ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭೂ ಕಬಳಿಕೆಗೆ ದಾರಿಯಾಗುತ್ತಿದೆಯೇ ಪರಿಷ್ಕೃತ ಸೌರ ನೀತಿ?

Srinivasa Murthy VN
Updated On : 19 May 2014, 10:21 am

ಸೆವಿಲ್ಲೆ ಸ್ಪೇನ್ ದೇಶದ ಒಂದು ಪುಟ್ಟ ಮರಳುನಾಡು. ಸೂರ್ಯ ಇಲ್ಲಿ ಬೇಗ ಹುಟುತ್ತಾನೆ, ತಡವಾಗಿ ಮುಳುಗುತ್ತಾನೆ. ಸ್ಥ್ಥಳೀಯ ತಂತ್ರಜ್ಞರಿಗೆ ಇದೇ ಸಾಕಾಯಿತು. ಹಗಲಿಡೀ ಉರಿಯುವ ಸೂರ್ಯನಿಗೆ ಸ್ವಿಚ್ಚು ಹಾಕಲು ನಿರ್ಧರಿಸಿದರು. ಅದಕ್ಕಾಗಿ ಸಾಂಪ್ರದಾಯಿಕ ಸೌರ ಶಕ್ತಿಯನ್ನು ಆರಂಭಿಸಿದರೆ ಶೇ.31 ರಷ್ಟು ಶಕ್ತಿ ಪೋಲಾಗುತ್ತದಲ್ಲ ಅದಕ್ಕೇನು ಮಾಡುವುದು? (ಸಧ್ಯದ ಸೌರ ಘಟಕದ ಫಲಕಗಳನ್ನು ದಕ್ಷಿಣಾಭಿಮುಖವಾಗಿ ಹಾಕಿ, ಉತ್ತರಕ್ಕೆ ಇಳಿ ಬಿಡುವುದರಿಂದ ಸೂರ್ಯ ಪೂರ್ವದಿಂದ ಹುಟ್ಟುತ್ತಿದ್ದಂತೆ ಫಲಕಕ್ಕೆ ಬೀಳುವ ಬಿಸಿಲು ಪಶ್ಚಿಮದ ಕಡೆ ವಾಲುವಾಗಲೂ ಲಭ್ಯವಾಗುತ್ತದೆ. ಆದರೆ ಆ ಕೋನದಲ್ಲಿ ಮೊದಲ ಮತ್ತು ಕೊನೆಯ ಎರಡು ಗಂಟೆಯ ಪ್ರಖರತೆಯಲ್ಲಿ ಪಸರಿಸುವ ಶಾಖ ಶೇ.31 ಪೋಲಾಗುತ್ತದೆ.) ಸ್ಪೇನ್‌ನ ವಿಜ್ಞಾನಿಗಳು ಅದಕ್ಕಾಗಿ ತಿರುಗುವ 'ಪ್ಯಾರಾಬೋಲಿಕ್‌' ಕನ್ನಡಿ ನಿರ್ಮಿಸಿದರು. ಅದು ನಮ್ಮ ಸೂರ್ಯಕಾಂತಿಯಂತೆ ಎತ್ತ ಸೂರ್ಯ ತಿರುಗಿದರೆ ಅತ್ತ ಮುಖ ಕೊಟ್ಟು ನಿಲ್ಲುತ್ತಿತ್ತು. ಅದರ ಮೇಲಿದ್ದ ಕನ್ನಡಿಯ ಫಲಕ ಗರಗರನೆ ಕಾಯುತ್ತಿತ್ತು. ಹೀಗೆ ಕಾಯುವ ಕನ್ನಡಿ ಬಿಸಿಲಿದ್ದಾಗ ಮಾತ್ರ ಶಕ್ತಿ ಕೊಡುತ್ತದೆ. ಕತ್ತಲಾಗುತ್ತಿದ್ದಂತೆ ಎಲ್ಲಿಂದ ಶಕ್ತಿ ಉತ್ಪಾದನೆ ಸಾಧ್ಯ? ಹಾಗಂತ ಎಷ್ಟೆಂದು ಶಕ್ತಿಯನ್ನು ಕೂಡಿಡಲು ಸಾಧ್ಯ?
ಅದಕ್ಕಾಗಿ ಮರು ಶಕ್ತಿ ಪ್ರಸರಣದ ಯೋಜನೆ ನಿರ್ಮಿಸಿದ ಸೆವಿಲೆ ತಂಡ ಅದಕ್ಕಾಗಿ ಒಂದು ಕಂಬವನ್ನು ನಿರ್ಮಿಸಿ, ಅದರ ಕೆಳಗೆ 1290 ಅಡಿ ವಿಸ್ತೀರ್ಣದ ಕನ್ನಡಿಗಳು, 615 ತಿರುಗು ಕನ್ನಡಿಗಳನ್ನು ಜೋಡಿಸಿ ಅದರ ಮುಖಗಳು 380 ಅಡಿ ಎತ್ತರದ ಇನ್ನೊಂದು 360 ಅಡಿ ಎತ್ತರದ ಮೈತುಂಬಾ ಕಪ್ಪು ಕನ್ನಡಿ ಹೊದ್ದ ಕಂಭಕ್ಕೆ ತಿರುಗಿಸಿಟ್ಟರು. ಕೆಳಗಿದ್ದ ಕನ್ನಡಿಯ ಶಕ್ತಿ ಉತ್ಪಾದನೆಯ ಜೊತೆಗೆ ಬಾಕಿ ಉಳಿದ ಕೋನದ ಭಾಗದಿಂದ ಮಧ್ಯದ ಕಂಭಕ್ಕೆ ಸೂರ್ಯನ ಬೆಳಕು ಅಷ್ಟೇ ಪ್ರಖರವಾಗಿ ಪ್ರತಿಫಲಿಸುತ್ತಿತ್ತು.  
ಕಂಬದಲ್ಲಿರುವ ಮಲ್ಟನ್ ಪೊಟ್ಯಾಶಿಯಂ ಮತ್ತು ಸೋಡಿಯಂ ನೈಟ್ರೇಟ್ ಮುಂದಿನ 7 ಗಂಟೆಯ ಕಾಲ ಕಂಬಕ್ಕೆ ಪ್ರತಿಫಲಿಸಿದ ಶಕ್ತಿಯನ್ನು ಹೀರಿಟ್ಟುಕೊಂಡು, ಶಕ್ತಿ ಉತ್ಪಾದನೆಗೆ ಸಹಾಯ ಮಾಡುತ್ತದೆ. (ಇದರಿಂದ ದಿನಂಪ್ರತಿ 12 ಸಾವಿರ ಟನ್ ಕಾರ್ಬನ್ ಪರಿಸರಕ್ಕೆ ಸೇರುವುದನ್ನು ತಡೆಯಲಾಗುತ್ತಿದೆ) ಇದು ಸೌರ ಶಕ್ತಿಯ ಸದ್ಬಳಕೆಗೆ ಪ್ರಸ್ತುತ ಜಾಗತಿಕ ಮಾನದಂಡ. ಸೂರ್ಯನಿಲ್ಲದಿದ್ದಾಗಲೂ ಮನೆಗೆ ಶಕ್ತಿ ಹರಿಸಿದ ಕಥೆ. 15 ಲಕ್ಷ ಜನಸಂಖ್ಯೆಯ ಸೆವಿಲೆ ಜಗತ್ತಿನಲ್ಲಿ ಸೂರ್ಯಂಗೆ ಸ್ವಿಚ್ಚು ಹಾಕಿದ ಪ್ರಥಮ ನಾಡು. ಇವತ್ತಲ್ಲಿ...ಕರೆಂಟಿಗೆ ಕಾಯದೇ ಜನ ನಿರಾಳವಾಗಿದ್ದಾರೆ.
ಅಬೆಂಗೊ ಸೊಲಾರ್ ಮತ್ತು ಅಬೇನರ್ ಎನರ್ಜಿಯಾ ಎನ್ನುವ ಅಂತಾರಾಷ್ಟ್ರೀಯ ಸಂಸ್ಥೆಗಳು ಹಗಲು ರಾತ್ರಿ ಒಂದು ಮಾಡಿ ಈ ತಂತ್ರಜ್ಞಾನ ಕಂಡುಕೊಂಡಿವೆ. ಸಧ್ಯದ ದರ ಗುರಿ ಮುಟ್ಟುವಲ್ಲಿ ಕೆಲವೇ ಹೆಜ್ಜೆ ಹಿಂದಿದ್ದು 2015ರಲ್ಲಿ 10 ಸಾವಿರ ಮೆ. ವ್ಯಾಟ್ ಉತ್ಪಾದನೆಯನ್ನು ತಲುಪಲಿದ್ದಾರೆ. ಭಾರತೀಯ ರುಪಾಯಿಗೆ ಹೋಲಿಸಿದರೆ ಆಯವ್ಯಯದ ನಂತರ ಯುನಿಟ್‌ಗೆ ಕೇವಲ 2 ಚಿಲ್ಲರೆ ರುಪಾಯಿ ತಗಲುತ್ತಿದೆ.
