ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಿವೇಶನ: ಆಡಳಿತ ವ್ಯವಸ್ಥೆ ಹೊಣೆಯಿಂದ ನುಣಿಚಿಕೊಳ್ಳುವುದೇಕೆ?

ಮುಂಬೈನ ಕ್ಯಾಂಪಕೋಲ ವಸತಿಸಮುಚ್ಛಯದಲ್ಲಿ ವಾಸಿಸುತ್ತಿರುವವರನ್ನು ತೆರವುಗೊಳಿಸುತ್ತಿರುವ..

Srinivasa Murthy VN
Updated On : 9 Jul 2014, 11:58 am

ಮುಂಬೈನ ಕ್ಯಾಂಪಕೋಲ ವಸತಿಸಮುಚ್ಛಯದಲ್ಲಿ ವಾಸಿಸುತ್ತಿರುವವರನ್ನು ತೆರವುಗೊಳಿಸುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಇತ್ತೀಚೆಗೆ ಭಿತ್ತರವಾದಾಗ ಆತಂಕ ಎನಿಸಿತ್ತು. ಏಕೆಂದರೆ ಅದು ಸೂಕ್ತ ಪರವಾನಗಿಯೊಂದಿಗೆ ಕಟ್ಟಿದ್ದಲ್ಲ ಎಂಬ ಕಾರಣಕ್ಕೆ ತಮ್ಮ ಉಳಿತಾಯದ ಹಣದಲ್ಲಿ ಕಷ್ಟದಿಂದ ನಿವೇಶನ ಖರೀದಿಸಿದ್ದವರು ಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ಬಿಲ್ಡರ್‌ಗಳು, ಅಷ್ಟುದಿನ ಕಣ್ಣುಮುಚ್ಚಿಕೊಂಡಿದ್ದ ಸ್ಥಳೀಯ ಆಡಳಿತ ಇವೆಲ್ಲ ಪ್ರಶ್ನೆಗೊಳಗಾಗುತ್ತಿಲ್ಲವೇಕೆ ಎಂಬ ಆಕ್ರೋಶ ಕಾಡಿತ್ತು.
ಅದೇನೇ ಇರಲಿ, ನಿವೇಶನಗಳ ವಿಷಯದಲ್ಲಿ ತುಂಬ ಎಚ್ಚರಿಕೆಯಿಂದಿರಬೇಕು ಹಾಗೂ ವ್ಯವಸ್ಥೆಯನ್ನು ಪ್ರಶ್ನಿಸುವ ವಿವೇಚನೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಆ ಪ್ರಕರಣದಿಂದ ಮನದಟ್ಟಾಗಿದೆ. ಹೀಗೆ ಎಚ್ಚರಿಕೆಯಿಂದ ಇರುವ ಮಾತು ಬಂದಾಗ ನನ್ನ ಅರಿವಿಗೆ ಬಂದಿರುವ ಆತಂಕಿತ ವಿದ್ಯಮಾನವನ್ನು ಇಲ್ಲಿ ದಾಖಲಿಸಬೇಕಿದೆ.
ಮೈಸೂರಿನ ಕೆಲವೊಂದು ಸೊಸೈಟಿ ನಿವೇಶನಗಳಲ್ಲಿ ಕೆಲ ಸಮಾಜಘಾತುಕ ಶಕ್ತಿಗಳು ಮೂಲ ನಿವೇಶನದ ಮಾಲೀಕರೊಡನೆ ನಿವೇಶನ ಖರೀದಿಸಿ ಒಳ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಅದನ್ನು ಭಂಡ ಧೈರ್ಯದಲ್ಲಿ ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳದೆಯೆ ಹಾಗೇ ಬಿಟ್ಟುಕೊಂಡು, ಅದೇ ಮೂಲ ನಿವೇಶನದ ಮಾಲೀಕರ ಹೆಸರಲ್ಲಿ ಕಟ್ಟಡ ನಿರ್ಮಿಸುತ್ತಾರೆ. ಹೆಸರಿಗಷ್ಟೇ MUDA ಆದವರಲ್ಲಿ ನಕ್ಷೆಯ ಅನುಮೋದನೆ ಪಡೆದರೂ, ಅದನ್ನು ಸ್ವಲ್ಪವೂ ಪಾಲಿಸದೆಯೇ ಏಕಪಕ್ಷೀಯವಾಗಿ ಅನಧಿಕೃತ ಕಟ್ಟಡ ನಿರ್ಮಿಸುತ್ತಾರೆ. ಒಂದು ವೇಳೆ ಪಕ್ಕದ ಜಾಗದವರು ಅಲ್ಲಿ ಮನೆ ನಿರ್ಮಿಸದೆಯೇ ಬಿಟ್ಟಿದ್ದರೆ ಅಂದರೆ ನಿವೇಶನ ಖಾಲಿ ಇದ್ದ ಪಕ್ಷದಲ್ಲಿ, ಅಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳುತ್ತಾರೆ. ಆ ನಿವೇಶನದವನು ತನ್ನ ನಿವೇಶನವನ್ನು ನೋಡಲು ಬರುವುದರ ಒಳಗಾಗಿ ಪಕ್ಕದಲ್ಲಿ ತಾವು ಕಟ್ಟಡ ಕಟ್ಟಿ ಪೂರೈಸಿರುತ್ತಾರೆ. ಪಕ್ಕದ ಮನೆ ಕಟ್ಟದವನು ಈ ಅನಧಿಕೃತ ಒತ್ತುವರಿ ತೆರವುಗೊಳಿಸಿ ಎಂದರೆ, "ನೀವು ಮೊದಲೇ ತಕರಾರು ತೆಗೆಯಬೇಕಿತ್ತು. ಈಗ ಕಟ್ಟಡ ಪೂರ್ಣವಾಗಿದೆ. ಈಗ ಕೇಳಲು ಬಂದಿದ್ದೀರಿ" ಎನ್ನುತ್ತಾ ಎದುರಿನವನ ಮೇಲೆಯೇ ತಪ್ಪು ಹೊರಿಸಿ ತಮ್ಮ ಭಂಡತನವನ್ನು ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ನಿರಾತಂಕವಾಗಿ ಸಿ.ಆರ್. ಪಡೆದ ಬಿಲ್ಡರ್ ತನ್ನ ನಯವಾದ ಮಾತುಗಳಿಂದ, ಹೊರಗಿನ ಒಬ್ಬ ಹೊಸ ಗಿರಾಕಿಯನ್ನು ಹಿಡಿದು ತಂದು, ಅವನ ಹೆಸರಿಗೆ ಇಡೀ ನಿವೇಶನ ಆವರಿಸಿದ ಹೊಸ ಮನೆಯನ್ನು ಮಾರಾಟ ಮಾಡಿಸುತ್ತಾನೆ. ಒಟ್ಟಿನಲ್ಲಿ ಮುಂದೆ ನೆರೆಹೊರೆಯವರಾಗುವ ಇಬ್ಬರ ಮಧ್ಯೆ ವೃಥಾ ವ್ಯಾಜ್ಯ ತಂದಿಟ್ಟು, ತನ್ನ ಪಾಡಿಗೆ ತಾನು ದುಡ್ಡು ಎಣಿಸಿಕೊಂಡು ಜಾಗ ಖಾಲಿ ಮಾಡುವ ಪ್ರವೃತ್ತಿ ಶುರುವಾಗಿದೆ. ಇಲ್ಲಿ C MUDA ದವರಿಗಾಗಲೀ ಅಥವಾ ಸೊಸೈಟಿಯವರಿಗಾಗಲೀ ಸಂತ್ರಸ್ತ ನಿವೇಶನದವರು ಅನಧಿಕೃತ ಒತ್ತುವರಿ ತೆರವಿಗಾಗಿ ಕೋರಿದರೆ, "ಇದು ಉಲ್ಲಂಘನೆ ನಿಜ. ಆದರೆ ನಮಗೆ ತೆರವುಗೊಳಿಸುವ ಅಧಿಕಾರವಿಲ್ಲ, ಹಾಗಾಗಿ  ಇದರ ವಿಚಾರವಾಗಿ ಸೊಸೈಟಿಯವರನ್ನು ಕೇಳಿ ಎಂದು ಮೂಡಾದವರು ಮತ್ತು ಇನ್ನೊಂದೆಡೆ ಮೂಡಾದವರನ್ನು ಕೇಳಿ ಎಂದು ಸೊಸೈಟಿಯವರು ಬೊಟ್ಟು ಮಾಡಿ ತೋರಿಸುತ್ತಾರೆ. ಸಮಸ್ಯೆ ಬಗೆಹರಿಸದೆಯೇ ಇರುವ ಇಂಥ ವ್ಯವಸ್ಥೆಯ ಬಗ್ಗೆ ಹಲವಾರು ಅನುಮಾನಗಳು ಮೂಡುತ್ತವೆ.
ಇಂಥ ಸನ್ನಿವೇಶದಲ್ಲಿ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಅನಧಿಕೃತ ಒತ್ತುವರಿ ತೆರವುಗೊಳಿಸುವುದು ಯಾರ ಜವಾಬ್ದಾರಿ ಎಂದು ನಿರ್ಣಯಿಸಬೇಕು. ಸುತ್ತೋಲೆ ಹೊರಡಿಸಿ ಸಂಬಂಧಪಟ್ಟವರು ಈ ಸಂತ್ರಸ್ತರ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಕಟ್ಟಡವು ಅನುಮೋದಿತ ನಕ್ಷೆಯ ಪ್ರಕಾರ ಇಲ್ಲದಿದ್ದಲ್ಲಿ ತೆರವುಗೊಳಿಸುವಂತೆ ಕಟ್ಟುನಿಟ್ಟಾದ ಆದೇಶ ಆದೇಶ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತಾಗಬೇಕು.
ಹಾಗೆಯೇ, ಇಂಥ ಸನ್ನಿವೇಶಗಳಲ್ಲಿ ಸೊಸೈಟಿಯ ಆಡಳಿತ ಮಂಡಳಿ "ಒಮ್ಮೆ ನಿವೇಶನವನ್ನು ಹಂಚಿಕೆ ಮಾಡಿದ ಮೇಲೆ ತೀರಿತು. ಮಾಲೀಕತ್ವ ವರ್ಗಾವಣೆಯಾದ ನಂತರ, ಅಲ್ಲಿನ ಮಾಹಿತಿ ನಮ್ಮ ತನಕ ಬರುವ ವ್ಯವಸ್ಥೆಯಿಲ್ಲ. ಹಾಗಾಗೇ ನಿಮ್ಮ ನಿವೇಶನದ ಮಾಲೀಕರು ಯಾರೆಂದು ತಿಳಿದಿರಲಿಲ್ಲ. ತಿಳಿದಿದ್ದರೆ, ನಾವು ಖಂಡಿತ ಆ ಬಿಲ್ಡರ್‌ಗೆ ಈ ರೀತಿ ಮನೆ ಕಟ್ಟಲು ಬಿಡುತ್ತಿರಲಿಲ್ಲ" ಎನ್ನುತ್ತಾರೆ. ಆದ್ದರಿಂದ ನನ್ನ ಅನಿಸಿಕೆಯೇನೆಂದರೆ, ಸೊಸೈಟಿಯ ನಿವೇಶನಗಳಲ್ಲಿ ಸದಸ್ಯನಿಂದ ನಿವೇಶನ ಮಾರಲ್ಪಟ್ಟ ನಂತರವೂ ಕೂಡಾ, ಹೊಸ ಮಾಲೀಕರು, ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಆಯಾ ಸೊಸೈಟಿಯಲ್ಲಿ  ಕಡ್ಡಾಯವಾಗಿ ದಾಖಲಿಸುವಂತೆ ನಿಯಮ ಮಾಡಬೇಕು. ಹೀಗೆ ಮಾಡಿ, ಈ ರೀತಿ ದಾಖಲಿಸಿರುವ ನಿವೇಶನಗಳ ಚಕ್ಕುಬಂದಿಯಲ್ಲಿ, ಯಾವುದೇ ಕಟ್ಟಡದ ನಿರ್ಮಾಣ ಆರಂಭವಾದಲ್ಲಿ, ಸೊಸೈಟಿಯವರು ತಮ್ಮ ದಾಖಲೆಯಲ್ಲಿರುವ ಚಕ್ಕುಬಂದಿ ನಿವೇಶನದ ಮಾಲೀಕರಿಗೆ, "ನಿಮ್ಮ ನೆರೆಯಲ್ಲಿ ಹೊಸ ಕಟ್ಟಡ ಆರಂಭಗೊಂಡಿದೆ. ಇದರ ಬಗ್ಗೆ ಏನಾದರೂ ತಂಟೆ-ತಕರಾರು ಇದ್ದರೆ, ಖುದ್ದಾಗಿ ಬಂದು ಈ ಹೊಸ ಕಟ್ಟಡದ ಮಾಲೀಕರನ್ನು ಕಾಣಿ" ಎಂಬ ವಿಷಯವನ್ನು ತಿಳಿಸುವುದು ಅವರ ಆದ್ಯ ಕರ್ತವ್ಯವಾಗಬೇಕು.   ಅದು ಬಿಟ್ಟು, ಈ ಸೊಸೈಟಿಗಳ ಆಡಳಿತ ಮಂಡಳಿಯವರು ದಳ್ಳಾಳಿಗಳಂತೆ ಅಥವಾ ರಿಯಲ್ ಎಸ್ಟೇಟ್ ಏಜೆಂಟರಂತೆ, ಭೂಮಿಯನ್ನು ಕೊಳ್ಳುವವರ ಮತ್ತು ಮಾರುವವರ ನಡುವಿನ ಕೊಂಡಿಯಂತಾದರೆ ಸಾಲದು. ಮೂಡಾದವರಿಗೇ ಆಗಲಿ ಅಥವಾ ಸಂಬಂಧ ಪಟ್ಟ ಸೊಸೈಟಿಯವರೇ ಇರಲಿ ಹತಾಶರಾಗಿ ಕೈ ಚೆಲ್ಲುವಂತೆ ನಟಿಸುವ ಬುದ್ಧಿ ಬಿಟ್ಟು ಸ್ವಯಂಪ್ರೇರಿತರಾಗಿ ಮುಂದೆ ಬಂದು ಸದಸ್ಯರ ಹಿತ ಕಾಪಾಡುವ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತಾಗಲಿ.

= ನಾಗಮಂಗಲ ನರಸಿಂಹಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement