ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮುಖ್ಯ ವಿಚಾರಗಳೇ ಇಲ್ಲ, ಬರೀ ವ್ಯಕ್ತಿಗತ ಪ್ರಹಾರಗಳೇ ಎಲ್ಲ!

ಟಿಕೆಟ್ ಸಿಗದ ನೇತಾರರು ತಮ್ಮ ಅಸಂತೋಷವನ್ನು ಹೊರಗೆಡವುತ್ತಾರೆ, ಪತ್ರಕರ್ತರೂ ಅದನ್ನೇ ದೊಡ್ಡ ಸುದ್ದಿ ಮಾಡುತ್ತಾರೆ.

Srinivasa Murthy VN
Updated On : 12 Mar 2014, 11:40 am

ಲೋಕಸಭೆ ಚುನಾವಣೆಗಳಿಗೆ ಅಭ್ಯರ್ಥಿಗಳ ಹೆಸರು ನಿಕ್ಕಿಯಾಗುತ್ತಿದ್ದಂತೆ ಪೂರ್ವನಿರ್ಧಾರಿತ ಎನ್ನುವಂಥ ಚಿತ್ರಣವೊಂದು ಎದುರಾಗುತ್ತದೆ- ಟಿಕೆಟ್ ಸಿಗದ ನೇತಾರರು ತಮ್ಮ ಅಸಂತೋಷವನ್ನು ಹೊರಗೆಡವುತ್ತಾರೆ, ಪತ್ರಕರ್ತರೂ ಅದನ್ನೇ ದೊಡ್ಡ ಸುದ್ದಿ ಮಾಡುತ್ತಾರೆ, ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆಗಳು ಹೊರಬೀಳುತ್ತವೆ. ಕೆಲವರು ತಮ್ಮ ಹಳೆಯ ಪಕ್ಷವನ್ನು ಬಿಟ್ಟು ಹೊಸ ಪಕ್ಷವನ್ನು ಸೇರುತ್ತಾರೆ. ಯಾವ ದಳ ಮತ್ತು ವಿಚಾರಧಾರೆಯ ವಿರುದ್ಧ ಮಾತನಾಡುತ್ತಿದ್ದರೋ ಅದರ ಭಾಗವಾಗುತ್ತಾರೆ! ಅಧಿಕಾರದ ಕಾವು ಎಲ್ಲಾ ಮತಭೇದ, ಮನಭೇದ ಮತ್ತು ವೈಚಾರಿಕ ದ್ವಂದ್ವವನ್ನು ಕಾಲಲ್ಲಿ ತುಳಿದು ಮುನ್ನಡೆಯುವಂತೆ ಮಾಡಿಬಿಡುತ್ತದೆ. ಅಧಿಕಾರಕ್ಕೇರುವ ಆಸೆ ಎಲ್ಲಾ ರೀತಿಯ ಆಯ್ಕೆ ಮತ್ತು ಮಾರ್ಗಗಳನ್ನು ಅಳವಡಿಸಿಕೊಳ್ಳಲು ಹೊಸ ಸಿದ್ಧಾಂತ ಮತ್ತು ಹೊಸ ಭಾಷೆಯನ್ನು ಅಪ್ಪಿಕೊಳ್ಳುತ್ತದೆ.
ಸ್ವಾತಂತ್ರ್ಯಾ ನಂತರ ಅತ್ಯಂತ ಅಸಾಧಾರಣ ಮತ್ತು ಅಭೂತಪೂರ್ವ ಉತ್ಕಟತೆಯನ್ನು ಹುಟ್ಟುಹಾಕಿರುವ ಚುನಾವಣೆ ಇದಾಗಿದೆ. ದಿನಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‌ಗಳ ಸುದ್ದಿಗಳು ಪ್ರತಿ ದಿನದ ರಾಜಕೀಯ ಒತ್ತಡ, ಕಟು ಶಬ್ದಗಳು, ಉಪಶಬ್ದಗಳು, ಅಸಹ್ಯಕರ ವೈಯಕ್ತಿಕ ದಾಳಿಗಳು ಅರ್ಥಾತ್ ಕೆಸರೆರಚಾಟದ ಸುತ್ತಮುತ್ತವೇ ಸುತ್ತುಹೊಡೆಯುತ್ತಿರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಯುದ್ಧ ರೀತಿಯ ಸನ್ನವೇಶ ನಿರ್ಮಾಣವಾಗಿಬಿಟ್ಟಿರುತ್ತದೆ.
ಹಾಗಾಗಿ ಒಂದು ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ. ಈಗ ಚರ್ಚೆಯಾಗುತ್ತಿರುವ ವಿಷಯಗಳಿಂದಲೇ 120 ಕೋಟಿ ಜನರ ಭವಿಷ್ಯ ನಿರ್ಧಾರವಾಗುತ್ತದಾ? ಬರೀ ವ್ಯಕ್ತಿಗತ ಆಕ್ಷೇಪಗಳು ಮತ್ತು ಪ್ರಹಾರಗಳಲ್ಲಿ ಸಿಲುಕಿರುವ ಚುನಾವಣಾ ಚರ್ಚೆ ಭಾರತೀಯ ರಾಜಕೀಯದ ಪರಿಪಕ್ವತೆ ಮತ್ತು ಮಾಧ್ಯಮಗಳ ಉತ್ಕರ್ಷವನ್ನು ತೋರಿಸುತ್ತದಾ? ಇಂಥ ಕೀಳುಮಟ್ಟದ ಚರ್ಚೆಗಳಿಂದ ನಾವು ಲೋಕತಂತ್ರ ಸಂಸ್ಥೆಗಳ ಆರು ದಶಕಗಳ ಯಾತ್ರೆಯ ಗೌರವವನ್ನು ಹೆಚ್ಚುಸುತ್ತಿದ್ದೇವಾ? ಖಂಡಿತ ಇಲ್ಲ.
ಕೆಲವು ಪ್ರಶ್ನೆಗಳು ಹೇಗಿವೆಯೆಂದರೆ ಅವಕ್ಕೆ ಯಾರೂ ಉತ್ತರಿಸುವುದಿಲ್ಲ ಅಥವಾ ಉತ್ತರಿಸುವ ಮನಸ್ಸು ಅವರಿಗಿಲ್ಲ. ಅವೆಂದರೆ...
1)    40 ಪ್ರತಿಶತ ಭಾರತೀಯರು ಪ್ರತಿದಿನ 20 ರುಪಾಯಿಗಿಂತಲೂ ಕಡಿಮೆ ಗಳಿಕೆಯಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ ಪ್ರಪಂಚದ 500 ಅತಿದೊಡ್ಡ ಶ್ರೀಮಂತರಲ್ಲಿ ಸುಮಾರು 50 ಜನ ಭಾರತೀಯರಿದ್ದಾರೆ. ಪ್ರಪಂಚದ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ನಾಯಕರ ಪಟ್ಟಿ ನೋಡಿದಾಗ ಅದರಲ್ಲೂ ಭಾರತೀಯ ರಾಜಕಾರಣಿಗಳ ಹೆಸರು ದಂಡಿಯಾಗಿ ಸಿಗುತ್ತವೆ. ಅದರಂತೆಯೇ ಇನ್ನೊಂದೆಡೆ ಅತಿ ಬಡವ, ಗೃಹ ವಿಹೀನ, ನಿರುದ್ಯೋಗಿಗಳು ಮತ್ತು ಮೂಲ ಸೌಕರ್ಯಗಳಿಂದ ವಂಚಿತ ಜನರೂ ಭಾರತದಲ್ಲಿ ಹೇರಳವಾಗಿ ಕಾಣಿಸುತ್ತಾರೆ. ಇವರೆಲ್ಲರ ಸಮಸ್ಯೆಗಳ ಬಗ್ಗೆ ಯಾರು ಚರ್ಚೆ ನಡೆಸುತ್ತಿದ್ದಾರೆ?
2)    ದೇಶದ ಆಂತರಿಕ ಸುರಕ್ಷೆ ಅಪಾಯದಲ್ಲಿದೆ. ದೇಶದ 14 ರಾಜ್ಯಗಳು ನಕ್ಸಲ್ ಪೀಡಿತವಾಗಿವೆ. ಇದರಿಂದಾಗಿ ಕಳೆದ ಹತ್ತು ವರ್ಷಗಳಿಂದ 12 ಸಾವಿರಕ್ಕಿಂತಲೂ ಹೆಚ್ಚು ನಾಗರಿಕರು ಮತ್ತು ಸೈನಿಕರು ಜೀವ ಕಳೆದುಕೊಂಡಿದ್ದಾರೆ. ಇವರೆಲ್ಲರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ಯಾರು ಪ್ರಯತ್ನಿಸುತ್ತಿದ್ದಾರೆ?
3)    ಹಿಂದೊಂದು ಸಮಯವಿತ್ತು, ಆಗ ಹಿಂದುಗಳ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಚುನಾವಣಾ ಅಜೆಂಡಾಗಳು ಸಿದ್ಧವಾಗುತ್ತಿದ್ದವು. ಆದರೆ ಈಗ ಹಿಂದುಗಳ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ. 5 ಲಕ್ಷ ಕಾಶ್ಮೀರಿ ಪಂಡಿತರು ಮನೆಕಳೆದುಕೊಂಡು ದೇಶದಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಅವರಿಗೆ ಸುರಕ್ಷೆ ನೀಡುವ ಮತ್ತು ನೆಲೆಯೊದಗಿಸಿಕೊಡುವ(ಕಾಶ್ಮೀರದಲ್ಲಿ) ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ?
4) ವಿರೋಧಪಕ್ಷಗಳಲ್ಲಿರುವಾಗ ಎಲ್ಲರೂ ಪೊಲೀಸರಿಂದ ನೋವುಂಡವರ ಬಗ್ಗೆ ಮಾತನಾಡುತ್ತಾ,  ಪೊಲೀಸ್  ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ಗರ್ಜಿಸುತ್ತಾರೆ. ಆದರೆ ಹೀಗೆ ಮಾತನಾಡುವವರು ಒಮ್ಮೆ ಅಧಿಕಾರಕ್ಕೆ ಬಂದರೆಂದರೆ ಸಾಕು, ಖಾಕಿ ಬಟ್ಟೆಯ 'ಜೀ-ಹುಜೂರ್‌' ವರ್ತನೆಯನ್ನು ಮೆಚ್ಚಿಕೊಳ್ಳುತ್ತಾರೆ. ದೇಶದಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದರ ಬಗ್ಗೆ ಎಲ್ಲಿ ಚರ್ಚೆಯಾಗುತ್ತಿದೆ?
5)ಶಸ್ತ್ರಾಸ್ತ್ರಗಳ ಖರೀದಿ ಅನೇಕ ವರ್ಷಗಳಿಂದ ಸರಿಯಾಗಿ ನಡೆಯುತ್ತಲೇ ಇಲ್ಲ. ಇದರಿಂದಾಗಿ ನಮ್ಮ ಸೇನೆ ದುರ್ಬಲವಾಗುತ್ತಿದೆ. ಮೂರು ದಿನಕೊಮ್ಮೆ ನೌಕಾಪಡೆಯ ನೌಕೆಗಳು ತಾಂತ್ರಿಕ ಕಾರಣಗಳಿಂದ ವಿಸ್ಫೋಟಗೊಂಡು ನಮ್ಮ ಸೈನಿಕರ ಸಾವಿನ ವಾರ್ತೆಗಳು ಕಿವಿಗೆ ಬೀಳುತ್ತಿವೆ. ದೇಶದ ಗಡಿರೇಖೆಗಳಲ್ಲಿ ಯಾವ ಮಟ್ಟದಲ್ಲಿ ಭದ್ರತೆ ಇರಬೇಕಾಗಿತ್ತೋ, ಅದು, ರಕ್ಷಣಾ ಸಚಿವಾಲಯದ ದೌರ್ಬಲ್ಯದಿಂದಾಗಿ ಇಲ್ಲವಾಗಿದೆ. ದೇಶದ ಸುರಕ್ಷತೆಯ ವಿಷಯವನ್ನು ಜನತೆಯ ಮುಂದೆ ತಂದು, ಆ ಕುರಿತು ತಮ್ಮ ತಮ್ಮ ಪಕ್ಷಗಳ ಸ್ಪಷ್ಟ ನಿಲುವೇನು ಎನ್ನುವುದನ್ನು ಯಾರೂ ಹೇಳುತ್ತಿಲ್ಲ. ನಮ್ಮ ನಾಯಕರಿಗೆ ಇದೆಲ್ಲ ಅರ್ಥಹೀನ ವಿಚಾರಗಳೆನಿಸುತ್ತಿವೆಯೇ?
6) ದೇಶದ ಗಡಿರೇಖೆಗಳನ್ನು ಸ್ಪರ್ಶಿಸುವ ಪ್ರದೇಶಗಳು ಬಲಗೊಳ್ಳಬೇಕು. ಏಕೆಂದರೆ ಅಲ್ಲಿ ಮೂಲಸೌಕರ್ಯಗಳು ಹೆಚ್ಚಿದರೆ, ಅಲ್ಲಿರುವ ನಮ್ಮ ಸೇನೆಯೂ ಬಲಿಷ್ಠಗೊಳ್ಳುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಅತ್ಯವಶ್ಯವಾದ ನೆರವು ಅದಕ್ಕೆ ಸುಲಭವಾಗಿ ಸಿಗುತ್ತದೆ. ಆದರೆ ನಾಯಕರ ನಿರ್ಲಕ್ಷ್ಯದಿಂದಾಗಿ ಅಂಥ ಪ್ರದೇಶಗಳೆಲ್ಲ ಇಂದು ದುರ್ಬಲವಾಗಿ ಖಾಲಿಹೊಡೆಯತೊಡಗಿವೆ. ನನ್ನ ರಾಜ್ಯ ಉತ್ತರಾಖಂಡದ ವಿಚಾರವನ್ನೇ ತೆಗೆದುಕೊಳ್ಳಿ. ಅಲ್ಲಿನ ಗಡಿ ಗ್ರಾಮಗಳಿಂದ ದೊಡ್ಡ ದೊಡ್ಡ ನಗರಗಳಿಗೆ ಜನ ಗುಳೆಹೊರಟಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಸ್ಮಶಾನಮೌನ ಮಡುಗಟ್ಟಿದೆ. ಈ ಕ್ಷೇತ್ರಗಳ ವಿಕಾಸದ ಬಗ್ಗೆ ಎಲ್ಲಿಯೂ ಚರ್ಚೆಯಾಗುತ್ತಿಲ್ಲ, ಯಾವ ಪಕ್ಷಗಳ ಅಜೆಂಡಾದಲ್ಲೂ ಈ ವಿಷಯ ಜಾಗ ಪಡೆದಿಲ್ಲ.
7) ಚೀನಾ ಮತ್ತು ವಿಶೇಷವಾಗಿ ಯುರೋಪ್ ರಾಷ್ಟ್ರಗಳಿಂದ ಆಗುತ್ತಿರುವ ಅತಿಶಯ ಆಮದಿನಿಂದಾಗಿ ಭಾರತದ ನಿರ್ಮಾಣ ಕ್ಷೇತ್ರ ಕುಸಿದು ಕುಳಿತಿದೆ. ವಿದ್ಯುತ್ ಮತ್ತು ಇಂಧನ ಸಂಬಂಧಿ ಉಪಕರಣಗಳ ಕ್ಷೇತ್ರಗಳಲ್ಲೂ 40 ಪ್ರತಿಶತದಷ್ಟು ಆಮದು ಚೀನಾದಿಂದ ಆಗುತ್ತಿದೆ. ಆಮದನ್ನು ಕಡಿಮೆ ಮಾಡಿ ಸ್ವದೇಶಿ ಉದ್ಯಮಗಳನ್ನು ಬೆಳೆಸುವುದರಿಂದ ಮಾತ್ರ ನಮ್ಮ ಅರ್ಥವ್ಯವಸ್ಥೆಯ ಬೆನ್ನೆಲುಬು ಗಟ್ಟಿಯಾಗಬಹುದು. ಇದೆಲ್ಲಾ ಯಾರ ಅಜೆಂಡಾದಲ್ಲಿದೆ?
8) ಪ್ರತಿ ವರ್ಷ ಸುಮಾರು 70 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವುದಾದರೂ ಪತ್ರಿಕೆಗಳಲ್ಲಿ ಅಥವಾ ಚಾನೆಲ್‌ಗಳಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳಾಗಿವೆಯೇ?
9) ಚೀನಾ, ಯುರೋಪ್ ರಾಷ್ಟ್ರಗಳು ಮತ್ತು ಅಮೆರಿಕದ ಬಗ್ಗೆ ನಮ್ಮ ವಿದೇಶಾಂಗ ನೀತಿ ಹೇಗಿರಲಿದೆ, ಹೇಗಿರಬೇಕು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಬಹುತೇಕ ಪಕ್ಷಗಳು ಭಾವಿಸಿರುವಂತಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಾಂಗ ನೀತಿಯೇ ಸ್ವದೇಶ ವಿದ್ಯಮಾನಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಯಾವುದೇ ಚಾನಲ್‌ಗಳೂ, ಘೋಷಣಾ ಪತ್ರಗಳು ಅಥವಾ ದಿನಪತ್ರಿಕೆಗಳಲ್ಲಿ ಈ ಬಗ್ಗೆ ಏಕೆ ಮಾತನಾಡಲಾಗುತ್ತಿಲ್ಲ?
10) ಇನ್ನು ಈ ಕೊನೆಯ ವಿಷಯವಂತೂ ವ್ಯರ್ಥವೆನಿಸಬಹುದು, ವಿಶೇಷವಾಗಿ ಈಗಿನ ಸಂದರ್ಭದಲ್ಲಂತೂ ಹಾಗನಿಸಿದರೆ ಆಶ್ಚರ್ಯಪಡಬೇಕಿಲ್ಲ. ಭಾರತದ 1 ಲಕ್ಷ 25 ಸಾವಿರ ಚದರ ಕಿ.ಮೀ. ಭೂ ಪ್ರದೇಶ ಪಾಕಿಸ್ತಾನ ಮತ್ತು ಚೀನಾದ ಕೈಯಲ್ಲಿದೆ! ಭಾರತದ ನಕ್ಷೆಯಲ್ಲಿ ಗಡಿರೇಖೆಯನ್ನು ತೋರಿಸಲಾಗುತ್ತದೆ, ಆದರೆ  'ಭಾರತದ' ಕ್ಷೇತ್ರಗಳಾದ ಗಿಲ್‌ಗಿಟ್, ಬಾಲ್ಟಿಸ್ತಾನ್‌ನ ಹೆಸರನ್ನು ಬಿಟ್ಟು. ಈ ಪ್ರದೇಶಗಳನ್ನು ವಾಪಸ್ ತರುವವರ್ಯಾರು?
ಸಣ್ಣ ಪುಟ್ಟ ಅರ್ಥಹೀನ ವಿಷಯಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ನಮ್ಮ ರಾಜಕೀಯ ಪಕ್ಷಗಳು ರಾಷ್ಟ್ರದ ಭದ್ರತೆಗೆ ಪೂರಕವಾಗುವಂಥ, ಪ್ರಭಾವ ಬೀರುವಂಥ ವಿಚಾರಗಳ ಬಗ್ಗೆ ಮಾತನಾಡಲಿವೆಯೇ? ಕೆಲಸ ಮಾಡಲಿವೆಯೇ?

-ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement