ಕಾಶ್ಮೀರಿ ವಿದ್ಯಾರ್ಥಿಗಳ ಜೈಕಾರ ಸೂಚಿಸುವುದೇನು?
ಇತ್ತೀಚೆಗೆ ನಡೆದ ಏಶ್ಯಾ ಕಪ್ ಕ್ರಿಕೆಟ್ನಲ್ಲಿ ಭಾರತದ ಮೇಲೆ ಪಾಕಿಸ್ತಾನ ತಂಡ ಗೆಲುವು ಸಾಧಿಸಿದಾಗ ಮೀರತ್ನ ಸುಭಾರತಿ ವಿಶ್ವ ವಿದ್ಯಾಲಯದ ಕಾಶ್ಮೀರಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದರಂತೆ. ಕೂಡಲೇ ಅವರನ್ನು ವಿಶ್ವವಿದ್ಯಾಲಯದಿಂದ ಉಚ್ಚಾಟನೆ ಮಾಡಲಾಯಿತು. ಆದರೆ ಯಾವುದೋ ಒತ್ತಡ ಆಥವಾ ರಾಜಕೀಯ ಲೆಕ್ಕಾಚಾರದ ಮೇಲೆ ಇಡೀ ಪ್ರಕರಣವನ್ನು ಸಾರಿಸಿಹಾಕುವ ಪ್ರಯತ್ನ ನಡೆದಿದ್ದು, ಇದು ದೇಶಪ್ರೇಮಿಗಳಲ್ಲಿ ವಿವಂಚನೆ ಉಂಟುಮಾಡಿರುವದಂತೂ ನಿಜ.
ಪಾಕಿಸ್ತಾನದ ವಿಜಯವನ್ನು ಭಾರತದಲ್ಲಿ ಸಂಭ್ರಮಿಸುವ ಇಂಥ ಘಟನೆ ಈ ದೇಶದಲ್ಲಿ ಹೊಸದೇನೂ ಅಲ್ಲ. ಹಿಂದೆಯೂ ಇಂಥ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ವಿಪರ್ಯಾಸವೆಂದರೆ, ಕಡ್ಡಿಯನ್ನೇ ಗುಡ್ಡ ಮಾಡುವ, ಕ್ಷುಲ್ಲಕ ವಿಷಯವನ್ನೂ ರಾಷ್ಟೀಯ ದುರಂತವೆನ್ನುವಂತೆ ಬಿಂಬಿಸಿ ಅಬ್ಬರಿಸಿ ದಿನಗಟ್ಟಲೆ ಪ್ರಸಾರ ಮಾಡುವ ಸುದ್ದಿ ವಾಹಿನಿಗಳಲ್ಲಿ ಈ ಸುದ್ದಿ ಕಾಟಾಚಾರಕ್ಕೆ ಪ್ರಸಾರವಾಯಿತಷ್ಟೆ. ಮುದ್ರಣ ಮಾಧ್ಯಮದಲ್ಲೂ ಇದೇ ನೀರವತೆ.
ನಾವಿಲ್ಲ ಗಂಭೀರವಾಗಿ ಚಿಂತಿಸಬೇಕಾದ ಸಂಗತಿಯೆಂದರೆ ಬೆರಳೆಣಿಕೆಯ ಆ ಕಾಶ್ಮೀರಿ ವಿದ್ಯಾರ್ಥಿಗಳಲ್ಲೇ ಬಹುತೇಕರು ಪಾಕಿಸ್ತಾನದ ಪರ ಪ್ರೀತಿ ತೋರಿಸುತ್ತಾರೆಂದರೆ, ಇನ್ನು ಕಾಶ್ಮೀರದಲ್ಲಿನ ಈ ಸನ್ನಿವೇಶ ಹೇಗಿರಬಹುದು? ಅಕ್ಕಿ ಬೆಂದಿದೆಯೇ ಇಲ್ಲವೋ ಎಂದು ನೋಡುವುದಕ್ಕೆ ಒಂದು ಅಗುಳು ಸಾಕು ಅದೇ ರೀತಿಯಲ್ಲಿ ಇತ್ತೀಚೆಗೆ ನಡೆದ ಘಟನೆ ಕಾಶ್ಮೀರದಲ್ಲಿ ಎಂಥ ಮನಸ್ಥಿತಿಗಳು ಬೆಳೆಯುತ್ತಿವೆ ಎನ್ನುವುದನ್ನು ಸೂಚಿಸುತ್ತವಲ್ಲವೇ? ಆ ಜೈಕಾರಗಳಲ್ಲಿ ಪಾಕಿಸ್ತಾನ ಮೇಲಿನ ಪ್ರೇಮದ ಜೊತೆಗೆ ಭಾರತದ ವಿರುದ್ಧದ ಕೂಗೂ ಇತ್ತೆನ್ನುವುದನ್ನು ತಿಳಿಯುವ ಸೂಕ್ಷ್ಮತೆ ಮಾಧ್ಯಮಗಳ ಕಿವಿಗಳಿಗಿಲ್ಲ.
ವಿಚಿತ್ರವೆಂದರೆ, ರಾಷ್ಟಪ್ರೇಮದ ಹೊಣೆ ಮತ್ತು ಜವಾಬ್ದಾರಿ ತಮ್ಮದೊಂದೇ ಎಂದು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಮತ್ತು ಇಂಥಹ ವಿಷಯಗಳಲ್ಲಿ ಗರಿಷ್ಠ ಮೈಲೇಜ್ ಕಿತ್ತುಕೊಳ್ಳಲು ಪ್ರಯತ್ನಿಸುವ ಕೆಲವು ಸಂಘಟನೆಗಳು ಕೂಡಾ ಉಸಿರೆತ್ತದಿರುವುದು ತೀರ ವಿಸ್ಮಯಕಾರಿಯಾಗಿದೆ. ಇವು ಕೂಡಾ ಮತ ರಾಜಕೀಯದ ಜಂಜಾಟದಲ್ಲಿ ತಮ್ಮ ಆದ್ಯತೆಯನ್ನು ಮರೆತಿರಬೇಕು
ಇಡೀ ಪ್ರಕರಣದಲ್ಲಿ ಗಮನಾರ್ಹ ಅಂಶವೆಂದರೆ, ಪಾಕಿಸ್ತಾನ ಈ ಕಾಶ್ಮೀರಿ ವಿದ್ಯಾರ್ಥಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಿದ್ದು. ಪಾಕಿಸ್ತಾನಕ್ಕೂ ಇಂಥ ಮನಸ್ಥಿತಿಯವರೇ ಬೇಕು ಅಥವಾ ಇಂಥವರನ್ನು ಪಾಕಿಸ್ತಾನವೇ ಹುಟ್ಟುಹಾಕುತ್ತಿದೆ. ಬರೀ ಆಟಕ್ಯಾಕೆ ಇಷ್ಟು ಗಲಾಟೆ ಎಂದು ಈ ಘಟನೆಯನ್ನು ಲಘುವಾಗಿ ಪರಿಗಣಿಸುವುದೂ ತಪ್ಪಾದೀತು. ಏಕೆಂದರೆ ಅಷ್ಟು ಸುಲಭವಾಗಿ ಉಪೇಕ್ಷಿಸುವಂಥ ಸಂಗತಿಯಂತೂ ಇದಲ್ಲ. ಈ ರೀತಿಯ ಮನಸ್ಥಿತಿ ಅಂಟು ರೋಗವಿದ್ದಂತೆ. ಇದನ್ನು ತಡೆಯದೇ ಬಿಟ್ಟರೆ ಶೀಘ್ರವಾಗಿ ವ್ಯಾಪಿಸುವ ಗುಣ ಇದಕ್ಕಂತೂ ಇದೆ.
-ರಮಾನಂದ ಶರ್ಮಾ, ಬೆಂಗಳೂರು