ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸರ್ಕಾರ ಆಲಿಸುತ್ತಿಲ್ಲ ಪೊಲೀಸರ ದುಮ್ಮಾನ, ದಿನಾ ಅವಮಾನ!

Srinivasa Murthy VN
Updated On : 13 Jul 2014, 9:34 am

ಅಪರಿಚಿತ ಶವ ಹೂಳಲು ಪೊಲೀಸರಿಗೆ ಸರ್ಕಾರ ನೀಡುವ ಭತ್ಯೆ 10, ಪ್ರಯಾಣ ಸಂದರ್ಭ ಕೈದಿಗಳ ಊಟಕ್ಕೆ ಪೊಲೀಸರಿಗೆ ನೀಡುವ ಭತ್ಯೆ 10, ಬೇರೆ ರಾಜ್ಯಕ್ಕೆ ತನಿಖೆಗೆ ಹೋದರೆ ಊಟ, ತಿಂಡಿ, ತಂಗುವ ವ್ಯವಸ್ಥೆಗೆ 75! ಅದೇ ಶಾಸಕರ ಅಧ್ಯಯನ, ವಿದೇಶ ಪ್ರವಾಸಕ್ಕೆ ಲಕ್ಷಗಟ್ಟಲೆ ಭತ್ಯೆ, ಐಷಾರಾಮಿ ಹೊಟೇಲ್‌ಗಳಲ್ಲಿ ವ್ಯವಸ್ಥೆ! ವರ್ಗಾವಣೆ ಸಂದರ್ಭ ಬಂದು ಕೈಕಾಲು ಹಿಡಿಯುವ ಪೊಲೀಸರು... ಹೀಗೆ ಆಕಾಶ, ಭೂಮಿ ಅಂತರ ಇರೋವಾಗ ಶಾಸಕರಿಗೆ ಪೊಲೀಸರು ಕೀಳಾಗಿ ಕಾಣದೆ ಇರುತ್ತಾರೆಯೇ?
 ಪೊಲೀಸರ ಭ್ರಷ್ಟಾಚಾರ ಹೆಚ್ಚಿದೆ, ಒರಟು ವರ್ತನೆಯಿಂದ ಗೌರವ ಕಡಿಮೆಯಾಗಿದೆ, ಹೀಗಾಗಿ ಪೊಲೀಸರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ ಎಂದು ಸುಲಭದಲ್ಲಿ ವಿಮರ್ಶೆ ಮಾಡಬಹುದು. ಆದರೆ ಪೊಲೀಸರ ಮೇಲಿನ ಗೌರವ ಕಡಿಮೆಯಾಗಲು ಪ್ರಮುಖ ಕಾರಣ ಅವರನ್ನು ನೋಡಿಕೊಳ್ಳುತ್ತಿರುವ ಪೊಲೀಸ್ ಇಲಾಖೆ, ಅದನ್ನು ನೋಡಿಕೊಳ್ಳುವ ಗೃಹ ಇಲಾಖೆ ಹೊಂದಿರುವ ಸರ್ಕಾರ, ಅಂದರೆ ಜನಪ್ರತಿನಿಧಿಗಳು!
 ಯಾವುದೇ ಸುಧಾರಣೆ ಮಾಡದೆ ಪೊಲೀಸರು ಬದಲಾಗಬೇಕು ಎಂದರೆ... ಪೊಲೀಸ್ ಇಲಾಖೆ ಒಳಗಿನ ಗುಲಾಮಗಿರಿ ವ್ಯವಸ್ಥೆ, ಸಿಬ್ಬಂದಿಗೆ ಅವಮಾನದ ಶಿಕ್ಷೆಗಳು, ಪೊಲೀಸರ ಅಮಾನವೀಯ ಬದುಕು, ಇವ್ಯಾವುದನ್ನೂ ಯಾವುದೇ ಸರ್ಕಾರವೂ ಸುಧಾರಿಸುವ ಗೋಜಿಗೆ ಹೋಗಿಲ್ಲ. ಕೇರಳದಲ್ಲಿ ಪೊಲೀಸರು 7ನೇ ವೇತನ ಆಯೋಗ ಪಡೆಯುತ್ತಿದ್ದಾರೆ, ಕರ್ನಾಟಕದಲ್ಲಿ ಇನ್ನೂ 5ನೇ ವೇತನ ಆಯೋಗ ಚಾಲ್ತಿಯಲ್ಲಿದೆ. ಒಬ್ಬ ಮೆಸ್ಕಾಂ, ಬೆಸ್ಕಾಂನ ಲೈನ್‌ಮ್ಯಾನ್ ವೇತನಕ್ಕಿಂತಲೂ ಕಡಿಮೆ ಸಂಬಳ ಇನ್‌ಸ್ಪೆಕ್ಟರ್ ಪಡೆಯುತ್ತಾನೆ ಎಂದಾದರೆ ಪೊಲೀಸ್ ವ್ಯವಸ್ಥೆ ಹೇಗಿರಬೇಡ?
ಕರಾವಳಿಯಲ್ಲಿ ನದಿ, ಸಮುದ್ರವಿದೆ. ಆಗಾಗ ಅಪರಿಚಿತ ಶವಗಳು ಸಿಗುತ್ತವೆ. ಶವವನ್ನು ಆ್ಯಂಬುಲೆನ್ಸ್‌ನಲ್ಲಿ ಸಾಗಿಸಲು ಒಪ್ಪುವುದಿಲ್ಲ. ಆದರಲ್ಲಿಯೂ ಕೊಳೆತ ಶವಗಳನ್ನು ವಾಹನದೊಳಗೆ ಹಾಕಲು ಬಿಡುವುದೇ ಇಲ್ಲ. ಶವ ಸಾಗಾಟಕ್ಕೆ ಅಂಬುಲೆನ್ಸ್‌ಗೆ 100, ಬಾಡಿಗೆ ಆಟೋ ರಿಕ್ಷಾಗಳಿಗೆ 400 ನೀಡಬೇಕು. ಹೂಳಲು 300 ನೀಡಬೇಕು. ಈ ಹಣ ಯಾರು ಕೊಡುವುದು? ಇದಾದ ಮೇಲೆ ಪೋಸ್ಟ್‌ಮಾರ್ಟಂ ಮಾಡಬೇಕು, ಈ ಕೆಲಸ ಮಾಡುವವರಿಗೆ ಪೊಲೀಸರು ಹಣ ಕೊಡಬೇಕಾಗುತ್ತದೆ. ಕೆಲವೊಮ್ಮೆ ವೈದ್ಯರು ಕೈ ಮುಂದೆ ಮಾಡುತ್ತಾರೆ! ಸರ್ಕಾರದಿಂದ ಇದಕ್ಕೆ ಪೊಲೀಸ್ ಇಲಾಖೆಗೆ ಹಣ ಬರುತ್ತದೆ ಎನ್ನುವುದು ಸತ್ಯ. ಆದರೆ ಎಷ್ಟು ಗೊತ್ತಾ 10! ಪೊಲೀಸರು ಈ ಹಣ ಕೇಳಲು ಹೋಗುವುದೇ ಇಲ್ಲ. ಏಕೆಂದರೆ ಅರ್ಜಿ ಹಾಕಿ ಹಣ ಬರುವಾಗ ಅದಕ್ಕಿಂತ ಎಷ್ಟೋ ಹೆಚ್ಚು ಹಣ ಖರ್ಚಾಗುತ್ತದೆ!  ಕೈದಿಗಳ ಹಣದಿಂದ ಪೊಲೀಸರು ಊಟ ಮಾಡುತ್ತಾರೆ ಎಂಬ ಆರೋಪ ಸಾಮಾನ್ಯ. ಆದರೆ ಕೈದಿಗಳ ಜತೆ ಪ್ರಯಾಣ ಮಾಡುವಾಗ ಪೊಲೀಸರಿಗೆ 10 ಭತ್ಯೆ ಸರ್ಕಾರ ನೀಡುತ್ತದೆ! ಈ ಭತ್ಯೆಯನ್ನು ಕೂಡಾ ಪೊಲೀಸರು ಕೇಳಲು ಹೋಗುವುದಿಲ್ಲ. ಏಕೆಂದರೆ ಮಂಗಳೂರಲ್ಲಿ ಮಾಮೂಲು ಊಟಕ್ಕೆ 50. ಭತ್ಯೆ ಕೇಳಲು ಕಾಗದಪತ್ರ ಸಿದ್ಧಪಡಿಸಲು ಅದಕ್ಕಿಂತ ಹೆಚ್ಚು ಖರ್ಚಾಗುತ್ತದೆ. ಹೆಚ್ಚುವರಿ ತನಿಖೆಗೆ ಹೊರ ರಾಜ್ಯಕ್ಕೆ ಪೊಲೀಸ್ ಹೋಗಬೇಕಾಯಿತು ಎಂದುಕೊಳ್ಳಿ ಆಗ ಪೊಲೀಸ್ ಅಧಿಕಾರಿಗೆ 150, ಪೇದೆಗೆ 75 ಭತ್ಯೆ! ಇದರಲ್ಲಿ ಮೂರು ಹೊತ್ತಿನ ಊಟ, ಲಾಡ್ಜಿಂಗ್, ದೂರವಾಣಿ ಖರ್ಚು ಎಲ್ಲ ಮುಗಿಸಬೇಕು! ಇದು ಸಾಧ್ಯವೇ?
ಪೊಲೀಸ್ ಧ್ವಜ ದಿನಾಚರಣೆಗೆ ದೇಣಿಗೆ ಸಂಗ್ರಹ ಗುರಿ ಮೇಲಧಿಕಾರಿಗಳು ನಿಗದಿ ಪಡಿಸುತ್ತಾರೆ. ಈ ಹಣ ಪೊಲೀಸರಿಗೆ ಹೋಗುತ್ತದೆ ಎಂಬ ಸಂಶಯ ಜನಸಾಮಾನ್ಯರಿಗೆ. ಆದರೆ ಆ ಹಣ ಕಲ್ಯಾಣ ನಿಧಿಗೆ ಹೋಗುತ್ತದೆ.  ಪೊಲೀಸ್ ಧ್ವಜ ದಿನಾಚರಣೆಗೆ ಅಂದಾಜು 1.5 ಲಕ್ಷ ಖರ್ಚಾಗುತ್ತದೆ. ಇದನ್ನು ಪ್ರತಿ ಠಾಣೆಯವರು ಸಂಗ್ರಹಿಸಿ ನೀಡಬೇಕು!
ಇನ್ನು ಪ್ರತಿ ಠಾಣೆ ಪರಿವೀಕ್ಷಣೆಗೆ ಹೋದಾಗ ಎಸ್‌ಪಿ ಕುಟುಂಬಕ್ಕೆ ಊಟ, ತಿಂಡಿ ವ್ಯವಸ್ಥೆ ಆಗಬೇಕು. ಹಿಂದೆಲ್ಲ ಐಪಿಎಸ್ ಅಧಿಕಾರಿಗಳು ಠಾಣೆ ಪರಿವೀಕ್ಷಣೆಗೆ ಹೋದಾಗ ಹೋಮ್‌ಸ್ಟೇಗಳಲ್ಲಿ ತಂಗುತ್ತಿದ್ದರು. ಆಯಾ ಊರಿನ ಪ್ರೇಕ್ಷಣೀಯ ತಾಣಗಳನ್ನು ಸಂದರ್ಶಿಸುತ್ತಿದ್ದರು. ಆ ಊರಿನ ವೈಶಿಷ್ಟ್ಯದ ದುಬಾರಿ ಸೊತ್ತುಗಳನ್ನು ಪ್ರೀತಿಯ ಕಾಣಿಕೆಯಾಗಿ ನೀಡುವುದು ಸಂಪ್ರದಾಯವಾಗಿತ್ತು. ಇಂಥ ಬ್ರಿಟಿಷ್ ಗುಲಾಮಗಿರಿ ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿ ಇದೆ.  ಅದಿರಲಿ, ಸರ್ಕಾರ ನೀಡಿದ ಕನಿಷ್ಠ ಸೌಲಭ್ಯಗಳು ಠಾಣೆ ಮುಟ್ಟುತ್ತಿದೆಯೇ ಅದೂ ಇಲ್ಲ. ಠಾಣೆಯಲ್ಲಿ ನಿತ್ಯದ ಖರ್ಚುಗಳು. ಪೆನ್, ಪೇಪರ್, ಕಾರ್ಬನ್, ಗುಂಡುಪಿನ್, ಕಡತ ಇತ್ಯಾದಿ ಖರೀದಿಗೆ ಇತ್ತೀಚಿನ ಹತ್ತು ವರ್ಷದಿಂದ ತಿಂಗಳಿಗೆ 1 ಸಾವಿರ ಠಾಣೆಗೆ ನೀಡಲಾಗುತ್ತಿದೆ. ವಿಷಾದ ಎಂದರೆ ಹೆಚ್ಚಿನ ಠಾಣೆಗಳಿಗೆ ಈ ಹಣ ತಲುಪುವುದೇ ಇಲ್ಲ. ಹಣ ನೇರವಾಗಿ ಠಾಣೆಗೆ ಮುಟ್ಟಬೇಕು ಎಂದು ಠಾಣಾಧಿಕಾರಿ ಎಸ್‌ಐ ಖಾತೆಗೆ ಹಣ ಜಮಾ ಮಾಡಲು ಆರಂಭಿಸಿದರು. ಆದರೂ ಮೇಲೆ ಕೂತವರು ರಿಬೌಂಡ್ ಮಾಡಿಸುತ್ತಾರೆ ಎನ್ನುವ ಆರೋಪ ಇದೆ.
ಇನ್ನು ಭ್ರಷ್ಟಾಚಾರಕ್ಕೆ ಆಸ್ಪದ ನೀಡುವುದೇ ಮೇಲಧಿಕಾರಿಗಳು. ಠಾಣೆ ಶುಚಿತ್ವ ಪರಿವೀಕ್ಷಣೆಗೆ ಮೇಲಧಿಕಾರಿಗಳು ಬರುತ್ತಾರೆ. ಆಗ ಠಾಣೆಗೆ ಸುಣ್ಣ, ಬಣ್ಣ, ಉದ್ಯಾನ ಎಲ್ಲ ಚೆನ್ನಾಗಿರಬೇಕು. ಒಂದು ವೇಳೆ ಪೇಂಟಿಂಗ್ ಮಾಡಿಸದಿದ್ದರೆ 'ಯಾರಿಂದಲಾದರೂ ಹೇಳಿ ಮಾಡಿಸಲು ಆಗುವುದಿಲ್ಲವೇ' ಎಂದು ಮೇಲಧಿಕಾರಿಗಳು ಗದರುತ್ತಾರೆ. ಆಗ ಯಾರಿಂದಲಾದರೂ ದೇಣಿಗೆ ಪಡೆದು ಮಾಡಿಸಲೇಬೇಕು. ಆಗೆಲ್ಲ ಹಣ ಪಡೆಯುವ ಅಭ್ಯಾಸ ಶುರುವಾಗುತ್ತದೆ. ಠಾಣೆಗೆ ಒಳ್ಳೆ ವಾಹನ ಬೇಕಾದರೂ ಮೇಲೆ ಕಮಿಷನ್ ನೀಡಬೇಕು. ಇಲ್ಲಾಂದ್ರೆ ನಿಮ್ಮ ಠಾಣೆಗೆ ಡಕೋಟಾ ಎಕ್ಸ್‌ಪ್ರೆಸ್ ಬರುತ್ತದೆ. ಸಣ್ಣ ಪುಟ್ಟ ದುರಸ್ತಿಗೆ ನಿಮ್ಮ ಕೈಯಿಂದಲೇ ಹಣ ಹಾಕಬೇಕು.  ಐಪಿಎಸ್ ಅಧಿಕಾರಿಗಳ ಎರಡು ವರ್ಷಗಳಿಗೊಮ್ಮೆ ವರ್ಗವಾಗಿ ಬರುವಾಗ ಕಚೇರಿಗೆ, ಮನೆಗೆಂದು ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಆದರೆ ರಾಜ್ಯಾದ್ಯಂತ ಪೊಲೀಸರ ವಸತಿಗೃಹಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಇನ್ನು ಮೇಲಧಿಕಾರಿಗಳು ವಿಸಿಟ್ ಮಾಡಿದರೆ ಭೋಜನ, 'ಎಣ್ಣೆ' ಸ್ನಾನ ಖರ್ಚು ವೆಚ್ಚ ನೋಡಿಕೊಳ್ಳುವ ಹೊಣೆ ಅಧಿಕಾರಿ ತಂಗುವ ಲಾಡ್ಜ್ ಅಥಾವ ಸರ್ಕ್ಯೂಟ್ ಹೌಸ್ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ಗೆ ಹೋಗುತ್ತದೆ. ಲಕ್ಸುರಿ ಡ್ರಿಂಕ್ಸ್‌ಗಳ ಜತೆ ಆಯಾ ಊರಿನ ವಿಶೇಷ ಖಾದ್ಯವೂ ಬೇಕು. ಮಂಗಳೂರಿನ ಸ್ಟಾರ್ ಹೊಟೇಲ್‌ನಲ್ಲಿ ಒಂದು ಕಾಣೆ ಮೀನು ಖಾದ್ಯಕ್ಕೆ 800! ಬಡಪಾಯಿ ಪ್ರಾಮಾಣಿಕ ಇನ್‌ಸ್ಪೆಕ್ಟರ್ ಆಗಿದ್ದರೆ ಅವರ ತಿಂಗಳ ಸಂಬಳವೇ ಒಂದು ವಿಸಿಟ್‌ಗೆ ಕಾಣೆಯಾಗುತ್ತದೆ. ಹೊರ ರಾಜ್ಯಗಳಿಗೆ ಹೋದಾಗ ಟಿಎ ಬಿಲ್ ಪಡೆಯಬಹುದು. ಆದರೆ ಅದನ್ನು ಪಾಸ್ ಮಾಡಲು ಗುಮಾಸ್ತರ ಕೈ ಬಿಸಿ ಮಾಡಬೇಕು. ಇಲ್ಲವಾದರೆ ಬಿಲ್‌ನಲ್ಲಿ ಯಾವ್ಯಾವುದೋ ಕಾರಣ ಹೇಳಿ ಶೇ.50 ಕಟ್! ತನಿಖೆ ವೇಳೆ ಆಗುವ ಖರ್ಚುಗಳ ಬಿಲ್‌ಗಳಿಗೂ ಇದೇ ಪರಿಸ್ಥಿತಿ !
ಪೊಲೀಸರು ಸರಿ ಇದ್ದರೆ ಹಿರಿಯ ಅಧಿಕಾರಿಗಳ ಸೇವೆ ಮಾಡುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಬರುತ್ತದೆ. ನಿಜ ಹೇಳಬೇಕೆಂದರೆ ಕಾರ್ಯದೊತ್ತಡದಿಂದ ಪೊಲೀಸರಿಗೆ ನೀಡಿರುವ ಎಲ್ಲ ಕೆಲಸ ಮಾಡಲು ಅಸಾಧ್ಯ. 6 ಕೋಟಿ ಜನರ ರಕ್ಷಣೆಗೆ ಕೇವಲ 80 ಸಾವಿರ ಪೊಲೀಸರು! ಇಂಗ್ಲೆಂಡ್‌ನಲ್ಲಿ ಆರು ಮಂದಿಗೆ ಒಬ್ಬ ಪೊಲೀಸ್ ಇದ್ದಾನೆ. ನಮ್ಮ ದೇಶದಲ್ಲಿ ಕನಿಷ್ಠ ಹತ್ತು ಮಂದಿಗೆ ಒಬ್ಬ ಪೊಲೀಸ್ ಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ಮಂದಿಗೆ ಒಬ್ಬ ಪೊಲೀಸ್!
ಠಾಣೆಯಲ್ಲಿ 150 ಬಗೆಯ ದಾಖಲೆ ನಿರ್ವಹಿಸಬೇಕು. ಇದರ ಸಂಪೂರ್ಣ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯ. ಉದಾಹರಣೆಗೆ ಠಾಣೆ ವ್ಯಾಪ್ತಿಯಲ್ಲಿ ಸುಮಾರು 25 ಜನ ರೌಡಿಗಳಿರುತ್ತಾರೆ. ಅವರ ಚಲನವಲನ ಬಗ್ಗೆ ಪ್ರತಿ ದಿನ ಪರಿಶೀಲನೆ ಮಾಡಬೇಕು. ಎಂಒಬಿ ಕೇಸ್‌ಗಳು 150ರಿಂದ 200 ಇರುತ್ತವೆ. ತಿಂಗಳಿಗೊಮ್ಮೆ ಎಲ್ಲ ಕ್ರಮವತ್ತಾಗಿ ಪರಿಶೀಲನೆ ಮಾಡಬೇಕು.  ಪೊಲೀಸರಿಗೆ ಬಂದೋಬಸ್ತ್‌ನ ನಿತ್ಯದ ವರ್ಕ್‌ಲೋಡ್ ಹೆಚ್ಚಿರುತ್ತದೆ, ಸಿಬ್ಬಂದಿಯೂ ಕಡಿಮೆ. ಹೀಗಾಗಿ ಹಿರಿಯ ಅಧಿಕಾರಿಗಳಿಗೆ ತಪ್ಪು ಹುಡುಕುವುದು ಬಹಳ ಸುಲಭ. ಇಂತಿರುವಾಗ ಅಧಿಕಾರಿಗಳ ಸೇವೆ ಮಾಡುವುದೇ ಸುಲಭ ಎಂದು ಪೊಲೀಸರಿಗೆ ಅನಿಸುತ್ತದೆ. ಪರಿಣಾಮ ಹಿರಿಯ ಅಧಿಕಾರಿಗಳು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವ ಗುಲಾಮಿ ಸಂಸ್ಕೃತಿ ಆಳವಾಗಿ ಬೇರೂರಿದೆ. ಬ್ರಿಟಿಷರು ಹಿಂದೆ ಭಾರತೀಯ ಪೇದೆಗಳನ್ನು ಗುಲಾಮಿ ರೀತಿಯಲ್ಲಿ ಹಿಡಿದಿಟ್ಟುಕೊಳ್ಳಲು ಏನೆಲ್ಲಾ ಸಾಧ್ಯವೋ ಅಂಥ ಎಲ್ಲ ನಿಯಮಗಳನ್ನು ಶಿಸ್ತು ರೂಪದಲ್ಲಿ ಪೊಲೀಸ್ ಇಲಾಖೆಯಲ್ಲಿ ಅಳವಡಿಸಿದ್ದರು. ಅಜ್ಜ ನೆಟ್ಟ ಹುಣ್ಸೆ ಮರಕ್ಕೆ ನೇಣು ಹಾಕಿಕೊಳ್ಳುವಂತೆ ಅದೇ ನಿಯಮಗಳು ಚಾಲ್ತಿಯಲ್ಲಿವೆ. ಒಮ್ಮೊಮ್ಮೆ ಕಿರುಕುಳ ಅತಿ ಆದಾಗ ಸೀನಿಯರ್ ಅಧಿಕಾರಿಗೆ ಗುಂಡಿಕ್ಕುವ ಪ್ರಕರಣ ನಡೆಯುತ್ತದೆ.  ರಜೆ ಎಂಬುದು ಗಂಭೀರ ವಿಚಾರ. ಪೊಲೀಸರಿಗೆ ವಾರದ ರಜೆ ಸಿಗುವುದೇ ಕಷ್ಟ. ಹಬ್ಬ ಹರಿದಿನಗಳ ಸಂದರ್ಭ ರಸ್ತೆ ಬದಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಪೊಲೀಸರಿಗೆ ಹಬ್ಬಗಳಿಲ್ಲ, ಕುಟುಂಬದ ಜತೆ ಶುಭ ಕಾರ್ಯಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಹೆರಿಗೆ, ರಕ್ತ ಸಂಬಂಧಿ ಸಾವು, ಮದುವೆ ಮುಂತಾದ ವಿಚಾರಗಳಿಗೂ ರಜೆ ಬೇಕಾದರೆ ಮೇಲಿನವರಿಗೆ 100 ಕಾಣಿಕೆ ನೀಡಬೇಕು (ಎಲ್ಲ ಕಡೆ ಇಲ್ಲ). ವಾರದ ರಜೆ ಹಾಕಿದರೂ ವೇತನದಿಂದ 100 ಕಟ್! ಮೇಲಧಿಕಾರಿಗಳು ರಜೆ ನೀಡುವುದರಲ್ಲಿ ಸಿಕ್ಕಾಪಟ್ಟೆ ಕಂಜೂಸ್. ಹೀಗಾಗಿ ಆಕ್ರೋಶ ಸಾಮಾನ್ಯ.
ಬ್ರಿಟಿಷರ ಕಾಲದ ಜೀತ ಪದ್ಧತಿ, ಓಬೀರಾಯನ ಕಾಲದ ಭತ್ಯೆಗಳನ್ನು ನೀಡುತ್ತಾ ಪೊಲೀಸರು ಅಪ್‌ಡೇಟ್ ಆಗಬೇಕು, ಗೌರವ ತರಬೇಕು ಎಂದು ನಿರೀಕ್ಷಿಸುವುದು ನ್ಯಾಯವೇ ?

-ಜಿತೇಂದ್ರ ಕುಂದೇಶ್ವರ
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement