ಅಂಕಣಗಳು

ಅಬ್‌ಕಿ ಬಾರ್, ಟ್ವಿಟರ್ ಸರ್ಕಾರ್!

ಐದಾರು ವರ್ಷಗಳ ಹಿಂದಿನತನಕವೂ ರಾಜಕಾರಣಿಗಳಿಗೆ, ಗಣ್ಯರಿಗೆ, ತಮ್ಮ ಮನದ...

ಐದಾರು ವರ್ಷಗಳ ಹಿಂದಿನತನಕವೂ ರಾಜಕಾರಣಿಗಳಿಗೆ, ಗಣ್ಯರಿಗೆ, ತಮ್ಮ ಮನದ ಮಾತನ್ನು ಹೇಳಬೇಕೆನಿಸಿದಾಗ ಪತ್ರಿಕಾಗೋಷ್ಠಿ ಕರೆಯಬೇಕಿತ್ತು. ಆದರೆ ಈಗ ಹೇಳಬೇಕಾದುದನ್ನು ಚುಟುಕಾಗಿ ಟ್ವೀಟ್ ಮಾಡಿದರೆ, ಕ್ಷಣಾರ್ಧದಲ್ಲಿ ಅದು ಜಗತ್ತಿನಾದ್ಯಂತ ಪಸರಿಸಿ ಸುದ್ದಿಯೋ, ವಿವಾದವೋ ಆಗಿ ತಕ್ಷಣ ಪ್ರತಿಕ್ರಿಯೆಯೂ ಸಿಗುತ್ತದೆ.
ಹಿಂದಿನ ಲೋಕಸಭಾ ಚುನಾವಣೆ ಟಿವಿ ಸ್ಟೂಡಿಯೋಗಳಲ್ಲಿ ನಡೆದಿತ್ತು. ಆದರೆ ಈ ಬಾರಿಯ ಚುನಾವಣೆ ನಡೆದಿದ್ದು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ವಿಶೇಷವಾಗಿ ಟ್ವಿಟರ್‌ನಲ್ಲಿ. ಹಾಗೆಂದ ಮಾತ್ರಕ್ಕೆ ಚುನಾವಣಾ ರ್ಯಾಲಿ, ರೋಡ್‌ಷೋ, ಮನೆಮನೆ ಪ್ರಚಾರ, ಪತ್ರಿಕಾ ಹಾಗೂ ಟಿವಿ ಸಂದರ್ಶನ, ಚುನಾವಣಾ ಭಾಷಣ ಇತ್ಯಾದಿಗಳು ನಡೆಯಲಿಲ್ಲವೆಂದಾಗಲಿ, ಅವು ಪರಿಣಾಮಕಾರಿಯಾಗಿರಲಿಲ್ಲವೆಂದಾಗಲಿ ಅರ್ಥವಲ್ಲ. ಇವೆಲ್ಲ ಇದ್ದವು. ಆದರೆ ಈ ಸಲ ಟ್ವಿಟರ್ ಚುನಾವಣೆಗೆ ಕ್ರಿಯಾವರ್ಧಕವಾಗಿತ್ತು. ಎಲ್ಲೆಲ್ಲಿ ಚುನಾವಣೆ ಕಿಡಿ ಹೊತ್ತಿತೋ, ವಿವಾದಗಳು ಹುಟ್ಟಿಕೊಂಡವೋ, ಅವುಗಳ ಮೂಲವನ್ನು ಹುಡುಕಿಕೊಂಡು ಹೊರಟರೆ ಅವು ಟ್ವಿಟರ್ ಎಂಬ ಹಕ್ಕಿಗೂಡಿನ ಬಾಗಿಲ ಕದ ತಟ್ಟುತ್ತದೆ. ಈ ಸಲ ಚುನಾವಣಾ ಪರದೆಯ ಮೇಲಿರುವ ನಾಯಕರನ್ನು ಗಮನಿಸಿ, ಅವರೆಲ್ಲ ಟ್ವಿಟರ್‌ನಲ್ಲಿ ಕ್ರಿಯಾಶೀಲರಾದವರೇ. ತಮ್ಮ ಅನಿಸಿಕೆಗಳನ್ನೆಲ್ಲ ಟ್ವಿಟರ್‌ನಲ್ಲಿ ಹರಿಯಬಿಟ್ಟವರೇ. ಹಾಗೆ ನೋಡಿದರೆ, ಎಲ್ಲ ಪಕ್ಷಗಳ ಪ್ರಮುಖ ನಾಯಕರು ತಮ್ಮ ಮನಸ್ಸಿನ ಮಾತನ್ನು ಹೇಳಲು, ವಿವಾದ ಸೃಷ್ಟಿಸಲು, ಜನರ ಮೂಡನ್ನು ಅರಿಯಲು, ಗಾಳಿ ತಮ್ಮ ಕಡೆ ಬೀಸುವಂತೆ ಮಾಡಲು ಬಳಸಿಕೊಂಡಿದ್ದು ಟ್ವಿಟರ್‌ನ್ನು. ಈ ನೂರಾನಲವತ್ತು ಅಕ್ಷರಗಳ ಸಂದೇಶ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಉಳಿದೆಲ್ಲ ಮಾತು, ಮಾರ್ಗಗಳಿಗಿಂತ ಇದೇ ಹೆಚ್ಚು ಸುದ್ದಿ ಮಾಡಿತು.
ಟ್ವಿಟರ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆಂಬ ಟೀಕೆಗೆ ಒಳಗಾಗಿದ್ದಾಗ ಅಂದಿನ ಮಂತ್ರಿಯಾಗಿದ್ದ ಶಶಿ ತರೂರ್ ಒಂದು ಮಾತನ್ನು ಹೇಳಿದ್ದರು-'ನೋಡ್ತಾ ಇರಿ, ಒಂದು ಕಾಲ ಬರುತ್ತದೆ. ಭಾರತದ ರಾಜಕಾರಣಿಗಳು ಟ್ವಿಟರ್ ಮೂಲಕ ಮತದಾರರ ಜತೆ ಸಂಪರ್ಕ ಬೆಳೆಸುತ್ತಾರೆ. ಆ ಮೂಲಕ ಮತದಾರರನ್ನು ತಲುಪುತ್ತಾರೆ. ಅದು ಸುಲಭ ಹಾಗೂ ವ್ಯಾವಹಾರಿಕವಾಗಿ ಪರಿಣಾಮಕಾರಿಯೂ ಹೌದು. ಆ ಕಾಲ ಬಹುಬೇಗ ಬರುತ್ತದೆ.' ಆದರೆ ಈ ಲೋಕಸಭಾ ಚುನಾವಣೆ ಅದಕ್ಕೆ ಸಾಕ್ಷಿಯಾಗಬಹುದೆಂದು ಹೆಚ್ಚಿನವರು ನಿರೀಕ್ಷಿಸಿರಲಿಲ್ಲ. ಇಂದು ಟ್ವಿಟರ್ ಹೇಗೆ ಕೆಲಸ ಮಾಡುತ್ತದೆಂದು ಗೊತ್ತಿಲ್ಲದವರು, ಟ್ವಿಟರ್ ಅಕೌಂಟ್ ಇಲ್ಲದವರು, ಟ್ವೀಟ್ ಮಾಡದವರು ಸಹ ಅದರ ಹೆಸರನ್ನು ಕೇಳಿದ್ದಾರೆ. ಇಂಗ್ಲಿಷ್ ಪತ್ರಿಕೆಗಳಲ್ಲದೇ, ಭಾಷಾ ಪತ್ರಿಕೆಗಳೂ ಇಂದು ಟ್ವಿಟರ್ ಕಾರ್ನರ್‌ಗೆ ಜಾಗವನ್ನು ಮೀಸಲಿಟ್ಟಿವೆ. ಇಂದು ಬಹುತೇಕ ಟಿವಿ ನ್ಯೂಸ್ ಚಾನೆಲ್‌ಗಳಿಗೆ 'ಲೀಡ್‌' ಸಿಗುವುದೇ ಟ್ವಿಟರ್ ಮೂಲಕ. ಬ್ರೇಕಿಂಗ್ ನ್ಯೂಸ್‌ಗೆ ಟ್ವಿಟರ್ ಆಧಾರಸೆಲೆ.
ಐದಾರು ವರ್ಷಗಳ ಹಿಂದಿನತನಕವೂ ರಾಜಕಾರಣಿಗಳಿಗೆ, ಗಣ್ಯರಿಗೆ, ತಮ್ಮ ಮನದ ಮಾತನ್ನು ಹೇಳಬೇಕೆನಿಸಿದಾಗ, ಪ್ರಮುಖ ವಿಷಯವನ್ನು ಘೋಷಿಸಬೇಕೆಂದಾಗ, ಪತ್ರಿಕಾಗೋಷ್ಠಿ ಕರೆಯಬೇಕಿತ್ತು. ಅದಕ್ಕೆ ಕೆಲವು ಗಂಟೆಗಳ ತಯಾರಿ ಬೇಕಾಗಿತ್ತು. ಆದರೆ ಈಗ ಹೇಳಬೇಕಾದುದನ್ನು ಚುಟುಕಾಗಿ ಟ್ವೀಟ್ ಮಾಡಿದರೆ, ಕ್ಷಣಾರ್ಧದಲ್ಲಿ ಅದು ಜಗತ್ತಿನಾದ್ಯಂತ ಪಸರಿಸಿ ಸುದ್ದಿಯೋ, ವಿವಾದವೋ ಆಗಿ ತಕ್ಷಣ ಪ್ರತಿಕ್ರಿಯೆಯೂ ಸಿಗುತ್ತದೆ.
ಈ ಕಾರಣದಿಂದ ಭಾರತದ ರಾಜಕಾರಣಿಗಳು ಈ ಸಲದ ಚುನಾವಣೆಯಲ್ಲಿ ನೆಚ್ಚಿಕೊಂಡಿದ್ದು ಟ್ವಿಟರ್‌ನ್ನು. ರಾಜಕೀಯ ನಾಯಕರ, ಪಕ್ಷಗಳ ಕೆಲವು ಮಹತ್ವದ ನಿರ್ಧಾರಗಳಿಗೆ ಸಾಮಾಜಿಕ ತಾಣಗಳಲ್ಲೊಂದಾದ ಟ್ವಿಟರ್ ಕಾರಣ. ಮಂಗಳೂರು ಪಬ್ ದಾಳಿ ಕುಖ್ಯಾತಿಯ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಬಿಜೆಪಿ ಸೇರಲು ನಿರ್ಧರಿಸಿದರು. ಬಿಜೆಪಿಯ ರಾಜ್ಯ ನಾಯಕರು ಅವರನ್ನು ಯಥೋಚಿತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಶುರುವಾಯಿತು ನೋಡಿ ಟ್ವೀಟ್‌ನಲ್ಲಿ ಕೋಡಿ. ಎರಡು ತಾಸಿನ ಅವಧಿಯಲ್ಲಿ, ಅಂದು ಭಾನುವಾರವಾಗಿದ್ದರೂ, ಎಪ್ಪತ್ತು ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಹರಿದಾಡಿ ಅದೇ 'ಟ್ರೆಂಡ್‌' ಆಯಿತು. ಬಹುತೇಕ ಮಂದಿ ಮುತಾಲಿಕ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಕ್ರಮವನ್ನು ಕಟುವಾಗಿ ಟೀಕಿಸಿದರು. ಬಿಜೆಪಿಯ ಕಟ್ಟಾ ಬೆಂಬಲಿಗರೂ ಈ ನಿರ್ಧಾರವನ್ನು ಉಗ್ರವಾಗಿ ಖಂಡಿಸಿದರು. ಟ್ವಿಟರ್‌ನಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿದ್ದರೆ, ಬಿಜೆಪಿಯ ರಾಷ್ಟ್ರೀಯ ನಾಯಕರು ಕಂಗಾಲಾಗಿ ಹೋಗಿದ್ದರು. ಅವರಿಗೆ ಬೇರೆ ಮಾರ್ಗವೇ ಇರಲಿಲ್ಲ. ತಕ್ಷಣ ಕ್ರಮಕೈಗೊಳ್ಳದಿದ್ದರೆ ಯಡವಟ್ಟಾಗುತ್ತದೆ ಹಾಗೂ ಅದೊಂದು ರಾಷ್ಟ್ರೀಯ ವಿವಾದಕ್ಕೆ ಕಾರಣವಾಗುತ್ತದೆಂಬುದು ಗೊತ್ತಾಗಿಹೋಯಿತು. ಯಾವ ಉತ್ಸಾಹದಲ್ಲಿ ಮುತಾಲಿಕ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡಿದ್ದರೋ, ಅದೇ ಉತ್ಸಾಹದಲ್ಲಿ ಅವರನ್ನು ಹೊರಹಾಕುವ ತೀರ್ಮಾನವನ್ನು ಪಕ್ಷದ ನಾಯಕರು ತೆಗೆದುಕೊಂಡರು. ಐದು ಗಂಟೆ ಅವಧಿಯಲ್ಲಿ ಮುತಾಲಿಕ್ ಬಂದಿದ್ದು, ಹೋಗಿದ್ದು ಎಲ್ಲಾ ಆಯಿತು. ಆಗಲೇ ಟ್ವಿಟರ್‌ಧಾರೆ ತಣ್ಣಗಾಗಿದ್ದು! ಇದು ಟ್ವಿಟರ್ ಗೆಲುವು!
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಟಿವಿ ನಿರೂಪಕಿ ಅಮೃತಾ ರಾಯ್ ಜತೆ ಅಫೇರ್ ಇಟ್ಟುಕೊಂಡಿದ್ದಾರೆಂದೂ, ಆ ಮೂಲಕ ಅಮೃತಾ ವೈವಾಹಿಕ ಜೀವನದಲ್ಲಿ ಬಿರುಕುಂಟು ಮಾಡಿದ್ದಾರೆಂದೂ ಯಾರೋ ಟ್ವೀಟ್ ಮಾಡಿದರು. ಕೆಲ ಹೊತ್ತಿನಲ್ಲಿ ಅವರಿಬ್ಬರೂ ಆಲಂಗಿಸಿಕೊಂಡಿರುವ, ಆಪ್ತವಾಗಿರುವ ಫೋಟೋಗಳು ಟ್ವಿಟರ್‌ನಲ್ಲಿ ಹರಿದಾಡಿದವು. ಕಾಂಗ್ರೆಸ್‌ನ 'ಮಹಿಳಾ ಸಬಲೀಕರಣ' ಅಂದ್ರೆ ಇದೇನಾ ಎಂದು ಸಾವಿರಾರು ಮಂದಿ ಟ್ವಿಟರ್‌ನಲ್ಲಿ ಕುಟುಕಿದರು. ಇದು ಕಾಳ್ಗಿಚ್ಚಿನಂತೆ ಹರಡಿ ಕೋಲಾಹಲವುಂಟು ಮಾಡಬಹುದೆಂದು ಅರಿತ ದಿಗ್ವಿಜಯ್ ಸಿಂಗ್, ಅಮೃತಾ ಜತೆಗಿನ ತಮ್ಮ ಸಂಬಂಧವನ್ನು ಒಪ್ಪಿಕೊಂಡು, ಆಕೆಗೆ ವಿಚ್ಛೇದನ ದೊರೆತ ಬಳಿಕ ಮದುವೆಯಾಗುವುದಾಗಿ ಟ್ವೀಟ್ ಮಾಡಿ ಬೀಸುವ ದೊಣ್ಣೆಗಳಿಂದ ತಪ್ಪಿಸಿಕೊಂಡು ಬಚಾವ್ ಆದರು.
ಈ ಸಲದ ಚುನಾವಣೆಯನ್ನು ಒಂದು ರೀತಿಯಲ್ಲಿ ಟ್ವಿಟರ್ ನಿರ್ದೇಶಿಸಿತು. ಆ ದಿನದ ಅಜೆಂಡಾ ಹೇಗಿರಬೇಕು, ಏನಿರಬೇಕು ಎಂಬುದನ್ನು ಅದು ಸೂಚಿಸಿತು. ಆ ದಿನದ ಟ್ರೆಂಡ್ ಯಾವುದೆಂದು ತಿಳಿಸುವ ಮೂಲಕ ರಾಜಕಾರಣಿಗಳಿಗೆ ಆ ದಿನದ ಮಹತ್ವದ ವಿದ್ಯಮಾನ, ತಮ್ಮ ಸ್ಥಾನಮಾನ ಹಾಗೂ ಪೈಪೋಟಿಯ ಮಾಪಕವನ್ನು ತಿಳಿಯಪಡಿಸಿತು. ಆರಂಭದಲ್ಲಿ ಆಮ್ ಆದ್ಮಿ ಪಾರ್ಟಿಯ ನಾಯಕರು ಹಾಗೂ ಕಾರ್ಯಕರ್ತರು ಟ್ವಿಟರನ್ನೇ ಬ್ಯಾಲೆಟ್ ಬಾಕ್ಸ್ ಎಂದು ಭಾವಿಸಿದಂತಿತ್ತು. ಅವರ ಪ್ರತಿ ನಡೆ-ನುಡಿಗೂ ಟ್ವಿಟರ್ ವೇದಿಕೆಯಾಯಿತು. ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳ ಮಹತ್ವದ ಹೆಜ್ಜೆಗಳೆಲ್ಲ ಟ್ವಿಟರ್‌ನಲ್ಲಿ ದಾಖಲಾದವು. ತಮ್ಮ ಟ್ವೀಟ್‌ಗೆ ಯಾವ ರೀತಿಯ ಪ್ರತಿಸ್ಪಂದನ ದೊರಕುತ್ತದೆಂಬುದನ್ನು ಆಧರಿಸಿ ಅವರು ಮುಂದಿನ ಕ್ರಮವನ್ನು ಕೈಗೊಳ್ಳುತ್ತಿದ್ದರು. ಬಿಜೆಪಿ ನಾಯಕರು ಇದನ್ನು ಪರಿಣಾಮಕಾರಿಯಾಗಿ ಅನುಸರಿಸಿದರು.
ಬಿಜೆಪಿಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಶಿವರಾಜ್‌ಸಿಂಗ್ ಚೌವಾಣ್, ಮನೋಹರ ಪರಿಕ್ಕರ್, ರಾಜನಾಥಸಿಂಗ್, ನಿತಿನ್ ಗಡ್ಕರಿ, ಅನಂತಕುಮಾರ್ ಸಹ ಟ್ವಿಟರ್‌ನ್ನು ಸಮರ್ಥವಾಗಿ ಬಳಸಿಕೊಂಡರು. ಜೀವನದಲ್ಲಿಯೇ ಕಂಪ್ಯೂಟರ್ ಮುಟ್ಟದ, ಪಾಸ್‌ವರ್ಡ್, ಲಾಗಿನ್ ಅಂದ್ರೆ ಏನೆಂದು ಗೊತ್ತಿಲ್ಲದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಈಶ್ವರಪ್ಪ, ಜಗದೀಶ ಶೆಟ್ಟರ್ ಅವರಂಥ ನಾಯಕರೂ ಅಕೌಂಟ್ ತೆರೆದಿದ್ದು ಟ್ವಿಟರ್‌ನ ಜನಪ್ರಿಯತೆಗೆ ಸಾಕ್ಷಿ.
ಭಾರತದಲ್ಲಿ ಟ್ವಿಟರ್‌ನ್ನು ಜನಪ್ರಿಯಗೊಳಿಸಿದ ಖ್ಯಾತಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಸಲ್ಲಬೇಕು. 2.1 ದಶಲಕ್ಷ ಮಂದಿ ಅವರನ್ನು ಹಿಂಬಾಲಿಸು (Follow) ತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ ಕೇರಳದ ತಿರುವನಂತಪುರದಿಂದ ಸ್ಪರ್ಧಿಸಿರುವ ತರೂರ್, ಒಂದರ್ಥದಲ್ಲಿ ಟ್ವಿಟರ್ ಕ್ಯಾಂಪೇನ್ ನಡೆಸಿದರು. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ತಮ್ಮ ಪ್ರಚಾರ ಕಾರ್ಯದ ವಿವರಗಳನ್ನೆಲ್ಲ ಟ್ವೀಟ್ ಮಾಡಿದರು.
ಆದರೆ ಈ ಸಲದ ಲೋಕಸಭಾ ಚುನಾವಣೆಗಿಂತ ಒಂದು ವರ್ಷ ಮೊದಲೇ ಟ್ವಿಟರ್‌ಗೆ ಸಿದ್ಧರಾದವರು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ. ಅವರು ಟ್ವಿಟರ್‌ನಲ್ಲಿ ಕ್ರಿಯಾಶೀಲರಾಗುತ್ತಿದ್ದಂತೆ ಅವರ ಅಭಿಮಾನಿಗಳ ಬಹುದೊಡ್ಡ ಪಡೆ ಹುಟ್ಟಿಕೊಂಡಿದ್ದು ಗಮನಾರ್ಹ. ಇಂದು ಭಾರತದಲ್ಲಿ ಟ್ವಿಟರ್‌ನಲ್ಲಿ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಹಿಂಬಾಲಕರನ್ನು (Followers)ಹೊಂದಿರುವವರೆಂದರೆ ಮೋದಿ. ಅವರಿಗೆ 3.8 ದಶಲಕ್ಷ ಹಿಂಬಾಲಕರಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಮೋದಿ ದಿನಕ್ಕೆ ನಾಲ್ಕೈದು ಸಾರ್ವಜನಿಕ ರ್ಯಾಲಿಗಳನ್ನುದ್ದೇಶಿಸಿ ಮಾತಾಡಿದರೆ, ತಮ್ಮ ಭಾಷಣದ ಮುಖ್ಯಾಂಶಗಳನ್ನೆಲ್ಲ ಟ್ವೀಟ್ ಮಾಡಿದರು. ಕೆಲವು ಮಹತ್ವದ ಘೋಷಣೆಗಳನ್ನು ಟ್ವೀಟ್ ಮೂಲಕ ಹೇಳಿದರು. ಟಿವಿ ನ್ಯೂಸ್ ಚಾನೆಲ್‌ಗಳು, ಮಾಧ್ಯಮ ಸಂಸ್ಥೆಗಳು ಮೋದಿಯವರ ಟ್ವೀಟ್‌ಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತುಕೊಂಡವು. ಒಂದಿಲ್ಲೊಂದು ರೀತಿಯಲ್ಲಿ ಮೋದಿ ವಾರದಲ್ಲಿ ಐದು ದಿನ 'ಟ್ವಿಟರ್ ಟ್ರೆಂಡ್‌'ನಲ್ಲಿ ಮೊದಲ ಸ್ಥಾನದಲ್ಲಿದ್ದರು. ಟೀಕೆ, ಪ್ರಶಂಸೆಗಳೆಲ್ಲ ಸೇರಿದರೆ ಟ್ವಿಟರ್ ಮೋದಿಮಯವಾಗಿತ್ತು. ಮೋದಿ ಅವರಿಗೆ ಸಂಬಂಧಿಸಿದಂತೆ (NamoforPM, ModiforPM, Iamfor Namo...) ಮೂರು ಸಾವಿರಕ್ಕೂ ಹೆಚ್ಚು ಅಕೌಂಟ್‌ಗಳಿರುವುದು ಮೋದಿ ಜನಪ್ರಿಯತೆಯೊಂದೇ ಅಲ್ಲ. ಟ್ವಿಟರ್ ಪಡೆದುಕೊಂಡ ಹೊಸ ಆಯಾಮ ಹಾಗೂ ಸಾಧ್ಯತೆಯ ಅನಾವರಣವೂ ಹೌದು.
2012ರಲ್ಲಿ ನಡೆದ ಅಮೆರಿಕದ ಅಧ್ಯಕ್ಷರ ಚುನಾವಣೆಯನ್ನು Twitter Election ಎಂದು ಕರೆಯುತ್ತಾರೆ. ಕಾರಣ ಅಧ್ಯಕ್ಷ ಚುನಾವಣೆಯ ಇಬ್ಬರು ಪ್ರತಿಸ್ಪರ್ಧಿಗಳಾದ ಬರಾಕ್ ಒಬಾಮ ಹಾಗೂ ಮಿಟ್ ರಾಮ್ನಿ ಮಾತಾಡಿದ್ದಕ್ಕಿಂತ ಟ್ವೀಟ್ ಮಾಡಿದ್ದೇ ಹೆಚ್ಚು. ಅವರ ಪ್ರತಿ ಹೇಳಿಕೆಯೂ ಟ್ವಿಟರ್‌ನಲ್ಲಿ ರಾಷ್ಟ್ರೀಯ ಸಂವಾದವನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. 2008ರ ಅಧ್ಯಕ್ಷೀಯ ಚುನಾವಣೆಯಲ್ಲಿ 3.60ಲಕ್ಷ ಟ್ವೀಟ್‌ಗಳು ಹರಿದಾಡಿದ್ದರೆ, 2012ರ ಚುನಾವಣೆಯಲ್ಲಿ 14 ದಶಲಕ್ಷ ಟ್ವೀಟ್‌ಗಳು ಹರಿದಾಡಿದವು. ಮಿಟ್‌ರಾಮ್ನಿ ಭಾಷಣದ ನಂತರ ಪ್ರತಿ ನಿಮಿಷಕ್ಕೆ 14 ಸಾವಿರ ಟ್ವೀಟ್‌ಗಳ ಧಾರೆಯಾಗಿದ್ದರೆ, ಒಬಾಮ ಅವರಿಗೆ 54 ಸಾವಿರ ಟ್ವೀಟ್‌ಗಳು ಬಂದಿದ್ದವು.
ಒಬಾಮ ಮಾತಿಗೆ ನಿಂತಾಗ ಸಮಯದ ಮಿತಿ ಬಗ್ಗೆ ನೆನಪಿಸಿದಾಗ I had five seconds left ಎಂಬ ಅವರ (ಒಬಾಮ) ಪ್ರತಿಕ್ರಿಯೆಗೆ ಒಂದು ನಿಮಿಷಕ್ಕೆ 1.53 ಲಕ್ಷ ಟ್ವೀಟ್ ಬಂದಿದ್ದವು. ಅಮೆರಿಕದ ಚುನಾವಣೆಯನ್ನು ಸಂಪೂರ್ಣವಾಗಿ ಟ್ವಿಟರ್ ನಿಯಂತ್ರಿಸಿತು ಹಾಗೂ ನಿರ್ದೇಶಿಸಿತು.
ಟ್ವಿಟರ್ ಸಾಮಾಜಿಕ ತಾಣದ ಮಾಧ್ಯಮ ವಿಜ್ಞಾನಿಯೆಂದೇ ಕರೆಯಿಸಿಕೊಳ್ಳುವ ಅಡಮ್ ಶಾರ್ಪ್ ಅವರ ಪ್ರಕಾರ, We have shifted from a 24 hours news cycle to a 140 character Twitter. ಭಾರತದಲ್ಲಿ ಇಂಟರ್‌ನೆಟ್ ಸೌಲಭ್ಯ ಹೊಂದಿರುವವರು ಶೇ. 18ರಷ್ಟು ಮಂದಿ ಮಾತ್ರ. ಆದರೂ ಈ ಬಾರಿ ಟ್ವಿಟರ್ ಮಾಡಿದ ಮೋಡಿಯನ್ನು ನೋಡಿದರೆ 'ಅಬ್ ಕಿ ಬಾರ್, ಟ್ವಿಟರ್ ಸರ್ಕಾರ್‌' ಎಂದು ಹೇಳಬಹುದು.


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!