ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹೆಸರು ಮಾತ್ರ ಆಮ್‌ಆದ್ಮಿ, ಅಭ್ಯರ್ಥಿಗಳು ಯಾರಿಗೇನ್ ಕಮ್ಮಿ?

ಆಪ್‌ನಿಂದ ಕಣಕ್ಕೆ ಇಳಿಯುತ್ತಿರುವವರು ಹೆಸರಿಗೆ ತಕ್ಕಂತಿರುವ ಸಾಮಾನ್ಯ ವ್ಯಕ್ತಿಗಳಕಂತೆ ಕಾಣುತ್ತಿಲ್ಲ.

Srinivasa Murthy VN
Updated On : 12 Mar 2014, 11:43 am

ಇತರೆಲ್ಲ ರಾಜಕೀಯ ಪಕ್ಷಗಳ ಮಾದರಿಯಲ್ಲೇ ಆಮ್ ಆದ್ಮಿ ಪಕ್ಷವೂ ಬಂಡಾಯ ಮತ್ತು ಆಂತರಿಕ ಕಲಹಗಳನ್ನು ಎದುರಿಸುವಂತಾಗಿದೆ. ಭ್ರಮನಿರಸನಗೊಂಡಿರುವ ಬಹಳಷ್ಟು ಕಾರ್ಯಕರ್ತರು ಮತ್ತು ನಾಯಕರು ಕಳೆದೊಂದು ತಿಂಗಳಿನಲ್ಲಿ ಪಕ್ಷದಿಂದ ಹೊರನಡೆದಿದ್ದಾರೆ.
ಆಮ್ ಆದ್ಮಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದ ಅಶೋಕ್ ಅಗರ್ವಾಲ್ ಅವರು ಹೀಗೆ ಹುದ್ದೆ ಪಕ್ಷ ಬಿಟ್ಟವರಲ್ಲಿ ಇತ್ತೀಚಿನವರು. ಲೋಕಸಭೆ ಚುನಾವಣೆಗೆ ಆಪ್, ಸಾಮಾನ್ಯ ವ್ಯಕ್ತಿಗಳಿಗಲ್ಲದೇ 'ಬಲ್ಲಿದ'ರಿಗೇ ಟಿಕೆಟ್ ಕೊಡುತ್ತಿದೆ ಎಂಬುದು ಅವರ ಆಕ್ಷೇಪ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಅವರು ಪಕ್ಷ ತೊರೆದಿದ್ದಾರೆ. 'ಆಪ್‌ನಿಂದ ಲೋಕಸಭೆ ಚುನಾವಣೆಯ ಕಣಕ್ಕೆ ಇಳಿಯುತ್ತಿರುವವರಲ್ಲಿ ಪಕ್ಷದ ಹೆಸರಿಗೆ ತಕ್ಕಂತಿರುವ ಸಾಮಾನ್ಯ ವ್ಯಕ್ತಿಗಳ ಉಮೇದುವಾರಿಕೆಯೇ ಕಾಣುತ್ತಿಲ್ಲ. ಆಪ್ ಎಂಬುದು ಉಳ್ಳವರ ಪಕ್ಷವಾಗುತ್ತಿದೆ' ಅನ್ನೋದು ಅಶೋಕ್ ಅಗರ್ವಾಲ್ ಅವರ ಆಕ್ರೋಶ.
ಆಪ್ ಅಭ್ಯರ್ಥಿಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಶೋಕ್ ಅಗರ್ವಾಲ್ ಅವರ ಆರೋಪದಲ್ಲಿ ಹುರುಳೇ ಇಲ್ಲ ಎನ್ನಲಾಗದು. ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಮೊದಲಿನಿಂದಲೂ ತಮ್ಮ ಅಭ್ಯರ್ಥಿಗಳ ವಿಷಯದಲ್ಲಿ ಒಂದು ಮಾತನ್ನು ಹೇಳಿಕೊಂಡು ಬಂದಿದ್ದರು. 'ತಮ್ಮ ಪಕ್ಷದ ಉಮೇದುವಾರರು ಸಾಮಾನ್ಯ ವ್ಯಕ್ತಿಗಳಾಗಿರುತ್ತಾರೆ. ಇವರ್ಯಾರಿಗೂ ಅಧಿಕಾರದ ಪಡಸಾಲೆಯೊಂದಿಗೆ ಸಂಪರ್ಕಗಳು ಇದ್ದಿರುವುದಿಲ್ಲ. ಪರಿಚಿತ ಮುಖಗಳೂ ಆಗಿರುವುದಿಲ್ಲ' ಎಂದು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಂಥ ಹೊಸಮುಖಗಳೇ ಹೆಚ್ಚಿದ್ದವು ಎಂಬುದೂ ನಿಜ ಸಂಗತಿಯೇ. ಭಯ ಹುಟ್ಟಿಸುವ ಭಾರತದ ಚುನಾವಣಾ ವ್ಯವಸ್ಥೆಯನ್ನು ಎದುರಿಸಿ ಗೆದ್ದ ಹಲವು ಹೊಸಬರು ಇತಿಹಾಸವನ್ನೇ ನಿರ್ಮಿಸಿದ್ದೂ ಹೌದು.
ಆದರೆ ಲೋಕಸಭೆ ಚುನಾವಣೆಯ ವಿಷಯಕ್ಕೆ ಬಂದರೆ ಆಮ್ ಆದ್ಮಿ ಪಕ್ಷವು ಸಾಮಾನ್ಯ ವ್ಯಕ್ತಿಗಳನ್ನು ಕಡೆಗಣಿಸಿ ಕೆಲವು ದೊಡ್ಡ ದೊಡ್ಡ ಹೆಸರುಗಳಿಗೆ ಆತುಕೊಂಡಿರುವುದು ಬಹಳ ಸ್ಪಷ್ಟವಾಗುತ್ತದೆ. ಇದು ನಿಜವಾದ ಕಾರ್ಯಕರ್ತರ ಮನಸ್ಸಿಗೆ ಬಹಳ ನೋವು ನೀಡಿದೆಯಲ್ಲದೇ ವಿವಾದಕ್ಕೂ ಕಾರಣವಾಗುತ್ತಿದೆ. ತನ್ನನ್ನು ಸಾಮಾನ್ಯರ ಪ್ರತಿನಿಧಿ ಎಂದು ಕರೆದುಕೊಂಡ ಆಪ್ ಈಗ ಪ್ರತಿಷ್ಠಿತ ವರ್ಗದವರ ಸ್ವರ್ಗ ಎಂಬಂತಾಗಿದೆ. ಚಂಡೀಘಡದಿಂದ ನಟಿ, ರೂಪದರ್ಶಿ ಗುಲ್ ಪನಾಗ್ ಅವರು ಆಪ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬ ದಟ್ಟ ವದಂತಿಗಳಿವೆ.
ದೆಹಲಿಯ ಏಳು ಲೋಕಸಭೆ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಣಕ್ಕಿಳಿದವರು ಪತ್ರಕರ್ತರು. ಭಾರತದಲ್ಲಿ ಪತ್ರಕರ್ತ ಕೂಡ ಸಮಾಜದ ಪ್ರಭಾವಿ ಸ್ತರದಲ್ಲೇ ಬರುತ್ತಾನೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಕಣಕ್ಕಿಳಿದಿರುವವರು ಹೆಸರಿಲ್ಲದ ವ್ಯಕ್ತಿಗಳಂತೂ ಅಲ್ಲ. ಅಶುತೋಷ್, ಅಶೀಶ್ ಕೇತನ್ ಹಾಗೂ ಜರ್ನೈಲ್ ಸಿಂಗ್ ಇವರೆಲ್ಲ ಆಪ್‌ನ ಟಿಕೆಟ್‌ನಲ್ಲಿ ಅಭ್ಯರ್ಥಿಗಳಾಗಿರುವವರು. ಈ ಪೈಕಿ ಅಶುತೋಷ್ ಮತ್ತು ಅಶೀಶ್ ಕೇತನ್ ಚಿರಪರಿಚಿತರೇ. ಅಧಿಕಾರದ ಪಡಸಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದವರೇ.
ಖ್ಯಾತ ಇತಿಹಾಸತಜ್ಞ ರಾಜ್‌ಮೋಹನ್ ಗಾಂಧಿ ಅವರು ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರೂ ಪ್ರಖ್ಯಾತಿ ಉಳ್ಳವರೇ. ಮಹಾತ್ಮಗಾಂಧಿ ಮೊಮ್ಮಗನಾಗಿರುವ ಇವರು ಈ ಹಿಂದೆ ಜನತಾ ಪರಿವಾರದಲ್ಲಿ ಇದ್ದವರು. ಆಪ್‌ನ ಗುರ್ಗಾಂವ್ ಅಭ್ಯರ್ಥಿ ಹಾಗೂ ಪಕ್ಷದ ಪ್ರಮುಖ ನಾಯಕ ಪ್ರೊಫೆಸರ್ ಯೋಗೇಂದ್ರ ಯಾದವ್ ಅವರಂತೂ ಅನಾಮಧೇಯರಲ್ಲ. ಭಾರತದ ಅಕಾಡೆಮಿಕ್ ಮತ್ತು ಬೌದ್ಧಿಕ ವಲಯಗಳಲ್ಲಿ ದೊಡ್ಡ ಹೆಸರೇ. ಈ ಹಿಂದೆ ಅನೇಕ ಸರ್ಕಾರಿ ಸಂಸ್ಥೆಗಳ ಸಲಹಾ ಮಂಡಳಿಯಲ್ಲೂ ಅವರು ಕೆಲಸ ಮಾಡಿದ್ದಾರೆ.
ಲೂಧಿಯಾನಾದಲ್ಲಿ ಆಪ್ ಅಭ್ಯರ್ಥಿ ಎಚ್‌ಎಸ್ ಫೂಲ್ಕಾ ಅವರದ್ದೂ ಪ್ರತಿಷ್ಠಿತ ಹೆಸರೇ. ಚಂಡೀಘಡದಿಂದ ಗುಲ್ ಪನಾಗ್ ಅವರಿಗೆ ಟಿಕೆಟ್ ಕೊಟ್ಟಿದ್ದೇ ಆದರೆ ಆ ಜನಪ್ರಿಯ ನಟಿಯನ್ನು ಆಮ್ ಆದ್ಮಿಗಳ ಪಟ್ಟಿಗಂತೂ ಸೇರಿಸಲಾಗುವುದಿಲ್ಲ. ಆಕೆಯ ತಂದೆ ಭಾರತೀಯ ಸೇನೆಯ ಜನರಲ್ ಹುದ್ದೆಯಲ್ಲಿದ್ದು ನಿವೃತ್ತರಾದವರು.
ಮಹಾರಾಷ್ಟ್ರದ ಆಮ್ ಆದ್ಮಿ ಘಟಕದಲ್ಲೂ ಕೇಳಿಬರುತ್ತಿರುವ ಹೆಸರುಗಳು ಸಾಮಾನ್ಯ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಿಲ್ಲ. ಮಾಜಿ ಬ್ಯಾಂಕರ್ ಮೀರಾ ಸನ್ಯಾಲ್, ಅಂಜಲಿ ದಮಾನಿಯಾ ಇವರ್ಯಾರೂ ಆಮ್ ಆದ್ಮಿ ಎನಿಸಿಕೊಳ್ಳುವುದಿಲ್ಲ. ಕರ್ನಾಟಕದಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಆಪ್‌ನ ಅಭ್ಯರ್ಥಿಯಾಗಿ ನಿಲ್ಲುತ್ತಿರುವವರು ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್. ಇನ್ಫೋಸಿಸ್‌ನ ನಿರ್ದೇಶಕರಾಗಿದ್ದಾಗ ಸಾಮಾನ್ಯ ವ್ಯಕ್ತಿಗಳೊಂದಿಗೆ ವ್ಯವಹರಿಸಿದ ಇತಿಹಾಸವೇನೂ ಇವರ ಬೆನ್ನಿಗಿಲ್ಲ. ಬೆಂಗಳೂರು ಉತ್ತರದ ಅಭ್ಯರ್ಥಿ ನೀನಾ ಪಿ. ನಾಯಕ್, ಬೆಂಗಳೂರು ಗ್ರಾಮೀಣದಿಂದ ಸ್ಪರ್ಧಿಸಲಿರುವ ರವಿಕೃಷ್ಣಾ ರೆಡ್ಡಿ, ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲಿರುವ ಅರ್ಕೇಶ್ ಇವರ್ಯಾರೂ ಕಾಮನ್ ಮ್ಯಾನ್‌ಗಳಲ್ಲ. ಗುಲ್ಬರ್ಗ ಕ್ಷೇತ್ರದಲ್ಲಿ ಆಪ್‌ನಿಂದ ಸ್ಪರ್ಧಿಸಲಿರುವ ಬಿ. ಟಿ. ಲಲಿತಾ ನಾಯಕ್ ಕರ್ನಾಟಕದ ಜನತಾದಳ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಸಮಾಜದ ಪ್ರತಿಷ್ಠಿತರು ಮತ್ತು ಬಲಿಷ್ಠರಿಗೇ ಅತಿ ಹೆಚ್ಚಿನ ಪ್ರೀತಿ ತೋರಿಸಿರುವ ಆಪ್ ತನ್ನ ಟೀಕಾಕಾರರಿಗೆ ಸೂಕ್ತ ವಿಷಯವನ್ನೇ ಒದಗಿಸಿದೆ. ಆಪ್ ಎಂಬುದು ಕೆಲವು ಪ್ರಭಾವಿ ವ್ಯಕ್ತಿಗಳು ಸೇರಿ ನಿರ್ಮಿಸಿಕೊಂಡಿರುವ ವೇದಿಕೆ ಎಂಬ ಟೀಕೆ ವ್ಯಕ್ತವಾದರೆ ಅದರಲ್ಲಿ ತಪ್ಪೇನಿದೆ?

 ಡಿ. ಪಿ. ಸತೀಶ್
ಸಿಎನ್‌ಎನ್-ಐಬಿಎನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement