ಜನಪ್ರತಿನಿಧಿಗಳ ಹಸ್ತಕ್ಷೇಪ ಪಡಿತರ ಚೀಟಿ ಗೊಂದಲ ಕೂಪ
ಕರ್ನಾಟಕದ ಅತ್ಯಂತ ಗೋಜಲಿನ ಹಾಗೂ ಸಾರ್ವಜನಿಕರನ್ನು ಸದಾ ಬಾಧಿಸುವ ಜನಸ್ನೇಹಿ ಯೋಜನೆ ಎಂದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ವಹಿಸುತ್ತಿರುವ ಪಡಿತರ ಚೀಟಿ ವ್ಯವಸ್ಥೆ ಹಾಗೂ ಪಡಿತರ ವಿತರಣೆ ಎಂದರೆ ತಪ್ಪಾಗಲಾರದು. ಈ ವ್ಯವಸ್ಥೆಗೆ ಸಂಬಂಧಿಸಿ ಕಾನೂನು ನಿಯಾಮಾವಳಿಗಳು ಆಗಾಗ ಬದಲಾಗುತ್ತಿರುತ್ತವೆ ಎಂದರೆ ಅತಿಶಯೋಕ್ತಿಯಲ್ಲ. ಮೊದಲು ಕುಟುಂಬದ ಮುಖ್ಯಸ್ಥ ತನ್ನ ಕುಟುಂಬದ ನ್ಯಾಯಯುತ ಸದಸ್ಯರನ್ನೊಳಗೊಂಡ ಅರ್ಜಿ ಸಲ್ಲಿಸಿದರೆ ಸಾಕಿತ್ತು. ತನಿಖೆಯ ನಂತರ ಪಡಿತರ ಚೀಟಿ ನೀಡಲಾಗುತ್ತಿತ್ತು. ಆ ಬಳಿಕ ಮನೆ ಯಜಮಾನನ ಭಾವಚಿತ್ರ ಲಗತ್ತಿಸಬೇಕಾದ ನಿಯಮ ಜಾರಿಗೆ ಬಂತು. ಈ ವಿಧಾನ ಸಾಕಷ್ಟು ಕಾಲ ಜಾರಿಯಲ್ಲಿತ್ತು. ಅನಂತರ ಕುಟುಂಬದ ಸದಸ್ಯರ ಒಟ್ಟಿಗೆ ತೆಗೆದ ಭಾವಚಿತ್ರ ಹಾಗೂ ಬೆರಳಚ್ಚು ಮಾದರಿ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂತು. ಈಗ ಆ ಕಾರ್ಡ್ಗೆ ಮತದಾರ ಗುರುತು ಚೀಟಿ ಸಂಖ್ಯೆಯನ್ನು ಮತ್ತು ಆಧಾರ್ ಇದ್ದಲ್ಲಿ ಅದರ ಸಂಖ್ಯೆಯನ್ನು ಅಳವಡಿಸುವ ಸೂಚನೆ ಬಂದಿದೆ.
ಇಷ್ಟೆಲ್ಲಾ ವ್ಯಾಯಾಮ ಮಾಡಬೇಕಾದ ಪರಿಸ್ಥಿತಿ ಯಾಕೆ ಪ್ರಾಪ್ತವಾಯ್ತು? ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಾನ್ಯ ಸಚಿವರ ಹೇಳಿಕೆ ಅಚ್ಚರಿ ಮುಡಿಸುತ್ತದೆ. ಚಲಾವಣೆಯಲ್ಲಿ ಗಣನೀಯ ಪ್ರಮಾಣದ ಬೋಗಸ್ ಕಾರ್ಡ್ ಇದೆ ಎಂತಲೂ ಅದನ್ನು ಪತ್ತೆ ಹಚ್ಚಲು ಈ ಕ್ರಮ ಆರಂಭಿಸಲಾಗಿದೆ ಅಂತ ನುಡಿ ಕೊಡುತ್ತಾರೆ. ಬೋಗಸ್ ಕಾರ್ಡ್ ಹೇಗೆ ಸೇರಿಕೊಂಡಿತು ಎಂಬುದು ಪ್ರಶ್ನೆ. ಯಾಕೆಂದರೆ ಎಲ್ಲ ಕಾರ್ಡ್ಗಳ ಮೇಲೂ ಇಲಾಖೆಯ ಅಧಿಕೃತ ಸೀಲ್, ಸಹಿ ಇದೆ. ಇವುಗಳು ಕೋಟಾ ನೋಟ್ನಂತೆ ಖಾಸಗಿ ಮುದ್ರಣಾಲಯದಲ್ಲಿ ಗೌಪ್ಯವಾಗಿ ಮುದ್ರಣವಾದವುಗಳಲ್ಲ. ಸರಕಾರ ಹಾಗೆ ಹೇಳುತ್ತಿಲ್ಲ. ಆ ಗುಮಾನಿಯನ್ನು ವ್ಯಕ್ತಪಡಿಸುತ್ತಿಲ್ಲ. ಅಂದರೆ ಚಲಾವಣೆಯಲ್ಲಿರುವ ಎಲ್ಲ ಪಡಿತರ ಚೀಟಿಗಳು ಅಧಿಕೃತವಾಗಿ ಇಲಾಖೆಯಿಂದಲೇ ನೀಡಲ್ಪಟ್ಟವುಗಳೇ! ನೀಡುವ ಮುನ್ನ ಸರಕಾರಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸಂಬಂಧಪಟ್ಟವರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಅವುಗಳನ್ನು ಪರಾಂಬರಿಸಿದ್ದಾರೆ. ಅದು ಯಾವತ್ತೂ ಕ್ರಮ. ಈಗ ಸರಕಾರವೇ ಬೋಗಸ್ ಕಾರ್ಡ್ಗಳಲಿವೆ ಎಂದು ಹೇಳುವುದು ಯಾವ ಆಧಾರದಲ್ಲಿ?
ಹೀಗೊಂದು ಸಾಧ್ಯತೆ ಇದೆ. ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯಕ್ರಮ ಹಾಗೂ ಇತರೇ ಸಾಮಾಜಿಕ ಸರ್ವೇಕ್ಷಣೆಗಳಿಂದ ಒಂದು ಪ್ರದೇಶದಲ್ಲಿ ಅಥವಾ ರಾಜ್ಯದಲ್ಲಿ ಎಷ್ಟು ಜನಸಂಖ್ಯೆ ಇದೆ ಹಾಗೂ ಎಷ್ಟು ಕುಟುಂಬಗಳಿವೆ ಎಂಬುದು ದಾಖಲಾಗಿದೆ. ಆ ಅಂದಾಜಿನಂತೆ ನೈಜ ಕುಟುಂಬಗಳ ಸಂಖ್ಯೆಗೂ ಈಗ ಚಲಾವಣೆಯಲ್ಲಿರುವ ಪಡಿತರ ಚೀಟಿಗಳ ಸಂಖ್ಯೆಗೂ ಅಪಾರ ವ್ಯತ್ಯಾಸ ಕಂಡು ಬಂತೆಂದಾದರೆ ಈ ಹೆಚ್ಚುವರಿ ಪಡಿತರ ಚೀಟಿಗಳು ಹೇಗೆ ಬಂದವು ಎನ್ನುವುದಕ್ಕೆ ವಿವರಣೆ ನೀಡುವ ಜವಾಬ್ದಾರಿ ಸರಕಾರದ್ದೇ. ಬೋಗಸ್ ಕಾರ್ಡ್ಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಸರಕಾರ 2009-10 ನಂತರ ಎಲ್ಲ ಹಳೇ ಕಾರ್ಡ್ಗಳನ್ನು ರಿನಿವಲ್ ಮಾಡುವಂತೆ ಸೂಚಿಸಿದೆಯಲ್ಲದೆ ಆ ಕಾಲಕ್ಕೆ ಕುಟುಂಬದ ಮುಖ್ಯಸ್ಥನ ಜತೆ ಒಟ್ಟಾಗಿ ಕುಟುಂಬದ ಎಲ್ಲ ನ್ಯಾಯಯುತ ಸದಸ್ಯರಿರುವ ಭಾವಚಿತ್ರ ಹಾಗೂ ಬೆರಳಚ್ಚು ಮಾದರಿಯನ್ನು ಸಂಗ್ರಹಿಸಲಾಗಿತ್ತು. ಹೊಸ ಕಾರ್ಡ್ಗಳಿಗೂ ಇದೇ ವಿಧಾನ ಅನುಸರಿಸಲಾಗಿದೆ. ಇಂಥ ಕಠಿಣ ಹಾಗೂ ಪಾರದರ್ಶಕ ಪ್ರಕ್ರಿಯೆ ನಡೆದ ನಂತರವೂ ಬೋಗಸ್ ಕಾರ್ಡ್ ಇದೆ ಎಂದು ಹೇಳಲು ಸರಕಾರಕ್ಕೆ ಕಿಂಚಿತ್ ಮುಜುಗರವೂ ಆಗುವುದಿಲ್ಲವೇ?
ಈಗ ಪಡಿತರ ಚೀಟಿಗಳಿಗೆ ಚುನಾವಣಾ ಗುರುತು ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಹಾಗೂ ಆಧಾರ್ ಕಾರ್ಡ್ ಇದ್ದಲ್ಲಿ ಅದರ ಸಂಖ್ಯೆಯನ್ನು ಅಳವಡಿಸಬೇಕೆಂಬ ಸೂಚನೆ ಬಂದಿದೆ. ಎಸ್ಎಂಎಸ್ ಮಾಡುವ ವಿಧಾನವನ್ನು ಸಹ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಒಂದು ಅಚ್ಚರಿಯ ಸಂಗತಿ ಎಂದರೆ ಇಪ್ಪತ್ತೊಂದು ವರ್ಷ ದಾಟಿದ ಎಲ್ಲರ ಚುನಾವಣಾ ಗುರುತು ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಲು ಸೂಚನೆ ಇದೆ. ಆದರೆ ಹದಿನೆಂಟು ವರ್ಷ ದಾಟಿದವರು ಮತದಾರರಾಗಲು ಅರ್ಹರಾಗಿದ್ದು ಅವರು ಗುರುತುಚೀಟಿ ಹೊಂದಬಹುದಾಗಿದೆ. ಹಾಗೆಂದಾಗ ಈ ಮೂರು ವರ್ಷದ ವಿನಾಯಿತಿ ಯಾರಿಗೆ? ಯಾಕಾಗಿ ಎಂದು ಸ್ವಯಂ ವಿವರಣಾತ್ಮಕವಾಗಿಲ್ಲ. ಹಾಗೆ ಪಡಿತರ ಚೀಟಿಯಲ್ಲಿ ನೊಂದಾಯಿತನಾಗಿದ್ದು ಇಪ್ಪತ್ತೊಂದು ವರ್ಷ ದಾಟಿದ ವ್ಯಕ್ತಿಯೋರ್ವ ಕಾರಣಾಂತರದಿಂದ ಮತದಾರರ ಗುರುತುಚೀಟಿ ಹೊಂದಿಲ್ಲವಾದರೆ ಅವನ ಗತಿಯೇನು? ಚುನಾವಣಾ ಗುರುತುಚೀಟಿ ದಿಢೀರ್ ಪಡೆಯಲು ಸಾಧ್ಯವೇ?
ಈ ವಿದ್ಯಮಾನ ಆಡಳಿತದ ಅದಕ್ಷತೆಯನ್ನು ಎತ್ತಿ ತೋರಿಸುತ್ತದೆ. ಇದರ ಪರಿಹಾರಕ್ಕಾಗಿ ಹೊಸ ಹೊಸ ನಿಯಮಾವಳಿಗಳನ್ನು ರೂಪಿಸುವ ಅವಸರದಲ್ಲಿ ಸರಕಾರವಿರುತ್ತದೆ. ಈ ಹೊಸ ನಿಯಮಾವಳಿ ಅನುಷ್ಠಾನದ ಕಾಲಕ್ಕೆ ಸಾರ್ವಜನಿಕರು ಪಡಬಾರದ ಕಷ್ಟ ಅನುಭವಿಸುತ್ತಾರೆ. ಈಗ ನೋಡಿ ಬೋಗಸ್ ಕಾರ್ಡ್ನ್ನು ಪತ್ತೆ ಹಚ್ಚುವ ಉದ್ದೇಶದಡಿಯಲ್ಲಿ ಪಡಿತರ ಚೀಟಿಗೆ ಎಪಿಕ್ ಕಾರ್ಡ್ನ ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಅಳವಡಿಸಲು ಸೂಚನೆ ನೀಡಲಾಗಿದೆ. ಈ ಎಸ್ಎಂಎಸ್ ಮಾಡುವ ಕೌಶಲ್ಯ ನಮ್ಮಲ್ಲಿ ಎಷ್ಟು ಮಂದಿಗಿದೆ? ಅವರೆಲ್ಲ ಸರಕಾರ ಅನುಮೋದಿಸಿದ ಫ್ರಾಂಚೈಸಿ ಬಳಿಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಈ ಕಾರ್ಯ ಜರಗಿಸಬೇಕು. ನಮ್ಮ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಬ್ಬ ಸಾಮಾನ್ಯ ಕೂಲಿಕಾರನ ದಿನಗೂಲಿಯ ಬಜಾರು ದರ ಸುಮಾರು ರು. 400-500. ಹಾಗಾದರೆ ಕರ್ನಾಟಕದಲ್ಲಿ ಎಷ್ಟು ಮಾನವ ದಿನಗಳ ವ್ಯಯ ಈ ಉದ್ದೇಶಕ್ಕಾಗಿ ಆಗುತ್ತದೆ ಹಾಗೂ ಎಷ್ಟು ರಾಷ್ಟ್ರೀಯ ಉತ್ಪನ್ನ ನಷ್ಟವಾದೀತೆಂಬುದನ್ನು ನೀವೇ ಊಹಿಸಿ. ಮೇಲಾಗಿ ಈ ಬೋಗಸ್ ಕಾರ್ಡ್ಗಳನ್ನು ಪತ್ತೆ ಹಚ್ಚಲು ಸರಕಾರಿ ಖರ್ಚಿನಲ್ಲಿ ಅಥವಾ ಸರಕಾರಿ ಯಂತ್ರ ಬಳಸಿ ಪತ್ತೆ ಹಚ್ಚುವ ಯಾವ ಯೋಜನೆಗಳೂ ಇಲ್ಲ. ಇಲ್ಲಿಯೂ ದಂಡ, ಕಷ್ಟ ಕಾರ್ಪಣ್ಯ ಸಾರ್ವಜನಿಕರಿಗೇ.
ಬೋಗಸ್ ಚೀಟಿಗಳು ನೈಜ ಚೀಟಿಗಳ ಸಂಖ್ಯೆಗಿಂತ ಖಂಡಿತವಾಗಿಯೂ ಕಡಿಮೆಯೇ. ಈ ಕಡಿಮೆ ಸಂಖ್ಯೆಯ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಹೆಚ್ಚು ಸಂಖ್ಯೆಯ ನೈಜ ಕಾರ್ಡುದಾರರು ತಮ್ಮ ಚೀಟಿ ನಕಲಿಯಲ್ಲ ಎಂದು ಶ್ರುತಪಡಿಸುವ ಜವಾಬ್ದಾರಿ ಹೊರಬೇಕು. ಸೇವಾ ಪೂರೈಕೆದಾರನಿಗೆ ಯಾವ ಬದ್ಧತೆಯೂ ಇಲ್ಲ. ಯಾವತ್ತೂ ಸ್ವಸ್ಥ ಆದರೆ ಸೇವಾಕಾಂಕ್ಷಿ ಪರದಾಡಬೇಕು. ಈ ಪರಿಸ್ಥಿತಿಯಲ್ಲಿ ಸರಕಾರವೇ ಉನ್ನತಾಧಿಕಾರಿಗಳನ್ನೊಳಗೊಂಡ ಒಂದು ವಿಚಕ್ಷಣ ತಂಡವನ್ನು ರಚಿಸಬಹುದಲ್ಲ? ಆ ತಂಡ ಅಲ್ಲಲ್ಲಿ ಡ್ರೈವ್ ಮಾಡಿ ಬೋಗಸ್ ಕಾರ್ಡ್ಗಳನ್ನು ಪತ್ತೆ ಹಚ್ಚಿ ಸ್ಥಳದಲ್ಲಿಯೇ ರದ್ದುಪಡಿಸಲಿ ಮತ್ತು ಶುದ್ಧ ಕಾರ್ಡ್ಗಳಿಗೆ ಅನುಮೋದನೆಯ ಅಂಕಿತ ಹಾಕಲಿ. ತಪ್ಪಿತಸ್ಥರಿಗೆ ದಂಡ ವಿಧಿಸಲೂಬಹುದು.
ಕರ್ನಾಟಕದ ಹಾಲಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮಾಡಿದ ಮೊದಲ ಕೆಲಸವೆಂದರೆ ಬಿಪಿಎಲ್ ಡ್ರೈವ್. ಅಧಿಕಾರಿ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿ ಅರ್ಜಿಗಳನ್ನೆಲ್ಲವನ್ನು ಬಿಪಿಎಲ್ ಎಂದು ಪರಿಗಣಿಸಲು ಸೂಚಿಸಿದ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಈಗ ಬೋಗಸ್ ಕಾರ್ಡ್ ಹೆಚ್ಚಾಗಿದೆ ಎಂದು ಮೊಸಳೆ ಕಣ್ಣೀರು ಸುರಿಸುವ ಪರಿ ವಿಚಿತ್ರವಾಗಿದೆ.
ರಾಜ್ಯದ ಎಲ್ಲ ಭಾಗದಲ್ಲಿಯೂ ಸರಕಾರಿ ಯಂತ್ರವಿದೆ. ಅಧಿಕಾರಿ ಸಿಬ್ಬಂದಿಗಳಿದ್ದಾರೆ. ಆಯಾ ಪ್ರದೇಶದಲ್ಲಿ ಮರು ಸರ್ವೇ ಮಾಡಿಸಬೇಕು. ಕುಟುಂಬಗಳನ್ನು ಗುರುತಿಸಿ ಬಿಪಿಎಲ್ ಅಥವಾ ಎಪಿಎಲ್ ಎಂದು ವರ್ಗೀಕರಿಸಲು ಈಗಾಗಲೇ ಸರಕಾರ ನೀಡಿದ ಮಾನದಂಡವಿದೆ. ಅದರಂತೆ ನೌಕರಶಾಹಿ ತಮ್ಮ ವಿವೇಚನೆ ಬಳಸಿ ಸರ್ವೇ ಅಖೈರುಗೊಳಿಸತಕ್ಕದ್ದು. ಆ ಕಾಲಕ್ಕೆ ಶಾಸಕ, ಸಚಿವರುಗಳ್ಯಾರೂ ಅಧಿಕಾರಿ, ನೌಕರರನ್ನು ಸಂಪರ್ಕಿಸಕೂಡದು. ಇತ್ತೀಚಿನ ವರ್ಷದಲ್ಲಿ ಪ್ರಗತಿ ಪರಿಶೀಲನಾ ನೆಪದಲ್ಲಿ ನೌಕರರ ಮೇಲೆ ಸಚಿವ ಶಾಸಕರ ಒತ್ತಡ ಹೆಚ್ಚಾಗುತ್ತಿದೆ. ಪ್ರಗತಿ ಪರಿಶೀಲನೆಯನ್ನು ಆಗಾಗ ನಡೆಯುವ ಮಾಸಿಕ ಹಾಗೂ ಪಾಕ್ಷಿಕ ಸಭೆಗಳಲ್ಲಿ ನಡೆಸಬೇಕು. ನೌಕರರ ದೈನಂದಿನ ಕರ್ತವ್ಯದ ನಡುವೆ ಅಲ್ಲ. ಜನಪ್ರತಿನಿಧಿಗಳ ಹಸ್ತಕ್ಷೇಪ ಕಡಿಮೆಯಾದಂತೆ ಸರಕಾರಿ ಯಂತ್ರದ ದಕ್ಷತೆ ಹೆಚ್ಚುತ್ತದೆ. ಆಗ ನಿಜವಾದ ಸಾರ್ವಜನಿಕ ಹಿತಾಸಕ್ತಿ ಸ್ಥಾಪನೆಯಾದೀತು.
-ಬೇಳೂರು ರಾಘವ ಶೆಟ್ಟಿ, ಚಿತ್ರಪಾಡಿ, ಉಡುಪಿ