ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಉರಿಯುತ್ತಿರುವ ಉಕ್ರೇನ್‌ನಲ್ಲಿ ಗಳ ಹಿರಿಯುತ್ತಿರುವ ಅಮೆರಿಕ, ರಷ್ಯಾ

Srinivasa Murthy VN
Updated On : 7 Mar 2014, 12:34 pm

Ukraine is on the brink of disaster
ಅಂದರೆ, 'ಉಕ್ರೇನ್ ವಿನಾಶದ ಅಂಚಿನಲ್ಲಿದೆ' ಎಂದು ಈಗಿನ ಪ್ರಧಾನಿ ಆರ್ಸೆನಿ ಯಾಸೆನ್ಯೂಕ್ ಮೊನ್ನೆಯಷ್ಟೇ ಘೋಷಿಸಿದ್ದಾರೆ. ಹೆಚ್ಚೂ ಕಡಿಮೆ ಕಳೆದ ಒಂದು ತಿಂಗಳಿಂದ ಉಕ್ರೇನ್ ಜಗತ್ತಿನ ಎಲ್ಲ ಪತ್ರಿಕೆಗಳಲ್ಲೂ ಸುದ್ದಿಯಾಗುತ್ತಿದೆ. ಯುರೋಪ್ ಒಕ್ಕೂಟದ ಪೂರ್ವದಲ್ಲಿರುವ ಹಾಗೂ ರಷ್ಯಾದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಉಕ್ರೇನ್ ಆಂತರಿಕ ಕಚ್ಚಾಟದಿಂದ ಒಡೆಯುವ ಸ್ಥಿತಿಗೆ ಬಂದು ತಲುಪಿದೆ. ನೆರೆಯ ರಷ್ಯಾ ಹಾಗೂ ಅಮೆರಿಕ, ಯುರೋಪ್ ಒಕ್ಕೂಟಗಳು 'ಉರಿಯುತ್ತಿರುವ ಉಕ್ರೇನ್‌ನಲ್ಲಿ ಗಳ ಹಿರಿಯಲು' ಸಿದ್ಧವಾಗಿ ನಿಂತಿವೆ. ಉಕ್ರೇನ್‌ನ ಅಧಿಕೃತ ಭಾಷೆ ಉಕ್ರೇನ್ ಆದರೂ ರಷ್ಯನ್ ಭಾಷೆಯನ್ನು ಕೂಡಾ ವ್ಯಾಪಕವಾಗಿ ಮಾತನಾಡುತ್ತಾರೆ. ಅಲ್ಲದೆ, ಈಗ ಅಧಿಕೃತ ಭಾಷೆಯಾಗಿರುವ ಉಕ್ರೇನ್‌ಗೂ ರಷ್ಯನ್ ಭಾಷೆ ಮೂಲ ಬೇರು. ಈ ವಿಷಯ ಕೂಡಾ ಆಂತರಿಕ ಜಗಳಕ್ಕೆ ಕಾರಣವಾಗುತ್ತಿದೆ. ರಷ್ಯನ್ನರ ಹಿತಾಸಕ್ತಿ ಕಾಪಾಡಲು ನೆರೆಯ ರಷ್ಯಾ ತನ್ನ ಸೇನೆಯನ್ನು ಸ್ವಾಯತ್ತ ಕ್ರಿಮೆಯಾ ಸುತ್ತ ಸೇನೆ ಜಮಾವಣೆ ಮಾಡಿದರೆ, ಶಾಂತಿದೂತನ ಪೋಸ್ ಕೊಡುವ ಅಮೆರಿಕ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಒತ್ತಡ ಹೇರುತ್ತಿದೆ.
ಏಕೆ ಪ್ರತಿಭಟನೆ? ಏಕೆ ರಾಜಕೀಯ ಅಸ್ಥಿರತೆ ಆರಂಭವಾಯಿತು?
ಅಧ್ಯಕ್ಷ ವಿಕ್ಟರ್ ಯಾನುಕೊವಶ್ ಆಡಳಿತ ಕೈಗೊಂಡ ಒಂದು ನಿರ್ಧಾರ. ಅದೇನೆಂದರೆ, 2013 ನವೆಂಬರ್ 21ರಂದು ಯುರೋಪಿಯನ್ ಒಕ್ಕೂಟ ಜತೆ ಮಾಡಿಕೊಳ್ಳಲು ಮುಂದಾಗಿದ್ದ ಒಪ್ಪಂದವನ್ನು ರದ್ದುಗೊಳಿಸಿ, ರಷ್ಯಾ ಜತೆಗೆ ಅಂಥದ್ದೇ ಒಪ್ಪಂದಕ್ಕೆ ಮುಂದಾದದ್ದು. ಅಲ್ಲದೆ, 2013 ಡಿಸೆಂಬರ್ 17ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, 'ಉಕ್ರೇನ್‌ಗೆ 15 ಶತಕೋಟಿ ಡಾಲರ್ ಸಾಲ ನೀಡುವುದರೊಂದಿಗೆ ಆರ್ಥಿಕ ಚೇತರಿಕೆಯನ್ನು ಒದಗಿಸುತ್ತೇವೆ" ಎಂದು ಘೋಷಿಸಿದರು. ಇದು ಉಕ್ರೇನಿಯನ್ನರಲ್ಲಿ ಬೇರೆಯದ್ದೇ ಅರ್ಥ ಕಲ್ಪಿಸಲು ಸಾಧ್ಯವಾಯಿತು. ಅಧ್ಯಕ್ಷ ವಿಕ್ಟರ್ ಅವರು ರಷ್ಯಾ ಜತೆ ಕೈ ಜೋಡಿಸುತ್ತಿದ್ದಾರೆಂಬ ಮೆಸೆಜ್ ರವಾನೆಯಾಯಿತು. ಹೀಗೆ ಉಕ್ರೇನ್‌ನ ರಾಜಧಾನಿ ಕಿವ್‌ನಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಯುರೋಪಿಯನ್ ಒಕ್ಕೂಟ ಜತೆ ಒಪ್ಪಂದ ಮಾಡಿಕೊಂಡಿದ್ದರೆ ಆರ್ಥಿಕ ಹಾಗೂ ಉದ್ಯೋಗ ನಿರೀಕ್ಷೆಯಲ್ಲಿದ್ದ ಬಹುತೇಕ ಉಕ್ರೇನಿಯನ್ನರಿಗೆ ಇದರಿಂದ ನಿರಾಶೆಯಾಯಿತು.
ಅಲ್ಲದೆ, ಶಾಂತಿಯುತವಾಗಿ ಬೀದಿಗಿಳಿದ ಜನ ಪ್ರತಿಭಟನೆಗೆ ಮುಂದಾದರು. ಆದರೆ, ವಿಕ್ಟರ್ ನೇತೃತ್ವದ ಸರ್ಕಾರ ಪ್ರತಿಭಟನೆಕಾರರ ಜತೆ ಸಂಘರ್ಷಕ್ಕಿಳಿಯಿತು. 2014ರ ಫೆಬ್ರವರಿ 20ರಂದು ಕಿವ್‌ನ ಇಂಡೆಪೆಂಡನ್ಸ್ ಸ್ಕ್ವೇರ್‌ನಲ್ಲಿ ಶಾಂತವಾಗಿ ನಡೆಯುತ್ತಿದ್ದ ಪ್ರತಿಭಟನೆ ಮೇಲೆ ಪೊಲೀಸ್ ಪೋರ್ಸ್ ಹೇರಲಾಯಿತು. ಆಗ ಶಾಂತಿಯು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 77ಕ್ಕೂ ಹೆಚ್ಚು ಜನರು ಮೃತಪಟ್ಟರೆ, ನೂರಾರು ಜನರು ಗಾಯಗೊಂಡರು. ಈ ಘಟನೆಯಲ್ಲಿ ಮೊದಲು ಯಾರು ಕಲ್ಲೆಸೆದಿದ್ದು? ಅಥವಾ ಯಾರು ಗುಂಡು ಹೊಡೆದಿದ್ದು? ಎನ್ನುವುದು ಇಲ್ಲಿರವರೆಗೂ ನಿಗೂಢವಾಗಿದೆ.
ಇಲ್ಲಿವರೆಗೂ ಕಿವ್‌ಗೆ ಮಾತ್ರ ಸೀಮಿತವಾಗಿದ್ದ ಪ್ರತಿಭಟನೆ ದೇಶದ ತುಂಬೆಲ್ಲಾ ಹರಡಿತು. ಒಂದೆಡೆ ಯುರೋಪಿಯನ್ ಒಕ್ಕೂಟ ಜತೆ ಸೇರಬೇಕೆಂಬ ಕೂಗು ಇದ್ದರೆ, ಉಕ್ರೇನ್‌ನ ದಕ್ಷಿಣ ಭಾಗದಲ್ಲಿ ಅಂದರೆ, ರಷ್ಯಾ ಪ್ರಭಾವ ಇರುವ ಪ್ರದೇಶದಲ್ಲಿ ಅಧ್ಯಕ್ಷ ವಿಕ್ಟರ್‌ಗೆ ಬೆಂಬಲ ವ್ಯಕ್ತವಾಯಿತು. ಇದನ್ನೇ ನೆಪವಾಗಿಟ್ಟುಕೊಂಡ ರಷ್ಯಾ ಉಕ್ರೇನ್‌ನ ಅಧ್ಯಕ್ಷರ ಬೆಂಬಲಕ್ಕೆ ನಿಂತು ಬಿಟ್ಟಿದೆ. ಪ್ರತಿಭಟನೆಯ ಕಾವು ಎಷ್ಟು ಜೋರಾಯಿತು ಎಂದರೆ, 2014 ಜನವರಿ 28ರಂದು ಪ್ರಧಾನಿ ಮ್ಯಾಕೊಲ್ ಅರೋವಾ ಹಾಗೂ ಅವರ ಸರ್ಕಾರ ರಾಜಿನಾಮೆ ನೀಡಬೇಕಾಯಿತು. ಅಲ್ಲದೆ, ಅಧ್ಯಕ್ಷ ವಿಕ್ಟರ್ ಕೂಡಾ ಅವಧಿ ಪೂರ್ವ ಚುನಾವಣೆಯನ್ನು ನಡೆಸುತ್ತೇವೆ ಎಂದು ಘೋಷಿಸುವುದು ಅನಿವಾರ್ಯವಾಯಿತು. ಇಷ್ಟಾಗಿಯೂ ಪ್ರತಿಭಟನೆಗಳು ನಿಲ್ಲಲಿಲ್ಲ. ಕೊನೆಗೆ ಅಧ್ಯಕ್ಷ ವಿಕ್ಟರ್ ಕೂಡಾ ಕಣ್ಮರೆಯಾಗಬೇಕಾಯಿತು. ಆದರೆ, ಈಗಲೂ ವಿಕ್ಟರ್ ಅವರೇ ಉಕ್ರೇನ್ ಅಧ್ಯಕ್ಷ ಎಂದು ರಷ್ಯಾ ಹಕ್ಕು ಸಾಧಿಸುತ್ತಿದೆ.
ಉಕ್ರೇನ್ ತುಂಬಾ ಫಲವತ್ತಾದ ಕೃಷಿ ಪ್ರದೇಶವನ್ನು ಹೊಂದಿದ್ದು, ಅಂಕಿ-ಅಂಶದ ಪ್ರಕಾರ ಜಗತ್ತಿನ ಮೂರನೇ ಅತಿ ದೊಡ್ಡ ಆಹಾರಧಾನ್ಯ ರಫ್ತು ಮಾಡುತ್ತಿರುವ ರಾಷ್ಟ್ರ. ಕೃಷಿ ಮಾತ್ರವಲ್ಲದೆ, ಉತ್ಪಾದನಾ ವಲಯ ವಿಶೇಷವಾಗಿ ಏರೋಸ್ಪೆಸ್ ಮತ್ತು ಕೈಗಾರಿಕಾ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿಯೇ ಈ ರಾಷ್ಟ್ರವನ್ನು ತನ್ನ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಯುರೋಪಿಯನ್ ಒಕ್ಕೂಟ ಮುಂದಾಗಿದೆ.
ಇನ್ನೊಂದು ಕಾಡುವ ಪ್ರಶ್ನೆ ಎಂದರೆ, ಯಾಕೆ ರಷ್ಯಾ ಅಷ್ಟೊಂದು ಕಾಳಜಿಯನ್ನು ಉಕ್ರೇನ್ ಬಗ್ಗೆ ತೋರುತ್ತಿದೆ?
ಮೇಲ್ನೋಟಕ್ಕೆ ಸಾಂಸ್ಕೃತಿಕವಾಗಿ ಉಕ್ರೇನ್ ರಷ್ಯಾಗೆ ತುಂಬಾ ಸಾಮ್ಯತೆ ಹೊಂದಿರುವ ದೇಶ. ಅಷ್ಟೇ ಯಾಕೆ, ಉಕ್ರೇನ್ ಜತೆಗಿನ ರಷ್ಯಾ ಇತಿಹಾಸ ಕೂಡಾ ತುಂಬಾ ಹಿಂದಿನದ್ದು. ಎಲ್ಲಕ್ಕಿಂತ ಹೆಚ್ಚಾಗಿ ಭಾರಿ ಪ್ರಮಾಣದಲ್ಲಿ ರಷ್ಯನ್ ಮಾತನಾಡುವ ಜನರು ಉಕ್ರೇನ್‌ನಲ್ಲಿದ್ದಾರೆ. ಈ ಎಲ್ಲ ಅಂಶಗಳು ಭಾವನಾತ್ಮಕವಾಗಿ ರಷ್ಯಾಗೆ ಉಕ್ರೇನ್ ಮೇಲೆ ಅಕ್ಕರೆ ತೋರಲು ಕಾರಣವಾದರೆ, ವಾಸ್ತವದಲ್ಲಿ ರಷ್ಯಾಗೆ ಉಕ್ರೇನ್ ಆಹಾರ ಮೂಲ ಮತ್ತು ರಷ್ಯಾದ ಇಂಧನ ರಫ್ತಿನ ಬಹುದೊಡ್ಡ ಮಾರುಕಟ್ಟೆ. ಆರ್ಥಿಕವಾಗಿ ಮತ್ತು ವ್ಯೂಹಾತ್ಮಕವಾಗಿ ರಷ್ಯಾಗೆ ಉಕ್ರೇನ್ ಬಹುಮುಖ್ಯವಾದ ರಾಷ್ಟ್ರ. ಹಾಗಾಗಿ, ಉಕ್ರೇನ್ ಜನರ ಆಶಯದಂತೆ ಯುರೋಪಿಯನ್ ಒಕ್ಕೂಟದ ಜತೆ ಸಾಗುವ ಬದಲು ಯೂರಷ್ಯನ್ ಟ್ರೇಡ್ ಯೂನಿಯನ್ ಜತೆ ಉಕ್ರೇನ್ ಹೆಜ್ಜೆ ಹಾಕಬೇಕೆಂಬದು ರಷ್ಯಾದ ಒತ್ತಡ. ಇನ್ನೂ ಒಳಹೊಕ್ಕು ನೋಡಿದರೆ, ರಷ್ಯಾ ಪವರ್‌ಫುಲ್ ರಾಷ್ಟ್ರ ಎನಿಸಿಕೊಳ್ಳಬೇಕಾದರೆ ಉಕ್ರೇನ್ ಸಾಂಗತ್ಯ ಅದಕ್ಕೇ ಬೇಕು. ರಾಜಕೀಯ ವಿಜ್ಞಾನಿ ಡ್ಯಾನ್ ಡ್ರೆಜ್ನರ್ ಪ್ರಕಾರ, 'ಪುಟಿನ್ ಅವರ ಮಹತ್ವಾಕಾಂಕ್ಷೆಗೆ ಮತ್ತು ರಷ್ಯಾದ ಮಧ್ಯ ಪೂರ್ವ ರಾಷ್ಟ್ರ ರಾಜತಾಂತ್ರಿಕ ವಿಷಯದಲ್ಲಿ ಉಕ್ರೇನ್ ಪ್ರಮುಖವಾದ ರಾಷ್ಟ್ರ. ಅಲ್ಲದೆ, ಫಾರೇನ್ ಪಾಲಿಸಿ ಕಮ್ಯುನಿಟಿ ಕಾಲೇಜ್‌ನಲ್ಲಿ ನಿಮಗೆ ಮೊದಲು ಕಲಿಸುವ ವಾಕ್ಯವೇ, Russia without Ukraine is a country; Russia with Ukraine is an empireಅಂದರೆ, ಉಕ್ರೇನ್ ಇಲ್ಲದೆ ರಷ್ಯಾ ಕೇವಲ ಒಂದು ರಾಷ್ಟ್ರ. ಆದರೆ, ಉಕ್ರೇನ್ ಜತೆ ರಷ್ಯಾ ಇದ್ದರೆ ಅದು ಸಾಮ್ರಾಜ್ಯ'. ಈ ಒಂದು ಸಂಗತಿಯಿಂದಲೇ ಗೊತ್ತಾಗುತ್ತದೆ, ಉಕ್ರೇನ್ ಮೇಲೆ ರಷ್ಯಾಗೆ ಯಾಕಿಷ್ಟು ಮೋಹ ಮತ್ತು ಕಾಳಜಿ ಎಂಬುದು.
ಹೀಗಿರುವಾಗ, ಉಕ್ರೇನ್‌ನಲ್ಲಿ ಉಂಟಾಗಿರುವ ಆಂತರಿಕ ರಾಜಕೀಯ ಅಸ್ಥಿರತೆ ಮತ್ತು ಈಗಿರುವ ಅವಕಾಶವನ್ನು ರಷ್ಯಾ ಬಿಟ್ಟುಕೊಡಲು ಸಾಧ್ಯವೇ? ಅದಕ್ಕಾಗಿಯೇ ಉಕ್ರೇನ್ ಸರ್ಕಾರದ ಬೆಂಬಲಕ್ಕೆ ನಿಂತಿದೆ. ಅಷ್ಟೇ ಅಲ್ಲ, ಕ್ರಿಮೆಯಾ ಅನ್ನು ಪೂರ್ತಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಶಾಂತಿ ಸ್ಥಾಪನೆಗಾಗಿ ಮುಂದಾಗಿರುವ ಅಮೆರಿಕ, ತನ್ನ ಮಿತ್ರ ರಾಷ್ಟ್ರಗಳ ಬೆಂಬಲದೊಂದಿಗೆ ರಷ್ಯಾದ ಮೇಲೆ ರಾಜತಾಂತ್ರಿಕ ಹಾಗೂ ಆರ್ಥಿಕ ನಿರ್ಬಂಧಗಳನ್ನು ಹೇರಿ ಹಿಮ್ಮೆಟ್ಟಿಸಲು ಯೋಜಿಸುತ್ತಿದೆ. ಆದರೆ, ಇದು ಕಾಗದದ ಮೇಲಿರುವಷ್ಟು ಸರಳವಾಗಿಲ್ಲ. ಏಕೆಂದರೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರವಾಗಿರುವ ರಷ್ಯಾ ಕೂಡಾ ವಿಟೋ ಪವರ್ ಹೊಂದಿದೆ. ಅಂತಾರಾಷ್ಟ್ರೀಯವಾಗಿ ರಷ್ಯಾದ ಗೆಳೆತನ ಅಮೆರಿಕಕ್ಕೇ ಬೇಕು. ಸದ್ಯಕ್ಕಂತೂ ಕಪ್ಪು ಸಮುದ್ರದಲ್ಲಿ ಯುದ್ಧದ ಕಾರ್ಮೋಡಗಳು ಹರಿದಾಡತೊಡಗಿದ್ದು, ಅದು ಘನೀಕರಿಸಿ ಯಾವಾಗ ಗುಂಡು, ಬಾಂಬುಗಳ ಮಳೆಯಾಗುತ್ತದೆಯೋ ಗೊತ್ತಿಲ್ಲ!

-ಮಲ್ಲಿಕಾರ್ಜುನ ತಿಪ್ಪಾರ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement