ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರೇಲ್ವೆ ಸೇವೆಗಳ ವಿಸ್ತರಣೆಯಲ್ಲಿ ರಾಷ್ಟ್ರೀಯ ನೀತಿ ಏಕಿಲ್ಲ?

Srinivasa Murthy VN
Updated On : 3 Jun 2014, 1:15 am

ಹಿಂದಿದ್ದ ಯುಪಿಎ ಸರ್ಕಾರದ ಕೊನೆಯ 9 ತಿಂಗಳ ಅವಧಿ ರೇಲ್ವೆ ಖಾತೆ ಕನ್ನಡಿಗ, ಗುಲ್ಬರ್ಗ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಲಿದಿತ್ತು. ದೊರಕಿದ್ದ ಅಲ್ಪ ಅವಕಾಶದಲ್ಲೇ ಖರ್ಗೆ ಕೇಂದ್ರ ರೇಲ್ವೆ ಸಚಿವರಾಗಿ ಹಲವು ಸಾಧನೆಗಳಿಗೆ ಕಾರಣರಾಗಿದ್ದು ಸತ್ಯ. ಇದೀಗ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಮತ್ತೆ ರೇಲ್ವೆ ಸಚಿವಗಿರಿ ಕನ್ನಡಿಗರಿಗೇ ಒಲಿದಿದ್ದು, ಮಾಜಿ ಸಿಎಂ ಸದಾನಂದಗೌಡರು ಈ ಖಾತೆ ಹೊಣೆ ಹೊತ್ತಿದ್ದಾರೆ. ರೇಲ್ವೆ ಸೌಕರ್ಯ, ಸೇವೆಗಳ ವಿಸ್ತರಣೆ, ಮಾರ್ಗ ನಿರ್ಮಾಣದಲ್ಲಿ ಆಲಕ್ಷಕ್ಕೊಳಗಾಗಿರುವ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ರೇಲ್ವೆ ಮೂಲ ಸೌಕರ್ಯ ಹಂಚಿಕೆಯಲ್ಲಿ ಇದುವರೆಗೂ ಇರದ ರಾಷ್ಟ್ರೀಯ ನೀತಿ ರೂಪುಗೊಳ್ಳುವುದೇ?
ನೂರೈವತ್ತಕ್ಕೂ ಅಧಿಕ ವರ್ಷಗಳ ಭವ್ಯ ಇತಿಹಾಸವಿರುವ ಭಾರತೀಯ ರೇಲ್ವೆಯಲ್ಲಿ ಮಾರ್ಗ ನಿರ್ಮಾಣ, ವಿಭಾಗೀಯ ಕಚೇರಿ ಆರಂಭ, ಹತ್ತು ಹಲವು ಸೌಲಭ್ಯಗಳ ವಿಸ್ತರಣೆಯಂತಹ ಪ್ರಮುಖ ವಿಚಾರಗಳಲ್ಲಿ ಇಂದಿಗೂ ವೈಜ್ಞಾನಿಕ, ಜನಸಂಖ್ಯೆ ಆಧಾರಿತ ಹಾಗೂ ಸರ್ವರ ಹಿತ ಕಾಪಾಡುವಂತಹ ರಾಷ್ಟ್ರೀಯ ನೀತಿಯ ಕೊರತೆ ಕಾಡುತ್ತಿದೆ. 66 ಸಾವಿರ ಕಿಮೀ ಮಾರ್ಗದ ಮೂಲಕ ದೇಶದುದ್ದಗಲಕ್ಕೂ ಹರಡಿಕೊಂಡಿರುವ ರೇಲ್ವೆ ಜಾಲ ನಿತ್ಯವೂ 2. 30 ಕೋಟಿ ಜನರ ಸಂಪರ್ಕ ಬೇಡಿಕೆಯನ್ನು ಪೂರೈಸುತ್ತಿದೆ. ಇಂತಹ ದಾಖಲಾರ್ಹ, ಐತಿಹಾಸಿಕ ಕೆಲಸ ಕಾರ್ಯದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ರೇಲ್ವೆ ಇಲಾಖೆಯಲ್ಲಿ ಅಭಿವೃದ್ಧಿ, ಮಾರ್ಗ ನಿರ್ಮಾಣ, ಹೊಸ ಸೌಕರ್ಯಗಳನ್ನು ನೀಡುವ ವಿಚಾರಗಳಲ್ಲಿ ವೈಜ್ಞಾನಿಕ, ಸರ್ವ ಸಮ್ಮತ ನೀತಿಗಳ ಅಭಾವವಿರುವುದು ಯಾಕೋ ಗೊತ್ತಿಲ್ಲ.
ದೇಶದ ಪ್ರಮುಖ ರಾಜ್ಯಗಳು ಹೊಂದಿರುವ ವಿಭಾಗೀಯ ಕಚೇರಿಗಳು, ಪ್ರತಿ ಸಾವಿರ ಚದರ ಕಿಮೀ ವ್ಯಾಪ್ತಿಯಲ್ಲಿನ ರೈಲು ಮಾರ್ಗಗಳ ಪ್ರತಿಶತ ಅಂಕಿ- ಸಂಖ್ಯೆಯ ಮೇಲೆ ಕಣ್ಣಾಡಿಸಿದರೆ ಸಾಕು, ರೇಲ್ವೆ ಮಾರ್ಗ ನಿರ್ಮಾಣ, ಸೌಕರ್ಯಗಳ ವಿಸ್ತರಣೆಯಲ್ಲಿ 'ಜಿಸ್ಕಾ ಲಾಠಿ, ಉಸ್ಕಾ ಭೈಂಸ್‌' (ಬಡಿಗೆ ಯಾರದ್ದೇ ಎಮ್ಮೆಯೂ ಅವರದ್ದೇ) ನೀತಿ ಅನುಷ್ಠಾನದಲ್ಲಿದೆ ಎಂಬುದು ಗಮನಕ್ಕೆ ಬಾರದಿರದು.
ಸ್ವತಂತ್ರ ಭಾರತದ ಆರೂವರೆ ದಶಕದ ಅವಧಿಯಲ್ಲಿ ಸುದೀರ್ಘ, ಅಂದರೆ 25 ವರ್ಷಗಳ ಕಾಲ ರೇಲ್ವೆ ಇಲಾಖೆಯನ್ನು ಬಿಹಾರ ರಾಜ್ಯದ ಜನನಾಯಕರೇ ಪ್ರತಿನಿಧಿಸಿದ್ದರು. ಎರಡೂವರೆ ದಶಕ ಬಿಹಾರಿಗಳ ಕೈಯಲ್ಲೇ ರೇಲ್ವೆ ಖಾತೆ ಸಿಕ್ಕಾಗ ಸಹಜವಾಗಿಯೇ ರೇಲ್ವೆ ಮಾರ್ಗ ನಿರ್ಮಾಣದಲ್ಲಿ ಬಿಹಾರ ರಾಜ್ಯ ಸಿಂಹಪಾಲು ಪಡೆದುಕೊಂಡಿರುತ್ತದೆ.
ಲಭ್ಯ ಅಂಕಿ- ಸಂಖ್ಯೆಗಳ ಪ್ರಕಾರ ಪ್ರತಿ ಸಾವಿರ ಚದರ ಕಿಲೋ ಮೀಟರ್‌ಗೆ ಬಿಹಾರದಲ್ಲಿ ಪ್ರತಿಶತ 38 ಕಿಮೀ ರೇಲ್ವೆ ಮಾರ್ಗವಿದ್ದರೆ ಅನ್ಯ ರಾಜ್ಯಗಳಲ್ಲಿ ಈ ಲೆಕ್ಕ ಯಾವ ಮಗ್ಗುಲಿಂದಲೂ ತಾಳೆಯಾಗುವುದಿಲ್ಲ.
ಪ್ರತಿ ಒಂದು ಸಾವಿರ ಚದರ ಕಿಮೀ ಮೀಟರ್ ರೈಲು ಮಾರ್ಗ ಬಿಹಾರ ಸೇರಿದಂತೆ ಈ ಪ್ರಮುಖ ರಾಜ್ಯಗಳಲ್ಲಿ ಇಂತಿದೆ. ಬಿಹಾರ- ಶೇ. 38, ಹರಿಯಾಣ- ಶೇ. 34, ಆಸ್ಸಾಂ- ಶೇ. 31, ಆಂಧ್ರಪ್ರದೇಶ- ಶೇ. 19. 14, ಮಹಾರಾಷ್ಟ್ರ- ಶೇ. 18. 20, ಕರ್ನಾಟಕ- ಶೇ. 16. (ಇತರೆ ರಾಜ್ಯಗಳು ಶೇ. 10 ರಿಂದ ಶೇ. 20 ರೊಳಗೆ ಇವೆ).
ರೇಲ್ವೆ ಮಾರ್ಗದ ವಿಚಾರದಲ್ಲಿ ಬಿಹಾರವನ್ನು ಸರಿಗಟ್ಟುವ ಮಾತಿರಲಿ, ಅಕ್ಕಪಕ್ಕದ ಆಂಧ್ರ, ಮಹಾರಾಷ್ಟ್ರಗಳನ್ನು ಸರಿಗಟ್ಟಲಾಗದಂತಹ ದುರವಸ್ಥೆ ಕರ್ನಾಟಕದ್ದಾಗಿದೆ. ರೇಲ್ವೆ ಸೌಕರ್ಯ ಹಿಗ್ಗಿಸಲು ಸಹಜವಾಗಿಯೇ ಸಾಕಷ್ಟು ಭೌಗೋಳಿಕ ಅನುಕೂಲಗಳು ಈ ರಾಜ್ಯ ಪಡೆದುಕೊಂಡಿದ್ದರೂ ಸಹ ಇಂದಿಗೂ ಇಲ್ಲಿನ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ನಡುವೆ ರೈಲು ಸಂಪರ್ಕ ಇಲ್ಲ. ಅಷ್ಟೇ ಯಾಕೆ, ಹಿಂದುಳಿದ ಹೈ- ಕ ಭಾಗದವರು ಕರಾವಳಿ ಸೇರಿದಂತೆ ರಾಜ್ಯದ ದಕ್ಷಿಣ ಭಾಗಕ್ಕೆ ಹೋಗಿಬರಲು ರೈಲು ಸಂಪರ್ಕ ಇಲ್ಲವೇ ಇಲ್ಲ.
ಅಕ್ಕಪಕ್ಕದ ಗುಲ್ಬರ್ಗ- ಬೀದರ್ ಮಧ್ಯವೂ ರೈಲು ಸಂಪರ್ಕವಿಲ್ಲ. ಅದೂ ಈ ಸಂಪರ್ಕ ಸಾಧಿಸಲು ಕಳೆದ ಮೂರೂವರೆ ದಶಕಗಳಿಂದ ಶುರುವಾಗಿರುವ ಯೋಜನೆಯೊಂದು ಇನ್ನು ತೆವಳುತ್ತಲೇ ಸಾಗಿರುವುದು ಪರಿಸ್ಥಿತಿಗೆ ಹಿಡಿದ ಕನ್ನಡಿ. ವಾಡಿ- ಗದಗ ಹೊಸ ರೇಲ್ವೆ ಮಾರ್ಗ ಕಾಮಗಾರಿ ಸಮೀಕ್ಷೆ ಬಿಟ್ಟು ಮೇಲೆದ್ದಿದ್ದು, ಇದೀಗ ಅಡಿಗಲ್ಲು ಹಂತ ತಲುಪಿದೆ. ಇನ್ನು ವಿಭಾಗೀಯ ಕೇಂದ್ರಗಳ ವಿಚಾರದಲ್ಲೂ ಇದೇ ಅಸಮಾನತೆ ಕಾಡುತ್ತಿದೆ. ಅಕ್ಕಪಕ್ಕದ ಆಂಧ್ರಪ್ರದೇಶ (8), ಮಹಾರಾಷ್ಟ್ರ (7) ವಿಭಾಗೀಯ ಕಚೇರಿಗಳಿದ್ದರೂ ಕರ್ನಾಟಕದಲ್ಲಿ ಮಾತ್ರ ಈ ಸಂಖ್ಯೆ ಮೂರು ಬಿಟ್ಟು ಮೇಲೇಳುತ್ತಿಲ್ಲ.
ರೇಲ್ವೆ ಸೌಕರ್ಯಗಳು ಕೈಗೆಟುಕಬೇಕಾದರೆ ಮಾರ್ಗವಿರಬೇಕು, ಸೌಕರ್ಯಗಳನ್ನು ಹಂಚುವ ಮಾಧ್ಯಮವಾಗಿರುವ  ವಿಭಾಗೀಯ ಕಚೇರಿಗಳು ಬೇಕು. ರೇಲ್ವೆ ಸೌಲಭ್ಯಗಳ ವಿಚಾರದಲ್ಲಿ ಮಹತ್ವದ ಈ ಸಂಗತಿಗಳ ಹಂಚಿಕೆ ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ, ಬೇಡಿಕೆ ಆಧರಿಸಿ, ಜನಸಂಖ್ಯೆಯನ್ನು ಮಾನದಂಡವಾಗಿ ಬಳಸಿ ಸಾಗುತ್ತಿಲ್ಲ ಎಂದ ಮೇಲೆ ಮಾತಿನಲ್ಲೇ ರೈಲು ಓಡದೆ ಕೃತಿಯಲ್ಲಿ ಓಡಲುಸಾಧ್ಯವೆ?
ಇದೀಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಗಟ್ಟಿಯಾಗಿ ನೆಲೆಯೂರಿದೆ. ಸಿಕೆ ಜಾಫರ್ ಶರೀಫ್, ಗುಲ್ಬರ್ಗ ಮೂಲದ ಮಲ್ಲಿಕಾರ್ಜುನ ಖರ್ಗೆ ನಂತರ ಕನ್ನಡಿಗ, ಮಾಜಿ ಸಿಎಂ ಡಿವಿ ಸದಾನಂದಗೌಡರಿಗೆ ರೇಲ್ವೆ ಸಚಿವ ಸ್ಥಾನ ಒಲಿದು ಬಂದಿದೆ. ಸೌಕರ್ಯಗಳ ಹಂಚಿಕೆಯಲ್ಲಿ ಸಮಾನತೆ ಇರಲೇಬೇಕು ಎಂಬುದು ನಿಸರ್ಗ ಸಹಜ ನ್ಯಾಯವಾದರೂ ರೇಲ್ವೆ ಇಲಾಖೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂಬುದು ಆ ಇಲಾಖೆ ಸಾಗಿ ಬಂದಿರುವ ದಾರಿ, ಅಲ್ಲಿನ ಅಂಕಿ- ಸಂಖ್ಯೆಗಳೇ ಬಿಂಬಿಸುತ್ತಿರುವುದರಿಂದ ಕನ್ನಡಿಗ ಸದಾನಂದಗೌಡರು ರೇಲ್ವೆಜಾಲ ನಿರ್ಮಾಣದಲ್ಲಿ ದೇಶಾದ್ಯಂತ ಕಾಡುತ್ತಿರುವ ಈ ಅಸಮಾನತೆಯ ನೋವಿಗೆ ಮದ್ದರೆಯುವರೆ? ಕರ್ನಾಟಕದ ಕೊರಗು ನೀಗುವುದೆ ಎಂಬುದೇ ಈಗ ಉದ್ಭವವಾಗಿರುವ ಪ್ರಶ್ನೆಗಳು.
ಅನುಚಾನವಾಗಿ ನಡೆದುಕೊಂಡು ಹೊರಟಿರುವ ಮಾರ್ಗ ನಿರ್ಮಾಣ, ಸೌಕರ್ಯ ಹಂಚಿಕೆಯಲ್ಲಿನ ಹೇರಾಫೇರಿ, ಅಸಮಾನತೆಯ ನೀತಿಯನ್ನು ಕೈಬಿಟ್ಟು ಸರ್ವರಿಗೂ ಸಮಪಾಲು ಧೋರಣೆಯಲ್ಲಿ ಹಾಗೂ ಅಗತ್ಯಕ್ಕೆ ತಕ್ಕಂತೆ, ವೈಜ್ಞಾನಿಕವಾಗಿ ರೇಲ್ವೆ ಸೌಕರ್ಯಗಳು, ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆಗಳು ದೇಶಾದ್ಯಂತ ಹಂಚಿಕೆ ಯಾಗುವಂತಹ ವ್ಯವಸ್ಥೆ ರೂಪುಗೊಳ್ಳಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.
ಅಲ್ಪಾವಧಿ ರೇಲ್ವೆ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ರಾಜ್ಯದ, ಅದರಲ್ಲೂ ಹೈ- ಕ ಭಾಗದಲ್ಲಿ ಹಲವಾರು ರೈಲು ಯೋಜನೆಗಳಿಗೆ ಕಾಯಕಲ್ಪ ನೀಡಿದರಲ್ಲದೆ, ಅನೇಕ ಹೊಸ ಯೋಜನೆಗಳಿಗೆ ಚಾಲನೆ ನೀಡಿದ ಕೀರ್ತಿಗೆ ಭಾಜನರು. ಈ ಎಲ್ಲಾ ಯೋಜನೆಗಳಿಗೆ ವೇಗ ತುಂಬುವ ಹೊಣೆಗಾರಿಗೆ ಗೌಡರ ಹೇಗಲೇರಿದೆ.
ಯುಪಿಎ ಸರ್ಕಾರದ ಕೊನೆಯ ಅವಧಿಯಲ್ಲಿ ಕನ್ನಡಿಗ ಖರ್ಗೆ ರೇಲ್ವೆ ಸಚಿವರಾಗಿ ಹಲವು ಕೆಲಸ ಕಾರ್ಯಗಳನ್ನು ಮಾಡಿದ್ದರು. ಎನ್‌ಡಿಎ ಸರ್ಕಾರದ ಆರಂಭದಲ್ಲೇ ಸದಾನಂದಗೌಡರು ರೈಲು ಹತ್ತಿದ್ದರಿಂದ ಇನ್ನೂ ಹೆಚ್ಚಿನ ಸೌಕರ್ಯ ಕರ್ನಾಟಕದ, ದಕ್ಷಿಣ ಭಾರತ ರಾಜ್ಯಗಳ ಜನತೆ ನಿರೀಕ್ಷಿಸುತ್ತಿದ್ದಾರೆ.

-ಶೇಷಮೂರ್ತಿ ಅವಧಾನಿ
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement