ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರಾಜಕಾರಣಿಗಳೆಂಬ 'ವಿಚಿತ್ರ ವರ್ಗ' ಸೇರುವುದು ಸುಲಭದ ಮಾತಲ್ಲ

Srinivasa Murthy VN
Updated On : 3 Jun 2014, 11:46 am

ರಾಜಕಾರಣಿಗಳನ್ನು ಬಯ್ಯುವುದರಲ್ಲಿ, ಅನಿಷ್ಟಕ್ಕೆಲ್ಲ ಅವರೇ ಕಾರಣ ಅಂತ ದೂರುವುದರಲ್ಲಿ ನಾವು ಯಾವತ್ತೂ ಹಿಂದೆ ಬಿದ್ದವರಲ್ಲ. ಆದರೆ ಚುನಾವಣೆಯ ರಣಕಣವೆಲ್ಲ ಶಾಂತವಾಗಿರುವ ಈ ಹೊತ್ತಿನಲ್ಲಿ ಅವರ ನೇತ್ಯಾತ್ಮಕತೆಯಲ್ಲೂ ಕಂಡುಬರಬಹುದಾದ ಇತ್ಯಾತ್ಮಕ ಆಯಾಮಗಳು ತಮಾಷೆ, ಸೋಜಿಗದ ರೀತಿಯಲ್ಲಿ ಸೆಳೆಯುತ್ತಿರುವುದನ್ನು ತುಸು ಭಿನ್ನ ನೆಲೆಯಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ಉದ್ಯಮದಲ್ಲಿ, ಪರೀಕ್ಷೆಯಲ್ಲಿ ಉದ್ಯೋಗದಲ್ಲಿ ವಿಫಲರಾದಾಗ ಹಲವರು ಖಿನ್ನತೆಗೆ, ಆತ್ಮಹತ್ಯೆಯಂಥ ಘಾತಕ ನಿರ್ಧಾರಗಳಿಗೆ ಶರಣಾಗುತ್ತಾರೆ. ಆದರೆ ಮೊನ್ನೆ ಚುನಾವಣೆಯಲ್ಲಿ ಸೋತ ಯಾರಾದರೂ ರಾಜಕಾರಣಿ ಈ ಮಾರ್ಗದಲ್ಲಿ ಸಾಗಿದ ವಿದ್ಯಮಾನವೇನಾದರೂ ನಿಮಗೆ ಗೊತ್ತೇ? ಹಾಗಾಗಿಯೇ ರಾಜಕಾರಣಿಗಳನ್ನು ನಾನು ವಿಶಿಷ್ಟ ಜಾತಿಯವರೆಂದು ಗುರುತಿಸುತ್ತೇನೆ.
ಈ ಜಾತಿಗೆ ಸೇರಿದವರನ್ನು ಗುರ್ತಿಸೋದು ಕಷ್ಟದ ಕೆಲಸವಲ್ಲ. ಅಪರೂಪದ ಒಳ್ಳೆಯ ರಾಜಕಾರಣಿಗಳ ಹೊರತಾಗಿ, ಪಕ್ಷಾತೀತವಾಗಿ, ಜಾತ್ಯತೀತವಾಗಿ ಇವರಲ್ಲಿ ಹೆಚ್ಚಿನವರ ಗುಣ-ಸ್ವಭಾವಗಳು, ನಡೆ-ನುಡಿಗಳು ಲಕ್ಷ-ಲಕ್ಷಣಗಳು, ಯೋಚನೆ-ಯೋಜನೆಗಳು ಇತರರಿಗಿಂತ ಭಿನ್ನವಾಗಿ ವಿಚಿತ್ರವಾಗಿದ್ದರೂ, ಅವರೊಳಗೆ ಸಮಾನವಾಗಿರುತ್ತದೆ. ಮಾನಸಿಕವಾಗಿ ಈ ಜಾತಿಯವರು ತುಂಬಾ ಗಟ್ಟಿ ಮನಸ್ಸಿನವರು. ಯಾವುದೇ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವವರಲ್ಲ. "ಆನೆಯ ಕುಂಡೆಗೆ ಇರುವೆ ಕಚ್ಚಿತೂಂತ, ಇರುವೆಯ ಕುಂಡೆಗೆ ಆನೆ ಕಚ್ಚೋಕಾಗುತ್ತೇನ್ರಿ"- ಎಂಬುದು ಅವರ ನಿಲುವು. ಇವರದ್ದು ಕೊಂಚ ದಪ್ಪ ಚರ್ಮ. ಆದುದರಿಂದಲೇ ಆರೋಪ-ಆಪಾದನೆಗಳು, ನಿಂದನೆ-ಅವಹೇಳನಗಳು ಇವರ ಮನಸ್ಸಿಗೆ ನಾಟಲಾರವು. ಅಪ್ರಾಮಾಣಿಕ ಕೆಲಸಗಳನ್ನು ಮಾಡಿದ್ದರೂ, ಮಾಡುತ್ತಲೇ ಇದ್ದರೂ ಕ್ರಮೇಣ ಅವೆಲ್ಲವೂ ಇವರಲ್ಲಿ ಒಂದು ಪರಿಪಾಠವಾಗಿ ಪರಿವರ್ತನೆಗೊಂಡು, ನಿರಪರಾಧಿಗಳಂತೆ, ನಿರ್ಭಯವಾಗಿ, ನಿರಾತಂಕವಾಗಿ ಇದ್ದು ಬಿಡುತ್ತಾರೆ. ಟೀಕೆ, ಆರೋಪಗಳನ್ನು  ಸಹಿಸಿಕೊಂಡು, ಎಲ್ಲವನ್ನೂ ಮಾಡಿದ್ದರೂ, ಏನೂ ಮಾಡದವರಂತೆ ಬಾಳೋದು ಇವರಿಗೆ ಮಾತ್ರ ಸಾಧ್ಯ.
ಸೈದ್ಧಾಂತಿಕವಾಗಿ ಇವರು ಯಾವುದೇ ಒಂದು ತತ್ವಾಧಾರಿತ ಸಿದ್ಧಾಂತಕ್ಕೆ ಜೋತು ಬಿದ್ದವರಲ್ಲ. ಇವರುಗಳಿಗೆ ಇಂದು ಹೀಗೆ ಹೇಳಿದರೆ ಸರಿ; ನಾಳೆ ಹಾಗೆ ಹೇಳಿದರೆ ಅದೂ ಸರಿ. ನಾಡಿದ್ದು ಹಾಗೇನೂ ತಾವು ಹೇಳಿಲ್ಲವೆಂದರೆ ಅದೂ ಸರೀನೇ. ತಮ್ಮನ್ನು ಬೆಳೆಸಿ, ಹರಸಿ ಎಲ್ಲಾ ಸ್ಥಾನಮಾನಗಳನ್ನು ಗಳಿಸಿಕೊಟ್ಟ ತಮ್ಮ ಪಕ್ಷವನ್ನೇ ಕ್ಷಣ ಮಾತ್ರದಲ್ಲಿ ತ್ಯಜಿಸಬಲ್ಲರು. ನಾವಾದರೆ ಉದ್ಯೋಗದ ಜಾಗ ಬದಲಿಸುವುದಕ್ಕೆ ಎಷ್ಟೆಲ್ಲ ಕಂಗಾಲಾಗಿ ವಿಚಾರ ಮಾಡಿಕೊಂಡಿರುತ್ತೇವೆ. ಪಕ್ಷಾಂತರ ಇವರ ದೃಷ್ಟಿಯಲ್ಲಿ ಅಪರಾಧವಲ್ಲ ಈ ಜಾತಿಯವರ ಮೂಲ ಸಿದ್ಧಾಂತವೆಂದರೆ, ಹೇಗಾದರೂ ಮಾಡಿ ಒಮ್ಮೆ ಅಧಿಕಾರವನ್ನು ಗಳಿಸಿಕೊಳ್ಳೋದು; ಮುಂದೆ ಗಳಿಸಿಕೊಂಡ ಅಧಿಕಾರವನ್ನು ಏನಾದರೂ ಮಾಡಿ ಉಳಿಸಿಕೊಳ್ಳೋದು. ಹಾಗೆಯೇ ಉಳಿಸಿಕೊಂಡ ಅಧಿಕಾರವನ್ನು ಮೆತ್ತಗೆ ಬೆಳೆಸಿಕೊಳ್ಳೋದು. ಮೊದಲು ಒಬ್ಬ  corporate ಆದರೂ ಸಾಕೆನ್ನುವ ಹಂಬಲ. ಕ್ರಮೇಣ ಒಬ್ಬ ಎಂಎಲ್‌ಎ ಮತ್ತೆ ಮಂತ್ರಿಯಾಗಿ ಮುಂದೆ ಸಾಧ್ಯವಿದ್ದಲ್ಲಿ ಮುಖ್ಯಮಂತ್ರಿಯಾಗಿಯೇ ಪ್ರಧಾನ ಮಂತ್ರಿಯಾಗಿಯೋ, ಕೊನೆಯ ಉಸಿರು ಇರುವ ತನಕ ಅಧಿಕಾರದಲ್ಲಿದ್ದುಕೊಂಡೇ ಜನಸೇವೆ ಮಾಡಬೇಕೆಂಬುದು ಇವರ ಸಂಕಲ್ಪ. ಇವರಿಗೆ ನಿವೃತ್ತಿ ಎಂಬುದಿಲ್ಲ; ತೃಪ್ತಿಯಂತೂ ಇಲ್ಲವೇ ಇಲ್ಲ.
ರಾಜಕೀಯದಲ್ಲಿ ಉದ್ಭವಮೂರ್ತಿಗಳೆಂಬುವವರು ಯಾರೂ ಇಲ್ಲ. ಎಲ್ಲರೂ ತಮ್ಮ ಹಿತೈಷಿಗಳ, ಬೆಂಬಲಿಗರ, ಇತರೇ ರಾಜಕಾರಣಿಗಳ ಸಹಾಯ/ಕೃಪಾಕಟಾಕ್ಷವನ್ನು ಪಡೆದೇ ಮೇಲಕ್ಕೆ ಏರಿರುತ್ತಾರೆ. ಆದರೆ ಒಮ್ಮೆ ಏರಿದ ಬಳಿಕ, ಒಂದು ಸ್ಥಾನಮಾನವನ್ನು ಗಿಟ್ಟಿಸಿದ ಬಳಿಕ, ತಮಗೆ ಅಲ್ಲಿಯವರೆಗೆ ಏರಲು ಸಹಾಯವಾದವರನ್ನು ತಕ್ಷಣ ಕೈ ಬಿಡಬೇಕಾದುದು ರಾಜಕಾರಣದ ಸಿದ್ಧಾಂತ. ಏಕೆಂದರೆ ತನಗೆ ಏರಲು ನೆರವಾದ ವ್ಯಕ್ತಿ ತನಗಿಂತ ಮೇಲೆ ಏರಿಬಿಟ್ಟರೆ, ತಮಗೆಲ್ಲಿದೆ ಸ್ಥಾನಮಾನವೆಂಬುದು ಇವರ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಇವರಿಗಿಂತ ಹೆಚ್ಚು ಬುದ್ಧಿವಂತರಿಗೆ, ಶಕ್ತಿ-ಸಾಮರ್ಥ್ಯವುಳ್ಳವರಿಗೆ, ಅರ್ಹತೆ-ಯೋಗ್ಯತೆ ಉಳ್ಳವರಿಗೆ ಪ್ರಾಮಾಣಿಕರಿಗೆ ಇವರ ಆಶ್ರಯವಿಲ್ಲ; ಸಹಕಾರವಿಲ್ಲ. ಕಾರಣ ಇಂತಹವರು ಬೆಳೆದು ಬಿಟ್ಟರೆ ತಮ್ಮ ಕುರ್ಚಿಗೆ ಎಲ್ಲಿ ತೊಂದರೆ ಆದೀತೋ ಎಂಬುದೇ ಇವರ ಭಯ. ಆದುದರಿಂದಲೇ ತಮ್ಮ ಜಾತಿಗೆ ಸೇರಿದ ನಾಯಕನನ್ನು ಬೆಳೆಯಬಿಡಲಾರರು ಹಾಗೂ ತಮಗಿಂತ ಹೆಚ್ಚು ಯೋಗ್ಯತೆ ಉಳ್ಳವರನ್ನು ಸಹಿಸಲಾರರು. ಏನಿದ್ದರೂ ದಡ್ಡರನ್ನೇ ತಮಗೆ ಜೈ ಹೇಳುವವರನ್ನೇ, ಹೊಗಳು ಭಟ್ಟರನ್ನೇ ಇವರು ಇಷ್ಟಪಡುತ್ತಾರೆ. ತಮ್ಮದೇ ಪಕ್ಷದ ರಾಜಕೀಯ ಸಮಾವೇಶಗಳಲ್ಲಿ ಇಂತಹ ನಾಯಕರೆಲ್ಲ ಸೇರಿ ಒಬ್ಬರು ಇನ್ನೊಬ್ಬರ ಕೈ ಹಿಡಿದು ಮೇಲಕ್ಕೆತ್ತಿ "ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ಜನತೆಗೆ ಸಾರಿದರೂ" ಇವರೆಲ್ಲಾ ಒಂದೇ ಅಲ್ಲ.
ಅಧಿಕಾರವಿದ್ದಾಗ ಸಂಪಾದನೆಯ ಮಾರ್ಗ. ಅದರಲ್ಲೇ ವ್ಯಸ್ತರಾಗಿರಬೇಕಾಗುತ್ತದೆ. ಅಧಿಕಾರವಿಲ್ಲದಾಗ ಇವರನ್ನು ಕೇಳುವವರು ಯಾರೂ ಇಲ್ಲವೆಂಬುದು ಇವರಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿಯೇ ಹೊಸ ಹೊಸ ವಿವಾದಗಳನ್ನು ಸೃಷ್ಟಿಸಿ, ಸ್ಫೋಟಕ ಸುದ್ದಿಗೆ ಕಾರಣರಾಗುತ್ತಾರೆ. ಇತರೆಲ್ಲ ವೃತ್ತಿಯವರಿಗಿಂತ ಫುಡಾರಿಯ ದ್ವಂದ್ವವೇ ಬೇರೆ. ಸಮಾಜದಲ್ಲಿ ಅನಕ್ಷರತೆ, ಬಡತನ ನಿರ್ಮೂಲವಾಗಿ ಎಲ್ಲರೂ ನೆಮ್ಮದಿಯಿಂದ ಬಾಳುವಂತಾದರೆ,
ವಿವಿಧ ಮತೀಯರು ಸಾಮರಸ್ಯದಿಂದ ಬಾಳುವಂತಾದರೆ, ಸಾಮಾಜಿಕ ಸಮಸ್ಯೆಗಳೇ ಇಲ್ಲವಾದರೆ, ತಮಗೇನು ಕೆಲಸವೆಂಬುದು ಇವರ ಯೋಚನಾ ಧಾಟಿ. ಜನರು ಮುಖ್ಯವಾಗಿ ಹಳ್ಳಿ ಜನ ಓದಿ ಬುದ್ಧಿವಂತರಾಗಿಬಿಟ್ಟರೆ, ಶ್ರೀಮಂತರಾಗಿಬಿಟ್ಟರೆ, ತಮ್ಮ ಜೋಳಿಗೆಗೆ ಬೀಳಲಾರರು ಎಂಬ ಭಯ ಇವರದು. ಈ ಕಾರಣದಿಂದಲೇ ಬಡತನ, ಅನಾರೋಗ್ಯ, ನಿರುದ್ಯೋಗ ಸಮಸ್ಯೆಗಳು ಸದಾ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಾರೆ. ಬಡವರು ಬಡವರಾಗಿಯೇ ಉಳಿದು ಹಿಂದುಳಿದ ವರ್ಗದವರು ಹಿಂದುಳಿದವರಾಗಿ ಉಳಿದರೆ ಮಾತ್ರ ತಮ್ಮ ಬೇಳೆ ಬೆಂದೀತು ಎಂಬುದು ಇವರಲ್ಲಿ ಹೆಚ್ಚಿನವರ ನಂಬಿಕೆ. ಇಲ್ಲವಾದರೆ ಕೆಲವೇ ವರ್ಷಗಳವರೆಗೆ ಮಾತ್ರ ಸೀಮಿತವಾಗಬೇಕಿದ್ದ ಮೀಸಲಾತಿ ನೀತಿ ಏಕೆ ಇನ್ನೂ ಮುಂದುವರಿಯಬೇಕು? ಮೀಸಲಾತಿ ನೀತಿ ಜಾರಿಗೆ ಬಂದು ಹಲವಾರು ದಶಕಗಳೇ ಸಂದು ಹೋದರೂ ದೀನದಲಿತರ ಉದ್ಧಾರಕ್ಕಾಗಿ ಕೋಟ್ಯಂತರ ರೂಪಾಯಿಗಳೇ ವ್ಯಯವಾದರೂ, ಇನ್ನೂ ಯಾವ ವರ್ಗದವರೂ ಮುಂದುವರಿಯಲೇ ಇಲ್ಲವೇ? ಅಂದ ಮೇಲೆ ಆ ಹಣ ಎಲ್ಲಿಗೆ ಹೋಯಿತು?
ಜನರನ್ನು ಹಾದಿ ತಪ್ಪಿಸುವಲ್ಲಿ ಇವರಿಗಿರುವ ಚಾಕಚಕ್ಯತೆ ಅದ್ಭುತವಾದುದು. ಅಲ್ಪಸಂಖ್ಯಾತರ ಉದ್ಧಾರದ ಹೆಸರಿನಲ್ಲಿ ಬಡವರ ಕೇರಿ-ಕೇರಿಗಳಲ್ಲಿ ದೀನದಲಿತರ ಕೊಚ್ಚೆ ಕೊಂಪೆಗಳಲ್ಲಿ ಇವರ ರಾಜಕಾರಣ ಅರಳುತ್ತದೆ. ಒಂದೆಡೆಯಿಂದ ಶ್ರೀಮಂತರಿಗೆ ರಕ್ಷಣೆಯ ಅಭಯ ಹಸ್ತವನ್ನು ನೀಡುತ್ತಾ, ಇನ್ನೊಂದೆಡೆ ಬಡವರಿಗೆ ಅರಿವೆ-ಆಶ್ರಯಗಳ ಭರವಸೆಗಳ  ಮಹಾಪೂರವನ್ನೇ ಹರಿಸುತ್ತಾ, ಇಬ್ಬರಲ್ಲೂ ಆಸೆ-ಆತಂಕಗಳನ್ನು ಸೃಷ್ಟಿಸಿ, ಏಕಕಾಲಕ್ಕೆ ಒಂದೇ ಕಲ್ಲಿನಿಂದ ಎರಡು ಹಣ್ಣುಗಳನ್ನು ಉದುರಿಸುವ ಇವರುಗಳು ಚಾಣಾಕ್ಷರೇ ಸರಿ. ಬಡವರು ಬಡವರಾಗಿಯೇ ಉಳಿಯದಿದ್ದರೆ ಜಾತಿ-ಜಾತಿಯವರು, ಮತ-ಮತೀಯರು ಹೊಡೆದಾಡದಿದ್ದರೆ, ಇವರಿಗೆಲ್ಲಿದೆ ವೋಟ್ ಬ್ಯಾಂಕ್? ಅದಕ್ಕಾಗಿಯೇ ಮತಗಟ್ಟೆಗಳ ನಡುವೆ ಆಗಾಗ ವೈಷಮ್ಯದ ಕಿಡಿ ಹಚ್ಚಿ ಸದಾ ಅಶಾಂತಿಯನ್ನು ಕಾಪಾಡುತ್ತಾ, ಆ ಆನಂದವನ್ನು ಅನುಭವಿಸುತ್ತಾ ಕೆಟ್ಟ ರಾಜಕಾರಣವನ್ನು ಮಾಡುತ್ತಿರುವ ರಾಜಕಾರಣಿಗಳಾಗಿ ಇದ್ದಾರೆ.
ಈ ಎಲ್ಲ ಕಾರಣಗಳಿಂದ ರಾಜಕಾರಣಿಗಳು ಎಂಬ ಜಾತಿಗೆ ಸೇರ್ಪಡೆಯಾಗುವುದು ಭಾರತದಲ್ಲಿ ಅಷ್ಟು ಸುಲಭದ ವಿಷಯವಲ್ಲ. ಏಕೆಂದರೆ ಈ ಮೇಲೆ ಉದಾಹರಿಸಿದ ನಿರ್ವಹಣಾ ಕುತಂತ್ರಗಳನ್ನೆಲ್ಲ ಒಬ್ಬ ವ್ಯಕ್ತಿ ಅಷ್ಟು ಸುಲಭದಲ್ಲಿ ರೂಢಿಸಿಕೊಂಡಾನೆಯೇ? ಅದಕ್ಕೆ ವಿಶೇಷ ಸಾಮರ್ಥ್ಯವೇ ಬೇಕಲ್ಲವೇ?
ದೇಶ ಒಬ್ಬ ಶ್ರಮಜೀವಿ ಪ್ರಧಾನಿಯನ್ನು ಪಡೆದಿರುವ ಈ ಹೊತ್ತಿನಲ್ಲಿ ರಾಜಕಾರಣವೂ ನಿಧಾನವಾಗಿ ಬದಲಾಗಬಹುದೆಂಬ ಆಸೆ ಇದೆ. ಆ ದಿನಗಳು ಬೇಗನೇ ಬರಲಿ ಎಂದಷ್ಟೇ ಈ ಕ್ಷಣದಲ್ಲಿ ಆಶಿಸಬಹುದು.

-ಡಾ. ಕೆ.ಪಿ. ಪುತ್ತೂರಾಯ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement