ಅಮ್ಮನಿಗೆ ಪ್ರತಿದಿನವೂ ಡ್ಯೂಟಿ
ಇಂದು ತಾಯಂದಿರ ದಿನ. ಮಾರುಕಟ್ಟೆಗಳಲ್ಲಿ ಗ್ರೀಟಿಂಗ್ ಕಾರ್ಡುಗಳು, ಹೂಗುಚ್ಛಗಳು, ಉಡುಗೊರೆ ಇತ್ಯಾದಿಗಳ ಮೇಲೆ ಭಾರೀ ರಿಯಾಯಿತಿ. ಇಂಟರ್ನೆಟ್ ಹಾಕಿ ಕುಳಿತರೂ ಕಾಣುವುದು ಮದರ್ಸ್ ಡೇ ಬಗೆಗಿನ ಲೇಖನ, ಟಿಪ್ಪಣಿ, ಸಲಹೆ, ಅಂಕಣ ಮತ್ತೊಂದು ಮಗದೊಂದು. ಅಮ್ಮಂದಿರನ್ನು ಖುಶಿಪಡಿಸಲು ವಿಶೇಷ ತಿಂಡಿ ತಿನಿಸುಗಳು, ಬೇಕಾಗುವ ಸಾಮಾಗ್ರಿಗಳು, ಮಾಡುವ ವಿಧಾನ ಎಲ್ಲವೂ ಪತ್ರಿಕೆಗಳಲ್ಲಿ ರಾರಾಜಿಸುತ್ತವೆ. ನಮ್ಮ ನಿಮ್ಮೆಲರ ಮೊಬೈಲ್ ಫೋನಿಗೂ ಜಾಹೀರಾತುಗಳ ಆಕ್ರಮಣವಾಗುತ್ತದೆ. 'ಈ ಅಮ್ಮಂದಿರ ದಿನ ನಿಮ್ಮ ಅಮ್ಮಂದಿರಿಗೆ ವಜ್ರದ ಬೆಂಡೋಲೆ ಕೇವಲ ಇಷ್ಟು ಲಕ್ಷಕ್ಕೆ, ಈ ಸುವರ್ಣ ಅವಕಾಶ ಕೇವಲ ನಿಮಗಾಗಿ, ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ, ತ್ವರೆ ಮಾಡಿ' ಅಂತೆಲ್ಲಾ ಒಂದರ ಮೇಲೊಂದು ಸಂದೇಶಗಳು ನಮ್ಮ ಇನ್‌ಬಾಕ್ಸ್‌ನಲ್ಲಿ ಪ್ರತ್ಯಕ್ಷವಾಗುತ್ತವೆ! ಡಿಲೀಟ್ ಮಾಡಿದಷ್ಟು ಬರುತ್ತಲೇ ಇರುತ್ತವೆ. ಕಾಟ ತಡಿಯಲಾರದೆ ಕೊನೆಗೆ ಫೋನ್ ಸ್ವಿಚ್-ಆಫ್ ಮಾಡಿ ಕುಳಿತುಕೊಳ್ಳಬೇಕಾಗುತ್ತದೆ.
ಅಮ್ಮಂದಿರ ದಿನದಂದು ಮಾತ್ರ 'ಹ್ಯಾಪಿ ಮದರ್ಸ್ ಡೇ ಅಮ್ಮಾ' ಎಂದು ಶುಭಾಶಯ ನೀಡಿದರೆ ಸಾಕೆ? ಎನ್ನುವುದು ಹಲವರ ವಾದ. ಆದರೆ ನಮ್ಮಮ್ಮ ಸ್ವತಃ ಆ ದಿನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜನ್ಮ ದಿನ ಆಚರಿಸಿದಂತೆ ಅಮ್ಮಂದಿರ ದಿನ ಬರುತ್ತದೆ, ಹೋಗುತ್ತದೆ. ಅದರಲ್ಲೇನು ವಿಶೇಷ ಎಂದು ಕೇಳುತ್ತಾರೆ. ಭಾನುವಾರ ರಜೆ, ಹೊರಗಡೆ ಹೋಗೋಣವೆಂದರೆ- ಬಟ್ಟೆ ಒಗೀಬೇಕು, ಕಸ ಗುಡಿಸಬೇಕು, ನೆಲ ಒರೆಸಬೇಕು, ಮನೆ ಸ್ವಚ್ಛ ಮಾಡಬೇಕು, ಅಡುಗೆ ಮಾಡಬೇಕು, ಅದು ಮಾಡಬೇಕು, ಇದು ಮಾಡಬೇಕು ಎಂದು ಪಟ್ಟಿಯಲ್ಲಿ ದಿನನಿತ್ಯದ ಕೆಲಸಗಳನ್ನು ಸೇರಿಸುತ್ತಾ ಹೋಗುತ್ತಾರೆ. ಆಗ ಗೋಚರಿಸುತ್ತದೆ, ಅಮ್ಮಂದಿರ ಪ್ರಪಂಚ ಎಷ್ಟೊಂದು ಚಿಕ್ಕದು ಎಂದು.
ತನ್ನ ಗಂಡ, ಮಕ್ಕಳು, ವೃತ್ತಿ, ಪೋಷಕರು ಬಿಟ್ಟರೆ ಬೇರೆ ಯಾವುದರೆ ಬಗ್ಗೆಯೂ ಯೋಚಿಸುವುದಿಲ್ಲ. ನಾನು ಚೆನ್ನಾಗಿ ಕಾಣಬೇಕು, ಚೆನ್ನಾಗಿ ತಿನ್ನಬೇಕು, ಚೆನ್ನಾಗಿ ಇರಬೇಕು ಎಂಬ ಇಚ್ಛೆಯೇ ಇರುವುದಿಲ್ಲ ಅಮ್ಮಂದಿರಿಗೆ. ತನ್ನ ಗಂಡ ಮತ್ತು ಮಕ್ಕಳು ಸಮಯಕ್ಕೆ ಸರಿಯಾಗಿ ಊಟ ಮಾಡಿದರೋ, ಸರಿಯಾಗಿ ನಿದ್ದೆ ಮಾಡಿದರೋ ಎಂದು ಚಿಂತಿಸುವುದೇ ಇವರ ಏಕಮಾತ್ರ ಧ್ಯೇಯವಾಗುತ್ತದೆ. ನಿಸ್ವಾರ್ಥಿ ತಾಯಿಯಂದಿರ ಬಗ್ಗೆ ಆಗ ನಮಗೆ ಅಯ್ಯೋ ಪಾಪ ಎಂದೆಣಿಸುತ್ತದೆ.
ಹಿಂದಾದರೆ ತಾಯಂದಿರು ಮನೆಗೆಲಸದಲ್ಲಿ ಮುಳುಗಿ ಬಿಡುತ್ತಿದ್ದರು. ಈಗ ಹಲವರು ಉದ್ಯೋಗದಲ್ಲೂ ತೊಡಗಿಕೊಳ್ಳುತ್ತಾರೆ. ಹಾಗಿದ್ದಾಗ ಮನೆಗೆಲಸ ಮಾತ್ರವಲ್ಲ, ಕಚೇರಿಯ ತಲೆ ನೋವನ್ನು ಹೊತ್ತು ಜೀವನ ನಡೆಸುತ್ತಾರೆ. ತಅವರು ಮಾಡುವ ಬ್ಯಾಲೆಂಸಿಂಗ್ ಆ್ಯಕ್ಟ್ ಎಷ್ಟು ಕಷ್ಟವೆಂದು ಅವರ ಸ್ಥಾನದಲ್ಲಿ ನಿಂತು ನೋಡಿದಾಗ ತಿಳಿಯುತ್ತದೆ. ಗಂಡಸರು ತಾವು ಮನೆಗೆ ಬರುವುದು ತಡವಾಗುತ್ತದೆ ಎಂದು ತಿಳಿಸುವುದಿದ್ದರೆ 'ನನಗೆ ತುಂಬಾ ಜವಾಬ್ದಾರಿಯಿದೆ' ಅನ್ನೋ ದಾಟಿಯಲ್ಲಿ ಮಾತನಾಡುತ್ತಾರೆ. ಅದೇ ಕಚೇರಿಯಲ್ಲಿ ಕೆಲಸ ಹೆಚ್ಚಾದ ಕಾರಣ ಮನೆಗೆ ಬರುವುದು ತಡವಾಗುತ್ತದೆ ಎಂದು ಅಮ್ಮಂದಿರು ತಿಳಿಸುವಾಗ ತಮ್ಮ ಮಾತಿನಲ್ಲಿ ತಪ್ಪಿತಸ್ಥ ಮನೋಭಾವ ಕಂಡುಬರುತ್ತದೆ!
ಹೊತ್ತು, ಹೆತ್ತು, ಸಾಕಿ, ಬೆಳೆಸಿ ಮಕ್ಕಳು ದೊಡ್ಡವರಾದ ಮೇಲೂ ಚಿಂತೆ ಮಾಡುತ್ತಲೇ ಇರುತ್ತಾರೆ ಅಮ್ಮಂದಿರು. ಊಟ ಮಾಡಿದ್ದೇವೆ ಎಂದರೂ ಸಂಶಯ ಪಡುತ್ತಾರೆ. ಧ್ವನಿಯಲ್ಲಿ ವ್ಯತ್ಯಾಸ ಕಂಡುಬಂದರೆ 'ಮೈ ಹುಷಾರಿಲ್ವಾ? ಯಾಕೆ ಬೇಜಾರಲ್ಲಿದ್ದೀಯ?' ಎಂದು ಪಟ್ಟನೆ ಕಂಡು ಹಿಡಿದುಬಿಡುತ್ತಾರೆ! ಅದೇ ಅಮ್ಮಂದಿರಿಗೆ ಮೈ ಹುಷಾರಿಲ್ಲದೇ ಆದರೆ ಅವರ ಪತಿಗಾಗಲಿ, ಮಕ್ಕಳಿಗಾಗಲಿ ಗೊತ್ತೇ ಆಗೋಲ್ಲ. ಗೊತ್ತಾಗದಂತೆ ಜಾಗರೂಕರಾಗಿರುತ್ತಾರೆ ಅಮ್ಮಂದಿರು.
'ಬನ್ನಿ ಅಮ್ಮಾ, ಬ್ಯೂಟಿ ಪಾರ್ಲರ್‌ಗೆ ಕರೆದುಕೊಂಡು ಹೋಗ್ತೀನಿ' ಎಂದರೆ, 'ಯಾಕೆ? ಯಾರ ಮದುವೆ ಇದೆ ಈ ವಾರ' ಅಂತ ಪಂಚಾಂಗ ತೆಗೆದು ನೋಡುತ್ತಾರೆ! 'ಹೊಟೆಲ್‌ಗೆ ಹೋಗಿ ಬೇಕಾಬಿಟ್ಟಿ ತಿಂದು ಬರೋಣ' ಎಂದರೆ 'ನಾನು ಮಾಡಿಟ್ಟ ಅಡುಗೆ ಯಾರು ತಿನ್ನೋದು?' ಎಂದು ಪ್ರಶ್ನಿಸುತ್ತಾರೆ. ಒಂದು ದಿನದ ಮಟ್ಟಿಗಾದರೂ ಮನೆಗೆಲಸದಲ್ಲಿ ನೆರವಿಗೆ ಬಂದರೆ, 'ಪಾತ್ರೆ ಹೀಗಾ ತೊಳೆಯೋದು? ಬಿಡು, ನಾನೇ ತೊಳಿತೀನಿ' ಅಂತ ಪಾತ್ರೆಗೆ ಮತ್ತೆ ಸ್ನಾನ ಮಾಡಿಸುತ್ತಾರೆ. ಮಕ್ಕಳೆಲ್ಲಾ ಸೇರಿ ಅಮ್ಮನಿಗೆ ಸರ್ಪ್ರೈಸ್ ಮಾಡೋಣವೆಂದರೆ ಅದಕ್ಕೂ ಅಮ್ಮಂದಿರಿಗೆ ಬಿಡುವಿಲ್ಲ.
ನಾವು ಮಕ್ಕಳು ಗೋಳಿಟ್ಟುಕೊಂಡು ಕೆಲಸಕ್ಕೆ ಹೋಗುತ್ತೇವೆ. ಕೈ ತುಂಬಾ ಸಂಪಾದಿಸುತ್ತೇವೆ. ಸಂಬಳದಲ್ಲಿ ಏರುಪೇರಾದರೆ, ಆಕಾಶ ಭೂಮಿ ಒಂದು ಮಾಡುತ್ತೇವೆ. ಆದರೆ ತಾಯಿಯಂದಿರು ಪ್ರತಿ ನಿತ್ಯ ಅದೇ ಕೆಲಸವನ್ನು ಬೇಜಾರಿಲ್ಲದೇ ಮಾಡುತ್ತಾರೆ. ಅವರ ಕೆಲಸಕ್ಕೆ ಸಂಬಳ ಯಾರು ನೀಡುತ್ತಾರೆ? ಸಾರಿಗೆ ಉಪ್ಪು ಕಮ್ಮಿ, ಕಾಫಿಗೆ ಸಕ್ಕರೆ ಜಾಸ್ತಿ ಅಂತ ತಪ್ಪುಗಳನ್ನು ತೋರಿಸುತ್ತೇವೆ. ಗಂಡನ ಶೂ, ಸಾಕ್ಸ್, ಟೈ, ಇಸ್ರ್ತಿ ಹಾಕಿದ ಬಟ್ಟೆ ಎಲ್ಲವೂ ಆಫೀಸಿಗೆ ಹೊರಡುವ ಮುಂಚೆ ರೆಡಿಯಾಗಿರಬೇಕು. ಮಕ್ಕಳ ಸಮವಸ್ರ್ತ, ಊಟದ ದಬ್ಬ ತಯಾರಿರಬೇಕು. ಗಂಡ, ಮಕ್ಕಳು ಮರಳಿ ಮನೆಗೆ ಬಂದಾಗ ಬಿಸಿ ಬಿಸಿ ತಿಂಡಿ- ಚಹಾ ಟೇಬಲಲ್ಲಿರಬೇಕು. ಅತಿಥಿಗಳು ದಿಢೀರನೆ ಬಂದರೆ ಮನೆ ಜಗಮಗಿಸುತ್ತಾ ಇರಬೇಕು. ಹಾಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಅಮ್ಮ ಫುಲ್ ಬಿಜಿ. ಅಮ್ಮಂದಿರ ಕೆಲಸ ಸಂಬಳವಿಲ್ಲದೇ ಮಾಡುವ ಕೆಲಸ. ವರ್ಷವಿಡೀ ರಜೆ ಹಾಕದೇ ಮಾಡುವ ಕೆಲಸ. ನಿಸ್ವಾರ್ಥವಾಗಿ ಮಾಡುವ ಕೆಲಸ. ಈ ರೀತಿಯಿರಬೇಕೆಂದು ಯಾರೂ ಎಲ್ಲೂ ಬರೆದಿಲ್ಲ. ಆದರೂ ಅಮ್ಮಂದಿರು ಇರುವುದೇ ಹೀಗೆ. ಆದ್ದರಿಂದ ಅಮ್ಮಂದಿರ ದಿನವೂ ಅಮ್ಮಂದಿರ ಆನ್ ಡ್ಯೂಟಿ.
(ಪ್ರಣತಿ ಮುಂದಿನವಾರ ಎಂದಿನಂತೆ)
-ಅದಿತಿಮಾನಸ. ಟಿ. ಎಸ್.