ಕಾಶ್ಮೀರ ರಾಜಕೀಯದಲ್ಲಿ ಮೋದಿ ಕಂಪನ
"ಕಾಶ್ಮೀರದ ನನ್ನ ಅಕ್ಕ ತಂಗಿಯರೇ, ಇಷ್ಟು ವರ್ಷಗಳಿಂದ ನಿಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.
"ಕಾಶ್ಮೀರದ ನನ್ನ ಅಕ್ಕ ತಂಗಿಯರೇ, ಇಷ್ಟು ವರ್ಷಗಳಿಂದ ನಿಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನೀವು ಹೊರ ರಾಜ್ಯದವರನ್ನು ಮದುವೆಯಾದರೆ, ನಿಮಗೆ ಇಲ್ಲಿ ಯಾವ ಸೌಲಭ್ಯವೂ ಸಿಗುವುದಿಲ್ಲ, ನಿಮಗಷ್ಟೇ ಯಾಕೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಹೋದರಿಗೂ ಯಾವ ಸೌಲಭ್ಯವೂ ದೊರೆಯುವುದಿಲ್ಲ. ಅವರೂ ಅಷ್ಟೇ, ಕಾಶ್ಮೀರದ ಪೌರತ್ವವನ್ನೇ ಕಳೆದುಕೊಳ್ಳುತ್ತಾರೆ. ನಿಮಗೇ ದ್ರೋಹ ಎಸಗುವಂಥ ನಿಮ್ಮದೇ 370ನೇ ವಿಧಿ ನಿಮಗೆ ಬೇಕಾ?"
ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಆಗಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜಮ್ಮುವಿನಲ್ಲಿ ಮಾಡಿದ ಭಾಷಣದ ತುಣುಕು ಇದು. 370ನೇ ವಿಧಿ ಕುರಿತಂತೆ ರಾಷ್ಟ್ರೀಯ ಚರ್ಚೆ ನಡೆಯಲಿ ಎನ್ನುವುದು ಮೋದಿ ಅವರ ಭಾಷಣದ ಆಶಯವಾಗಿತ್ತು. ಅದರಂತೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಲೇ, ಪ್ರಧಾನಿ ಕಾರ್ಯಾಲಯದ ಸಚಿವ, ಜಿತೇಂದ್ರ ಪ್ರಸಾದ್, 370ನೇ ವಿಧಿ ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಪಡಿಸುವ ಕುರಿತಂತೆ ಸಂಬಂಧಪಟ್ಟವರೊಂದಿಗೆ ಚರ್ಚೆ ಆರಂಭವಾಗಿದೆ ಎನ್ನುವ ಹೇಳಿಕೆ ಕೊಟ್ಟುಬಿಟ್ಟಿದ್ದಾರೆ. ಹೊಸ ಸರ್ಕಾರದ ಸಚಿವರೊಬ್ಬರಿಂದ ಈ ಹೇಳಿಕೆ ಬಂದಿದ್ದೇ ತಡ, ವಿವಿಧ ರಾಜಕೀಯ ಪಕ್ಷಗಳ ನಾಯಕರು ಪುಂಖಾನುಪುಂಖವಾಗಿ ಅದನ್ನು ವಿರೋಧಿಸಿ ವೀರಾವೇಷದ ಮಾತುಗಳನ್ನು ಆಡಲಾರಂಭಿಸಿದ್ದಾರೆ.
'ಒಂದು ವೇಳೆ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದರೆ, ಜಮ್ಮು ಕಾಶ್ಮೀರ ಭಾರತದಲ್ಲಿ ಉಳಿಯುವುದಿಲ್ಲ' ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, 'ಕೇವಲ ಕಾಶ್ಮೀರ ಅಷ್ಟೆ ಅಲ್ಲ, ಇಡೀ ಭಾರತವೇ ಹೊತ್ತಿ ಉರಿಯಲಿದೆ' ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, '370ನೇ ವಿಧಿ ರದ್ದು ಪಡಿಸಲು ಸಾಧ್ಯವೇ ಇಲ್ಲ. ಒಂದು ವೇಳೆ ಇಂಥ ಪ್ರಯತ್ನಕ್ಕೆ ಕೈಹಾಕಿದರೆ, ದೇಶದ ಜಾತ್ಯತೀತ ವ್ಯವಸ್ಥೆಗೇ ಕೊಡಲಿ ಪೆಟ್ಟು ಬಿದ್ದಂತೆ' ಎಂದು ಎಚ್ಚರಿಸಿದ್ದಾರೆ.
ಯಾರು ಏನೇ ಹೇಳಲಿ, ನರೇಂದ್ರ ಮೋದಿ ತಮ್ಮ ದಾಳ ಬಿಟ್ಟಾಗಿದೆ. ತಮ್ಮ ಚುನಾವಣಾ ಪೂರ್ವ ಜಮ್ಮು ಭಾಷಣದಲ್ಲಿ ಅವರು, ಒಬ್ಬ ರಾಷ್ಟ್ರ ನಾಯಕರಾಗಿ ಮೊಟ್ಟ ಮೊದಲ ಬಾರಿಗೆ ಭಯೋತ್ಪಾದನೆಯ ಹೆಸರೆತ್ತದೇ ತಮ್ಮ ಭಾಷಣ ಮುಗಿಸಿದ್ದರು. ಎಲ್ಲಿಯೂ ಪಾಕಿಸ್ತಾನವನ್ನು ತೆಗಳಲಿಲ್ಲ. ಅವರು ಅಂದು ನೇರವಾಗಿ ಪ್ರಸ್ತಾಪಿಸಿದ್ದು, ಕಾಶ್ಮೀರದ ಸಾಮಾನ್ಯ ಜನತೆಯ ಕಷ್ಟ ಸುಖಗಳನ್ನು. ನಿಮ್ಮ ಬದುಕು ಹಸನಾಗಬೇಕಿದೆ ಎಂದರು. ನಿಮ್ಮ ವಿರುದ್ಧ ಸ್ಥಳೀಯ ರಾಜಕೀಯ ಮುಖಂಡರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದರು. ಆಗಲೇ ಅವರು, ಅಲ್ಲಿನ ಮಹಿಳೆಯರನ್ನು ಉದ್ದೇಶಿಸಿ 370ನೇ ವಿಧಿಯಿಂದ ನಿಮಗೆ ಅನ್ಯಾಯವಾಗುತ್ತಿದೆ ಎಂಬ ಮಾತು ಆಡಿದ್ದರು. ಸಂವಿಧಾನದ 370ನೇ ವಿಧಿಯ ಮೇಲೆ ಹೊದಿಸಲಾಗಿದ್ದ ಜಾತ್ಯತೀತತೆಯ ಹೊದಿಕೆಯನ್ನು ಪಕ್ಕಕ್ಕೆ ಸರಿಸಿ, ನೇರವಾಗಿ ಕಾಶ್ಮೀರದ ಜನತೆಯೊಂದಿಗೇ ಮಾತುಕತೆಗೆ ಇಳಿದಿದ್ದರು ನರೇಂದ್ರ ಮೋದಿ. ಭಾರತದ ರಾಷ್ಟ್ರೀಯ ನಾಯಕರೊಬ್ಬರು ಕಾಶ್ಮೀರದ ಬಗ್ಗೆ ಮಾತುಕತೆ ನಡೆಸುತ್ತಾರೆ ಎಂದರೆ ಅದು, ಪ್ರತ್ಯೇಕತಾವಾದಿಗಳೊಂದಿಗೆ, ಪಾಕಿಸ್ತಾನದೊಂದಿಗೆ ಅಥವಾ ಕಾಶ್ಮೀರದ ರಾಜಕೀಯ ನೇತಾರರೊಂದಿಗೆ ಮಾತ್ರ. ಈ 60 ವರ್ಷಗಳಲ್ಲಿ ರಾಷ್ಟ್ರ ನಾಯಕರು ನಡೆದುಕೊಂಡಿದ್ದೇ ಹೀಗೆ. ಆದರೆ, ನರೇಂದ್ರ ಮೋದಿ, ಇವೆಲ್ಲವುಗಳ ನಡುವೆಯೂ ತಮಗೆ ಕಾಶ್ಮೀರ ಜನತೆಯ ಅಭ್ಯುದಯ ಮುಖ್ಯ ಎಂಬ ಸಂದೇಶವನ್ನು ಅಲ್ಲಿನ ಜನತೆಗೆ ತಲುಪಿಸಿದ್ದರು. ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದಿದ್ದು ಸ್ಪಷ್ಟ. ಅಲ್ಲಿನ ಆರು ಸ್ಥಾನಗಳ ಪೈಕಿ, ಬಿಜೆಪಿ 3 ಸ್ಥಾನಗಳನ್ನು ಪಡೆದಿತ್ತು. ಪ್ರಮುಖ ವಿರೋಧ ಪಕ್ಷ ಪಿಡಿಪಿ 3 ಸ್ಥಾನಗಳನ್ನು ಪಡೆದಿತ್ತು. ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಧೂಳೀಪಟವಾಗಿತ್ತು. ಇದಿಷ್ಟೇ ಆಗಿದ್ದರೆ, ಬಿಜೆಪಿ ಬೀಗುವ ಹಾಗೇನೂ ಇರಲಿಲ್ಲ. ಆದರೆ, ಪ್ರತಿಶತ 32.4 ಮತಗಳನ್ನು ಪಡೆದು, ಜಮ್ಮು ಕಾಶ್ಮೀರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಬಿಜೆಪಿ.
ಇದೇ ವರ್ಷದ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹೆಗ್ಗಳಿಕೆಯನ್ನು ಮುಂದಿನ ವಿಧಾನಸಭಾ ಚುನಾವಣೆಗೂ ವಿಸ್ತರಿಸಬೇಕೆಂಬ ಮಹದಾಸೆ ಮೋದಿಯವರದ್ದು. ಹಾಗಾಗಿಯೇ, ತಾವು ಅಧಿಕಾರಕ್ಕೆ ಬರುತ್ತಲೇ 370ನೇ ವಿಧಿ ರದ್ಧತಿ ಕುರಿತಂತೆ ತಮ್ಮ ಸಚಿವರಿಂದ ಹೇಳಿಕೆ ಕೊಡಿಸಿದರು. ಈ ಕುರಿತು ಈಗಿನಿಂದಲೇ ಚರ್ಚೆ ನಡೆಯುವಂತೆ ನೋಡಿಕೊಂಡರು. ಮೋದಿ ಅವರ ಉದ್ದೇಶ ಸ್ಪಷ್ಟ. 370ನೇ ವಿಧಿ ರದ್ದತಿ ಅಷ್ಟು ಸುಲಭವಲ್ಲ ಅನ್ನೋದು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಹೀಗಾಗಿ ಮೋದಿ ಈಗ ರಾಜಕೀಯ ಪಕ್ಷಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಜಮ್ಮು ಕಾಶ್ಮೀರದ ಜನಸಾಮಾನ್ಯರೊಡನೆ ನೇರ ಸಂವಹನ ಸಾಧಿಸಲು ಹೊರಟಿದ್ದಾರೆ. ಸಂವಿಧಾನದ 370ನೇ ವಿಧಿ, ಹೇಗೆ ಅಲ್ಲಿನ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ ಎನ್ನುವುದೇ ಅವರ ಸದ್ಯದ ರಾಜಕೀಯ ಅಸ್ತ್ರ. ಈ ಅಸ್ತ್ರದ ಒಂದು ಭಾಗವಾಗಿ ಅವರು ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ನಿಜ. ಜಮ್ಮು ಕಾಶ್ಮೀರದ ಸಂವಿಧಾನದಂತೆ, ಹೊರಗಿನವರನ್ನು ಮದುವೆಯಾದರೆ, ಅಲ್ಲಿನ ಯುವತಿಯರು ನಾಗರಿಕತ್ವ ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಸತ್ಯವಲ್ಲ ಎಂದು ಮೋದಿಗೂ ಗೊತ್ತಿದೆ. ಆದರೆ, ಅವರು ಈ ಮೂಲಕ ಹೇಳಹೊರಟಿರುವುದು ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಹೇಗೆ ದುರ್ಬಳಕೆಯಾಗುತ್ತಿದೆ ಮತ್ತು ಅಲ್ಲಿನ ಜನಸಾಮಾನ್ಯರು ಹೇಗೆ ಇದರ ಬಲಿಪಶುಗಳಾಗುತ್ತಿದ್ದಾರೆ ಎಂಬುದನ್ನು. ಇದಕ್ಕೆ ಹಿನ್ನೆಲೆಯೂ ಇದೆ. ಎರಡು ದಶಕಗಳ ಹಿಂದೆಯೇ, ಜಮ್ಮು ಕಾಶ್ಮೀರ ಹೈಕೋರ್ಟ್ ಒಂದು ಐತಿಹಾಸಿಕ ತೀರ್ಪು ನೀಡಿತ್ತು. ಕಾಶ್ಮೀರಿ ಯುವತಿಯರು ಕಾಶ್ಮೀರೇತರ ಯುವಕರನ್ನು ಮದುವೆಯಾದರೆ, ಅವರು ಕಾಶ್ಮೀರಿ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂಬುದೇ ಆ ತೀರ್ಪು. ಆದರೆ, ಈ ತೀರ್ಪನ್ನು ಒಪ್ಪಿಕೊಳ್ಳಲು ಅಲ್ಲಿನ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನಸ್ಸಿರಲಿಲ್ಲ. ಹೀಗಾಗಿ, ತೀರಾ ಇತ್ತೀಚೆಗೆ 2004ರಲ್ಲಿ, ಆಗಿನ ಪಿಡಿಪಿ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಿತು. ಕಾಶ್ಮೀರಿ ಯುವತಿಯರು, ಹೊರಗಿನವರನ್ನು ಮದುವೆಯಾದರೆ, ಅವರ ಪೌರತ್ವವನ್ನು ಕಸಿದುಕೊಳ್ಳುವುದು ಈ ತಿದ್ದುಪಡಿಯ ಉದ್ದೇಶ. ಅಂದರೆ, ಹೈಕೋರ್ಟ್ ತೀರ್ಪು, ಅಲ್ಲಿನ ಸಂವಿಧಾನ ಎಲ್ಲವನ್ನೂ ಬದಿಗಿಟ್ಟು ಈ ಮಹಿಳಾ ವಿರೋಧಿ ತಿದ್ದುಪಡಿ ತರಲು ಅಲ್ಲಿನ ಸರ್ಕಾರ ಮುಂದಾಗಿದ್ದದ್ದು, ಇದೇ 320ನೇ ವಿಧಿಯನ್ವಯ ಅದಕ್ಕೆ ಸಿಕ್ಕಿರುವ ವಿಶೇಷ ಅಧಿಕಾರವನ್ನು ಬಳಸಿ. ವಿಚಿತ್ರ ಅಂದರೆ, ಆಗಿನ ವಿರೋಧ ಪಕ್ಷ ಹಾಗೂ ಈಗಿನ ಆಡಳಿತ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಸಹ ಈ ತಿದ್ದುಪಡಿಯನ್ನು ಬೆಂಬಲಿಸಿತ್ತು. ಪರಿಣಾಮ ಕೆಳಮನೆಯಲ್ಲಿ ವಿಧೇಯಕ ಅಂಗೀಕಾರ ಪಡೆಯಿತು. ಆದರೆ, ಮೇಲ್ಮನೆಯಲ್ಲಿ ಈ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸಿತು. ಪರಿಣಾಮ ಆ ಸಂದರ್ಭದಲ್ಲಿ ಸದನದಲ್ಲಿ ಗದ್ದಲ ಏರ್ಪಟ್ಟಿದ್ದರಿಂದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಇದನ್ನು ಮತ್ತೆ ಮೇಲ್ಮನೆಯಲ್ಲಿ ಮಂಡಿಸಲು ಅಲ್ಲಿನ ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಜಮ್ಮು ಕಾಶ್ಮೀರದ ಪ್ರಾದೇಶಿಕ ಪಕ್ಷಗಳ ಈ ದಮನಕಾರಿ ನೀತಿಯೇ ಬಿಜೆಪಿ ಪ್ರಚಾರದ ಬಂಡವಾಳ. ಮುಂಬರುವ ವಿಧಾನಸಭಾ ಚುನಾವಣೆಗೆ ಇವುಗಳೇ ಮೋದಿಗೆ ಪ್ರಬಲ ಅಸ್ತ್ರ. ಮುಂಬರುವ ಲೋಕಸಭಾ ಚುನಾವಣೆಗೆ ಮೋದಿ ಲೆಕ್ಕಾಚಾರ ಹೀಗಿದೆ. ಪಿಡಿಪಿ ಗೆದ್ದಿರುವ ಮೂರು ಲೋಕಸಭಾ ಕ್ಷೇತ್ರಗಳು ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳು .ಇಲ್ಲಿ ಒಟ್ಟು 46 ವಿಧಾನಸಭೆ ಕ್ಷೇತ್ರಗಳಿವೆ. ಬಿಜೆಪಿ ಗೆದ್ದಿರುವ ಜಮ್ಮುವಿನ 20 ಸೇರಿದಂತೆ ಹಿಂದು ಮತದಾರರು ಬಹುಸಂಖ್ಯಾತರಾಗಿರುವ ಕ್ಷೇತ್ರಗಳು 41. ತಾನು ಗೆದ್ದಿರುವ ಮೂರು ಲೋಕಸಭಾ ಸ್ಥಾನಗಳ ವ್ಯಾಪ್ತಿಯಲ್ಲಿ ಕನಿಷ್ಠ 35 ಸ್ಥಾನಗಳನ್ನು ಗಳಿಸುವುದು ಮೋದಿ ಉದ್ದೇಶ. ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಮತ ವಿಭಜನೆಯಾಗಿ, ಯಾವೊಂದು ಪಕ್ಷವೂ ಬಹುಮತಕ್ಕೆ ಹತ್ತಿರ ಕೂಡ ಬರಲಾರವು. ಅಷ್ಟಾದರೆ, ಮುಂದಿನ ಜಮ್ಮು ಕಾಶ್ಮೀರ ಸರ್ಕಾರದಲ್ಲಿ ತಾನೂ ಭಾಗಿಯಾಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಇದರ ಜತೆಗೆ ಕಾಶ್ಮೀರ ಕಣಿವೆಯಲ್ಲಿ ಕೆಲ ಸೀಟುಗಳನ್ನಾದರೂ ಗೆಲ್ಲಬೇಕು ಎಂಬುದು ಮೋದಿ ಗುರಿ. ಇದಕ್ಕಾಗೇ, ಅವರು ಇದೀಗ ಕಣಿವೆಯ ಜನಸಾಮಾನ್ಯರ ಬದುಕು ಬವಣೆಗಳತ್ತ ಹೆಚ್ಚು ಒತ್ತು ನೀಡುತ್ತಿದ್ದಾರೆ. ತಮ್ಮ ವೋಟ್ ಬ್ಯಾಂಕ್ಗೆ ಮೋದಿ ಲಗ್ಗೆ ಹಾಕುತ್ತಿರುವುದನ್ನು ಕಂಡು ಎನ್ಸಿ ಮತ್ತು ಪಿಡಿಪಿ ಚಡಪಡಿಸತೊಡಗಿವೆ. ಈ ಚಡಪಡಿಕೆಯಿಂದಲೇ ಈ ಎರಡೂ ಪಕ್ಷಗಳು, 370ನೇ ವಿಧಿ ರದ್ದಾದರೆ, ರಕ್ತಪಾತವಾದೀತು ಎಂಬಂತಹ ಹೇಳಿಕೆಗಳನ್ನು ಕೊಡುತ್ತಿವೆ. ಒಂದಾನೊಂದು ಕಾಲದಲ್ಲಿ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವುದನ್ನು ಕನಸಿನಲ್ಲಿಯೂ ಯೋಚಿಸದ ಇಲ್ಲಿನ ಪಕ್ಷಗಳು ಈಗ ಆ ಪಕ್ಷದ ನಾಗಾಲೋಟವನ್ನು ತಡೆಗಟ್ಟಲು ಇನ್ನಿಲ್ಲದ ಸಾಹಸ ಮಾಡಬೇಕಿದೆ. ಸಂವಿಧಾನದ 370ನೇ ವಿಧಿ ರದ್ಧತಿಗಿಂತಲೂ, ಆ ವಿಧಿಯ ದುರ್ಬಳಕೆಯಿಂದ ಅಲ್ಲಿನ ಜನಸಾಮಾನ್ಯರು ಪಡುತ್ತಿರುವ ಬವಣೆಯನ್ನೇ ಬಂಡವಾಳವಾಗಿಸಲು ನರೇಂದ್ರ ಮೋದಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. 370ನೇ ವಿಧಿಯ ಬಗ್ಗೆ ಚರ್ಚೆ ನಡೆಸಿ ಎಂದು ನರೇಂದ್ರ ಮೋದಿ ಕರೆ ನೀಡಿದ್ದರೆ, ಅವರ ಉದ್ದೇಶ, ಕಾಶ್ಮೀರ ವಿಧಾನಸಭೆಯಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸುವುದೇ ಆಗಿದೆ.
-ಕೆ.ವಿ.ಎನ್. ಸ್ವಾಮಿ
ಕಾರ್ಯನಿರ್ವಾಹಕ ಸಂಪಾದಕ
ಸುವರ್ಣ ನ್ಯೂಸ್
kvnswamy@suvarnanews.in