ಇದುವರೆಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲೇ ಹೈರಾಣಾಗಿದ್ದ ರಾಜಕೀಯ ಪಕ್ಷಗಳು ಈಗ ಚುನಾವಣೆ ಪ್ರಣಾಳಿಕೆಯತ್ತ ಗಮನ ಕೇಂದ್ರೀಕರಿಸಿವೆ. ಪ್ರಣಾಳಿಕೆ ಘೋಷಣೆಯಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್, ತನ್ನ ಆಶ್ವಾಸನೆಗಳನ್ನು ಜನರ ಮುಂದೆ ಇಟ್ಟಿದ್ದಾಗಿದೆ. ಬಿಜೆಪಿ ಇನ್ನಷ್ಟೇ ಘೋಷಿಸಬೇಕಿದೆ. ತನ್ನ 50 ಪುಟಗಳ ಪ್ರಣಾಳಿಕೆಯಲ್ಲಿ ಪರಿಸರ, ನೆಲ-ಜಲದ ಕುರಿತು ಹೇಳಿದ್ದೆಷ್ಟು? ಗಣಿಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿ ರಾಷ್ಟ್ರೀಯ ಪಾರಿಸಾರಿಕ ಅಭಿವೃದ್ಧಿ ಮತ್ತು ನಿರ್ವಹಣಾ ಮಂಡಳಿ (ಎನ್ಇಎಎಂಎ) ರಚನೆ, ನವೀಕರಿಸಬಹುದಾದ ಇಂಧನ ಬಳಕೆ ಉತ್ತೇಜನ, ಜಲಸಂರಕ್ಷಣೆಗೆ ಉತ್ತೇಜನ- ಇವಿಷ್ಟೇ ಆಶ್ವಾಸನೆಗಳು! ಹಾಗೆ ನೋಡಿದರೆ ಈ ಸಲ ಎಷ್ಟೋ ಪರವಾಗಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷ ಘೋಷಿಸಿದ್ದು 2500 ಕಿ.ಮೀ ಹರಿವಿನ ವ್ಯಾಪ್ತಿಯಲ್ಲಿ ಗಂಗಾ ಉಳಿವಿಗಾಗಿ ರಾಷ್ಟ್ರೀಯ ನದಿ ಕಣಿವೆ ಪ್ರಾಧಿಕಾರ ರಚನೆ. ಅಧಿಕಾರ ಪಡೆದ ನಂತರ ಪ್ರಾಧಿಕಾರ ರಚನೆಯೂ ಆಯಿತು ಖರೆ, ಆದರೆ ತನ್ನ ಕಾರ್ಯನಿರ್ವಹಣೆಯಲ್ಲಿ ಅದು ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ? ಉತ್ತರಾಖಂಡ ದುರಂತದ ಬಳಿಕವೂ ಗಂಗಾ ಕೊಳ್ಳದಲ್ಲಿ ಜಲವಿದ್ಯುತ್ ಯೋಜನೆಗಳ ಕುರಿತು ಕಾಂಗ್ರೆಸ್ನ ದ್ವಂದ್ವ ನಿಲುವು... ಇವೆಲ್ಲ ಬೇರೆ ಮಾತು ಬಿಡಿ.
ಹಾಗೆ ನೋಡಿದರೆ ಬಿಜೆಪಿ 2009ರ ಪ್ರಣಾಳಿಕೆಯಲ್ಲಿ ದೇಶವನ್ನು ಕಾಡುತ್ತಿರುವ ಕೆಲವು ಪ್ರಮುಖ ಪಾರಿಸಾರಿಕ ವಿಚಾರಗಳನ್ನು ಪ್ರಸ್ತಾಪಿಸಿತ್ತು. ಜಾಗತಿಕ ತಾಪಮಾನ ಹೆಚ್ಚಳ ಮತ್ತು ಹವಾಮಾನ ಬದಲಾವಣೆ ತಡೆಯಲು ಮಾಲಿನ್ಯರಹಿತ ತಾಂತ್ರಿಕತೆಗೆ ಉತ್ತೇಜನ, ಹಿಮಾಲಯದ ತಪ್ಪಲಿನಲ್ಲಿನ ನದಿಗಳು ಹಿಮ ಪ್ರವಾಹಕ್ಕೆ ತುತ್ತಾಗುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳು, ಅರಣ್ಯೀಕರಣ ಮತ್ತು ಹಸಿರೀಕರಣಕ್ಕೆ ಒತ್ತು, ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿ ಸಂತತಿ ಉಳಿವಿಗೆ ಕ್ರಮ, ವನ್ಯಜೀವಿ ಸಂರಕ್ಷಣೆ, ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ಇವು ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಾಗಿದ್ದವು. ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಆದರೆ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಪಾರಿಸಾರಿಕ ವಿಷಯಗಳ ಕುರಿತು ಹೋರಾಟ ನಡೆಸುವ ಅವಕಾಶಗಳಂತೂ ಇದ್ದವು. ಪಕ್ಷ ಅದನ್ನು ಎಷ್ಟರಮಟ್ಟಿಗೆ ಬಳಸಿಕೊಂಡಿತು?
ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಒಂದಷ್ಟು ಘೋಷಣೆಗಳನ್ನು ಮಾಡಿಬಿಟ್ಟರೆ ಸಾಕೆ? ಪರಿಸರವನ್ನು ನೋಡುವ ದೃಷ್ಟಿಕೋನದ ವ್ಯಾಪ್ತಿ ಇಷ್ಟಕ್ಕೇ ಸೀಮಿತವೇ? ಬೆಳವಣಿಗೆ ಹಾಗೂ ಆರ್ಥಿಕ ಬದಲಾವಣೆಯ ಜತೆ ಸಮೀಕರಿಸದೇ ಬರೀ ಜನಪ್ರಿಯತೆಯ ಹಂತದಲ್ಲೇ ಪರಿಸರದ ವಿಷಯಗಳನ್ನು ಮೊಟಕುಗೊಳಿಸಿದರೆ ಏನಾದೀತು? ಯಾಕೆಂದರೆ, ಪರಿಸರದ ಬಗ್ಗೆ ಮಾತಾಡುತ್ತಿರುವ ಪಕ್ಷಗಳೆಲ್ಲ ಅದಕ್ಕೂ ದೊಡ್ಡ ಧ್ವನಿಯಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿವೆ. ಇಲ್ಲಿಯೇ ಸಮಸ್ಯೆ ಎದುರಾಗುತ್ತದೆ. ಪರಿಸರದ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬೆಳವಣಿಗೆ ಸಾಧಿಸುವುದೇ ನಿಜವಾದ ಸವಾಲು.
ಯುರೋಪ್ನಲ್ಲೂ ಮುಖ್ಯವಾಹಿನಿಯಲ್ಲಿರುವ ರಾಜಕೀಯ ಪಕ್ಷಗಳೆಲ್ಲ ಚುನಾವಣೆಯಂಥ ಸಂದರ್ಭದಲ್ಲಿ ಪರಿಸರ ವಿಷಯವನ್ನು ಬಲವಾಗಿ ಪ್ರತಿಪಾದಿಸುತ್ತವೆ. ಕಡಿಮೆ ಕಾರ್ಬನ್ ತಂತ್ರಜ್ಞಾನದ ಕುರಿತಾಗಿ ಹಾಗೂ ವಾತಾವರಣದ ಏರುಪೇರನ್ನು ತಡೆಯುವ ಘೋಷಣೆಗಳಿಗೆ ಅಲ್ಲೂ ಬರವಿಲ್ಲ. ಭಾರತದಲ್ಲಿ ಪರಿಸರ ಎಂಬುದು ಚುನಾವಣೆಯ ಮುಖ್ಯ ವಿಷಯವಾಗಿಲ್ಲ. ಆದರೆ, ಐರೋಪ್ಯ ರಾಷ್ಟ್ರಗಳಲ್ಲಿ ಇದು ಹತ್ತರಲ್ಲಿ ಹನ್ನೊಂದನೇ ಅಂಶವಲ್ಲ. ಹಾಗಿದ್ದಾಗಿಯೂ ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಪರಿಸರದ ಭರವಸೆಗಳನ್ನು ಈಡೇರಿಸಲು ಅಲ್ಲಿನ ಪಕ್ಷಗಳು ಸೋಲುತ್ತಿವೆ. ಬೃಹತ್ ಕೈಗಾರಿಕೆಗಳಿಗೆ ಹೊಗೆಯುಗುಳುವಿಕೆ ಪರವಾನಗಿಯನ್ನು ಎಗ್ಗಿಲ್ಲದೇ ನೀಡುತ್ತಿರುವ ಜರ್ಮನಿ ಸರಕಾರ, ಪರಿಸರ ಉಳಿಸುವ ಭರವಸೆಗಳಿಂದ ಹಿಂದೆ ಸರಿದಿದೆ. ಕಾರು ಹಾಗೂ ಹೊಸ ವಾಹನಗಳನ್ನು ಕೊಳ್ಳುವವರಿಗೆ ಸಬ್ಸಿಡಿ ನೀಡುವುದರಲ್ಲೂ ಸರಕಾರ ಹಿಂದೆ ಬಿದ್ದಿಲ್ಲ.
ಆಸ್ಟ್ರೇಲಿಯದಲ್ಲೂ ಇದೇ ಕತೆ. ಜಾನ್ ಹೋವರ್ಡ್ ಸರಕಾರದ ಪರಿಸರ ವಿರೋಧಿ ನೀತಿಗಳನ್ನು ವಿರೋಧಿಸುತ್ತಲೇ ಅಧಿಕಾರಕ್ಕೆ ಬಂದಿತ್ತು ಅಲ್ಲಿನ ಲೇಬರ್ ಪಾರ್ಟಿ. ಆದರೆ, ಪರಿಸರದ ಬಗ್ಗೆ ಸರಕಾರ ತಾಳಿರುವ ನಿರ್ಲಕ್ಷ್ಯ, ಹಿಂದಿನ ಸರಕಾರವೇ ಪರವಾಗಿಲ್ಲ ಎಂಬಂತಿದೆ.
ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಹಸಿರು ಭರವಸೆ ನೀಡುತ್ತಿರುವ ಪಕ್ಷಗಳ ಹಕೀಕತ್ ಏನು? ವಾಸ್ತವಾಂಶ ಏನೆಂದರೆ, ನಮ್ಮ ದೇಶದ ಬಹುಪಾಲು ಜನಸಂಖ್ಯೆ ಪರಿಸರವನ್ನೇ ಅವಲಂಬಿಸಿ ಜೀವನ ರೂಪಿಸಿಕೊಂಡಿದೆ. ಅದು ಭೂಮಿ ಇರಬಹುದು, ನೀರು ಹಾಗೂ ಅರಣ್ಯವಿರಬಹುದು. ಹಾಗಾಗಿ, ಇವರು ಅವಲಂಬಿಸಿರುವ ನೈಸರ್ಗಿಕ ಸಂಪನ್ಮೂಲದ ಉತ್ಪಾದಕತೆ ಹೆಚ್ಚಿಸುವುದೇ ನಿಜವಾದ ಪರಿಸರದ ಇಶ್ಯೂ ಆಗಬೇಕು. ಇದರಿಂದ ಸ್ಥಳೀಯರು ನೈಸರ್ಗಿಕ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುವ ಅರ್ಥವ್ಯವಸ್ಥೆಯನ್ನು ಬಲಪಡಿಸಿಕೊಂಡು ತಮ್ಮ ಜೀವನ ಸದೃಢಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಪರಿಸರದ ಮೇಲೆ ಸರಕಾರ ಹಾಕುವ ಬಂಡವಾಳದಿಂದ ಸ್ಥಳೀಯರ ಬದುಕು ಹಸನಾಗುವಂತಿರಬೇಕು.
