ಹೆಂಗ್ಹೆಂಗೆಲ್ಲ ಮೆರೆದವರು
ಈಗೇನಾಗಿದ್ದಾರೆ?
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಲಕ್ಷಣಗಳು ಕಾಣುತ್ತಿದ್ದಂತೆಯೇ ಜೆಡಿಯು ಪಕ್ಷವು ಎನ್ಡಿಎ ಸಖ್ಯವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತೊರೆಯಿತು. ಎಲ್ಲರೂ ಆಗ ಮೋದಿಯವರಿಗೆ ಮಿತ್ರರನ್ನು ಉಳಿಸಿಕೊಳ್ಳುವ, ಸೆಳೆಯುವ ಶಕ್ತಿ ಇಲ್ಲ ಎಂದೇ ವಿಶ್ಲೇಷಿಸಿದರು.
ಎಲ್ಲದರ ನಡುವೆಯೇ ಸಮರ್ಥ ನಾಯಕತ್ವದ ಕೊರತೆಯನ್ನು 2014ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ನೀಗಿಸಿದ್ದರಿಂದ ಬಿಜೆಪಿ ಪಕ್ಷವು ಮಿಶನ್ 272 ಪ್ಲಸ್ ಅನ್ನು ದಾಟಿತು. ಜೆಡಿಯು ಪಕ್ಷವು ನೆಲ ಕಚ್ಚಿತು. ಇದರ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತಿದ್ದೇನೋ ಸರಿಯಾಯಿತು. ಮೇಲ್ನೋಟಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವವರೇ ವಿರಳವಾದ್ದರಿಂದ ಇದೊಂದು ಅಪರೂಪದ ನಡೆ ಎನಿಸಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಇದು ರಾಜಕೀಯ ಲೆಕ್ಕಾಚಾರಗಳಿಂದ ಮುಕ್ತವಾಗಿಲ್ಲ. ಬಿಹಾರದಲ್ಲಿ ಹೀನಾಯ ಸಾಧನೆಗೆ ತಮ್ಮತ್ತ ತಿರುಗುತ್ತಿದ್ದ ಪಕ್ಷದ ಆಕ್ರೋಶವನ್ನು ರಾಜಿನಾಮೆ ಮೂಲಕ ತಿರುಗಿಸಿಕೊಂಡ ನಿತೀಶ್, ತಾವೇ ಸೃಷ್ಟಿಸಿದ 'ಮಹಾದಲಿತ' ವರ್ಗಕ್ಕೆ ಸೇರಿದ ಜಿತನ್ ರಾಮ ಮಾಜ್ಹಿ ಅವರನ್ನು ಮುಖ್ಯಮಂತ್ರಿಯಾಗಿಸಿದ್ದಾರೆ. ಈ ಮೂಲಕ ಸೋನಿಯಾ ಪರಿವಾರದಂತೆ ತಾವೂ ರಿಮೋಟ್ ಕಂಟ್ರೋಲ್ ಹಿಡಿದಿರುವುದಲ್ಲದೇ, ಪ್ರಧಾನಿ ಮೋದಿಯವರನ್ನು ನಾನಾ ಸಂದರ್ಭಗಳಲ್ಲಿ ಭೇಟಿ ಮಾಡಬೇಕಾದ ಸ್ಥಿತಿಯಿಂದ ತಪ್ಪಿಸಿಕೊಂಡಿದ್ದಾರೆ. ಅಂತೂ ಮೋದಿಯವರು ಪ್ರಧಾನಿ ಪಟ್ಟಕ್ಕೇರುವುದನ್ನು ಸಹಿಸಲಾರದೆ ಎನ್ಡಿಎ ಬಿಟ್ಟು ಹೋಗಿ ಅದನ್ನು ದುರ್ಬಲ ಮಾಡಿ ಅವರು ಪ್ರಧಾನಿಯಾಗದಂತೆ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಜನಶಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ ಎಂಬುದು ಈ ಚುನಾವಣೆಯಿಂದು ಮತ್ತಷ್ಟು ಗಟ್ಟಿಯಾಯಿತು. ಇದೇ ಮತದಾರರು ಮೋದಿಯವರು ಶುದ್ಧ ಆಡಳಿತ ನೀಡದಿದ್ದಲ್ಲಿ ಕೆಳಗಿಳಿಸಲೂ ಹಿಂದು ಮುಂದು ನೋಡುವುದಿಲ್ಲ.
ಮೋದಿಯವರು ಪ್ರಧಾನಿಯಾಗುವುದನ್ನು ತಡೆಯುವುದಾಗಿ ಆರ್ಜೆಡಿ ಮುಖ್ಯಸ್ಥ ಪಣತೊಟ್ಟಿದ್ದರು. ಇದಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರೂ ಬೆಂಬಲ ಸೂಚಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋದಿಯವರ ಆಟ ಇಲ್ಲಿ ನಡೆಯುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದರು. ನಿಂದನೆಯ ಪದಗಳನ್ನೂ ಉಪಯೋಗಿಸಿದ್ದರು. 'ಮೋದಿಯವರೂ ನನ್ನಂತೆ ಒಬ್ಬ ಮುಖ್ಯಮಂತ್ರಿ. ಅವರೇನೂ ದೇವಲೋಕದಿಂದ ಇಳಿದು ಬಂದಿಲ್ಲ' ಎಂದು ಹೇಳಿದ್ದರು. ಮೋದಿಯವರೂ ನನ್ನಂತೆ ಪ್ರಧಾನಿಯಾಗಿದ್ದರು ಎಂಬುವ ಕಾಲ ಸಿದ್ದರಾಮಯನ್ಯನವರಿಗೆ ಬರಲಿ ಸಂತೋಷ. ಆದರೆ ಕಾಂಗ್ರೆಸ್ನಲ್ಲಿದ್ದರೆ ಸೋನಿಯಾ ಕುಟುಂಬ ಅದಕ್ಕೆ ಅವಕಾಶ ನೀಡುವುದಿಲ್ಲ. ಜೆಡಿಎಸ್ನಲ್ಲಿದ್ದರೆ ದೇವೇಗೌಡರ ಕುಟುಂಬ ಅದಕ್ಕೆ ಅವಕಾಶ ಕೊಡುವುದಿಲ್ಲ. ಬಿಜೆಪಿ ಯಾರ ಸ್ವತ್ತೂ ಆಗದಿರುವುದರಿಂದ ದಕ್ಷರು ಯಾರೇ ಆದರೂ ಪ್ರಧಾನಿಯಾಗಬಹುದು ಎಂಬುದಕ್ಕೆ ಮೋದಿಯವರೇ ಸಾಕ್ಷಿ.
ಮೋದಿಯವರು ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದ್ದರೆ ಬೇರೆ ಪಕ್ಷದವರಾರೂ ಆ ಕೆಲಸ ಮಾಡಲಿಲ್ಲ. ಮೋದಿಯನ್ನು ಪ್ರಧಾನಿ ಆಗದಂತೆ ತಡೆಯುವುದೊಂದೇ ಇವರೆಲ್ಲರ ಮಂತ್ರವಾಗಿತ್ತು. ಜನತೆ ಇದನ್ನೆಲ್ಲಾ ಚೆನ್ನಾಗಿ ಅರ್ಥ ಮಾಡಿಕೊಂಡು ಬಿಜೆಪಿಗೆ ಒಳ್ಳೆಯ ಬಹುಮತವನ್ನೇ ಕೊಟ್ಟು ಕಳುಹಿಸಿದರು.
ಇನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಯು.ಆರ್. ಅನಂತಮೂರ್ತಿಯವರು ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುವುದಾಗಿ ಶಪಥ ಮಾಡಿದ್ದರು. ದೇವೇಗೌಡರು ಕರ್ನಾಟಕವನ್ನು ಬಿಡುವುದಾಗಿ ಶಪಥ ಮಾಡಿದ್ದರು. ಅಮರ್ತ್ಯ ಸೇನ್ ಅವರು ಮೋದಿಯವರು ಪ್ರಧಾನಿಯಾಗುವುದನ್ನು ತಾವು ಒಪ್ಪುವುದಿಲ್ಲವೆಂದು ಹೇಳಿದ್ದರು. ಯಾರೇ ಪ್ರಧಾನಿಯಾಗಬೇಕಾದರೂ ಬಹುಸಂಖ್ಯಾತ ಮತದಾರರ ಒಪ್ಪಿಗೆ ಇದ್ದರೆ ಸಾಕು ಎಂಬ ಸರಳ ಅಂಶವನ್ನು ಅತಿರಥ ಮಹಾರಥರೆಲ್ಲಾ ಮರೆತರು.
ಈಗ ಪ್ರಧಾನಿ ಪಟ್ಟಕ್ಕೇರುತ್ತಿರುವ ಮೋದಿಯವರು ಶುದ್ಧ ಆಡಳಿತವನ್ನು ನೀಡಿದಲ್ಲಿ ಈ ಚುನಾವಣೆಯೇ ಏಕೆ ಮುಂಬರುವ ಚುನಾವಣೆಗಳಲ್ಲೂ ಅವರೇ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಮೋದಿ ವಿರೋಧಿಗಳೆಲ್ಲ ಮೋದಿಯವರು ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿ ಪ್ರಧಾನಿಯಾಗಿ ಮುಂದುವರಿಯುವುದನ್ನು ತಡೆಯುವುದಕ್ಕೆ ಈಗಿನಿಂದಲೇ ರೂಪು ರೇಖೆಗಳನ್ನು ಹಾಕಿಕೊಳ್ಳಬೇಕು. ಆದರೆ ಮೋದಿಯವರು ಸ್ವಚ್ಛ ಆಡಳಿತವನ್ನು ನೀಡಿದಲ್ಲಿ ಅವರ ನಾಯಕತ್ವವನ್ನೇ ಜನರು ಬಯಸುತ್ತಾರೆ. ಜನರಿಗೆ ಯಾರು ಪ್ರಧಾನಿಯಾದರೇನು? ಅವರಿಗೆ ಬೇಕಾದದ್ದು ಅಗ್ಗದ ದರದಲ್ಲಿ ಪದಾರ್ಥಗಳು ಮತ್ತು ಸೇವೆಗಳು ದೊರೆಯಬೇಕಷ್ಟೆ. ಎರಡು ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ, ನೀರಿನ ಶುಲ್ಕ ಮತ್ತು ಬಸ್ ಪ್ರಯಾಣದ ದರ ಏರಿಸುವಂತಹ ಯಾವುದೇ ಪಕ್ಷವೂ ಬೇಡ.
-ಕೆ.ವಿ. ಸೀತಾರಾಮಯ್ಯ, ಹಾಸನ