ಬೆಂಗಳೂರು ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣ ಸಿದ್ದರಾಮಯ್ಯನವರ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದಲ್ಲಿ ವರದಿಯಾದ ಸರಣಿ ಅತ್ಯಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ಮೇಲೆ ಅಕ್ಷರಗಳ ಮೂಲಕ ಅತ್ಯಾಚಾರ ನಡೆಸಿದವು. ಹದಿಮೂರು ವರ್ಷ ತಗರಿ- ಬುಗುರಿ ಆಟ ಆಡಿಕೊಂಡು ಬಂದಿದ್ದ ನೈಸ್ ಹಗರಣದ ತನಿಖೆಗೆ ಸದನ ಸಮಿತಿ ರಚನೆ ಆಗಿದೆ. ವಿದ್ಯುತ್ ಖರೀದಿ ಹಗರಣ, ಕೆರೆ ಅಂಗಳಗಳ ಒತ್ತುವರಿ, ಏತ ನೀರಾವರಿ ಹಗರಣ ತನಿಖೆಗಳತ್ತ ಮುಖ ಮಾಡಿ ನಿಂತಿವೆ.
ಇಷ್ಟೆಲ್ಲ ಸಾಧ್ಯವಾದದ್ದು ಪ್ರಸಕ್ತ ವಿಧಾನ ಮಂಡಲದ ಬಜೆಟ್ ನಡೆಯುತ್ತಿರುವ 'ಮೌಲ್ಯಯುತ ಚರ್ಚೆ'ಯಿಂದಾಗಿ. ಇಷ್ಟೇ ಅಲ್ಲದೇ ಅನೇಕ ಅರ್ಥಪೂರ್ಣ ವಿಚಾರಗಳ ಚರ್ಚೆ, ಮಂಥನ, ವ್ಯಾಖ್ಯಾನ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು, ಒಂದಿಷ್ಟು ವಿಚಾರಗಳಲ್ಲಿ ಪರಿಹಾರ ಕಂಡುಹಿಡಿಯಲು ಈ ಅಧಿವೇಶನ ಸಾಕ್ಷಿಯಾಗಿದೆ.
ಹೌದು. ಗತಿಸಿ ಹೋಗಿದ್ದ ಮೌಲ್ಯಯುತ ಚರ್ಚೆಯ ಇತಿಹಾಸ ಮತ್ತೆ ಜೀವಂತಿಕೆ ಪಡೆದುಕೊಂಡಿದೆ. ನಿಜ ಹೇಳಬೇಕೆಂದರೆ ಹನ್ನೆರಡು ವರ್ಷಗಳೇ ಕಳೆದು ಹೋಗಿದ್ದವು. ವಿಧಾನ ಮಂಡಲ ಅಧಿವೇಶನ ಅರ್ಥಪೂರ್ಣ ಮಾತಿನ ಮಂಥನಕ್ಕೆ ಸಾಕ್ಷಿಯಾಗಿ. ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ ಸರ್ಕಾರದ ನಂತರ ಈ ಪರಂಪರೆ ನೇಪಥ್ಯಕ್ಕೆ ಸರಿದಿತ್ತು. ಬಜೆಟ್ ಅಧಿವೇಶನದಲ್ಲಿ ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆ ಮರೀಚಿಕೆಯಾಗಿತ್ತು. ವಾಸ್ತವವಾಗಿ ಈ ಚರ್ಚೆಯಲ್ಲಿ ಭಾಗವಹಿಸುವುದು ಶಾಸಕರ ಮೂಲಭೂತ ಕರ್ತವ್ಯ. ಶಾಸನ ರಚನೆ, ಸಂಬಂಧಪಟ್ಟ ಯೋಜನೆಗಳ ನೀತಿ, ನಿಲುವುಗಳನ್ನು ನಿರೂಪಿಸುವುದು ಶಾಸನಸಭೆಯ ಕರ್ತವ್ಯ. ಇಂಥ ಸಂದರ್ಭದಲ್ಲಿ ವಿಷಯಾಧಾರಿತ ಚರ್ಚೆಯಿಂದ ಲೋಪದೋಷಗಳನ್ನು ಹೆಕ್ಕಿ ತೆಗೆದು ನಿವಾರಿಸುವುದು ಸಾಧ್ಯವಾಗುತ್ತದೆ.
ಆದರೆ, ಆದದ್ದು ಮತ್ತು ಆಗುತ್ತಿರುವುದೇನು? ನಾನಾ ಇಲಾಖೆ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಶಾಸಕರೇ ತಮ್ಮ ತಲೆಯ ಮೇಲೆ ಹೊತ್ತುಕೊಂಡದ್ದು. ತತ್ಪರಿಣಾಮವಾಗಿ ಜನ ಬದಲಾದರೂ ನೀರು ಬಂದಿಲ್ಲ, ಕರೆಂಟ್ ಬಂದಿಲ್ಲ, ಚರಂಡಿ ಸರಿಯಾಗಿಲ್ಲ ಎನ್ನುವುದರಿಂದ ಹಿಡಿದು ನೇಮಕ, ವರ್ಗಾವಣೆ, ಕಾಮಗಾರಿಗಳ ಟೆಂಡರ್ ಮಂಜೂರುವರೆಗೆ ಪ್ರತಿಯೊಂದಕ್ಕೂ ಶಾಸಕರ ಮನೆ ಎಡತಾಕಿದರು. ಈ ಕೆಲಸಗಳನ್ನು ನಿರ್ವಹಿಸುವ ನೆಪದಲ್ಲಿ ಬಹುತೇಕ ಶಾಸಕರು 'ವ್ಯಾಪಾರ' ಶುರು ಮಾಡಿಕೊಂಡರು. ಅವರ ಆದ್ಯತೆಯೂ ಬದಲಾಯಿತು. ಶಾಸನಸಭೆ ಚರ್ಚೆಯಲ್ಲಿ ಪಾಲ್ಗೊಂಡು ಕಲಾಪ ಜ್ಞಾನ ವಿಸ್ತಾರ ಮಾಡಿಕೊಳ್ಳುವ ಬದಲು ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರ ಹಿಂದೆ ಅರ್ಜಿ ಹಿಡಿದುಕೊಂಡು ಓಡಾಡಲು ಶುರು ಮಾಡಿದರು. ಅರ್ಜಿಗಳಿಗೆ ಅದರಲ್ಲೂ ವಿಶೇಷವಾಗಿ 'ಆದಾಯ' ತರುವ ಕಡತಗಳಿಗೆ ಸಹಿ ಹಾಕಿಸಿಕೊಳ್ಳುವುದೇ ಪರಮ ಕರ್ತವ್ಯ ಎಂದು ಭಾವಿಸಿದರು. ಅದರಂತೆ ನಡೆದರು. ಯಾವಾಗ ಶಾಸಕರ ಆದ್ಯತೆಗಳು ಬದಲಾದವೋ ಆಗ ಸಹಜವಾಗಿಯೇ ಅವರ ಮೂಲ ಕರ್ತವ್ಯ ಸೊರಗಿತ್ತು. ವಿಧಾನ ಮಂಡಲ ಅಧಿವೇಶನ ಚರ್ಚೆಯ ಗುಣಮಟ್ಟ ಕರಗಿತ್ತು. ಹೀಗಾಗಿ ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆ ತನ್ನ ಮಹತ್ವ ಹಾಗೂ ಅಸ್ತಿತ್ವ ಎರಡನ್ನೂ ಕಳೆದುಕೊಂಡಿತ್ತು.
ಇನ್ನೂ ಒಂದು ವಿಷಯ. ಹಿಂದಾದರೆ ಹೋರಾಟ, ಸಮಾಜಸೇವೆಯ ಹಿನ್ನೆಲೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಶಾಸನಸಭೆಗೆ ಬರುತ್ತಿದ್ದರು. ಆದರೆ, ಬರಬರುತ್ತಾ ರಿಯಲ್ ಎಸ್ಟೇಟ್ ಲಾಬಿ, ಹಣ ಖರ್ಚು ಮಾಡಿ ಬರುವವರ ಸಂಖ್ಯೆ ಹೆಚ್ಚಾಯಿತು. ಹಣ ಖರ್ಚು ಮಾಡಿ ಬಂದವರ ಆದ್ಯತೆ ಕೂಡ ಹಣ ಸಂಪಾದನೆಯೇ ಆಗಿರುತ್ತದೆ. ಅವರ ಆಸಕ್ತಿ, ಗಮನ ಎಲ್ಲವೂ ಅತ್ತಲೇ ಕೇಂದ್ರೀಕೃತ. ಹೀಗಿರುವಾಗ ಅವರು ಚರ್ಚೆ ಬಗ್ಗೆ ಎಲ್ಲಿಂದ ತಲೆ ಕೆಡಿಸಿಕೊಳ್ಳಬೇಕು? ಶಾಸಕರು ಈ ರೀತಿ ಅನಾಸಕ್ತಿ ಮೆರೆದಾಗ ಅಧಿಕಾರಿಗಳು ಆಡಿದ್ದೇ ಆಟ ಎಂದಾಗುತ್ತದೆ. ಆಯಾ ಇಲಾಖೆಗಳಲ್ಲಿ ಹುಳುಕು-ಕೊಳಕುಗಳು ಸದ್ದಿಲ್ಲದೇ ನುಸುಳುತ್ತವೆ. ಬರಬರುತ್ತಾ ವಿಷಮ ಪರಿಸ್ಥಿತಿಗೂ ತಿರುಗುತ್ತದೆ. ಒಂದಕ್ಕೊಂದು ಸಂಬಂಧ ಹೇಗಿದೆ ಎಂದರೆ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆ ನಡೆದರೆ ಎಲ್ಲಿ ಈ ಹುಳುಕುಗಳು ಬಯಲಿಗೆ ಬರುತ್ತವೆಯೋ ಎಂಬ ಭಯ ಮಂತ್ರಿ-ಮಹೋದಯರದ್ದು. ತಮ್ಮಿಂದಾಗಿಯೇ ಆದ ಲೋಪಗಳನ್ನು ತಾವೇ ಮತ್ತೊಂದು ರೀತಿಯಲ್ಲಿ ಮುಚ್ಚಿಕೊಳ್ಳಲು ಅಣಿಯಾಗುತ್ತಾರೆ.
ಹಿಂದೆ ಈ ರೀತಿಯ ಲೋಪಗಳನ್ನು ಹೊರಗೆಳೆಯಲು ವಿಷಯ ಸಮಿತಿಗಳಿದ್ದವು. ಒಂದೆಡೆ ಈ ಸಮಿತಿಗಳ ವರದಿ ಅಧಿಕಾರಶಾಹಿ ಮೇಲೆ ಹಿಡಿತ ಸಾಧಿಸಲು, ಇನ್ನೊಂದೆಡೆ ಬೇಡಿಕೆಗಳ ಮೇಲಿನ ಚರ್ಚೆಗೆ ಪೂರಕವಾಗಿರುತ್ತಿತ್ತು. ಆದರೆ, 2004ರಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಈ ವಿಷಯ ಸಮಿತಿಗಳನ್ನು ರದ್ದುಪಡಿಸಲಾಯಿತು. ದುರ್ಬಲ ಸರ್ಕಾರ ಹಾಗೂ ಅಧಿಕಾರಿಗಳ ಯುಗ ಆರಂಭ ಆದದ್ದೇ ಆಗ. ಅಲ್ಲಿಂದಾಚೆಗೆ ವಿಷಯ ಸಮಿತಿಯೂ ಇರಲಿಲ್ಲ. ಬೇಡಿಕೆಗಳ ಮೇಲೆ ಸಮರ್ಪಕ ಚರ್ಚೆಯೂ ನಡೆಯಲಿಲ್ಲ. ಅಧಿವೇಶನ ಕಲಾಪ ಗುಣಮಟ್ಟ ಕುಸಿಯಿತು ಎಂಬ ಆರೋಪಗಳು ದಟ್ಟವಾದವು ಹಾಗೂ ನಿರಂತರವಾದವು.
ಆದರೆ, ಆ ಪರಂಪರೆಗೆ ಪ್ರಸಕ್ತ ನಡೆಯುತ್ತಿರುವ ಅಧಿವೇಶನ ಒಂದು ಅಪವಾದವಾಗಿದೆ. ಇತ್ತೀಚಿನ ವರ್ಷಗಳಲ್ಲೇ ಬಜೆಟ್ ಮೇಲೆ ಇಷ್ಟೊಂದು ಸುದೀರ್ಘ ಚರ್ಚೆ ನಡೆದಿರುವುದು ಇದೇ ಮೊದಲು. ಅಲ್ಲದೇ ಚರ್ಚೆ ಗುಣಾತ್ಮಕವಾಗಿದೆ. ಕೆಲವು ಸದಸ್ಯರ ಪ್ರಬುದ್ಧತೆ, ವಿಷಯಗಳ ಮೇಲಿನ ಪ್ರಭುತ್ವ ಅನಾವಣಗೊಂಡಿದೆ. ಇಲ್ಲಿ ಆಡಳಿತ, ಪ್ರತಿಪಕ್ಷ ಎಂಬ ಭೇದ ಇಲ್ಲ. ಒಬ್ಬರನ್ನು ಮೀರಿಸಿ ಮತ್ತೊಬ್ಬರು ವಾಗ್, ವಿಷಯ ಪ್ರೌಢಿಮೆ ಮೆರೆದಿದ್ದಾರೆ. ತತ್ಪರಿಣಾಮವಾಗಿ ಸಮಸ್ಯೆಗಳು ಅನಾವರಣಗೊಂಡಿವೆ. ಹಗರಣಗಳು ಬಯಲಿಗೆ ಬಂದಿವೆ. ಸಚಿವರ ಬಣ್ಣ ಬಯಲಾಗಿದೆ. ಹಿಂದಿನ ಹಾಗೂ ಈಗಿನ ವಿವಾದಗಳು ತನಿಖೆಗೆ ಒಳಪಟ್ಟಿವೆ. ಹತ್ತಾರು ಕೋಟಿ ರುಪಾಯಿ ಖರ್ಚಾಗುವ ಒಂದು ಅಧಿವೇಶನದ ಯಶಸ್ಸಿಗೆ ಶಾಸನಸಭೆ ಸದಸ್ಯರ ಸಂಘಟಿತ ಪ್ರಯತ್ನ, ಬದ್ಧತೆ, ಆಸಕ್ತಿ ಪ್ರಮುಖವಾಗಿರುತ್ತದೆ. ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ಸಮಾನ ಪಾಲ್ಗೊಳ್ಳುವಿಕೆ ಬೇಕಾಗುತ್ತದೆ. ಅದನ್ನು ಈಗಿನ ಅಧಿವೇಶನದಲ್ಲಿ ಕಾಣಬಹುದಾಗಿದೆ. ಸುಮಾರು ಐದು ವಾರ ಮೀರಿ ನಡೆದಿರುವ ಈ ಅಧಿವೇಶನದ ಯಶಸ್ಸಿನ ಸಿಂಹಪಾಲು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೇ ಸಲ್ಲಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದ್ಧತೆ, ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಕುಮಾರಸ್ವಾಮಿ ಅವರ ಪ್ರಬುದ್ಧತೆ ಕೊಡುಗೆ ಪ್ರಶಂಸಾರ್ಹ. ಹೋರಾಟದ ಹಿನ್ನೆಲೆ, ಜನರ ಮಧ್ಯದಿಂದ ಬಂದ ಅನುಭವಿ ನಾಯಕರು ಸದನದ ಮುಖ್ಯ ಸ್ಥಾನದಲ್ಲಿದ್ದರೆ ಕಲಾಪ ಹೇಗೆ ಕಳೆಗಟ್ಟುತ್ತದೆ, ಜನಪರ ಆಗಿರುತ್ತದೆ ಎಂಬುದಕ್ಕೆ ಕಾಗೋಡು ತಿಮ್ಮಪ್ಪ ಅವರೇ ಸಾಕ್ಷಿ.
ಈ ಸರ್ಕಾರ ಬಂದಾಗಿನಿಂದಲೂ ಇಲಾಖೆಗಳ ಬೇಡಿಕೆ ಮೇಲೆ ಚರ್ಚೆ ನಡೆಯಬೇಕು ಎಂದು ಅವರು ಪಟ್ಟು ಹಿಡಿದಿದ್ದರು. ಇದರಿಂದ ಇಲಾಖೆಯ ಹುಳುಕುಗಳು ಬಯಲಾಗಿ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ಅವರ ಆಶಯವಾಗಿತ್ತು. ಅವರು ಪಟ್ಟು ಹಿಡಿದಿದ್ದಷ್ಟೇ ಅಲ್ಲ ಚರ್ಚೆ ನಡೆದಾಗ ಆಡಳಿತ ಹಾಗೂ ಪ್ರತಿಪಕ್ಷ ಎಂಬ ಭೇದ ತೋರದೆ ಸಮಾನ ಅವಕಾಶ ಕಲ್ಪಿಸಿದರು. ಅದು ಸಭಾಧ್ಯಕ್ಷರ ಸಹಜ ಜವಾಬ್ದಾರಿಯೇ. ಆದರೂ 'ಉಪ್ಪಿನ ಋಣ'ಕ್ಕೆ ಅವರು ಆಸ್ಪದ ಕೊಡಲಿಲ್ಲ. ಎಷ್ಟೋ ವಿಷಯಗಳಲ್ಲಿ ಸರಿಯಾಗಿ ಉತ್ತರ ಕೊಡದ ಮಂತ್ರಿಗಳನ್ನು ಅವರೇ ತರಾಟೆಗೆ ತೆಗೆದುಕೊಂಡರು. ಅದರ ಸ್ವರೂಪ ಹೇಗಿತ್ತೆಂದರೆ ಕೆಲವು ಸಂದರ್ಭಗಳಲ್ಲಿ ಪ್ರತಿಪಕ್ಷಗಳ ಮುಖಂಡರೇ ದಂಗುಬಡಿದು ಹೋದರು. ಮಂತ್ರಿಗಳು ಮೈ ಪರಚಿಕೊಂಡರು. ಸರ್ಕಾರ ಮುಜುಗರದಿಂದ ನರಳಿತು.
ಆಡಳಿತ ಪಕ್ಷದವರೇ ಆದ ವಿಧಾನಸಭೆ ಮಾಜಿ ಸ್ಪೀಕರ್ ರಮೇಶಕುಮಾರ್ ಸರ್ಕಾರಕ್ಕೆ ಮೈ ಚಳಿ ಬಿಡಿಸುವುದರಲ್ಲಿ ಕಾಗೋಡು ತಿಮ್ಮಪ್ಪ ಅವರ ಸಾಲಿನಲ್ಲಿಯೇ ನಿಂತರು. ಈಟಿಯಂಥ ಅವರ ಮಾತು ಮಂತ್ರಿಗಳನ್ನು ಎಲ್ಲೆಂದರಲ್ಲಿ ಚುಚ್ಚಿ ಬೆಚ್ಚಿ ಬೀಳಿಸಿತ್ತು. ಆಡಳಿತ ಪಕ್ಷದ ಪೈಕಿ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ಅಪ್ಪಾಜಿ ನೌಡಗೌಡ, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಶರಣಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ಸಿ.ಎಸ್. ಪಾಟೀಲ್, ಬಸವರಾಜ ರಾಯರೆಡ್ಡಿ, ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ, ಪ್ರತಿಪಕ್ಷ ಬಿಜೆಪಿ ಪೈಕಿ ನಾಯಕ ಜಗದೀಶ ಶೆಟ್ಟರ್, ಸುರೇಶಕುಮಾರ್, ಸಿ.ಟಿ.ರವಿ, ಕೆ.ಜಿ.ಬೋಪಯ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಲಕ್ಷ್ಮಣ ಸವದಿ, ಡಾ.ಅಶ್ವತ್ಥನಾರಾಯಣ, ಮಹಾಮನಿ, ಜೀವರಾಜ್, ಜೆಡಿಎಸ್ ಪೈಕಿ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಚಲುವರಾಯಸ್ವಾಮಿ, ವೈಎಸ್‌ವಿ ದತ್ತ, ಬಿ.ಬಿ. ನಿಂಗಯ್ಯ, ಶಿವಲಿಂಗೇಗೌಡ, ಸುಧಾಕರ ಲಾಲ್, ಎಂ.ಪಿ. ಕುಮಾರಸ್ವಾಮಿ, ಪಕ್ಷೇತರ ಶಾಸಕ ಪಿ. ರಾಜೀವ್, ರೈತ ಸಂಘದ ಪುಟ್ಟಣ್ಣಯ್ಯ ಚರ್ಚೆಯ ಗೌರವ- ಘನತೆಯನ್ನು ಹೆಚ್ಚಿಸಿದವರಲ್ಲಿ, ಸಮಸ್ಯೆಗಳನ್ನು ತಾರ್ಕಿಕ ಅಂತ್ಯಕ್ಕೆ ತಂದವರಲ್ಲಿ ಪ್ರಮುಖರು. ಸಮಸ್ಯೆಗಳ ಆಳವನ್ನು ಸರ್ಕಾರಕ್ಕೆ ಮನಮುಟ್ಟಿಸುವಲ್ಲಿ ಪ್ರತಿಪಕ್ಷದವರು, ಅದೇ ರೀತಿ ಪ್ರತಿಪಕ್ಷಗಳ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಆಡಳಿತ ಪಕ್ಷದವರು ಯಶಸ್ವಿಯಾಗಿದ್ದಾರೆ. ಶೆಟ್ಟರ್ ಅವರಿಂದಾಗಿ ಅರ್ಕಾವತಿ ಡಿನೋಟಿಫಿಕೇಷನ್, ಎಚ್.ಡಿ.ಕುಮಾರಸ್ವಾಮಿ ಅವರಿಂದಾಗಿ ಕೆರೆ ಒತ್ತುವರಿ, ವಿದ್ಯುತ್ ಖರೀದಿ ಹಗರಣ, ಎಸ್.ಆರ್. ವಿಶ್ವನಾಥ್ ಅವರಿಂದಾಗಿ ನೈಸ್ ಹಗರಣ. ಅದೇ ರೀತಿ ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಹಾಗೂ ಕಬ್ಬು ಖರೀದಿ, ಸರಬರಾಜು ನಿಯಂತ್ರಣ ವಿಧೇಯಕದ ಬಗ್ಗೆ ಪಕ್ಷಭೇದ ಮರೆತು ಮೌಲ್ಯಯುತ ಚರ್ಚೆ ನಡೆದಿದೆ. ಇಲ್ಲಿ ಪ್ರತಿಷ್ಠೆ, ಗೌರವಗಳಿಗಿಂತ ಮಿಗಿಲಾಗಿ ಜನಪರ ಕಾಳಜಿ ಮೆರೆದಿದೆ. ಅದಕ್ಕೇ ಹೇಳಿದ್ದು ಮೌಲ್ಯಯುತ ಚರ್ಚೆಯ ಗತಕಾಲ ಮತ್ತೆ ಜೀವಂತಿಕೆ ಪಡೆದಿದೆ ಎಂದು.
ಹಾಗೆಂದ ಮಾತ್ರಕ್ಕೇ ಸದನದ ಕಲಾಪ ರಾಜಕೀಯದಿಂದ ಹೊರತಾಗಿತ್ತು ಎಂದು ಅರ್ಥವಲ್ಲ. ಒಂದು ಪಕ್ಷವನ್ನು ಹಣಿಯಲು ಇನ್ನೊಂದು ಪಕ್ಷ ಮತ್ತೊಂದು ಪಕ್ಷದ ಜತೆ ಕೈ ಜೋಡಿಸಿದ್ದು, ಅನುಕೂಲಸಿಂಧು ರಾಜಕೀಯ ಮಾಡಿದ್ದೂ ಇದೆ. ಆದರೆ, ಇದೆಲ್ಲವ್ನನೂ ಗುಣಾತ್ಮಕ ಚರ್ಚೆ ಮರೆಮಾಚಿಸಿದೆ. ಈ ಪರಂಪರೆ ಮುಂದುವರಿಯಲು ಇನ್ನೂ ಅವಕಾಶವಿದೆ ಎಂಬ ಬಗ್ಗೆ ಆಶಾಭಾವನೆ ಮೂಡಿಸಿದೆ.
ಲಗೋರಿ: ಹಿರಿತನ, ಗೌರವ ರಕ್ಷಣೆಗೂ ರಾಜಿ ಆಗಬಹುದು.
- ಪಿ. ತ್ಯಾಗರಾಜ್
thyagarjun@gmail.com