ಕುಡಿಯುವ ಜೀವಜಲಕ್ಕೆ ಜನರು ಅವಲಂಬಿಸಿರುವ ನದಿಗಳು ಮಲಿನವಾಗಕೂಡದು. ಅಭಿವೃದ್ಧಿ ಯೋಜನೆಗಳ ಗತಿ ಬದಲಾಗಬೇಕು. ಏಕೆಂದರೆ, ಜನರ ವಾಸಸ್ಥಾನವನ್ನೇ ಅವು ನುಂಗುತ್ತ ಬದುಕು ಕಸಿಯುತ್ತಿವೆ. ಎಲ್ಲರಿಗೂ ಬಳಕೆಗೆ ಸಿಗುವ ರೀತಿಯಲ್ಲಿ ಜಲ ಸಂಪನ್ಮೂಲದ ವಿಕೇಂದ್ರೀಕರಣವಾಗಬೇಕು. ಮೇಲ್ನೋಟಕ್ಕೆ ಮಧ್ಯಮ ವರ್ಗ ತಲೆದೂಗುವ ರೀತಿಯಲ್ಲಿ ಒಂದಿಷ್ಟು ಪರಿಸರದ ವಿಷಯಗಳನ್ನು ಪ್ರಸ್ತಾಪಿಸುವುದು ದೊಡ್ಡ ವಿಷಯವಲ್ಲ. ಆದರೆ ಹಾಗೆ ಕೈಗೆತ್ತಿಕೊಂಡ ವಿಷಯದ ಆಳವೆಷ್ಟು? ಸ್ಥಳೀಯರಿಗೆ ಅಲ್ಲಿನ ಸಂಪನ್ಮೂಲಗಳ ಮೇಲೆ ಹಕ್ಕು ಸಿಗುವಂತೆ ವ್ಯವಸ್ಥೆ ಬಲವಾಗಬೇಕಿದೆ.
'ಕಾಡು' ಎಂಬುದು ಶುಷ್ಕ ಪದವಲ್ಲ. ಕೇವಲ ಮರ ಸಮೂಹವೂ ಅಲ್ಲ, ಅದರ ವೈವಿಧ್ಯವನ್ನು ಅಲ್ಲಿನ ಬದಲಾವಣೆಗಳನ್ನು ನೋಡಿ ಆಶ್ಚರ್ಯಪಡುತ್ತಲೇ ಇದ್ದುಬಿಡಬಹುದು. ಆದರೆ ಇಂದಿನ ಪರಿಸ್ಥಿತಿ ಏನಾಗಿದೆ ಎಂದರೆ ಮಿಲಿಯಾಂತರ ವರ್ಷಗಳಿಂದ ಒಂದು ಕ್ರಮದಲ್ಲಿ ವಿಕಾಸವಾಗುತ್ತ ಬಂದಿರುವ ಕಾಡು ಮತ್ತು ಕಾಡು ಪ್ರಾಣಿಗಳನ್ನು ಇಂದು ಮಾನವ ತನ್ನ ಮೂರ್ಖತನ ಹಾಗೂ ಸ್ವಾರ್ಥದಿಂದ ನಾಶಪಡಿಸಿದರೆ ಮುಂದೇನಾಗುವುದೆನ್ನುವುದನ್ನು ಹೇಳಲೂ ವಿಜ್ಞಾನ ಅಸಮರ್ಥವಾಗಿದೆ.
ಹೀಗೆ ಹೇಳಿದರೆ ಅದು ಕೇವಲ ಪದಾಡಂಬರವಾಗಿಬಿಡಬಹುದು. ವಾಸ್ತವ ಏನೆಂದರೆ ಭೂಮಿ ಹುಟ್ಟಿದಾಗಿನಿಂದ 1917ರವರೆಗೆ ಯಾವ ಪ್ರಮಾಣದ ಕಾಡು ನಾಶವಾಗಿತ್ತೋ ಅದರ ಎರಡು ಪಟ್ಟು ಕಾಡು ನಂತರದ 50 ವರ್ಷಗಳಲ್ಲಿ ನಾಶವಾಗಿದೆ ಎನ್ನುತ್ತದೆ ಅಂಕಿಅಂಶ. ಇದೇ ಪ್ರಮಾಣದಲ್ಲಿ ಅಥವಾ ಅದಕ್ಕೂ ವೇಗವಾಗಿ ಕಾಡು ನಂತರದ ದಶಕದಲ್ಲಿ ನಾಶವಾಗಿದೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ. ಒಂದೇ ಒಂದು ಮರವನ್ನು ಕಡಿಯುವುದರಿಂದ ನಾವು 37 ಲಕ್ಷ ರುಪಾಯಿ ಮೌಲ್ಯದ ಪ್ರಯೋಜನವನ್ನು ಕಳೆದುಕೊಳ್ಳುತ್ತೇವೆ. ಅಂಥದ್ದರಲ್ಲಿ ಈ ಪ್ರಮಾಣದ ಕಾಡು ನಾಶವಾಗಿರುವುದರಿಂದ ಎಷ್ಟು ನಷ್ಟ ರಾಜ್ಯಕ್ಕಾಗಿದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ.
ಇದು ಅರಣ್ಯದ ವಿಚಾರವಾದರೆ ಇನ್ನು ಕೃಷಿಯದ್ದು ಇದಕ್ಕಿಂತ ಹೀನಾಯ ಸ್ಥಿತಿ. ಏಕೆಂದರೆ ಅರಣ್ಯ ಇಲ್ಲದೇ ಕೃಷಿ ಇಲ್ಲ. ಪ್ರತಿ ಸರಕಾರಗಳೂ ಕೃಷಿ, ಕೃಷಿಕನ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಲೇ, ಭರವಸೆಗಳ ಸರಮಾಲೆಯನ್ನು ಹರಿಯಬಿಡುತ್ತಲೇ ಕೈಗಾರಿಕೆಗಳನ್ನು ಪೋಷಿಸುತ್ತಿವೆ. ಅದೇ ಅಭಿವೃದ್ಧಿಯ ಮಾನದಂಡವೆಂಬಂತೆ ಬಿಂಬಿಸುತ್ತಿವೆ. ಇದಕ್ಕೆ ಸಾಕಷ್ಟು ಜ್ವಲಂತ ಉದಾಹರಣೆಗಳು ನಮ್ಮ ಮುಂದಿವೆ.
ಹಸಿರು ಕ್ರಾಂತಿಯ ಹೆಸರಿನಲ್ಲಿ ನಾವು ಮಾಡಿದ್ದು ಇದನ್ನೇ ಅಲ್ಲವೇ? ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಭರದಲ್ಲಿ ರಾಸಾಯನಿಕ ಕಂಪನಿಗಳಿಗೆ ಯಥೇಚ್ಛ ಮಣೆ ಹಾಕಿ ನಮ್ಮ ನೆಲವನ್ನು ಬಂಜರುಗೊಳಿಸಿದ್ದು ಇತಿಹಾಸ. ಶೇ. 80ರವರೆಗೆ ದೊರಕುವ ಸಬ್ಸಿಡಿಯಿಂದ ನಿಜವಾಗಿ ಅಭಿವೃದ್ಧಿ ಹೊಂದಿದ್ದು ಕಾರ್ಖಾನೆಗಳೇ ವಿನಾ ರೈತರಲ್ಲ. ಅಥವಾ ಅವರ ನೆಲವಲ್ಲ. ರಾಸಾಯನಿಕ ಗೊಬ್ಬರ ತಯಾರಿಕಾ ಕಾರ್ಖಾನೆಗಳಿಗೆ ಸಹಾಯಧನ ಕೊಡುವ ಸರಕಾರಗಳು ಹೇಳಿಕೊಳ್ಳುವುದು ಮಾತ್ರ ರೈತರಿಗಾಗಿ ಈ ಸಹಾಯ ಕೊಡುತ್ತಿರುವುದಾಗಿ! ಅಸಲೀ ಸಂಗತಿಯೆಂದರೆ ಇದರಿಂದ ರಾಸಾಯನಿಕ ಗೊಬ್ಬರವನ್ನು ಬಳಸುವ ಶ್ರೀಮಂತ ರೈತರಿಗೆ ಮಾತ್ರ ಸಹಾಯವಾಗುತ್ತಿದೆ. ಅದು ಬಿಟ್ಟರೆ ಕಂಪನಿಗಳು ಬೆಳೆಯುತ್ತಿವೆ ಎಂಬುದಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರ್ಖಾನೆಗಳ ಸಂಖ್ಯೆಯೇ ಸಾಕ್ಷಿ. ಒಂದೊಮ್ಮೆ ಸಣ್ಣ ರೈತರು ಅದರಿಂದ ಪ್ರಯೋಜನವನ್ನು ಪಡೆದುಕೊಂಡಿದ್ದರೂ ಅದು ತಾತ್ಕಾಲಿಕ. ದೀರ್ಘಾವಧಿಯ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ ಅವರ ಅಲ್ಪಸ್ವಲ್ಪ ಭೂಮಿಯನ್ನೂ ಬಂಜರಾಗಿಸಿ, ಇಡೀ ಬದುಕನ್ನೇ ಬರಡಾಗಿಸುತ್ತಿದೆ.
ಕನಿಷ್ಠ ನಾಲ್ಕು ವರ್ಷದ ಹಿಂದಿನ ಲೆಕ್ಕಾಚಾರಕ್ಕೆ ಹೋದರೆ ನಮ್ಮ ಸರಕಾರ ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ರೂಪದಲ್ಲಿ 71,431 ಕೋಟಿ ವ್ಯಯಿಸಿದೆ. ದೇಶದ ರೈತರ ಸಂಖ್ಯೆ 66 ಕೋಟಿ. ಇದನ್ನೇ ನೇರವಾಗಿ ಹಂಚಿದ್ದರೆ ಪ್ರತಿಯೊಬ್ಬರಿಗೆ 1082 ರೂಪಾಯಿ ಸಿಗುತ್ತಿತ್ತು. ಕೃಷಿ ಇಲಾಖೆ ಕೇವಲ ಅಂಕಿ ಅಂಶಗಳ ದಾಖಲಾತಿಯಲ್ಲಿ ತೊಡಗಿದೆಯೇ ವಿನಾ ಅಧಿಕಾರಿಗಳಿಗಾಗಲೀ, ಸರಕಾರಕ್ಕಾಗಲೀ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಇಲ್ಲ. ಅವರದ್ದೇನಿದ್ದರೂ ಸಬ್ಸಿಡಿ, ಸಾಲ ಮನ್ನಾ, ಕಡಿಮೆ ಬಡ್ಡಿ ದರದ ಸಾಲದಂಥ ಜನಪ್ರಿಯ ಯೋಜನೆಗಳೇ. ಇದು ನಾವಂದುಕೊಂಡಂತೆ ರೈತರನ್ನು ನಿಜವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆಯೇ ಎಂಬುದಕ್ಕೆ ರಾಜಕೀಯ ಪಕ್ಷಗಳೇ ಉತ್ತರಿಸಬೇಕು. ಏಕೆಂದರೆ ಇಷ್ಟೆಲ್ಲ ಯೋಜನೆಗಳ ನಂತರವೂ ಮತ್ತೆ ಚುನಾವಣೆಯ ಪ್ರಣಾಳಿಕೆ ಕಳೆದ ಅರವತ್ತು ವರ್ಷಗಳಲ್ಲಿಯಂತೇ 'ರೈತರ ಅಭಿವೃದ್ಧಿ' ಎಂಬುದೇ ಅಗುತ್ತಿದೆ.
ಕೃಷಿಯಾಧಾರಿತ ಉದ್ದಿಮೆಗಳ ಬೆಳವಣಿಗೆಯಾಗಲೀ, ಸಾವಯವದ ಪ್ರೋತ್ಸಾಹವಾಗಲೀ, ರೈತರಿಗೆ ಸೂಕ್ತ ಕೃಷಿ ಮಾರುಕಟ್ಟೆ ಕಲ್ಪಿಸುವುದಾಗಲೀ, ಆತನನ್ನು ಸಾಲ ಮುಕ್ತಗೊಳಿಸಿ ಸ್ವಾವಲಂಬಿಯನ್ನಾಗಿಸುವುದಾಗಲೀ... ನೈಜ ಅರ್ಥದಲ್ಲಿ ಅನುಷ್ಠಾನಗೊಳ್ಳುವುದೇ ಇಲ್ಲ. ಇವೆಲ್ಲ ರಾಜಕೀಯ ಪ್ರಣಾಳಿಕೆಗೆ ಭೂಷಣಪ್ರಾಯ ಪದಪುಂಜಗಳಾಗಿಯಷ್ಟೇ ಉಳಿಯುತ್ತಿವೆ. ಗುಣಮಟ್ಟದ ವಿದ್ಯುತ್ ನೀಡಿ, ರೈತರ ಕೃಷಿಗೆ ಸೂಕ್ತ ನೀರಾವರಿಗೆ ನೆರವಾಗುವ ಬದಲು ನಮ್ಮ ಸರಕಾರಗಳ ಗಮನ ಉಚಿತ ವಿದ್ಯುತ್ನ ಘೋಷಣೆಯತ್ತಲೇ. ಸೂಕ್ತ ನೀರಾವರಿ, ಮಳೆ ನೀರಿನ ಸದ್ಬಳಕೆಯನ್ನು ಬಿಟ್ಟು ನಾವು ಯೋಜಿಸುವುದು ಅರಣ್ಯ, ಪರಿಸರಗಳನ್ನು ನುಂಗಿ ಹಾಕುವ ಬೃಹತ್ ನೀರಾವರಿ ಯೋಜನೆಗಳನ್ನೇ. ವೈವಿಧ್ಯದ ಆಗರವಾದ ಸೊಪ್ಪಿನ ಬೆಟ್ಟವನ್ನು ಸಂರಕ್ಷಿಸುವ ಬದಲಿಗೆ ನಾವು ಬೆಳೆಸಲು ಮುಂದಾಗುವುದು ಶಾಲಾ ಮಕ್ಕಳ ಯೂನಿಫಾರ್ಮ್ ಅನ್ನೂ ನಾಚಿಸುವ ಏಕಜಾತಿಯ ಸಸ್ಯಗಳ ನೆಡುತೋಪುಗಳನ್ನೇ. ನೆಲ-ಜಲ ಸಂರಕ್ಷಣೆಯಲ್ಲಿ ರೈತರನ್ನು ತೊಡಗಿಸಿಕೊಂಡು ಅವರಿಗೇ ಅದರ ಲಾಭಾಂಶ ದೊರೆಯುವಂತೆ ಮಾಡುವ ಬದಲು ವಿಶ್ವಬ್ಯಾಂಕ್ ನೆರವಿನಲ್ಲಿ ನಮ್ಮ ಸರಕಾರಗಳು ಪೋಷಿಸುತ್ತಿರುವುದು ಎನ್ಜಿಒಗಳನ್ನು. ನಮ್ಮ ಆಸಕ್ತಿ ಹೊಸಹೊಸ ಇಲಾಖೆಗಳನ್ನು ಸೃಷ್ಟಿಸುವ ಮೂಲಕ ರಾಜಕೀಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದರಲ್ಲೇ ವಿನಾ ಪರಸ್ಪರ ಪೂರಕ ಇಲಾಖೆಗಳನ್ನು ಬೆಸೆದು ಶೀಘ್ರ ಕಾರ್ಯಾನುಷ್ಠಾನದತ್ತ ಅಲ್ಲವೇ ಇಲ್ಲ.
ಸರಕಾರಗಳು ಬದಲಾಗುತ್ತವೆ. ಪರಿಸ್ಥಿತಿ ಮಾತ್ರ ಹಾಗೆಯೇ ಮುಂದುವರಿಯುತ್ತದೆ. ಇದೇ ಪ್ರಜಾಪ್ರಭುತ್ವಕ್ಕಿರುವ ಅರ್ಥವೇ?
-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in