ಅಂಕಣಗಳು

ಅಹಿಂದ ಪರಮೋ ಧರ್ಮಕ್ಕೆ ಮೇಲ್ವರ್ಗದ ಛೂಬಾಣ

ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಇನ್ನೂ ಕೆಲವರಿಗೆ ಮತ್ತಷ್ಟು ಕೆಡಲೆಂದೇ ಬುದ್ಧಿ...

ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಇನ್ನೂ ಕೆಲವರಿಗೆ ಮತ್ತಷ್ಟು ಕೆಡಲೆಂದೇ ಬುದ್ಧಿ ಕೆಲಸ ಮಾಡುತ್ತಿರುತ್ತದೆ. ಕರ್ನಾಟಕ ಕಾಂಗ್ರೆಸ್‌ನಲ್ಲೀಗ ಆಗುತ್ತಿರುವುದು ಎರಡನೇ ಸಾಲಿನ ಮೆರವಣಿಗೆ.
ಲೋಕಸಭೆ ಚುನಾವಣೆಯಲ್ಲಿ ಅಖಂಡ ಭಾರತದ ಮೂಲೆಮೂಲೆಯಲ್ಲೂ ಅದ ಅದ್ವಿತೀಯ ಸೋಲಿನ ಬಗ್ಗೆ ಅತ್ತ ದಿಲ್ಲಿಯಲ್ಲಿ ಪಕ್ಷದ ಮುಖಂಡರು ಆತ್ಮಾವಲೋಕನ ಸಭೆ ನಡೆಸುತ್ತಿದ್ದಾರೆ. ಅದರೆ ಅದೇ ಕಾಲಕ್ಕೆ ಅದೇ ಪಕ್ಷದ ಮುಖಂಡರು ಇತ್ತ ಕರ್ನಾಟಕದಲ್ಲಿ ವೈಯಕ್ತಿಕ ದ್ವೇಷಾಸೂಯೆ ಹಿನ್ನೆಲೆಯಲ್ಲಿ ಪರಸ್ಪರ ಆತ್ಮಘಾತುಕ ಕಾಯಕದಲ್ಲಿ ನಿರತರಾಗಿದ್ದಾರೆ.
ನಿಜ ಹೇಳಬೇಕೇಂದರೆ ಜಾತಿ, ಪಂಗಡದ ಆಧಾರದ ಮೇಲೆ ವಿಭಜನೆ ಆಗಿರುವ ಕರ್ನಾಟಕ ಕಾಂಗ್ರೆಸ್‌ನಲ್ಲೀಗ ಬರೀ ರಾಗ-ದ್ವೇಷದ್ದೇ ಆರ್ಭಟ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದ ಪರಸ್ಪರ ಅಸಹಿಷ್ಣುತೆ ಕೊತಕೊತ ಕುದಿಯುತ್ತಿದ್ದು, ಯಾವಾಗ ಬೇಕಾದರೂ ಸ್ಫೋಟ ಆಗುವಷ್ಟು ರೋಷ ಮಡುಗಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನಡುವೆ ಆಗಾಗ್ಗೆ 'ಜುಗಲ್‌ಬಂದಿ' ನಡೆಯುತ್ತಲೇ ಇದೆ. ಒಬ್ಬರು ಒಂದು ಹೇಳಿಕೆ ಕೊಟ್ಟರೆ ಮರುದಿನ ಮತ್ತೊಬ್ಬರದು ಪ್ರತಿಹೇಳಿಕೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಬೆಂಗಳೂರು ಸಚಿವರ ವಿರುದ್ಧ ಒಂದು ಬಾಣ ಬಿಟ್ಟರೆ, ನಂತರ ಅದೇ ಸಚಿವರಿಂದ ತಿರುಗುಬಾಣ. ಹಿರಿಯ ನಾಯಕ ಎಂ.ವಿ. ರಾಜಶೇಖರನ್ ನಾಯಕರ ವಿರುದ್ಧ ಟೀಕೆ ಮಾಡಿದರೆ, ಮರುದಿನ ಅದೇ ನಾಯಕರಿಂದ ತಿರುಗೇಟು. ಇತ್ತ ದಕ್ಷಿಣ ಕರ್ನಾಟಕದವರು ಪಾರಮ್ಯ ಮೆರೆದರೆ, ಅತ್ತ ಉತ್ತರ ಕರ್ನಾಟಕದವರು ತಾರತಮ್ಯ ನಿವಾರಣೆ ಹೇಗಯ್ಯ ಎಂದು ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್‌ನಲ್ಲೀಗ ಮತ್ತೊಂದು ರೀತಿಯ 'ಫುಟ್‌ಬಾಲ್‌' ಪಂದ್ಯಾವಳಿ ನಡೆದಿದೆ.
ಹೌದು, ಲೋಕಸಭೆ ಚುನಾವಣೆ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವ ಅಲ್ಲಾಡಿಸುತ್ತದೆ ಎಂಬ ಮೂಲ ಕಾಂಗ್ರೆಸ್ ನಾಯಕರ ನಂಬಿಕೆಯ ಬುಡವನ್ನೇ ವರಿಷ್ಠರು ಅಲ್ಲಾಡಿಸಿದ್ದಾರೆ. ಒಂದಷ್ಟು ಷರತ್ತುಗಳ ಜತೆಗೆ ಮುಂದುವರಿಯಲು ಹೈಕಮಾಂಡ್ ಗ್ರೀನ್‌ಸಿಗ್ನಲ್ ಕೊಟ್ಟಿದ್ದು, ಎದಿರು ಪಾಳೆಯದ ಗಂಟಲಲ್ಲಿ ಕುದಿಯುವ ಎಣ್ಣೆ ಸುರಿದಂತಾಗಿದೆ. ಹೈಕಮಾಂಡ್ ಕೃಪಾಕಟಾಕ್ಷ ಮುಂದೆ ಮಾಡಿ ಸಿದ್ದರಾಮಯ್ಯ ಬಣ ಹಾಗೂ ಈ ಬಣದ ನೆಮ್ಮದಿ ಕೆಡಿಸಲು ವಿರೋಧಿ ಪಾಳೆಯ ಕಾರ್ಯಶೀಲವಾಗಿರುವುದರಿಂದ ಕಾಂಗ್ರೆಸ್ ಚಿತ್ರಮಂದಿರದಲ್ಲಿ ದಿನಕ್ಕೊಂದು ಬಣ್ಣದ ಚಿತ್ರ ಪ್ರದರ್ಶನ. ಜನಸಾಮಾನ್ಯರಿಗೆ ಪುಕ್ಕಟೆ ಮನರಂಜನೆ.
ಕಾಂಗ್ರೆಸ್ ನಾಯಕರ ನಿಂದನೆ, ಪರನಿಂದನೆ ಹಿಂದಿನ ಕಾರಣಗಳ ಹಿಂದೆ ಬರೀ ದ್ವೇಷವೇ ತುಂಬಿದೆ. ಮೊನ್ನೆ ಹರಿಪ್ರಸಾದ್ ಅವರು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಲೋಕಸಭೆ ಚುನಾವಣೆಯಲ್ಲಿ ತಮಗೆ ನಿಗದಿ ಮಾಡಿದ್ದ ಜವಾಬ್ದಾರಿ ನಿಭಾಯಿಸದ ಸಚಿವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ಕೊಡಬೇಕು ಎಂದಿದ್ದಾರೆ. ಅವರ ಮಾತಿನ ಗುರಿ ನಿಸ್ಸಂಶಯವಾಗಿ ತವರೂರು ಬೆಂಗಳೂರಿನ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಹಾಗೂ ಕೃಷ್ಣಬೈರೇಗೌಡ. ಇದಕ್ಕೆ ಪ್ರತಿಯಾಗಿ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಅವರು, ಹರಿಪ್ರಸಾದ್ ಚುನಾವಣೆ ಉಸ್ತುವಾರಿ ಹೊತ್ತಿದ್ದ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪ್ರಸ್ತಾಪಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ ಸ್ವತಃ ಹರಿಪ್ರಸಾದ್ ಅವರಿಗೇ ನೇರ ಚುನಾವಣೆಯಲ್ಲಿ ಗೆಲ್ಲಲು ಆಗಿಲ್ಲ, ಅವರ ಸಹೋದರನನ್ನೇ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಅದನ್ನು ಮರೆತು ಬೇರೆಯವರ ಬಗ್ಗೆ ಮಾತಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಮರುಪ್ರಶ್ನಿಸಿದ್ದಾರೆ. ಇವರ ನಡುವಣ ವೈಷಮ್ಯಕ್ಕೆ ಮೂಲಕಾರಣ ಹಿಂದೆ ಬೆಂಗಳೂರು ಮೇಯರ್ ಆಗಿ ನಾರಾಯಣಸ್ವಾಮಿ ನೇಮಕ ವಿಚಾರ. ಹರಿಪ್ರಸಾದ್ ಇಷ್ಟಕ್ಕೆ ವಿರುದ್ಧವಾಗಿ ರಾಮಲಿಂಗಾರೆಡ್ಡಿ ಮತ್ತು ದಿನೇಶ್‌ಗುಂಡೂರಾವ್ ಅವರು ನಾರಾಯಣಸ್ವಾಮಿ ಮೇಯರ್ ಆಗುವಂತೆ ನೋಡಿಕೊಂಡರು. ಅಲ್ಲಿಂದ ಶುರುವಾದ ದ್ವೇಷ ಇಲ್ಲಿಯವರೆಗೂ ಬೆಳೆದು ನಿಂತಿದೆ. ಅಷ್ಟೇ ಅಲ್ಲ ಈ ಮಧ್ಯೆ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುವ ದಿನೇಶ್ ಗುಂಡೂರಾವ್ ಸತತ ಪ್ರಯತ್ನಗಳಿಗೆ ಹರಿಪ್ರಸಾಧ್ ಕಲ್ಲು ಹಾಕಿದರಂತೆ. ಮೂರು ವರ್ಷಗಳ ಹಿಂದೆ ಪರಮೇಶ್ವರ್ ದೆಸೆಯಿಂದ ದಿನೇಶ್ ಈ ಸ್ಥಾನ ಪಡೆದರು. ಆಗ ಪದಾಧಿಕಾರಿಗಳ ನೇಮಕ ಸಂಬಂಧ ಹರಿಪ್ರಸಾದ್ ಸೂಚಿಸಿದ್ದ ಹೆಸರುಗಳನ್ನು ಪಕ್ಕಕ್ಕಿಟ್ಟು ಪರಮೇಶ್ವರ್ ತಮ್ಮದೇ ಆದ ಪಟ್ಟಿಗೆ ಹೈಕಮಾಂಡ್‌ನಿಂದ ಅನುಮೋದನೆ ಪಡೆದರು. ಆಗ ಇವರಿಬ್ಬರ ನಡುವೆ ದ್ವೇಷ ಹುಟ್ಟಿಕೊಂಡಿತು. ಪರಮೇಶ್ವರ್ ವಿರುದ್ಧ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಗಳಸ್ಯ-ಕಂಠಸ್ಯರಾಗಲು ಕಾರಣವಾಯಿತು.
ಹರಿಪ್ರಸಾದ್ ಅವರ ಮತ್ತೊಂದು ಮಾತು ಪಕ್ಷದ ಅದರಲ್ಲೂ ವಿಶೇಷವಾಗಿ ಮೇಲ್ವರ್ಗ ನಾಯಕರ ಮೈಯಲ್ಲಿ ಹಾವು-ಚೇಳು ಹರಿದಾಡಿದಂತೆ ಮಾಡಿದೆ. ಕಾಂಗ್ರೆಸ್‌ನಲ್ಲಿ ತಾವು ಕಿಂಗ್‌ಮೇಕರ್. ತಾವು ಕೊಡುವ ವಾಗ್ದಾನಕ್ಕೆ ಕಾಯುವ ದೊಡ್ಡ ವರ್ಗವೇ ಪ್ರದೇಶ ಕಾಂಗ್ರೆಸ್‌ನಲ್ಲಿದೆ. ಎಸ್.ಎಂ. ಕೃಷ್ಣ ಹಿಂದೆ ಹೈಕಮಾಂಕಡ್‌ನಲ್ಲಿ ಸಕ್ರಿಯರಾಗಿದ್ದರು ಎಂದು ಅವರು ಹೇಳಿರುವುದರ ಹಿಂದೆ ನಾನಾ ಸಂದೇಶಗಳ ರವಾನೆ ಉದ್ದೇಶ ಆಡಗಿದೆ. ಹಿಂದೆ ಹರಿಪ್ರಸಾದ್ ಎರಡು ಬಾರಿ ರಾಜ್ಯಸಭೆಗೆ ಹೋಗುವುದಕ್ಕೆ ಮೇಲ್ವರ್ಗ ನಾಯಕರೇ ಅದರಲ್ಲೂ ಮೂಲನಿವಾಸಿಗಳೇ ಕಲ್ಲು ಹಾಕಿದ್ದರು. ಒಮ್ಮೆ ಕೃಷ್ಣ ಅಧಿಕಾರದಲ್ಲಿದ್ದರು. ದೇವೇಗೌಡರು ಕೂಡ ಅಡ್ಡಗಾಲು ಹಾಕಿದ್ದರು. ಹೀಗಾಗಿ ಮೇಲ್ವರ್ಗ ಅದರಲ್ಲೂ ಒಕ್ಕಲಿಗ ನಾಯಕರ ಮೇಲಿನ ಸಿಟ್ಟು ಹರಿಪ್ರಸಾದ್ ಅವರಿಗೆ 'ಆಹಿಂದ' ಮೂಲಮಂತ್ರದ ಸಿದ್ದರಾಮಯ್ಯನವರನ್ನು ಆತುಕೊಳ್ಳುವಂತೆ ಮಾಡಿದೆ. ಸಿದ್ದರಾಮಯ್ಯ ವಿರುದ್ಧ ಇಲ್ಲಿನ ನಾಯಕರು ದಿಲ್ಲಿಮಟ್ಟದಲ್ಲಿ ಪಿತೂರಿ ನಡೆಸಿದಾಗಲೆಲ್ಲ ತಡೆಗೋಡೆಯಾಗಿ ನಿಂತವರು ಇದೇ ಹರಿಪ್ರಸಾದ್. ಜತೆಗೆ ಪರಮೇಶ್ವರ್ ವಿರುದ್ಧದ ಸಿದ್ದರಾಮಯ್ಯ ಯುದ್ಧಕ್ಕೆ ಇವರೇ 'ಶಬ್ದವೇಧಿ'. ಕೃಷ್ಣ ಹಿಂದೆ ಸಕ್ರಿಯರಾಗಿದ್ದರು ಅಂದರೆ ಈಗ ಅವರು ಏನೂ ಅಲ್ಲ ಎಂಬ ಅರ್ಥ ಅದರಲ್ಲಿದೆ. ಅದೇ ಕಾಲಕ್ಕೆ ತಾವೇ ಕಿಂಗ್‌ಮೇಕರ್ ಎಂಬ ಗತ್ತೂ ವ್ಯಕ್ತವಾಗಿದೆ. ಅವರ ಹೇಳಿಕೆಗಳ ಹಿಂದೆಲ್ಲ ಸಿದ್ದರಾಮಯ್ಯನವರ ಧ್ವನಿ ಅಡಗಿದೆ. ಸಿದ್ದರಾಮಯ್ಯ ಮಾತನ್ನು ಹರಿಪ್ರಸಾದ್ ಆಡುತ್ತಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಅವರನ್ನು ಯಾರೂ ಏನೂ ಮಾಡಲು ಆಗುವುದಿಲ್ಲ ಎಂಬುದನ್ನು ಬಿಂಬಿಸುತ್ತಿದ್ದಾರೆ. ಹಿಂದೆ ತಮ್ಮ ವಿರುದ್ಧ ಸೆಟೆದು ನಿಂತಿದ್ದು, ಈಗಲೂ ತಿರುಗೇಟು ನೀಡಿರುವ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಅವರ ಮೇಲೆ ಒಂದು ಕಣ್ಣನ್ನೂ ಇಟ್ಟಿದ್ದಾರೆ.
ಹರಿಪ್ರಸಾದ್-ಸಿದ್ದರಾಮಯ್ಯ ಕಾಂಬಿನೇಷನ್ ಮೇಲ್ವರ್ಗ ನಾಯಕರ ಕಣ್ಣು ಕೆಂಪಗಾಗಿಸಿದೆ. ಸಂಚಿವ ಸಂಪುಟ ರಚನೆಯಿಂದ ಹಿಡಿದು ಮೊನ್ನೆಯ ವಿಧಾನ ಪರಿಷತ್ ಚುನಾವಣೆವರೆಗೂ ಎಲ್ಲದರಲ್ಲೂ 'ಅಹಿಂದ ಪರಮೋ ಧರ್ಮಃ' ಎಂಬಂತೆ ವರ್ತಿಸುತ್ತಿರುವ ಸಿದ್ದರಾಮಯ್ಯ ಬಣದ ಬಗ್ಗೆ ಮೇಲ್ವರ್ಗ ನಾಯಕರು ಒಳಗೊರಗೆ ಕೆಂಡ ಕಾರುತ್ತಿದ್ದಾರೆ. ತೀರಾ ಇತ್ತೀಚೆಗೆ ಸಿದ್ದರಾಮಯ್ಯ ಅವರ ಆಹಿಂದ ತತ್ವವನ್ನು ಹಿರಿಯ ನಾಯಕ ಎಂ.ವಿ. ರಾಜಶೇಖರನ್ ಬಹಿರಂಗವಾಗಿಯೇ ಛೇಡಿಸಿದ್ದಾರೆ. ಅಹಿಂದ ಬಿಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ, ಪರಮೇಶ್ವರ್ ಉಪಮುಖ್ಯಮಂತ್ರಿ ಮಾಡಿ, ಕೃಷ್ಣ ನಾಯಕತ್ವಕ್ಕೆ ಮಾನ್ಯತೆ ನೀಡಿ ಎಂದು ರಾಜಶೇಖರನ್ ಮಾಡಿರುವ ಎಲ್ಲ ಒತ್ತಾಯಗಳ ಹಿಂದಿನ ಗುರಿ ಇದೇ ಸಿದ್ದರಾಮಯ್ಯ-ಹರಿಪ್ರಸಾದ್ ಜೋಡಿಯೇ ಆಗಿದೆ. ಸಿದ್ದರಾಮಯ್ಯ ವಿರೋಧಿ ಬಣದ ಆಕ್ರೋಶ ರಾಜಶೇಖರನ್ ಮಾತುಗಳಲ್ಲಿ ಪ್ರತಿಧ್ವನಿಸುತ್ತಿದೆ. ಆಲ್ಲಿ ಸಿದ್ದರಾಮಯ್ಯಗೆ ಹರಿಪ್ರಸಾದ್ ಧ್ವನಿ. ಇಲ್ಲಿ ಅವರ ವಿರೋಧಿ ಬಣಕ್ಕೆ ರಾಜಶೇಖರನ್ ಧ್ವನಿ.
ಇನ್ನೊಂದು ವಿಚಾರ. ರಾಜಶೇಖರನ್ ಮತ್ತು ಸಿದ್ದರಾಮಯ್ಯ ಅವರಿಗೂ ಈ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಷ್ಟಕ್ಕಷ್ಟೇ. ಸಿದ್ದರಾಮಯ್ಯ ಹೊಸದರಲ್ಲಿ ಜಾರಿಗೆ ತಂದ ಅನ್ನಭಾಗ್ಯ ಮತ್ತಿತರ ಯೋಜನೆಗಳನ್ನು ರಾಜಶೇಖರನ್ ಬಹಿರಂಗವಾಗಿಯೇ ಟೀಕಿಸಿದ್ದರು. ಅನ್ನಭಾಗ್ಯ ಯೋಜನೆ ಉದ್ಛಾಟನೆ ಸಮಾರಂಭದಲ್ಲಿ ರಾಜಶೇಖರನ್‌ಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದರು. 'ರಾಜಶೇಖರನ್ ಅವರೇ ನೀವು ದುಡ್ಡಿನ ಮನೆಯಿಂದ ಬಂದವರು. ನಿಮಗೆ ಹೊಟ್ಟೆ ಸಮಸ್ಯೆ ಅರ್ಥವಾಗುವುದಿಲ್ಲ' ಅಂತ. ಇವರಿಬ್ಬರ ಜಗಳ, ದ್ವೇಷದ
ಮೂಲ ಇಲ್ಲಿದೆ. ಇನ್ನೊಂದೆಡೆ  ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ರಾಜಶೇಖರನ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಹೌದು. ಪರಮೇಶ್ವರ್ ಸಂಪುಟ ಸೇರ್ಪಡೆ ಆಗಬೇಕು, ಅವರು ಡಿಸಿಎಂ ಆಗಬೇಕು ಎಂದು ರಾಜಶೇಖರನ್ ಮಾಡುತ್ತಿರುವ ಒತ್ತಾಯದ ಹಿಂದೆ ಈ ಆಕಾಂಕ್ಷೆಯೂ ಕೆಲಸ ಮಾಡುತ್ತಿದೆ. ಅಹಿಂದ ಬಿಡಿ, ಎಲ್ಲ ವರ್ಗದವರನ್ನೂ ಜತೆಯಲ್ಲಿ ಕರೆದೊಯ್ಯಬೇಕು ಎಂಬ ಮಾತಿನ ಗೂಡಾರ್ಥ ಇದೇ ಆಗಿದೆ.
ಇನ್ನು ಪರಮೇಶ್ವರ್-ಸಿದ್ದರಾಮಯ್ಯ ವೈಷಮ್ಯ ಈ ಸರಕಾರಕ್ಕಿಂತಲೂ ಹಳೆಯದು. ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಸೋಲಿನಿಂದ ಹಿಡಿದು ಈಗ ಸಂಪುಟ ಪುನಾರಚನೆ ವಿವಾದದವರೆಗೂ ಬಂದು ನಿಂತಿದೆ. ಸದ್ಯದಲ್ಲೇ ಸಂಪುಟ ಪುನಾರಚನೆ ಆಗಲಿದೆ, ಒಂದಷ್ಟು ಮಂತ್ರಿಗಳು ಮನೆಗೆ ಹೋಗಲಿದ್ದಾರೆ ಎಂದು ಪರಮೇಶ್ವರ್ ಹೇಳಿದರೆ, ಅದರ ಮರುದಿನವೇ ಸಿದ್ದರಾಮಯ್ಯ ಅದು ಪರಮೇಶ್ವರ್ ವೈಯಕ್ತಿಕ ಹೇಳಿಕೆ ಅನ್ನುತ್ತಾರೆ. ಇವರಿಬ್ಬರ ವಾದ-ವಿವಾದ ಜನರಿಗೆ ರಂಜನೀಯ ವಸ್ತು.
ಈ ಗಲಾಟೆಗಳು ಇಲ್ಲಿಗೆ ಮುಗಿದವಾ ಎಂದರೆ ಇಲ್ಲ ಎಂಬ ಉತ್ತರ ಬರುತ್ತದೆ ಉತ್ತರ ಕರ್ನಾಟಕದವರಿಂದ. ಕೆ.ಬಿ. ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್, ಮಾಲಕರಡ್ಡಿ, ವೀರಣ್ಣ ಮತ್ತಿಗಟ್ಟಿ, ನಾಡಗೌಡ ಮತ್ತಿತರರು ಉತ್ತರ ಕರ್ನಾಟಕ ಕೋಟಾದಡಿ ಅಧಿಕಾರದದ ಹಕ್ಕೊತ್ತಾಯ ಮಾಡುತ್ತಿದ್ದಾರೆ. 60 ಶಾಸಕರನ್ನು ಕೊಟ್ಟ ಉತ್ತರ ಕರ್ನಾಟಕಕ್ಕೆ ಕೇವಲ 11 ಮಂತ್ರಿ ಸ್ಥಾನ. ಆದರೆ 50 ಸ್ಥಾನ ಗೆದ್ದ ದಕ್ಷಿಣ ಕರ್ನಾಟಕಕ್ಕೆ ವಿಧಾನಸಭೆ ಸ್ಪೀಕರ್ ಸೇರಿ 19 ಸ್ಥಾನ. ಆ ತಾರತಮ್ಯ ನಿವಾರಿಸದಿದ್ದರೆ ಜನ ಪಕ್ಷವನ್ನು ಇನ್ನಷ್ಟು ನಿವಾರಿಸಿಕೊಳ್ಳುತ್ತಾರೆ ಎನ್ನುತ್ತಾರವರು. ಹೀಗೆ ಕರ್ನಾಟಕ ಕಾಂಗ್ರೆಸ್ ಎಂಬುದು ಗಲಾಟೆ ಸಂಸಾರವಾಗಿದೆ.. ಮೇಲ್ವರ್ಗ ಹಾಗೂ ಅಹಿಂದ ನಾಯಕರು ಪರಸ್ಪರ ಸದೆಬಡಿಯಲು ಯೋಜನೆ ರೂಪಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಜನ ಕಾಂಗ್ರೆಸ್ಸನ್ನೇ ಮತ್ತಷ್ಟು ಸದೆಬಡಿಯುತ್ತಾರೆ.
ಲಗೋರಿ: ಯಾರು ಯುದ್ಧವನ್ನು ಮುಗಿಸುವುದಿಲ್ಲವೋ, ಯುದ್ಧವೇ ಅವರನ್ನು ಮುಗಿಸುತ್ತದೆ.

- ಪಿ. ತ್ಯಾಗರಾಜ್
thyagarjun@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!

ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ. ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ..!

ಸರ್ಕಾರದ ಬೊಕ್ಕಸಕ್ಕೆ ಕಿಕ್ ಕೊಟ್ಟ ಮದ್ಯ ಪ್ರಿಯರು: ಮಾರಾಟ ಶೇ.41ರಷ್ಟು ಹೆಚ್ಚಳ, ಅಬಕಾರಿ ಆದಾಯ ಭಾರೀ ಏರಿಕೆ..!