ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೂತ್ರಾನುಸಂಧಾನ!

Srinivasa Murthy VN
Updated On : 12 Jun 2014, 12:55 pm

ಅನಂತಮೂರ್ತಿಯವರ ಮೂತ್ರವನ್ನು ಎತ್ತಿಕೊಂಡು, ಕ್ಷಮಿಸಿ, ಮೂತ್ರ ಪ್ರಕರಣವನ್ನು ಎತ್ತಿಕೊಂಡು ಕಲಬುರ್ಗಿಯವರು ವಿಸರ್ಜಿಸಿದ್ದಾರೆ, ಮತ್ತೆ ಕ್ಷಮೆಯಿರಲಿ, ಗರ್ಜಿಸಿದ್ದಾರೆ. ದೇವ ದೇವತೆಗಳ ಮೂರ್ತಿಗಳ ಮೇಲೆ ಮೂತ್ರ ವಿಸರ್ಜಿಸಿದರೆ ಏನೂ ಕೇಡಾಗುವುದಿಲ್ಲವೆಂದೂ, ಆ ಮೂರ್ತಿಗಳಲ್ಲಿ ಯಾವ ಶಕ್ತಿಯೂ ಅಡಕವಾಗಿರುವುದಿಲ್ಲವೆಂದೂ ಅಪ್ಪಣೆ ಕೊಡಿಸಿದ್ದಾರೆ. ದೇವ ದೇವತೆಗಳ (ಮೂರ್ತಿಗಳ) ಪಾಡೇ ಹೀಗಾಗುವಾಗ ಇನ್ನು ಹುಲುಮಾನವರಾದ ಗಾಂಧಿ, ಅಂಬೇಡ್ಕರ್ ಮೊದಲಾದವರ (ಮೂರ್ತಿಗಳ) ಮೇಲೆ, ಮೂರ್ತಿ-ಕಲಬುರ್ಗಿ ಇವರುಗಳ 'ಆಶ್ವಾಸನೆ'ಯಿಂದ ಪ್ರೇರಿತರಾಗಿ, (ಇವರುಗಳು ನೀಡಿರುವ ಅಭಯವನ್ನು) ಕಂಠಮಟ್ಟ ಕುಡಿದು, ಯಾರಾದರೂ ಮೂತ್ರ ವಿಸರ್ಜಿಸಿದರೆಂದರೆ ಅಂಥವರಿಗೆ ಜನಗಳಿಂದ ತಪರಾಕಿ ಮತ್ತು ಕಾನೂನಿನನ್ವಯ ಜೈಲುಶಿಕ್ಷೆ ಎರಡೂ ಗ್ಯಾರಂಟಿ. ಗಾಂಧಿ, ಅಂಬೇಡ್ಕರರ ಮೂರ್ತಿಗಳಿಗೇ ಇಷ್ಟೊಂದು ಪವರ್ ಇರುವಾಗ ದೇವ ದೇವತೆಗಳ ಮೂರ್ತಿಗಳಿಗೆ ಇನ್ನೆಷ್ಟು ಪವರ್ ಇರಬೇಡ? ಅನಂತಮೂತ್ರಿ, ಸ್ಸಾರಿ, ಅನಂತಮೂರ್ತಿ ಮತ್ತು ಕಲಬುರ್ಗಿಯವರು ಯೋಚಿಸುವುದೊಳ್ಳೆಯದು.
ಇವರಿಬ್ಬರಂತೆಯೇ, ವಿಚಾರಶೂಲರಾದ, ಕ್ಷಮಿಸಿ, 'ವಿಚಾರಶೀಲ'ರಾದ ಮುಸ್ಲಿಂ ಬಾಂಧವರು-ಹೌದು, 'ಬಾಂಧವರು' ಎಂಬ ಪದವನ್ನು ಬಳಸದಿದ್ದರೆ ಪಕ್ಕೆಲುಬುಗಳನ್ನು ಮುರಿದು ಹಾಕಲಾಗುವುದು- ಮುಸ್ಲಿಂ ಬಾಂಧವರು ಏನಾದರೂ 'ಪವಿತ್ರ ಗೋಡೆ'ಗೆ ವಿಸರ್ಜಿಸ ಹೊರಟರೆ ಅವರ ವಿರುದ್ಧ ಜಗತ್ತಿನ ಎಲ್ಲ ಮುಸ್ಲಿಂ ಧಾರ್ಮಿಕ ಸಂಘಟನೆಗಳೂ ಹಾಗೂ ಮುಸ್ಲಿಂ ಮಾರ್ಮಿಕ ಸಂಘಟನೆಗಳೂ ಜೀವ ತೆಗೆಯುವ ಫತ್ವಾ ಹೊರಡಿಸುವುದರಲ್ಲಿ ಅನುಮಾನವಿಲ್ಲ. ಪವಿತ್ರವಲ್ಲದ ಗೋಡೆಗಳ ಮೇಲೆ 'ಬಾಂಧವರೇ' ವಿಸರ್ಜಿಸುವುದನ್ನು ನಾವೆಲ್ಲ ನೋಡುತ್ತಿದ್ದೇವೆ-ಬೇಕೆಂತಲೇ ನೋಡುತ್ತಿಲ್ಲ, ಬೇಡವೆಂದರೂ ರಸ್ತೆಗಳಲ್ಲಿ ಕಣ್ಣಿಗೆ ಬೀಳುತ್ತದೆ- ಆ ಮಾತು ಬೇರೆ.
ಇದೇ ರೀತಿ, 'ಕ್ರಾಸ್‌' ನ ಮೇಲೆ ಮೂತ್ರ ಮಾಡಿದರೂ ನಾನಾ ಬಗೆಯಲ್ಲಿ 'ಮೂತ್ರಾರ್ಥಿ'ಗಳನ್ನು ಕ್ರಾಸ್ ಕ್ವೆಶ್ಚನ್ ಮಾಡುವುದು ಖಂಡಿತ. ತದಕುವುದೂ ಗ್ಯಾರಂಟಿ.
ಹಿಂದು ದೇವ ದೇವತೆಗಳ (ಮೂರ್ತಿಗಳ) ಬಗ್ಗೆ ಮಾತ್ರ ವಿಚಾರಶೂರರಿಗಾರಿಗೂ, ಪುನಃ ಕ್ಷಮಿಸಿ, 'ವಿಚಾರಶೀಲ'ರಿಗಾರಿಗೂ, ಅರ್ಥಾತ್, ಸೋ ಕಾಲ್ಡ್ ವೈಚಾರಿಕರು ಉರುಫ್ ಬುದ್ಧಿಜೀವಿಗಳಾರಿಗೂ ಭಯವಿಲ್ಲ.
ಏಕೆಂದರೆ, ಇವರ ಮೂತ್ರ ಸಮರ್ಥನಾ ಸಂದರ್ಭದಲ್ಲಿ ಹಿಂದು ಸಾಮಾಜಿಕರು ಇವರಿಗೆ ತಿಳಿ ಹೇಳುತ್ತಾರೆಯೇ ಹೊರತು ತದಕುವುದಿಲ್ಲ, ಫತ್ವಾ ಹೊರಡಿಸುವುದಿಲ್ಲ.   ದೇವ ದೇವತೆಗಳ ಹೆಸರಿನಲ್ಲಿ, ಇಲ್ಲಸಲ್ಲದ ಭಯ ಹುಟ್ಟಿಸಿ ಕೆಲಮಂದಿ ಅರ್ಚಕರು, ಜೋಯಿಸರು, ಪುರೋಹಿತರು ಅಮಾಯಕರನ್ನು ಶೋಷಿಸುತ್ತಾರೆಂದಾದರೆ ಆ ಶೋಷಕರನ್ನು ಗುರುತಿಸಿ ಮಟ್ಟ ಹಾಕಲು ಮತ್ತು ಅಮಾಯಕರಲ್ಲಿ ಸೂಕ್ತ ತಿಳಿವಳಿಕೆ ಮೂಡಿಸಲು ಚಳವಳಿ, ಕಾನೂನು, ಶಿಕ್ಷಣಗಳಂತಹ ಸಭ್ಯ ವಿಧಾನಗಳು ಹಲವು ಇವೆಯಾದ್ದರಿಂದ, ಮೂರ್ತಿಯ ಮೇಲೆ ಮೂತ್ರ ಮಾಡಿ ತೋರಿಸಿಯೇ ಎಲ್ಲರನ್ನೂ ಸರಿಮಾಡಬೇಕೆಂದೇನಿಲ್ಲ. ಹಾಗೇನಾದರೂ ಸರಿ ಮಾಡಲು ಹೊರಟರೆ, ಸರಿಯಾಗಿರುವವವರೂ ಕೂಡ ಎಲ್ಲೆಂದರಲ್ಲಿ ಮೂತ್ರ ಮಾಡಲು (ಮೂರ್ತಿಗಳನ್ನು ಹುಡುಕಿಕೊಂಡು) -ಒತ್ತಡಪೂರ್ವಕವಾಗಿ- ಅಡ್ಡದಾರಿ ಹಿಡಿದಾರು! ಪರಿಣಾಮ, ಕಪಟಿಗಳಾದ ಅರ್ಚಕ-ಜೋಯಿಸ-ಪುರೋಹಿತರಿಗೆ ವ್ಯಾಪಾರ ಮತ್ತಷ್ಟು ಹೆಚ್ಚಾಗುವ ಮತ್ತು ಪರಿಶುದ್ಧ ಅರ್ಚಕ-ಜೋಯಿಸ-ಪುರೋಹಿತರು ಖಿನ್ನರಾಗುವ ಅಪಾಯವುಂಟು! ಆದ್ದರಿಂದ, ಮೂರ್ತಿಗಳ ಮೇಲೆ ಮೂತ್ರ ಮಾಡಲು ಪ್ರೇರೇಪಿಸದಿರುವುದೇ ಒಳ್ಳೆಯದು. ('ಮೂರ್ತಿ' ಎಂದರೆ ಇಲ್ಲಿ 'ಅನಂತಮೂರ್ತಿ' ಎಂದು ತಪ್ಪಾಗಿ ಅರ್ಥೈಸತಕ್ಕದ್ದಲ್ಲ).
ಇಷ್ಟಾಗಿಯೂ ಯಾರಾದರೂ 'ಅತಿವಿಚಾರ'ಶೀಲರು, 'ನಾನು ಮೂರ್ತಿಯ ಮೇಲೆ ಮೂತ್ರ ಮಾಡುವುದೇ ಸೈ' ಎಂದು ಎದ್ದರೆ, ಅವರು ಯು.ಆರ್. ಅವರನ್ನು ಹುಡುಕಿಕೊಂಡು ಹೋಗುವ ಸಾಧ್ಯತೆಯೂ ಉಂಟು! ಏಕೆಂದರೆ, ಯು.ಆರ್. ಅವರಲ್ಲಿ ಅನಂತಮೂರ್ತಿಗಳು ಇವೆಯಲ್ಲ! ಒಂದೇ ಕಲ್ಲಿಗೆ ಎರಡು ಹಕ್ಕಿ ಎಂಬ ಗಾದೆಯಂತೆ, 'ಒಂದೇ ಮೂತ್ರಕ್ಕೆ ಅನಂತಮೂರ್ತಿ!' ಕಲಬುರ್ಗಿಯವರು, ಪಾಪ, ಈ ಸಾಧ್ಯತೆಯನ್ನು ಯೋಚಿಸದೆಯೇ ಮೂತ್ರ ಮುತ್ತನ್ನು ಅರ್ಥಾತ್ ಮೂತ್ರ ಸಂಬಂಧಿ ಆಣಿಮುತ್ತನ್ನು, ಉದುರಿಸಿಬಿಟ್ಟರು!
ಮೂರ್ತಿಯವರ ಮೂತ್ರ (ಪ್ರಕರಣ) ವನ್ನು ಹಿಡಿದುಕೊಂಡು ಕಲಬುರ್ಗಿಯವರು ಉಚ್ಚೆ (ಪ್ರಸ್ತಾಪ) ಮಾಡಿದ ಸಂದರ್ಭದಲ್ಲಿಯೇ ಅತ್ತ ದೆಹಲಿಯಲ್ಲಿ ಕೇಂದ್ರ ಸರ್ಕಾರವು, ಗಂಗಾನದಿಗೆ ಉಗುಳುವವರನ್ನು ಹಿಡಿದು ದಂಡ ವಿಧಿಸುವ ಯೋಚನೆ ಮಾಡುತ್ತಿದ್ದುದು ಯೋಗಾಯೋಗ! ಒಂದು, ಎ(ಬ)ಡಪಂಥೀಯ ವಿಚಾರಧಾರೆ; ಇನ್ನೊಂದು, ಬಲ (ಶಾಲಿ) ಪಂಥದ ಆಚಾರಸಂಹಿತೆ. ಯಾರು ಹಿತವರು ನಮಗೆ ಈ ಈರ್ವರೊಳಗೆ, ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. 'ಗಂಗೆಗೂ ಉಗುಳಬೇಡಿ; ಕಲಬುರ್ಗಿಯವರಿಗೂ ಉಗುಳಬೇಡಿ. ಮೂರ್ತಿಯ (ವರ) ಮೇಲೂ ಉಚ್ಚೆ ಹೊಯ್ಯಬೇಡಿ; ಗಂಗಾ ಭಾಗೀರಥಿ ಮೊದಲಾದ ಯಾವ ನದಿಗಳಿಗೂ ಉಚ್ಚೆಯೇ ಮುಂತಾದ ಯಾವ ಕೊಳಕನ್ನೂ, ಯಾವ ಕೆಮಿಕಲ್ಲನ್ನೂ ಹರಿಯಬಿಡಬೇಡಿ'. ಇದು ಸಕಲ ಭಾರತೀಯರಲ್ಲಿ ನನ್ನ ಕಳಕಳಿಯ ಮನವಿ. ನಮ್ಮ ಮೂರ್ತಿ, ಮನಸ್ಸು, ಪರಿಸರ, ಸಕಲವನ್ನೂ ಸದಾ ಶುದ್ಧವಾಗಿಟ್ಟುಕೊಳ್ಳೋಣ.
ಕೊನೆಯದಾಗಿ ಹೇಳಬೇಕೆಂದರೆ, ಒಂದು ಮಾತಂತೂ ನಿಜ; ಮೂತ್ರಕ್ಕೆ ಕಂಡಾಪಟ್ಟೆ ಪವರ್ ಉಂಟು! ಅಂದು ಮೊರಾರ್ಜಿ ದೇಸಾಯಿ ಪ್ರಕರಣದಿಂದ ಈ ಸಂಗತಿ ಸಾಬೀತಾದರೆ ಇಂದು ಮೂರ್ತಿ-ಕಲಬುರ್ಗಿ ಪ್ರಕರಣದಿಂದ ಮತ್ತೆ ಸಾಬೀತಾಗಿದೆ! ಮೂಗಿಗಷ್ಟೇ ಅಲ್ಲ, ಮೂಜಗಕ್ಕೂ ಭಯೋತ್ಪಾದಕ ಆಗಬಲ್ಲುದು ಮೂತ್ರ!

-ಎಚ್. ಆನಂದರಾಮಶಾಸ್ತ್ರೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement