ಸ್ನೇಹದ ಘಾಟು ಜಾಸ್ತಿಯಾಯಿತು!
ಸ್ನೇಹದ ಘಾಟು ಜಾಸ್ತಿಯಾಯಿತು!
ಹಿಂದಿನ ಭಾನುವಾರದ ಕನ್ನಡಪ್ರಭದ ನಾಲ್ಕನೇ ಪುಟದಲ್ಲಿ 'ಸಂಡೆ ಸಂಡಿಗೆ' ವಿಶೇಷ ಇದೆ. ಅಲ್ಲಿ ಸಾಕಷ್ಟು ತಿಳಿ ಹಾಸ್ಯವೂ ಇದೆ. ಒಂದೇ ಒಂದು ಬೇಜಾರಿನ ಸಂಗತಿ ಮೊದಲನೇ ಕಾಲಮ್ಮನ್ನು 'ವಿಸ್ಕಿ' ವಿನಿಮಯದಿಂದ ತುಂಬಿಸಿದ್ದು!? ಇದು ಕುಡಿನೋಟವಲ್ಲ ಕುಡುಕರ ನೋಟ ಎಂದರೆ ತಪ್ಪಾಗಲಿಕ್ಕಿಲ್ಲ.
-ವಿಜಯಾ ಎ. ಡೋಂಗ್ರೆ, ಕೊಪ್ಪ
ಅತ್ಯುತ್ತಮ ಪುಟ ವಿನ್ಯಾಸ, ಲೇಖನ ಹಾಗೂ ವರದಿಗಳನ್ನು ಹೊತ್ತು ತರುವ ಪ್ರತಿಷ್ಠಿತ ಪತ್ರಿಕೆಯೆಂದೆನಿಸಿಕೊಂಡ ಕನ್ನಡಪ್ರಭದಲ್ಲಿ ಕಳಪೆ ಚಿತ್ರ/ ಫೋಟೋಗಳನ್ನು ನೋಡುವುದು ಯಾರು ತಾನೆ ಸಹಿಸಿಯಾರು? ದಯವಿಟ್ಟು ಇತ್ತಲೂ ಲಕ್ಷ್ಯ ಕೊಡಿ. ಜುಲೈ9 ರ ಪುಟ 9 ಮತ್ತು 10ರಲ್ಲಿ ಪ್ರಕಟಿಸಿದ ಭಾವಚಿತ್ರಗಳೂ ಸ್ಪಷ್ಟವಾಗಿಲ್ಲ. ಅಂದೇ ಪ್ರಕಟಿಸಿದ ರೈಲ್ವೆ ಬಜೆಟ್ ವಿಶ್ಲೇಷಣೆ ಅದ್ಭುತವಾಗಿ ಬಂದಿದೆ. ಪುಟ 3ರಲ್ಲಿ ಬುಲೆಟ್ ಟ್ರೇನ್ನೊಂದಿಗಿನ ಪುಟ ವಿನ್ಯಾಸವಂತೂ ಏಕದಮ್ ಟಾಪ್. ಅಂದ ಹಾಗೆ ಬುಲೆಟ್ ಟ್ರೇನ್ ಮುಂಬೈ -ಅಹಮದಾಬಾದ್ ನಡುವೆ ಆಗುವಂತಹುದಾದರೂ, ನೀವು ಪ್ರಕಟಿಸಿದ ರೀತಿ ನೋಡಿದರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಇರುವಂತೆ ಭಾಸವಾಯಿತು. ಪರವಾಗಿಲ್ಲ.
-ಶಂಕರನಾರಾಯಣ ಭಟ್, ಹೊನ್ನಾವರ
ಈ ಪತ್ರ ಪ್ರಕಟವಾಗುವುದಿಲ್ಲ ಎಂಬ ಗ್ಯಾರಂಟಿ ಗೊತ್ತಿದ್ದು, ಛಲ ಬಿಡದ ತ್ರಿವಿಕ್ರಮನಂತೆ ಈ ಪತ್ರ ಬರೆಯುತ್ತಿದ್ದೇನೆ. ಒಗ್ಗರಣೆಯ ಪರಿಮಳ ಎಲ್ಲಾ ಕಡೆ ಪಸರಿಸುತ್ತಿರುವುದು ಕನ್ನಡಿಗರಾದ ನಮಗೆ ಖಂಡಿತವಾಗಿಯೂ ಹೆಮ್ಮೆಯ ಸಂಗತಿ. ಆದರೂ ಪ್ರಕಾಶ್ ರೈ ಸತತ ಮೂರನೇ ಬಾರಿಗೆ ಕ.ಪ್ರ.ದ (ಭಾನುವಾರದ) ಮುಖಪುಟದಲ್ಲೇ ಖುಷಿಯಿಂದ ರಾರಾಜಿಸುತ್ತಿರುವುದು ಯಾಕಾಗಿ? ಈ ಸಲ ಮಾತ್ರ ರವಿಚಂದ್ರನ್ ಕಾಣಿಸಿಕೊಂಡರು. ಭಟ್ಟರ ಸ್ನೇಹಿತರಾದ ಮಾತ್ರಕ್ಕೆ ರೈಯವರು ಮುಖಪುಟದಲ್ಲಿ 'ರೈಸ'ಬೇಕೆ? ಬಗೆಹರಿಸಲಾಗದ ಈ ಪ್ರಶ್ನೆಯನ್ನು ಬಹುಶಃ 'ಥಟ್ ಅಂತ ಹೇಳಿ' ಖ್ಯಾತಿಯ ಡಾ. ಸೋಮೇಶ್ವರ್ಗೆ ವರ್ಗಾಯಿಸಿದರೆ, ಅವರಿಂದ 'ಥಟ್' ಅಂತ ಉತ್ತರ ಸಿಗಬಹುದೇನೋ?
-ಜಯಶ್ರೀ ಕೆ., ಮೈಸೂರು
ಜೂ.13ರ 'ತಪ್ಪಾಯ್ತು ತಿದ್ಕೋತೀವಿ' ವಿಭಾಗದಲ್ಲಿ ನಾನು ಬರೆದ ಪತ್ರದಲ್ಲಿನ 'ಪೂರ್ವಾಗ್ರಹ' ಎಂಬ ಪದವೇ ತಪ್ಪು. ಇದು ಖಂಡಿತಾ 'ಪೂರ್ವಗ್ರಹ'ವೇ ಸರಿ ಎಂದು ಬೆಂಗಳೂರಿನ ಪಂಡಿತರೊಬ್ಬರು ಎಸ್ಎಂಎಸ್ ಮೂಲಕ ಆಗ್ರಹಿಸಿ ಸಂಪಾದಕರಿಗೆ ತಿಳಿಸಿ, ಕೊನೆಗೆ ತಮ್ಮ ವಾದವೇ ಸರಿಯೆಂದು ಪತ್ರವನ್ನೂ ಬರೆದಿದ್ದರು. ಅದನ್ನು ಓದಿ ನನಗೆ ನಿಜಕ್ಕೂ ಕಸಿವಿಸಿಯಾಯಿತು. ಆದರೆ ದಿ. 05.07.14ರ 'ತಪ್ಪಾಯ್ತು ತಿದ್ಕೋತೀವಿ' ವಿಭಾಗದಲ್ಲಿ ದೊಡ್ಡಬಳ್ಳಾಪುರದಿಂದ ಡಾ. ಕೆ.ಎನ್.ಬಿ. ರಾಜಣ್ಣರವರು ನನ್ನ ನೆರವಿಗೆ ಬಂದು ತಪ್ಪಾಗ್ತಾ ಇದೆ ತಿದ್ಕೊಳಿ ಸ್ವಾಮಿ ಎಂದು ನಾನು ಬರೆದ ಪೂರ್ವಾಗ್ರಹ ಎಂಬ ಪದವೇ ಸರಿ ಎಂದು ಉದಾಹರಣೆಗಳಿಂದ ವಿವರಿಸಿದ್ದಾರೆ. ಇವೆಲ್ಲವನ್ನೂ ನಮ್ಮ ಸಂಪಾದಕರು, ವಸ್ತುನಿಷ್ಠೆಯಿಂದ ಪ್ರಕಟಿಸಿರುವುದು ಶ್ಲಾಘನೀಯ. ಡಾ. ರಾಜಣ್ಣನವರಿಗೂ, ಸಂಪಾದಕರಿಗೂ ಧನ್ಯವಾದಗಳು.
-ಕೆ.ಎ. ರವೀಂದ್ರನಾಥ್, ಗೌರಿಬಿದನೂರು., 98806 13053
ದಿ. 02.07.14ರ ಬೈಟುಕಾಫಿಯ ಪುಟ 4ರಲ್ಲಿ ಕೈ ಕಾಲೇ ಕೈಲಾಸ ಶೀರ್ಷಿಕೆಯಡಿ ಅಬ್ದುಲ್ ಎಂಬ ಅದ್ಭುತ ಮೆಕಾನಿಕ್ ಎಂಬ ವ್ಯಕ್ತಿಯ ಸಚಿತ್ರ ಲೇಖನದ ವರದಿ ಪ್ರಕಟಿಸಿರುವುದು ಸರಿಯಷ್ಟೇ. ಸದರಿ ಅಬ್ದುಲ್ ರೆಹಮಾನರನ್ನು ಅಭಿನಂದಿಸಲು ಅನುಕೂಲವಾಗುವಂತೆ ಮೊ. 80501 20869 ಸಹ ಒದಗಿಸಿರುವುದು ನಿಜಕ್ಕೂ ಮೆಚ್ಚುವಂತಹುದು. ಆದರೆ ಆ ಮೊಬೈಲ್ ಸಂಖ್ಯೆ ಎಷ್ಟೇ ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದೆ ಸದಾ ಸ್ವಿಚ್ ಆಫ್ ಎಂದೆ ಪ್ರತಿಕ್ರಿಯೆ ಬರುತ್ತಿತ್ತು! ಹೀಗಾಗಿ ಒಂದು ಪತ್ರ ಮುಖೇನ ಅಭಿನಂದಿಸಬಹುದೆಂಬ ಸಲುವಾಗಿ ಪದೇ ಪದೇ ಓದಿ ಹುಡುಕಿದರೂ ಆ ಅದ್ಭುತ ರಾಯಲ್ ಎನ್ಫೀಲ್ಡ್ ಬೈಕ್ನ ತಜ್ಞ ಮೆಕಾನಿಕ್ರ ವಿಳಾಸ ಕಂಡು ಬರಲಿಲ್ಲ. ಹೀಗೇಕಾಯಿತು?
-ಎಂ.ಬಿ. ಕೃಷ್ಣಮೂರ್ತಿ, 9449130531, ಚಾಮರಾಜನಗರ
ಈ ವಾರದ ಒಳಸುರುಳಿ (7.7.14) 'ಘಾತಕವೆಸಗಿ ದೇವರ ನೆನೆದರೆ ಸೂತಕ ಕಳೆದೀತೇ?' ಅಂಕಣ ಚೆನ್ನಾಗಿತ್ತು. ಶೀರ್ಷಿಕೆಯೇ ಎಷ್ಟೊಂದು ಸೂಕ್ತವು, ಸೊಗಸಿನಿಂದ ಕೂಡಿತ್ತು. ಜನಪ್ರತಿನಿಧಿಗಳಾದವರೇ ಕಾನೂನನ್ನು ಉಲ್ಲಂಘಿಸಿದರೇ ಹೇಗೆ? ಸಮಾಜಕ್ಕೆ ಮಾದರಿಯಾಗಬೇಕಾದ, ಸಮಾಜವನ್ನು ತಿದ್ದಬೇಕಾದ, ಜನಸಾಮಾನ್ಯರಿಗೆ ತಿಳಿಹೇಳಬೇಕಾದವರೇ ಗೂಂಡಾಗಳಂತೆ ವರ್ತಿಸಿದರೆ ಸಮಾಜದ, ನಾಡಿನ ಗತಿಯೇನು?
-ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880 791106
ಇಂದಿನ ಉದಯರಾಗದ (ಪೇಪರ್ ಬಂದು ಬೀಳುವ ಹೊತ್ತು) ಕ.ಪ್ರ. ಹೊತ್ತು ತಂದ ಅ'ಋಣ' ರಾಗ ನಮ್ಮೆಲ್ಲರನ್ನೂ ತಲೆದೂಗುವಂತೆ ಮಾಡಿದೆ. ಇಂತಹ ಶೀರ್ಷಿಕೆಗಳು ಕನ್ನಡಪ್ರಭ ಮಂದಿಗೆ ಮಾತ್ರವೇ ಹೊಳೆಯುತ್ತಲ್ಲ ಏಕೆ? ಶೀರ್ಷಿಕೆಯ ಸೃಷ್ಟಿಕರ್ತಾರನಿಗೆ ನಮೋ ನಮೋ!
-ಎಸ್. ರಾಘವೇಂದ್ರ, ಕೃಷ್ಣಮೂರ್ತಿಪುರಂ, ಮೈಸೂರು.
ನೀವು ಏನ್ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.