ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಗೋವಾ ಕಿನಾರೆಯಲ್ಲಿ ಕೊಚ್ಚಿಹೋಗುತ್ತಿದೆ ಕನ್ನಡಿಗರ ಬದುಕು!

Srinivasa Murthy VN
Updated On : 14 Jul 2014, 11:20 am

ಈಗ 4-5 ದಶಕಗಳ ಹಿಂದೆ ಗೋವಾ ಎಂದರೆ ಕನ್ನಡದ ದುಡಿಯುವ ಕೈಗಳಿಗೆ ಭರಪೂರ ಕೆಲಸ ಕೊಡುವ ತಾಣ. ಎಷ್ಟು ಕಾರ್ಮಿಕರು ಹೋದರೂ ಅಷ್ಟು ಕೆಲಸ ಅವರಿಗಾಗಿ ಕಾಯುತ್ತಿರುತ್ತಿತ್ತು. ಉತ್ತರ ಕರ್ನಾಟಕದ ಜನತೆ ತಂಡ ತಂಡವಾಗಿ ಗೋವಾಕ್ಕೆ ಹೋಗಿ ದುಡಿಯತೊಡಗಿದರು. ದಿನವಿಡೀ ದುಡಿದು ಅಷ್ಟಿಷ್ಟು ಸಂಪಾದಿಸಿ, ಚಿಕ್ಕ ಮನೆ, ಜೋಪಡಿಗಳನ್ನೂ ನಿರ್ಮಿಸಿ ಅಲ್ಲೇ ನೆಲೆ ಕಂಡುಕೊಂಡರು. ಆದರೆ ಈಗ ಒಂದು ದಶಕದಿಂದ ಕನ್ನಡದ ಕಾರ್ಮಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ದಬ್ಬಾಳಿಕೆ, ದೌರ್ಜನ್ಯ, ಅಪವಾದ, ಆರೋಪಗಳಿಂದ ದೈಹಿಕ, ಮಾನಸಿಕವಾಗಿ ಕುಸಿದುಹೋಗಿದ್ದಾರೆ.
ಕರ್ನಾಟಕದ ಕಾರ್ಮಿಕರ ಪಾಲಿಗೆ ಗೋವಾದ ಆಕರ್ಷಣೆ ಈಗ ಕನಸಿನ ಮಾತು. ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಧಾರವಾಡ, ಬೆಳಗಾವಿ, ಜಮಖಂಡಿ, ಹಾವೇರಿ, ಗದಗ ಮತ್ತಿತರ ಕಡೆಗಳಿಂದ ಕೂಲಿಗಾಗಿ ಬಂದವರು ಈಗ ಮತ್ತೆ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಆದರೆ ಇವರಿಗೆ ಕರ್ನಾಟಕದಲ್ಲಿ ಜೀವನ ನಿರ್ವಹಣೆಗೆ ದಾರಿಯೇ ಇಲ್ಲ. ಆದರೂ ಗೋವಾ ಸಹವಾಸ ಸಾಕುಸಾಕಾಗಿದೆ. ಮನೆ, ಆಸ್ತಿ ಕಳೆದುಕೊಂಡು ನಿರ್ಗತಿಕರಾಗಿ ಪರದಾಡುವಂತಾಗಿದೆ. ಸಾಲು ಸಾಲಾಗಿದ್ದ ಮನೆಗಳನ್ನು ಹಠಾತ್ ಉರುಳಿಸುತ್ತಿರುವ ಗೋವಾ ಸರ್ಕಾರದ ನಿಲುವಿನಿಂದಾಗಿ ಕಂಗೆಟ್ಟಿದ್ದಾರೆ.
ಎಲ್ಲೆಡೆ ಜನರು ಮಳೆಗಾಗಿ ಹಾತೊರೆಯುತ್ತಾರೆ. ಚಾತಕ ಪಕ್ಷಿಯಂತೆ ಕಾಯುತ್ತಾರೆ. ಆದರೆ ಗೋವಾದ ಕನ್ನಡಿಗರ ಪಾಲಿಗೆ ಮಾತ್ರ ಮಳೆ ಬಂತೆಂದರೆ ನಡುಕ ಆರಂಭವಾಗುತ್ತದೆ. ಗೋವಾದಲ್ಲಿ ಮನೆ ಮುರುಕುತನ ಮಳೆಗಾಲದಲ್ಲಿ ನಡೆಯುವುದೇ ಇದಕ್ಕೆ ಕಾರಣ. 2004ರ ಜೂನ್ ತಿಂಗಳಿನಲ್ಲಿ ಬಿರುಗಾಳಿ, ಮಳೆ. ಗೋವಾದ ವಾಸ್ಕೋ ಸಮೀಪದ ಬೈನಾ ಕಡಲತೀರದಲ್ಲಿ ಚಿಕ್ಕ ಚಿಕ್ಕ ಮನೆ, ಜೋಪಡಿಗಳಲ್ಲಿ ನಸುಕಿನ ನಿದ್ದೆಯಲ್ಲಿದ್ದ ಕನ್ನಡಿಗರಿಗೆ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಪೊಲೀಸರು, ಅಧಿಕಾರಿಗಳು ಮನೆ ಮನೆಗಳನ್ನು ಹೊಕ್ಕು ಜನರನ್ನು ಹೊರಹಾಕಿದರು. ಪಾತ್ರೆ, ಪಗಡೆಗಳನ್ನು ಬಿಸಾಡಿದರು. 6 ಜೆಸಿಬಿ ಯಂತ್ರಗಳು ಮನೆಗಳ ಮೇಲೆ ಭೋರ್ಗರೆದವು. ಗಂಟೆಯೊಳಗೆ 400ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದವು. ಸುರಿಯುವ ಮಳೆಯಲ್ಲೇ ಈ ಕಾರ್ಯಾಚರಣೆ ನಡೆಯಿತು.
2012ರ ಜುಲೈ ತಿಂಗಳಿನಲ್ಲಿ ವಾಸ್ಕೋದ ಜುವಾರಿ ನಗರ ಕಾರ್ಖಾನೆಗೆ ಎಂದಿನಂತೆ ಕನ್ನಡದ ಕಾರ್ಮಿಕರು ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಕಾರ್ಖಾನೆಯ ಗೇಟ್ ಬಂದ್ ಆಗಿತ್ತು. ಗೇಟಿನ ಎದುರೇ ಅಧಿಕಾರಿಯೊಬ್ಬ ಬಂದು ಕಾರ್ಮಿಕರ ವಜಾ ಆದೇಶವನ್ನು ನೀಡಿ ಹೊರಟುಹೋದ. ಉದ್ಯೋಗ ಕಳೆದುಕೊಂಡ ಕಾರ್ಮಿಕರು ಬಿರು ಮಳೆಯಲ್ಲೇ ತಿಂಗಳ ಕಾಲ ಧರಣಿ ನಡೆಸಿದರು. ಕೊನೆಗೂ ಸಮಸ್ಯೆ ಬಗೆಹರಿಯದೇ ಇದ್ದಾಗ ಕರ್ನಾಟಕದತ್ತ ಹೆಜ್ಜೆ ಹಾಕಿದರು. ಮೊನ್ನೆ ಮೊನ್ನೆ ಮತ್ತೆ ಬೈನಾದಲ್ಲಿ ಕಾರ್ಯಾಚರಣೆ ನಡೆಯಿತು. ಕನ್ನಡಿಗರ 75ರಷ್ಟು ಮನೆಗಳನ್ನು ನಿರ್ದಯವಾಗಿ ನೆಲಕ್ಕೆ ಉರುಳಿಸಲಾಯಿತು. ಇದಕ್ಕೂ ಬಿರು ಮಳೆ ಸಾಕ್ಷಿಯಾಯಿತು. ಗೋವಾದಲ್ಲಿ ಕನ್ನಡಿಗರ ಮೇಲೆ ಏನಾದರೂ ದಬ್ಬಾಳಿಕೆ, ದೌರ್ಜನ್ಯ ನಡೆಯಿತು ಎಂದಾದರೆ ಅದು ಮಳೆಗಾಲದಲ್ಲೇ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಮಳೆಗಾಲದಲ್ಲಿ ಮನೆ ಮೇಲೆ ಜೆಸಿಬಿ ಓಡಿಸಿ ನಿರ್ಗತಿಕರನ್ನಾಗಿಸಿದರೆ ಅವರು ನೆಲೆ ನಿಲ್ಲಲಾರದೆ ಮರಳಿ ಕರ್ನಾಟಕಕ್ಕೆ ಓಡಿಹೋಗಲಿ ಎಂಬ ಏಕೈಕ ಉದ್ದೇಶ. ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಗಳೂ ಕುಂಠಿತವಾಗುತ್ತವೆ. ಗೋವಾದ ಪ್ರವಾಸೋದ್ಯಮವೂ ಕುಂಟುತ್ತ ಸಾಗುತ್ತದೆ. ಇದರಿಂದ ಇತ್ತ ಕೆಲಸವೂ ಇಲ್ಲದೆ, ಮನೆಯನ್ನೂ ಕಳೆದುಕೊಂಡ ಕಾರ್ಮಿಕರು ದಿಕ್ಕೆಟ್ಟು ಓಡಲಿ ಎನ್ನುವ ದುರುದ್ದೇಶ ಮಳೆಗಾಲದ ಕಾರ್ಯಾಚರಣೆಯ ಹಿಂದಿದೆ.
ಕೇವಲ ಮನೆಗಳನ್ನು ಉರುಳಿಸಿದ್ದಷ್ಟೆ ಅಲ್ಲ, ಕನ್ನಡಿಗರ ಮನಸ್ಸನ್ನೂ ಗೋವಾ ಸರ್ಕಾರ ಕೆಡಿಸಿಬಿಟ್ಟಿದೆ. 2004ರಲ್ಲಿ ಮನೆಗಳನ್ನು ತೆರವುಗೊಳಿಸುವಾಗ ಕನ್ನಡಿಗರು ವೇಶ್ಯಾವಾಟಿಕೆ ನಡೆಸುತ್ತಿದ್ದುದರಿಂದ ಮನೆಗಳನ್ನು ಕಿತ್ತುಹಾಕಲಾಗಿದೆ ಎಂಬ ಕಾರಣ ಸರ್ಕಾರದಿಂದ ಬಂತು. ಇದು ಮನೆ ಕೆಡವಿದ್ದಕ್ಕಿಂತಲೂ ಹೆಚ್ಚಿನ ಯಾತನೆಯನ್ನು ಕನ್ನಡಿಗರಿಗೆ ನೀಡಿದೆ. ದಿನವಿಡಿ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ನಮ್ಮ ತಾಯಂದಿರಿಗೆ ಗೋವಾ ಸರ್ಕಾರ ಕೊಟ್ಟ ಈ ಪಟ್ಟ ಸಹಿಸಲಾರದ ನೋವನ್ನು ಉಂಟುಮಾಡಿದೆ.
ಈಗ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಈ ಮನೆಗಳಿದ್ದು, ಅಸುರಕ್ಷಿತವಾಗಿವೆ ಎಂಬ ಕಾರಣವನ್ನು ಮುಂದೊಡ್ಡಿ ಮನೆಗಳನ್ನು ಹಠಾತ್ತಾಗಿ ನೆಲಸಮಗೊಳಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ಆದರೆ ಗೋವಾದಲ್ಲಿ ಬಾಗ್‌ಮೋಲೋ, ಮೀರಾಮಾರ್, ಕಲ್ಲಂಗೂಟ ಮತ್ತಿತರ ಕಡಲತೀರಗಳಲ್ಲಿ ಸಮುದ್ರಕ್ಕೆ ಹೊಂದಿಕೊಂಡೇ ಬೃಹತ್ ರೆಸಾರ್ಟ್‌ಗಳಿವೆ. ಹೊಟೇಲ್, ಕಟ್ಟಡಗಳಿವೆ. ಆದರೆ ಈ ಕಟ್ಟಡಗಳನ್ನು ನೆಲಸಮಗೊಳಿಸಲು ಗೋವಾ ಸರ್ಕಾರ ಮುಂದಾಗುತ್ತಿಲ್ಲ.
ಹಿಂದೆ ಕನ್ನಡದ ರಾಜಮನೆಗಳು ಗೋವಾವನ್ನು ಸುಮಾರು 1 ಸಾವಿರ ವರ್ಷಗಳ ಕಾಲ ಆಳಿದ್ದಾರೆ. ದಕ್ಷಿಣ ಶಿಲಾಹಾರರು, ಕದಂಬರು, ವಿಜಯ ನಗರದ ಅರಸರು ಹೀಗೆ ಗೋವಾ ಇತಿಹಾಸ ನೋಡಿದರೆ ಕನ್ನಡದ ರಾಜ ಮನೆತನಗಳು ಆಡಳಿತ ನಡೆಸಿ ಗೋವಾವನ್ನು ಶ್ರೀಮಂತಗೊಳಿಸಿವೆ. ಆದರೆ ಇಂದು ಅದೇ ಗೋವಾಕ್ಕೆ ಕೂಲಿಯಾಳುಗಳಾಗಿ ಲಕ್ಷಾಂತರ ಜನರು ಹೋಗಿ ನೆಲೆಸಿದ್ದಾರೆ. ಗೋವಾದ ಬಹುತೇಕ ಕಟ್ಟಡದ ಇಟ್ಟಿಗೆಗಳ ಮೇಲೆ ಕನ್ನಡದ ಕೈಗಳು ಕೆಲಸ ಮಾಡಿವೆ. ರಸ್ತೆ, ಸೇತುವೆ, ಕಟ್ಟಡ ಹೀಗೆ ಗೋವಾದ ನಿರ್ಮಾಣ ಕಾಮಗಾರಿಗಳಲ್ಲಿ ಕನ್ನಡಿಗರ ಕೊಡುಗೆ ಸಾಕಷ್ಟಿದೆ.
