಾನಿ ಭೀತಿಯಿಂದ ಮಾತು ಕಳೆದುಕೊಂಡಿದ್ದಾರೆ. ಕಾಶಪ್ಪನವರ್ಗೆ ಬೆಂಗಳೂರಿನ ಸ್ಕೈ ಬಾರ್ ದಾಂಧಲೆಯೇ ಮೊದಲಲ್ಲ. ಅವರ ಬಳಗ ಸ್ಥಳೀಯವಾಗಿ ನಡೆಸಿರುವ ದಾದಾಗಿರಿಗೆ ಅವರ ವಿರುದ್ಧ ನಾನಾ ಠಾಣೆಗಳಲ್ಲಿ ದಾಖಲಾಗಿರುವ ಹದಿನಾಲ್ಕು ಪ್ರಕರಣಗಳೇ ಸಾಕ್ಷಿ. ಈ ಪೈಕಿ ನಾಲ್ಕು ಪ್ರಕರಣಗಳು ವಜಾ ಆಗಿವೆ. ಆರು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ. ನಾಲ್ಕು ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ. ಹಣ ಮತ್ತು ಪ್ರಭಾವದಿಂದ ಏನು ಬೇಕಾದರೂ ಮಾಡಬಲ್ಲೇ ಎಂಬ ಹಮ್ಮು ಕೂಡ ಅವರಲ್ಲಿ ಹಾಗೇ ಮನೆ ಮಾಡಿದೆ. ಇವರ ಹಮ್ಮಿಗೆ ಒಂದು ಸಣ್ಣ ಉದಾಹರಣೆ. ರಾಜ್ಯಸಭೆ ಸದಸ್ಯೆ, ರಂಗಕರ್ಮಿ ಬಿ.ಜಯಶ್ರೀ ಒಮ್ಮೆ ಇಳಕಲ್ ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳಲು ಕೊಠಡಿ ಕಾಯ್ದಿರಿಸಿದ್ದರು. ವಿಜಯಾನಂದ ಸಹೋದರ ದೇವಾನಂದ ಕಾಶಪ್ಪನವರ್ ಇಳಕಲ್ ಪುರಸಭೆ ಅಧ್ಯಕ್ಷ. ಜಯಶ್ರೀ ಅವರು ಕಾಯ್ದಿರಿಸಿದ್ದ ಕೊಠಡಿಯಲ್ಲಿ ಉಳಿದುಕೊಂಡಿದ್ದ ದೇವಾನಂದ ಅವಧಿ ಮೀರಿದರೂ ಖಾಲಿ ಮಾಡಿ ಕೊಟ್ಟಿರಲಿಲ್ಲ. ಮನವಿ ಮಾಡಿದರೂ ಕೇರ್ ಮಾಡದೇ ಜಯಶ್ರೀ ಅವರಿಗೆ ಅವಮಾನ ಮಾಡಿದ್ದರು. ಜಯಶ್ರೀ ಅವರ ಹಿರಿತನ, ಹುದ್ದೆಗೂ ಬೆಲೆ ಕೊಟ್ಟಿರಲಿಲ್ಲ. ಅಣ್ಣನ ಪ್ರಭಾವ ತಮ್ಮನ ಪೌರುಷಕ್ಕೆ ಕಾರಣ.
ಇಂಥ 'ಸಚ್ಚಾರಿತ್ರ್ಯ' ಹಿನ್ನೆಲೆಯ ವಿಜಯಾನಂದ ಅವರನ್ನು ಸಮರ್ಥಿಸಿಕೊಳ್ಳುವ ಮೊದಲು ಸರ್ಕಾರ ಯೋಚಿಸಬೇಕಿತ್ತು ಹಾಗೂ ಯೋಚಿಸಬೇಕಿದೆ. ಈಗಾಗಲೇ ವಿಜಯಾನಂದ ಪ್ರಕರಣ ವಿಧಾನಮಂಡಲದ ಉಭಯ ಸದನಗಳ ಕಳೆದ ವಾರದ ಬಹುತೇಕ ಕಲಾಪವನ್ನು ನುಂಗಿ ಹಾಕಿದೆ. ಒಂದೊಮ್ಮೆ ಇದೇ ಕಾಶಪ್ಪನವರ್ ಪ್ರತಿಪಕ್ಷ ಬಿಜೆಪಿ ಅಥವಾ ಜೆಡಿಎಸ್ ಸದಸ್ಯರಾಗಿದ್ದರೆ ಸರ್ಕಾರ ಇದೇ ರೀತಿ ಸಮರ್ಥಿಸಿಕೊಳ್ಳುತ್ತಿತ್ತೇ? ರತ್ನಗಂಬಳಿ ಹಾಸಿ ವಿಧಾನಸಭೆಗೆ ಕರೆಯುತ್ತಿತ್ತೇ?
ನಿಜ. ಪ್ರಕರಣ ನಡೆದ ದಿನವೇ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ ಎಂಬ ಸಮರ್ಥನೆಯನ್ನು ಸರ್ಕಾರ ಕೊಡುತ್ತಿದೆ. ಆದರೆ ಅಂದು ನಡೆದ ಘಟನೆಗಳು ಆಕರ್ಷಿಸುವ ಐಪಿಸಿ ಸೆಕ್ಷನ್ಗಳಿಗೂ ಈಗ ದಾಖಲಿಸಿರುವ ಸೆಕ್ಷನ್ಗಳ ನಡುವೆ ವ್ಯತ್ಯಾಸವಿದೆ ಎಂಬ ಆಪಾದನೆ ಕೇಳಿ ಬಂದಿದೆ. ಪೊಲೀಸರ ಮೇಲೆ ಹಲ್ಲೆ ಮತ್ತು ದಾಂಧಲೆ ಪ್ರಕರಣಗಳನ್ನು ದುರ್ಬಲಗೊಳಿಸಲು ಪೊಲೀಸ್ ಅಧಿಕಾರಿಗಳ ಮೇಲೇಯೇ ಒತ್ತಡ ಹೇರಲಾಗುತ್ತಿದೆ ಎಂಬ ಮಾತೂ ಇದೆ. ಸಿದ್ದರಾಮಯ್ಯ ಉಭಯ ಸಂಕಟದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಆಡಳಿತ ಪಕ್ಷದ ಸದಸ್ಯನನ್ನು ಬಿಟ್ಟು ಕೊಡುವಂತಿಲ್ಲ. ಇನ್ನೊಂದೆಡೆ ಪ್ರತಿಪಕ್ಷಗಳ ವಾಗ್ಬಾಣಗಳನ್ನು ಎದುರಿಸುವಂತಿಲ್ಲ. ಆದರೆ, ಇಲ್ಲಿ ಒಂದು ಮಾತು ಸತ್ಯ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಪ್ರತಿಷ್ಠೆಯ ಹೋರಾಟಕ್ಕಿಂತ ಈ ನೆಲದ ಕಾನೂನು ದೊಡ್ಡದು. ಅದರ ಮುಂದೆ ಆಡಳಿತ ಪಕ್ಷವೂ ಇಲ್ಲ, ಪ್ರತಿಪಕ್ಷವೂ ಇಲ್ಲ. ಒಂದೊಮ್ಮೆ ಕಾನೂನಿಗಿಂತ ಜನಪ್ರತಿನಿಧಿಗಳೇ ದೊಡ್ಡವರು ಎಂದಾಗಿ ಬಿಟ್ಟರೆ ನಾಳೆ ಇದೇ ವಿಜಯಾನಂದ ಕಾಶಪ್ಪನವರ್ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಕಚೇರಿಯನ್ನೇ ಬಾರ್ ಮಾಡಿಕೊಳ್ಳುತ್ತಾರೆ. ಪೊಲೀಸರಿಂದಲೇ ಮದ್ಯ ತರಿಸಿಕೊಂಡು ಅಹೋರಾತ್ರಿ ಪಾರ್ಟಿ ನಡೆಸುತ್ತಾರೆ ಅಷ್ಟೇ!
ವಾಸ್ತವವಾಗಿ ಈ ಪ್ರಕರಣ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪವಾದ ಕ್ಷಣವೇ ಸರ್ಕಾರ ಉತ್ತರ ಕೊಟ್ಟು ನಿವಾರಿಸಿಕೊಳ್ಳಬಹುದಿತ್ತು. ಒಂದರೆ, ಒಂದು ದಿನದ ನಂತರ ಉತ್ತರ ಕೊಡುವುದಾಗಿ ಹೇಳಿ ಅನಗತ್ಯ ಕುತೂಹಲ ಮತ್ತು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತು. ಆದರೆ, ಮರುದಿನ ಕೂಡ ಉತ್ತರ ನೀಡಲು ಸತಾಯಿಸಿದಾಗ ಹಗ್ಗಜಗ್ಗಾಟ ನಡೆದು ಪ್ರಕರಣದ ಚರ್ಚೆ ವಿಪರೀತ ಮಹತ್ವ ಪಡೆದುಕೊಂಡಿತು. ಸದನದ ಒಳಗೆ ಮತ್ತು ಹೊರಗೆ ಎಲ್ಲರ ಗಮನ ಕೇಂದ್ರೀಕರಿಸಿತು. ವಿಷಯ ಪ್ರಕೋಪಕ್ಕೆ ಹೋಗಲು ಬಿಟ್ಟ ಸರ್ಕಾರ 'ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ' ಎಂದು ಹೇಳುವಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ಪ್ರತಿಪಕ್ಷಗಳಿಗೆ ಆಹಾರ ಸಿಕ್ಕಿತ್ತು. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳ- ಹೇಳುತ್ತಲೇ ಮುಜುಗರದ ಬಲೆಗೆ ಸಿಕ್ಕಿಕೊಂಡಿತ್ತು. ಈ ಮಧ್ಯ ಕಾಶಪ್ಪನವರ್ 'ತಲೆಮರೆಸಿ'ಕೊಂಡಿದ್ದು ಪೇಚಿಗೆ ಸಿಲುಕಿಸಿತ್ತು.  ಈ ಪ್ರಕರಣಕ್ಕೆ ಸದನದ ಹೊರಗೆ ಉತ್ತರ ಕೊಡುವ ಭರದಲ್ಲಿ ಮುಖ್ಯಮಂತ್ರಿಗಳು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ ಅನೇಕ ಪ್ರಕರಣಗಳನ್ನು ಉದಾಹರಿಸಿದ್ದಾರೆ. ಸದನದಲ್ಲಿ ಶಾಸಕರ ಮೊಬೈಲ್ನಲ್ಲಿ ಬ್ಲ್ಯೂಫಿಲಂ ವೀಕ್ಷಣೆ, ಅತ್ಯಾಚಾರ, ಪತ್ನಿ ನಾಪತ್ತೆ ಮತ್ತಿತರ ಪ್ರಕರಣಗಳನ್ನು ಮುಂದೆ ಮಾಡಿದ್ದಾರೆ. ಆದರೆ, ಇಲ್ಲಿ ಒಂದು ಪ್ರಶ್ನೆ ಉದ್ಭವವಾಗುತ್ತದೆ. ಒಬ್ಬರ ತಪ್ಪಿಗೆ ಮತ್ತೊಬ್ಬರ ತಪ್ಪೇ ಉತ್ತರವಾಗುತ್ತದೆಯೇ? ಸಮರ್ಥನೆ ಆಗುತ್ತದೆಯೇ? ಒಂದು ಸರ್ಕಾರದ ತಪ್ಪಿನಿಂದ ಮತ್ತೊಂದು ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಸಾಧ್ಯವೇ? ಯಾವ ಸರ್ಕಾರದ ಅವಧಿಯಲ್ಲೇ ಆಗಲಿ ಯಾವುದೇ ಜನಪ್ರತಿನಿಧಿ ತಪ್ಪು ಮಾಡಲಿ ತಪ್ಪು ತಪ್ಪೇ! ಅದೆಂದಿಗೂ ಸಮರ್ಥನೆ ಆಗಲಿ, ಪರಿಹಾರವಾಗಲಿ ಆಗಲು ಸಾಧ್ಯವಿಲ್ಲ. ಕಾಶಪ್ಪನವರ್ ಅವರಂಥ ಪುಂಡ ಶಾಸಕರನ್ನು ರಕ್ಷಿಸಲು ಸಿದ್ದರಾಮಯ್ಯನವರು ತಮ್ಮ ಘನತೆಯನ್ನು ಪಣಕ್ಕಿಡುವುದು ಬೇಕಿಲ್ಲ. ಹುನಗುಂದ ಸುತ್ತಮುತ್ತ, ಕೊಪ್ಪಳದಲ್ಲಿ ಗ್ರಾನೈಟ್ ಹಾಗೂ ಮರಳು ಲಾಭಿಯಿಂದ ಬೆಳೆದ ಕಾಶಪ್ಪನವರ್ ಅವರಂಥ ಅನೇಕ ಕಾಂಗ್ರೆಸ್ ಶಾಸಕರಿದ್ದಾರೆ. ನಾಳೆ ಶಾಸಕರು ಕೂಡ ಕಾಶಪ್ಪನವರ್ ಅವರನ್ನು 'ಮಾದರಿ' ಮಾಡಿಕೊಂಡರೆ ರಾಜ್ಯ ಸರ್ಕಾರ 'ರಕ್ಷಣೆ ಅಭಿಯಾನ'ವನ್ನೇ ನಡೆಸಬೇಕಾಗುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ ತಮಾಷೆಯ ಸಂಗತಿ ಎಂದರೆ 'ತೀರ್ಥ ಗಲಾಟೆ' ಪ್ರಕರಣ ಮರುದಿನ ನಾಪತ್ತೆಯಾದ ಕಾಶಪ್ಪನವರ್ ಎರಡು ದಿನಗಳ ಹಿಂದೆ ಕಾಣಿಸಿಕೊಂಡು 'ತೀರ್ಥಯಾತ್ರೆ'ಯ ಕಥೆ ಹೇಳುತ್ತಿರುವುದು. ಈ ಜನಪ್ರತಿನಿಧಿಗಳು, ಮತ್ತಿತರ ಗಣ್ಯರಿಗೆ ಇಂಥ ಯಾವುದೇ ಅನಪೇಕ್ಷಿತ ಘಟನೆಗಳು ನಡೆದಾಗ ಒಂದೋ 'ದೇವರ' ನೆನಪಾಗುತ್ತದೆ, ಇಲ್ಲವೇ ಆರೋಗ್ಯ ಹದಗೆಟ್ಟು ಆಸ್ಪತ್ರೆ ಕೈ ಬೀಸಿ ಕರೆಯುತ್ತದೆ. ಈಗ ಅವರ ಸಂಗಮನ ಮೇಲೆ ಆಣೆ ಇಟ್ಟು ಹೇಳುತ್ತಿದ್ದಾರೆ, ತಾವು ಕುಡಿಯುವುದೇ ಇಲ್ಲ ಎಂದು. ಆದರೆ, ಶಾಸಕರು ಕುಡಿಯುತ್ತಾರೋ ಇಲ್ಲವೋ ಎಂಬ ವಿಚಾರ ಅಲ್ಲ. ಅವರು ಕುಡಿಯುವುದು, ಬಿಡುವುದನ್ನು ಕಟ್ಟಿಕೊಂಡು ಯಾರಿಗೂ ಏನೂ ಆಗಬೇಕಿಲ್ಲ. ಆದರೆ, ಘಟನೆ ನಡೆದದ್ದು ಶಾಸಕರ ಸಮ್ಮುಖದಲ್ಲೇ. ಅವರ ಬೆಂಬಲಿಗರು ಶಾಸಕರ ಹೆಸರು ಹೇಳಿಕೊಂಡೇ ದಾಂಧಲೆ ನಡೆಸಿದ್ದಾರೆ. ಪೊಲೀಸರ ಮೇಲೆ ಕೈ ಮಾಡಿದ ಆರೋಪ ಶಾಸಕರ ಮೇಲೂ ಇದೆ. ಪೊಲೀಸರ ಮೊಬೈಲ್ ಕಿತ್ತುಕೊಂಡಿದ್ದು ರಾಬರಿಯೇ ಸರಿ. ಇಷ್ಟೆಲ್ಲ ಆಪಾದನೆಗಳಿಗೆ ಗುರಿ ಆಗಿರುವ ಶಾಸಕರು ಈಗ ತಾವು ಆಣೆ ಇಟ್ಟು ಹೇಳಿರುವ ಆ ಸಂಗಮನನ್ನೇ ಕೇಳಿ ನೋಡಲಿ. ತಾವು ಮಾಡಿರುವುದು ಸರಿಯೇ ಎಂದು.
ಲಗೋರಿ: ಎಲ್ಲಾ 'ಆನಂದ'ಗಳು 'ವಿಜಯ' ತರುವುದಿಲ್ಲ!


- ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!

ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ. ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ..!

ಸರ್ಕಾರದ ಬೊಕ್ಕಸಕ್ಕೆ ಕಿಕ್ ಕೊಟ್ಟ ಮದ್ಯ ಪ್ರಿಯರು: ಮಾರಾಟ ಶೇ.41ರಷ್ಟು ಹೆಚ್ಚಳ, ಅಬಕಾರಿ ಆದಾಯ ಭಾರೀ ಏರಿಕೆ..!