ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಸ್ಪೃಶ್ಯರ ಜೀವಹಾನಿ ನಮ್ಮ ಭಾವವನ್ನೇಕೆ ಕೆಣಕುವುದಿಲ್ಲ?

Srinivasa Murthy VN
Updated On : 15 Jun 2014, 9:38 am

ಅಸ್ಪೃಶ್ಯತೆ ನಿವಾರಣೆ ಹೋರಾಟ ವ್ಯಕ್ತಿಗತ ಯಶಸ್ವಿಯಾಗಿದೆ ಹೊರತು ಸಾರ್ವತ್ರಿಕವಾಗಿಲ್ಲ. ಕಲ್ಲು ದೇವರಿಗೆ ಅಪಮಾನವಾದ್ರೆ ಬೆಂಕಿ ಹತ್ತಾಂಗ ಗಲಾಟೆ ಎಬ್ಬಿಸೋ ಅನ್ಯ ಮತೀಯರು ಅಸ್ಪೃಶ್ಯರ ಜೀವ ಹಾನಿಯಾದ್ರೂ ಸುಮ್ಮನಿರ್ತಾರೆ. ಇದು ಬೀದರ್ ಜಿಲ್ಲೆಯ ಕೌಠಾ ಬಸವಯೋಗ ಕೇಂದ್ರದ ಸಿದ್ದರಾಮ ಬೆಲ್ದಾಳ ಶರಣರ ನುಡಿ. ಇತ್ತೀಚೆಗೆ ಹಲವು ಮಠಾಧೀಶರು ಮತ್ತು ಪ್ರಗತಿಪರರು ದಲಿತ ಸಮಾಜದೊಂದಿಗೆ ಸಹಪಂಕ್ತಿ ಭೋಜನ, ಸಾಮರಸ್ಯ ನಡೆಗಳನ್ನು ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತು...
    'ನಡಿಗೆ' ಯಿಂದ ಮಾನವ ನಡೆ ಪರಿವರ್ತನೆ ಆಗುತ್ತಾ..?
    ಪರಾಮತ್ಮನ ಮುಂದೆ ಎಲ್ಲರೂ ಸಮಾನರು ಎಂಬ ಭಾವನೆ ಬರ್ಬೇಕು. ಮುಟ್ಟಿದಾಕ್ಷಣ ಪಾಪ ಬರುತ್ತದೆ. ಅವರೊಂದಿಗೆ ಊಟ ಮಾಡಿದಾಕ್ಷಣ ಮೈಲಿಗೆ ಆಗ್ತದೆ ಎಂಬುದು ಶೋಷಣೆಯಲ್ಲಿಯೇ ಅತ್ಯಂತ ಹೇಯ. ಅಸ್ಪೃಶ್ಯತೆ ಈ ದೇಶಕ್ಕೆ ಅಂಟಿಕೊಂಡಿರುವ ದೊಡ್ಡ ಕಳಂಕ.
    ಅಂದು ಬಸವಣ್ಣ ಹೋರಾಡಿದ, ನಂತರ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ ಧ್ವನಿ ಎತ್ತಿ, ಶೋಷಣೆ ನಿರ್ಮೂಲನೆಗಾಗಿ ಪ್ರಯತ್ನಿಸಿದ್ದರಾದ್ರೂ ಅಲ್ಲಿಂದ ಇಲ್ಲಿಯವರೆಗೆ ವ್ಯಕ್ತಿಗತ ಯಶಸ್ವಿಯಾಗಿದೆ ಹೊರತು ಸಾರ್ವತ್ರಿಕವಾಗಿಲ್ಲ. ಅವರವರ ಸಮಾಜದ ಪೂಜ್ಯರೇ ದಲಿತರ ಕೇರಿಗೆ ನಡೆದು ಹೋಗಿ ಊಟ ಮಾಡಿದ್ದು ಶೋಷಣೆ, ಅಸ್ಪೃಶ್ಯತೆ ಆಚರಣೆ ತಪ್ಪು ಎಂಬ ಭಾವನೆ ಅನುಯಾಯಿಗಳಲ್ಲಿ ಮೂಡಿಸಲಿದೆ. ಹೀಗಾಗಿ ನಂಬಿರುವ, ಪೂಜಿಸಿ ಆರಾಧಿಸುವ ಮಠಾಧೀಶರ ಮಾತುಗಳಿಗಿಂತ ಅವರ ನಡಿಗೆಗಳಿಂದಾದರೂ ಸಮಾಜ ಅಸ್ಪೃಶ್ಯತೆ ತಪ್ಪು ಎಂಬೋದನ್ನ ಅರಿತುಕೊಂಡು ಸಮಾನತೆಯತ್ತ ಹೆಜ್ಜೆ ಹಾಕಲಿ ಎಂಬ ದೂರ ದೃಷ್ಟಿಯ ಫಲವೇ ನಿಡುಮಾಮಿಡಿ ಶ್ರೀಗಳ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ನೂರಾರು ಮಠಾಧೀಶರು ಒಗ್ಗೂಡಿಕೆ. ಉಪವಾಸ ವ್ರತ. ಸಹಪಂಕ್ತಿ ಭೋಜನ.
= ಪೇಜಾವರ ಶ್ರೀಗಳೂ ದಲಿತ ಕೇರಿಯಲ್ಲಿ ನಡೆದಿದ್ದರಲ್ಲ..
    ಪೇಜಾವರು ಶ್ರೀಗಳು ನಡೆದಾಡಿದರೇ ಹೊರತು ಸಹಪಂಕ್ತಿ ಭೋಜನ ಮಾಡಲಿಲ್ಲ. ನಿಡುಮಾಮಿಡಿ ಶ್ರೀಗಳು ನಡಿಗೆ ಜೊತೆಗೆ ದಲಿತ ಕೇರಿಯಲ್ಲಿ ದಲಿತರೇ ಮಾಡಿದ ಅಡಿಗೆಯನ್ನು ಸೇವಿಸಿದ್ದಾರೆ. ಹಾಗಾಗಿ ಅದಕ್ಕೂ ಇದಕ್ಕೂ ಭಾರಿ ವ್ಯತ್ಯಾಸ. ಹಾಗಂತ ನಾನು ಪೇಜಾವರ ಶ್ರೀಗಳಲ್ಲಿ ಕಾಳಜಿ ಇಲ್ಲ ಎಂದು ಹೇಳುತ್ತಿಲ್ಲ. ಅವರಲ್ಲಿ ಕಾಳಜಿ ಇದೆಯಾದ್ರೂ ಅವರ ಅನುಯಾಯಿಗಳು ಏನಂತಾರೋ ಏನೋ ಎಂಬ ಅಳಕು ಅವರಲ್ಲಿ ಅಡಗಿಕೊಂಡಿದ್ದೇ ಅವರನ್ನು ಸಹಪಂಕ್ತಿ ಭೋಜನದಿಂದ ದೂರವಿಟ್ಟಂತಿದೆ. ಒಂದಂತೂ ಸ್ಪಷ್ಟ. ದಲಿತ ಪರ ಕಾಳಜಿ ಉಳ್ಳಂಥ ಮಠಾಧೀಶರ ಸಂಖ್ಯೆ ಭಾಳ ಕಡಿಮೆ ಇದೆ. ಸ್ವಜನ ಪಕ್ಷಪಾತದವರೇ ಹೆಚ್ಚಿದ್ದಾರೆ.
    ಅಂದ್ರೆ ಮಠಾಧೀಶರಲ್ಲಿಯೂ ಜಾತಿ ಭೇದ ಇದೆ ಅಂತೀರಾ..
    ಯಾವುದೋ ರಾಜಕಾರಣಿ ಅಥವಾ ಮೇಲ್ವರ್ಗದ ಮಠಾಧೀಶರು ಜಾತಿ ನಿರ್ಮೂಲನೆ ಆಗಬೇಕು, ಆರ್ಥಿಕವಾಗಿ ಮೇಲೆ ಬರಬೇಕು ಎಂದೆಲ್ಲ ಹೇಳಿದಾಕ್ಷಣ ನಾನು ಅವರು ಹಂಗಾ ಇದ್ದಾರ ಅಂತ ತಿಳಿಯಲ್ಲ. ಅವರ ಒಳಗಿನ ನಿಲುವು ಬೇರಯಿದ್ದು, ಜನರ ದಿಲ್ ಖುಷ್ ಮಾಡೋದಕ್ಕ ಮಾತಾಡ್ತಾರ. ಬಸವಣ್ಣನ ಹೆಸರು ಹೇಳಿಕೊಂಡು ಸಮಾನತೆ ಬಗ್ಗೆ ಭಾಷಣ ಹೇಳೋವಾಗ ಭಾರಿ ಚಪ್ಪಾಳೆ ತಟ್ತಾರೆ. ಆದರೆ ಪ್ರಾಕ್ಟಿಕಲ್ ಬಂದಾಗ ಮೇಲ್ವರ್ಗದವರು ದೂರ ಸರೀತಾರೆ. ಹೀಗಾಗಿ ಬಹಳಷ್ಟು ಜನ ಮಠಾಧೀಶರೂ ಸಮಾಜದವರಿಗೆ ಹೆದರಿ ಮಾತಾಡ್ತಾರ ಒಮ್ಮಿಂದೊಮ್ಮೆ ಬದಲಾವಣೆ ಹೇಗೆ ಸಾಧ್ಯ ಎಂದು ಹೇಳುತ್ತ ಜಾತಿ ಇರಬೇಕು ಎಂಬ ನಿಲುವನನ್ನೂ ಹೊಂದಿದವರಿದ್ದಾರೆ.
= ಕಲ್ಯಾಣದಲ್ಲಿ ಕೆಲ ಮಠಾಧೀಶರು ಕಾಣ್ಲಿಲ್ಲ, 'ನಡಿಗೆ' ಯಶಸ್ವಿ ಹೇಗಂತೀರಾ?
    ಎಷ್ಟು ಜನ ಬರ್ತಾರೆ ಹೋಗ್ತಾರೆ ಎಂಬೋದು ಮುಖ್ಯವಲ್ಲ. ಬಸವಕಲ್ಯಾಣದಲ್ಲಿ ನಿಡುಮಾಮಿಡಿ ಶ್ರೀಗಳು ಹಾಕಿಕೊಂಡ ಕೆಲಸ ಮಾನವೀಯತೆಗೆ, ಸಂವಿಧಾನಕ್ಕೆ ಹಾಗೂ ಮನುಷ್ಯತ್ವಕ್ಕೆ ಅನುಗುಣವಾಗಿತ್ತು. ಕಾರ್ಯಕ್ರಮಕ್ಕೆ ಬಹುಸಂಖ್ಯಾತರು ಬರಲಿಲ್ಲವಾದ್ರೆ ಏನಂತೆ ಅಲ್ಪಸಂಖ್ಯೆಯಲ್ಲಿದ್ದ ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದು ವಿಶೇಷ. ಬಸವಣ್ಣನನ್ನು ಧಾರ್ಮಿಕವಾಗಿ ವೈಭವೀಕರಣ ಮಾಡಿದಾಗ ಬಹಳಷ್ಟು ಜನ ಒಪ್ಪುತ್ತಾರೆ. ಸಾಮಾಜೀಕರಣ ವಿಷಯ ಬಂದಾಗ ಹಿಂದೆ ಸರೀತಾರೆ. ಬಸಣ್ಣನ ಅನುಯಾಯಿಗಳೆಂದು ಹೇಳಿಕೊಳ್ಳುವ ಸ್ವಾಮೀಜಿಗಳು, ಪ್ರಭಾವಿ ಜನ ಹೇಳೋದಕ್ಕೂ ಬದುಕುವದಕ್ಕೂ ಭಾರಿ ಅಂತರವಿದೆ.
= ಮೀಸಲು, ಹಕ್ಕು ಕೊಟ್ಟಾಯ್ತು, ಸಮಾನತೆ ಸಾರಲಾಯ್ತು ಈಗಲೂ..
    ಹೌದು. ಸಂವಿಧಾನ ಬಂತು ನಮಗೊಂದು ಕಾಯ್ದೆ ರೂಪಿಸಲಾಯ್ತು ಆಶ್ರಯ ಕೊಟ್ಟಿತು. ಆದರೆ ನಾಯಿ ಬೆಕ್ಕುಗಳನ್ನು, ಕ್ಷುಲ್ಲಕ ಪ್ರಾಣಿಗಳನ್ನ ಮುತ್ತಿಕ್ಕುವವರು ಇಂದಿಗೂ ಮನುಷ್ಯ ಮನುಷ್ಯನನ್ನು ಮುಟ್ಟಿದರೆ ಮೈಲಿಗೆ ಎಂಬೋದು ತಪ್ಪಿಲ್ಲ. ದಲಿತರು ಯಾವುದೋ ಕಟ್ಟೆ ಮುಟ್ಟಿದ್ರೆ, ಮನ ಅಂಗಳ ಮುಟ್ಟಿದ್ರೆ ಬೆಂಕೀನೆ ಹತ್‌ತಾದ! ಅವರೆಲ್ಲ ಶಿಕ್ಷೆಗೆ ಒಳಗಾಗ್ತಾರೆ, ದಮನ, ದೌರ್ಜನ್ಯಕ್ಕೆ ಒಳಗಾಗ್ತಾರೆ. ಇದೇನಾ ಬದಲಾವಣೆ? ಕಾಯ್ದೆ, ಕಾನೂನು ಹಾಗೂ ಮೀಸಲಿನಿಂದ ಏನೂ ಆಗಿಲ್ಲ ಅಂತ ನಾನು ಹೇಳಲ್ಲ. ದಲಿತರು ರಾಷ್ಟ್ರಪತಿ, ಮುಖ್ಯಮಂತ್ರಿ, ಶಾಸಕರೂ ಆಗಿದ್ದಾರೆ, ಐಎಎಸ್, ಐಪಿಎಸ್ ಆಗಿದ್ದಾರೆ. ನೂರಕ್ಕೆ ನೂರು ಲಾಭ ಆಗಿರಲ್ಲಿಕ್ಕಿಲ್ಲ ಆದರೆ ಕೊಂಚ ಆಗಿದ್ದಂತೂ ಹೌದು.
    ಅಸ್ಪೃಶ್ಯತೆ, ಜಾತಿಯತೆ ಹೋಗಲಾಡಿಸುವ ಔಷಧಿಯಾದ್ರೂ ಏನು?
    ನೋಡ್ರಿ ಯಾವುದೇ ಪ್ರಯತ್ನ ಒಂದು ಪ್ರಯತ್ನವಂತೂ ಹೌದು. ಹಾಗೇನೆ ಮೇಲ್ವರ್ಗದ ಜನರಲ್ಲಿ ಔದಾರ್ಯ ಬಾರದೆ ಏನೋ ಒಂದು ರೀತಿಯಿಂದ ದಮನಕಾರಿ, ಅಲಕ್ಷ ಭಾವನೆ ಇದ್ದಲ್ಲಿ ದಲಿತರು ಮೇಲೆ ಬರೋದು ಕಷ್ಟ ಎಂಬುವದು ನನ್ನ ಆತಂಕ. ಒಂದು ವೇಳೆ ಕೆಲ ಕಾಲಾನಂತರ ಈ ಅಸ್ಪೃಶ್ಯರು, ಹಿಂದುಳಿದವರು, ಅಲಕ್ಷಿತರು ಹಾಗೂ ಶೋಷಿತರು 'ನಮಗೆ ಈ ದೇಶದ ಮೇಲ್ವರ್ಗದವರ ದೌರ್ಜನ್ಯದಿಂದ ಬದುಕಗಾಲ್ಲ, ಸಮಾನತೆಯ ನ್ಯಾಯವೇ ಕಾಣಿಸ್ತಿಲ್ಲ. ಸಂವಿಧಾನ ಬಂದ್ರೂ ನಿಜವಾದ ನ್ಯಾಯ ಸಿಕ್ಕಿಲ್ಲ. ನಮ್ಮ ಹಕ್ಕು ಉಳಿಯಲ್ಲ ನಮಗೆ ಪ್ರತ್ಯೇಕ ರಾಜ್ಯ ಬೇಕು' ಅಂದ್ರೆ ಏನು ಮಾಡೋದು? ಹೀಗಾಗಬೇಕೆಂದು ನಾನು ಬಯಸೋಲ್ಲವಾದ್ರೂ ಅಸ್ಪೃಶ್ಯತೆಯಂಥ ಹೀನಾಯ ಕೃತ್ಯಗಳು ಶೋಷಿತರನ್ನು ಭಾರಿ ಸಂಕಷ್ಟಕ್ಕೆ ಸಿಲುಕಿಸಿದ್ದಂತೂ ಹೌದು. ಅಷ್ಟಿಷ್ಟು ಇರುವ ಪ್ರಗತಿಪರ ಚಿಂತಕರು ಬದಲಾವಣೆಯ ಗಾಳಿ ಬೀಸುವಂತೆ ಮಾಡಬೇಕಿದೆ ಅಷ್ಟೇ.  

-ಅಪ್ಪಾರಾವ್ ಸೌದಿ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement