ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚಿತ್ತಾಕರ್ಷಕ ಪುಟಗಳು

Srinivasa Murthy VN
Updated On : 14 Jun 2014, 11:19 am

-987ಕನ್ನಡ ಪ್ರಭದ ಕಾಯಂ ಓದುಗನಾದ ನಾನು ಗಮನಿಸಿದಂತೆ ರಾಷ್ಟೀಯ ಸಂಗತಿಗಳಿಗೆ ಹೆಚ್ಚು ಮಹತ್ವ ಕೊಡುವ ಪತ್ರಿಕೆಗಳಲ್ಲಿ ಕನ್ನಡಪ್ರಭವೂ ಮುಂಚೂಣಿಯಲ್ಲಿದೆ. ಆದರೆ ಜೂನ್ 5ರ ಗುರುವಾರ ಬೈಟು ಕಾಫಿ ಸಂಚಿಕೆಯಲ್ಲಿ ಸುಹಾಸಿನಿ ವಿಭಾಗದಲ್ಲಿ ಬಂದ ರವೀನಾ ಟಂಡನ್ ಅವರ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಹೇಳಿಕೆ ಒಂದು ರಾಷ್ಟ್ರೀಯ ಹಿತಾಸಕ್ತಿಯುಳ್ಳ ಹೇಳಿಕೆಯಾಗಿದೆ. ಅಂತಹ ಹೇಳಿಕೆಗೆ ಪತ್ರಿಕೆಯಲ್ಲಿ ಹಾಕಿದ ಭಾವಚಿತ್ರ ಅಭಾಸವಾಗಿದೆ. ಇಂತಹ ಹೇಳಿಕೆಯನ್ನು ಅಂತಹ ಮಾದಕ ಭಾವಚಿತ್ರ ಮುಖೇನ ಪ್ರಕಟಿಸುವುದು ಎಷ್ಟು ಸರಿ?
-ಸೋಮೇಶ್. ಕೆ. ಹಣವಾಳ್. (ಗಂಗಾವತಿ), 99864 95327
ವಾರಾಂತ್ಯದಲ್ಲಿ ನಾವು ಕನಸಲ್ಲೂ ಎಣಿಸದ ಸರ್‌ಪ್ರೈಸ್ ನೀಡಿದ್ದೀರಿ. ಶನಿವಾರದ ಕನ್ನಡಪ್ರಭದ ಒಳಹೊಕ್ಕರೆ ನಮಗೆ ಹೊಸ ಲೋಕಕ್ಕೆ ಹೋದ ಅನುಭವ. ಒಳಾಂಗಣದ ಸಂಪೂರ್ಣ ಬದಲಾವಣೆಯಿಂದ ನಾವು ಪರಿಚಯವಿಲ್ಲದ ಪರ ಊರಿಗೆ ಹೋದಾಗ ದಿಕ್ಕು ತೋಚದೆ ಹೇಗೆ ಪರದಾಡುತ್ತೇವೆಯೋ ಅದೇ ಪರಿಸ್ಥಿತಿ ಓದುಗರದ್ದಾಗಿತ್ತು. ನಮ್ಮ ಮಾಮೂಲು ಲೇಖನಗಳನ್ನು ಹುಡುಕಿ ಹುಡುಕಿ ಓದುವುದರಲ್ಲಿ ಒಂಥರಾ ಮಜವೆನಿಸಿತು. ಕಂಡರಿಯದ ರೀತಿ ಚಿತ್ತಾಕರ್ಷಕ ಪುಟ ವಿನ್ಯಾಸಗೊಳಿಸಿದ ಪುಟವಿನ್ಯಾಸಗಾರರಿಗೆ ನಮೋ ನಮಃ.
-ಎಲ್.ವಿ. ಕುಮಾರಸ್ವಾಮಿ, ಹಿರಿಯೂರು  9980660155.
ಕನ್ನಡಪ್ರಭ ಮತ್ತೆ ಬದಲಾಗುತ್ತಿದೆ/ ಬದಲಾಗಿದೆ. ಬದಲಾವಣೆ ಒಳಿತಾದರೂ ಮತ್ತೆ ಮತ್ತೆ ಬದಲಾವಣೆ ಸ್ವಾಗತಾರ್ಹವಲ್ಲ. ಮುಖಪುಟ ಹಾಗೂ ಸಂಪಾದಕೀಯ ಪುಟಗಳಂತೂ ವಿಪರೀತ ಬದಲಾವಣೆ ಕಾಣುತ್ತಿದೆ. ಓದುಗರ ನೆಚ್ಚಿನ ಪತ್ರಪ್ರಭಕ್ಕೆ ಸ್ಥಳಾವಕಾಶವೇ ಇಲ್ಲದಂತಾಗಿ ಮುಂದೊಂದು ದಿನ ಓದುಗರ Participation
ಇಲ್ಲದಂತೆಯೂ ಆದೀತೆ? ಈ ರೀತಿಯ ಬದಲಾವಣೆಯನ್ನು ಕ.ಪ್ರ. ಓದುಗರು ಒಪ್ಪಲಾರರು. 'ಕೇಳ್ರಪ್ಪೋ ಕೇಳಿ' ವಿಭಾಗವೂ ನಶಿಸುವ ಭಯವಿದೆ. ಸಂಪಾದಕೀಯ ಲೇಖನಕ್ಕೆ ಮುಡಿಪಿಟ್ಟ ಕಾಲಂ ಸೈಜ್ ತೀರ ಚಿಕ್ಕದೆನಿಸುತ್ತಿದೆ. ಹೀಗಾಗಿ ಓದಲು ಅಷ್ಟೊಂದು ಮಜಾ ಬರುತ್ತಿಲ್ಲ. ಈ ಬರಹ ನಿಮ್ಮ ಕೈ ಸೇರುವುದರೊಳಗೆ ಇನ್ನೇನು ಬದಲಾಗಬೇಕೋ ಏನೋ?
-ಶಂಕರನಾರಾಯಣಭಟ್ ಮಾಡಗೇರಿ, ಹೊನ್ನಾವರ, 9632 821920
ಜೂನ್ 9ರಂದು ಪಿ.ತ್ಯಾಗರಾಜ್ ಅವರ ಲೇಖನ ಒಳಸುರುಳಿಯಲ್ಲಿ ನಿರೂಪಿತವಾಗಿರುವ 'ತೊಟ್ಟು ನೀರಿಗೂ ಟಿಎಮ್‌ಸಿ ಕಣ್ಣೀರು ಸುರಿಸಬೇಕಾದೀತು' ಸಕಾಲಿಕ. ಸದರಿ ವರದಿಯಲ್ಲಿರುವ ಎಲ್ಲಾ ಅಂಶಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿ ಪ್ರಧಾನಿಯವರ ಗಮನಕ್ಕೆ ತರಲು ತಮ್ಮಲ್ಲಿ ವಿನಂತಿ. ಕಾರಣ ಪತ್ರಿಕಾ ಮಾಧ್ಯಮ ಪ್ರಬಲವಾಗಿದ್ದು ಸಾರ್ವತ್ರಿಕವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ, ದೊರಕಿಸಿಕೊಳ್ಳುವ ಮಾಧ್ಯಮ ವಾಗಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುತ್ತದೆ. ಸದರಿ ವರದಿಯು ವಾಸ್ತವಿಕತೆಯಿಂದ ಕೂಡಿದ್ದು ಒಂದು ಜನದನಿಯ ರೂಪದಲ್ಲಿರುತ್ತದೆ. ಅಲ್ಲದೇ ಇದು ರಾಜಕೀಯೇತರ ವರದಿಯಾಗಿರುವುದರಿಂದ ಪರಿಗಣಿಸುವ ಸಾಧ್ಯತೆ ಬಹಳಷ್ಟಿರುತ್ತದೆ. ನಿಮ್ಮ ವರ್ಚಸ್ಸನ್ನು ಉಪಯೋಗಿಸಿದಲ್ಲಿ ಈ ಕೆಲಸ ಕಾರ್ಯಸಾಧುವಾಗುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ.
-ಸಿ.ಟಿ.ಮುದ್ದುಕುಮಾರ್ ಚಿಕ್ಕನಾಯಕನ ಹಳ್ಳಿ, 9448248061
ಜೂನ್ 8ರ ಕನ್ನಡ ಪ್ರಭದಲ್ಲಿ ಪಂಚ ಕಜ್ಜಾಯ ಅಂಕಣ ಇಲ್ಲದಿರುವುದು ಬೇಸರ ತರಿಸಿತು. ಅದರ ಬದಲು ಬಂದ ಪಂಚಾಮೃತ ಓದಿ ಖುಷಿಯಾದೆ. ಇನ್ನು ಮುಂದೆ ಪಂಚಕಜ್ಜಾಯದ ಜೊತೆ ಪಂಚಾಮೃತವೂ ತಪ್ಪದೆ ಬರಲಿ.
-ರವಿಕುಮಾರ್.ಜಿ.ಬಿ, ಬೆಂಗಳೂರು, 9449669897
'ಪದ ಪದರ' ಬರೆಯುವ ವಿಶ್ವನಾಥ ಸುಂಕನಾಳ ಅವರಿಗೆ ಅಭಿನಂದನೆಗಳು. ಸಾವಿರ ಪದಗಳ ಸರದಾರರಾಗಿದ್ದಕ್ಕಾಗಿ. 'ಸ್ತ್ರೀ' ಪದದ ಬಗ್ಗೆ ಅವರು ಬರೆದ ಒಂದು ಪದರಕ್ಕೆ ನಾನು ಆಕ್ಷೇಪಿಸಿದ್ದೆ. ನಂತರ ನೀವು ಸಮಜಾಯಿಷಿ ನೀಡಿದ್ದೀರಿ. ಸಾವಿರ ಪದವಾಗಿ ಬಂದ 'ಜನನಿ'ಯ ಎಲ್ಲಾ ಪದರಗಳು ಸುಂದರವಾಗಿದ್ದವು. ಸ್ತ್ರೀ ಬಗ್ಗೆ ಆಕ್ಷೇಪಿಸುವ ಹಾಗೆ ಬರೆಯಬಹುದೇನೋ. ಆದರೆ ಜನಿನಿಯ ಬಗ್ಗೆ ಹಾಗೆ ಬರೆಯಲು ಸಾಧ್ಯವೇ ಇಲ್ಲವೇನೋ?! ಟಿವಿಯನ್ನು ನೋಡದ ನಾನು ಅಂದು ನನ್ನ ಪತಿಗೆ ಅರ್ನಬ್ ಗೋಸ್ವಾಮಿ ಹಾಗೂ ಬ (ಖು)ರ್ಖಾ ದತ್‌ರನ್ನು ಒಮ್ಮೆ ನೋಡಬೇಕು ತೋರಿಸಿ ಅಂದಿದ್ದೆ. ಮಾರನೆ ದಿನವೆ ಪದಪದರದಲ್ಲಿ ಅರ್ನಬ್ ಗೋಸ್ವಾಮಿಯವರ ಬಗ್ಗೆ ಬರೆದದ್ದು ಓದಿ ಬಿದ್ದು ಬಿದ್ದು ನಕ್ಕೆವು. ಬಹುಶಃ ಯಾವ ಪದ ಪದರಕ್ಕೂ ಅಷ್ಟು ನಗು ಬಂದಿರಲಿಲ್ಲ. ಧನ್ಯವಾದಗಳು. ಹಾಗೆ ಬ(ಖು)ರ್ಖಾ ದತ್ ಬಗ್ಗೆ ಕೂಡ ಬರೆಯಲಿ ಎಂಬುದು ನನ್ನ ಆಶಯ.
-ಗೀತಾ ಎಸ್.ಕೆ., ಹಾಸನ
ತಾ. 4.6.2014ರ ಸಂಚಿಕೆಯ ವಿಚಾರ ತೋರಣ ಪುಟದಲ್ಲಿ ವಕ್ರತುಂಡೋಕ್ತಿಯನ್ನು ಓದಿ ನಾನು ಈ ರೀತಿ ಪ್ರಯತ್ನಿಸುತ್ತೇನೆ.
'ಪೂನಂ ಪಾಂಡೆಯವರಂತೆ ಪ್ರಚಾರಕ್ಕಾಗಿ ಬುದ್ಧಿಜೀವಿಗಳು ಬೌದ್ಧಿಕವಾಗಿ ಎಷ್ಟು ಬೇಕಾದರೂ ಬೆತ್ತಲಾಗುವಂತೆ"- ಪ್ರಚಾರಕ್ಕಾಗಿ, ಮುದ್ರಣ ಹಾಗೂ ದೃಶ್ಯ ಮಾಧ್ಯಮದವರೂ ಸಹ ಅವರಿಬ್ಬರ ಮನಸ್ಥಿತಿಯನ್ನು ಪ್ರಚುರಪಡಿಸುವುದಕ್ಕಾಗಿ ಎಷ್ಟಾದರೂ ಬೆತ್ತಲಾಗುವಿರೋ ಹೇಗೆ? ನಾಳೆ ಪೂನಂ ಪಾಂಡೆ -ನಿಮ್ಮ ಮೇಲೆ ತನ್ನನ್ನು ಬುದ್ಧಿಜೀವಿಗಳೊಡನೆ ಹೋಲಿಸಿದ್ದಕ್ಕಾಗಿ ಕೇಸ್ ಹಾಕಬಹುದಲ್ಲವೇ? ನಾನು ಕ.ಪ್ರ.ದ ಅಭಿಮಾನಿ. ಮತ್ತೆ ಬರೆಯುವೆ.
-ಎ.ಎಸ್. ಹಾಲಭಾವಿ, ಮೊ. 94816 70493
ಪಾತ್ರ ಯಾವುದಾದರೂ ಸೈ-ಪ್ರಕಾಶ್ ರೈ 5.6.14ರ ಸಮಯೋಚಿತ ಲೇಖನ. ಹೌದು. ಯಾವುದೇ ಭಾಷೆಯ ಚಿತ್ರ ಬಿಡುಗಡೆಯಾಗಲಿ, ನಮ್ಮ ರೈ ಪಾತ್ರಧಾರಿ ಎಂದು ತಿಳಿದರೆ, ನಾವು ಖಂಡಿತ ಚಿತ್ರ ವೀಕ್ಷಣೆಯಿಂದ ವಂಚಿತರಾಗೋಲ್ಲ. ಇದು ಅವರು ಸೃಷ್ಟಿಸಿಕೊಂಡ ಅಭಿಮಾನದ ಸಮೂಹ ಸನ್ನಿ. ತೆಲುಗು ಚಿತ್ರರಂಗ ಪದೇ ಪದೇ ನಿಷೇಧ ಎಂದು ಬೊಬ್ಬೆ ಹೊಡೆದು ಸುಸ್ತಾಗಿದ್ದಿದೆ. ಪ್ರಕಾಶ್ ರೈ ಇದು ಅವರ ತಾಖತ್.
ಪವನಕುಮಾರ್. ಕೆ.ವಿ., ರಾಜಾಸ್ಟ್ರೀಟ್, ಬಳ್ಳಾರಿ., ಮೊ. 9900 515957

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement