ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತೀಯರ ಕಣ್ಗಳಲ್ಲೀಗ ಭರವಸೆಯ ಬೆಳಕು

Srinivasa Murthy VN
Updated On : 14 Jun 2014, 12:10 pm

ಮರುಭೂಮಿಯ ಮೇಲೆ ಅಚಾನಕ್ಕಾಗಿ ತಂಗಾಳಿ ಬೀಸಿದಂತೆ, ಸಂಸತ್ತಿನಲ್ಲಿ ನರೇಂದ್ರ ಮೋದಿಯವರ ಭಾಷಣ ತಂಪೆರೆಯಿತು. ಆ ನಂತರ ನನ್ನನ್ನು ಭೇಟಿಯಾದ ಅನೇಕ ಕಾಂಗ್ರೆಸ್ಸಿಗರು, ತಮ್ಮ ಕಿವಿಗಳು ಮೋದಿ ಅವರ ಮಾತುಗಳನ್ನು ಕೇಳುತ್ತಲೇ ಇರಲು ಹಾತೊರೆಯುತ್ತಿದ್ದವು ಎಂದರು. ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳೂ ಕೂಡ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ಬಾಯಿಂದ ಭಾರತಮಾತೆಯ ಬಗ್ಗೆ ಇಷ್ಟೊಂದು ಭಾವಪೂರ್ಣ, ರೋಮಾಂಚಕ ಮತ್ತು ಹೃದಯಸ್ಪರ್ಶಿ ಮಾತುಗಳನ್ನು ಕೇಳಿದ್ದಾಗಿ ಹೇಳುತ್ತಿದ್ದರು. ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ರಾಜ್ಯಗಳನ್ನು ಸಹಯೋಗಿ, ಸಮಾನ ಸ್ನೇಹಿತ ಮತ್ತು ರಾಷ್ಟ್ರವಿಕಾಸದಲ್ಲಿನ ಮಹತ್ವಪೂರ್ಣ ಭಾಗೀದಾರ ಎಂದು ಕರೆದರು ಮತ್ತು ಪ್ರಧಾನಮಂತ್ರಿಯನ್ನೊಳಗೊಂಡ ಮುಖ್ಯಮಂತ್ರಿಗಳ ತಂಡ- 'ಟೀಂ ಇಂಡಿಯಾ'ದ ಘೋಷಣೆ ಮಾಡಿದರು! ಇದೇ ಮೊದಲಬಾರಿಗೆ ಪ್ರಧಾನಿಯೊಬ್ಬರು ಭಾರತ ಮಾತೆಯ ಪೂರ್ವ ಮತ್ತು ಪಶ್ಚಿಮ ಭುಜಗಳ ನಡುವಿನ ಅಂತರವನ್ನು, ಅಂದರೆ ಶಕ್ತಿ ಮತ್ತು ದೌರ್ಬಲ್ಯದ ಬಗ್ಗೆ ಮಾತನಾಡುತ್ತಾ ರಾಷ್ಟ್ರೀಯ ಏಕತೆಯ ವಿವರಣೆ ನೀಡಿದರು. ಇದೇ ಮೊದಲಬಾರಿಗೆ ಪ್ರಧಾನಿಯೊಬ್ಬರು ತಮ್ಮ ವಿರೋಧಿ ಪಕ್ಷಗಳೆಡೆಗೆ ಆದರ ಮತ್ತು ಗೌರವಯುತ ಪದಪ್ರಯೋಗ ಮಾಡುತ್ತಾ, "ಎಲ್ಲಿಯವರೆಗೂ ನಿಮ್ಮ ಬೆಂಬಲ ನಮಗೆ ದೊರೆಯುವುದಿಲ್ಲವೋ, ಅಲ್ಲಿಯವರೆಗೂ ದೇಶದೆಲ್ಲೆಡೆಯಿಂದ ದೊರೆತ ವ್ಯಾಪಕ ಬೆಂಬಲವನ್ನೂ ನಾನು ಅಪೂರ್ಣ ಎಂದೇ ಭಾವಿಸುತ್ತೇನೆ. ದೇಶದ ವಿಕಾಸಕ್ಕೆ ನಿಮ್ಮ ಮಾರ್ಗದರ್ಶನ ಪಡೆಯುವುದಕ್ಕೂ ನಾನು ಸಿದ್ಧ" ಎಂದರು. ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ತಮ್ಮ ಹೊಸ ಕಲ್ಪನೆಗಳನ್ನು ವಿನಮ್ರತೆಯಿಂದ ತಿಳಿಸುತ್ತಾ, ಒಂದು ವೇಳೆ ತಮ್ಮಿಂದ ತಿಳಿಯದೇ ಏನಾದರೂ ತಪ್ಪಾದರೆ ಹೊಸಬ ಎಂದು ಭಾವಿಸಿ ಕ್ಷಮಿಸಿಬಿಡಬೇಕು ಎಂದು ಪ್ರಾರ್ಥಿಸಿದರು.
ಸದನದಲ್ಲಿ ನರೇಂದ್ರ ಭಾಯ್ ಮೋದಿ ಪ್ರಧಾನಮಂತ್ರಿಯಾಗಿ ಮೊದಲ ಬಾರಿಗೆ ಭಾಷಣ ಮಾಡುವಾಗ ನಾವೆಲ್ಲ ಸಂಸದರು ಒಂದು ಅದ್ಭುತ ರೋಮಾಂಚನದ ತೆಕ್ಕೆಯಲ್ಲಿ ಸಿಲುಕಿದ್ದೆವು. ಒಬ್ಬ ರಾಜಕಾರಣಿಯಲ್ಲ ಬದಲಾಗಿ ಇಡೀ ದೇಶವೇ ಆ ವ್ಯಕ್ತಿಯ ಮೂಲಕ ಮಾತನಾಡುತ್ತಿದೆಯೇನೋ ಎಂದೆನಿಸತೊಡಗಿತ್ತು. ಈ ಲೇಖನವನ್ನು ನೀವು ಓದುವ ವೇಳೆಗೆ ನಾನು ನಾಗಪುರದಲ್ಲಿರುತ್ತೇನೆ. ಅಲ್ಲಿ ರಾ.ಸ್ವ.ಸಂಘದ ತೃತೀಯ ವರ್ಗದ ವಾರ್ಷಿಕ ಪರೀಕ್ಷೆಗಳು ಮುಗಿಯಲಿವೆ. ಶ್ರೀ ಶ್ರೀ ರವಿಶಂಕರ ಗುರೂಜಿ ಈ ಸಮಾರಂಭದ ಮುಖ್ಯ ಅತಿಥಿ. ಪ್ರತಿದಿನವೂ ನಾವು ಸ್ವಯಂಸೇವಕರು ವಾತ್ಸಲ್ಯ ಮೂರ್ತಿಯಾದ ಭಾರತಮಾತೆಯನ್ನು ಸ್ಮರಿಸುತ್ತಾ ಪ್ರಾರ್ಥನೆ ಮಾಡುತ್ತೇವೆ. ಈ ತಾಯಿ ತನ್ನೊಡಲಲ್ಲಿರುವ ದೀನರು, ದುಃಖತಪ್ತರು, ಬಡವರು, ಸೂರಿಲ್ಲದವರು, ರೈತರು, ಕೂಲಿ ಕಾರ್ಮಿಕರ ಸಂಕಷ್ಟಗಳನ್ನೆಲ್ಲ ನೋಡಿ ಎಷ್ಟು ಹಿಂಸೆ ಅನುಭವಿಸುತ್ತಿದ್ದಾಳೋ ಎನ್ನುವುದನ್ನು ಯೋಚಿಸಿದಾಗಲೆಲ್ಲ ವಿಚಿತ್ರ ಅಂಧಕಾರ ಕವಿದುಬಿಡುತ್ತದೆ. ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಭಾರತದ ಬಡವರನುಭವಿಸುವ ಕಷ್ಟಗಳ ಬಗ್ಗೆ, ಭಾರತ ಮಾತೆಯ ಭುಜಗಳಾದ, ಅಂದರೆ ಪೂರ್ವ ಭಾಗವನ್ನು ಪಶ್ಚಿಮದಂತೆ ಬಲಿಷ್ಠ ಮತ್ತು ಸಮೃದ್ಧಗೊಳಿಸುವ ಬಗ್ಗೆ ಮಾತನಾಡುವಾಗ ಸ್ವಯಂ ಭಾರತ ಮಾತೆಯೇ ಸಂಸತ್ತಿಗೆ ಪ್ರವೇಶಿಸಿದ್ದಾಳೇನೋ ಅನಿಸಿದ್ದು ಸುಳ್ಳಲ್ಲ.
"ಎಲ್ಲಾ ದೇಶಗಳ ಸ್ನೇಹ ಸಂಪಾದಿಸುತ್ತೇವೆ. ನಮ್ಮ ಸೇನೆ ಮತ್ತು ಸೈನಿಕರ ಶಕ್ತಿಯನ್ನು ಹೆಚ್ಚಿಸುತ್ತೇವೆ. ಪ್ರಪಂಚದ ಪ್ರತಿಯೊಂದು ದೇಶದ ಹೆಗಲ ಮೇಲೆ ಕೈ ಹಾಕಿ ಕಣ್ಣಲ್ಲಿ ಕಣ್ಣಿಟ್ಟು ವ್ಯವಹಾರ ಮಾಡುತ್ತೇವೆ. ಅಮೆರಿಕ ಮತ್ತು ಯುರೋಪ್‌ನ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿನ ಮತದಾರರು ನಮ್ಮ ದೇಶದಲ್ಲಿದ್ದಾರೆ. ಇಷ್ಟೊಂದು ಮಹಾನ್ ಜನತೆಯನ್ನು ಹೊಂದಿರುವ ಭಾರತ ಅದೇಕೆ ಪ್ರಪಂಚದೆದುರು ತಲೆತಗ್ಗಿಸಿಕೊಂಡಿರಬೇಕು?"
ಇದೆಲ್ಲ ರಾಜಕಾರಣಿಯ ಹುಸಿ ಭರವಸೆಯಲ್ಲ, ಬದಲಾಗಿ ಆ ವ್ಯಕ್ತಿಯ ಹೃದಯದಿಂದ ಹೊರಹೊಮ್ಮಿದ ಸಂಕಲ್ಪ ಮತ್ತು ಬದ್ಧತೆ!  
ನರೇಂದ್ರ ಮೋದಿಯವರು ಎಲ್ಲೂ ಕೂಡ ಕಾಂಗ್ರೆಸ್ಸಿಗರನ್ನು "ಸೋತದ್ದಕ್ಕೆ ನಾಚಿಕೆಯಾಗುತ್ತಿಲ್ಲವೇ?" ಎಂಬ ಧಾಟಿಯಲ್ಲಿ ಹಂಗಿಸುವ ಮಾತನಾಡಲಿಲ್ಲ. ಬದಲಾಗಿ-"ನೀವು ಕೆಲಸ ಮಾಡಿಲ್ಲವೆಂದು ಹೇಳುತ್ತಿಲ್ಲ, ಆದರೆ ಇನ್ನೂ ಹೆಚ್ಚು ಕೆಲಸಗಳಾಗಿದ್ದರೆ, ಹೆಚ್ಚಿನ ಸಾಧನೆ ನಿಮ್ಮಿಂದಾಗಬಹುದಿತ್ತು, ಆದರೆ ಆಗಲಿಲ್ಲ" ಎಂದೂ ಹೇಳಿದರು. ನಾವೆಲ್ಲರೂ ಸೇರಿ ಮುಂದಿನ ದಾರಿಯನ್ನು ನಿರ್ಧರಿಸೋಣ. ಈಗ ಸೋತವರು, ಗೆದ್ದವರು ಎನ್ನುವ ಪ್ರಶ್ನೆಯೇ ಬರಬಾರದು, ನಾವೆಲ್ಲರೂ ಒಂದಾಗಿ ದೇಶದ ಸೇವೆ ಮಾಡೋಣ. ನಿಮ್ಮ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಕ್ಕೂ ನಾನು ಸಿದ್ಧನಿದ್ದೇನೆ. ಯುವಕರು ನೈಪುಣ್ಯ ಸಾಧಿಸಬೇಕು. ಪ್ರಪಂಚದ ಕಣ್ಣಿಗೆ ಭಾರತ ಹಗರಣಗಳ ದೇಶವಾಗಿ ಗೋಚರಿಸುತ್ತಿದೆ. ನಾವೆಲ್ಲರೂ ಸೇರಿ ಈ ದೇಶವನ್ನು ಪರಿಣತರ ದೇಶವನ್ನಾಗಿ ಮಾಡೋಣ" ಎಂದರು.
ದೇಶದ ಐಕ್ಯತೆಗಾಗಿ ಮೋದಿ ಅದ್ಭುತ ಪ್ರಯೋಗಗಳನ್ನು ಮುಂದಿಟ್ಟಿದ್ದಾರೆ. ಉತ್ತರ ಪೂರ್ವಾಂಚಲದಲ್ಲಿ ವಿದ್ರೋಹ ಮತ್ತು ಆತಂಕವಾದವಿರುವುದು ಎಲ್ಲರಿಗೂ ತಿಳಿದಿದೆ. ಅಲ್ಲಿನ ಯುವಕ-ಯುವತಿಯರು ಅನೇಕ ಪ್ರಕಾರದ ಬೇಧಭಾವ ಮತ್ತು ಪ್ರತಿಕೂಲ ವ್ಯವಹಾರಗಳಿಗೆ ಗುರಿಯಾಗುತ್ತಿದ್ದಾರೆ. ಹಾಗಾಗಿ ಮೋದಿ ಹೇಳುತ್ತಾರೆ: "ದೇಶದಲ್ಲಿ ಸುಮಾರು 30,000 ಶಿಕ್ಷಣ ಸಂಸ್ಥೆಗಳಿವೆ. ಎಲ್ಲ ಸಂಸ್ಥೆಗಳ ಕೆಲವು ಮಕ್ಕಳು, ವಿದ್ಯಾರ್ಥಿಗಳು ಉತ್ತರ ಪೂರ್ವಾಂಚಲ ರಾಜ್ಯಗಳಿಗೆ ಪ್ರವಾಸ ಕೈಗೊಂಡರೆ, ಅಲ್ಲಿ ಪರ್ಯಟನೆ ನಡೆಸಿದರೆ, ದೇಶವಾಸಿಗಳಿಗೆ ಆ ಭಾಗದ ಜನರ ಪರಿಚಯವಾಗುತ್ತದೆ. ಇನ್ನೊಂದೆಡೆ ಪೂರ್ವಾಂಚಲ ರಾಜ್ಯಗಳ ಜನರಿಗೂ ದೇಶದ ವಿಭಿನ್ನ ರಂಗಗಳ ಜನರು ಮತ್ತು ಸಂಸ್ಕೃತಿಯ ಪರಿಚಯ ಮಾಡಿಸೋಣ." ಮುಂದುವರೆಯುತ್ತಾ, "ಕಳೆದ ಹಲವಾರು ವರ್ಷಗಳಿಂದ ನಾನು ಕೇಂದ್ರ ಸರ್ಕಾರಕ್ಕೆ ಹೇಳುತ್ತಾ ಬರುತ್ತಿದ್ದೆ, ಉತ್ತರ ಪೂರ್ವಾಂಚಲ ರಾಜ್ಯದ ಪೊಲೀಸರನ್ನು ಗುಜರಾತ್‌ಗೆ ಕಳುಹಿಸಿಕೊಡಿ, ಅವರು ಗುಜರಾತ್‌ನಲ್ಲಿ ನಾಲ್ಕೈದು ವರ್ಷ ಕೆಲಸ ಮಾಡಿ ಹಿಂದಿರುಗಲಿ. ನಂತರ ಇನ್ನಷ್ಟು ಹೊಸಬರನ್ನು ಇದೇ ರೀತಿ ಅನ್ಯ ರಾಜ್ಯಗಳಲ್ಲಿ ಕೆಲಸ ಮಾಡಲು ಕಳುಹಿಸಿ. ರಾಷ್ಟ್ರೀಯ ಐಕ್ಯತೆ ಪರಸ್ಪರ ಪರಿಚಯದಿಂದ, ಒಡನಾಡುವುದರಿಂದ, ಅರ್ಥಮಾಡಿಕೊಳ್ಳುವುದರಿಂದ ಬೆಳೆಯುತ್ತದೆ." ಎಂದರು.
ತಾವು ಏಕರೂಪತೆಯ ಪರವಾಗಿರುವವರಲ್ಲ ಎಂದು ಹೇಳಿದ ಮೋದಿ, "ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ, ಏಕರೂಪ ದೇಶವಲ್ಲ. ದಕ್ಷಿಣದಲ್ಲಿ ಇಡ್ಲಿ ಸವಿಯುತ್ತಾ, ಉತ್ತರಕ್ಕೆ ಬಂದು ಪರೋಠಾ ಮೆಲ್ಲುವ ವೈವಿಧ್ಯಮಯ ದೇಶ ನಮ್ಮದು. ಈ ಮಹಾನ್ ದೇಶದ ಪರಂಪರೆಯನ್ನು ಗೌರವಿಸಬೇಕು. ಈ ದೇಶ ಮುನ್ನುಗ್ಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ" ಎಂದು ಭರವಸೆ ಮೂಡಿಸಿದರು.
ಆದರೆ ಕಳೆದ ಕೆಲವು ವರ್ಷಗಳಿಂದ ಅಂಧಕಾರ ತುಂಬಿದ ಸಮಯದಲ್ಲೇ ಬದುಕು ನಡೆಸಿದ ಭಾರತೀಯರಲ್ಲಿ ಭರವಸೆಯೆಂಬುದೇ ಬತ್ತಿಹೋಗಿದೆ. ಹಾಗಾಗಿ ಈಗಲೂ ಭರವಸೆಯ ಮಾತುಗಳನ್ನು ನಂಬಲು ಅವರಿಗೆ ಕಠಿಣವಾಗುತ್ತಿದೆ. ಈಗ ಶುರುವಾಗಿರುವ ಕೆಲಸಗಳೆಲ್ಲವೂ ಯಶಸ್ವಿಯಾಗಲಿ ಎನ್ನುವುದಷ್ಟೇ ಎಲ್ಲರ ಪ್ರಾರ್ಥನೆ. ರೇಲ್ವೆ ಸ್ಟೇಷನ್‌ನಲ್ಲಿ ಕುಳಿತ ಕೂಲಿಯಿಂದ ಹಿಡಿದು, ಮಧ್ಹಾಹ್ನದ ಸುಡುಬಿಸಿಲಲ್ಲಿ ಬೇಯುತ್ತಿರುವ ರೈತರು, ಕೂಲಿ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿಗಳವರೆಗೆ ಎಲ್ಲರೂ ಆಸೆಯಿಂದ ದೆಹಲಿಯತ್ತ ನೋಡುತ್ತಾ 'ಕನಸಿನ ಭಾರತವನ್ನು' ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಆ ಆಸೆ ಪಕ್ಷಗಳು ಮತ್ತು ವಿಚಾರಧಾರೆಯನ್ನೂ ಮೀರಿ 'ಭಾರತದ ಜಯ-ಪರಾಜಯ' ಎನ್ನುವ ಧಾಟಿಯಾಗಿ ಬದಲಾಗಿದೆ. ಭಾರತ ಗೆಲ್ಲಲೇಬೇಕಿದೆ!

-ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement