ಮಹಿಳಾ ದಿನ ಪ್ರಭೆ ಅನನ್ಯ
ವಿಶ್ವ ಮಹಿಳಾದಿನದಂದು 'ಕನ್ನಡಪ್ರಭ'ದ ಚಿಂತನೆ ಸರ್ವಮಾನ್ಯ. ಯಾವತ್ತೂ ಪತ್ರಿಕೆಗಳಲ್ಲಿ ಸುದ್ದಿಯಾಗದಿರುವವರನ್ನು ಮುಖಪುಟಕ್ಕೆ ಹಾಕಿದ್ದೀರಿ. ಅವರಂಥವರು ಅದೆಷ್ಟೋ ಸಂಖ್ಯೆಯಲ್ಲಿ ಇರಬಹುದು. ಆದರೆ ಅವರ ಪ್ರತಿನಿಧಿಗಳಾಗಿ ತೆರೆಯ ಮರೆಯಲ್ಲಿರುವುದನ್ನು ತೋರಿದ ಮನೋಧರ್ಮ ಶ್ಲಾಘನೀಯ.
-ಚಂದ್ರಶೇಖರ ದಾಮ್ಲೆ, ಸುಳ್ಯ
ಬೈಟೂ ಕಾಫಿಯಲ್ಲಿ ಪತ್ರಕರ್ತರಾದ ಶಾಮರಾವ್‌ರವರ ಅನುಭವದ ಕಥಾನಕವನ್ನು ಓದುತ್ತಿದ್ದರೆ ಅದೆಷ್ಟು ಕಷ್ಟಪಟ್ಟಿದ್ದಾರೆ ಅಂತ ಅನ್ನಿಸದೇ ಇರದು... ಅದು ಅರವತ್ತೇಳರ ಇಸವಿ. ಪತ್ರಕರ್ತ ದಿ. ನಾಡಿಗೇರ ಕೃಷ್ಣರಾಯರ ಸಂಪಾದಕತ್ವದಲ್ಲಿ ಜನಪ್ರಗತಿ ಎಂಬ ವಾರಪತ್ರಿಕೆ ಪ್ರಕಟವಾಗ್ತಾ ಇತ್ತು. ಆಗ ನನಗೆ 22 ವರ್ಷ. ಕೆಲಸವಿಲ್ಲದೆ ಡಿಗ್ರಿ ಮುಗಿಸಿದ ನನ್ನನ್ನು ನನ್ನ ಸೋದರ ಮಾವ ಶ್ರೀ ಬಿ. ಶಂಕರರಾಯರು (ವೇಣು ವಿದ್ವಾನ್) ನಾಡಿಗೇರರ ಪರಿಚಯವಿದ್ದ ಕಾರಣ ಅಲ್ಲಿಗೆ ಸೇರಿಸಿದ್ದರು. ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಲು ನಾಡಿಗೇರರು ಹೇಳಿದರು. ಮೊದಲೇ ನನಗೆ ಪತ್ರಿಕಾಲಯ ಹೊಸದು. ಶಾಮರಾಯರು ಪಟ್ಟ ಪಾಡು ನನಗೂ ಆಯಿತು. ಆದರೆ ನಾಡಿಗೇರರು ಧೈರ್ಯ ತುಂಬಿ ಪ್ರೋತ್ಸಾಹಿಸಿದರು. ಆದರೆ ಆ ಪತ್ರಿಕೆ ಜನಪ್ರಗತಿ 70ರ ಆರಂಭದಲ್ಲೇ ನಿಂತು ಹೋಯಿತು. ಹೆಚ್ಚಾಗಿ ಸಿನಿಮಾ ಬಗ್ಗೆ ಬರೆಯುತ್ತಿದ್ದ ನಾನು ಒಮ್ಮೆ ಸಂಯುಕ್ತ ಕರ್ನಾಟಕ ಕಾರ್ಯಾಲಯಕ್ಕೆ ಹೋಗಿ ಸ್ವತಃ ಶಾಮರಾಯರಿಗೆ ನಾನು ಬರೆದ ಲೇಖನ ಕೊಟ್ಟೆ. ಅವರು ಒಂದೇ ಮಾತು ಹೇಳಿದರು.. 'ನಿನ್ನ ಬರಹಗಳನ್ನು ಗಮನಿಸಿದ್ದೀನಿ. ಕೇವಲ ಸಿನಿಮಾ ಬಗ್ಗೆ ಬರೆಯುವ ಬದಲು ಇತರೇ ವಿಷಯಗಳ ಕಡೆಗೂ ಗಮನ ಹರಿಸು. ಸಾಹಿತ್ಯ, ವಿಮರ್ಶೆ ಹೀಗೇ..' ಅವರ ಪ್ರೋತ್ಸಾಹದಿಂದ ಮುಂದೆ ನಾನು ಸಂಗೀತ, ಸಾಹಿತ್ಯದ ಬಗ್ಗೆ ವಿಮರ್ಶಿಸಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬರೆಯಲಾರಂಭಿಸಿದೆ.
- ಬಿ.ಎಸ್. ರಮೇಶ್, ಹಿರಿಯ ಲೇಖಕ-ಬರಹಗಾರ
ಬನಶಂಕರಿ, ಬೆಂಗಳೂರು-85
ದಿ. 28ರ ಕ.ಪ್ರ.ದಲ್ಲಿ ಪ್ರತಾಪ್ ಸಿಂಹರ ಲೇಖನ 'ನಪುಂಸಕರ್ಯಾರು....? ಓದಿದ ನಂತರವಾದರೂ ಸಲ್ಮಾನ್ ಖುರ್ಷಿದ್‌ರಂತಹ ನಪುಂಸಕರು ತಮ್ಮ ನರಸತ್ತ ನಾಲಿಗೆಗೆ ಕಡಿವಾಣ ಹಾಕಿಕೊಳ್ಳಬೇಕು. ನೆಹರೂ ಕುಟುಂಬದ ಚಾಕರಿ ಮಾಡುತ್ತಾ ತಮ್ಮ ಎಲುಬಿಲ್ಲದ ನಾಲಿಗೆಗಳಿಂದ ಯದ್ವಾತದ್ವಾ ಮಾತನಾಡುವ ದಿಗ್ವಿಜಯಸಿಂಗ್, ಸಿಬಲ್, ಮನಿಷ್‌ತಿವಾರಿ, ಹರಿಪ್ರಸಾದ್‌ರಂತಹವರು ಎಲ್ಲರೂ ನಪುಂಸಕರೇ.
- ಕುತ್ಪಾಡಿ ಜಯಪ್ರಕಾಶ್ ಹೆಗ್ಡೆ, ತೀರ್ಥಹಳ್ಳಿ
ವಾರದ ಹಿಂದೆ ಮನೆಗೆ ಪತ್ರಿಕೆ ಬಂದ ಕೂಡಲೇ ಕೈ ಸೇರುತ್ತಿದ್ದ ಬೈಟುಕಾಫಿ ಅರ್ಧ ಗಂಟೆಯ ನಂತರ ಮೆಲ್ಲನೆ ರದ್ದಿ ಪೇಪರಿಗೆ ಸೇರುತ್ತಿತ್ತು. ಆದರೆ ಈಗ ಕೆ. ಶ್ಯಾಮರಾಯರ ಸಂಜಯ ಉವಾಚ ಲೇಖನ ತುಂಬಾ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತಿದೆ. ಬೈಟು ಕಾಫಿ ಇನ್ನೂ ಹೆಚ್ಚು ಅರ್ಧ ಗಂಟೆ ಕೈಯಲ್ಲಿರುವುದೇ ಒಂದು ಖುಷಿ ಸಂಜಯ ಉವಾಚ ಉತ್ತಮ ಲೇಖನ ದಯವಿಟ್ಟು ಮುಂದುವರಿಸಿ.
- ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಫೆ. 23ರ ಖುಷಿ ಸಾಪ್ತಾಹಿಕದಲ್ಲಿ ಪ್ರಕಟವಾದ ಬರ್ತ್ ಡೇಟಿಲ್ಲದ ಬ್ರಹ್ಮಾಂಡ ಲೇಖನ ಓದಿ ಹಲವು ಕುತೂಹಲಕಾರಿ ವಿಷಯಗಳನ್ನು ತಿಳಿದಂತಾಯಿತು. ನಮ್ಮ ಬ್ರಹ್ಮಾಂಡ ಅನಂತವಾಗಿದ್ದು ಅದಕ್ಕೆ ವಯಸ್ಸೆಂಬುದೇ ಇಲ್ಲ. ಬ್ರಹ್ಮಾಂಡ ದಿನೇ ದಿನ ಕುಗ್ಗುತ್ತಿದೆಯೇ? ದಿನೇ ದಿನೇ ಉಬ್ಬುತ್ತಿದೆಯೇ? ಅದು ಸ್ಥಿರವಾಗಿದೆಯೇ ಇಲ್ಲವೇ ದಿನೇ ದಿನೇ ದೊಡ್ಡ ದೊಡ್ಡದಾಗುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಭೂವಾಸಿಗಳಾದ ವಿಜ್ಞಾನಿಗಳಿಗೆ ಇದುವರೆಗೂ ಉತ್ತರ ದೊರೆತಿಲ್ಲ. ಏಕೆಂದರೆ ವಿಜ್ಞಾನ ನಿಂತ ನೀರಲ್ಲ! ಇದೊಂದು ಅದ್ವಿತೀಯ ಲೇಖನ.
- ವಿ. ಹೇಮಂತಕುಮಾರ್, ಬೆಂಗಳೂರು, ಮೊ. 90359 92900
ಜಗನ್ನಾಥ್ ನಿಮಗೆ ಶುಭವಾಗಲಿ (ಕ.ಪ್ರ. 2/3) ಒಂದು ರೀತಿಯಲ್ಲಿ ಅಪರೂಪದ ಲೇಖನ ಅಂತಲೇ ಹೇಳಬಹುದೇನೋ? ಎಷ್ಟು ಮಂದಿ ತಮ್ಮ ಸಹೋದ್ಯೋಗಿಗಳ ಉನ್ನತಿಯನ್ನು ಇಷ್ಟೊಂದು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ? ಮನಸ್ಸಿಲ್ಲದ ಮನಸ್ಸಿನಿಂದ, ಕಚೇರಿಯ ಆವರಣದಲ್ಲೋ, ನಾಲ್ಕು ಮಂದಿಯ ಮಧ್ಯೆಯೋ ಅಭಿನಂದನೆ ಹೇಳಬಹುದು. ಅದರಲ್ಲೂ ವ್ಯಕ್ತಿ ತಮ್ಮ ಪ್ರತಿಸ್ಪರ್ಧಿಯೊಡನೆ ಸೇರುತ್ತಿದ್ದಾರೆಂದರಂತೂ ಮುಗಿದೇ ಹೋಯಿತು. ಆದರೆ ಪ್ರತಿಸ್ಪರ್ಧಿ ಪತ್ರಿಕೆಯ ಬಗ್ಗೆ, ಕನ್ನಡಪ್ರಭ ಸಂಪಾದಕರು ಎಷ್ಟೊಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆಂದರೆ ಆಶ್ಚರ್ಯವಾಗದೇ ಇರದು. ಅಂದ ಹಾಗೆ, ಈ ರೀತಿಯ ಮನೋಭಾವವನ್ನು ನಮ್ಮ ರಾಜಕಾರಣಿಗಳಲ್ಲೂ ಎಂದಾದರೂ ಕಾಣಬಹುದೇ ಎಂಬುದನ್ನು ಉತ್ತರಿಸುವುದು ವಿಶ್ವೇಶ್ವರ ಭಟ್ ಅವರಿಗೂ ಸಾಧ್ಯವಾಗಲಿಕ್ಕಿಲ್ಲ ಅಲ್ಲವೇ?
- ಶಂಕರನಾರಾಯಣ ಭಟ್, ಮಾಡಗೇರಿ. ಹೊನ್ನಾವರ.
ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.