ಗೋವಾದಲ್ಲಿ ಕನ್ನಡಿಗರು ಮಳೆಯಲ್ಲಿ ನರಳುತ್ತಿದ್ದರೂ ಕರ್ನಾಟಕ ಸರ್ಕಾರ, ಆಡಳಿತ ಪಕ್ಷ, ಪ್ರತಿಪಕ್ಷದವರು ಬೆಚ್ಚಗೆ ಕುಳಿತಿದ್ದಾರೆ. ಯಾರೂ ತುಟಿ ಬಿಚ್ಚುತ್ತಿಲ್ಲ. ಹಾಗಂತ ಗೋವಾದಲ್ಲಿರುವ ಕನ್ನಡಿಗರ ಬಹುತೇಕ ಮತಗಳು ಕರ್ನಾಟಕದಲ್ಲಿವೆ. ಇಲ್ಲಿ ಚುನಾವಣೆ ಬಂದಾಗ ಗೋವಾಕ್ಕೆ ಹೋಗಿ ಪ್ರಚಾರ ನಡೆಸಿ ಅವರನ್ನು ವಾಹನಗಳಲ್ಲಿ ಮತದಾನಕ್ಕಾಗಿ ಕರೆತರುತ್ತಾರೆ. ಆದರೆ ಇಂಥ ಸಮಯದಲ್ಲಿ ಅವರ ನೋವು ಯಾವ ಮುಖಂಡರಿಗೂ ಕೇಳಿಸುವುದೇ ಇಲ್ಲ. ಗೋವಾ ಸರ್ಕಾರಕ್ಕೆ ಒಂದು ಎಚ್ಚರಿಕೆಯ ಸಂದೇಶವನ್ನು ನೀಡಲೂ ರಾಜ್ಯದ ರಾಜಕೀಯ ಮುಖಂಡರ ಬಾಯಿಗೆ ಬರಗಾಲ ಬಂದಿದೆ.
ಗೋವಾ ಸರ್ಕಾರದೊಂದಿಗೆ ವ್ಯವಹರಿಸಲು ವ್ಯವಧಾನ ಇಲ್ಲ ಎಂದಾದರೆ ಗೋವಾಕ್ಕೆ ವಲಸೆ ಹೋದ ಉತ್ತರ ಕರ್ನಾಟಕದ ಕಾರ್ಮಿಕರನ್ನು ಮರಳಿ ರಾಜ್ಯಕ್ಕೆ ಕರೆದು ಇಲ್ಲೇ ಉದ್ಯೋಗ ಕೊಡಲಿ. ಉತ್ತರ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಸಲಿ. ಇವೆಲ್ಲವನ್ನು ಬಿಟ್ಟು ಆಡಳಿತ ನಡೆಸುವುದು ಅದೆಂತಹ ಆಡಳಿತ?
ಮೊನ್ನೆ ಕೇಂದ್ರದ ಪ್ರವಾಸೋದ್ಯಮ ಸಚಿವರು, 'ಗೋವಾ ಪ್ರವಾಸೋದ್ಯಮದಲ್ಲಿ ಪಬ್ ಕಲ್ಚರ್ ನಿಯಂತ್ರಿಸಬೇಕಿದೆ' ಎಂದರು. ಅದನ್ನು ವಿರೋಧಿಸುತ್ತ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮ ಅವರು, 'ಇದು ಸಂಕುಚಿತ ಹೇಳಿಕೆ' ಎಂದದ್ದಾಯಿತು. ಅಯ್ಯೋ ಆಡಳಿತಾರೂಢರೇ, ನಮ್ಮ ನಗರಗಳಲ್ಲಿ ಶ್ರಮ ಸಂಸ್ಕೃತಿಯ ಕಾಳಜಿಯನ್ನೂ ವಿಚಾರಿಸಿಕೊಳ್ಳುವ ಇಚ್ಛಾಶಕ್ತಿ ನಿಮಗ್ಯಾರಿಗೂ ಇಲ್ಲವಲ್ಲ!

-ವಸಂತಕುಮಾರ್ ಕತಗಾಲ
ಕನ್ನಡಪ್ರಭ
vasant800@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement