ರೋಗಗ್ರಸ್ತ ಆರ್ಥಿಕತೆಯನ್ನು ಹೇಗೆ ಎದುರಿಸುವರು ಮೋದಿ?
ಅಂತೂ ಚುನಾವಣೆ ಮುಗಿದು ಬಹುಜನರ ಅಪೇಕ್ಷೆಯ ಮೋದಿ ಸರ್ಕಾರ ದಿಲ್ಲಿಯ ಗದ್ದುಗೆಯನ್ನು ಏರುತ್ತಿದೆ. ಕಳೆದ ಒಂದು ವರ್ಷದಿಂದ ಹೆಣೆದ ರಣತಂತ್ರಗಳು, ಪಟ್ಟ ಪರಿಶ್ರಮಗಳು ಫಲನೀಡಿ ಮಹಾಸಮರ ಗೆದ್ದ ಸಂಭ್ರಮದಲ್ಲಿರುವಾಗಲೇ ಆಡಳಿತದಲ್ಲಿ ಎದುರಾಗಬಲ್ಲ ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಎನ್ಡಿಎ ಸರ್ಕಾರ 2004ರಲ್ಲಿ ಯುಪಿಎಗೆ ಅಧಿಕಾರ ಬಿಟ್ಟುಕೊಟ್ಟಾಗ ಆರ್ಥಿಕ ರಂಗ ಸುಸ್ಥಿತಿಯಲ್ಲಿತ್ತು. ಅಭಿವೃದ್ಧಿ ದರ ಎರಡಂಕಿಯ ಸಮೀಪದಲ್ಲಿತ್ತು. ಬೊಕ್ಕಸ ಖಾಲಿಯಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಭಿನ್ನ. ವರ್ಷದ ಆದಿಯಲ್ಲಿಯೇ ಹೇಗೂ ಈ ಬಾರಿ ಮರಳಿ ಅಧಿಕಾರಕ್ಕೆ ಬರುವುದು ಕಷ್ಟವೆಂದರಿತಿದ್ದ ಆಡಳಿತ ಪಕ್ಷ ಜನಪ್ರಿಯ ಯೋಜನೆಗಳಿಗೆ ಬೇಕಾಬಿಟ್ಟಿ ಖರ್ಚು ಮಾಡಿತ್ತು. ಮುಂಗಡ ಪತ್ರದಲ್ಲೂ ಖರ್ಚಿನ ಬಾಬತ್ತುಗಳನ್ನು ಮುಂದಿನ ಸರ್ಕಾರಕ್ಕೆ ವರ್ಗಾಯಿಸಿ, ಆದಾಯವನ್ನು ಚಾಲ್ತಿ ವರ್ಷದಲ್ಲಿಯೇ ತೋರಿಸಿ ಆರ್ಥಿಕ ಸ್ಥಿತಿಯ ರೋಗಗ್ರಸ್ತ ಮುಖವನ್ನು ತೇಪೆ ಹಚ್ಚಿ ಸುಂದರವಾಗಿಸುವ ಪ್ರಯತ್ನ ನಡೆದಿತ್ತು. ಇವೆಲ್ಲವನ್ನೂ ಸಂಭಾಳಿಸಿಕೊಂಡು ಮುಂದಿನ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಈಗಿನ ಸರ್ಕಾರಕ್ಕೆ ಬಂದಿದೆ. ಆದರೆ ಹಿಂದಿನ ಸರ್ಕಾರ ಎದುರಿಸುತ್ತಿದ್ದ ವಿಶ್ವಾಸದ ಕೊರತೆ(ಡ್ಠ್ಡಿಡಡಿ ಜಜಜ್ಝ್ಛ್ಝಿಡಿ)ಯನ್ನು ಸದ್ಯಕ್ಕಂತೂ ಮೋದಿ ಸರ್ಕಾರ ಎದುರಿಸುತ್ತಿಲ್ಲ. ಮಾರುಕಟ್ಟೆಯ ಅಂಕಿ ಸಂಖ್ಯೆಗಳೇ ಈ ಮಾತನ್ನು ಹೇಳುತ್ತಿವೆ. ಮೋದಿಯವರ ಸರ್ಕಾರದಿಂದ ಹಳ್ಳ ಹಿಡಿದಿದ್ದ ಆರ್ಥಿಕತೆಯ ಪುನಶ್ಚೇತನದ ಆಸೆಯನ್ನು ಇಡೀ ದೇಶಿ - ವಿದೇಶಿ ಹೂಡಿಕೆದಾರರು, ಉದ್ದಿಮೆ ರಂಗ, ಎಲ್ಲರೂ ಆಸೆಗಣ್ಣಿನಿಂದ ನೋಡುತ್ತಿವೆ ಎಂಬುದನ್ನು ನಡೆಯುತ್ತಿರುವ ವಿದ್ಯಮಾನಗಳೇ ದೃಢಪಡಿಸುತ್ತಿವೆ. ಪಾತಾಳ ಕಂಡಿದ್ದ ರುಪಾಯಿ ತಲೆಯೆತ್ತುತ್ತಿದೆ. ಚಾಲ್ತಿ ಖಾತೆಯ ಕೊರತೆ ತಹಬಂದಿಗೆ ಬರುತ್ತಿದೆ. ವಿದೇಶಿ ಬಂಡವಾಳ ಷೇರು ಮಾರುಕಟ್ಟೆಯಲ್ಲಿ ಹರಿದು ಬಂದು ವಿದೇಶಿ ವಿನಿಮಯದ ನಿಧಿಯನ್ನು ಬಲಗೊಳಿಸಿದೆ. ಇವೆಲ್ಲವೂ ಒಂದು ಸರ್ಕಾರಕ್ಕೆ ಭರವಸೆಯ ವಾತಾವರಣವನ್ನು ಸೃಷ್ಟಿಸುತ್ತಿವೆ. ತಮ್ಮ ಕನಸಿನ ಯೋಜನೆಗಳನ್ನು ಜಾರಿ ಮಾಡಲು ವಿಶ್ವಸನೀಯ ಪಡೆಯಂತೂ ತಯಾರಾಗುತ್ತಿದೆ. ಚುನಾವಣಾ ರಣತಂತ್ರದಲ್ಲಿ ಇಂತಹ ಪಡೆಯ ಚಿಕಿತ್ಸಕ ಕಾರ್ಯಕ್ಷಮತೆಯನ್ನು ಕಂಡವರಿಗೆ ವಿಶ್ವಾಸ ಮೂಡುವುದು ಖಂಡಿತಾ.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸ್ವರ್ಗ ಸೃಷ್ಟಿ ಮಾಡಲು ಮೋದಿಯವರ ಬಳಿ ಮಂತ್ರದಂಡವೂ ಇಲ್ಲ ಅವರು ಮಾಂತ್ರಿಕನೂ ಅಲ್ಲ ಎಂಬುದನ್ನು ನಾವು ಅರಿತಿರಬೇಕು. ಆದರೆ ಪರಿಸ್ಥಿತಿಯನ್ನು ಸುಧಾರಣೆ ಮಾಡಲು ಒಬ್ಬ ಆಡಳಿತಗಾರನಲ್ಲಿರಬೇಕಾದ ಇಚ್ಛಾಶಕ್ತಿ ಅವರಲ್ಲಿದೆ. ಭೀಕರ ಭೂಕಂಪಕ್ಕೆ ತುತ್ತಾಗಿದ್ದ ಸಮಯದಲ್ಲಿ ಗುಜರಾತ್ನ್ನು ಕೈಹಿಡಿದು ಮುನ್ನಡೆಸಿದ ಯಶೋಗಾಥೆಯ ಹಿನ್ನೆಲೆಯಿರುವ ಮೋದಿಯವರಿಗೆ ಇಂದಿನ ಆರ್ಥಿಕ ಪರಿಸ್ಥಿತಿ ಸವಾಲುಗಳನ್ನು ಎಸೆಯಬಹುದು ಆದರೆ ಧೃತಿಗೆಡಿಸಲಾರದು. ಈ ವರ್ಷದ ಆದಿಯಲ್ಲಿ ಅವರು ಬಿಜೆಪಿಯ ಕಾರ್ಯಕಾರಿ ಸಮಿತಿ ಸಭೆ ಬಳಿಕ ಮಾಡಿದ ಭಾಷಣದಲ್ಲಿ ಅವರ ಆರ್ಥಿಕ ದೃಷ್ಟಿಕೋನದ ಸ್ಪಷ್ಟ ಸೂಚನೆಗಳಿದ್ದವು. ನದಿಗಳ ಜೋಡಣೆಯಿರಬಹುದು, ಮಹಾನಗರಗಳನ್ನು ಬೆಸೆಯುವ ಬುಲೆಟ್ ಟ್ರೇನ್ ಇರಬಹುದು, ಕೃಷಿ ಭೂಮಿ ನಿರ್ವಹಣೆ ಇರಬಹುದು, ನೂರು ಸುಂದರ ನಗರಗಳ ನಿರ್ಮಾಣ, ಸೌರಶಕ್ತಿಯ ಸದ್ಬಳಕೆ, ದೇಶವ್ಯಾಪಿ ಬ್ರಾಡ್ಬ್ಯಾಂಡ್ ವಿಸ್ತರಣೆ, ಸಂಪರ್ಕ ವ್ಯವಸ್ಥೆ ಸುಧಾರಣೆ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿ ಹೀಗೆ ಹತ್ತು ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಅವರೇ ಹೇಳಿದಂತೆ ಇವು ಅವರೊಬ್ಬರಿಂದ ಆಗುವ ಕೆಲಸವಲ್ಲ. ಅವರ ಮಹತ್ವಾಕಾಂಕ್ಷಿ ಪಿ.ಎಂ-ಸಿ.ಎಂ. ಸಮ್ಮಿಲನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದು ಕಾದು ನೋಡಬೇಕು. ರಾಜಕೀಯದ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಪಕ್ಷಾತೀತವಾಗಿ ಇತರರು ಈ ಅಭಿಯಾನದಲ್ಲಿ ಕೈಜೋಡಿಸಿಯಾರೇ ಎಂಬುದು ಪ್ರಶ್ನೆ.
ಹಾಗೆ ನೋಡಿದರೆ ಆರ್ಥಿಕ ನೀತಿಗಳಲ್ಲಿ ಎಡರಂಗದವರು ಆಪಾದಿಸುವಂತೆ ಯುಪಿಎ ಮತ್ತು ಬಿಜೆಪಿಯಲ್ಲಿ ಅಂತಹ ಭಿನ್ನಾಭಿಪ್ರಾಯಗಳೇನಿರಲಿಲ್ಲ. ಅವುಗಳ ಅನುಷ್ಠಾನದಲ್ಲಿಯೇ ಎಡವಟ್ಟಾಗಿದ್ದು. ಔಜಡಡ ಎ್ಟಢಜ್ಠಟಿಟಜಟಿಡಿ ಂ್ಟ್ಠಜ ಎ್ಟಢಜ್ಠಟಿಛಟ್ಛಿಜ ಎಂಬ ಮೋದಿಯವರ ಘೋಷವಾಕ್ಯ ಯಾವರೀತಿಯಲ್ಲಿ ಜಾರಿಗೆ ಬಂದೀತು ಎನ್ನುವುದು ಎಲ್ಲರ ಕುತೂಹಲ. ವಿದೇಶಿ ಸಂಸ್ಥೆಗಳಿಂದ ಬಹು ಟೀಕೆಗೊಳಗಾಗಿರುವ ಪೂರ್ವಭಾವಿ ತೆರಿಗೆ ನೀತಿ, ಆಡಳಿತಾತ್ಮಕ ಮಂಜೂರಿಯ ಅಡೆತಡೆಗಳು, ಕಾನೂನಾತ್ಮಕ ಅಡಚಣೆಗಳು ಇವೆಲ್ಲವನ್ನೂ ಸರಳಗೊಳಿಸಿ ವಿದೇಶಿ ಹೂಡಿಕೆದಾರರ ವಿಶ್ವಾಸವನ್ನು ಮರಳಿಸುವುದು ಮೋದಿಯವರ ಪ್ರಥಮ ಆದ್ಯತೆ. ವಿತ್ತೀಯ ಕೊರತೆಯನ್ನು ಹತೋಟಿಯಲ್ಲಿಟ್ಟು ತನ್ಮೂಲಕ ಕಾರಣವಾಗಬಹುದಾದ ಬೆಲೆ ಏರಿಕೆಯನ್ನು ಹತೋಟಿಯಲ್ಲಿಡುವುದು. ಬೆಲೆ ಏರಿಕೆ ತಡೆಗೆ ಸ್ಥಾಪಿಸಬಹುದಾದ ಆವರ್ತ ನಿಧಿ ಯೋಜನೆ ಇವೆಲ್ಲಾ ಎಷ್ಟರಮಟ್ಟಿಗೆ ಕಾರ್ಯಸಾಧುವಾಗಬಲ್ಲದು ಎಂಬುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಸರ್ಕಾರದ ಸಹಾಯ ಧನ ನೀಡಿಕೆಯಲ್ಲಿ ಏಕ ರೂಪತೆ ಹಾಗೂ ಪಾರದರ್ಶಕತೆ, ರಾಜ್ಯಗಳೊಂದಿಗೆ ಸಂಪನ್ಮೂಲ ಹಂಚಿಕೆಯ ವ್ಯವಸ್ಥೆಯಲ್ಲಿನ ಅಸಮತೋಲನ ನಿವಾರಣೆ, ಕೇಂದ್ರ -ರಾಜ್ಯ ಸಂಬಂಧಗಳನ್ನು ಸುಧಾರಿಸಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬಹುದು. ಉದ್ದಿಮೆಗಳಿಗೆ ಕೊಡಮಾಡುವ ಭೂಮಿ ನೀಡಿಕೆ ವಿಷಯ ಹಾಗೂ ವಿಶೇಷ ಆರ್ಥಿಕ ವಲಯದ ವಿಚಾರದಲ್ಲಿನ ಪಾರದರ್ಶಕತೆ ಸರ್ಕಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬಲ್ಲದು. ಹಣಕಾಸು- ವಾಣಿಜ್ಯ ರಂಗದ ಸರ್ಕಾರದ ನೀತಿ ನಿರೂಪಣೆ- ಜಾರಿ ವಿಷಯದಲ್ಲಿ ಕಾರ್ಪೊರೇಟ್ ವಲಯದ ಹಸ್ತಕ್ಷೇಪದ ವಿಚಾರದಲ್ಲಿ ಸರ್ಕಾರ ಎಚ್ಚರದಿಂದ ಇರುವುದು ಒಳಿತು. ಹಣಕಾಸು ಖಾತೆಗೆ ಈಗ ಕೇಳಿ ಬರುತ್ತಿರುವ ಅರುಣ್ ಶೌರಿಯವರಂತಹ ನಿಷ್ಕಳಂಕ ವ್ಯಕ್ತಿತ್ವ ಸರ್ಕಾರವನ್ನು ಇಂತಹ ಅಪಾದನೆಗಳಿಂದ ಮುಕ್ತಗೊಳಿಸಬಲ್ಲದು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ, ಗೋದಾಮು, ಶೈತ್ಯಾಗಾರ ವ್ಯವಸ್ಥೆ, ಮಧ್ಯವರ್ತಿಗಳ ಶೋಷಣೆಯಿಂದ ಪಾರುಮಾಡುವಲ್ಲಿ ಸರ್ಕಾರದ ಉದ್ದೇಶಿತ ನೀತಿಗಳು ಎಷ್ಟರ ಮಟ್ಟಿಗೆ ಸಫಲವಾಗುವುವು ಎಂಬುದನ್ನು ಕಾದು ನೋಡಬೇಕು. ಹಣಕಾಸು ಸಂಸ್ಥೆಗಳಲ್ಲಿನ ಅನುತ್ಪಾದಕ ಆಸ್ತಿಯ ನಿರ್ವಹಣೆ- ನಿಯಂತ್ರಣದ ವಿಷಯದಲ್ಲಿ ರಿಸರ್ವ್ ಬ್ಯಾಂಕಿನೊಡನೆ ಸೂಕ್ತವಾಗಿ ಸ್ಪಂದಿಸಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬಹುಚರ್ಚಿತವಾಗಿದ್ದ ಕಪ್ಪುಹಣದ ಬಗ್ಗೆ ಸರ್ಕಾರ ತನ್ನ ನೀತಿಯನ್ನು ಬರುವ ಮುಂಗಡ ಪತ್ರದಲ್ಲಿ ಬಹಿರಂಗಗೊಳಿಸಬಹುದು. ವಿದೇಶಿ ಮೂಲದ ಹಣದ ಬಗೆಗೂ ಒಂದು ಕ್ರಾಂತಿಕಾರಿ ಕ್ರಮವನ್ನು ಘೋಷಿಸಿ ಜಾರಿಗೊಳಿಸುವ ಅವಶ್ಯಕತೆ ಇದೆ. ನಗರಗಳಿಗೆ ವಲಸೆ ತಪ್ಪಿಸಿ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿಸಲು ಕೃಷಿಗೆ ಉತ್ತೇಜನ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ, ಉನ್ನತ ಶಿಕ್ಷಣ ಕೇಂದ್ರಗಳ ವಿಕೇಂದ್ರಿಕರಣದಂತಹ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಶಿಕ್ಷಣರಂಗದಲ್ಲಿ ಅಮೂಲಾಗ್ರ ಬದಲಾವಣೆ ತಂದು ಗ್ರಾಮೀಣ ಕುಶಲ ಕರ್ಮದ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ಮಾನವ ಸಂಪನ್ಮೂಲದ ಸದ್ಬಳಕೆ, ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವುದರ ಜೊತೆಗೆ ಅವನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಳಸುವುದರ ಬಗ್ಗೆ ಯೋಚಿಸುವ ಅವಶ್ಯಕತೆ ಇದೆ. ಠೇವಣಿದಾರರ ಹಿತ ರಕ್ಷಿಸುವ ಜೊತೆಯಲ್ಲಿಯೇ ಉದ್ದಿಮೆದಾರರಿಗೆ ಹೊರೆಯಾಗದ ರೀತಿಯಲ್ಲಿ ಬಡ್ಡಿ ದರಗಳ ಪರಿಷ್ಕರಣೆ, ಈ ನಿಟ್ಟಿನಲ್ಲಿ ಆರ್ಬಿಐನೊಂದಿಗೆ ಸಹಯೋಗ ಅಗತ್ಯ.
ಕೃಷಿರಂಗದ ಪುನಶ್ಚೇತನದೊಂದಿಗೆ ಈ ದೇಶದ ರೈತನಲ್ಲಿ ಮತ್ತೆ ವಿಶ್ವಾಸ ಮೂಡಿಸಬೇಕಾಗಿದೆ. ಭಾರತೀಯ ರೈಲಿನ ಅಗಾಧ ಸಂಪನ್ಮೂಲಗಳನ್ನು ಯಥೋಚಿತವಾಗಿ ಬಳಸುವುದರ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಪ್ರಗತಿಯ ಹೊಸಭಾಷ್ಯ ಬರೆಯಬೇಕಾಗಿದೆ. ಕೊಂಕಣ ರೈಲಿನ ಯೋಜನೆಯನ್ನು ಯಶಸ್ವಿಯಾಗಿಸಿದ ಶ್ರೀಧರನ್ ಅವರನ್ನು ತೊಡಗಿಸಿಕೊಳ್ಳುವುದರ ಬಗೆಗೆ ಮೋದಿ ತಂಡ ಗಂಭೀರವಾಗಿ ಯೋಚಿಸುತ್ತಿದೆ ಎಂಬುದು ಶುಭಸೂಚನೆ. ದೇಶದ ಸಮಗ್ರ ಅಭಿವೃದ್ಧಿಗೆ ಎಲ್ಲಾ ರಾಜಕೀಯ ಪಕ್ಷಗಳ, ಕೇಂದ್ರ -ರಾಜ್ಯ ಸರ್ಕಾರಗಳ ಸಹಯೋಗ ಸಹಕಾರ, ಸಮಷ್ಟಿ ಹಿತಚಿಂತನೆ ಖಂಡಿತವಾಗಿಯೂ ಒಳ್ಳೆಯ ಫಲ ನೀಡಬಲ್ಲದು. ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳಲ್ಲಿನ ಸಾಮರಸ್ಯ, ಜಪಾನ್, ಕೊರಿಯನ್ ಗಣರಾಜ್ಯ, ಇರಾನ್ನಂತಹ ದೇಶದೊಂದಿಗಿನ ವಾಣಿಜ್ಯ ಒಕ್ಕೂಟ ರಚನೆ ಪಾಶ್ಚಿಮಾತ್ಯ ದೇಶಗಳಿಗೆ ಸವಾಲೆಸೆದು ರುಪಾಯಿ ಬೆಲೆಯನ್ನು ಹತೋಟಿಗಿಡಬಲ್ಲದು. ಎಲ್ನಿನೋ ಪ್ರಭಾವದಿಂದಾಗಿ ಉಂಟಾಗಬಲ್ಲಂತಹ ಹವಾಮಾನ ವೈಪರಿತ್ಯ ಪ್ರಾಕೃತಿಕ ವಿಕೋಪಗಳು ಸರ್ಕಾರವನ್ನು ನಿಜಕ್ಕೂ ಸಂಕಷ್ಟಕ್ಕೆ ಈಡು ಮಾಡಬಲ್ಲದು. ಒಟ್ಟಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿನ ಜಡತೆಯನ್ನು ಕೊಡವಿ ಹೊಸ ಯುಗದ ನಾಂದಿ ಹಾಡಬೇಕಿದೆ. ಸರ್ಕಾರದ ನೀತಿ ನಿರ್ಧಾರಗಳಲ್ಲಿನ ವಿಳಂಬನಾತ್ಮಕ ಧೋರಣೆಗಳಿಗೆ ಅವಕಾಶವಿಲ್ಲದೆ, ಯೋಜನೆಗಳ ಲಾಭ ಜನರನ್ನು ತ್ವರಿತವಾಗಿ ತಲುಪುವ ವ್ಯವಸ್ಥೆ ಸರ್ಕಾರದ ಬಗೆಗೆ ಜನರ ವಿಶ್ವಾಸವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ. ಯುವ ಜನರ ಆಶೋತ್ತರಗಳ ಕನಸನ್ನು ನನಸಾಗಿಸುವ ಗುರುತರ ಹೊಣೆ ತಮ್ಮ ಮೇಲಿದೆ ಎಂಬುದು ಮೋದಿಯವರಿಗೆ ತಿಳಿದಿದೆ. ಮತದಾರ ಪ್ರಭುವಿನ ಋಣ ತೀರಿಸಲು ಈ ಸದವಕಾಶವನ್ನು ಬಳಸಿಕೊಂಡು ತಮ್ಮ ಗುಜರಾತಿನ ಯಶಸ್ಸನ್ನು ಪುನರಾವರ್ತಿಸಲಿ ಎಂಬುದೇ ಎಲ್ಲರ ಹಾರೈಕೆ.
-ಅ.ಸು. ರವೀಂದ್ರ, ಶಿವಮೊಗ್ಗ