ಆದರೆ ನಮ್ಮಲ್ಲಿ ಏನಾಗಿದೆ ನೋಡಿ. ಲೋಕಸಭೆಯ ಫಲಿತಾಂಶದ ಕಾವಿನಲ್ಲಿ ಇಡೀ ದೇಶ ಮುಳುಗಿದ್ದರೆ ನಮ್ಮಲ್ಲಿ ಬಿದ್ದೇಟಿಗೆ ಒಂದು ಅಡ್ಡೇಟು ಎನ್ನುವಂತೆ ಸೌರ ನೀತಿಯಲ್ಲೇ (ಮೇ.15 2014) ಪರಿಷ್ಕೃತ ಮಸೂದೆ ರೂಪಿಸಲಾಗಿದೆ. ಹಕೀಕತ್ತೆಂದರೆ ಯಾವ ಮಂತ್ರಾಲಯದಲ್ಲೂ ಇವತ್ತು ಸೌರ ನೀತಿಯ ಅಪೂಟು ವೈಜ್ಞಾನಿಕ ಲೆಕ್ಕಾಚಾರ ಇಲ್ಲದಿರುವುದು. ಇಂಧನ ಸಚಿವರು ಹೇಳಿಕೆ ನೀಡಿ 400 ಮೆ.ವ್ಯಾ. ಉತ್ಪಾದನೆಯ ಗುರಿಯನ್ನು ಅರುಹಿದ್ದಾರೆ. ನಿಜಕ್ಕೂ ಖುಶಿಯ ವಿಚಾರ. ಆದರೆ ಪ್ರಾಯೋಗಿಕವಾಗಿ ಇದಕ್ಕೆಲ್ಲ ಆಗುವ ತೊಂದರೆ ಮತ್ತು ಪರಿಹಾರಗಳ ಬಗ್ಗೆ ಸಚಿವರನ್ನು ಬಿಡಿ, ಸಂಪುಟದಲ್ಲೂ ಯಾರೊಬ್ಬರ ಬಳಿ ಉತ್ತರವಿಲ್ಲ.
ಕಾರಣ ಸೌರ ವಿದ್ಯುತ್ ಉತ್ಪಾದನೆ ಎನ್ನುವುದೇ ಒಂದು ಅದ್ಭುತ ಪ್ರಯೋಗ. ಸರಿಯಾಗಿ ನಿರ್ವಹಿಸಿದರೆ ಮಾತ್ರವೇ ಅದು ಪ್ರಯೋಜನಕಾರಿ. ಅದರಲ್ಲೂ ದೊಡ್ಡ ಮಟ್ಟದಲ್ಲಿ ಅದರ ಉತ್ಪಾದನೆಗೆ ಇಳಿಯುವಾಗ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕನಿಷ್ಠ ಯೋಜನೆ ಮತ್ತು ಒಪ್ಪಿತ ಮಾದರಿಗಳು ಕಣ್ಮುಂದೆ ಇರಲೇಬೇಕು. ಇಂಥದ್ದೊಂದನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಯಶಸ್ವಿಯಾದ ಕಥೆಯ ಹಿಂದಿನ ಪ್ರಾಯೋಗಿಕ ಕಷ್ಟ ಸಾಧ್ಯತೆಯನ್ನಾದರೂ ಯೋಚಿಸಬೇಕು. ನಮ್ಮ ಕಥೆ ನೋಡಿ ಹೆಂಗಿದೆ?
