ಕ್ರಾಂತಿ ಯಾವತ್ತೂ ಹಡೆಯುವುದು ಕ್ರೇಜಿತನವನ್ನೇ!
ಮೋದಿ ನಿವಾಸದ ದಾರಿಯಲ್ಲಿ ಗದ್ದಲವೆಬ್ಬಿಸಿ ಹಿಂತಿರುಗಿದ ಆಮ್ ಆದ್ಮಿ ಕೇಜ್ರಿವಾಲರು ವಿಶ್ರಾಂತಿ ಕೋಣೆಯಲ್ಲಿ ತಮಗೆ ತಾವೇ ಮಾತಾಡಿಕೊಳ್ಳುತ್ತಿದ್ದದ್ದನ್ನು ನಮ್ಮ ಬಾತ್ಮೀದಾರರು ಕೇಳಿಸಿಕೊಳ್ಳಲಾಗಿ...
ಈ ಕ್ರಾಂತಿ ಅನ್ನೋದು ತುಂಬ ಕ್ರೇಜಿ ವಿಷಯ. ಅದ್ಹೆಂಗಾಗ್ತದೆ, ಕ್ರಾಂತಿ ಭಾರೀ ತೂಕದ- ಗಂಭೀರದ ಸಂಗತಿ ಅಂತ ನೀವು ಪ್ರತಿಯಾಗಿ ಹೇಳ್ತೀರೇನೊ? ಕ್ರಾಂತಿಯೇನೋ ತೂಕದ್ದು ಖರೆ. ಆದರೆ ಅದರ ಬೈಪ್ರೊಡಕ್ಟು ಯಾವಾಗಲೂ ತಮಾಷೆಯದ್ದಾಗಿರುತ್ತೆ. ಈ ಹಳೆ ತಲೆಮಾರು ಯಾವಾಗಲೂ ಜೆಪಿ ಕ್ರಾಂತಿ ಅಂತ ಇಂದಿರಾ ದುರಾಡಳಿತದ ವಿರುದ್ಧ ಸಿಡಿದು ನಿಂತಿದ್ದ ಜಯಪ್ರಕಾಶ ನಾರಾಯಣರನ್ನು ನೆನಪಿಸಿಕೊಂಡು ಪುಳಕ ಪಡ್ತಿರುತ್ತೆ. ಈ ಜೆಪಿ ಚಳವಳಿಯಿಂದ ಹೊರಹೊಮ್ಮಿದ ನೇತಾರರು ಅಂತ ಗುರುತಿಸಬಹುದಾದ್ದರಲ್ಲಿ ಲಾಲು ಪ್ರಸಾದ್ ಯಾದವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಈ ಬೈಪ್ರೊಡಕ್ಟು ನಂತರ ಬಿಹಾರವನ್ನು ಮುನ್ನಡೆಸಿದ ರೀತಿ ನೋಡಿದರೆ ನಿಮಗೆ ಕ್ರಾಂತಿ ಎಂಬುದು ಏನೆಲ್ಲ ಭಾನಗಡಿಗಳನ್ನು ಮಾಡಬಹುದು ಅಂತ ಮನದಟ್ಟಾಗುತ್ತೆ. ಈ ಜೆಪಿ ಚಳವಳಿಯಿಂದ ಐಡೆಂಟಿಟಿ ಕಂಡುಕೊಂಡ ಹೆಚ್ಚಿನವರೆಲ್ಲ ನಂತರ ರೂಪಿಸಿದ್ದು ಜಾತಿ ರಾಜಕಾರಣ, ಸ್ವಜನಪಕ್ಷಪಾತದ ವ್ಯವಸ್ಥೆಯನ್ನೇ ಅಂತ ಸ್ವಲ್ಪ ತಡಕಿದರೆ ಗೊತ್ತಾಗುತ್ತದೆ. ಆದರೆ ಮಹಾಜನತೆಗೆ ಅವಕ್ಕೆಲ್ಲ ಪುರಸೊತ್ತಿಲ್ಲ ಎಂಬ ವಿಶ್ವಾಸ ನಮ್ಮಂಥವರಿಗೆಲ್ಲ ಪ್ರೇರಕವಾಗಿದೆ. ರೆವಲ್ಯೂಷನ್ ಈಸ್ ಸೋ ಫನ್ನಿ ಯು ನೊ?
ನಿಮಗೆ ಈ ಬಗ್ಗೆ ಇನ್ನೂ ಅನುಮಾನ ಉಳಿದಿದ್ದರೆ, ಶ್ರೀಮಾನ್ ಶ್ರೀಸಾಮಾನ್ಯ ಅರವಿಂದ ಕೇಜ್ರಿವಾಲ ಎಂಬ ಹೆಸರಿನವನಾದ ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಅಣ್ಣಾ ಹಜಾರೆ ಎಂಬ ಹಿರಿಜೀವ ದೇಶಾದ್ಯಂತ ಎಬ್ಬಿಸಿದ ಭ್ರಷ್ಟಾಚಾರ ವಿರೋಧಿ ಅಭಿಯಾನ ಎಂಬ ಆಗಸ್ಟ್ ಕ್ರಾಂತಿಯ ಬೈಪ್ರೊಡಕ್ಟ್ ನಾನು. ಮೊದಲಿಂದಲೂ ಮಾಹಿತಿ ಹಕ್ಕು, ಅದೂ ಇದೂ ಅಂತ ಗಲಾಟೆ ಎಬ್ಬಿಸಿಕೊಂಡು ಬಂದಿದ್ದೆನಾದ್ರೂ ಗಟ್ಟಿ ಐಡೆಂಟಿಟಿ ಸಿಕ್ಕಿದ್ದು ಅಣ್ಣಾ ಸಹವಾಸದಿಂದ. ಈಗ ಹಲವರು ಕೇಜ್ರಿವಾಲ್ ಒಂಥರಾ ಕ್ರೇಜಿಯಾಗಿದ್ದಾರೆ ಅಂತೆಲ್ಲ ಟೀಕೆ ಮಾಡ್ತಿದ್ದಾರೆ. ಅದು ಟೀಕೆ ಮಾಡುವವರ ಸಮಸ್ಯೆ. ನಂಗಂತೂ ಅವರೆಲ್ಲರ ಬಗ್ಗೆ ಪಾಪ ಅನ್ನಿಸ್ತಿದೆ. ಯಾರೇನೇ ಹೇಳಲಿ, ನಿಮ್ಮಲ್ಲಿ ಕೆಲವರಿಗಾದರೂ ನಾನು ಆದರ್ಶ ಎನ್ನಿಸಿದ್ದರೆ, ನನ್ನಂತಾಗಬೇಕು ಎಂಬ ಕನಸಿದ್ದರೆ, ಹಾಗಾಗುವುದಕ್ಕಿರುವ ಫಾರ್ಮ್ಯಲಾ ಹಂಚಿಕೊಳ್ಳೋಣ ಅಂತ ನಾನಿವತ್ತಿಲ್ಲಿ ಮಾತಿಗಿಳಿದಿದ್ದೇನೆ.
ನನ್ನ ವಿರೋಧಿಗಳು ಮಾಡುತ್ತಿರುವ ಟೀಕೆಗಳೆಲ್ಲ ಅರ್ಥಹೀನ. ಕೇಜ್ರಿವಾಲರು ಬರೀ ಮಾತಾಡುತ್ತಾರೆ. ಅದರ ಬದಲು ದೆಹಲಿಯಲ್ಲಿ ಆಡಳಿತ ಮಾಡಿ ತೋರಿಸಬಹುದಿತ್ತು ಎಂಬುದು ಹಲವರ ಅಂಬೋಣ. ಈ ಟೀಕೆ ಏಕೆ ಸರಿ ಇಲ್ಲ ಅಂದ್ರೆ- ಆಡಳಿತ ಮಾಡುವುದು ನಮ್ಮ ಉದ್ದೇಶವೇ ಆಗಿರಲಿಲ್ಲ. 'ನಾವು ಅರಾಜಕತೆಯ ರೂವಾರಿಗಳು' ಅಂತ ಹೇಳಿದ್ದನ್ನು ಈ ಜನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಮ್ಮ ಉದ್ದೇಶ ಅಷ್ಟೇ. ಬಿಲಿಯನ್ ಮಂದಿಯ ಭಾರತದಲ್ಲಿ ಒಂದು ಐಡೆಂಟಿಟಿ ಪಡೆಯುವುದೇನು ಸುಲಭದ ಮಾತೇನ್ರೀ? ಕೇವಲ ಕೆಲಸ ಮಾಡುತ್ತಿದ್ದರೆ ಇಷ್ಟೆಲ್ಲ ಐಡೆಂಟಿಟಿ ಅಸಾಧ್ಯ. ಐಡೆಂಟಿಟಿ ಬೇಕಾದಾಗ ಕ್ರಾಂತಿಯ ಮಾತಾಡುವುದು ಅನಿವಾರ್ಯ.ಅಶೋಕ್ ಖೇಮ್ಕ, ದುರ್ಗಾಶಕ್ತಿ ನಾಗ್ಪಾಲ್ ಇವರೆಲ್ಲ ಪ್ರಾಮಾಣಿಕರೇ. ಆದರೆ ಆಕ್ಷಣಕ್ಕೆ ಸುದ್ದಿಯಾಗಿ ಮರೆಯಾಗುತ್ತಾರೆ. ನಾನೂ ಕಂದಾಯದ ಅಧಿಕಾರಿಯಾಗಿ ಪ್ರಾಮಾಣಿಕತೆ, ನಿಷ್ಠುರವಾದ ಅಷ್ಟರಲ್ಲೇ ಇದ್ದಿದ್ದರೆ ಈ ಪರಿ ಸುದ್ದಿ ಆಗುತ್ತಲೇ ಇರಲಿಲ್ಲ. ಹಾಗೆ ನೋಡಿದರೆ ನಾನು ಖೇಮ್ಕರಂತೆ ವರ್ಗಾವಣೆ 'ಬಹುಮಾನ' ಪಡೆದವನೂ ಅಲ್ಲ. ಆರಾಮಾಗಿ ಇರಬಹುದಿತ್ತು. ಆದರೆ ಈ ಐಡೆಂಟಿಟಿ ಸಾಧ್ಯವಿರಲಿಲ್ಲ. ವಾಸ್ತವ ಏನೆಂದರೆ, ಕ್ರಾಂತಿಗೆ ಒಡ್ಡಿಕೊಳ್ಳುವ ನೈತಿಕ ಮೇಲ್‌ಸ್ತರ ನಮ್ಮ ಜನರಲ್ಲೇ ಇಲ್ಲ. ಆಕ್ಷಣಕ್ಕೆ ದೂರುವುದಕ್ಕೆ, ಪರ್ಯಾಯವೆಂದು ಏನಾದರೊಂದನ್ನು ಅಪ್ಪಿ ಸುಳ್ಳೇ ಸಂಭ್ರಮಿಸುವುದಕ್ಕೆ ಅವರಿಗೆ ನೆಪ ಬೇಕು. ಈ ಭಾವವನ್ನು ನಗದೀಕರಿಸಿಕೊಳ್ಳುವ ಕಲೆ ರೂಢಿಸಿಕೊಂಡಿದ್ದರೆ ನೀವೂ ಕೇಜ್ರಿವಾಲ್ ಆಗಬಹುದು. 'ಐ ವಾಂಟ್ ಟು ಜಾಯಿನ್ ಆಪ್. ಐ ವಾಂಟು ಕ್ಲೀನ್ ದ ಸಿಸ್ಟಮ್' ಅಂತ ನಿಮ್ಮ ಪಕ್ಕದಲ್ಲಿ ಡೈಲಾಗು ಹೊಡೆಯುತ್ತಿರುವವರೆಲ್ಲ ಎಂಥ ಜನ ಅಂತ ಸ್ವಲ್ಪ ನೋಡಿ. ನಿಜಾರ್ಥದಲ್ಲಿ ಅವರ್ಯಾರೂ ಶ್ರೀಸಾಮಾನ್ಯರಲ್ಲ. ವಿದೇಶದಲ್ಲಿ ಉದ್ಯೋಗ, ಐಟಿ-ಬ್ಯಾಂಕಿಂಗ್‌ಗಳ ಉನ್ನತ ವಲಯದಲ್ಲಿದ್ದು ಸರಿಯಾಗಿ ಕಮಾಯಿಸಿದವರು ಇವರಿಗೆಲ್ಲ ಒಂದು ಹಂತದ ನಂತರ ಐಡೆಂಟಿಟಿ ಬೇಕಾಗಿದೆ. ಏಕೆಂದರೆ ಇವರೆಲ್ಲರ ಬ್ಯಾಂಕ್ ಬ್ಯಾಲೆನ್ಸು ಕೋಟಿ ರುಪಾಯಿಗಳ ಲೆಕ್ಕದಲ್ಲಿ ಭದ್ರವಾಗಿದೆ. ಇಂಥ ನಾವೆಲ್ಲ ಸೇರಿ ನಿಮ್ಮೆದುರು ರುದ್ರ ನರ್ತನವನ್ನೇ ಶುರು ಮಾಡಿದ್ದೇವೆ. ಅರೇ, ಎಂಥೆಥವರಿಗೆಲ್ಲ ಜಾಡಿಸುತ್ತಿದ್ದಾರೆ ಈ ಪೊರಕೆಯವರು ಅಂತ ನೀವು ಪುಳಕಗೊಂಡಿದ್ದೀರಿ. ನಿಮಗೆಲ್ಲ ಒಳ್ಳೆಯದಾಗಲಿ ಅಂತ ಹಾರೈಸುವಾಗ ಒಳಗಿಂದ ತಡೆಯಲಾಗದ ನಗು ಒದ್ದುಕೊಂಡು ಬರುತ್ತಿದೆ...
-ಅಶ್ವಹೃದಯ