ಕಾಂಗ್ರೆಸ್ ನಿದ್ದೆಗೆಡಿಸಿರುವ ಮೋದಿ ಅನುಕಂಪದ ಅವತಾರ!
ತಮ್ಮ ನಿದ್ರೆಯಲ್ಲೂ ನರೇಂದ್ರ ಮೋದಿಯವರ ವಿರುದ್ಧ ವಿಷಕಾರುತ್ತಿದ್ದವರಿಗೆ ಈಗ ಮನಸ್ಸಿಲ್ಲದ ಮನಸ್ಸಿನಿಂದ ಮೋದಿಯವರನ್ನು ಮರು ವಿಮರ್ಶಿಸಬೇಕಾದ ಅಸ್ತಿತ್ವದ ಪ್ರಶ್ನೆಯೊಂದು ಕಾಡುತ್ತಿದೆ. ಆ ಪಾಳೆಯದಲ್ಲಿರುವ ದುರ್ಬಲರು ಹಾಗೂ ಅವಕಾಶವಾದಿಗಳು ಅದಾಗಲೇ ನವ ವಾಸ್ತವದೊಂದಿಗೆ ಜೀಕುವುದನ್ನು ಕಲಿತಿದ್ದಾರೆ. ಶಶಿ ತರೂರ್ ಅವರಂಥ ಸಂಸದರಿಗೆ ಹೀಗೆ ಮರು ವಿಮರ್ಶೆಗೆ ಇಳಿಯುವುದಕ್ಕೆ ಅವರದ್ದೇ ಉದ್ದೇಶಗಳಿದ್ದಿರಬಹುದು. ಆದರೆ ಬಹುಪಾಲು ಟೀಕಾಕಾರರು ಮಾತ್ರ ತಾವು ಕ್ರಿಮಿನಲ್ ಎಂದೇ ಬಿಂಬಿಸಿದ ನರೇಂದ್ರ ಮೋದಿಯವರು ಈ ಪರಿ ವಿಜಯವನ್ನು ಸಾಧಿಸಿದ್ದರ ಬಗ್ಗೆ ನಿಬ್ಬೆರಗಾಗಿಬಿಟ್ಟಿದ್ದಾರೆ.
ಮೋದಿಯವರ ಸಾರ್ವಜನಿಕ ಚಹರೆಯನ್ನು ರೂಪಿಸುವುದರಲ್ಲಿ ಅವರ ವಿರುದ್ಧ ನಡೆದ ನಿರಂತರ ನಿಂದನಾ ಅಭಿಯಾನ ಎಷ್ಟು ಕೊಡುಗೆ ನೀಡಿತು ಹಾಗೂ ತಮ್ಮ ಟೀಕಾಕಾರರ ಮರ್ಯಾದೆ ಕಳೆಯುವ ಮೋದಿಯವರ ದೃಢ ನಿರ್ಧಾರ ಎಷ್ಟು ಕೆಲಸ ಮಾಡಿತು ಅಂತ ಅಳೆಯುವುದು ಕಷ್ಟ. ಆದರೆ ಮೋದಿಯವರು ಮಣಿ ಶಂಕರ್ ಅಯ್ಯರ್ ಹಾಗೂ ತೀಸ್ತಾ ಸೆತಲ್ವಾಡ್ರಂಥ ತಮ್ಮ ಪ್ರಖರ ನಿಂದಕರಿಗೆ ಧನ್ಯವಾದ ಹೇಳಬೇಕಿರುವುದಂತೂ ಖರೆ. ಅವರ ಆ ಮಟ್ಟದ ನಿಂದೆ ಇರದಿದ್ದರೆ ಸಾಮಾನ್ಯ ಜನರಿಗೆ ತಾವೇನು ಎಂದು ಅರ್ಥ ಮಾಡಿಸುವುದು ಮೋದಿಯವರಿಗೆ ತುಸು ಕಷ್ಟವೇ ಆಗುತ್ತಿತ್ತೇನೋ. ಮುಖ್ಯಮಂತ್ರಿಯಾಗಿ ಅವರು ಸಾಧಿಸಿದ್ದ ಯಶಸ್ಸೇ ಅತಿದೊಡ್ಡ ಸಕಾರಾತ್ಮಕ ಅಂಶವಾಗಿತ್ತು ಎಂಬುದು ಹೌದಾದರೂ ಸೆಕ್ಯುಲರಿಸ್ಟರ ಪಾಳೆಯವು ಇವರನ್ನು ವಿರೋಧಿಸುವ ಭರದಲ್ಲಿ ನೀಡಿದ ಪುಕ್ಕಟೆ ಪ್ರಚಾರವೂ ಮೋದಿಯವರನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಸ್ತುವನ್ನಾಗಿಸುವುದಕ್ಕೆ ಸಹಕರಿಸಿತು.
ಮೇ 16ರ ಫಲಿತಾಂಶ ಇಂಥವರನ್ನೆಲ್ಲ ಬೆಚ್ಚಿ ಬೀಳಿಸಿದ್ದು ಒಂದೆಡೆ. ಇನ್ನೂ ಹೆಚ್ಚಿನ ಆಘಾತ ಅವರಿಗೆ ಕಾದಿತ್ತು. ಕಾಂಗ್ರೆಸ್ಸಿಗರು ಹಾಗೂ ಅವರ ಸೆಕ್ಯುಲರ್ ಬೆಂಬಲಿಗರೆಲ್ಲ ಮೋದಿಯವರನ್ನು ಕ್ರಿಮಿನಲ್ ಅಂತ ಬಿಂಬಿಸುವುದಕ್ಕೆ ಪ್ರಕರಣಗಳ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದನ್ನಾದರೂ ನೆನಪಿಸಿಕೊಂಡು ರಾಬರ್ಟ್ ವಾದ್ರಾರನ್ನಾದರೂ ಬೆನ್ನತ್ತಬಹುದೆಂಬ, ಅಲ್ಲಲ್ಲ, ಆ ಮೂಲಕ ಪ್ರಿಯಾಂಕಾ ಗಾಂಧಿಯನ್ನು ಕಟಕಟೆಗೆ ತರಬಹುದೆಂಬ ನಿರೀಕ್ಷೆ ಇತ್ತು. ಹತ್ತು ಜನಪಥವು ತನ್ನ ದರ್ಬಾರಿನಲ್ಲಿರುವವರನ್ನು ನಾನಾ ಸಲಹಾ ಸಮಿತಿಗಳಲ್ಲಿ, ರಾಜಭವನಗಳಲ್ಲಿ ಸ್ಥಾಪಿಸಿತ್ತಲ್ಲ, ಅವರಲ್ಲಿ ಹಲವರನ್ನು ವಜಾ ಮಾಡುವ ಹಾದಿಯನ್ನೂ ಮೋದಿ ತುಳಿಯಬಹುದಿತ್ತು. ಆದರೆ ಚುನಾವಣೆಯ ಎಲ್ಲ ಆಕ್ರಮಕ ಧೋರಣೆಗಳಿಂದ ಹೊರಬಂದ ಮೋದಿ ಸಹಾನೂಭೂತಿಯನ್ನೇ ಮೈದಾಳಿ ಸಂಸತ್ತಿನ ಎಲ್ಲ ಸದಸ್ಯರನ್ನೂ ಒಟ್ಟಿಗಿರಿಸಿಕೊಂಡು ಮುನ್ನಡೆಯುವುದಾಗಿ ಹೇಳಿದಾಗ ಟೀಕಾಕಾರರು ಪ್ರಯೋಗಿಸಬಹುದಿದ್ದ ಸಣ್ಣ ಅಸ್ತ್ರಗಳೂ ಕೆಲಸಕ್ಕೆ ಬಾರದಂತಾದವು. ಅಷ್ಟೇ ಅಲ್ಲದೇ, ಸೋನಿಯಾ ಗಾಂಧಿ ಮತ್ತವರ ಪುತ್ರ ರಾಹುಲ್ ಗಾಂಧಿಯವರನ್ನೂ ಬಹಳ ಘನತೆಯಿಂದ ಕಂಡರು. ಮನಮೋಹನ ಸಿಂಗ್ ಅವರಿಗೆ ನಿವೃತ್ತಿ ನಂತರದ ಎಲ್ಲ ಸವಲತ್ತುಗಳೂ ಸಿಗುವಂತೆ ನೋಡಿಕೊಂಡರು. ಕೇವಲ ಒಂದು ದುರದೃಷ್ಟಕರ ಕೋಮುಗಲಭೆಯನ್ನು ಆಧಾರವಾಗಿಟ್ಟುಕೊಂಡು ತಮ್ಮನ್ನು ಪ್ರತಿದಿನವೂ ಅವಮಾನಿಸಿದವರ ವಿಷಯದಲ್ಲಿ ಅವರು ಒಂದಿನಿತೂ ದ್ವೇಷಕ್ಕೆ ಎಡೆಯಿಲ್ಲದಂತೆ ನಡೆದುಕೊಂಡು ತಾವೊಬ್ಬ ಮುತ್ಸದ್ದಿ ಎಂಬುದನ್ನು ಸಾಬೀತುಪಡಿಸಿದರು.
ವಿವೇಕ ಇರುವ ಯಾರೇ ಆದರೂ, ದೇಶದಲ್ಲಿ ಕೋಮುಗಲಭೆಗಳು ಹೇಗೆ ಆಗುತ್ತವೆ ಎಂಬ ವಾಸ್ತವ ಗೊತ್ತಿಲ್ಲದಿದ್ದರೂ, ಮೋದಿಯವರನ್ನು ಎಲ್ಲವಕ್ಕೂ ಗುರಿ ಮಾಡುವದಕ್ಕೆ ಹೋಗುತ್ತಿರಲಿಲ್ಲ. ಸುಳ್ಳು ಅಫಿಡವಿಟ್ಗಳು, ಮಾಧ್ಯಮದಲ್ಲಿ ನಿಂದನಾ ಲೇಖನಗಳು, ಆಗಷ್ಟೇ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ದಂಗೆಯಲ್ಲಿ ಬೇಕಂತಲೇ ನಿಷ್ಕ್ರಿಯರಾಗಿದ್ದರೆಂಬ ದುರುದ್ದೇಶದ ಆರೋಪ ಇವ್ಯಾವವೂ ದಂಗೆಯ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕೆಂಬ ನೈಜ ಕಾಳಜಿ ಹೊಂದಿರುವವರು ಮಾಡುವ ಕೆಲಸವಾಗಿರಲಿಲ್ಲ.
ಇರಲಿ. ಈಗವೆಲ್ಲ ಇತಿಹಾಸ. ಅದಾಗಲೇ ಪ್ರಗತಿಯಲ್ಲಿರುವ ತನಿಖೆ ಮುಂದುವರಿಯಬೇಕು, ಮುಂದುವರಿಯುತ್ತದೆ. ಆದರೆ ಪ್ರಧಾನಿಯಾಗಿ ಮೋದಿಯವರಿಗೆ ಮಾಡುವುದಕ್ಕೆ ಸಾಕಷ್ಟು ಕೆಲಸಗಳಿವೆ. ಹೀಗಾಗಿ ವಿಶಾಲ ಹೃದಯದೊಂದಿಗೆ ಆವರಿಸಿಕೊಂಡ ಮೋದಿ ಟೀಕಾಕಾರರನ್ನು ಮಾತಿಲ್ಲದವರಂತೆ ಮಾಡಿದರು. ಪ್ರಧಾನಿ ಅಂತಲ್ಲದೇ ಭಾರತದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಂತೆ ಕೆಲಸ ಪ್ರಾರಂಭಿಸಿದರು. ಪ್ರಮಾಣವಚನ ಸಮಾರಂಭವೇ ಮುಂದಿನ ಸಂಕಲ್ಪಗಳನ್ನು ಬಿಚ್ಚಿಡುವ ಮಾಸ್ಟರ್ಸ್ಟ್ರೋಕ್ ಆಯಿತು. ಪಕ್ಷದಲ್ಲಿ ಬೇಸರ ಎದುರಿಸುವ ಸಂದರ್ಭ ಬಂದರೂ ಪರವಾಗಿಲ್ಲ ಎಂಬಂತೆ ಕೆಲಸಕ್ಕೆ ಬಾರದವರನ್ನೆಲ್ಲ ದೂರವಿಟ್ಟು ಸಂಪುಟ ರಚಿಸಿ ಇನ್ನೊಂದು ಶಾಕ್ ನೀಡಿದರು. ಅನವಶ್ಯಕ ಗಾತ್ರವನ್ನು ಮುಲಾಜಿಲ್ಲದೇ ತುಂಡರಿಸಿದರು.
ಚುನಾವಣೆಯಲ್ಲಿ ಸಮಯದಲ್ಲಿ ಆಕ್ರಮಣಶೀಲತೆಯಿಂದ ಮುನ್ನುಗ್ಗಿದ ಮೋದಿ ಕಾಂಗ್ರೆಸ್ಗೆ ಇಷ್ಟರಮಟ್ಟಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ದಯಪಾಲಿಸಿರಲಿಲ್ಲವೇನೋ. ಆದರೆ ಅನುಕಂಪ ತುಳುಕುತ್ತಿರುವ, ಸೌಹಾರ್ದ ಸೇತುವೆಗಳನ್ನು ಕಟ್ಟಲು ಹೊರಟಿರುವ ತಾರ್ಕಿಕ ಹೊಸ ಮೋದಿಯೇ ಸೋನಿಯಾ ಮತ್ತು ಕಂಪನಿಗೆ ನಿದ್ರೆ ಹರಣ ಮಾಡಿದೆ. ಕಾಂಗ್ರೆಸ್ನ ಜತೆ ಸಂಘರ್ಷಕ್ಕೆ ಇಳಿದಿದ್ದರೆ ಅದು ಅವರಿಗೇ ವರದಾನವಾಗಿಬಿಡುತ್ತಿತ್ತೇನೋ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡುಹೋಗುವುದಕ್ಕೆ ನಾನು ಬದ್ಧ ಎಂದು ನಗೆ ಸೂಸುತ್ತಿರುವ ಮೋದಿಯವರ ಪ್ರೇಮಪರ್ವಕ್ಕೆ ಪ್ರತಿಕ್ರಿಯಿಸುವುದು ಹೇಗೆಂದು ತಿಳಿಯದೇ ಕಾಂಗ್ರೆಸ್ ಕಂಗಾಲಾಗಿದೆ. 1977-79ರ ಅವಧಿಯಲ್ಲಿ ಜನತಾ ಪಕ್ಷದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಚರಣ್ ಸಿಂಗ್, ಅದು ಹೇಗೆ ಇಂದಿರಾ ಮತ್ತು ಅವರ ಪುತ್ರ ಸಂಜಯ್ ವಿರುದ್ಧ ಇನ್ನಿಲ್ಲದಂತೆ ಕ್ರಮ ಜರುಗಿಸುವುದಕ್ಕೆ ಹೋಗಿ ಸೋತವರ ಪರ ಮತ್ತೆ ಅನುಕಂಪ ಚಿಗುರುವುದಕ್ಕೆ ಕಾರಣರಾಗಿದ್ದರು ಎಂಬುದು ಕೆಲವರಿಗಾದರೂ ನೆನಪಿರಬಹುದು. ಅವರ ಈ ಆಸಕ್ತಿಯೇ ಮುನ್ನೆಲೆಯಲ್ಲಿದ್ದದ್ದರಿಂದ ಆಡಳಿತ ಸುಧಾರಣೆಯೂ ಹಿಂದೆ ಬಿದ್ದು ಜನರು ಜನತಾ ಸರ್ಕಾರವನ್ನು ದೂಷಿಸುವಂತಾಯಿತು.
ಇವೆಲ್ಲಕ್ಕೂ ಭಿನ್ನವಾಗಿ ಮೋದಿ ಉತ್ತಮ ಆಡಳಿತ ನೀಡುವುದಕ್ಕಷ್ಟೇ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದಾರೆ. ಆಡಳಿತ ಸುಸ್ಥಿರವಾದರೆ, ಹಣದುಬ್ಬರ ನಿಯಂತ್ರಣ ಸಾಧ್ಯವಾದರೆ, ಕಾನೂನು ವ್ಯವಸ್ಥೆ ಉತ್ತಮಗೊಳಿಸಿದರೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಇನ್ಯಾವ ದಾರಿಯೂ ಬೇಕಾಗಿಲ್ಲ ಅಂತ ಮೋದಿ ನಿರ್ಧರಿಸಿದ್ದಾರೆ. ಈ ಮೂಲಕವೇ ತಮ್ಮನ್ನು ನರಹಂತಕ ಎಂದೆಲ್ಲ ಜರೆದವರನ್ನು ಅಪ್ರಸ್ತುತರನ್ನಾಗಿಸುವತ್ತ ಮೋದಿ ನಡೆಯಿದೆ.
-
ಕುಶಾಲು: ದೇವರು ನಿಜಕ್ಕೂ ಕರುಣಾಮಯಿ ಅಲ್ಲವೇ? ಏಕೆಂದರೆ ಅರುಣ್ ಜೇಟ್ಲಿಯವರ ಅಭಿಮಾನಿ ಸಂಘವು ಹೆಚ್ಚುತ್ತಿರುವ ಉಷ್ಣಾಂಶಕ್ಕೆ ದೇವರನ್ನೇ ದೂಷಿಸಿ ನಗರಗಳಲ್ಲಿ ಭಿತ್ತಿಪತ್ರ ಅಂಟಿಸುವ ಬಗ್ಗೆ ಯೋಚಿಸಿತ್ತಂತೆ. ಅಷ್ಟರಲ್ಲಿ ಮಳೆ ಸುರಿಯಬೇಕೇ? ಚುನಾವಣೆಯಲ್ಲಿ ಆ ಪರಿ ಸೋತ ಎಷ್ಟು ಮಂದಿಗೆ ಗುರುತರ ಹೊಣೆಗಾರಿಕೆಯ ಸಚಿವ ಸ್ಥಾನ ಸಿಗುವುದಕ್ಕೆ ಸಾಧ್ಯ ಹೇಳಿ. ಆದರೆ ಮೋದಿ ರಾಜ್ನ ಅರುಣ್ ಜೇಟ್ಲಿ ಇದಕ್ಕೆ ಅಪವಾದ.
-
ಅನಗತ್ಯ ಬೇಡಿಕೆ: 44 ಸಂಸದರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಂಸತ್ತಿನಲ್ಲಿ ಪ್ರತಿಪಕ್ಷ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿ ಲೋಕಸಭೆ ಸ್ಪೀಕರ್ ಸುಮಿತ್ರ ಮಹಾಜನ್ ಅವರಿಗೆ ಸೋನಿಯಾ ಗಾಂಧಿಯವರು ಪತ್ರ ಬರೆದಿದ್ದಾರೆ. ಇನ್ನೂ ಹತ್ತು ಸೀಟು ಬಂದುಬಿಟ್ಟಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಲೀ ಅಥವಾ ಮೇಡಂ ಸೂಚಿಸಿದ ಇನ್ಯಾರಿಗೇ ಆಗಲಿ ಅನಾಯಾಸವಾಗಿ ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿಬಿಡುತ್ತಿತ್ತು. ಆದರೆ ಈಗಿನ ಸ್ಥಿತಿ ಹಾಗಿಲ್ಲವಲ್ಲ? ಹೀಗಾಗಿ ಸೋನಿಯಾ ಪತ್ರ ಬರೆಯುವ ಅಗತ್ಯವೇ ಇರಲಿಲ್ಲ. ಕಾಯ್ದೆ ಆಗಲೀ, ಈ ಹಿಂದಿನ ಪದ್ಧತಿಯಾಗಲೀ ಇಂಥದೊಂದು ಸ್ಥಾನಮಾನ ನೀಡುವುದಕ್ಕೆ ಒಪ್ಪುವುದಿಲ್ಲವಲ್ಲ. ಇಷ್ಟಾಗಿಯೂ ಹೊಸದೊಂದು ಪದ್ಧತಿ ಪ್ರಾರಂಭಿಸಿ ಇವರಿಗೆ ಪ್ರತಿಪಕ್ಷ ಸ್ಥಾನ ಕೊಡುವುದಾದರೆ, ಅದನ್ನೇ ಪ್ರಾದೇಶಿಕ ಪಕ್ಷಗಳಿಗೆ ನೀಡುವ ಹೊಸ ನಡೆ ಅನುಸರಿಸಬಹುದಲ್ಲ. ಎಐಎಡಿಎಂಕೆ, ಟಿಎಮ್ಸಿ, ಬಿಜೆಡಿ ಸೇರಿದರೆ ತೊಂಬತ್ತು ಸಂಸದರ ಬಲವಾಗುತ್ತದೆ. ಅದು ಸಂಸತ್ತಿನ ಒಳಗೆ, ಹೊರಗೆ ಸರ್ಕಾರವನ್ನು ಪ್ರಶ್ನಿಸುವ ಉತ್ತಮ ಬಲ ಆಗಬಲ್ಲದು.
-ವೀರೇಂದ್ರ ಕಪೂರ್
virendra1946@yahoo.co.in