ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಾತಿನರಮನೆಯ ತುಂಬಾ ಮೋಸದ ಮಾಯಾಜಾಲ

Srinivasa Murthy VN
Updated On : 13 Jul 2014, 12:09 pm

'ಮಾತೇ ಮುತ್ತು ಮಾತೇ ಮೃತ್ಯು', 'ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ', 'ಮಾತು ಮನೆ ಕೆಡಿಸ್ತು', 'ಮಾತು ಬೆಳ್ಳಿ ಮೌನ ಬಂಗಾರ'- ಹೀಗೆ ಮಾತಿನ ಮಹತ್ವ ಕುರಿತಂತೆ ಅನೇಕ ಗಾದೆ, ನಾಣುಡಿ, ಸೂಕ್ತಿಗಳು ನೆನಪಾಗುತ್ತವೆ.
'ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು...' ಎಂಬ ಗೋವಿನ ಹಾಡು ಪ್ರಸ್ತುತ ಸಂದರ್ಭದಲ್ಲಿ ನೆನಪಾಗುತ್ತದೆ. ಮಾತು ಕೊಟ್ಟರೆ ಮುಗಿದು ಹೋಯಿತು, ನಡೆಯಲೇ ಬೇಕು ಎಂಬ ನಂಬಿಕೆಯ ಕಾಲ ಹಿಂದೆ ಇತ್ತು. ತಂದೆಯ ಮಾತಿಗೆ ಬೆಲೆ ಕೊಟ್ಟು ಕಾಡಿಗೆ ನಡೆದ ಶ್ರೀರಾಮ, ಗುರುವಿನ ಮಾತಿಗೆ ಮಣಿದು ಬೆರಳು ನೀಡಿದ ಏಕಲವ್ಯ, ವಿಶ್ವಾಮಿತ್ರನಿಗೆ ಕೊಟ್ಟ ಮಾತಿನಿಂದ ರಾಜ್ಯವನೇ ತ್ಯಾಗ ಮಾಡಿದ ಹರಿಶ್ಚಂದ್ರ ಹೀಗೆ ಮಾತಿನ ಮೌಲ್ಯ ಕುರಿತಂತೆ ಅನೇಕ ಕಥೆಗಳಿವೆ. ಅಲ್ಲಿ ಮಾತು ಮಾತಾಗದೇ ಬದ್ಧತೆ, ತತ್ವ, ಮೌಲ್ಯಕ್ಕೆ ಕೊಟ್ಟ ಮಾನ್ಯತೆಯಾಗಿದ್ದನ್ನು ಗುರುತಿಸಬಹುದು.
ಇಂದು ಕೊಟ್ಟ ಮಾತಿಗೆ ತಪ್ಪದೇ ನಡೆಯಬೇಕೆಂಬ ಆದರ್ಶ ಧೂಳೀಪಟವಾಗುತ್ತಿದೆ. ಯಾಂತ್ರಿಕ ಯುಗದಲ್ಲಿ ಎಲ್ಲವೂ ವ್ಯಾಪಾರೀಕರಣವಾಗಿ ಮೌಲ್ಯ ಸಿದ್ಧಾಂತಗಳು ತೆರೆ ಮರೆಗೆ ಸರಿದು, ಅವರವರ ಸರಕು, ವ್ಯಾಪಾರ, ಅವರವರ ಹೊಟ್ಟೆ ಪಾಡು ಮಾತ್ರ ಇಂದು ಮುಖ್ಯವಾಗುತ್ತಿದೆ. ಕಂಡವರ ಹೊಟ್ಟೆ ಮೇಲೆ ಹೊಡೆದಾದ್ರು ಸರೀನೆ ಚೆನಾಗಿ ಸಂಪಾದಿಸು ಎನ್ನುವ ಮೋಸದ ಪ್ರಪಂಚದಲ್ಲಿ ನಾವಿಂದು ಬದುಕುತ್ತಿದ್ದೇವೆ. ನನ್ನ ಸುತ್ತಮುತ್ತಲಿನವರು, ಬಂಧು ಮಿತ್ರರು ಮಾತಿನ ಮೋಡಿಗೆ ಸಿಲುಕಿ ಕೈಸುಟ್ಟುಕೊಂಡ ಪ್ರಸಂಗ ನೋಡಿ ಯಾರ ಮಾತನು ನಂಬಬೇಕು ಎಂಬ ಸಂಧಿಗ್ಧ ಪರಿಸ್ಥಿತಿ ನನ್ನದು.
ನ
ಇತ್ತೀಚೆಗೆ ನನ್ನ ಗೆಳತಿಗೆ ಒಂದು ದೂರವಾಣಿ ಕರೆ ಬಂದಿತ್ತು. ಕರೆ ಮಾಡಿದವರು ತುಂಬಾ ವಿನಯದಿಂದ, ಆಕರ್ಷಣೀಯವಾಗಿ ಮಾತನಾಡಿ, "ತಮ್ಮನು ಆದರ್ಶ ದಂಪತಿಗಳೆಂದು ಗುರುತಿಸಿ ಒಂದು ಅಮೂಲ್ಯವಾದ ಉಡುಗೊರೆ ನೀಡುತ್ತೇವೆ. ದಯಮಾಡಿ ಬಂದು ಸ್ವೀಕರಿಸಿ" ಎಂದು ಆಕೆಗೆ ಒತ್ತಾಯ ಪೂರ್ವಕ ಆಹ್ವಾನ ನೀಡಿದರು. "ಬರಲಾಗುವುದಿಲ್ಲ" ಎಂದು ನನ್ನ ಗೆಳತಿ ಎಷ್ಟೇ ಹೇಳಿದರೂ, "ನಿಮಗೆ ಸರಿ ಎನಿಸಿದ ಸಮಯದಲ್ಲಿ ಬಂದು ಸ್ವೀಕರಿಸಿ" ಎಂದು ದುಂಬಾಲುಬಿದ್ದರು. ವಿಧಿ ಇಲ್ಲದೆ ನನ್ನ ಗೆಳತಿ ತನ್ನ ಪತಿರಾಯನನ್ನು ಕರೆದುಕೊಂಡು ಕಂಪನಿಯವರು ಹೇಳಿದ ಸ್ಥಳಕ್ಕೆ ಹೋಗಿ ಬಹುಮಾನದ ಬಗ್ಗೆ ವಿಚಾರಿಸಿದಾಗ, ಮೊದಲು ಕಾಫಿ, ಬಿಸ್ಕೆಟ್ ನೀಡಿ ಉಪಚರಿಸಿ, ತಮ್ಮ ಸಂಸ್ಥೆಯ ಬಗ್ಗೆ ಸಾಕ್ಷ್ಯಚಿತ್ರ ವೀಕ್ಷಿಸಲು ಬಲವಂತ ಮಾಡಿದ್ದಾರೆ. ಇದರ ನಡುವೆಯೇ "ಬಹುಮಾನ ರೆಡಿ ಮಾಡು" ಎಂದು ಸಹಚರರಿಗೆ ಹೇಳುತ್ತಾ ಒಂದು ಗಂಟೆ ಕಾಲ ತಮ್ಮ ಟ್ರಾವೆಲ್ ಏಜೆನ್ಸಿ ಬಗ್ಗೆ, ಟೂರ್ ಪ್ಯಾಕೆಜ್, ಪ್ರಾಡಕ್ಟ್ ಬಗ್ಗೆ ವಿವರಿಸಿ "ಅದರಲ್ಲಿ ಶೇ. 30 ಡಿಸ್ಕೌಂಟ್ ಇದೆಯಲ್ಲ, ಅದೇ ಬಹುಮಾನ" ಎಂಬರ್ಥದಲ್ಲಿ ವಿವರಿಸಿದಾಗ ಗೆಳತಿಗೆ ತಾವು ಬಕ್ರ ಆದದ್ದು ಅರಿವಾಗಿದೆ. "ಬಹುಮಾನ ಅಂತ ಕರೆದು ನಿಮ್ಮ ವ್ಯಾಪಾರ ಕುದುರಿಸಿ ಕೊಳ್ಳುತ್ತಿದ್ದೀರಲ್ಲ ಇದೇನಾ ನೀವಾಡಿರೋ ಮಾತು? ಹೇಳುವುದೊಂದು ಮಾಡುವುದೊಂದು" ಎಂದು ಗದರಿಸಿ ಕೇಳಿದಾಗ ಐವತ್ತು ರುಪಾಯಿ ಬಾಳುವ ಟೀ ಕಪ್ ಸೆಟ್‌ನ ಉಡುಗೊರೆ ನೀಡಿದ್ದಾರೆ. ಐದು ಕಿಲೋ ಮೀಟರ್ ದೂರದಿಂದ ಬಂದವಳಿಗೆ ಐವತ್ತು ರುಪಾಯಿ ಗಿಫ್ಟ್!! ತಮ್ಮ ವ್ಯವಹಾರದ ಪ್ರಚಾರಕ್ಕಾಗಿ ಇಂತಹ ಗಿಮಿಕ್ ಬಳಸಿ ಸೆಳೆಯುವ ನಿರ್ಲಜ್ಜ ಮಾತುಗಾರರು ನಮ್ಮಲ್ಲೇನು ಕಡಿಮೆಯೇ?
ಇಂತಹದ್ದೇ ಮತ್ತೊಂದು ಪ್ರಸಂಗವನ್ನು ನನ್ನ ಸಹೋದ್ಯೋಗಿ ಗೆಳತಿ ಎದುರಿಸಿದಳು. ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಗೆ ತೆರಳಿದ್ದ ಆಕೆ, ಇಂಟರ್‌ವ್ಯೂ ನಂತರ ಕೆಂಪುಕೋಟೆ ವೀಕ್ಷಿಸಿ ಹೊರಬುತ್ತಿರುವಾಗ ಪುಟ್ಟ ಬಾಲಕನೊಬ್ಬನ ಮಾತಿನ ಜಾಲಕ್ಕೆ ಸಿಲುಕಿದ ಪರಿ ನೆನೆದರೆ ಇಂದಿಗೂ ನಗೆ ಬರುತ್ತದೆ. "ಮೇಡಂ ಐದು ರೆಡಿಮೇಡ್ ಡ್ರೆಸ್‌ಗೆ 500 ರುಪಾಯಿ" ಎಂದು ಆ ಹುಡುಗ ಗೋಗರೆಯುತ್ತಾ, ಖರೀದಿಸಲು ಕೇಳಿದಾಗ ಅವಳಿಗೆ ಆಶ್ಚರ್ಯ. "ನಿಜವಾಗಲೂ ಬರೀ ಐದು ನೂರು ರುಪಾಯಾ, ತೋರಿಸೋ ಯಾವ ಸ್ಕೆಚ್‌ನ ಡ್ರೆಸ್ಸು?" ಎಂದಾಗ ಕವರ್‌ನ ಮೇಲ್ಭಾಗದಿಂದ ಸ್ವಲ್ಪ ಡ್ರೆಸ್ ಹೊರತೆಗೆದು "ನಿಮ್ಮ ಅಳತೆಯದ್ದೇ ಮೇಡಂ, ಗಾರ್ಮೆಂಟ್ ಫ್ಯಾಕ್ಟರಿಯಿಂದ ಬರುವಾಗ ಬಿದ್ದ ಪಾರ್ಸಲ್‌ಗಳದ್ದು ಈ ಪ್ಯಾಕೆಟ್ಟು. ಇಲ್ಲಿ ಓಪನ್ ಮಾಡ್ಬೇಡಿ" ಎಂದು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿ ಕೊನೆಗೆ ಬರಿ 100 ರುಪಾಯಿಗೆ ಐದು ಡ್ರೆಸ್ ನೀಡಿ ಮಾಯವಾದ! ಸಂತಸ ತಾಳಲಾರದೆ ಈಕೆ ಲಾಡ್ಜ್‌ಗೆ ಬಂದು ಪ್ಯಾಕೆಟ್‌ನ್ನು ಬಿಚ್ಚಿ ನೋಡಿದರೆ ಅಳತೆಮಿತಿ ಮೀರಿದ, ಬಳಸಿ ಹರಿದಿರುವ, ನೆಲ ಒರೆಸಲು ಯೋಗ್ಯವಾಗಿಲ್ಲದ ಬಟ್ಟೆ ಕಂಡು ತಲೆ ತಿರುಗಿ ಗಕ್ಕನೆ ಹಾಗೇ ಕುಳಿತಳು. ಇಷ್ಟು ಚಿಕ್ಕ ವಯಸ್ಸಿಗೇ ಇಷ್ಟು ಮಾತು ಕಲಿತು ತಲೆ ಸವರಿದ ಆ ಹುಡುಗನ ಜಾಣ್ಮೆ ಇಂತಹವುದಕ್ಕೆ ಬಳಕೆಯಾಗ್ತಿದೆಯಲ್ಲ ಎಂಬ ಬೇಸರ ಅವಳದು.
ಅವರ ವಿಷಯ ಬಿಡಿ. ಮಾತಿನರಮನೆಗೆ ಮೋಹಗೊಂಡು ಮೋಸಕ್ಕೊಳಗಾದ ನನ್ನ ಅನುಭವವನೇ ಕೇಳಿ. ಕಳೆದು ವರ್ಷ ಭಾನುವಾರದ ಒಂದು ದಿನ ಆರಾಮವಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ "ಸೋನಾ ಮಸೂರಿ, ಬಿ.ಟಿ. ರೈಸ್ ಅಕ್ಕಿ, ಕೆ.ಜಿಗೆ 25 ರುಪಾಯಿ" ಎಂದು ಒಬ್ಬ ಪಂಚೆಯುಟ್ಟ ತೆಲುಗಿನ ವ್ಯಕ್ತಿ ನಮ್ಮ ಏರಿಯಾದ ಪ್ರತಿ ಮನೆಗೂ ತೆರಳಿ ಸ್ಯಾಂಪಲ್ ಅಕ್ಕಿ ತೋರಿಸುತ್ತಿದ್ದ. "ದೂರದ ಆಂಧ್ರದಿಂದ ಬಂದಿದ್ದೇವೆ. ವಾಪಸ್ ಹೋಗಲಿಕ್ಕೆ ಪೆಟ್ರೋಲ್‌ಗೂ ದುಡ್ಡಿಲ್ಲ" ಅಂತ ಅಲವತ್ತುಕೊಳ್ಳುತ್ತಿದ್ದ. ಪಕ್ಕದ ಮನೆಯವರು "ರೀ ಸುಮ ಬನ್ರೀ...ನೋಡಿ ಎಷ್ಟು ಚೆನಾಗಿದೆ" ಎಂದು ಕರೆದು ಸ್ಯಾಂಪಲ್ ತೋರಿಸಿದಾಗ ಅಕ್ಕಿ ನೋಡಿ ಮೆಚ್ಚಿ 2 ಮೂಟೆ ತೆಗೆದುಕೊಳ್ಳಲು ಹಣ ನೀಡಿದೆ. ದೊಡ್ಡ ಗೂಡ್ಸ್ ಟೆಂಪೋದಲ್ಲಿ ಮೂಟೆಗಳನ್ನು ತಂದ ಕ್ಷಣಾರ್ಧದಲ್ಲಿ ಇಡೀ ಬೀದಿಯ ಜನ ಮುಗಿ ಬಿದ್ದುಕೊಂಡು ಸಂತಸಪಟ್ಟರು. ನಾನು ಅನುಮಾನದಿಂದಲೇ "ನಿಜಕ್ಕೂ ಆ ಮೂಟೆಯಲ್ಲಿ ಇದೇ ಅಕ್ಕಿ ಇದೆಯಾ?" ಎಂದು ಪ್ರಶಿಸಿದಾಗ, ಒಂದು ಚೂಪಾದ ಕೊಳವೆಯನ್ನು ಚುಚ್ಚಿ ಹೊರತೆಗೆದು ಅಕ್ಕಿ ತೋರಿಸಿ ಮತ್ತೆ ಮುನಿಸಿಕೊಂಡಂತೆ ಮಾಡಿ, ಆ ಚೀಲವನ್ನು ಅಲ್ಲಿಗೆ ಬೀಳಿಸಿಕೊಂಡ. "ಏನಮ್ಮಾ ಅಷ್ಟು ನಂಬಲ್ವಮ್ಮಾ" ಎಂದು ನಂಬುವಂತೆ ಮಾತನಾಡಿ ವ್ಯಾಪಾರ ಮಾಡಿ ಹೊರಟುಹೋದ. ಆದರೂ ಸಂಶಯದಿಂದ ಚೀಲ ತೆಗೆದು ನೋಡಿದರೆ ತುಂಬಾ ಹೊಸದಾದ ದಪ್ಪ ಅಕ್ಕಿ. ಕೇವಲ ಹದಿಮೂರು, ಹದಿನಾಲ್ಕು ರುಪಾಯಿಗೆ ದೊರಕಬಹುದಾದ ಅಕ್ಕಿ ಕಂಡು ಬೆಚ್ಚಿ, ತಕ್ಷಣ ಪೊಲೀಸ್ ಸ್ಟೇಷನ್‌ಗೆ ಫೋನ್ ಮಾಡೆದ್ದಾಯಿತು. "ದಯಮಾಡಿ ಇಲ್ಲಿ ಸುತ್ತುಮುತ್ತ ಎಲ್ಲೋ ಇರ್ತಾರೆ ನೋಡಿ" ಎಂದು ಹೇಳಿದೆವಾದರೂ, ಅಷ್ಟರಲ್ಲಾಗಲೇ ಅಕ್ಕಿ ಮಾರಿದವ ಮಂಗಮಾಯ.
ಹೀಗೆ ಹತ್ತು ಹಲವು ಆಮಿಷ ಒಡ್ಡಿ ತಮ್ಮ ಸರಕನ್ನು ನಮ್ಮ ತಲೆಗೆ ಕಟ್ಟುವ ಪ್ರಸಂಗಗಳು ಪ್ರತಿ ನಿತ್ಯ ಘಟಿಸುತ್ತಿರುತ್ತವೆ. ಟಿ.ವಿ. ಚಾನಲ್‌ಗಳಲ್ಲಿ, "ರಿಯಾಲಿಟಿ ಷೋಗಳಿಗೆ ವೋಟ್ ಹಾಕಿ ನಿಮಗೆ ಗಿಫ್ಟ್ ವೋಚರ್‌" ಎಂಬ ಆಮಿಷ, ಬಡ್ಡಿ ನಂತರ 10 ಸಾವಿರ, 20 ಸಾವಿರ ಬಟ್ಟೆ ವಸ್ತು ಖರೀದಿಸಿದರೆ ಶೇ. 30 ಡಿಸ್ಕೌಂಟ್ ಎಂದು ತಮ್ಮ ಜಾಣ್ಮೆಯನು ಪ್ರದರ್ಶಿಸುತ್ತಲೇ ಇವೆ. ಅರಿಯದ ಜನ ಎಸ್‌ಎಂಎಸ್ ಮಾಡುತ್ತಲೇ ಇದ್ದಾರೆ. ಹೀಗೆ ಮಾತಿನ ಶೂಲವನ್ನು ರೇಷ್ಮೆ ವಸ್ತ್ರದಲ್ಲಿ ಸುತ್ತಿ ಒತ್ತುತ್ತಿದ್ದರೂ ಮಾತಿಗೆ ಕಟ್ಟು ಬಿದ್ದು ಎಷ್ಟೇ ಕಂಡೂರು, ಕೇಳಿದರೂ, ಅನುಭವಿಸದರೂ ಮಾತುಗಾರರ ಮೋಡಿಗೆ ತಲೆದೂಗಿ ನಮ್ಮ ಜೇಬನ್ನು ಹಗುರ ಮಾಡಿಕೊಳ್ಳುತ್ತಲೇ ಬೆಪ್ಪಾಗಿ ನಿಲ್ಲುತ್ತಿದ್ದೇವೆ. ಹುಲಿಗೆ ಮಾತು ಕೊಟ್ಟು ಮರಳಿ ಬಂದ ಗೋವಿನ ದೇಶದವರಾದ ನಾವು ಮಾತಿಗೆ ಮಣಿಯದೆ ಮತ್ತೇನು? ಹಾಗೆಂದು ಕೈ ಕಟ್ಟಿ ನಾವಿಂದು ಕೂರಬೇಕಿಲ್ಲ. ಮಾತನಾಡಲು ಬಂದವರ ಮಾತು ಕೇಳಿದರೆ ತಾನೇ ಮೋಸ ಹೋಗುವುದು? ಸ್ಥಿತಪ್ರಜ್ಞರಾಗಿ. "ಆಗದು" ಎಂದರೆ ಹಾಳಾಗುವ ಪ್ರಸಂಗವೇ ಎದುರಾಗುವುದಿಲ್ಲ.

  ಡಾ.ಡಿ. ಸುಮಂಗಳ,
ಕನ್ನಡ ಸಹ ಪ್ರಾಧ್ಯಾಪಕರು,
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement