ಅಂಕಣಗಳು

ವೈರಿ ಮತ್ತು ವಿಧಿಯನ್ನೂ ಸೋಲಿಸಿದ 'ಸಿಂಗ್‌' ಈಸ್ ಕಿಂಗ್!

ನೂರಲ್ಲ, ಸಾವಿರ ಮಂದಿಗೆ ರೋಲ್ ಮಾಡೆಲ್ ಆಗುವಂಥ ಧೀರನೊಬ್ಬನ ಹೋರಾಟದ...

ನೂರಲ್ಲ, ಸಾವಿರ ಮಂದಿಗೆ ರೋಲ್ ಮಾಡೆಲ್ ಆಗುವಂಥ ಧೀರನೊಬ್ಬನ ಹೋರಾಟದ ಬದುಕಿನ ಕಥೆ ಇದು. ಇವರ ಹೆಸರು ದೇವೇಂದರ್ ಪಾಲ್ ಸಿಂಗ್. ಈತ, ಸೇನೆಯಲ್ಲಿ ಮೇಜರ್ ಆಗಿದ್ದವರು. ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆಯ ಎದುರು ವೀರಾವೇಶದಿಂದ ಹೋರಾಡಿದವರು. ಶತ್ರುಗಳ ಗುಂಡು ಹಾಗೂ ಬಾಂಬ್ ದಾಳಿಗೆ ಎದೆಯೊಡ್ಡಿ ನಿಂತವರು ಮತ್ತು ಅದೇ ಕಾರಣಕ್ಕೆ ತಮ್ಮ ಬಲಗಾಲನ್ನೇ ಕಳೆದುಕೊಂಡವರು. ಆನಂತರದಲ್ಲಿ ಅವರು -'ಅಯ್ಯೋ ವಿಧಿಯೇ' ಎಂದು ಅಳುತ್ತಾ ಕೂರಲಿಲ್ಲ. ಕಾರ್ಗಿಲ್ ಸಂತ್ರಸ್ತ ಎಂಬ ಹಣೆಪಟ್ಟಿ ಅಂಟಿಸಿಕೊಳ್ಳಲಿಲ್ಲ. ಅಂಗವಿಕಲ ಎಂಬ ಕೆಟಗರಿಗೂ ಸೇರ್ಪಡೆಯಾಗಲಿಲ್ಲ. ಬದಲಿಗೆ, ಐಯಾಮ್ ಫೈನ್ ಎಂದರು. ಒಂದು ಕಾಲಿಲ್ಲ ಎಂಬುದನ್ನು ಹೊರತುಪಡಿಸಿದರೆ, ನಾನು ಆರಾಮಾಗಿ ಇದೀನಿ ಎಂದು ಸಂಭ್ರಮದಿಂದ ಹೇಳಿಕೊಂಡರು. ಈ ಧೀರ ಸೇನಾನಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಕೆಲವು ತಿಂಗಳ ಚಿಕಿತ್ಸೆಯ ನಂತರ, ಕಳೆದು ಹೋಗಿದ್ದ ಕಾಲಿನ ಜಾಗಕ್ಕೆ ಫೈಬರ್ ಬ್ಲೇಡ್‌ನ ಕಾಲು ಅಳವಡಿಸಿಕೊಂಡು, ಮ್ಯಾರಥಾನ್ ಓಟದ ಅಂಗಳಕ್ಕೆ ಬಂದರು. ಆ ಮೂಲಕ ಭಾರತದ ಮೊಟ್ಟಮೊದಲ 'ಬ್ಲೇಡ್ ರನ್ನರ್‌' ಅನ್ನಿಸಿಕೊಂಡರು. ತಮ್ಮ ಹೋರಾಟದ ಬದುಕಿನ ಕಥೆಯನ್ನು ಆತ ಮುಕ್ತವಾಗಿ ಬರೆದುಕೊಂಡಿದ್ದಾರೆ. ಆ ಬರಹದ ಭಾವಾನುವಾದ ಇಲ್ಲಿದೆ.
---------
'ಹರ್ಯಾಣ ರಾಜ್ಯದ ಅಂಬಾಲ ನಗರಕ್ಕೆ ಸಮೀಪದ ಹಳ್ಳಿ ನನ್ನ ಹುಟ್ಟೂರು. ಆದರೆ ನಾನು ಬಾಲ್ಯ ಕಳೆದದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಈಗಿನ ಉತ್ತರಾಖಂಡ ರಾಜ್ಯದ ರೂರ್‌ಕೆಯಲ್ಲಿ. ಸರ್ಕಾರಿ ನೌಕರಿಯಲ್ಲಿದ್ದ ನನ್ನ ತಂದೆ, ಹೆಚ್ಚಿನ ಸಂದರ್ಭಗಳಲ್ಲಿ ದೇಶದ ಗಡಿ ಭಾಗದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಿತ್ತು. ಹಾಗಾಗಿ ನಾನು, ರೂರ್‌ಕೆಯಲ್ಲಿದ್ದ ಅಜ್ಜನ ಮನೆಯಲ್ಲೇ ಉಳಿದುಕೊಂಡೆ.
ರೂರ್‌ಕೆ, ಎಂಜಿನಿಯರಿಂಗ್ ಶಿಕ್ಷಣಕ್ಕೆ ಹೆಸರಾದ ಸ್ಥಳ. ಅಲ್ಲಿಗೆ ಬರುವ ಶೇ. 90ರಷ್ಟು ವಿದ್ಯಾರ್ಥಿಗಳ ಉದ್ದೇಶ, ಎಂಜಿನಿಯರಿಂಗ್ ಓದಬೇಕೆಂಬುದೇ ಆಗಿರುತ್ತದೆ. ನನ್ನ ವಾರಿಗೆಯವರನ್ನು ಕಂಡಾಗ ನಾನೂ ಎಂಜಿನಿಯರಿಂಗ್ ಓದಬೇಕು ಅನ್ನಿಸುತ್ತಿತ್ತು. ಆದರೆ, ಮನೆಯ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಹಾಗಾಗಿ, ಕಲಿಕೆ ಮತ್ತು ಗಳಿಕೆಯನ್ನು ಒಟ್ಟಿಗೇ ಮಾಡಬೇಕೆಂಬ ಸದಾಶಯದಿಂದ ಬ್ಯಾಂಕ್ ನೌಕರಿಗೆ ಸೇರಿಕೊಂಡೆ. ಕೆಲವೇ ತಿಂಗಳಲ್ಲಿ ಈ ಕೆಲಸ ಬೋರ್ ಹೊಡೆಸಿತು. ಅದೇ ಸಂದರ್ಭದಲ್ಲಿ, ಭಾರತೀಯ ಮಿಲಿಟರಿ ಅಕಾಡೆಮಿಗೆ ನೇಮಕಾತಿ ನಡೆವ ವಿಷಯ ಕಿವಿಗೆ ಬಿತ್ತು. ತಕ್ಷಣವೇ ಅಲ್ಲಿಗೆ ಹೋದೆ. ಹೀಗೆ, ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್‌ಗೆ ಸೇರಿಕೊಂಡಾಗ ನನಗೆ ಕೇವಲ 23 ವರ್ಷ. ಇದು 1997ರ ಮಾತು. ದೇಶದ ಯೋಧನಾಗಿ, ಮೊದಲ ದಿನವೇ ನಾನು ಹೋಗಿ ನಿಂತದ್ದು ಗಡಿ ನಿಯಂತ್ರಣಾ ರೇಖೆಯ ಪ್ರದೇಶಕ್ಕೆ. ಸಿಪಾಯಿಯಾಗಿ ಸೇನೆ ಸೇರಿದವನು, ಎರಡು ವರ್ಷದ ಅವಧಿಯಲ್ಲಿ ಮೇಜರ್ ಅನ್ನಿಸಿಕೊಂಡಿದ್ದೆ. ಒಂದು ಬೆಟಾಲಿಯನ್‌ನ ಮುಖಂಡನಾಗಿದ್ದೆ. ದಳಪತಿಯಾಗಿದ್ದೆ.
ಹೀಗಿರುವಾಗಲೇ, 1999ರಲ್ಲಿ ಕಾರ್ಗಿಲ್ ಯುದ್ಧ ಶುರುವಾಗಿ ಹೋಯಿತು. ಶತ್ರು ಸೇನೆಯ ವಿರುದ್ಧ ದೇಶದ ಎಲ್ಲ ಯೋಧರೂ ತೊಡೆತಟ್ಟಿ ನಿಂತುಬಿಟ್ಟರು. ಎಲ್ಲರದ್ದೂ ಒಂದೇ ಉದ್ಗಾರ: ಭಾರತ್ ಮಾತಾಕೀ ಜೈ! ಯುದ್ಧ ಮುಂದುವರಿಯುತ್ತಾ ಹೋದಂತೆಲ್ಲ ಒಂದು ವಿಷಯ ಸ್ಪಷ್ಟವಾಗಿ ಹೋಯಿತು. ಏನೆಂದರೆ- ಅಂತಿಮವಾಗಿ ಗೆಲವು ನಮ್ಮದೇ! ಆದರೆ, ಪಾಕ್ ಸೈನಿಕರು, ಆಯಕಟ್ಟಿನ ಜಾಗಗಳಲ್ಲಿ ಅಡಗಿ ಕೂತುಬಿಟ್ಟಿದ್ದಾರೆ. ಹಾಗಾಗಿ, ಯಾವ ದಿಕ್ಕಿನಿಂದ, ಯಾವಾಗ ಬೇಕಾದರೂ ಗುಂಡುಗಳು ಹಾರಬಹುದು. ಯಾವ ಕ್ಷಣದಲ್ಲಾದರೂ ಬಾಂಬ್ ಬೀಳಬಹುದು.
ಅವತ್ತು 1999ರ ಜುಲೈ 15. ಇದ್ದಕ್ಕಿದ್ದಂತೆಯೇ ಶತ್ರುಗಳ ಕಡೆಯಿಂದ ಗುಂಡಿನ ದಾಳಿ ಶುರುವಾಯಿತು. ನಾವೂ ಸರಿಯಾಗಿಯೇ ಉತ್ತರ ಕೊಟ್ಟೆವು. ಹೀಗೇ ಅರ್ಧ ಗಂಟೆ ಕಳೆಯಿತು. ಅವರೂ ಸೋಲಲಿಲ್ಲ. ನಾವೂ ಗೆಲ್ಲಲಿಲ್ಲ. ಹೀಗಿರುವಾಗಲೇ, ಶತ್ರುಗಳ ಕಡೆಯಿಂದ ದಿಢೀರ್ ಎಂಬಂತೆ ಗುಂಡಿನ ದಾಳಿ ನಿಂತು ಹೋಯಿತು. ಬಂದೂಕುಗಳಲ್ಲಿದ್ದ ಗುಂಡುಗಳು ಖಾಲಿಯಾಗಿದ್ದರಿಂದಲೇ ಅವರು ಸೈಲೆಂಟ್ ಆಗಿದ್ದಾರೆ ಎಂದು ನಂಬಲು ನಾನಂತೂ ಸಿದ್ಧನಿರಲಿಲ್ಲ. ಮುಂದಿನ ಕೆಲವೇ ಕ್ಷಣಗಳಲ್ಲಿ ಏನೋ ಕೆಡುಕಾಗಲಿದೆ ಎಂದು ನನ್ನ ಒಳಮನಸ್ಸು ಪಿಸುಗುಡತೊಡಗಿತು. ಯಾವುದೋ ಅಪಾಯ ಎದುರಾಗಬಹುದು. ಅದನ್ನು ಹಿಮ್ಮೆಟ್ಟಿಸಲು ಸಿದ್ಧರಾಗಿ ಎಂದು ಜೊತೆಗಾರರಿಗೆ ಕಣ್ಸನ್ನೆಯಲ್ಲೇ ತಿಳಿಸಿದೆ. ನಾಲ್ಕು ನಿಮಿಷ ಕಳೆದಿಲ್ಲ, ಆಗಲೇ ಚೆಂಡಿನಂಥ ವಸ್ತುವೊಂದು ಹಾರಿ ಬಂದು ನನ್ನ ಮುಂದೆಯೇ ಬಿತ್ತು. ಅದು ಬಾಂಬ್ ಎಂದು ಗೊತ್ತಾದ ತಕ್ಷಣ, ಶಕ್ತಿಯನ್ನೆಲ್ಲ ಒಟ್ಟುಗೊಡಿಸಿಕೊಂಡು ಡೈವ್ ಹೊಡೆದೆ. ಮರುಕ್ಷಣವೇ ಭಾರಿ ಸ್ಫೋಟದ ಸದ್ದು ಕೇಳಿಸಿತು.
ಕಣ್ತೆರೆದಾಗ, ಮಿಲಿಟರಿ ಆಸ್ಪತ್ರೆಯ ಐಸಿಯುನಲ್ಲಿದ್ದೆ. ಅಲ್ಲಿದ್ದ ವೈದ್ಯರು "ಗುಟ್ಟು" ಎಂಬಂಥ ಸುದ್ದಿಯೊಂದನ್ನು ಹೇಳಿದರು. 'ಮಿಸ್ಟರ್ ಸಿಂಗ್, ಬಾಂಬ್ ಸ್ಫೋಟದಿಂದ ನಿಮ್ಮೊಂದಿಗಿದ್ದ ಆರು ಮಂದಿ ಸತ್ತು ಹೋದರು. ನೀವೂ ಕೋಮಾ ಸ್ಥಿತಿಯಲ್ಲಿ ಬಿದ್ದಿದ್ರಿ. ಮೊದಲು ಪರೀಕ್ಷಿಸಿದ ವೈದ್ಯರು, ಎಲ್ಲರೂ ಸತ್ತು ಹೋಗಿದ್ದಾರೆ ಎಂದು ಘೋಷಿಸಿ ಶವಾಗಾರಕ್ಕೆ ಸಾಗಿಸಿಬಿಟ್ಟರು. ಅರ್ಧ ಗಂಟೆಯ ನಂತರ, ಸತ್ತು ಹೋದವರು ಯಾರ್ಯಾರು ಎಂದು ನೋಡಲು ಬಂದ ಮತ್ತೊಬ್ಬ ವೈದ್ಯರಿಗೆ, ನಿಮ್ಮ ದೇಹ ಮಿಸುಕಾಡಿದ್ದು ಕಾಣಿಸಿತಂತೆ. ತಕ್ಷಣವೇ ಅವರು ತಮ್ಮ ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದರು. ಆ ಎರಡನೇ ವೈದ್ಯರು ಆಕಸ್ಮಿಕವಾಗಿ ಶವಾಗಾರಕ್ಕೆ ಬಂದ ಕಾರಣದಿಂದಲೇ ನೀವು ಬದುಕಿ ಉಳಿದಿದ್ದೀರಿ...'
ಎಲಾ ಎಲಾ, ಹೀಗೂ ಆಗುವುದುಂಟೆ? ಒಂದು ವೇಳೆ ಆ ವೈದ್ಯರು ಆಕಸ್ಮಿಕವಾಗಿ ಗಮನಿಸದೇ ಹೋಗಿದ್ದರೆ, ಜೀವ ಹೋಗುವ ಮೊದಲೇ ನನ್ನನ್ನು ಶವಪೆಟ್ಟಿಗೆಗೆ ತುಂಬಿ ಕಳಿಸಿ ಬಿಡುತ್ತಿದ್ದರೇನೋ ಎಂದುಕೊಂಡು ನಾನು ತಳಮಳಿಸುತ್ತಿದ್ದಾಗಲೇ ಅದೇ ವೈದ್ಯರು ವಿಷಾದದಿಂದ ಹೇಳಿದರು: 'ಮಿಸ್ಟರ್ ಸಿಂಗ್, ಈ ಸಂಗತಿಯನ್ನು ಹುಷಾರಾಗಿ ಕೇಳಿಸಿಕೊಳ್ಳಿ: ಬಾಂಬ್ ಸ್ಫೋಟದ ಕಾರಣದಿಂದಾಗಿ ನಿಮ್ಮ ಭುಜ, ಕುತ್ತಿಗೆ, ಕೆನ್ನೆ, ಬೆನ್ನುಮೂಳೆ, ತೊಡೆ, ಮೊಣಕಾಲು, ಹಿಮ್ಮಡಿ, ಕರುಳು ಮತ್ತು ಮೂತ್ರಕೋಶಕ್ಕೆ ಭಾರಿ ಎಂಬಂಥ ಪೆಟ್ಟು ಬಿದ್ದಿದೆ. ಈಗಾಗಲೇ ಮೂರು ಆಪರೇಷನ್ ಮಾಡಿದ್ದಾಗಿದೆ. ಇನ್ನೂ ಆರು ಆಪರೇಷನ್ ಆಗಬೇಕು. ಪ್ರತಿ ಬಾರಿ ಆಪರೇಷನ್ ಆದಾಗಲೂ ಹೆಚ್ಚು ರಕ್ತಸ್ರಾವವಾಗುತ್ತಿದೆ. ನಿಜ ಹೇಳಬೇಕೆಂದರೆ, ಈಗ ನಿಮ್ಮ ದೇಹದಲ್ಲಿ ಹರಿಯುತ್ತಿದೆಯಲ್ಲ, ಅದೆಲ್ಲಾ ದಾನಿಗಳ ಕಡೆಯಿಂದ ಬಂದ ರಕ್ತ. ಮುಂದಿನ ದಿನಗಳಲ್ಲಿ ಮೊಣಕೈ, ಕಾಲು, ತೊಡೆ, ಕುತ್ತಿಗೆ... ಹೀಗೆ ಎಲ್ಲ ಕಡೆಗೂ ಬಿದಿರಿನ ಬ್ಯಾಂಡೇಜ್ ಹಾಕಿ, ಮೂಳೆಗಳು ಕೂಡಿಕೊಳ್ಳುವಂತೆ ಮಾಡುತ್ತೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆಂದು ಗ್ಯಾರಂಟಿ ಕೊಡುವುದಿಲ್ಲ. ಆದರೆ ಪ್ರಯತ್ನವನ್ನಂತೂ ಮಾಡುತ್ತೇವೆ. ಮತ್ತೊಂದು ಮುಖ್ಯ ವಿಷಯ ಏನೆಂದರೆ- ಬಾಂಬ್‌ನ ಒಳಗಿದ್ದ ವಿಷಪೂರಿತ ವಸ್ತು ನಿಮ್ಮ ಬಲಗಾಲನ್ನು ಹೊಕ್ಕಿದ್ದು ಗ್ಯಾಂಗ್ರಿನ್ ಆಗಿದೆ. ಈ ಕಾರಣದಿಂದಾಗಿ ತೊಡೆಯ ಭಾಗದವರೆಗೂ ನಿಮ್ಮ ಬಲಗಾಲನ್ನು ಕತ್ತರಿಸಲಾಗುತ್ತದೆ. ಎಲ್ಲಕ್ಕೂ ನೀವು ಮಾನಸಿಕವಾಗಿ ಸಿದ್ಧರಾಗಿ...'
ವೈದ್ಯರು ವಿಷಣ್ಣಭಾವದಿಂದ ಹೀಗೆಲ್ಲ ಹೇಳಿದ್ದರು. ಆಗ 'ಅಯ್ಯೋ ದೇವರೇ, ಯಾಕಪ್ಪಾ ನನಗೆ ಇಂಥಾ ಶಿಕ್ಷೆ ಕೊಟ್ಟೆ? ಎಂದು ನಾನು ತಮಾಷೆಗೂ ಅಂದುಕೊಳ್ಳಲಿಲ್ಲ. ಬದಲಿಗೆ ನನಗೆ ನಾನೇ ಹೇಳಿಕೊಂಡೆ; ಕಾಲಿಲ್ಲದ ಮನುಷ್ಯನೊಬ್ಬ ಎಷ್ಟೊಂದು ಸಂಭ್ರಮದಿಂದ ಬದುಕಬಹುದು ಎಂಬು ದನ್ನು ಈ ಜಗತ್ತಿಗೆ ಖಂಡಿತ ತೋರಿಸಿಕೊಡ್ತೇನೆ...'
ಮೂರು ತಿಂಗಳ ಚಿಕಿತ್ಸೆಯ ನಂತರ ಡಿಸ್‌ಚಾರ್ಜ್ ಆಯ್ತು. ಆಗಲೂ, ಮೂಳೆಗಳು ಕೂಡಿಕೊಳ್ಳಲಿ ಎಂಬ ಕಾರಣಕ್ಕೆ ಕೈ-ಕಾಲು, ಬೆನ್ನು, ಹೊಟ್ಟೆ, ಕುತ್ತಿಗೆ...ಹೀಗೆ ಎಲ್ಲ ಕಡೆಗೂ 45ಕ್ಕೂ ಹೆಚ್ಚು ಬಿದಿರಿನ ಪಟ್ಟಿಗಳನ್ನು ಕಟ್ಟಲಾಗಿತ್ತು. 5 ಅಡಿ, 8 ಇಂಚು ಎತ್ತರವಿದ್ದ ನಾನು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 70 ಕೆ.ಜಿ. ತೂಗುತ್ತಿದ್ದ ನಾನು ಆಸ್ಪತ್ರೆಯಿಂದ ಹೊರಬಂದಾಗ ಕೇವಲ 29 ಕೆ.ಜಿ. ತೂಕವಿದ್ದೆ. ಅದೆಲ್ಲಾ ನನ್ನ ದೇಹದಲ್ಲಿದ್ದ ಮೂಳೆಗಳ ತೂಕವೇ ಆಗಿತ್ತು ಅಂದರೆ, ನನಗೆ ಬಿದ್ದಿದ್ದ ಪೆಟ್ಟುಗಳ ಪ್ರಮಾಣ ಹಾಗೂ ನನ್ನ ದೇಹದ ಸ್ಥಿತಿ ಹೇಗಿತ್ತು ಎಂಬುದನ್ನು ಅಂದಾಜು ಮಾಡಿಕೊಳ್ಳಿ...
ಶಾಲಾ ದಿನಗಳಲ್ಲಿ ಕರಾಟೆ, ಟೇಕ್ವಾಂಡೋ, ವಾಲಿಬಾಲ್, ಫುಟ್‌ಬಾಲ್, ರನ್ನಿಂಗ್ ರೇಸ್... ಹೀಗೆ ಪ್ರತಿಯೊಂದು ಕ್ರೀಡೆಯಲ್ಲೂ ಮೊದಲ ಸ್ಥಾನ ಪಡೆಯುತ್ತಿದ್ದವ ನಾನು. ದೇಶಸೇವೆಯೇ ನನ್ನ ಗುರಿ ಎಂಬ ನಿರ್ಧಾರದೊಂದಿಗೆ 23ನೇ ವಯಸ್ಸಿಗೇ ಯುದ್ಧ ಭೂಮಿಗೆ ನಡೆದು ಹೋದವ ನಾನು. ಕಾರ್ಗಿಲ್ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರನಾದವನು ನಾನು. ಅಂಥವನು ಕೇವಲ 25ನೇ ವಯಸ್ಸಿಗೇ ಬಲಗಾಲು ಕಳೆದುಕೊಂಡಿದ್ದೆ. ಒಂದು ಕಾಲದಲ್ಲಿ ಶತ್ರುಗಳ ಎದುರು ನಿಂತು ತೊಡೆ ತಟ್ಟಿದ್ದೆ. ಈಗ ಬದಲಾದ ಪರಿಸ್ಥಿತಿಯಲ್ಲಿ, ವಿಧಿಯ ಅಟ್ಟಹಾಸದ ಎದುರು ತೊಡೆ ತಟ್ಟಬೇಕಿತ್ತು. ಅಂಥ ಸಂದರ್ಭದಲ್ಲಿ, ನನ್ನೆದುರು 'ವಿಧಿ' ಎಂಬ ಶತ್ರು ನಿಂತಿದ್ದಾನೆ ಎಂದು ಊಹಿಸಿಕೊಂಡು ನಿರ್ಧಾರದ ದನಿಯಲ್ಲಿ ಹೇಳಿಬಿಟ್ಟೆ: 'ವಿಧಿಯೇ ಎದ್ದು ಬಾ. ತಾಕತ್ತಿದ್ದರೆ ನನ್ನೊಂದಿಗೆ ಹೋರಾಡು...'
ಒಂದೊಂದೇ ದಿನ ಉರುಳಿದಂತೆ, ನನ್ನ ಆರೋಗ್ಯವೂ ಸುಧಾರಿಸತೊಡಗಿತು. ಮೊದಲಿಗೆ, ಕಾಲಿಲ್ಲ ಎಂಬ ಕೊರಗು ನನ್ನನ್ನು ಕಾಡದಂತೆ ನೋಡಿಕೊಳ್ಳಬೇಕಿತ್ತು. ಗೋಡೆ ಹಿಡಿದುಕೊಂಡು ಎದ್ದು ನಿಲ್ಲುವುದನ್ನು, ವಾಕಿಂಗ್ ಸ್ಟಿಕ್‌ನ ಸಹಾಯದಿಂದ ನಡೆದಾಡುವುದನ್ನು ಅಭ್ಯಾಸ ಮಾಡಿಕೊಂಡೆ. ಹೊರಗೆ ಹೋಗಬೇಕಾದ ಸಂದರ್ಭದಲ್ಲಿ ಕೃತಕ ಕಾಲು ಅಳವಡಿಸಿಕೊಂಡೆ. ಕೃತಕ ಕಾಲಿನ ಕೆಲವು ಭಾಗಗಳು ಕೆಲವೊಮ್ಮೆ ಚರ್ಮವನ್ನು ಕಚ್ಚಿಕೊಂಡಂತಾಗಿ ಹಿಂಸೆಯಾಗುತ್ತಿತ್ತು. ಅಂಥ ಸಂದರ್ಭದಲ್ಲಿ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ: 'ಜಗತ್ತಿನಲ್ಲಿ ನನಗಿಂತ ಹೆಚ್ಚಿನ ನೋವು ತಿನ್ನುತ್ತಿರುವವರು ಇದ್ದಾರೆ. ಕಾಲುಗಳೇ ಇಲ್ಲದ ನತದೃಷ್ಟರೂ ಇದ್ದಾರೆ. ಅವರಿಗೆ ಹೋಲಿಸಿದರೆ, ನನ್ನದು ಸಮಸ್ಯೆಯೇ ಅಲ್ಲ.'
ನಂತರದ ದಿನಗಳಲ್ಲಿ ನನ್ನ ದೇಹಸ್ಥಿತಿ ಮತ್ತಷ್ಟು ಸುಧಾರಿಸಿತು. ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಂಡರೆ ಒಳ್ಳೆಯದು ಅನ್ನಿಸಿದಾಗ ಮೊದಲಿಗೆ ಗಾಲ್ಫ್ ಆಡಿದೆ. ನಂತರ ವಾಲಿಬಾಲ್‌ನ ಅಂಗಳಕ್ಕೆ ಬಂದೆ. ಆನಂತರ ಜಿಗಿಯುವ, ಬೆಟ್ಟ ಹತ್ತುವ ಸಾಹಸಕ್ಕೂ ಮುಂದಾದೆ. ಗುಡ್ಡಗಾಡು ಪ್ರದೇಶದಲ್ಲಿ ಕಾರ್ ಓಡಿಸುವ ರ್ಯಾಲಿಯಲ್ಲಿ ಹೆಸರು ನೊಂದಾಯಿಸಿಕೊಂಡೆ. ಗೆಲ್ಲುವ ವಿಶ್ವಾಸ ನನಗಿತ್ತು. ಆದರೆ, ನನಗೆ ಪ್ರಾಯೋಜಕರೇ ಸಿಗಲಿಲ್ಲ. ಕಾರ್ ಚಾಲನೆಗೆ ಬಲಗಾಲು ಅತಿ ಮುಖ್ಯ. ಹೀಗಿರುವಾಗ ಆ ಕಾಲಿನ ಜಾಗದಲ್ಲಿ ಕೃತಕ ಕಾಲು ಕಟ್ಟಿಕೊಂಡಿರುವ ಈತ ಕಾರ್ ಓಡಿಸಲು ಹೇಗೆ ಸಾಧ್ಯ ಎಂಬ ಅನುಮಾನ ಅವರದಿತ್ತು. ಇಂಥ ಸಂದರ್ಭದಲ್ಲಿಯೇ ನನಗೆ ದಿನವೂ ಓಡುವುದನ್ನೇ ಅಭ್ಯಾಸ ಮಾಡಿಕೊಳ್ಳಬಾರದೇಕೆ ಎಂಬ ಆಲೋಚನೆ ಬಂದದ್ದು... 'ಮಾಯವಾಗಿರುವ' ಕಾಲಿನ ಜಾಗಕ್ಕೆ ಫೈಬರ್ ಬ್ಲೇಡ್‌ನಿಂದ ತಯಾರಿಸಿದ ಕೃತಕ ಕಾಲು ಅಳವಡಿಸಿಕೊಳ್ಳಬೇಕು ಎಂಬ ಐಡಿಯಾ ಜೊತೆಯಾದದ್ದು.
ಫೈಬರ್ ಬ್ಲೇಡ್‌ನಿಂದ ತಯಾರಿಸಿದ ಕೃತಕ ಕಾಲು, ಮೇಲ್ಭಾಗದಲ್ಲಿ ಸ್ಟೀಲ್ ರಾಡ್‌ನಂತೆ ಉದ್ದವಾಗಿರುತ್ತದೆ. ಪಾದದ ಭಾಗದಲ್ಲಿ ಇಂಗ್ಲೀಷಿನ 'ಯು' ಅಕ್ಷರದ ಆಕಾರದಲ್ಲಿರುತ್ತದೆ. ಮುಖ್ಯವಾಗಿ ಯಾವ ಸಂದರ್ಭದಲ್ಲೂ 'ಫಿಕ್ಸ್ ಮಾಡಿದ ಜಾಗಕ್ಕೆ' ಚುಚ್ಚಿಕೊಂಡಂಥ, ಕಚ್ಚಿದಂಥ ಅನುಭವ ನೀಡುವುದಿಲ್ಲ. ಇಂಥ ವಿಶೇಷ ಕಾಲಿನ ಸಹಾಯದಿಂದ ಓಡುವವರನ್ನು 'ಬ್ಲೇಡ್ ರನ್ನರ್‌' ಎಂದು ಕರೆಯುತ್ತಾರೆ. ಈ ಉಪಕರಣವನ್ನು ಖರೀದಿಸಲು ಹೊರಟಾಗ ಕೇಂದ್ರ ಸರ್ಕಾರ ನೆರವಿಗೆ ಬಂತು. ದೇಶ ವಿದೇಶಗಳಲ್ಲಿದ್ದ ನೂರಾರು ಅಭಿಮಾನಿಗಳು, ಖರ್ಚು ನಿಭಾಯಿಸಲು ಹೆದರಬೇಡ. ನಾವೆಲ್ಲರೂ ಜೊತೆಗಿದ್ದೇವೆ ಎಂದು ಧೈರ್ಯ ಹೇಳಿದರು. ಆನಂತರದಲ್ಲಿ ನಾನು ತಡ ಮಾಡಲಿಲ್ಲ. ಫೈಬರ್ ಬ್ಲೇಡ್‌ನ ಕಾಲಿನೊಂದಿಗೆ ರಸ್ತೆಗೆ ಬಂದೆ. ಸಾಧ್ಯವಾದಷ್ಟೂ ವೇಗವಾಗಿ ಓಡಲು ಆರಂಭಿಸಿದೆ. ಮ್ಯಾರಥಾನ್ ಎಂದರೆ 10, 15, 21 ಕಿಮೀ ದೂರ ಓಡಬೇಕು. ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಒಂದು ದಿನದಲ್ಲಿ 40 ಕಿ.ಮೀ. ಓಡಿದ್ದವ ನಾನು. ಅಂಥವನಿಗೆ ಈ ಮ್ಯಾರಥಾನ್ ಸ್ಪರ್ಧೆ ಯಾವ ಲೆಕ್ಕ ಎಂದುಕೊಂಡೇ ಒಡಲಾರಂಭಿಸಿದೆ. ಮೊದಮೊದಲು ಜನ ನನ್ನನ್ನೇ ಬೆರಗಿನಿಂದ ನೋಡುತ್ತ ನಿಂತುಬಿಡುತ್ತಿದ್ದರು. ಅವರಿಗೆ ಉತ್ತರಿಸಬೇಕಾದ ಅಗತ್ಯ ನನಗಿರಲಿಲ್ಲ. ಹಾಗಾಗಿ 'ಕುತೂಹಲಿ'ಗಳನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗಿದೆ. ನನ್ನ ಬಗ್ಗೆ ಎರಡು ದಿನ ಪಿಸಪಿಸ ಮಾತಾಡಿಕೊಂಡ ಜನ ನಂತರ ತೆಪ್ಪಗಾದರು. ಸತತ ತರಬೇತಿಯ ನಂತರ, 21 ಕಿಮೀ. ದೂರವನ್ನು ಓಡಬಲ್ಲೆ ಎಂಬ ಆತ್ಮವಿಶ್ವಾಸ ಜೊತೆಯಾಗುತ್ತಿದ್ದಂತೆಯೇ, ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ ಎಂಬ ಪ್ರಕಟಣೆ ಹೊರಬಿತ್ತು. ಫೈಬರ್ ಬ್ಲೇಡ್‌ನ ಕಾಲಿನೊಂದಿಗೇ ಅಲ್ಲಿಗೆ ಹೋದವನು, 21 ಕಿಮೀ ದೂರವನ್ನು 3 ಗಂಟೆ 50 ನಿಮಿಷದಲ್ಲಿ ಓಡಿಬಿಟ್ಟೆ. ಅವತ್ತೇ, ದೇಶದ ಮೊದಲ ಬ್ಲೇಡ್ ರನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರನಾದೆ. ಕಾರ್ಗಿಲ್ ಯುದ್ಧದಲ್ಲಿ ಮಾತ್ರವಲ್ಲ, ಬದುಕಿನ ಯುದ್ಧದಲ್ಲೂ ಗೆದ್ದಿರುವೆನೆಂಬ ಹೆಮ್ಮೆ ನನಗಿದೆ...'
---------
ಕೇಳಿ: ಈವರೆಗೂ, ಐದು ಮ್ಯಾರಥಾನ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗೆಲುವಿನ ಬಾವುಟ ಹಾರಿಸಿದ್ದಾರೆ ದೇವೇಂದರ್ ಪಾಲ್ ಸಿಂಗ್. ಒಮ್ಮೆ ಚಿತ್ರ ನೋಡಿದರೆ, ಅವರು ಹೇಗಿದ್ದಾರೆ, ಫೈಬರ್‌ಬ್ಲೇಡ್‌ನ ಕೃತಕ ಕಾಲು ಹೇಗಿದೆ, ಅದನ್ನು 'ಫಿಕ್ಸ್‌' ಮಾಡಿಕೊಂಡು ಓಡುವುದು ಎಷ್ಟೊಂದು ಕಷ್ಟ ಎಂಬುದು ಅರ್ಥವಾಗುತ್ತದೆ. ದೆಹಲಿಯ ಐಸಿಐಸಿಐ ಬ್ಯಾಂಕ್‌ನಲ್ಲಿ ಆಡಳಿತಾಧಿಕಾರಿಯಾಗಿರುವ ದೇವೇಂದರ್ ಸಿಂಗ್, ಈಗಲೂ ತುಂಬಾ ಚಟುವಟಿಕೆಯಿಂದ ಇದ್ದಾರೆ. ತಮ್ಮಂತೆಯೇ, ಕಾಲಿಲ್ಲದ ಪ್ರತಿಭಾವಂತ ಕ್ರೀಡಾಪಟುಗಳ ತಂಡ ಕಟ್ಟಿದ್ದಾರೆ. ಅದಕ್ಕೆ ಚಾಲೆಂಜರ್ಸ್ ಟೀಂ ಎಂದು ಹೆಸರಿಟ್ಟಿದ್ದಾರೆ. ನಾವು ಸವಾಲುಗಳಿಗೆ ಹೆದರುವುದಿಲ್ಲ. ಸವಾಲುಗಳನ್ನೇ ಹೆದರಿಸುತ್ತೇವೆ. ನಾನು, ನನ್ನೊಂದಿಗಿರುವವರು ಖಂಡಿತ ಅಂಗವಿಕಲರಲ್ಲ. ನಾವು ಸಾಹಸ ಮಾಡಲೆಂದೇ ಹುಟ್ಟಿರುವ ಧೀರರು ಎಂದು ಖಡಕ್ ಧ್ವನಿಯಲ್ಲಿ ಹೇಳುತ್ತಾರೆ.
ಪ್ರತಿ ಮನುಷ್ಯನನ್ನೂ ಪದೇ ಪದೆ ಹೆದರಿಸುವ ಸೋಲು ಮತ್ತು ಸವಾಲುಗಳನ್ನು ಹೆಜ್ಜೆ ಹೆಜ್ಜೆಗೂ ಹಿಮ್ಮೆಟ್ಟಿಸಿರುವ ದೇವೇಂದರ್ ಪಾಲ್‌ಸಿಂಗ್, ನಮ್ಮೆಲ್ಲರ ಹೀರೋ, ಹೌದಲ್ಲವೇ? ಆತನಿರುವ 'ಕಾಲದಲ್ಲಿ' ನಾವೂ ಇದ್ದೇವೆ. ಅದು ನಮ್ಮ ಸೌಭಾಗ್ಯ. ನಿಜವಲ್ಲವೇ?

- ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!