ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಕ್ಕಳಿಗೆ ತಿಳಿದಿರಲಿ ಸರಿ-ತಪ್ಪೆಂಬ ಸ್ಪರ್ಶಜ್ಞಾನ

Srinivasa Murthy VN
Updated On : 30 Jul 2014, 12:20 pm

ಲೈಂಗಿಕ ಶಿಕ್ಷಣ ಬೇಕು, ಎರಡು ಕಾರಣಕ್ಕೆ.. ಒಂದು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಮತ್ತು ಎರಡನೆಯದ್ದು ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ವೇಚ್ಛಾಚಾರ. ಲೈಂಗಿಕ ಶಿಕ್ಷಣ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಕೊಡಬೇಕು ಎನ್ನುವ ಪ್ರಶ್ನೆಯಿದೆ. 6-10 ವರ್ಷ ವಯಸ್ಸಿನ ಮಕ್ಕಳಲ್ಲಿ "ಯಾವುದು ಸರಿ ಮತ್ತು ಯಾವುದು ತಪ್ಪು ಸ್ಪರ್ಶ ಎಂಬ ಬಗ್ಗೆ ಅರಿವಿರಬೇಕು. 'ಬ್ಯಾಡ್ ಟಚ್‌' ಅಂದರೆ ಏನು, ಓರ್ವ ವ್ಯಕ್ತಿ ತನ್ನನ್ನು ಎಲ್ಲಿ ಮುಟ್ಟಬಹುದು, ದೇಹದ ಯಾವ ಜಾಗಗಳನ್ನು ಮುಟ್ಟಬಾರದು. ಹಾಗೆ ದಿನೇ ದಿನೇ ಮುಟ್ಟುತ್ತಲೇ ಇದ್ದರೆ ಮಗು ಏನು ಮಾಡಬೇಕು?" - ಈ ಕುರಿತು ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಂತ ಮಹತ್ವದ್ದು. ಈ ಥರದ ತಿಳಿವಳಿಕೆ ಮಕ್ಕಳಿಗೆ ಇದ್ದರೆ, ಅಂದರೆ ಹೊರಗೆ ತನ್ನೊಡನೆ ಸಣ್ಣ ಘಟನೆ ನಡೆದಿದ್ದರೂ ತಕ್ಷಣವೆ ತಂದೆ-ತಾಯಿಯಲ್ಲಿ ವರದಿ ಒಪ್ಪಿಸುವ ಅಭ್ಯಾಸ ದೊಡ್ಡವರು ಮಕ್ಕಳಲ್ಲಿ ಬೆಳೆಸಿದ್ದೇ ಆದರೆ, ಅತ್ಯಾಚಾರಗಳನ್ನು ಶುರುವಿನಲ್ಲೇ ಚಿವುಟಬಹುದು. ಮಗುವಿನ ಮುಂದಿನ ಜೀವನ ಸುಖಮಯವಾಗಿರಲು ಇದನ್ನು ಅತಿ ಮುಖ್ಯವಾದ ಲೈಂಗಿಕ ಶಿಕ್ಷಣವೆನ್ನಬಹುದು.  
ಇನ್ನು ಎರಡನೆಯ ಹಂತವಾಗಿ 10-13 ವಯಸ್ಸಿನ ಮಕ್ಕಳಿಗೆ ಮಗು ಹುಟ್ಟುವ ಕ್ರಿಯೆ, ಹುಡುಗ- ಹುಡುಗಿಯ ನಡುವೆ ಸ್ನೇಹ ಯಾವುದು, ಸ್ನೇಹವನ್ನು ಮೀರಿದ್ದು ಯಾವುದು, ತಾಯಿಯಾಗುವ ಹೆಣ್ಣಿನ ದೇಹದಲ್ಲಿ ಆಗುವ ಸಹಜ ಬದಲಾವಣೆಗಳೇನು..ಎನ್ನುವ ಕುರಿತು ಅರಿವು ಮೂಡಿಸಬೇಕು. ಆದರೆ ಇವೆಲ್ಲವೂ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರಚೋದನಕಾರಿಯಾಗಲ್ಲದೆ, ಬಹಳ ವೈಜ್ಞಾನಿಕವಾಗಿ ತಿಳಿಸುವುದು ಮುಖ್ಯ. ಈ ಬಗ್ಗೆ ಎಂಟನೆಯ ತರಗತಿಯಿಂದಲೇ ಪಠ್ಯಪುಸ್ತಕಗಳಲ್ಲಿ ಮಾಹಿತಿ ಇರುತ್ತದೆ.
ಇನ್ನು "ಈಗಿನ ಮಕ್ಕಳು ಅಂತರ್ಜಾಲ, ಟಿವಿ, ಮತ್ತು ಗೆಳೆಯ ಗೆಳತಿಯರೊಡನೆ ಮಾತಾಡಿಕೊಂಡು ಹೆಚ್ಚು ಕಡಿಮೆ ವಿಷಯವನ್ನೆಲ್ಲಾ ತಿಳಿದುಕೊಂಡಿರುತ್ತಾರೆ ಇದರ ಬಗ್ಗೆ ಶಿಕ್ಷಣ ಯಾಕೆ ಬೇಕು?" ಎನ್ನುವ ವಾದವೂ ಇದೆ. ಆದರೆ ಲೈಂಗಿಕ ಶಿಕ್ಷಣ ಏಕೆಂದರೆ ಸರಿಯಾದ ವೈಜ್ಞಾನಿಕ ಮಾಹಿತಿ ಮಕ್ಕಳನ್ನು ತಲುಪಿದರೆ, ಅನೇಕ ಸಾಮಾಜಿಕ ಅಪರಾಧಗಳನ್ನು, ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಹೆಣ್ಣಿನ ಋತು ಚಕ್ರ, ಹೆಣ್ಣು ಮತ್ತು ಗಂಡಿನ ಸಂತಾನೊತ್ಪತ್ತಿಯ ಅಂಗಗಳು, ಗರ್ಭ ಧರಿಸುವ ಕ್ರಿಯೆ, ಗರ್ಭ ಧಾರಣೆ ತಡೆಗಟ್ಟಬಹುದಾದ ವಿಧಾನ, ಭ್ರೂಣ (ಎಂಬ್ರಯೊ)ಮತ್ತು ಒಂಬತ್ತು ತಿಂಗಳುಗಳಲ್ಲಿ ಭ್ರೂಣದಲ್ಲಿ ಆಗುವ ಬದಲಾವಣೆಗಳು, ಪ್ರಸವ, ಸಾಮಾಜಿಕ ಆರೋಗ್ಯ, ಲೈಂಗಿಕ ಆರೋಗ್ಯ, ಏಡ್ಸ್ ಹರಡುವ ಬಗ್ಗೆ ಮತ್ತು ಅದನ್ನು ತಡೆಗಟ್ಟುವ ಸುಲಭ ವಿಧಾನಗಳು - ಇವೇ ಮುಂತಾದವು ಲೈಂಗಿಕ ಶಿಕ್ಷಣದ ಅಂಶಗಳು.
ಲೈಂಗಿಕ ಆರೋಗ್ಯದಲ್ಲಿ - ಹೆಣ್ಣಿಗೆ ಋತು ಚಕ್ರದ ಜೊತೆ ಬರುವ ದೇಹದ ತೊಂದರೆ ಮತ್ತು ಬದಲಾವಣೆ, ಆಗ ಆಗುವ ಇರುಸು ಮುರುಸು, ಖಿನ್ನತೆ, ಉದ್ವೇಗ, ತೀವ್ರ ಸೊಂಟ ನೋವು ಮತ್ತು ತಲೆನೋವನ್ನು (ಮೈಗ್ರೇನ್) ಎದುರಿಸಲು ಬೇಕಾದ ಮನೋಧೈರ್ಯ, ಹದಿಹರೆಯದಲ್ಲಾಗುವ ಪರಸ್ಪರ ಲೈಂಗಿಕ ಆಕರ್ಷಣೆ, ಹಾರ್ಮೋನ್‌ಗಳ ರಭಸ, ಅವುಗಳಿಂದುಂಟಾಗುವ ಪರಿಣಾಮಗಳ ಬಗ್ಗೆ ಹದಿಹರೆಯದವರು ತಿಳಿದುಕೊಳ್ಳಲೇಬೇಕಿದೆ.

= ಡಾ. ರೂಪಾ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement