ನಮ್ಮ ಅಕ್ರಮವೇನು?
ಗುರುವಾರದ ಕನ್ನಡಪ್ರಭದಲ್ಲಿ 'ತನಿಖೆ ಮುಗಿದರೂ ಈ 35 ಮಂದಿಗೆ ಜಾಮೀನೇಕೆ...
ಗುರುವಾರದ ಕನ್ನಡಪ್ರಭದಲ್ಲಿ 'ತನಿಖೆ ಮುಗಿದರೂ ಈ 35 ಮಂದಿಗೆ ಜಾಮೀನೇಕೆ ಸಿಗುತ್ತಿಲ್ಲ' ಎಂಬ ಲೇಖನದಲ್ಲಿ ಗಣಿ ಉದ್ಯಮದಲ್ಲಿ ತೊಡಗಿಕೊಂಡವರ ಗೋಳನ್ನು ತೆರೆದಿಟ್ಟಿದ್ದಾರೆ. ಗಣಿ ಎಂದೊಡನೆಯೇ ಅಕ್ರಮ ಎಂಬ ಮುದ್ರೆ ಒತ್ತಿಬಿಡುವ ವಾತಾವರಣದ ನಡುವೆ ಇನ್ನೊಂದು ಮುಖ ತೋರಿಸುವ ಅಭಿಪ್ರಾಯಗಳಿಗೂ ಜಾಗವಿದೆಯಲ್ಲ ಅಂತ ಸಮಾಧಾನವಾಯಿತು. ಅದೇ ಧೈರ್ಯದಿಂದ ಅಂಥದೇ ಗೋಳುಂಡ ಕುಟುಂಬದ ಪ್ರತಿನಿಧಿಯಾಗಿ ಕೆಲ ಮಾತುಗಳನ್ನು ದಾಖಲಿಸುತ್ತಿದ್ದೇನೆ.
ನಮಗೆ ಗಣಿಗಾರಿಕೆ ನಡೆಸುವ ಪರವಾನಗಿ ಇರಲಿಲ್ಲ. ನಾವು ಗಣಿಗಾರಿಕೆ ನಡೆಸಿಯೂ ಇಲ್ಲ. ನಾವು ಅದಿರು ಖರೀದಿಸಿದ್ದಕ್ಕೆ ಚೆಕ್ನಲ್ಲಿ ಹಣ ನೀಡಿದ್ದೇವೆ. ಸರ್ಕಾರ ಗಣಿಗಾರಿಗೆ ನಡೆಸುವವರಿಗೆ ನೀಡಿದ ಪರವಾನಗಿಯ ಆಧಾರದಲ್ಲಿ ನಾವು ಅದಿರು ಸಾಗಿಸಿದ್ದೇವೆ.
ನಾವೇನು ಅದಿರನ್ನು ಗಣಿಗಳಿಂದ ನೇರವಾಗಿ ವಿಮಾನದಲ್ಲಿ ಬಂದರಿಗೆ ಸಾಗಿಸಿದ್ದೇವೆಯೇ? ಅದಿರು ಬಂದರು ಸೇರಬೇಕೆಂದರೆ ಲಾರಿಯಲ್ಲಿ 300-400 ಕಿ.ಮೀ. ಸಾಗಬೇಕು. ದಾರಿಯಲ್ಲಿ ಗಣಿ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಆರ್ಟಿಒ ಕಚೇರಿ ಮತ್ತು ತಪಾಸಣಾ ಕೇಂದ್ರಗಳಿವೆ. ಅವರೆಲ್ಲ ಗಣಿಗಾರಿಕೆ ನಡೆಸುವವರು ಕೊಟ್ಟ ಟ್ರಿಪ್ಶೀಟ್ಗೆ ಸರಕಾರಿ ಸೀಲು ಹಾಕಿಕೊಟ್ಟಿದ್ದಾರೆ.
ಬಂದರು ತಲುಪಿದ ಮೇಲೆ ಅಲ್ಲಿ ಒಂದು ಹಡಗಿಗೆ 1.23 ಕೋಟಿಯಂತೆ ತೆರಿಗೆ ಹಣ ಪಾವತಿಸಿದ್ದೇವೆ. ಇಷ್ಟು ಮಾಡಿಯೂ ನಾವು ಜೈಲು ಸೇರುವಂತಾಗಿದೆ. ನ್ಯಾಯಾಲಯ ಕೂಡ ನಮ್ಮತ್ತ ಕನಿಕರದ ದೃಷ್ಟಿ ಬೇಡ ನ್ಯಾಯದ ದೃಷ್ಟಿಯನ್ನೂ ಬೀರುತ್ತಿಲ್ಲ. ಗಣಿ ಪ್ರಕರಣ ಅಂದಕೂಡಲೇ 'ದೇಶದ್ರೋಹಿಗಳು' ಎಂಬರ್ಥದಲ್ಲಿ ನೋಡಲಾಗುತ್ತಿದೆ.ಅದರಲ್ಲಿ ನಮ್ಮ ಪಾತ್ರವೇನಿತ್ತು? ಎಂಬ ಬಗ್ಗೆ ಯಾರೂ ವಿಚಾರ ಮಾಡುತ್ತಿಲ್ಲ. ಕೊಲೆಗಾರರಿಗೆ, ಅಕ್ರಮ ಗಣಿ ಮಾಡಿದವರಿಗೆಲ್ಲ ಜಾಮೀನು ಸಿಕ್ಕಿದೆ. ಆದರೆ ಅಕ್ರಮ ಗಣಿಗಾರಿಕೆಯ ಅದಿರು ಎಂದು ಗೊತ್ತಿದ್ದೂ ಸಾಗಿಸಿದ್ದೀರಿ ಎಂಬ ಆರೋಪ ಹೊತ್ತಿರುವ ನಮಗೆ ಜಾಮೀನು ಸಿಗುತ್ತಿಲ್ಲ.
ಇದು ಒಬ್ಬಿಬ್ಬರ ಕತೆಯಲ್ಲ. ಇಂತಹ ಸಾಕಷ್ಟು ಜನ ಸಾಗಣೆದಾರರು ಗಣಿ ಹಗರಣದ ನೆಪದಲ್ಲಿ ಜೈಲು ಸೇರಿದ್ದಾರೆ. ಜಾಮೀನು ಕೂಡ ಸಿಗುತ್ತಿಲ್ಲ. ನಮ್ಮ ಮೇಲಿನ ತನಿಖೆ ಪೂರ್ಣಗೊಂಡಿದೆ. ಸಿಬಿಐನವರು ಚಾರ್ಜ್ಶೀಟ್ ಕೂಡ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ ಅಂದರೆ ಆರೋಪಪಟ್ಟಿ ಸಲ್ಲಿಕೆಯಾದ ನಂತರ ಸಾಕ್ಷಿನಾಶದ ಪ್ರಶ್ನೆಯೂ ಬರುವುದಿಲ್ಲ. ಆದರೂ ನಮಗೆಲ್ಲ ಜಾಮೀನು ಸಿಗುತ್ತಿಲ್ಲ. ಜಾಮೀನು ಬಿಡಿ ಯಾರೂ ನಮ್ಮ ಅಳಲು ಏನಿದೆ ಎಂಬುದನ್ನು ಕೇಳಲೂ ತಯಾರಿಲ್ಲ. ಹಿಂದೆ ಮುಂದೆ ಯೋಚಿಸದೇ 'ದೇಶವನ್ನೇ ಕೊಳ್ಳೆಹೊಡೆದವರು' ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸರ್ಕಾರ ಗಣಿ ನಡೆಸುವವರಿಗೆ ಎಷ್ಟು ಗಣಿಗೆ ಪರವಾನಗಿ ನೀಡಿದೆ ಎಂಬುದನ್ನು ನಾವು ಹೇಗೆ ಪರೀಕ್ಷಿಸಬೇಕು? ಅಥವಾ ನಾವು ಕೇಳಿದರೆ ಗಣಿ ಮಾಲಿಕರು ಆ ಮಾಹಿತಿ ಕೊಟ್ಟುಬಿಡುತ್ತಾರಾ? ಅದನ್ನು ಕೇಳುವುದು ನಮ್ಮ ಕೆಲಸವೂ ಅಲ್ಲ. ಸರ್ಕಾರ ಎಷ್ಟು ಗಣಿಗಾರಿಕೆಗೆ ಅವಕಾಶ ನೀಡಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ನಾವು ಖರೀದಿಸಿದ ಅದಿರಿಗೆ ಚೆಕ್ನಲ್ಲಿ ಹಣ ಪಾವತಿಸಿದ್ದೇವೆ. ಎಷ್ಟು ಅದಿರು ಸಾಗಿಸಿದ್ದೇವೆ ಎಂಬುದಕ್ಕೆ ಲೆಕ್ಕವಿದೆ. ಅಕಸ್ಮಾತ್ ನಾವು ಅಕ್ರಮವಾಗಿ ಅದಿರು ಸಾಗಿಸಿದ್ದೇವೆ ಎಂದಾಗಿದ್ದರೆ ಗಣಿ, ಆರ್ಟಿಒ ಅಧಿಕಾರಿಗಳು ಯಾಕೆ ನಮ್ಮ ಲಾರಿಗಳನ್ನು ತಡೆದು ನಿಲ್ಲಿಸಿಲ್ಲ? ನಮ್ಮ ಮೇಲೆ ಯಾಕೆ ಪ್ರಕರಣ ದಾಖಲಿಸಲಿಲ್ಲ? ನಮ್ಮ ಲಾರಿಗಳನ್ನು ಯಾಕೆ ವಶಪಡಿಸಿಕೊಳ್ಳಲಿಲ್ಲ? ಇದೆಲ್ಲದರ ಅರ್ಥ ನಮ್ಮದು ತಪ್ಪಿರಲಿಲ್ಲ ಎಂದಲ್ಲವೇ?
ಇಷ್ಟಕ್ಕೂ ಅದಿರನ್ನು ಗಾಳಿಯಲ್ಲಿ ಸಾಗಿಸಿಲ್ಲ. ಸಮುದ್ರ ಮೂಲಕವೇ ಅಂದರೆ ಬಂದರುಗಳ ಮೂಲಕವೇ ರಫ್ತು ಮಾಡಲಾಗಿದೆ. ಅದಕ್ಕೆ ಸರ್ಕಾರ ತೆರಿಗೆಯನ್ನೂ ಕಟ್ಟಿಸಿಕೊಂಡಿದೆ. ಸರ್ಕಾರಕ್ಕೆ ತಾನು ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದೆಷ್ಟು? ಈಗ ರಫ್ತಾಗುತ್ತಿರುವ ಅದಿರೆಷ್ಟು ಎಂಬುದು ಬಂದರಿನಲ್ಲಿ ತೆರಿಗೆ ಕಟ್ಟಿಸಿಕೊಳ್ಳುವಾಗ ಇರಲಿಲ್ಲವೇ? ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಮಾಣವೆಷ್ಟು ಮತ್ತು ರಫ್ತಾಗುತ್ತಿರುವ ಪ್ರಮಾಣವೆಷ್ಟು ಎಂಬುದನ್ನು ತಾಳೆಹಾಕಿ ನೋಡಿದರೆ ಅಲ್ಲೇ ತಕ್ಷಣಕ್ಕೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬರುತ್ತಿತ್ತು. ಅದಕ್ಕಾಗಿ ಹೆಚ್ಚೇನೂ ಕಷ್ಟಪಡಬೇಕಾದ ಅಗತ್ಯ ಇರಲಿಲ್ಲ.
ನಮ್ಮ ಲಾರಿಗಳಲ್ಲಿ ಸಾಗಿಸುತ್ತಿರುವ ಅದಿರು ಅಕ್ರಮ ಗಣಿಗಾರಿಕೆಯಿಂದ ಬಂದಿದ್ದು ಎಂಬುದು ಸರ್ಕಾರದ ಅಧಿಕಾರಿಗಳಿಗೇ ಗೊತ್ತಾಗಿಲ್ಲ. ಲಾರಿಗಳು ತೋರಿಸಿದ ಪರವಾನಗಿ ನಕಲಿಯಾಗಿದ್ದರೆ ಆಗಲೇ ಅದನ್ನು ಕಂಡುಹಿಡಿಯಲು ಸರ್ಕಾರಿ ಅಧಿಕಾರಿಗಳಿಗೇ ಆಗಲಿಲ್ಲ ಅಂತಾಯಿತು. ಅವರಿಗೇ ಆಗಲಿಲ್ಲ ಅಂದ ಮೇಲೆ ಅದನ್ನು ವ್ಯಾಪಾರದ ದೃಷ್ಟಿಯಿಂದ ಸಾಗಿಸುವ ನಮಗೆ ಹೇಗೆ ಗೊತ್ತಾಗಬೇಕು? ಗಣಿಗೆ ಪರವಾನಗಿ ಕೊಟ್ಟಿದ್ದು ಸರ್ಕಾರ, ರಫ್ತಾಗುವಾಗ ತೆರಿಗೆ ಕಟ್ಟಿಸಿಕೊಂಡಿದ್ದೂ ಸರ್ಕಾರ. ಇವೆರಡರ ನಡುವೆ ನಾವು ಅದಿರು ಸಾಗಿಸಿದ್ದು ಮಾತ್ರ. ಆದರೂ ನಮ್ಮನ್ನು ಬಂಧಿಸಲಾಗಿದೆ. ಬಂಧಿಸಿದರೆ ಪರವಾಗಿಲ್ಲ 6-7 ತಿಂಗಳಿಂದ ಜಾಮೀನು ಕೂಡ ನೀಡಲಾಗುತ್ತಿಲ್ಲ. ಇಷ್ಟೆಲ್ಲದರ ನಡುವೆಯೂ ನಾವು ತಪ್ಪುಮಾಡಿದ್ದೇವೆ ಎಂಬುದು ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ಆದರೆ ದೋಷಾರೋಪಣೆ ಸಲ್ಲಿಸಿದ ಮೇಲೂ ನಮ್ಮನ್ನು ಜೈಲಿನಲ್ಲೇ ಇಟ್ಟಿರುವುದು ಎಷ್ಟರಮಟ್ಟಿಗೆ ಸರಿ? ನಮ್ಮ ಕುಟುಂಬಗಳ ಸ್ಥಿತಿ ಹೇಗಿರಬೇಕು? ಅವರ ಪರಿಸ್ಥಿತಿ ಏನು?
ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೇನು ಹೇಳುವುದು? ಮಕ್ಕಳನ್ನು ಜೈಲಿಗೆ ಕರೆದುಕೊಂಡು ಹೋಗಿ ತೋರಿಸಲಾದೀತೇ? ಮಕ್ಕಳು ತಂದೆ ಎಲ್ಲಿ ಹೋಗಿದ್ದಾರೆಂದು ಕೇಳಿದರೆ ಕುಟುಂಬದವರು ಏನೆಂದು ಉತ್ತರಿಸುವುದು? ಮಕ್ಕಳಿಗೆ ಅಕ್ಕಪಕ್ಕದ ಮನೆಯವರು ಅಪ್ಪ ಎಲ್ಲಿ ಹೋಗಿದ್ದಾನೋ ಎಂದು ಕೇಳಿದರೆ ಆ ಚಿಕ್ಕ ಮಗು ಏನು ಉತ್ತರಕೊಟ್ಟೀತು?
ನಮ್ಮ ದೇಶದಲ್ಲಿ ಪ್ರಕರಣಗಳು ಯಾವ ವೇಗದಲ್ಲಿ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮಗೆ ಜಾಮೀನು ಇಲ್ಲ. ಅತ್ತ ವಿಚಾರಣೆಯೂ ಬೇಗ ನಡೆಯುತ್ತಿಲ್ಲ. ಹೀಗಾದರೆ ನಮ್ಮ ಅಮೂಲ್ಯ ಆಯಸ್ಸೆಲ್ಲ ಆರೋಪಿ ಎಂದು ಸಾಬೀತು ಕೂಡ ಆಗದೇ ಜೈಲಿನಲ್ಲಿ ಕಳೆದುಹೋಗಬೇಕೆ? ಇವೆಲ್ಲ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವವರಾರು? ಪ್ರಶ್ನೆಗಳನ್ನು ಯಾರ ಬಳಿ ಕೇಳಿಬೇಕು? ಒಂದೂ ಗೊತ್ತಾಗದೆ ಹತಾಶೆಯಿಂದ ನ್ಯಾಯಾಯದ ಮೇಲೆ ನಂಬಿಕೆ ಮತ್ತು ವಿಶ್ವಾಸವಿಟ್ಟು, ಮನಸ್ಸಿನಲ್ಲಿ ಒಂದಷ್ಟು ಆಶಾವಾದ ಬೆಳೆಸಿಕೊಂಡು ಕೂತಿದ್ದೇವೆ.
ನ್ಯಾಯದೇವತೆಗೆ ನಮ್ಮ ಸಂಕಟ ಬೇಗ ಅರ್ಥವಾದೀತೇ?
= ಯಶೋದಾ ಜಿ., ಹೊಸಪೇಟೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.