ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೇಜ್ರೀವಾಲ್ ಕೇಳಿದ ಪ್ರಶ್ನೆಗಳಿಗೆ ಗುಜರಾತಿಯೊಬ್ಬ ನೀಡಿದ ಉತ್ತರ

ನೀವು ಪ್ರಧಾನಿಯಾದರೆ, ಕೆಜಿ ಬೇಸಿನ್..

Srinivasa Murthy VN
Updated On : 10 Mar 2014, 2:08 am

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಕೇಜ್ರೀವಾಲ್ ಕೇಳಿರುವ 16 ಪ್ರಶ್ನೆಗಳು ಎಷ್ಟು ಅಸಮಂಜಸವಾಗಿವೆ ಎನ್ನುವುದನ್ನು ವಿಶ್ಲೇಷಿಸುವ ಲೇಖನವೊಂದು "ಫೋರ್ಸ್‌ನಮೋ" ಎಂಬ ಜಾಲತಾಣದಲ್ಲಿ ಪ್ರಕಟವಾಗಿದೆ. ಗುಜರಾತಿಯೊಬ್ಬ ಬರೆದ ಆ ಲೇಖನದ ಆಯ್ದಭಾಗ...

ಕೇಜ್ರಿವಾಲರ ಬೂಟಾಟಿಕೆ ಮತ್ತು ಅರಾಜಕತೆಗೆ ಸಾಕ್ಷಿಯಾಗಿರುವುದರಿಂದ, ಅವರ ಪ್ರಶ್ನೆಗಳಿಗೆ ಉತ್ತರಿಸುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತೇನೆ. ಅವರು ನರೇಂದ್ರ ಮೋದಿಯವರಿಗೆ ಕೇಳಿದ ಪ್ರಶ್ನೆಗಳೇನಪ್ಪಾ ಅಂದರೆ...
1.    ನೀವು ಪ್ರಧಾನಿಯಾದರೆ, ಕೆಜಿ ಬೇಸಿನ್ (ಕೃಷ್ಣ- ಗೋದಾವರಿ) ಗ್ಯಾಸ್ ಬೆಲೆಯನ್ನು ಇನ್ನಷ್ಟು ಹೆಚ್ಚಿಸುತ್ತೀರಾ?
ಕೇಜ್ರೀವಾಲ್ ಅವರೇ, ನಿಮ್ಮೆದುರು ಕೆಲವು ಅಂಕಿ ಅಂಶಗಳನ್ನಿಡುತ್ತೇನೆ ಕೇಳಿ. ಭಾರತದಲ್ಲಿ ಮೂರನೇ ಎರಡರಷ್ಟು ಅನಿಲ ಉತ್ಪಾದನೆಯನ್ನು ಓಎನ್‌ಜಿಸಿ ನೇತೃತ್ವದ ಸಾರ್ವಜನಿಕ ವಲಯದ ಉದ್ಯಮಗಳು ಮಾಡುತ್ತವೆ. ರಿಲಾಯನ್ಸ್‌ನ ಉತ್ಪಾದನೆ ಹೆಚ್ಚೆಂದರೆ 10 ಪ್ರತಿಶತವಿದೆಯಷ್ಟೆ. ಹಾಗಾಗಿ ಅನಿಲ ಬೆಲೆಯಲ್ಲಿನ ಹೆಚ್ಚಳದ ಅತಿದೊಡ್ಡ ಫಲಾನುಭವಿ ಓನ್‌ಎನ್‌ಜಿಸಿಯೇ ಆಗಿರಲಿದೆ. ಅಂದರೆ ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಹಣ ಹರಿದು ಬರಲಿದೆ. ಹಾಗಾಗಿ ರಿಲಾಯನ್ಸ್‌ಗೆ ಲಾಭ ಮಾಡಿಕೊಡಲು ಅನಿಲದ ಬೆಲೆ ಹೆಚ್ಚಿಸಲಾಗುತ್ತಿದೆ ಎನ್ನುವ ನಿಮ್ಮ ವಾದಕ್ಕೆ ಅರ್ಥವಿಲ್ಲ. ಅನಿಲ ಬೆಲೆಯನ್ನು ಹೆಚ್ಚಿಸಬೇಕೆಂದು ಶಿಫಾರಸು ಮಾಡಿದ್ದು ಸಿ. ರಂಗರಾಜನ್ ನೇತೃತ್ವದ ಆರು ಮಂದಿ ಸದಸ್ಯರ ಸಮಿತಿ. ಈ ಆರು ಮಂದಿ ರಿಲಾಯನ್ಸ್‌ನಿಂದ ಹಣ ಪಡೆಯುತ್ತಾರೆ ಎನ್ನುವ ಮಾತು ನಿಜಕ್ಕೂ ಖಂಡನಾರ್ಹ. ಏಕೆಂದರೆ ಈ ಸಮಿತಿಯನ್ನು ನೇಮಕ ಮಾಡಿದ್ದೇ ಅಂದಿನ ಇಂಧನ ಸಚಿವರಾದ ಜಯಪಾಲ್ ರೆಡ್ಡಿಯವರು. ರೆಡ್ಡಿ ರಿಲಾಯನ್ಸ್‌ನ ಕಡು ವಿರೋಧಿ ಎನ್ನುವುದು ನಿಮಗೆ ಗೊತ್ತಿದೆಯೆಂದುಕೊಳ್ಳುತ್ತೇನೆ.
2.    ನಿಮ್ಮ ಸರ್ಕಾರ ಪ್ರತಿ ಯೂನಿಟ್‌ಗೆ 13 ರುಪಾಯಿ ತೆತ್ತು ಸೌರ ವಿದ್ಯುತ್ ಖರೀದಿಸಿತೇಕೆ? ಮಧ್ಯಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ 7.50 ಮತ್ತು 5 ರುಪಾಯಿ ಪ್ರತಿ ಯೂನಿಟ್‌ಗೆ ಖರೀದಿ ಮಾಡಿವೆಯಲ್ಲ?
ಸೌರ ವಿದ್ಯುತ್ ಎನ್ನುವುದು ಅತ್ಯುತ್ಕೃಷ್ಟ ತಂತ್ರಜ್ಞಾನ ಚಾಲಿತ ವಲಯಗಳ ಉತ್ಪನ್ನ. ಗುಜರಾತ್ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಎಲ್ಲಾ ರಾಜ್ಯಗಳಿಗಿಂತಲೂ ಮುಂದಿದೆ. ಅದಾಗ್ಯೂ ಕ್ಷಿಪ್ರ ಬೆಳವಣಿಗೆಗಳಿಂದಾಗಿ ಸೌರ ವಿದ್ಯುತ್ ಉತ್ಪಾದನೆಯ ವೆಚ್ಚ ಇತ್ತೀಚೆಗೆ ಕಡಿಮೆಯಾಗಿರಬಹುದು. ಇಂಥ ಹೊಸ ತಂತ್ರಜ್ಞಾನಗಳು ಅಸ್ತಿತ್ವದಲ್ಲಿಲ್ಲದ ಕಾಲದಲ್ಲೇ ಗುಜರಾತ್ ಈ ಕ್ಷೇತ್ರಕ್ಕೆ ಕಾಲಿಟ್ಟಿತು! ಈಗ ಉತ್ಪಾದನಾ ವೆಚ್ಚಗಳೇನೋ ಕಡಿಮೆಯಾಗಿವೆ ಆದರೆ ಗುಜರಾತ್ ಸರ್ಕಾರ ಸೌರ ವಿದ್ಯುತ್‌ಗೆ ಮೊರೆ ಹೋದಾಗ, ಅದು ಅಂದಿನ ಉತ್ಪಾದನಾ ಕಂಪನಿಗಳೊಂದಿಗೆ ಈ ಒಪ್ಪಂದವನ್ನು ಮಾಡಿಕೊಂಡಿರಬಹುದು. ದಯವಿಟ್ಟು ಆಡಳಿತ ಮತ್ತು ಎಲ್ಲಕ್ಕೂ ಮುಖ್ಯವಾಗಿ ಆರ್ಥಿಕತೆಯ ಪಾಠವನ್ನು ಕಲಿಯಿರಿ. ಪೂರೈಕೆ ಮತ್ತು ಬೇಡಿಕೆಯ ಸೂತ್ರಗಳ ಬಗ್ಗೆ ತಿಳಿದುಕೊಳ್ಳಿ. ಬೇಡಿಕೆಗಿಂತಾ ಹೆಚ್ಚು ವೇಗದಲ್ಲಿ ಪೂರೈಕೆ ಸಾಗಿದಾಗ, ಸಹಜವಾಗಿಯೇ ಬೆಲೆಗಳು ಕಡಿಮೆಯಾಗುತ್ತವೆ. ಇದೇ ನಿಯಮ ಸೌರ ವಿದ್ಯುತ್‌ಗೂ ಮುಂದೆ ಅನ್ವಯವಾಗಲಿದೆ.
3.    ಕೃಷಿ ಕ್ಷೇತ್ರದಲ್ಲಿ 11 ಪ್ರತಿಶತ ಬೆಳವಣಿಗೆಯಾಗಿದೆ ಎಂದು ನೀವು ಹೇಳುತ್ತೀರಾದರೂ, ನಿಮ್ಮ ಸರ್ಕಾರದ ಅಂಕಿ ಅಂಶಗಳ ಪ್ರಕಾರ 2006-2007ರಲ್ಲಿ 27, 815 ಕೋಟಿಯಷ್ಟಿದ್ದ ವಾರ್ಷಿಕ ಹುಟ್ಟುವಳಿ, 2012-2013ರ ವೇಳೆಗೆ 25,908 ಕೋಟಿ ರುಪಾಯಿಗೆ ಇಳಿದದ್ದೇಕೆ?
ನೀವು ಏನು ಹೇಳಬೇಕೆಂದುಕೊಂಡಿದ್ದೀರೋ ತಿಳಿಯುತ್ತಿಲ್ಲ. ಇಂದು ಗುಜರಾತ್ ದೇಶದ ಮುಂದೆ ಸಹಕಾರ ವಲಯದ ಯಶಸ್ವಿ ಮಾದರಿಯನ್ನು ತೆರೆದಿಟ್ಟಿದೆ. ಅದು 'ಅಮುಲ್‌'ನ ಆಗರ. ಕಳೆದೊಂದು ದಶಕದಲ್ಲಿ ಗುಜರಾತ್‌ನಲ್ಲಿ ಹಾಲು ಉತ್ಪಾದನೆ 75 ಪ್ರತಿಶತದಷ್ಟು ಹೆಚ್ಚಾಗಿರುವುದು ಮತ್ತು ಆ ರಾಜ್ಯ 'ವೈಟ್ ರೆವಲ್ಯೂಷನ್‌'ಗೆ ಸಾಕ್ಷಿಯಾಗಿರುವುದು ನಿಮಗೆ ಗೊತ್ತಿಲ್ಲವೆ? ಸ್ವಲ್ಪ ಸಂಶೋಧನೆ ನಡೆಸಿ ನೋಡಿ, ಆಗ ಗುಜರಾತ್‌ನ ರೈತರು ಉಳಿದ ರಾಜ್ಯಗಳ ರೈತರಿಗಿಂತ 7 ಪಟ್ಟು ಹೆಚ್ಚು ಶ್ರೀಮಂತರಿದ್ದಾರೆ ಮತ್ತು 2001ರಲ್ಲಿ 14,000 ಕೋಟಿಯಷ್ಟಿದ್ದ ಕೃಷಿ ಆದಾಯ 2011ರ ವೇಳೆಗೆ 96,000 ಕೋಟಿ ರುಪಾಯಿಗಳಿಗೆ ಏರಿದೆ ಎನ್ನುವುದು ತಿಳಿಯುತ್ತದೆ. ಗುಜರಾತ್ ಅಭಿವೃದ್ಧಿಯಿಂದ ಹೆಚ್ಚು ಲಾಭವಾಗಿರುವುದು ರೈತರಿಗೇ.
4.    ಕಳೆದ 10 ವರ್ಷಗಳಲ್ಲಿ ಗುಜರಾತ್‌ನ ಮೂರನೇ ಎರಡು ಭಾಗದಷ್ಟು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮುಚ್ಚಿಹೋಗಿವೆ. ಅದರಲ್ಲೂ ನಿಮ್ಮ ತವರೂರು ಮೆಹಸಾನಾದಲ್ಲಿದ್ದ 187 ಘಟಕಗಳಲ್ಲಿ ಸುಮಾರು 140 ಘಟಕಗಳು ಬಾಗಿಲು ಹಾಕಿವೆ. ನಿಮ್ಮ ಅಧಿಕಾರವನ್ನೇನಿದ್ದರೂ ಕೇವಲ ದೊಡ್ಡ ಉದ್ಯಮಗಳಿಗಷ್ಟೇ ಕೇಂದ್ರೀಕರಿಸುತ್ತಿದ್ದೀರಾ?
ಮಿ. ಕೇಜ್ರೀವಾಲ್, ಮೊದಲನೆಯದಾಗಿ ನರೇಂದ್ರ ಮೋದಿಯವರ ತವರು ಮೆಹಸಾನಾ ಅಲ್ಲ, ಅದು ವಾದ್‌ನಗರ್! ಹೋಗಲಿ ಬಿಡಿ, ವಿಷಯ ಪಲ್ಲಟ ಮಾಡದೆ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ.  ಭಾರತದ 5 ಪ್ರತಿಶತ ಜನ ಗುಜರಾತ್‌ನಲ್ಲಿ ವಾಸಿಸುತ್ತಾರೆ. ದೇಶದ ಜಿಡಿಪಿಯಲ್ಲಿ ಗುಜರಾತ್‌ನ ಪಾಲು 10 ಪ್ರತಿಶತದಷ್ಟಿದೆ. ಇದರಲ್ಲಿ ಮುಖ್ಯ ಕೊಡುಗೆ ಸಣ್ಣ ಮತ್ತು ಮಧ್ಯಮ ಉದ್ಯಮಗಳದ್ದೇ. ಭಾರತದ ಸುಮಾರು 70 ಪ್ರತಿಶತದಷ್ಟು ಉಪ್ಪು ಉತ್ಪಾದನೆ ಗುಜರಾತ್‌ನಲ್ಲೇ ಆಗುತ್ತದೆ. ಇನ್ನು ಕಾಸ್ಟಿಕ್ ಸೋಡಾ ಉತ್ಪಾದನೆಯಲ್ಲೂ(90 ಪ್ರತಿಶತ) ಆ ರಾಜ್ಯ ಮುಂದಿದೆ. ಅಲ್ಲದೆ ಕೆಮಿಕಲ್ಸ್(ಶೇ.60), ಪೆಟ್ರೋಕೆಮಿಕಲ್ಸ್(ಶೇ.50), ಫಾರ್ಮಾ(ಶೇ.40), ವಜ್ರ(ಶೇ. 80)...ಹೀಗೆ ಎಲ್ಲದರಲ್ಲೂ ದೇಶದಲ್ಲಿ ಅದರ ಪಾಲೇ ಹೆಚ್ಚಿದೆ. ಇನ್ನು ಉಪ್ಪು, ಫಾರ್ಮಾ ಮತ್ತು ಕೆಮಿಕಲ್‌ಗಳ ಉತ್ಪಾದನೆಯನ್ನು ಸಣ್ಣ ಉದ್ಯಮಗಳೇ ಮಾಡುತ್ತಿರುವುದು. 2012-2013ರಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸುಮಾರು 17880 ಕೋಟಿ ರುಪಾಯಿ ಹೂಡಿಕೆ ಹರಿದುಬಂದಿದೆ. 2006-07ರಲ್ಲಿ 76,196ರಷ್ಟಿದ್ದ ಈ ವಲಯದ ಉದ್ಯೋಗ ಸೃಷ್ಟಿ 2012-13ರಲ್ಲಿ 381083ಕ್ಕೆ ಏರಿದೆ. ಇದು ನಿಮದೆ ಗೊತ್ತೆ?
5.    ಗುಜರಾತ್‌ನಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾಗಿದೆಯೆಂದು ಹೇಳುತ್ತೀರಿ. ಆದರೆ ಒಬ್ಬ ತಲಾತಿ (ಕಂದಾಯ ಅಧಿಕಾರಿ) ನೇಮಕಕ್ಕೆ 10 ಲಕ್ಷದ ವರೆಗೂ ಲಂಚ ಕೊಡಬೇಕಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ.
ಈ ಪ್ರಶ್ನೆಗೂ ಆಧಾರವಿಲ್ಲ. ಆದರೂ ಹೇಳುತ್ತೇನೆ ಕೇಳಿ. ಇ-ಆಡಳಿತದಲ್ಲಿ ಗುಜರಾತ್ ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಅಲ್ಲಿನ ನೇಮಕಾತಿ ಪ್ರಕ್ರಿಯೆಗಳು ಅತ್ಯಂತ ಪಾರದರ್ಶಕವಾಗಿವೆ. ಅವೆಲ್ಲ ಬಹುತೇಕ ನಡೆಯುವುದು ಆನ್‌ಲೈನ್‌ನಲ್ಲೇ. ನೇಮಕಾತಿ ಪ್ರಕ್ರಿಯೆಯ ಇಂಚಿಂಚು ಮಾಹಿತಿಯೂ ಅಂತರ್ಜಾಲದಲ್ಲಿ ಲಭ್ಯವಿದೆ. ಇದೇನೇ ಇದ್ದರೂ ತಲಾತಿಯಂಥ ಹುದ್ದೆಗೆ ಇಷ್ಟೊಂದು ಬೇಡಿಕೆಯಿದೆ (10 ಲಕ್ಷ ರುಪಾಯಿ) ಎಂದು ನನಗಂತೂ ಗೊತ್ತಿರಲಿಲ್ಲ!
6.    ನಿಮ್ಮ ಸಚಿವಾಲಯದಲ್ಲಿ ಬಾಬೂ ಬೋಖಿರಿಯಾ(ಮೈನಿಂಗ್ ಪ್ರಕರಣ) ಮತ್ತು ಪುರುಷೋತ್ತಮ್ ಸೋಲಂಕಿ(450ಕೋಟಿ ಮೊತ್ತದ ಫಿಷಿಂಗ್ ಹಗರಣದ ಆಪಾದಿತ)ಯಂಥವರಿದ್ದಾರೆ. ಏಕೆ?
ಕೇಜ್ರೀವಾಲ್ ಒಮ್ಮೆ ಸತ್ಯಾಸತ್ಯತೆಯನ್ನು ನೋಡಿ. ಬಾಬು ಬೋಖಿರಿಯಾ ಪ್ರಕರಣ ಗುಜರಾತ್ ಹೈಕೋರ್ಟ್‌ನ ಮುಂದಿದೆ ಮತ್ತು ಅದು ಬಾಬು ವಿರುದ್ಧ ಅಪರಾಧ ನಿರ್ಣಯಕ್ಕೆ ತಡೆ ಒಡ್ಡಿದೆ. ಮಾಧ್ಯಮಗಳ ವರದಿ ನೋಡಿ ಒಬ್ಬರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ. ಇನ್ನು ಪುರುಷೋತ್ತಮ್ ಸೋಲಂಕಿ ತಪ್ಪಿತಸ್ಥರೆಂದು ರುಜುವಾತಾಗಿಲ್ಲ. ಅದಿರಲಿ, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕು ಎಂದು ನಿಮ್ಮ ಪ್ರಶಾಂತ್ ಭೂಷಣ್ ಹೇಳುತ್ತಾರಲ್ಲ. ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
7.    ಅಂಬಾನಿ ಕುಟುಂಬದ ಅಳಿಯನನ್ನು ನಿಮ್ಮ ಕ್ಯಾಬಿನೆಟ್‌ಗೆ ಸೇರ್ಪಡೆಗೊಳಿಸಿಕೊಂಡಿದ್ದೇಕೆ?
ಅಲ್ಲಾರೀ, ಒಬ್ಬ ವ್ಯಕ್ತಿಯನ್ನು ಆತನ ಕುಟುಂಬದ ಹಿನ್ನೆಲೆಯನ್ನು ಮುಂದಿಟ್ಟುಕೊಂಡೇ ನೋಡಬೇಕೇ? ಉದ್ಯಮಿಗಳ ಕುಟುಂಬದಿಂದ ಬಂದವರೆಲ್ಲ ಭ್ರಷ್ಟರು ಎನ್ನುವುದು ನಿಮ್ಮ ವಾದವೇ? ನೀವು ವ್ಯಾಗನ್ ಆರ್ ಕಾರಲ್ಲಿ ಅಡ್ಡಾಡುತ್ತೀರಿ ಮತ್ತು ಆ ಕಾರನ್ನು ಜಪಾನಿ ಕಂಪನಿಯಾದ ಸುಜುಕಿ ತಯಾರಿಸುತ್ತದೆ ಎನ್ನುವ ಕಾರಣಕ್ಕೆ, ನಿಮಗೂ ಆ ಕಂಪನಿಗೂ ಸಂಬಂಧವಿದೆ ಎಂದರೆ ಹೇಗಿರುತ್ತದೆ? ಕೇಜ್ರೀವಾಲ್ ಅವರೇ, ಕಳೆದ 12 ವರ್ಷಗಳಿಂದ ಅನೇಕ ಅಡ್ಡಿಗಳ ನಡುವೆಯೂ ಗುಜರಾತ್‌ನ ಏಳಿಗೆಗಾಗಿ ಶ್ರಮವಹಿಸುತ್ತಿರುವ ವ್ಯಕ್ತಿಯ ಬಗ್ಗೆ ಈ ರೀತಿ ಬಾಲಿಶ ದೂಷಣೆಗಳನ್ನು ಮಾಡದಿರಿ.
8.    ಕೆಲವೊಂದು ಶಾಲೆಗಳಲ್ಲಿ 600 ವಿದ್ಯಾರ್ಥಿಗಳಿಗೆ ಕೇವಲ 3 ಶಿಕ್ಷಕರಿದ್ದಾರೆ. ಇದಕ್ಕೇನನ್ನುತ್ತೀರಿ?
ಅವು ಯಾವ ಶಾಲೆಗಳೆಂದು ಹೇಳಲೇ ಇಲ್ಲವಲ್ಲ ಕೇಜ್ರೀವಾಲ್ ಸರ್? ಕೆಲವೊಂದು ಹಳ್ಳಿಗಳಲ್ಲಿ ಇದ್ದಿರಬಹುದುಬಿಡಿ. ಏಕೆಂದರೆ ಸುಮಾರು 18,500 ಹಳ್ಳಿಗಳನ್ನು ಹೊಂದಿರುವ ಈ ಬೃಹತ್ ರಾಜ್ಯದಲ್ಲಿ ಕೆಲವೊಂದೆಡೆ ಇಂಥ ಸಮಸ್ಯೆಗಳಿರುವುದು ಸಹಜವೇ. ಇನ್ನು ದೆಹಲಿಯ ಉದಾಹರಣೆಯನ್ನು ದಯವಿಟ್ಟು ಕೊಡದಿರಿ. ಆ ರಾಜ್ಯವನ್ನು ಸರಿಯಾಗಿ 2 ತಿಂಗಳೂ ಆಳುವುದಕ್ಕೆ ನಿಮಗಾಗಲಿಲ್ಲ.  ಯಾರ ಬಳಿಯೂ ಮಂತ್ರದಂಡವಿರುವುದಿಲ್ಲವೆನ್ನುವುದು ಅರ್ಥಮಾಡಿಕೊಳ್ಳಿ. ಅಭಿವೃದ್ಧಿ ಅಥವಾ ಬದಲಾವಣೆ ಒಂದೇ ದಿನಕ್ಕಾಗುವುದಲ್ಲ. ಆದರೆ ಅನ್ಯ ರಾಜ್ಯಗಳಿಗೆ ಹೋಲಿಸಿದರೆ, ಗುಜರಾತ್‌ನ ಶಿಕ್ಷಣ ವಲಯ ಅತ್ಯಂತ ಮುಂದಿದೆ.
9.    ಕಂದಾಯ ಅಧಿಕಾರಿಯ ಹುದ್ದೆಗೆ(1500) ಸುಮಾರು 13 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೂ ನೀವು ನಿರುದ್ಯೋಗ ಸಮಸ್ಯೆಯಿಲ್ಲ ಎಂದು ಹೇಗೆ ಹೇಳುತ್ತೀರಿ?
ಜನರಿಗೆ ತಮಗಿಷ್ಟ ಬಂದ ಹುದ್ದೆಗೆ ಅರ್ಜಿ ಸಲ್ಲಿಸುವ ಅಧಿಕಾರವಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ನೀವು ಕೂಡ ಒಂದೊಮ್ಮೆ ಕಂದಾಯ ಅಧಿಕಾರಿಯಾಗಿದ್ದವರು.ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಆದಾಯ ಬರುತ್ತಿರುವುದು ಗುಜರಾತ್‌ನಿಂದಲೇ ಎನ್ನುವುದು ನಿಮಗೆ ಗೊತ್ತಿಲ್ಲವೇ? ಉದ್ಯೋಗಗಳು, ಉದ್ಯಮಗಳು ಅಥವಾ ಅಭಿವೃದ್ಧಿಯಿಲ್ಲದೇ ಇದ್ದಿದ್ದರೆ ಈ ಮಟ್ಟದ ಹಣ ಎಲ್ಲಿಂದ ಬರುತ್ತಿತ್ತು?
10.    5 ವರ್ಷದ ಗುತ್ತಿಗೆ ಆಧಾರದ ಮೇಲೆ ಕೇವಲ 5, 300 ರುಪಾಯಿ ಸಂಬಳ ಕೊಟ್ಟು ಯುವ ಪದವಿಧರರನ್ನು ಏಕೆ ನಿಮ್ಮ ಸರ್ಕಾರ ಹಾಳು ಮಾಡುತ್ತಿದೆ?
ಕೇಜ್ರೀ ಬಾಬೂ, ನೀವು ಗಮನಿಸದ ಆದರೆ ನಿಮ್ಮ ಭದ್ರತೆಗಾಗಿ ನಿಮ್ಮನ್ನು ನೆರಳಿನಂತೆ ಹಿಂಬಾಲಿಸುವ ಪೊಲೀಸ್ ಕಾನ್ಸ್‌ಟೆಬಲ್‌ಗಳ ಸಂಬಳ ಎಷ್ಟೆಂದು ನಿಮಗೆ ಗೊತ್ತೆ? ಅದು ಈ 5,300 ರುಪಾಯಿಗಿಂತಲೂ ಕಡಿಮೆಯಿರುತ್ತದೆ. ಗುಜರಾತ್‌ನ ಪ್ರತಿಯೊಬ್ಬ ಪ್ರಜೆಯ ನರನಾಡಿಗಳಲ್ಲೂ ಉದ್ಯಮಶೀಲತೆಯ ಗುಣವಿದೆ. ಸರ್ಕಾರಿ ನೌಕರಿಯಲ್ಲಿರದವರೆಲ್ಲ ನಿರುದ್ಯೋಗಿಗಳೆಂದು ಭಾವಿಸುತ್ತೀರೇಕೆ? ಸರ್ಕಾರಿ ನೌಕರಿಯ ಗುಂಗಿಗೆ ಬಿದ್ದ ಜನ ನಾವಲ್ಲ. ನಾವು ಉದ್ಯೋಗಗಳನ್ನು ಸೃಷ್ಟಿಸುವುದರಲ್ಲಿ ನಂಬಿಕೆಯಿಟ್ಟುಕೊಂಡವರು.
11.    ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು ಕುಂಟುತ್ತಾ ಸಾಗಿವೆಯೇಕೆ?
ಅಹಮದಾಬಾದ್ ಇಂದು 'ಮೆಡಿಕಲ್ ಟೂರಿಸ್ಟ್ ಹಬ್‌' ಆಗಿರುವುದು ಸುಳ್ಳೇ ಕೇಜ್ರೀವಾಲ್ ಸರ್? ಅಥವಾ ನಿಮ್ಮನ್ನು ಅಟ್ಟದ ಮೇಲೇರಿಸುತ್ತಿರುವ ಮಾಧ್ಯಮಗಳ ಕಟ್ಟುಕತೆಯನ್ನೇ ನಂಬಬೇಕು ಎನ್ನುತ್ತೀರಾ? ಇಂದು ಎಷ್ಟೋ ಮಂದಿ ವಿದೇಶಿಯರು ಗುಜರಾತ್‌ನ ಅತ್ಯಾಧುನಿಕ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಅಂಥ ಆಸ್ಪತ್ರೆಗಳಲ್ಲಿ ಅತಿ ಬಡವರೂ ಕೂಡ ಚಿಕಿತ್ಸೆ ಪಡೆಯುತ್ತಾರೆ. 'ಮುಖ್ಯಮಂತ್ರಿ ಅಮೃತಂ' ಯೋಜನೆಯಡಿಯಲ್ಲಿ ಕ್ಯಾನ್ಸರ್‌ನಂಥ ರೋಗಗಳಿಂದ ಬಳಲುವ ಬಡವರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
12.    ಸರ್ಕಾರ ಬೆಂಬಲ ಬೆಲೆ ಮತ್ತು ಸಬ್ಸಿಡಿ ಕೊಡುವುದನ್ನು ನಿಲ್ಲಿಸಿರುವುದರಿಂದ ಕಳೆದ ಕೆಲವು ವರ್ಷಗಳಲ್ಲಿ 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೇನನ್ನುತ್ತೀರಿ?
ನನಗೆ ತಿಳಿದ ಮಟ್ಟಿಗೆ, ಇಂದು ಅತ್ಯಧಿಕ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಆಡಳಿತವಿರುವ(ನೀವು ಮೈತ್ರಿ ಮಾಡಿಕೊಂಡಿರಲ್ಲ, ಅದೇ ಪಕ್ಷ) ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ. ಆದರೆ ರೈತರ ಆತ್ಮಹತ್ಯೆ ಗಂಭೀರ ವಿಷಯವೇ. ಅದಾಗ್ಯೂ ಆತ್ಮಹತ್ಯೆಗೆ ಅನೇಕ ಕಾರಣಗಳಿರುತ್ತವೆ. ಅದಕ್ಕೆ ಪ್ರಮುಖ ಕಾರಣ ಬೆಳೆ ನಾಶವಾಗುವುದು ಅಲ್ಲವೇ ಕೇಜ್ರೀವಾಲ್? ಬೆಳೆ ಏಕೆ ನಾಶವಾಗುತ್ತದೆ? ನೀರಿನ ಅಭಾವದಿಂದಲೇ ಅಲ್ಲವೇ? ನೀರಿನ ಅಭಾವವೇಕೆ ಉಂಟಾಗುತ್ತದೆ ಎನ್ನುವುದನ್ನು ನೀವು ನಿಮ್ಮ ಆಪ್ತೆ ಮೇಧಾ ಪಾಟ್ಕರ್ ಅವರಿಗೆ ಕೇಳಿ ನೋಡಿ. ರೈತರಿಗೆ ಅನುಕೂಲವಾಗಲೆಂದು ಸರ್ದಾರ್ ಸರೋವರ್ ಡ್ಯಾಮ್ ನಿರ್ಮಿಸ ಹೊರಟರೆ ಅದನ್ನು ವಿರೋಧಿಸುವುದನ್ನೇ ಮುಖ್ಯ ಗುರುಯಾಗಿಸಿಕೊಂಡಿದ್ದಾರಲ್ಲ ಪಾಟ್ಕರ್ ಅವರಿಗೆ ಉತ್ತರ ಗೊತ್ತಿರಲೇಬೇಕು.
13.    ಸುಮಾರು 4 ಲಕ್ಷ ರೈತರಿಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ಆದರೂ 24/7 ವಿದ್ಯುತ್ ಪೂರೈಕೆ ಎಂದೇಕೆ ಹೇಳುತ್ತೀರಿ?
ಜ್ಯೋತಿಗ್ರಾಮ ಯೋಜನೆಯ ಮೂಲಕ ಗುಜರಾತ್‌ನ ಪ್ರತಿಯೊಂದು ಹಳ್ಳಿಗೂ ಇಂದು 24/7 ಮೂರು ಹಂತದ ವಿದ್ಯುತ್ ಪೂರೈಕೆ ಆಗುತ್ತಿದೆ. ಇದೆಲ್ಲ ಮಾಧ್ಯಮಗಳ 'ಸುಳ್ಳು' ಎಂದು ನೀವು ತಳ್ಳಿಹಾಕಬಹುದು. ಹಾಗಾದರೆ, ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಆ ಯೋಜನೆ ತಂದ ಗುಣಾತ್ಮಕ ಬದಲಾವಣೆಯನ್ನು 'ಸ್ಟಾಕ್ ಹೋಮ್ ಇಂಟರ್ನ್ಯಾಷನಲ್ ವಾಟರ್ ಇನ್ಸ್‌ಟಿಟ್ಯೂಟ್‌' ಏಕೆ ಮೆಚ್ಚಿಕೊಂಡಿತು? ಹೊಗಳಿತು? ಬಹುಶಃ ಅದಕ್ಕೂ ಮೋದಿ ಹಣ ಹಂಚಿದ್ದಾರೆ ಎಂದು ಹೇಳುತ್ತೀರೇನೋ? 'ಫೋರ್ಡ್ ಫೌಂಡೇಷನ್‌' ಒಂದನ್ನು ಬಿಟ್ಟು ಎಲ್ಲರೂ ಅಪ್ರಾಮಾಣಿಕರೇ ಅಲ್ಲವೇ ಕೇಜ್ರೀವಾಲ್?
14.    ಸರ್ದಾರ್ ಸರೋವರ ಆಣೆಕಟ್ಟಿನ ಎತ್ತರವನ್ನು 2005ರಲ್ಲಿ ಏರಿಸಲಾಗಿತ್ತು. ಕಛ್ ಜನರಿಗೆ ನೀರು ಸಿಗಲಿಲ್ಲ, ಆದರೆ ಕಾರ್ಖಾನೆಗಳಿಗೆ ನೀರು ಕೊಡಲಾಯಿತು. ಏಕೆ?
ಈ ವಿಷಯದ ಸ್ಥೂಲ ಚಿತ್ರಣವನ್ನು ನಿಮ್ಮ ಪಕ್ಷದ ವರ್ಚಸ್ವಿ ನಾಯಕರಾದ ಮೇಧಾ ಪಾಟ್ಕರ್ ಕೊಡಬಹುದೇನೋ. ಅವರೇ ಅಲ್ಲವೇ ಈ ಆಣೆಕಟ್ಟು ನಿರ್ಮಾಣವನ್ನು ಶತಾಯಗತಾಯ ತಡೆಯಬೇಕೆಂದು ಒದ್ದಾಡಿದವರು. ಅವರ ಮಾತೇ ನಡೆದಿದ್ದರೆ, ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದಿರಲಿ ಅದರ ನಿರ್ಮಾಣವೇ ಆಗುತ್ತಿರಲಿಲ್ಲ. ಆ ಆಣೆಕಟ್ಟು ನಿರ್ಮಾಣದಿಂದಾಗಿ ಗ್ರೀನ್ ಹೈಡ್ರೋ ಎಲೆಕ್ಟ್ರಿಸಿಟಿ ಹೆಚ್ಚಾಗಿ ಕೃಷಿಯಲ್ಲಾದ ಅಭಿವೃದ್ಧಿಯ ಬಗ್ಗೆ ನಿಮಗೆ ಗೊತ್ತಿಲ್ಲವೇ?
15.    ಜಮೀನು ಕಳೆದುಕೊಂಡ ಸಿಖ್ ರೈತರ ವಿರುದ್ಧದ ಕೋರ್ಟ್ ಕೇಸುಗಳನ್ನು ಗುಜರಾತ್ ಸರ್ಕಾರ ಹಿಂತೆಗೆದುಕೊಂಡಿಲ್ಲವೇಕೆ?
ಫೆ.23ರಂದು ಪಂಜಾಬ್‌ನಲ್ಲಿ ಮಾತನಾಡುತ್ತಾ ಮೋದಿಯವರು, "ನಾನು ಯಾವುದೇ ಕಾರಣಕ್ಕೂ ಸಿಖ್ ರೈತರಿಗೆ ಕಛ್ ಬಿಟ್ಟು ಹೊರಡುವ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳುತ್ತೇನೆ" ಎಂದು ಭರವಸೆ ನೀಡಿದ್ದರು. ಸಿಖ್ಖರ ಹಿತರಕ್ಷಣೆಗಾಗಿ ನರೇಂದ್ರ ಮೋದಿ ನಡೆದುಕೊಳ್ಳುತ್ತಿರುವ ರೀತಿಯನ್ನು ಖುದ್ದು ಪಂಜಾಬ್‌ನ ಮುಖ್ಯಮಂತ್ರಿಗಳೇ ಕೊಂಡಾಡಿದ್ದಾರೆ.
16.    ನಿಮ್ಮ ಬಳಿ ಎಷ್ಟು ವಿಮಾನ ಮತ್ತು ಹೆಲಿಕಾಪ್ಟರ್‌ಗಳಿವೆ? ಅವುಗಳ ಮಾಲೀಕರ್ಯಾರು? ಅದಕ್ಕೆ ನೀವು ಅಥವಾ ಇನ್ಯಾರಾದರೂ ಮಾಡುವ ಖರ್ಚೆಷ್ಟು? ನಿಮ್ಮ ವಿಮಾನಯಾನದ ವೆಚ್ಚಗಳನ್ನೆಲ್ಲ ಜನರ ಮುಂದೆ ಇಡಿ.
ಸುತ್ತಮುತ್ತಲೂ ಹೆಚ್ಚು ಕೆಲಸಗಾರರನ್ನು ಇಟ್ಟುಕೊಳ್ಳಬಹುದಾದರೂ ಕೆಲವೇ ಕೆಲವರನ್ನು ನೇಮಿಸಿ, ತಮ್ಮ ಆಫೀಸನ್ನು ತಾವೇ ಸ್ವಚ್ಛಗೊಳಿಸುವ, ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುವ, ಕಳೆದೊಂದು ದಶಕದಿಂದ ಉತ್ತಮ ಉದ್ದೇಶಕ್ಕಾಗಿ ನಿರಂತರವಾಗಿ ದಿನಕ್ಕೆ 20 ಗಂಟೆ ದುಡಿಯುತ್ತಿರುವ ವ್ಯಕ್ತಿಯನ್ನು ಪ್ರಶ್ನಿಸುತ್ತಿದ್ದೀರಿ. ಹಾಗಿದ್ದರೆ ನಾನು ನಿಮ್ಮನ್ನು ಕೇಳುತ್ತೇನೆ- ಅಧಿಕಾರದಿಂದ ಕೆಳಗಿಳಿದ ನಂತರವೂ ದೆಹಲಿಯಲ್ಲಿನ ಮುಖ್ಯಮಂತ್ರಿ ನಿವಾಸದಿಂದ ನೀವು ಮನೆ ಬದಲಾಯಿಸದಿರಲು ಕಾರಣವೇನು? ಈಗ ನಿಮ್ಮದೇ ಧಾಟಿಯಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಉತ್ತರಿಸಿ ನೋಡೋಣ: "ಆಪ್ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಬೇಕೇ ಬೇಡವೇ?" ಎಂದು ಎಸ್‌ಎಮ್‌ಎಸ್ ಕಳಿಸಿ ಅಭಿಪ್ರಾಯ ಸಂಗ್ರಹಿಸಿದ ಹಾಗೆ, "ಆಪ್ ಅಧಿಕಾರದಿಂದ ಕೆಳಕ್ಕಿಳಿಯಬೇಕೇ?" ಎಂದೇಕೆ ಎಸ್‌ಎಮ್‌ಎಸ್ ಕಳಿಸಿ ಜನರ ಅಭಿಪ್ರಾಯ ಕೇಳಲಿಲ್ಲ? ಉತ್ತಮ ಆಡಳಿತ ನೀಡುತ್ತೀರೆಂದು ನಿಮ್ಮತ್ತ ನೋಡುತ್ತಿದ್ದ ಜನರಿಂದ ನೀವೇಕೆ ಅನುಮತಿ ಪಡೆಯಲಿಲ್ಲ?  
ನೀವು ವ್ಯಾಗನ್‌ಆರ್ ಬದಲು, ನ್ಯಾನೋ ಕಾರ್ ಏಕೆ ಬಳಸುವುದಿಲ್ಲ? ನಿಜವಾಗಲೂ ಸಾಮಾನ್ಯ ಜನರನ್ನು ಪ್ರತಿನಿಧಿಸುವುದು ನ್ಯಾನೋ ಕಾರ್ ಅಲ್ಲವೇ? ಅಥವಾ ಅದರ ಉತ್ಪಾದನೆ ಗುಜರಾತ್‌ನಲ್ಲಾಗುತ್ತದೆ ಎನ್ನುವ ಕಾರಣಕ್ಕೇ?
ಧರಣಿಗೆ ಕೂಡುವ ಮುನ್ನ, ಅದರಿಂದಾಗಿ ಜನರಿಗೆ ಎಷ್ಟೊಂದು ತೊಂದರೆಯಾಗುತ್ತದೆ ಎನ್ನುವ ಬಗ್ಗೆ ನೀವು ಯೋಚಿಸಿದ್ದೀರಾ? ಇದೆಲ್ಲ ಒತ್ತಟ್ಟಿಗಿರಲಿ, ಒಂದು ಕೊನೆಯ ಕುತೂಹಲಕರ ಪ್ರಶ್ನೆಯಂತೂ ಕೇಳಿಬಿಡುತ್ತೇನೆ. ಉತ್ತರಿಸುತ್ತೀರಾ?:
"ನೀವು ರಾಷ್ಟ್ರೀಯ ನಾಟಕ ಶಾಲೆಯಿಂದ ತರಬೇತಿ ಪಡೆದು ಬಂದಿಲ್ಲ ತಾನೆ?!"

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement