ಮಿಷನರಿಗಳ ತಂತ್ರಕ್ಕೆ ನಮ್ಮ ಮೂಲ ಸಂಸ್ಕೃತಿಯೇ ಅತಂತ್ರ!
ಶನಿವಾರ ಪ್ರತಾಪ್ ಸಿಂಹ ಅವರ ಲೇಖನದಲ್ಲಿ ಮಿಷನರಿಗಳ ಕುಟಿಲತೆಯನ್ನು, ಯೋಗದಿಂದ ಮೊದಲ್ಗೊಂಡು ಹಿಂದೂ ಧರ್ಮದ ಪೂಜಾಪದ್ಧತಿಯನ್ನೂ ಚಾಣಾಕ್ಷತನದಿಂದ ಅವರು ತಮ್ಮದಾಗಿಸಿಕೊಳ್ಳುತ್ತಿರುವುದರ ಬಗ್ಗೆ ಓದಿದ್ದೀರಿ. ಸತ್ಯ ವೇದ, ಬಾಲಯೇಸುವಿನ ದೇವಾಲಯ, ಓಂ ಯೇಸುಕ್ರಿಸ್ತಯೇ ನಮಃ, ಚರ್ಚ್ನ ಎದುರು ಗರುಡಗಂಭ, ಯೋಗದಲ್ಲಿ ಯೇಸು ಎನ್ನುವ ಎಲ್ಲ ಕಲ್ಪನೆಗಳ ಹಿಂದಿರುವುದು ನಮ್ಮ ಹಿಂದುತ್ವವೇ ಎನ್ನುವ ಸತ್ಯವನ್ನು ಮಿಷನರಿಗಳ ಮೌನವೇ ಸಾರುತ್ತಿದೆ. ಅಷ್ಟೇ ಅಲ್ಲ, ಮುಗ್ಧ ಜನರನ್ನು ಮತಾಂತರ ಮಾಡಲು ಎಂಥ ನಾಚಿಕೆಗೇಡಿನ ಕೃತ್ಯಕ್ಕೂ ಮಿಷನರಿಗಳು ಹೇಸುವುದಿಲ್ಲ ಎನ್ನುವುದಕ್ಕೆ ಇವು ಸಮರ್ಥ ಉದಾಹರಣೆಯಾಗಿ ನಿಲ್ಲುತ್ತವೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಅಪಮಾನಿಸುತ್ತಾ, ನಮ್ಮ ವಿಚಾರ ವೈಶಿಷ್ಟ್ಯಗಳನ್ನೇ ಕದ್ದೊಯ್ದು ತಮ್ಮವರಿಗೆ ಉಣಬಡಿಸುವ ಮಿಷನರಿಗಳ ಬೌದ್ಧಿಕ ದಾರಿದ್ರ್ಯವನ್ನು ನೋಡುವ ಮುನ್ನ
ಒಂದು ನಿಮಿಷ ಸುಮ್ಮನೆ ನೆನಪಿಸಿಕೊಳ್ಳಿ....
ಹಳ್ಳಿಗಳಿಗೆ ಟಿವಿ ಸಂಸ್ಕೃತಿ ನಿಧಾನವಾಗಿ ಕಾಲೂರುತ್ತಿದ್ದ ಕಾಲ. 90ರ ದಶಕದ ಆರಂಭದ ಸಮಯವದು. ಕೋಲ್ಗೇಟ್ ಕಂಪನಿನಿಯ ಟೂತ್ಪೇಸ್ಟ್ ಜಾಹೀರಾತು ದೂರದರ್ಶನದಲ್ಲಿ ಪದೇಪದೇ ಪ್ರಸಾರವಾಗುತ್ತಿತ್ತು. 'ಡೆಂಟಿಸ್ಟ್' ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿ "ನೀವಿನ್ನೂ ಕಲ್ಲುಪ್ಪು, ಬೇವಿನಕಡ್ಡಿ ಬಳಸಿ ಹಲ್ಲುಜ್ಜುತ್ತೀರಾ? ಅದು ನಿಮ್ಮ ಸುಂದರವಾದ ವಸಡುಗಳನ್ನು ಘಾಸಿಮಾಡುತ್ತದೆ" ಎನ್ನುತ್ತಾ, ತಕ್ಷಣವೇ ಪಕ್ಕದಿಂದ ಅದ್ಯಾವುದೋ ಟ್ಯೂಬ್ ಎತ್ತಿಹಿಡಿದು ಅಮುಕಿ ಬ್ರಷ್ನ ಉದ್ದಕ್ಕೂ ಪೇಸ್ಟ್ ಸುರಿದುಕೊಳ್ಳುತ್ತಿದ್ದಿದ್ದು, ಐದೇ ಸೆಕೆಂಡುಗಳಲ್ಲಿ ಹಲ್ಲುಜ್ಜಿ ಮಿರಿಮಿರಿ ಮಿಂಚುವ ತನ್ನ ಹಲ್ಲುಗಳನ್ನು ತೋರಿಸಿ, "ಕೋಲ್ಗೇಟ್ ಬಳಸಿ, ಕೀಟಾಣುಗಳಿಂದ ದೂರವಿರಿ" ಎನ್ನುತ್ತಿದ್ದಿದ್ದನ್ನು ನೀವು ಮರೆತಿರಲಿಕ್ಕಿಲ್ಲ. ಜನರಿಗೆ ಮೋಡಿ ಮಾಡಿದ್ದು ಬಿಳಿಬಣ್ಣದ ಆ ಪೇಸ್ಟೋ, ಡೆಂಟಿಸ್ಟ್ನ ಮಾತುಗಳೋ ಗೊತ್ತಿಲ್ಲ. ಆದರೆ ಅಲ್ಲಿಂದಾಚೆಗೆ ಟೂತ್ಪೇಸ್ಟ್ಗಳ ವ್ಯಾಪಾರವಂತೂ ಭರ್ಜರಿಯಾಗಿ ನಡೆಯಿತು. ಅಲ್ಲಿಯೂ ಸ್ಪರ್ಧೆಗಳು ಹುಟ್ಟಿಕೊಂಡಾಗ ಕೋಲ್ಗೇಟ್ ಜೆಲ್ ಟೂತ್ಪೇಸ್ಟನ್ನೂ ಮಾರುಕಟ್ಟೆಗೆ ಬಿಟ್ಟಿತು. ಜನ ಅದನ್ನೂ ಮುಗಿಬಿದ್ದು ಕೊಂಡರು. ಆಮೇಲಾಮೇಲೆ ಅವುಗಳಲ್ಲಿ ಫ್ಲೇವರ್ಗಳು ಬಂದವು, ಬಣ್ಣಗಳು ಬದಲಾದವು, ಚಿಕ್ಕದು ದೊಡ್ಡದು ಎಂಬ ಗಾತ್ರಗಳು ಸೃಷ್ಟಿಯಾದವು, ಆಫರ್ಗಳು ಜೊತೆಯಾದವು, ಸಾಲದೆನ್ನುವಂತೆ ಅವುಗಳಲ್ಲಿ ರುಚಿ ಹುಡುಕುವುದನ್ನು ಕಂಪನಿಗಳು ಕಲಿಸಿಕೊಟ್ಟವು! ಜನ ನೀಟಾಗಿ ಕಲಿತರು. ಇವೆಲ್ಲ ಆಗುವಾಗ ಎರಡು ದಶಕಗಳು ಕಳೆದಿದ್ದವು. ಮೊನ್ನೆ ಟಿವಿ ಆನ್ ಮಾಡಿದರೆ ಮತ್ತದೇ ಕೋಲ್ಗೇಟ್ ಜಾಹೀರಾತು. ಇಪ್ಪತ್ತು ವರ್ಷ ಕಾಲ ನಮ್ಮ ಹಲ್ಲಿನ ಬಗ್ಗೆ ಅಪಾರ ಕಾಳಜಿವಹಿಸಿದ್ದ ಆ ಡೆಂಟಿಸ್ಟ್ ಕೇಳುತ್ತಿದ್ದ "ನಿಮ್ಮ ಟೂತ್ಪೇಸ್ಟ್ನಲ್ಲಿ 'ಉಪ್ಪು'ಇದೆಯೇ?"
ಹಳ್ಳಿಗಳ ಅಜ್ಜಿ-ತಾತಂದಿರನ್ನು ದಡ್ಡರಂತೆ ಬಿಂಬಿಸಿ, ನೋಡುಗರನ್ನು ಕೊಂಕಣ ಸುತ್ತಿಸಿ ಮೈಲಾರಕ್ಕೆ ತಂದು ತಿಜೋರಿ ತುಂಬಿಸಿಕೊಂಡ ಟೂತ್ಪೇಸ್ಟ್ ಕಂಪೆನಿಗಳಿಗೆ ಉಪ್ಪು-ಬೇವಿನ ಮಹತ್ವ ಕೊನೆಗಾದರೂ ತಿಳಿಯಿತು! ಇನ್ನು ನಮಗೆ ಗೊತ್ತಾದರೆಷ್ಟು ಬಿಟ್ಟರೆಷ್ಟು, ಅಂಟಿಕೊಂಡಿರುವುದರಿಂದ ಬಿಡಿಸಿಕೊಳ್ಳುವುದಂತೂ ಆಗುವುದಿಲ್ಲವಲ್ಲ ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ...
"ಪರಲೋಕದಲ್ಲಿರುವ ನಮ್ಮ ತಂದೆಯೇ..." ಎಂದು ಪ್ರಾರ್ಥಿಸುವ ಕ್ರೈಸ್ತ ಮಿಷನರಿಗಳು ಮಾಡುತ್ತಿರುವುದು ಅದನ್ನೇ. ಸರಿಯಾಗಿ ಗಮನಿಸಿ, ಮೊದಲೆಲ್ಲಾ ನಮ್ಮ ದೇವರುದಿಂಡಿರನ್ನು ಬೈದು ಅವಹೇಳನ ಮಾಡಿ ಮತಾಂತರದ ವ್ಯಾಪಾರ ಕುದುರಿಸುತ್ತಿದ್ದವರು ಈಗೀಗ ಮತಾಂತರಕ್ಕೆ ಹಿಂದು ಸಂಸ್ಕೃತಿ-ಚಿಂತನೆಗಳನ್ನು ಅವಲಂಬಿಸುತ್ತಿದ್ದಾರೆ. ಹಿಂದುಗಳ ಸಾಂಸ್ಕೃತಿಕ ವಿಚಾರಧಾರೆಯನ್ನೇ ಕ್ರಿಸ್ತೀಕರಣಗೊಳಿಸಿ ಜನರನ್ನು ಸೆಳೆಯುವ ಈ ಮನೋವಿಕಾರದ ಹಿಂದೆಯೂ ಬಲವಾದ ಕಾರಣಗಳಿವೆ. ಸ್ವಂತ ವಿಚಾರಧಾರೆಯ ಕೊರತೆಯಿದೆ. ಜತೆಗೆ ಭಾರತದಲ್ಲಿ ಕ್ರಿಸ್ತನನ್ನು ದೇವಪುತ್ರನೆಂದು ಬಿಂಬಿಸಲು ಬೇಕಾದ ಸಹಜಗುಣಗಳ ಅವಶ್ಯಕತೆಯಿದೆ. ಇವ್ಯಾವವೂ ಇಲ್ಲದ ಕ್ರಿಸ್ತ ಹಾಗೂ ಆತನ ಮತವನ್ನು ಭಾರತೀಯರೆಲ್ಲರ ಮೇಲೆ ಹೇರಲಾಗದ ಅಸಹಾಯಕತೆಯಿದೆ. ಆ ಅಸಹಾಯಕತೆಯ ಅಭಿವ್ಯಕ್ತಿಯೇ ಇವೆಲ್ಲ ನಾಟಕಗಳು.
ಮೂಲತಃ ಕ್ರಿಶ್ಚಿಯನ್ ಸಮುದಾಯದಲ್ಲಿ ಧಾರ್ಮಿಕತೆಗೂ ಕಲೆ-ಸಂಸ್ಕೃತಿಗೂ ಪರಸ್ಪರ ಸಂಬಂಧವೇ ಇಲ್ಲ. ಬೆಳವಣಿಗೆಯ ಕಾಲದಿಂದಲೇ ಅವೆರಡು ಬೇರೆಬೇರೆಯಾಗಿಯೇ ಬೆಳೆದುಬಂದಿವೆ. ಕಲೆ, ಸಾಹಿತ್ಯ, ಸಂಸ್ಕೃತಿ, ವಿಚಾರವಾದ, ವಿಜ್ಞಾನಗಳಲ್ಲಿ ಖ್ಯಾತಿವೆತ್ತ ಪಾಶ್ಚಿಮಾತ್ಯರೆಲ್ಲ ಕ್ರೈಸ್ತರೇ ಆಗಿದ್ದರೆನ್ನುವುದನ್ನು ಹೊರತುಪಡಿಸಿ ಕ್ರಿಶ್ಚಿಯಾನಿಟಿಗೂ ಅವುಗಳಿಗೂ ಸಂಪರ್ಕವೇ ಇದ್ದಿರಲಿಲ್ಲ. ಭಾರತೀಯ ಉಪಖಂಡಕ್ಕೆ ಕಾಲಿಡುವವರೆಗೂ ಅಂಥ ಅಗತ್ಯತೆಯೂ ಇರಲಿಲ್ಲವೆನ್ನಿ. ಒಂದು ಹಂತದವರೆಗೂ ಭಾರತದಲ್ಲಿ ತಾವಂದುಕೊಂಡಂತೆ ಸಸೂತ್ರವಾಗಿ ಮತಾಂತರವೆಸಗಿದ ಮಿಷನರಿಗಳಿಗೆ ಬಿಸಿ ತಟ್ಟಿದ್ದು ಮಾತ್ರ ತೀರಾ ಇತ್ತೀಚೆಗೆ. ಧರ್ಮ-ಕರ್ಮಗಳಲ್ಲಿ ಅತೀವ ಶ್ರದ್ಧೆಯಿರಿಸಿಕೊಂಡ ಹಿಂದುಗಳು ತಮ್ಮ ಪ್ರತಿಯೊಂದು ವಸ್ತು ವಿಚಾರಗಳಲ್ಲಿ ದೈವೀಕ ಪ್ರಭಾವವನ್ನು ಆರೋಪಿಸಿಕೊಂಡು ಬಂದವರು. ಯಾವುದೇ ಬಗೆಯ ಸಮಾರಂಭಗಳಲ್ಲಿ ದೀಪ ಬೆಳಗದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ. ಕಾರ್ಯಕ್ರಮಗಳ ಆರಂಭ ಭಕ್ತಿಗೀತೆಯಿಂದ ಶುರುವಾಗದಿದ್ದರೆ ಅದು ಶುರುವಾತೇ ಅಲ್ಲ ಎನ್ನುವಂಥ ಭಾವ. ಇಂಥ ಹಿಂದು ಸಮಾಜವನ್ನು ವ್ಯಾಪಕವಾಗಿ ಬಲೆಗೆ ಕೆಡವಿಕೊಳ್ಳುವ ಕುತ್ಸಿತ ಧೋರಣೆಯೊಂದಿಗೆ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಜನರನ್ನು ಮತಾಂತರಿಸಿದರಲ್ಲ, ಆಗ ಏನೇ ಪ್ರಯತ್ನಪಟ್ಟರೂ ಒಂದಿಷ್ಟು ತಲೆಗಳು ಅವರ ಲೆಕ್ಕಕ್ಕೆ ಸಿಕ್ಕವು ಅನ್ನುವುದನ್ನು ಬಿಟ್ಟರೆ ಮಿಷನರಿಗಳು ನಿರೀಕ್ಷಿಸಿದಂತಹ ಬದಲಾವಣೆಯಾಗಿರಲಿಲ್ಲ. ಅಂದರೆ ದುಡ್ಡಿನ ಆಮಿಷಕ್ಕೊಳಗಾಗಿ ಆ ಕ್ಷಣದ ಮತಾಂತರಕ್ಕೆ ಸಿಕ್ಕವರು ಮಾನಸಿಕವಾಗಿ ಸಂಪೂರ್ಣ ಕ್ರೈಸ್ತರಾಗಿರಲಿಲ್ಲ. ದೇವರ ಕುರಿತಾದ ಅವರ ನಂಬಿಕೆಗಳು, ಕಲ್ಪನೆಗಳು ಇನ್ನೂ ಬದಲಾಗಿರಲಿಲ್ಲ. ಅರಿಶಿನ, ಕುಂಕುಮದಲ್ಲಿನ ಲಕ್ಷಣ, ಹೂವು-ಹಣ್ಣು ಅರ್ಪಿಸಿ ಗಂಟೆ ಬಾರಿಸಿ ನಮಸ್ಕರಿಸುವುದರಲ್ಲಿರುವ ಅಚಲ ನಂಬಿಕೆಯನ್ನು ಅಲ್ಲಾಡಿಸಲು ಚರ್ಚುಗಳಿಂದ ಆಗಲಿಲ್ಲ. ಇನ್ನೂ ಹೇಳಬೇಕೆಂದರೆ, ಮತಾಂತರಿತ ಜನರಿಗೆ ಕ್ರಿಸ್ತನಲ್ಲಿ ಸರಿಯಾದ ನಂಬಿಕೆಯೇ ಹುಟ್ಟಿರಲಿಲ್ಲ. ಚರ್ಚ್ನೊಳಗೆ ಚಪ್ಪಲಿ ಧರಿಸಿ ಬೆಂಚಿನ ಮೇಲೆ ಕೂತುಬಂದ ಮತಾಂತರಿತ ಹಿಂದುಗಳ ಮುಖದಲ್ಲಿ ತೀವ್ರ ಅತೃಪ್ತ ಭಾವವನ್ನು ಪಾದ್ರಿಗಳು ಯಾವಾಗ ಗುರುತಿಸಿದರೋ ಆಗಲೇ ಅದರ ಕಾರಣವನ್ನು ಕೂಡ ಕಂಡುಹಿಡಿದರು. ಜನರ ಮಾನಸಿಕತೆಯನ್ನು ಬದಲಾಯಿಸದೇ ಏನನ್ನೂ ಸಾಧಿಸಲಾಗುವುದಿಲ್ಲ ಎನ್ನುವುದನ್ನು ಅರಿತ ಮಿಷನರಿಗಳು ಅದಕ್ಕೆ ತಕ್ಕನಾಗಿ ತಮ್ಮ ವರಸೆ ಬದಲಾಯಿಸುತ್ತಿದ್ದಾರೆ. ಸಮಾಜದ ಇನ್ನೊಂದು ವರ್ಗವನ್ನು ಜಾಸ್ತಿ ಬೈದಷ್ಟೂ ಸಿಗಬಹುದಾದ ಪ್ರತಿಫಲ ಕಮ್ಮಿಯಾಗುತ್ತಾ ಹೋಗುತ್ತದೆ ಎನ್ನುವ ವಿಚಾರ ಅವರ ಅರಿವಿಗೆ ಬಂದಿರುವುದರ ಪರಿಣಾಮವದು. ಎಷ್ಟೆಂದರೂ ಮಾರ್ಕೆಟಿಂಗ್ ತಂತ್ರಗಳನ್ನು ಹೆಣೆಯುವುದರಲ್ಲಿ ಅವರದು ಎತ್ತಿದ ಕೈ ತಾನೇ, ಹಾಗಾಗಿ ಹಿಂದು ಧರ್ಮದ ಕುರಿತು ಹೊರಗಿನಿಂದ ಮುಗುಮ್ಮಾಗಿದ್ದು, ಒಳಗಿನಿಂದಲೇ ಮಸಲತ್ತು ನಡೆಸುತ್ತಿದ್ದಾರೆ.
ಹಿಂದುಗಳ ಮಾನಸಿಕತೆಯ ಕುರಿತಂತೆ ಹೇಳುವುದಾದರೆ, ಧರ್ಮಗಳ ಕುರಿತಾದ ಗೋಜಲಿಗೆ ಹೆಚ್ಚು ಸಿಕ್ಕಿಬೀಳದೆ ತಾವಾಯಿತು ತಮ್ಮ ಪಾಡಾಯಿತು ಎನ್ನುವ ರೀತಿಯಲ್ಲಿ ಬದುಕುತ್ತಿರುವ ಮಧ್ಯಮ ಹಾಗೂ ಕೆಳವರ್ಗದ ಆರ್ಥಿಕತೆಯ ಬಡಪಾಯಿ ಹಿಂದು ಸಮುದಾಯದಲ್ಲಿ ಧಾರ್ಮಿಕವಾದ ಎನ್ನುವಂಥದ್ದು ಯಾವ ಕಾಲಕ್ಕೂ ಪ್ರಾಮುಖ್ಯ ಪಡೆದಿರಲಿಲ್ಲ. ಮುಸಲ್ಮಾನರಂತಾಗಲಿ ಅಥವಾ ಕ್ರಿಶ್ಚಿಯನ್ನರಂತಾಗಲಿ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಹೋಗಲೇಬೇಕಾದ ಕಟ್ಟುನಿಟ್ಟಿಲ್ಲ. ಹೋದರೂ ದೇವರು ಹಾಗೂ ತಮ್ಮ ನಡುವೆ ಏನಿದಯೋ ಅಷ್ಟೇ. ಅರ್ಚಕನೇನಿದ್ದರೂ ಪೂಜೆಮಾಡುವುದಷ್ಟೇ ಕೆಲಸ. ಅದಕ್ಕಿಂತ ಹೆಚ್ಚಾಗಿ ಆತ ಉಪದೇಶ ಕೊಡುವುದು ನಮ್ಮ ಜನರು ಅದನ್ನು ಶ್ರದ್ಧೆಯಿಂದ ಪಾಲಿಸುವುದು ಇವೆಲ್ಲ ಆಗದ ಹೋಗದ ಸಂಗತಿಗಳೇ. ಇನ್ನು ಮನೆಗಳಲ್ಲೋ ಪರಿಸ್ಥಿತಿಯೇ ವಿಭಿನ್ನ. ತರಹೇವಾರಿ ಧಾರಾವಾಹಿಗಳು, ಮಲಗುವ ಮುಂಚೆ ಬರುವ ರಿಯಾಲಿಟಿ ಶೋಗಳು, ಪೆನ್ಡ್ರೈವ್ಗಳಲ್ಲಿ ತುಂಬಿಕೂತಿರುವ ಸಿನಿಮಾಗಳು ಒಟ್ಟಾರೆ ಕುಟುಂಬದ ಸಮಯವನ್ನೇ ಕೊಲ್ಲುತ್ತಿವೆ. ಇವುಗಳ ಮಧ್ಯೆ ರಾಮನ ಕಥೆ, ಸೀತೆಯ ಆದರ್ಶ, ಭೀಮಾರ್ಜುನರ ಶೌರ್ಯ, ಕೃಷ್ಣನ ಕಥೆ-ಉಪಕಥೆ, ಮಹಾರಾಣಾ ಪ್ರತಾಪ, ಶಿವಾಜಿ ಮಹಾರಾಜರುಗಳ ಸಾಹಸ, ಔರಂಗಜೇಬನ ಧೂರ್ತತನ, ಲಂಪಟತನಗಳನ್ನು ಹೇಳುವ-ಕೇಳುವ ವ್ಯವಧಾನ ಎಲ್ಲಿದೆ? ಇಂಥ ನಿದ್ರಸ್ಥ ಸಮಾಜ ಎಂಥವರಿಗಾದರೂ ಸುಲಭದ ತುತ್ತೇ ಅಲ್ಲವೇ? ನಯವಂಚಕತನದ ಪರಮಾವಧಿಯನ್ನು ದಿನೇದಿನೇ ವಿಸ್ತರಿಸುತ್ತಲೇ ಇರುವ ಮಿಷನರಿಗಳಿಗೆ ಬೇಕಾಗಿದ್ದಿದ್ದು ಇದೇ.
ಆಂಧ್ರಪ್ರದೇಶ, ತಮಿಳುನಾಡು, ನಮ್ಮದೇ ಕರ್ನಾಟಕದ ಕುಣಿಗಲ್, ಸಿದ್ಧಿಗಳ ತಾಂಡಾ, ಪರಿಶಿಷ್ಠ ವರ್ಗದವರ ಕೇರಿಗಳು ಮುಂತಾದ ಕಡೆಗಳಲ್ಲಿ ಭರ್ಜರಿಯಾಗಿ ಮತಾಂತರ ಮಾಡಿದ ನಂತರ ಮಿಷನರಿಗಳ ಗಮನ ಸೆಳೆದಿರುವುದು ಬೆಂಗಳೂರಿನ ಅಪ್ರಜ್ಞಾವಂತ ಯುವಜನತೆ. ಆಧುನಿಕ ಶಿಕ್ಷಣ ಪಡೆದಿದ್ದೇವೆಂಬ ಹಮ್ಮಿನಲ್ಲಿ ಸ್ಥಳೀಯ ವಿಚಾರಗಳಿಂದ ದೂರವಾಗಿ ಕೇವಲ ಅಂತಾರಾಷ್ಟ್ರೀಯ ಮಟ್ಟದ ಜೀವನಶೈಲಿಯ ಕಡೆಗಷ್ಟೇ ಗಮನ ಕೇಂದ್ರೀಕರಿಸಿರುವ ಈ ವರ್ಗಕ್ಕೆ ಸಾಮಾಜದ ಗಂಭೀರ ಸಮಸ್ಯೆಗಳು ಮುಖ್ಯವೆನಿಸುವುದೇ ಇಲ್ಲ. ಇಲ್ಲೊಂದು ಘಟನೆ ನೋಡಿ- ಆ ಹುಡುಗಿ ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲೇ. ಆಕೆಗೆ ಕನ್ನಡವನ್ನೂ ತರ್ಜುಮೆ ಮಾಡಿ ಹೇಳಬೇಕು. ಅಂಥ ವಿದ್ಯಾವಂತ ಹುಡುಗಿ ಕಳೆದೆರಡು ವರ್ಷಗಳಿಂದ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಹುಡುಗನನ್ನು ಪ್ರೀತಿಸುತ್ತಿದ್ದಾಳೆ. ತಂದೆಯಿಲ್ಲದ ಆಕೆಯನ್ನು ಸಾಕಿ ಬೆಳೆಸಿದ್ದು ತಾಯಿ ಹಾಗೂ ಸೋದರಮಾವ. ಕಳೆದ ಮೂರು ವಾರಗಳಿಂದ ಮದುವೆಯ ವಿಚಾರವಾಗಿ ನಿತ್ಯವೂ ರಂಪಾಟ. ಈಕೆಗೆ ಮನೆಯಿಂದಲೇ ಓಡಿಹೋಗುವ ಮನಸ್ಸು! "ತಾಯಿಯ ಕಾರ್ಪಣ್ಯವನ್ನೂ ಮರೆತು ಪ್ರೀತಿಗೋಸ್ಕರ ನೀನು ಹುಟ್ಟಿದ ಧರ್ಮವನ್ನೇ ಬಿಡ್ತೀಯ? ಆತ ಬಿಡ್ತಾನಾ ಕೇಳು?" ಅನ್ನೋದೆಲ್ಲ ಹಳೆಯದಾಯ್ತು. ಆತನೇ ಹಿಂದೂ ಆಗ್ತೀನಿ ಅಂದಿದ್ದಾನೆ. ಮೊದಲು ದೇವಸ್ಥಾನದಲ್ಲೇ ಮದುವೆ ಆಗೋಣ ಅಂತಾನೂ ಹೇಳಿದ್ದಾನೆ ಅನ್ನೋದು ಆ ಹುಡುಗಿಯ ವಾದ. ಮದುವೆ ಮುಗಿಯುತ್ತಿದ್ದಂತೆ ಆತ ವಾಪಸ್ಸು ಕ್ರಿಶ್ಚಿಯಾನಿಟಿ ಪಾಲಿಸಿತೊಡಗದಿದ್ದರೆ ಕೇಳು ಎಂದರೆ ಆ ಮಾತು ಅವಳಿಗೆ ಬೇಡ. ಸದ್ಯ ಆಕೆಗೆ ಬೇಕಿರುವುದು ಆತ ಮಾತ್ರ. ಅಲ್ಲ ಸ್ವಾಮಿ, ಮೈಸೂರಿಗೋ ಮಂಗಳೂರಿಗೋ ಹೋಗುವಾಗ ಬಸ್ಸು ಹತ್ತಿ, ಊರು ಬಂದಮೇಲೆ ಬಸ್ಸಿಳಿದು ಹೋಗೋದು ಸಹಜ. ಬಸ್ಸಿನಲ್ಲೇ ಕೂತಿರಲಿಕ್ಕೆ ಸಾಧ್ಯವೇ? ಮದುವೆಗೋಸ್ಕರ ಹಿಂರ್ದು ಧರ್ಮದ ದಾರಿಗೆ ಬರುತ್ತಾನೆ. ಆಮೇಲೆ ಅವನ ದಾರಿ ಮಾಮೂಲಿ ಇದ್ದಿದ್ದೇ.
ಕ್ರಿಶ್ಚಿಯನ್ನರನ್ನು ಮದುವೆಯಾದ ಎಷ್ಟೋ ಮಂದಿ ಹಿಂದು ಯುವಕ-ಯುವತಿಯರದ್ದು ಇದೇ ಪಾಡು. ಮಂಗಳೂರಿನ ಕೊಂಕಣರ ಹುಡುಗ ಅಶ್ವಿನ್, ಬಂಟ ಸಮಾಜದ ಹುಡುಗಿ ಸೀಮಾ, ಮೈಸೂರಿನ ಬ್ರಾಹ್ಮಣರ ಹುಡುಗಿ ಭಾಗ್ಯಶ್ರೀ, ಕ್ರೈಸ್ತ ಹುಡುಗಿಗಾಗಿ ಆಲ್ಫ್ರೆಡ್ ಎಂದು ಬದಲಾದ ಅನಿಲ್, ಊರುಬಿಟ್ಟು ಜೀವಮಾನವಿಡೀ ಅದೃಶ್ಯರಾಗಿ ಹೆತ್ತವರಿಗೆ ನೋವು ಕೊಟ್ಟವರು ಏನು ಕಡಿಮೆಯೇ? ಹೇಳುತ್ತಾ ಹೋದರೆ ಇಂಥವರ ಕಥೆಯೇ ಬಹಳ ಇದೆ. ಭಾವನಾತ್ಮಕ ವಂಚನೆಯ, ಮರಾಮೋಸದ ಈ ಕಥೆಗಳು ಯಾವ ಪಂಚತಂತ್ರದ ಕಥೆಗಳಿಗೂ ಕಡಿಮೆಯಿಲ್ಲ.
ಹಿಂದೊಮ್ಮೆ ಮಂಗಳೂರಿನ ಶಕ್ತಿನಗರದಲ್ಲಿನ ಚರ್ಚಿಗೆ 'ಬ್ರಹ್ಮಕಲಶ' ಹಾಗೂ "ಜೀರ್ಣೋದ್ಧಾರ" ಮಾಡಿದ್ದ ಈ ಯೇಸುಪುತ್ರರು ಆಗಾಗ ಏನನ್ನಾದರೂ ನಮ್ಮಿಂದ ಕದ್ದೊಯ್ಯುತ್ತಲೇ ಇರುತ್ತಾರೆ. ಈಗ ಭರತನಾಟ್ಯ ಆಯ್ತು. ಯೋಗವೂ ಆಗಿದೆ. ಸದ್ಯ ಬಿಟ್ಟಿರುವುದು ಯಕ್ಷಗಾನವನ್ನೇ. ಕುಣಿಯುವುದಕ್ಕೆ ಕಲಾವಿದರು ತಕ್ಷಣವೇ ಸಿಗಬಹುದು. ಭಾಗವತಿಕೆಗೆ ಯಾರಾದರೂ ಬೇಕಲ್ಲ? ಅದಾಗುತ್ತಿದ್ದಂತೆ "ಕ್ರಿಸ್ತನ ಯಕ್ಷಗಾನ ಮಂಡಳಿ"ಯೂ ಅಸ್ತಿತ್ವಕ್ಕೆ ಬಂದೀತು!
-ಕೈಲಾಸನಾಥ್ ನಾವಡ
kailasanathnavada@gmail.com