ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಲ್ಲದ ಜೇಟ್ಲಿ ಛಾಪು, ಕಾಂಗ್ರೆಸ್‌ನದ್ದು ಬಾಯ್ಮಾತಿನ ಮತಾಪು

Srinivasa Murthy VN
Updated On : 14 Jul 2014, 11:19 am

ಒಂದು ವಿಷಯದಲ್ಲಿ ಸ್ಪಷ್ಟತೆ ಇಟ್ಟುಕೊಳ್ಳೋಣ. ಒಂದು ವೇಳೆ ನೀವು ರಾಜಕಾರಣಿಯಾಗಿದ್ದರೆ, ಬಜೆಟ್ ಕುರಿತ ನಿಮ್ಮ ಪ್ರತಿಕ್ರಿಯೆ ನೀವು ಲೋಕಸಭೆಯ ಸಭಾಧ್ಯಕ್ಷರ ಯಾವ ಬದಿಯಲ್ಲಿ ಕುಳಿತಿರುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಅಂತೆಯೇ, ವಿರೋಧ ಪಕ್ಷಗಳ ಬೆಂಚುಗಳಲ್ಲಿ ಕುಳಿತಿರುವವರು(ಆರ್ಥಿಕತೆಯನ್ನು ಹಳ್ಳ ಹಿಡಿಸಿದವರು) ಬಜೆಟ್ ಅನ್ನು ಪುನರುಜ್ಜೀವಗೊಳಿಸುವ ಎನ್‌ಡಿಎದ ದಿಟ್ಟ ಹೆಜ್ಜೆಯನ್ನು ಮೆಚ್ಚಬಹುದು ಎಂದು ಆಶಿಸುವುದು ಮೂರ್ಖತನವಾದೀತು. ಹಾಗಾಗಿ ಬಜೆಟ್ ಮಂಡನೆಗಿಂತಲೂ ಮೊದಲೇ ಸಿದ್ಧಮಾಡಿಟ್ಟುಕೊಂಡಿದ್ದ ಅವರ ಟೀಕೆಯನ್ನು ಕಡೆಗಣಿಸುವುದೊಳಿತು. ಅರುಣ್ ಜೇಟ್ಲಿ ಅವರು ಯುಪಿಎ ಮಾಡಿಟ್ಟ ಗಲೀಜನ್ನು ಸ್ವಚ್ಛಗೊಳಿಸಲು ಅತಿ ಕಡಿಮೆ ಮತ್ತು ಅತಿ ಕಠಿಣ ಸಮಯದಲ್ಲಿ ಉತ್ತಮ ಹೆಜ್ಜೆಯನ್ನೇ ಇಟ್ಟಿದ್ದಾರೆ.
ಜೇಟ್ಲಿ ಅವರ ದೀರ್ಘ ಬಜೆಟ್‌ನಲ್ಲಿ ಅವರ ದೂರದೃಷ್ಟಿಯ ಝಲಕು ಕಾಣಿಸುತ್ತದೆ. ಹಲವು ಯೋಜನೆಗಳಿಗೆ ಕೇವಲ ನೂರು ಕೋಟಿ ಹಣ ಮೀಸಲಿಟ್ಟಿದ್ದಾರೆ ಎನ್ನುವುದು ಕುಹಕವಾಡುವ ವಿಷಯವಂತೂ ಅಲ್ಲ. ಇವುಗಳಲ್ಲಿ ಮೋದಿ ಸರ್ಕಾರ ದೇಶದಲ್ಲಿ ತರಬೇಕೆಂಬ ಬದಲಾವಣೆಯ ನೀಲನಕ್ಷೆಯಿದೆ. ಖಂಡಿಸಲೇಬೇಕು ಎನ್ನುವ ಹವಣಿಕೆಯಲ್ಲಿರುವ ವಿರೋಧಿಗಳೆಲ್ಲರೂ ಈ ನೂರು ಕೋಟಿ ರುಪಾಯಿ ಹಣ ಹೂಡಿಕೆಯ ವಿಷಯವನ್ನಿಟ್ಟುಕೊಂಡು ಹಣಕಾಸು ಸಚಿವರ ಬುದ್ಧಿಮತ್ತೆಯನ್ನು ಪರೀಕ್ಷಿಸುವಂತೆ ವರ್ತಿಸುತ್ತಿದ್ದಾರೆ. ಯೋಜನೆಗಳ 'ಆರಂಭ ಕಾರ್ಯಕ್ಕೆ' ಮೀಸಲಿಟ್ಟಿರುವ ಹಣವನ್ನೇ ಈ ಟೀಕಾಕಾರರು, "ಇಡೀ ಯೋಜನೆಗೆ ಇಷ್ಟೇ ಹಣ" ಎನ್ನುತ್ತಾ ಕೆಟ್ಟದಾಗಿ ಬಿಂಬಿಸಲು ಒದ್ದಾಡುತ್ತಿದ್ದಾರೆ. ಆದರೆ...
ಬಜೆಟ್ ಕುರಿತು ಯಾವುದಾದರೂ ಅರ್ಥಪೂರ್ಣ ದೂರೊಂದು ಇದೆಯೆಂದರೆ, ಅದು ತೆರಿಗೆ ಮೂಲವನ್ನು ವಿಸ್ತರಿಸುವಲ್ಲಿ ಮೋದಿ ಸರ್ಕಾರದಿಂದ ಯಾವ ಪ್ರಯತ್ನವೂ ಆಗಿಲ್ಲ ಎನ್ನುವುದು. ತೆರಿಗೆ-ಜಿಡಿಪಿ ಅನುಪಾತವು ನಮ್ಮಲ್ಲಿ ಅತ್ಯಂತ ಕಡಿಮೆಯಿದೆ(ಹತ್ತು ಪ್ರತಿಶತಕ್ಕಿಂತ ತುಸು ಹೆಚ್ಚಷ್ಟೆ). ಭಾರತದ ಬಹುತೇಕ ಕೋಟ್ಯಧಿಪತಿಗಳು ತೆರಿಗೆ ಜಾಲದ ಹೊರಗೇ ಇದ್ದಾರೆ ಎನ್ನುವುದು ಉತ್ಪ್ರೇಕ್ಷೆಯಾಗಲಾರದು. 1.20 ಕೋಟಿಗಿಂತಲೂ ಅಧಿಕ ಜನರಿರುವ ಭಾರತದಲ್ಲಿ ಕೇವಲ 43,000 ಜನ ತಮ್ಮ ಆದಾಯ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಎಂದು ಘೋಷಿಸುತ್ತಾರೆ ಎಂದರೆ ಏನರ್ಥ?
ತಮ್ಮ ಕಾನೂನು ಗೆಳೆಯರಲ್ಲೇ ಕಡೇಪಕ್ಷ ನೂರಕ್ಕೂ ಹೆಚ್ಚು ಕೋಟ್ಯಧಿಪತಿಗಳಿರುವುದು ಜೇಟ್ಲಿ ಅವರಿಗೆ ಗೊತ್ತೇ ಇರುತ್ತದೆ. ಅದರಲ್ಲಿ ಕೆಲವರು ತಮ್ಮ ಆದಾಯವನ್ನು ಕಡಿಮೆ ತೋರಿಸಬಹುದು, ಇನ್ನೂ ಕೆಲವರು ಸಿಕ್ಕಿಬೀಳಬಹುದು(ಉದಾ: ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ). ವಕೀಲರು, ಆರ್ಕಿಟೆಕ್ಟ್‌ಗಳು, ತೆರಿಗೆ ಸಲಹೆಗಾರರು ಅಥವಾ ಸಾಫ್ಟ್‌ವೇರ್ ಡೆವಲಪರ್‌ಗಳ ಖರ್ಚು-ವೆಚ್ಚಗಳ ಮೇಲೆ ಸೂಕ್ಷ್ಮ ನಿಗಾ ಇಟ್ಟರೆ ನಿಸ್ಸಂಶಯವಾಗಿಯೂ ಸರ್ಕಾರದ ಬೊಕ್ಕಸವನ್ನು ಹಿಗ್ಗಿಸಬಹುದು. ಅದ್ಭುತ ರಸ್ತೆಗಳು, ವಿಮಾನ ನಿಲ್ದಾಣಗಳು, ಸ್ವಚ್ಛ ಏರಿಯಾಗಳು ಬೇಕೆಂದು ಅಳುವ ಈ ಐಷಾರಾಮಿ ಗುಂಪು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾಲನ್ನು ನೀಡದೇ ನುಣುಚಿಕೊಳ್ಳುವುದರಲ್ಲಿ ಎತ್ತಿದ ಕೈ.
ಸಮಾನಾಂತರ ಆರ್ಥಿಕತೆ ಇಂದು ಅಸ್ತಿತ್ವದಲ್ಲಿದೆ ಎನ್ನುವುದು ಅಲ್ಲಗಳೆಯಲಾಗದ ಸತ್ಯ. ಅರುಣ್ ಜೇಟ್ಲಿ, ಜ್ಢಠಜಟಿಜ್ಝಡ್ಡ್ಠಿಜ ಡಿಛ್ಢ ಅನ್ನು ಆಚರಣೆಗೆ ತಂದು, ಕಪ್ಪು ಹಣದ ಮೇಲಿನ ಇಂಥ ಹಣವಂತ ಕುಳಗಳ ಹಿಡಿತವನ್ನು ಸಡಲಿಸುವ ಪ್ರಯತ್ನ ಮಾಡಬಹುದಿತ್ತು. ಇಂಥ ಕೆಲಸಕ್ಕೆ ರಾಜ್ಯಗಳ ಸಹಭಾಗಿತ್ವವೂ ಅಗತ್ಯವೆನ್ನುವುದು ನಿಜವಾದರೂ, ಮೊದಲ ಹೆಜ್ಜೆಯಿಡಬೇಕಾದದ್ದು ಕೇಂದ್ರ ಸರ್ಕಾರವೆ ಅಲ್ಲವೇ? ತೆರಿಗೆ ಜಾಲದ ವ್ಯಾಪ್ತಿಯನ್ನು ವಿಸ್ತರಿಸದೇ ಆರ್ಥಿಕತೆಯನ್ನು ಹೆಚ್ಚಿಸುವುದು ಸುಲಭವೇ? ಪಶ್ಚಿಮ ರಾಷ್ಟ್ರಗಳಲ್ಲಿನಂತೆ ಎಲ್ಲಾ ವಹಿವಾಟುಗಳನ್ನು (ಸಗಟು ಅಥವಾ ಚಿಲ್ಲರೆ ಮಾರಾಟ) ಡಿಜಿಟಲ್‌ಗೊಳಿಸುವುದೊಂದೇ ದೊಡ್ಡ ಗುರಿಯಾಗಬೇಕೇ? ಸಮಾನಾಂತರ ಆರ್ಥಿಕತೆಯ ಬೆನ್ನೆಲುಬು ಮುರಿಯಬೇಕಾದರೆ ತೆರಿಗೆ ಜಾಲವನ್ನು ವಿಸ್ತರಿಸುವ ದಿಟ್ಟ ಕೆಲಸಗಳಾಗಲೇಬೇಕಲ್ಲವೇ?
ಅಲ್ಲದೆ, ನಿಜಕ್ಕೂ ದಿಟ್ಟ ವಿತ್ತ ಸಚಿವರಾದವರು ಸಾರ್ವಜನಿಕರ ಉಳಿತಾಯವನ್ನು ಅವಲಂಬಿಸಿ ಸಾಲ ಪಡೆಯುವ ರಾಜಕೀಯ ವಲಯಗಳ ಹೆಡೆಮುರಿಕಟ್ಟಲು ಮುಂದಾಗುತ್ತಿದ್ದರು. ಇಂದು ಕೇವಲ ಬಡ್ಡಿ ಪಾವತಿಯ ಮೇಲೆಯೇ ಒಟ್ಟು ಖರ್ಚಿನಲ್ಲಿ 26 ಪ್ರತಿಶತ ವ್ಯಯ ಮಾಡಲಾಗುತ್ತಿದೆ. ಸಬ್ಸಿಡಿಗಳಿಗೆ 16 ಪ್ರತಿಶತ(ಆಹಾರ, ತೈಲ, ರಸಗೊಬ್ಬರ), 13 ಪ್ರತಿಶತ ವೇತನ- ರಕ್ಷಣೆಗೆ ಮತ್ತು 14 ಪ್ರತಿಶತವನ್ನು ಇಂಥದ್ದೇ ಖರ್ಚುಗಳಿಗೆ ವ್ಯಯ ಮಾಡುವ ಚಿತ್ರಣವನ್ನು ನೋಡಿದಾಗ, ತಿಂಗಳಾಂತ್ಯಕ್ಕೆ ಅವಶ್ಯಕ ವೆಚ್ಚಗಳಿಗೆ ಹಣ ಸಾಲದೆ ಪರದಾಡುವ ಗೃಹಿಣಿಯೊಬ್ಬಳಂತೆ ಇದೆ ವಿತ್ತಸಚಿವರ ಪರಿಸ್ಥಿತಿ. ಚೀನಾಕ್ಕೆ ನಮ್ಮ ದೇಶ ಪೈಪೋಟಿ ಕೊಡಬೇಕೆಂದರೆ ಮೊದಲು ಈ ಪರಿಸ್ಥಿತಿ ಬದಲಾಗಬೇಕು.
ಈ ಬದಲಾವಣೆ ಸಾಧ್ಯವಾಗಬೇಕೆಂದರೆ "ತೆರಿಗೆಯಿಂದ ತಪ್ಪಿಸಿಕೊಂಡರೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಭಾರತೀಯರಿಗೆ ಅರ್ಥಮಾಡಿಸಬೇಕು. ಮುಂದಿನ ಫೆಬ್ರವರಿಯ ತಮ್ಮ ಬಜೆಟ್‌ನಲ್ಲಿ ಜೇಟ್ಲಿ ತೆರಿಗೆ ಕಾನೂನುಗಳನ್ನು ಸರಳಗೊಳಿಸಲು ಮುಂದಾಗಬೇಕು. ರಿಯಾಯಿತಿ ಮತ್ತು ಕಡಿತವೆಂಬ ಜಟಿಲ ವ್ಯವಸ್ಥೆಯನ್ನು ಹಿಂತೆಗೆದುಕೊಂಡು, ಮಧ್ಯಮ, ಮೇಲ್‌ಸ್ತರದ ಮತ್ತು ದೊಡ್ಡ ಆದಾಯದ ಗುಂಪುಗಳಿಗೆ ಮೂರು ಅಥವಾ ನಾಲ್ಕು ಶ್ರೇಣಿಗಳಲ್ಲಿ ತೆರಿಗೆ ದರವನ್ನು ನಿಗದಿಗೊಳಿಸಬೇಕು. ಅಂದರೆ, ಲೆಕ್ಕಾಚಾರಗಳನ್ನೆಲ್ಲ ವೈಭವದ ಪರಿಭಾಷೆ ಬಳಸಿ ಇನ್ನಷ್ಟು ಜಟಿಲಗೊಳಿಸದೇ ಶೇ. 15, ಶೇ. 20 ಮತ್ತು ಶೇ.25 ತೆರಿಗೆ ದರ ವಿಧಿಸಬೇಕು.
ಜನರ ಜೀವನವನ್ನು ಉತ್ತಮಗೊಳಿಸುವ, ಸರಳಗೊಳಿಸುವ ಕಟ್ಟಾಜ್ಞೆ ಜೇಟ್ಲಿ ಅವರ ಮೇಲಿದೆ. ಹಾಗಾಗಿ ಅವರು ತೆರಿಗೆ ಕಾನೂನನ್ನು ಸರಳಗೊಳಿಸಬೇಕು ಮತ್ತು ಸುಲಭವಾಗಿ ಅನುಷ್ಠಾನಕ್ಕೆ ಬರುವಂತೆ ಮಾಡಬೇಕು. ಜೊತೆಗೆ ಸಂಪಾದನೆ ಮಾಡುತ್ತಿರುವ ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರ ನಿರ್ಮಾಣದಲ್ಲಿ ತನ್ನ ಪಾಲನ್ನು ಕೊಡುವಂತೆ ನೋಡಿಕೊಳ್ಳಬೇಕು. ಅವರು ತಮ್ಮ ಮುಂದಿನ ಬಜೆಟ್‌ನಲ್ಲಿ ಈ ದಿಟ್ಟ ಮತ್ತು ಅದ್ಭುತ ಹೆಜ್ಜೆಯನ್ನು ಇಡಲು ಹಿಂಜರಿಯಬಾರದು/ನೆಪವೊಡ್ಡಬಾರದು. ಕೆಲವು ಸ್ಪಷ್ಟಕಾರಣಗಳಿಂದಾಗಿ ಈ ಬಾರಿ ಜೇಟ್ಲಿ ಅವರಿಗೆ ಬಜೆಟ್‌ನಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ ಎನ್ನುವುದು ನಮಗೆಲ್ಲ ಅರ್ಥವಾಗಿದೆ.
ಇವೆಲ್ಲದರ ಮಧ್ಯೆ, "ಹುಳುಕು ಹುಡುಕುತ್ತೇವೆ" ಎಂದು ಕುಳಿತಿರುವ ಕಾಂಗ್ರೆಸ್ ಪಕ್ಷ, ಸರ್ದಾರ್ ವಲ್ಲಭಬಾಯ್ ಪಟೇಲರ ಪ್ರತಿಮೆಗಾಗಿ 200 ಕೋಟಿ ರುಪಾಯಿ ಎತ್ತಿಟ್ಟಿರುವ ವಿಷಯ ಹಿಡಿದುಕೊಂಡು ಗದ್ದಲವೆಬ್ಬಿಸಿದೆ. "ಮೋದಿ ಸರ್ಕಾರದ ಆದ್ಯತೆಗಳೇನು ಎನ್ನುವುದು ಇದರಿಂದ ಅರ್ಥವಾಗುತ್ತಿದೆ" ಎಂದು ಅದು ಬಡಬಡಿಸುತ್ತಿದೆ. ನಿಜಕ್ಕೂ ಕಾಂಗ್ರೆಸ್ಸಿಗರು ಹಳ್ಳಿಮುಕ್ಕರಂತೆ ವರ್ತಿಸುತ್ತಿದ್ದಾರೆ. ಭಾರತವನ್ನು ಒಗ್ಗೂಡಿಸಿದ ನಿಷ್ಕಳಂಕ ವ್ಯಕ್ತಿಯ ಸ್ಮಾರಕ ನಿರ್ಮಿಸುವುದು ತಪ್ಪು ಎನ್ನುವ ಕಾಂಗ್ರೆಸ್ಸಿಗರಿಗೆಲ್ಲ...ಇವರದ್ದೇ ಪಕ್ಷ ಪ್ರತಿ ವರ್ಷ ನೆಹರು-ಗಾಂಧಿ ಕುಟುಂಬದ ಜನನ ಮತ್ತು ಮರಣ ವಾರ್ಷಿಕೋತ್ಸವದ ಹೆಸರಿನಲ್ಲಿ ತೆರಿಗೆದಾರರ ಹಣದಲ್ಲಿ ಜಾಹಿರಾತುಗಳಿಗಾಗಿ ನೂರಾರು ಕೋಟಿ ರುಪಾಯಿ ಖರ್ಚು ಮಾಡುತ್ತಾ ಬಂದಿದ್ದು ಸಾಚಾ ಕೆಲಸವೆನಿಸುತ್ತದೆಯೇ? ಹೆಣ್ಣುಭ್ರೂಣ ಹತ್ಯೆಯ ವಿರುದ್ಧ ಜನಜಾಗೃತಿಗಾಗಿ ಹಣ ಮೀಸಲಿಟ್ಟ ವಿಷಯವನ್ನು, ಪಟೇಲರ ಪ್ರತಿಮೆ ನಿರ್ಮಾಣದ ವಿಷಯದ ಪಕ್ಕದಲ್ಲಿಟ್ಟು ತುಲನೆ ಮಾಡುವುದು ಎಷ್ಟು ಸರಿ? ಒಟ್ಟಲ್ಲಿ ಜೇಟ್ಲಿ ಅವರ ಬಜೆಟ್‌ನ್ನು ಟೀಕಿಸಬೇಕು ಎಂದಷ್ಟೇ ಇವರುಗಳು ಹೀಗೆ ಮಾತನಾಡುತ್ತಿರುವುದು.
ಇವರಿಗೆ ನಿಜಕ್ಕೂ ದೇಶದ ಬಗ್ಗೆ ಅಷ್ಟು ಕಾಳಜಿಯಿದ್ದಿದ್ದರೆ, ರಾಜೀವ್-ಇಂದಿರಾ ಸ್ಮಾರಕಗಳ ಹೆಸರಿನಲ್ಲಿ ಗಾಂಧಿ ಕುಟುಂಬದ ಹಿಡಿತದಲ್ಲಿರುವ ದೆಹಲಿಯ ಲ್ಯೂಟಿನ್ಸ್‌ನಲ್ಲಿ ತಮಗೆ ದೊರೆತಿರುವ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಬಂಗಲೆಗಳನ್ನು, ಜಾಗಗಳನ್ನು ದೇಶಕ್ಕಾಗಿ ಬಿಟ್ಟುಕೊಡಬಹುದಲ್ಲ? ಕಾಂಗ್ರೆಸ್ಸಿಗರ ಈ ಆಸ್ತಿಗಳನ್ನು ಅತ್ಯಂತ ಕಡಿಮೆ ದರಕ್ಕೆ ಮಾರಿದರೂ, ಏನಿಲ್ಲವೆಂದರೂ 10,000 ಕೋಟಿ ರುಪಾಯಿಗಳಾದರೂ ಸಿಗಬಹುದು. ಈ ಹಣವನ್ನು ಕಾಂಗ್ರೆಸ್ಸಿಗರು ಎನ್‌ಡಿಎಗೆ ಕೊಟ್ಟರೆ, ನೂತನ ಸರ್ಕಾರ ಪ್ರಸ್ತಾಪಿತ 'ಬೇಟಿ ಬಚಾವೋ, ಬೇಟಿ ಪಢಾವೋ' ಯೋಜನೆಗಳಿಗೆ ಅದನ್ನು ವಿನಿಯೋಗಿಸಬಹುದಲ್ಲ? ಎಕರೆಗಟ್ಟಲೇ ವಿಸ್ತಾರ ಹೊಂದಿರುವ ರಾಜೇಂದ್ರ ಪ್ರಸಾದ್ ರಸ್ತೆಯ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಪಕ್ಷ ಹವಣಿಸುತ್ತಿರುವುದು ಇದೇ 'ಬೇಟಿ ಬಚಾವೋ, ಬೇಟಿ ಪಢಾವೋ' ಆಂದೋಲನಕ್ಕಾಗಿಯೇ?
ಕಾಂಗ್ರೆಸ್ಸಿಗರೇ ಬರೀ ಮಾತಲ್ಲಿ ಕಾಳಜಿ ತೋರಿಸುವುದಲ್ಲ!!

-ವೀರೇಂದ್ರ ಕಪೂರ್
virendra1946@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement