ಮಳೆ ಮರೆಯಾಗಿದೆ. ಬೆಳೆ ಮುರುಟಿಕೊಂಡಿದೆ. ಮತ್ತೆ ಬರ ಬರುತ್ತಿದೆ. ಎರಡೂ ಕೈಗಳಲ್ಲೂ ಕಾದ ಸಲಾಕೆ ಹಿಡಿದುಕೊಂಡೇ ಬರುತ್ತಿದೆ. ಈ ಬಾರಿ ಇಡೀ ದೇಶಕ್ಕೇ ಬರೆ ಎಳೆಯುತ್ತಿದೆ. ರಾಜಸ್ಥಾನ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿ ನರಳುತ್ತಿದೆ.
ಮನುಷ್ಯನ ದುರ್ಬುದ್ಧಿ, ದುರಾಸೆ, ಪರಿಸರ ಸಮತೋಲನವನ್ನೇ ಎಕ್ಕುಡಿಸಿದೆ. ಬರಬರುತ್ತಾ ಹಸಿರು ಮಾಯ. ಅದನ್ನು ಆಧರಿಸಿದ ಮಳೆಯೂ. ಮಳೆಯಿಲ್ಲದೆ ಹಸಿರಿಲ್ಲ. ಹಸಿರಿಲ್ಲದೆ ಮಳೆಯಿಲ್ಲ. ಆದರೂ ಮನುಷ್ಯನಿಗೆ ಬುದ್ಧಿ ಬರುತ್ತಿಲ್ಲ. ಹೀಗಾಗಿ ಮೇಲಿಂದ ಮೇಲೆ ಬರ ಬರುತ್ತಿದೆ.
ಇನ್ನೊಂದೆಡೆ ಆಡಳಿತಾರೂಢ ಸರಕಾರಗಳಿಗೂ ಶಾಶ್ವತ ಪರಿಹಾರಗಳು ಬೇಕಿಲ್ಲ. ಏಕೆಂದರೆ ಅವುಗಳನ್ನು ಮುನ್ನಡೆಸುತ್ತಿರುವುದು ಇದೇ ಮನುಷ್ಯ ಮತ್ತವನ ಬುದ್ಧಿಯೇ. ಹೀಗಾಗಿ ಪರೀಕ್ಷೆ ವೇಳೆಗೆ ಪುಸ್ತಕ ಹಿಡಿದಂತೆ ಬರ ಬಂದಾಗ ತಾತ್ಕಾಲಿಕ ಪರಿಹಾರಗಳ ಮೊರೆ ಹೋಗುತ್ತಾರೆ. ಇಲ್ಲೂ ಕೂಡ ಓದದೇ ಪರೀಕ್ಷೆ ಬರೆದವನಿಗೆ ಬಂದಷ್ಟೇ ಅಂಕಗಳು. ಬರ ಮತ್ತು ಪರಿಹಾರ ಎರಡರ ಸ್ಥಿತಿಯೂ ಅಷ್ಟೇ.
ಈ ಬಾರಿ ಇಡೀ ದೇಶ ಬರದ ಹೊಡೆತಕ್ಕೆ ಸಿಕ್ಕಿದೆ. ಕೇಂದ್ರ ಸರಕಾರ ಬರ ಪರಿಹಾರಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲು ಅದ್ಯತೆ ಕೊಟ್ಟಿದೆ. ಅದೇ ರೀತಿ ಕರ್ನಾಟಕ ಕೂಡ ಬರದ ಸುಳಿಯಲ್ಲಿ ಮುಳುಗುತ್ತಿದೆ. ರಾಜ್ಯದ 220 ತಾಲೂಕುಗಳ ಪೈಕಿ 125 ಬರಪೀಡಿತ ಎಂದು ಗುರುತು ಹಾಕಿಸಿಕೊಂಡಿವೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಕೂಡ ಒಂದಷ್ಟು ಪರಿಹಾರೋಪಾಯಗಳ ಮೊರೆ ಹೋಗಿದೆ. ಪರಿಹಾರ ಕೆಲಸಗಳಿಗಾಗಿ 564 ಕೋಟಿ ರುಪಾಯಿಯನ್ನು ಮೀಸಲು, ರೈತರ ಸಾಲ ವಸೂಲು ಮುಂದೂಡಿಕೆ, ಅಲ್ಪಾವಧಿ ಸಾಲ ದೀರ್ಘಾವಧಿಗೆ ಪರಿವರ್ತನೆ, ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳನ್ನು ಬರ ಎದುರಿಸಲು ಕಟ್ಟೆಚ್ಚರದಲ್ಲಿ ಇರಿಸಿರುವುದಾಗಿ ಅವರು ಘೋಷಿಸಿದ್ದಾರೆ. ಅದೆಲ್ಲ ಸರಿ, ಆದರೆ...?!
ಬರ ಪರಿಹಾರ ಕೆಲಸಗಳನ್ನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಅವರ ಮೂಲಕ ಸ್ವಾರ್ಥ ಸಾಧಿಸುವ ಜನಪ್ರತಿನಿಧಿಗಳಿಗೆ ನೈಜ ಕಾಳಜಿ, ಬದ್ಧತೆ, ಪ್ರಾಮಾಣಿಕತೆ ಇದೆಯೇ ಎಂಬುದರ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಸರಕಾರದ ಯೋಜನೆಗಳು, ಆಶೋತ್ತರಗಳು ಸಂಕಷ್ಟಕ್ಕೆ ಸಿಕ್ಕಿರುವ ಜನಸಮುದಾಯವನ್ನು ಮೂಲಸ್ವರೂಪದಲ್ಲೇ ತಲುಪುತ್ತವೆಯೇ ಎಂಬುದರ ಬಗ್ಗೆಯೂ ತಿಳಿಸಿಲ್ಲ. ಸರಕಾರ ಯೋಜನೆಗಳನ್ನು ರೂಪಿಸಿದರಷ್ಟೇ ಸಾಲದು. ಯಾರಿಗಾಗಿ ಅವುಗಳನ್ನು ರೂಪಿಸಲಾಗಿದೆಯೋ ಅವರಿಗೆ ಅವು ತಲುಪಬೇಕು. ಹಾಗೆ ತಲುಪಿದರೆ ಮಾತ್ರ ಆ ಯೋಜನೆ ಸಾರ್ಥಕ. ಆದರೆ ಆಗುತ್ತಿರುವುದಾದರೂ ಏನು..? ಬರ ಬಂತು ಎಂದರೆ ಅಧಿಕಾರಿಗಳೆ ಸುಗ್ಗಿ. ಅಧಿಕಾರಿಗಳು, ಮಧ್ಯವರ್ತಿಗಳು ಬರವನ್ನೇ ತಟ್ಟೆ ಮಾಡಿಕೊಂಡು ಉಣ್ಣಲು ಕೂರುತ್ತಾರೆ. ಅವರಿಗೆ 'ಮಾರ್ಗದರ್ಶನ' ನೀಡಬೇಕಾದ ಜನಪ್ರತಿನಿಧಿಗಳೂ ಆ ತಟ್ಟೆಗೆ ಕೈ ಹಾಕುತ್ತಾರೆ. ಎರಡು ಕೈಗಳನ್ನು ನಾಲ್ಕು ಮಾಡಿಕೊಂಡು. ಅಧಿಕಾರಿ, ಮಧ್ಯವರ್ತಿ ಹಾಗೂ ಜನಪ್ರತಿನಿಧಿ ಈ 'ತ್ರಿಮೂರ್ತಿ'ಗಳ ಕಾಂಬಿನೇಷನ್‌ನಲ್ಲಿ ಪರಿಹಾರ ಬರಪೀಡಿತನನ್ನು ತಲುಪುವಷ್ಟರಲ್ಲಿ ಮೂಲಸ್ವರೂಪ ಕಳೆದುಕೊಂಡಿರುತ್ತದೆ. ಹಲಸಿನ ಹಣ್ಣಿನ ಆಕಾರದಲ್ಲಿ ಕಂಡ ಪರಿಹಾರ ರೈತನ ಕೈ ಸೇರುವಷ್ಟರಲ್ಲಿ ದ್ರಾಕ್ಷಿ ಗಾತ್ರಕ್ಕಿಳಿದಿರುತ್ತದೆ. ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಈ 'ತ್ರಿಮೂರ್ತಿ'ಗಳೇ ಬಹುಪಾಲು ತಿಂದಿರುತ್ತಾರೆ. ಮಿಕ್ಕಿದ್ದಷ್ಟೇ ರೈತರಿಗೆ ದಕ್ಕಿದ್ದು.
ಹೌದು, ಬರ ಪರಿಹಾರದ್ದು ನಾನಾ ಸ್ವರೂಪ. ಅದೇ ರೀತಿ ಅದರಲ್ಲಿನ ಭ್ರಷ್ಟಾಚಾರದ್ದು, ಶೋಷಣೆಯದ್ದು, ಕಬಳಿಕೆಯದ್ದೂ. ಪರಿಹಾರ ಪ್ರಮಾಣ ನಿಗದಿಯಿಂದಲೇ ಶುರುವಾಗುತ್ತದೆ ರೈತನ ಶೋಷಣೆ. ಎಕರೆಗೆ ಇಷ್ಟು ಅಂತ ಪರಿಹಾರ. ಬಹುತೇಕ ರೈತರು 10 ಗುಂಟೆಯಿಂದ ಒಂದೆರಡು ಎಕರೆ ಜಮೀನು ಹೊಂದಿರುತ್ತಾರೆ. ಕಡಿಮೆ ಜಮೀನು ಹೊಂದಿರುವ ರೈತನಿಗೆ ಬೆಳೆ ಪರಿಹಾರ ಅಂತ ನೂರೋ ಇನ್ನೂರೋ ರುಪಾಯಿ ಚೆಕ್ ಸಿಗುತ್ತದೆ. ಅದನ್ನು ಪಡೆಯಲು 500 ರುಪಾಯಿ ಠೇವಣಿ ಇಟ್ಟು ಬ್ಯಾಂಕ್ ಖಾತೆ ತೆರೆಯಬೇಕು. 200 ರುಪಾಯಿ ಪರಿಹಾರಕ್ಕೆ 500 ರುಪಾಯಿ ಖರ್ಚು.
ಇನ್ನು ಸಾಲ ಮಂಜೂರು ಸರ್ಕಸ್ ನೋಡಬೇಕು. ಸಾಲ ಪಡೆಯದೇ ಇರುವ ರೈತರನ್ನು ದುರ್ಭೀನು ಹಾಕಿ ಹುಡುಕಬೇಕು. ಹೊಸ ಸಾಲ ಪಡೆಯಲು ಹಳೇ ಸಾಲ ತೀರಿಸಬೇಕು. ಲೆಕ್ಕದ ಪುಸ್ತಕದಲ್ಲಿ ಮಾತ್ರ ಸಾಲ ತೀರಿ ಹೊಸ ಸಾಲ ಬಂದಿರುತ್ತದೆ. ಆದರೆ ವಾಸ್ತವದಲ್ಲಿ ಹಳೇ ಸಾಲವೇ ನವೀಕರಣಗೊಂಡಿರುತ್ತದೆ. ಆ ಪ್ರಕ್ರಿಯೆಯಲ್ಲಿ ರೈತ ಒಂದಷ್ಟು ಕಳೆದುಕೊಂಡದ್ದಷ್ಟೇ ಭಾಗ್ಯ. ಇಲ್ಲಾವಾದರೆ ಆತನ ಆಸ್ತಿ-ಪಾಸ್ತಿ ಹರಾಜಾಗುತ್ತದೆ. ರಾಜ್ಯ ಸರಕಾರವೇನೂ ರೈತರಿಗೆ ಮೂರು ಲಕ್ಷ ರುಪಾಯಿವರೆಗೆ ಕೃಷಿ ಸಾಲ ನಿಗದಿ ಮಾಡಿದೆ. ಆದರೆ ಇದನ್ನು ಹಿಡಿಯಲು ದೊಡ್ಡ ಇಡುವಳಿದಾರರೇ ಬೇಕು. ಅಂದರೆ ಹೆಚ್ಚು ಜಮೀನು ಇದ್ದವರಿಗೆ ಮಾತ್ರ ಈ ಸೌಲಭ್ಯ. ಸಣ್ಣ ಪುಟ್ಟ ರೈತರಿಗೆ ಸಾಲದ ಪ್ರಮಾಣವೂ ಸಣ್ಣದೇ. ಆದರೆ ಅದನ್ನು ದಕ್ಕಿಸಿಕೊಳ್ಳುವಲ್ಲಿ ಇಂತಿಷ್ಟು ಕಮಿಷನ್ ಕಕ್ಕಲೇಬೇಕು. ಸಾಲ ಮಂಜೂರು ಮತ್ತು ಅದರ 'ಸೇವಾಶುಲ್ಕ' ವಸೂಲಿಗೆ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಹೆಗಲ ಮೇಲೆ ಕೈ ಹಾಕಿ ನಿಂತಿರುತ್ತಾರೆ. ಸಹಕಾರಿ ಪತ್ತಿನ ಸಂಘಗಳಲ್ಲಿ ಸಾಲ ಪಡೆಯಬೇಕಾದವರು ಪದಾಧಿಕಾರಿಗಳ ಅಭೀಪ್ಸೆಗಳನ್ನು ಈಡೇರಿಸಬೇಕು. ಸಾಲ ಮೊತ್ತದ ಶೇಕಡಾ 25 ರಷ್ಟು ಪದಾಧಿಕಾರಿಗಳ ಗೊಬ್ಬರದಂಗಡಿಯಲ್ಲಿನ ವ್ಯಾಪಾರಕ್ಕೆ ವಿನಿಯೋಗವಾಗಲೇಬೇಕು. ಸಾಲ ಮಂಜೂರಿಗೆ ಇದು ಲೋಕಲ್ ಷರತ್ತು. ಶೋಷಣೆಯ ಮತ್ತೊಂದು ಕರಾಮತ್ತು. ಕೃಷಿ ಸಾಲ ಪಡೆಯಲು ಪ್ರತಿ ವರ್ಷವೂ ಪಹಣಿ ಪಡೆದು ಸಲ್ಲಿಸಬೇಕು. ಪಹಣಿ ಬರೆದು ಕೊಡುವವನಿಗೆ ಕೊಡಬೇಕಾದ್ದನ್ನು ಕೊಡದಿದ್ದರೆ ಪಹಣಿ ತುಂಬ ಲೋಪಗಳೇ ನುಸುಳುತ್ತವೆ. ಅದನ್ನು ಎಸಿ ಕೋರ್ಟ್‌ನಲ್ಲಿ ಸರಿಪಡಿಸಿಕೊಳ್ಳಲು ಒಂದೋ ಎರಡೋ ವರ್ಷ ಬೇಕು. ಅಷ್ಟರಲ್ಲಿ ಆ ಸಾಲಿನ ಬರ ಪರಿಹಾರದ ಅವಧಿ ಮುಗಿದಿರುತ್ತದೆ. ರೈತನ ಅವಕಾಶವೂ ತಪ್ಪಿ ಹೋಗಿರುತ್ತದೆ. ದುಡ್ಡಿಲ್ಲದಿದ್ದರೆ ಏನೂ ನಡೆಯದು. ಕಷ್ಟ ಬಂತು ಎಂದು ಪರಿಹಾರ. ಆದರೆ ಅದನ್ನು ಪಡೆಯುವುದೇ ದೊಡ್ಡ ಕಷ್ಟವಾದರೇ..?
ಕೃಷಿ ಪಂಪ್‌ಸೆಟ್ ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋಯಿತೆನ್ನಿ. ಮೂರು ದಿನದೊಳಗೆ ದುರಸ್ತಿ ಮಾಡಬೇಕು, ಇಲ್ಲವೇ ಹೊಸದು ಹಾಕಬೇಕು ಅನ್ನುವುದು ನಿಯಮ. ಮೂರು ತಿಂಗಳಾದರೂ ಸರಿ ಹೋಗುವುದಿಲ್ಲ. ಸಂಬಂಧಪಟ್ಟ ಎಂಜಿನಿಯರ್‌ಗೆ ಆ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ನಿಗದಿ ಆಗಿರುವ ಕಪ್ಪ ಕೊಡಲೇಬೇಕು. ಅಷ್ಟೇ ಅಲ್ಲ, ಆ ಟ್ರಾನ್ಸ್‌ಫಾರ್ಮರ್ ತರಲು ಇವರೇ ವಾಹನ ವ್ಯವಸ್ಥೆ ಮಾಡಬೇಕು. ಶೋಷಣೆಯ ಅವತಾರಗಳನ್ನು ನೋಡಿ. ಹನಿ ನೀರಾವರಿಗೆ ಶೇಕಡಾ 90 ರಷ್ಟು ಸಬ್ಸಿಡಿ ಅನ್ನುತ್ತಾರೆ. ಆದರೆ ರೈತನಿಗೆ ತಲುಪುವಷ್ಟರಲ್ಲಿ ಅದರ ಸ್ವರೂಪ ಶೇಕಡಾ 45 ರಿಂದ 50 ಕ್ಕೆ ಕುಸಿದಿರುತ್ತದೆ. ತೋಟಗಾರಿಕೆ ಇಲಾಖೆ ಫೀಲ್ಡ್‌ಮೆನ್‌ನಿಂದ ಹಿಡಿದು ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಅವರ ಹುದ್ದೆಗಳಿಗೆ ತಕ್ಕಂತೆ ಪಾಲು ಸಲ್ಲಿಸಬೇಕು. ಇಲ್ಲದಿದ್ದರೆ ಎರಡು-ಮೂರು ವರ್ಷ ಕಳೆದರೂ ಸಬ್ಸಿಡಿ ಸಿಗುವುದಿಲ್ಲ. ದುಡ್ಡಿಲ್ಲದಿದ್ದರೆ ಏನೂ ನಡೆಯುವುದಿಲ್ಲ.
ಇವು ರೈತರ ಶೋಷಣೆಯ ಕೆಲ ಸ್ಯಾಂಪಲ್‌ಗಳು ಮಾತ್ರ. ಅವುಗಳ ಅಗಾಧತೆ ಅಧ್ಯಯನ ಮಾಡಿದಷ್ಟು ಆಳ ಮತ್ತು ವಿಸ್ತಾರ. ಅದಕ್ಕೇ ಹೇಳಿದ್ದು, ಅದು ಬರ ಪರಿಹಾರ ಇರಲಿ, ಕೃಷಿ ಸೌಕರ್ಯವೇ ಆಗಿರಲಿ. ಸರಕಾರ ಬರೀ ಯೋಜನೆಗಳನ್ನು ರೂಪಿಸಿದರಷ್ಟೇ ಸಾಲದು, ಅವುಗಳ ಅನುಷ್ಠಾನ ಸರಿ ದಾರಿಯಲ್ಲಿ ಸಾಗಿದೆಯೇ ಎಂಬುದರ ಬಗ್ಗೆ ಕಣ್ಗಾವಲು ಇಟ್ಟಿರಬೇಕು. ಪರಿಹಾರ ಮೂಲ ಸ್ವರೂಪದಲ್ಲೇ ರೈತರಿಗೆ ನೇರವಾಗಿ ತಲುಪುತ್ತಿದೆಯೇ? ಅಧಿಕಾರಿಗಳು, ಮಧ್ಯವರ್ತಿಗಳು ಅವರಿಂದ ಸುಲಿಗೆ ಮಾಡುತ್ತಿಲ್ಲವೇ? ಒಂದೊಮ್ಮೆ ಹಾಗೇನಾದರೂ ಆಗುತ್ತಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬಿತ್ಯಾದಿ ಸಂಗತಿಗಳ ಬಗ್ಗೆ ನಿಗಾ ವಹಿಸಬೇಕು. ಆಗಷ್ಟೇ ಸರಕಾರದ ಯೋಜನೆಗಳು ಸಂತ್ರಸ್ತರಿಗೆ ತಲುಪಿ, ಮೂಲ ಉದ್ದೇಶ ಸಾರ್ಥಕವಾಗುತ್ತದೆ. ಇದು ನೇರ ಪರಿಹಾರದ ಮಾತಾಯಿತು. ಇನ್ನು ಬರಗಾಲ ಸಂದರ್ಭ ಸರಕಾರ ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಗೆ ಕಲ್ಪಿಸುವ ಅಲ್ಪಾವಧಿ ಉದ್ಯೋಗಗಳಲ್ಲಿಯೂ ಸಾಕಷ್ಟು ಅಕ್ರಮ ನಡೆಯುತ್ತಿದೆ. ಕೆರೆ ಹೂಳೆತ್ತುವುದು, ಶೌಚಾಲಯ, ಒಳಚರಂಡಿ, ರಸ್ತೆಗಳ ನಿರ್ಮಾಣ, ಕಟ್ಟಡಗಳ ನಿರ್ಮಾಣ ಮತ್ತಿತರ ಕೆಲಸಗಳನ್ನು ಒದಗಿಸಲಾಗುತ್ತದೆ. ಆದರೆ ಅಧಿಕಾರಿಗಳ ಕೈಚಳಕದಿಂದ ಈ ಕಾಮಗಾರಿಗಳೆಲ್ಲ ಬರೀ ಕಾಗದಗಳ ಮೇಲಷ್ಟೇ ದಾಖಲಾಗುತ್ತವೆ. ಯಾವುದೇ ಕಾಮಗಾರಿ ನಡೆಯದಿದ್ದರೂ ಸುಳ್ಳು ದಾಖಲೆಗಳು ಸೃಷ್ಟಿ ಆಗುತ್ತವೆ. ಈ ಯೋಜನೆಗಳಿಗೆಂದು ಸರಕಾರ ಬಿಡುಗಡೆ ಮಾಡುವ ಕೋಟಿ, ಕೋಟಿ ಹಣ ಅಧಿಕಾರಿಗಳ ಹಾಗೂ ಮಧ್ಯವರ್ತಿಗಳ ಪಾಲಾಗುತ್ತದೆ. ಅತ್ತ ಕೆಲಸವೂ ಇಲ್ಲ, ಇತ್ತ ಸಂತ್ರಸ್ತರಿಗೆ ಕೂಲಿಯೂ ಇಲ್ಲ. ಸರಕಾರದ ಹಣ ವಿನಾಕಾರಣ ಪೋಲು. 'ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ' ಎಂಬಂತೆ. ಅದಕ್ಕೇ ಹೇಳುವುದು. ಸರಕಾರ ಯೋಜನೆ ರೂಪಿಸುವುದು ದೊಡ್ಡದಲ್ಲ. ಹಣ ಬಿಡುಗಡೆ ಮಾಡುವುದು ದೊಡ್ಡದಲ್ಲ. ನಿರ್ದಿಷ್ಟ ಉದ್ದೇಶಕ್ಕೆ ಬಿಡುಗಡೆಯಾದ ಹಣ ಸದ್ವಿನಿಯೋಗ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅದಕ್ಕಾಗಿ ನಿರಂತರ ಮೇಲ್ವಿಚಾರಣೆ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು.
ಎಲ್ಲಕ್ಕಿಂತ ಮಿಗಿಲಾಗಿ ಬರಗಾಲಕ್ಕೆ ನಿಸರ್ಗವನ್ನು ಶಪಿಸುವುದನ್ನು ಬಿಟ್ಟು. ಅಮೃತ ಸಮಾನ ನೀರಿನ ಸದ್ಬಳಕೆ ಬಗ್ಗೆ ಗಮನ ಹರಿಸಬೇಕು. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಅಂತರ್ಜಲ ಅಭಿವೃದ್ಧಿ, ಮಳೆ ನೀರು ಸಂಗ್ರಹ, ಆಣೆಕಟ್ಟೆಗಳು, ಕೆರೆಗಳ ಹೂಳೆತ್ತುವುದು, ನದಿಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಿಷೇಧ, ಸಣ್ಣ-ಸಣ್ಣ ಒಡ್ಡುಗಳ ನಿರ್ಮಾಣ, ಹನಿ ನೀರಾವರಿಗೆ ಒತ್ತು, ಅಲ್ಪಾವಧಿ ಬೆಳೆಗಳಿಗೆ ಗಮನ, ಇರುವ ನೀರಿನ ದೀರ್ಘಾವಧಿ ಸದ್ಬಳಕೆ ಇವೇ ಮೊದಲಾದ ಕ್ರಮಗಳಿಗೆ ಆದ್ಯತೆ ನೀಡಬೇಕು ಹಾಗೂ ಅನುಷ್ಠಾನಕ್ಕೆ ತರಬೇಕು.
ಇನ್ನೂ ಒಂದು ವಿಷಯ. ಬರ ಮತ್ತು ಬರ ಪರಿಹಾರ ವಿಷಯವನ್ನು ಜನಪ್ರತಿನಿಧಿಗಳು ಬರೀ ಚರ್ಚೆಗಷ್ಟೇ ಸೀಮಿತಗೊಳಿಸದೆ ನಿಜ ಅರ್ಥದಲ್ಲಿ ಸಮಸ್ಯೆಗೆ ಉತ್ತರ ಕಂಡುಹಿಡಿಯಲು ಬದ್ಧತೆ ಮೆರೆಯಬೇಕು. ವಿಧಾನಮಂಡಲದ ಪ್ರತಿ ಅಧಿವೇಶನದಲ್ಲಿ ಬರ ಕುರಿತ ಚರ್ಚೆ ಇದ್ದೇ ಇರುತ್ತದೆ. ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಇಲ್ಲಾಡುವ ಮಾತು ಬರೀ ವಾಡಿಕೆಗಷ್ಟೇ ಎಂಬಂತೆ ಜಾಲುಜೊಳ್ಳಾಗಿ ಹೋಗಿದೆ. ಜನಪ್ರತಿನಿಧಿಗಳು ಇಲ್ಲಿ ಮಾತಾಡುತ್ತಾರೆ. ಇಲ್ಲಿಂದ ಎದ್ದು ಹೋದ ನಂತರ ಮರೆತುಬಿಡುತ್ತಾರೆ. ನಿಜವಾಗಿಯೂ 'ಬರ' ಇರುವುದು ಇವರ ಬದ್ಧತೆಗೆ. ಈ ಬರ ನಿವಾರಣೆ ಆಗದ ಹೊರತು ನಿಸರ್ಗದತ್ತ ಬರಕ್ಕೆ ಉತ್ತರವೂ ಸಿಗುವುದಿಲ್ಲ. ಪರಿಹಾರವೂ ಸಿಗುವುದಿಲ್ಲ.
ಲಗೋರಿ: ಭರವಸೆ ಎನ್ನುವುದು ನಿಜಸ್ಥಿತಿಯಾಗಿ ಬದಲಾಗಲು ಬದ್ಧತೆ ಎಂಬ ಮನಸ್ಥಿತಿ ಮುಖ್ಯ.
-ಪಿ. ತ್ಯಾಗರಾಜ್
thyagarjun@gmail.com