1) ಈಗಾಗಲೇ ಚಾಲನೆಯಲ್ಲಿರುವ 65 ಕೋಟಿ ರುಪಾಯಿ ಫೋಟೋ ಮೊಲ್ಟಯಿಕ್ (ಸುಮಾರು ನೂರು ಚಿಲ್ಲರೆ ಮೆ.ವ್ಯಾಟ್ ಶಿಂಶಾ ಯೋಜನೆಯ ಬಗ್ಗೆ ಯಾವುದೇ ಸುಳಿವೇ ಇಲ್ಲದೆ, ಈಗ ಇನ್ನೊಂದು ಯೋಜನೆ ಘೋಷಿಸಲ್ಪಡುತ್ತಿದೆ. ಮೊದಲಿನ 65 ಕೋಟಿ ರುಪಾಯಿ ಕಥೆ ಏನಾಯಿತು? ಶಿಂಶಾದಲ್ಲಿ ಸೂರ್ಯನ ಶಕ್ತಿಯ ಲಭ್ಯತೆ ಎಷ್ಟು? (ಹೆಚ್ಚಿನಂಶ ಮೋಡ ಆವರಿತ ಪ್ರದೇಶ ಅದು.) ಇಂಧನ ಸಚಿವಾಲಯದ ಬಳಿ ಉತ್ತರ ಇದೆಯಾ?
2) K.E.R. ಹೊರಡಿಸಿರುವ ಕಾಯಿದೆ FY 14-18/TO/S/03/01 Dt. 10th Oct. 2013  ಪ್ರಕಾರ (10 ಅ. 2013 ರಂದು ಆದ ಒಪ್ಪಂದದ ಅನ್ವಯ.) 2018 ರವರೆಗೆ Electricity Act 2003 (The Act) Sec. 86.1(E) ದಾಖಲಿಸಿರುವಂತೆ ಸೋಲಾರ್ ಸಾಮರ್ಥ್ಯ ಮತ್ತು ವಿವಿಧತೆಗೆ ಅನುಗುಣವಾಗಿ ವಿವಿಧ ಹಂತದ ದರಗಳನ್ನು ಆರಂಭಿಕ ಹೂಡಿಕೆ ಬಂಡವಾಳವಾಗಿ ಗಣಿಸಲಾಗಿದೆ. ಇದರ ಪ್ರಕಾರ ಕ್ಯಾಪಿಟಲ್ ಹೂಡಿಕೆ ಪ್ರತಿ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸೋಲಾರ್ ಫೊಟೊ ಮೊಲ್ಟಯಿಕ್  8.30 ಕೋಟಿ, ಸೋಲಾರ್ ಥರ್ಮಲ್ ಪವರ್ ಪ್ಲಾಂಟ್ 12 ಕೋಟಿ ಮತ್ತು ರೂಫ ಟಾಪ್ ಸೋಲಾರ್ ಫೋಟೊ ಮೊಲ್ಟಾಯಿಕ್ 90 ಲಕ್ಷ ರು. ಪ್ರತಿ ಕಿ.ವ್ಯಾ. ಗೆ. ಇದರ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವೇ 10 ರಿಂದ 13 ಲಕ್ಷ ಪ್ರತಿ ಮೆಗಾ ವ್ಯಾಟ್‌ಗೆ. ಆಗುತ್ತದೆ (ಆದರೆ ನಮ್ಮ ಇಂಧನ ಇಲಾಖೆ ಕೇವಲ 7 ಕೋಟಿ ರುಪಾಯಿಗಳನ್ನು ವೆಚ್ಚವಾಗಿ ಪ್ರತಿ ಮೆಗಾ ವ್ಯಾಟ್‌ಗೆ ಸಾಕು ಎಂದು ನೀಡಿರುವ ಪ್ರಕಟಣೆಗೂ ಇದಕ್ಕೂ ಯಾವುದೇ ಹೊಂದಾಣಿಕೆಯೇ ಕಾಣುತ್ತಿಲ್ಲ. ಮತ್ತದು ಪ್ರಾಯೋಗಿಕವಾಗಿ ಸಾಧ್ಯವೂ ಇಲ್ಲ.)  
3)ಇನ್ನು ಕರ್ನಾಟಕ ಗೆಜೆಟ್ 19.11.2011ರ ಸೋಲಾರ್ ಪಾಲಿಸಿ ಪ್ರಕಾರ 2022 ನೇ ಇಸವಿ ಹೊತ್ತಿಗೆ ಕರ್ನಾಟಕದ ಬಳಕೆಯ ಶೇ.3 ರಷ್ಟು ವಿದ್ಯುತ್ ಸೌರ ವಿದ್ಯುತ್ತೇ ಆಗಿರಬೇಕೆನ್ನುತ್ತದೆ. (KA/BG/GPO/2515/WPP-47/2011-14) ಈ ಗೆಜೆಟ್ ಅನ್ವಯ ಪ್ರತಿ ವರ್ಷ 40 ಮೆ.ವ್ಯಾ. ಸಾಮರ್ಥ್ಯ 2011 ರಿಂದ ಹೆಚ್ಚಿಸಿಕೊಳ್ಳುತ್ತಾ ನಾವು ಸಾಗಬೇಕಿತ್ತು. ಆದರೆ ಈಗ 2014 ರಲ್ಲಿ ಉತ್ಪಾದನೆಯಾಗುತ್ತಿರುವ ಸೌರ ಶಕ್ತಿ ಎಷ್ಟು? (ಅಧಿಕಾರಿಗಳೇ ಬೆರಳು ಮಡಚಿ ಲೆಕ್ಕ ಹಾಕುತ್ತಿದ್ದಾರೆ. ನೋಟಿಪಿಕೇಷನ್ ಪ್ರಕಾರ ಈ ವರ್ಷಕ್ಕೆ 126 ಮೆ.ವ್ಯಾ. ಸೌರ ಶಕ್ತಿ ನಮಲ್ಲಿ ಉತ್ಪಾದನೆಯಾಗಬೇಕಿತ್ತು)
4)ಈಗಾಗಲೇ ರೈತರ ಜಮೀನು ಅಕ್ರಮಿಸುತ್ತಾ ವಿವಾದಕ್ಕೀಡಾಗುತ್ತಿರುವಾಗ ಈಗ ಮತ್ತೆ ರೈತರಿಗೆ ನಿಮ್ಮ ಜಮೀನಿನಲ್ಲಿ ವಿದ್ಯುತ್ ಉತ್ಪಾದಿಸಿ ನಮಗೇ ಮಾರಾಟ ಮಾಡಿ ಎನ್ನುವ ಭವಿಷ್ಯತ್ತಿನ ಆವಾಂತರಗಳಿಗೆ ಯಾರು ಕಾರಣ? ಅಸಲಿಗೆ ಒಂದು ಮೆ.ವ್ಯಾಟ್ ವಿದ್ಯುತ್‌ಗೆ ಐದು ಎಕರೆ ಬೇಕು ಎಂದು ಅವೈಜ್ಞಾನಿಕ ಮಸೂದೆ ಮಂಡಿಸಿರುವ ಸರ್ಕಾರ ನಮ್ಮಲ್ಲಿ ಐದು ಎಕರೆ ಹೊಂದಿರುವ ರೈತರು ಎಷ್ಟು ಜನರಿದ್ದಾರೆ ಮತ್ತವರಲ್ಲಿ  ತಯಾರಿರುವವರ ಅಂದಾಜು ಯಾದಿ ತಯಾರಿಸಿದೆಯೇ? (ನಮ್ಮಲ್ಲಿ ತುಂಡು ಹಿಡುವಳಿ ಸಾಗುವಳಿದಾರರೇ ಇರುವುದು. ಶೇ.8 ಕೂಡಾ ಐದೆಕರೆಯ ರೈತರಿಲ್ಲ ಮತ್ತು ಕೇವಲ ಎರಡು ಎಕರೆಯಲ್ಲಿ ಮಲ್ಟಿಪಟಲ್ ಪ್ಲೇಟ್ ಬೇಸ್ ನಿರ್ಮಿಸುವುದರ ಮೂಲಕ 1 ಮೆ.ವ್ಯಾ. ಸಾಧ್ಯ )
ಈ ಸಂಭಾವ್ಯತೆಯನ್ನು ತಪ್ಪಿಸಲೆಂದೇ 'ಸೇವಿಲ್ಲೆ' ಸೇರಿದಂತೆ 17 ರಾಷ್ಟ್ರಗಳು ತಿರುಗು ಕನ್ನಡಿ ತಂತ್ರಜ್ಞಾನದ ಮೂಲಕ ಹೆಚ್ಚಿನ ಶೇ.23 ವಿದ್ಯುತ್ ಉತ್ಪಾದನೆ ಆರಂಭಿಸಿವೆ. ಆದರೆ ನಮ್ಮಲ್ಲಿ ಅದೇ ಹಳೆಯ ಫಲಕದ ಪದ್ಧತಿ ಅನುಸರಿಸಿ ಕೇವಲ ದಿನಕ್ಕೆ ಎಂಟು ಗಂಟೆಗಳ ಬಿಸಿಲಿನ ಅಧಾರದ ಮೇಲೆ ನೀತಿ ರೂಪಿಸುತಿದ್ದಾರಲ್ಲ, ಅಸಲಿಗೆ ತಂತ್ರಜ್ಞಾನವೇ ಇಲ್ಲವಾ ಅಥವಾ ಇಲಾಖೆ ನೆಪಕ್ಕೆಂದು ಕೆಲಸ ಮಾಡುತ್ತಿದೆಯಾ?
5)ಇನ್ನು ಪ್ರತಿ ಸೌರ ಪಾರ್ಕ್‌ಗೆ 100 ಎಕರೆ ಜಮೀನು ಬೇಕೆಂದು ಘೋಷಿಸಿದ್ದು. ಹೀಗೆ ಬೀಳುಬಿದ್ದಂತೆ ಆಗುವ ಜಮೀನು ಎಲ್ಲಿಂದ ತರಲಿದೆ? ಕಾಡು ಕಡಿದು ಉಪಯೋಗಿಸುವಂತಿಲ್ಲ. ಅದಕ್ಕಾಗಿ ಅಳಿದುಳಿದ ಗೋಮಾಳ ಅಥವ ರೈತರ ಜಮೀನಿಗೆ ಕನ್ನ ಹಾಕಬೇಕು. ಹಾಗೆ ಹಾಕುವುದಾದರೆ ಕರ್ನಾಟಕದಲ್ಲಿ ಬೆಳೆಗಾಗಿಯೇ ಉಳಿದಿರುವ ಜಮೀನಾದರು ಎಷ್ಟು? (ಕಳೆದ ಒಂದು ದಶಕದಲ್ಲಿ ಕರ್ನಾಟಕ ಕಳೆದುಕೊಂಡಿರುವ ಕೃಷಿ ಜಮೀನೇ ಶೇ.27ರಷ್ಟಿದೆ. ಇನ್ನು ಪ್ರತಿ ಪಾರ್ಕ್‌ಗೆ ನೂರು ಎಕರೆಯಂತೆ ಕೊಡುತ್ತಾ ಹೋದರೆ ಬೆಳೆ ಬೆಳೆಯಲು ಉಳಿಯುವ ಜಮೀನಾದರೂ ಎಷ್ಟು? ಇಷ್ಟಾಗಿಯೂ ಸರ್ಕಾರ ಜಮೀನಿಗೆ ಕೈ ಹಾಕುತ್ತಿದ್ದಂತೆ ಹಗರಣವಾಗದೇ ಹೋದ ಎಷ್ಟು ಘಟನೆಗಳಿವೆ? ಅದರಲ್ಲೂ ಇದಕ್ಕಾಗಿ ಭೂ ಪರಿವರ್ತನೆಯನ್ನೇ ಸುಲಭಗೊಳಿಸಲು ಹೊರಟಿದ್ದು, ಭೂಗಳ್ಳರು ಎಲ್ಲೆಲ್ಲಿ ಎಷ್ಟೆಷ್ಟು ಎಂದು ಆಗಲೇ ಸ್ಕೇಚ್ ನಡೆಸುತ್ತಿದ್ದಾರೆ. ಇಂಥ ಸಣ್ಣ ಅಂದಾಜು ಕೂಡ ಇಲಾಖೆಗೆ ಬರುತ್ತಿಲ್ಲವಾ?
6) ಸರ್ಕಾರ ಭೂ ಪರಿವರ್ತನಾ ಕಾಯಿದೆ 95 (ಓ)ಗೆ ತಿದ್ದುಪಡಿ ತರಲಿದ್ದು ಅದರ ಮೂಲಕ ಸುಲಭವಾಗಿ ಸೌರವಿದ್ಯುತ್‌ಗಾಗಿ ಭೂ ಪರಿವರ್ತನೆ ಮತ್ತು ಪರಭಾರೆಯ ಸಾಧ್ಯತೆ ಹೆಚ್ಚಳವಾಗಲಿದೆ. ಅಲ್ಲಿಗೆ ಭೂ ಮಾಫಿಯಾದ ಹಣಾಹಣಿ ಬೆಳೆಯುವ ವೇಗ ಊಹಿಸಲೂ ಅಸಾಧ್ಯ. ಕಾರಣ ನಮಲ್ಲಿ ಪರಿವರ್ತನೆಯಾದ ಭೂಮಿ ಯಾವತ್ತೂ ಸರಿಯಾಗಿ ಬಳಸಿದ ಉದಾ ಕಮ್ಮಿ. ಜೊತೆಗೆ ಭೂ ಪರಿವರ್ತನೆ ಎನ್ನುವ ವಿಷಯಕ್ಕೆ ಕೈ ಹಾಕುತ್ತಿದ್ದಂತೆ ಸಾವಿರಾರು ಎಕರೆ ಹೊಡೆಯುವ ಡ್ರಾಯಿಂಗು ತಯಾರಾಗಿ ಬಿಡುತ್ತದೆ. ಯಾವ ಯೋಜನೆಗೂ ತಾರದ 'ಭೂ ಪರಿವರ್ತನಾ' ಕಾಯಿದೆ ಇಷ್ಟು ತುರ್ತಾಗಿ ಈ ವಿಷಯದಲ್ಲೇಕೆ ತರುತ್ತಿದ್ದಾರೆ?
7)ಪ್ರತಿ ಮೆ.ವ್ಯಾ. 7 ಕೋಟಿ ಹಾಕಿದರೆ ಅದರಿಂದ ಉತ್ಪಾದನೆಯಾಗುವ ವಿದ್ಯುತ್ ಎಷ್ಟು ರುಪಾಯಿಗೆ ಮಾರುತ್ತೀರಿ? ಅಷ್ಟು ಬೆಲೆಯ ಶಕ್ತಿಯ ಪೂರೈಕೆಯನ್ನು ರಾಜ್ಯದ ಯಾವ ಜನ ಸಾಮಾನ್ಯ ತಡೆದುಕೊಂಡಾನು? ಕಾರಣ ಇಲಾಖೆ ಹೊರಡಿಸಿರುವ ಗೆಜೆಟ್ ಪ್ರಕಾರ ಈ ಯೋಜನೆಯ ಉತ್ಪಾದನೆ ಯಾವುದೇ ರೀತಿಯ ದಕ್ಷತೆಯಲ್ಲಿ ಕಾರ್ಯ ನಿರ್ವಹಿಸಿದರೂ ರುಪಾಯಿ 8.50 ಕ್ಕಿಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲ.
ಹೀಗಿದ್ದಾಗ ಪ್ರಸ್ತುತ ಪರಿಷ್ಕೃತ ನೀತಿಯಲ್ಲಿರುವ ಭೂ ಪರಿವರ್ತನೆ ಮತ್ತು ಸೌರ ವಿದ್ಯುತ್ ಚಾಲನೆ ವೇಗಗೊಳಿಸುವ ಮುನ್ನ ಈ ಮೊದಲಿನ ಗೆಜೆಟ್ ಪ್ರಕಾರ ವರ್ಷಕ್ಕೆ 40 ಮೆ.ವ್ಯಾ. ನ ಯೋಜನೆಯನ್ನೇಕೆ ತ್ವರಿತಗೊಳಿಸಬಾರದು?
ಇಷ್ಟಕ್ಕೂ ಈ ನೀತಿಯ ಹಿಂದಿನ ಸೊಲಾರ್ ದರ ಮತ್ತು ಸಮಯ ನಿಗದಿ ಪಡಿಸಿದ ಮೇಲಿನ ಸುತ್ತೋಲೆಯ ಮೀಟಿಂಗ್‌ನಲ್ಲಿದ್ದವರಾದರು ಯಾರೆಂದುಕೊಂಡಿರಿ? ಮೋಸರ್ ಬಿಯರ್ ಎಲೆಕ್ಟ್ರಿಕ್ ಮತ್ತು ಕನ್‌ಸ್ಟ್ರಕ್ಷನ್ ಕಂ., ಮುಂಬೈನ ಮೇ.ಅಸ್ಟೋನ್ ಫೀಲ್ಡ್., ದೆಹಲಿಯ ಫಸ್ಟ್ ಸೋಲಾರ್ ಪವರ್ ಇಂಡಿಯಾ ಲಿ., ಬೆಂಗಳೂರಿನ ಏಟ್ರೀಯಾ ಪವರ್ ಕಂಪೆನಿ, ದೆಹಲಿಯ ವೆಲ್ಸ್ಪನ್ ಎನರ್ಜಿ ಲಿ ಮತ್ತು ಗ್ರೀನ್ ಎನರ್ಜಿಗಳ ಪ್ರತಿನಿಧಿಗಳು. ಇವರಿರುವ ಸಭೆಯಲ್ಲಿ ದರವನ್ನು ನಿರ್ಧರಿಸುತ್ತಾರಾದರೆ ಅವರ್ಯಾಕೆ ಕರ್ನಾಟಕ ಭೂಮಿ ಅಥವಾ ವಿದ್ಯುತ್ತಿನ ಅಗತ್ಯದ ಬಗ್ಗೆ ಲೆಕ್ಕ ಹಾಕುತ್ತಾರೆ?
8) ಇವೆಲ್ಲಕ್ಕಿಂತಲೂ ಕುಚೋದ್ಯವೆಂದರೆ ಸ್ವತಃ ಇಲಾಖೆಗೆ ಹೀಗೆ ಭೂ ಪರಿವರ್ತನೆ ಅಥವಾ ರೈತ ಭೂಮಿಯ ಬದಲಾಗಿ ಖಾಲಿ ಇದ್ದ ಜಾಗಗಳ ಬಳಕೆಯ ಮಾಹಿತಿಯೇ ಇದ್ದಂತಿಲ್ಲ. ನೀರಾವರಿ ಕಾಲುವೆಗಳ ಮೇಲೆ ಕಿ.ಮಿ.ಗಟ್ಟಲೇ ಖಾಲಿ ಜಾಗ ಸಿಗುತ್ತದಲ್ಲ ಅಲ್ಲಿ ಯಾಕೆ ಗುಜರಾತ್ ಮಾದರಿ ರೂಫ್ ವರ್ಕ್ ಮಾಡಬಾರದು? ಸರ್ಕಾರದ ವಶದಲ್ಲಿರುವ ಖಾಲಿ ಭೂಮಿಯಲ್ಲಿ ಯಾಕೆ ಪಾರ್ಕ್ ತರುವ ಯೋಜನೆ ರೂಪಿಸುತ್ತಿಲ್ಲ? ಒಣ ನೆಲದ ಕಡೆಗೆ ಗಮನವೇಕಿಲ್ಲ?
ಕರ್ನಾಟಕದ ಅತಿ ಹೆಚ್ಚು ಬಿಸಿಲು ಪ್ರದೇಶಗಳಾದ ಉತ್ತರ ಕರ್ನಾಟಕದ ಕಡೆಯಲ್ಲಿ ಎಲ್ಲೆಲ್ಲಿ ಈ ಯೋಜನೆ ರೂಪಿಸಬಹುದೆನ್ನುವ ಕರಡು ಮಾಹಿತಿಯೇ ಇಲ್ಲ. ಆದರೆ ಬೆಂಗಳೂರು ಸುತ್ತಮುತ್ತಲಲ್ಲೇ ಯಾಕೆ ಸೌರ ಶಕ್ತಿಯ ಉತ್ಪಾದನೆ ಮತ್ತದಕ್ಕಾಗಿ ಭೂ ಪರಿವರ್ತನೆಗೆ ನೀತಿ ಬೇಕು? ಬೆಂಗಳೂರಿನಿಂದ ಮಲೆನಾಡಿನ ಬುಡದವರೆಗೂ ವರ್ಷದಲ್ಲಿ ಅಧಿಕತಮ ಸೂರ್ಯನ ಶಾಖದ ಲಭ್ಯತೆ ಉಳಿದ ಕಡೆಗೆ ಹೋಲಿಸಿದರೆ ಶೇ. 19 ಕಡಿಮೆ. ಮಿಗಿಲಾಗಿ ದಿನದ ಮೊದಲ ಮತ್ತು ಕೊನೆಯ ಎರಡು ಗಂಟೆಯ ಅವಧಿಯಲ್ಲಿ ಇಲ್ಲಿ ಪ್ರಖರತೆಯೂ ಕಡಿಮೆ. ಹೀಗಿದ್ದಾಗ ಮತ್ಯಾಕೆ ಇಲ್ಲಿಯೇ ಯೋಜನೆ ರೂಪಿಸುವ ಅತ್ಯುತ್ಸಾಹ ಇಲಾಖೆಗೆ?

-ಸಂತೋಷಕುಮಾರ ಮೆಹೆಂದಳೆ
sjmehandale@npcil.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement