ಅಂಕಣಗಳು

ಹತ್ತು ವರ್ಷ ಸರ್ಕಾರವಿರಲಿಲ್ಲ, ಇನ್ನೈದು ವರ್ಷ ಪ್ರತಿಪಕ್ಷವೇ ಇರಲ್ಲ!

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ನಾನೊಂದು ಟ್ವೀಟ್ ಮಾಡಿದ್ದೆ...

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ನಾನೊಂದು ಟ್ವೀಟ್ ಮಾಡಿದ್ದೆ - 'ಭಾರತ ನಿಜಕ್ಕೂ ವಿಚಿತ್ರವಾದ ದೇಶ. ಕಳೆದ ಹತ್ತು ವರ್ಷ ಈ ದೇಶದಲ್ಲಿ ಸರಕಾರವೇ ಇರಲಿಲ್ಲ. ಮುಂದಿನ ಐದು ವರ್ಷ ಈ ದೇಶದಲ್ಲಿ ಪ್ರತಿಪಕ್ಷವೇ ಇರುವುದಿಲ್ಲ.' ಖಂಡಿತವಾಗಿಯೂ ಈ ಮಾತು ಎಷ್ಟು ಸತ್ಯ ಎಂದೆನಿಸುತ್ತಿದೆ.
ಹೌದು,  ಭಾರತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮೋದಿ ಗೆಲುವಿನ ಮೈಲುಗಲ್ಲು ನೆಟ್ಟಿದ್ದಾರೆ, ಇತಿಹಾಸ ಸೃಷ್ಟಿಸಿದ್ದಾರೆ. ಬಿಜೆಪಿ ಈ ಪರಿ ಸ್ಥಾನಗಳನ್ನು ಕೊಳ್ಳೆ ಹೊಡೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಬೇರೆಯವರ ಮಾತು ಒತ್ತಟ್ಟಿಗಿರಲಿ, ಬಿಜೆಪಿಯಾಯ್ತು, ಸಂಘ ಪರಿವಾರವಾಯ್ತೂ ಯಾರಿಗೂ ಈ ಪ್ರಮಾಣದ ಕಲ್ಪನೆಯೇ ಇರಲಿಲ್ಲ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಸ್ವತಃ ಮೋದಿ ಅವರಿಗೆ ಇಷ್ಟು ಸ್ಥಾನಗಳು ಬರುತ್ತವೆ ಎಂಬ ಊಹೆ ಇರಲಿಲ್ಲ. ಬಿಜೆಪಿಗೆ ಬಂದಿರುವ ಅಭೂತಪೂರ್ವ ಗೆಲವು ಮೋದಿ ಅವರಿಗೂ ಮೈಲ್ಡ್ ಹಾರ್ಟ್ ಅಟ್ಯಾಕ್ ತಂದಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಚುನಾವಣೆ ಪೂರ್ವದಲ್ಲಿ ಯಾರನ್ನೇ ಕೇಳಿದರೂ ಮೋದಿ ಪ್ರಧಾನಿ ಆಗ್ತಾರೆ ಅಂತ ಎಲ್ಲರೂ ಹೇಳ್ತಿದ್ರು. ಹೇಗೆ ಎಂದು ಪ್ರಶ್ನಿಸಿದಾಗ ಮಾತ್ರ ಯಾರ ಬಳಿಯೂ ಉತ್ತರವಿರಲಿಲ್ಲ. ಬಿಜೆಪಿ ಎಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದೆ? ಉತ್ತರ ಪ್ರದೇಶದಲ್ಲಿ ಇದೆಯಾ ಅಂದರೆ ಇಲ್ಲ ಎಂಬ ಉತ್ತರ. ಮಹಾರಾಷ್ಟ್ರದಲ್ಲಿ, ಆಂಧ್ರದಲ್ಲಿ, ಪಶ್ಚಿಮ ಬಂಗಾಳದಲ್ಲಿ, ತಮಿಳುನಾಡಲ್ಲಿ, ಕರ್ನಾಟಕದಲ್ಲಿ, ಕೇರಳದಲ್ಲಿ, ಬಿಹಾರದಲ್ಲಿ, ಒಡಿಶಾದಲ್ಲಿ, ದೆಹಲಿಯಲ್ಲಿ, ಹರ್ಯಾಣದಲ್ಲಿ, ಹಿಮಾಚಲದಲ್ಲಿ? ಊಹುಂ... ಹೀಗೆ ದೇಶದ ಉದ್ದಗಲಕ್ಕೂ ದುರ್ಬೀನು ಹಾಕಿಕೊಂಡು ಹೋದಲ್ಲೆಲ್ಲ ಇದ್ದದ್ದು ಬರೀ ಕಾಂಗ್ರೆಸ್ಸೇತರ ಸರಕಾರಗಳೇ. ಹೀಗಾಗಿ ಬಿಜೆಪಿ ಸ್ವಂತ ಬಲದಿಂದ 160 ರಿಂದ 180 ಸೀಟುಗಳನ್ನಷ್ಟೇ ಗೆಲ್ಲಬಹುದು ಎಂಬ ಸಮಜಾಯಿಷಿಗೆ ಪ್ರಶ್ನೆ ಹಾಕಿದವರು ಹಾಗೂ ಉತ್ತರ ಕೊಡಬೇಕಾದವರು ಇಬ್ಬರು ಬಂದು ನಿಲ್ಲುತ್ತಿದ್ದರು. ಅಲ್ಲಿಗೆ ಮೋದಿ ಪ್ರಧಾನಿ ಆಗುತ್ತಾರೆ ಎಂಬ ಆಸೆ ಮತ್ತು ಆಶಯಕ್ಕೆ ತರ್ಕಬದ್ಧ ಉತ್ತರ ಸಿಗುತ್ತಿರಲಿಲ್ಲ.
ಹಾಗಾದರೆ ಮೋದಿ ಪ್ರಧಾನಿ ಆಗುವುದು ಹೇಗೆ? ಎನ್ಡಿಎ ಅಂದ್ರೆ ಪ್ರಮುಖವಾಗಿ ಬಿಜೆಪಿ, ತೆಲುಗು ದೇಶಂ, ಅಕಾಲಿದಳ, ಶಿವಸೇನೆ. ಇಷ್ಟನ್ನು ಇಟ್ಟುಕೊಂಡು 272 ಸೀಟುಗಳನ್ನು ಹೇಗೆ ಗೆಲ್ಲುತ್ತಾರೆ? ಅದ್ಯಾವ ಮ್ಯಾಜಿಕ್ ಮಾಡುತ್ತಾರೆ? ಅಂತ ಇನ್ನೂ ಒಂದಷ್ಟು ಲೆಕ್ಕಾಚಾರ ಹಾಕುತ್ತಾ ಹೋದರೂ ಎಲ್ಲೆಲ್ಲೂ ಬರೀ ನಕಾರಾತ್ಮಕ ಅಂಶಗಳೇ ಪ್ರಧಾನವಾಗಿ ರಾಚುತ್ತಿದ್ದವು. ತಮಿಳುನಾಡಲ್ಲಿ ಜಯಲಲಿತಾ ಬೆಂಬಲ ಇದೆಯಾ ಇಲ್ಲ, ಬಿಹಾರದಲ್ಲಿ ಜೆಡಿ (ಯು) ಬೆಂಬಲ ಇದೆಯಾ ಇಲ್ಲ, ರಾಷ್ಟ್ರೀಯ ಲೋಕದಳ, ಆಮ್ ಆದ್ಮಿ ಪಾರ್ಟಿ, ಶರದ್ ಪವಾರ್ ಎನ್ಸಿಪಿ, ಕರುಣಾನಿಧಿ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದಲ್ಲಿ ಮಾಯಾವತಿ, ಜಮ್ಮ ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ, ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಬೆಂಬಲ ಇದೆಯಾ? ಇಲ್ಲ, ಇಲ್ಲ, ಇಲ್ಲ. ಹೀಗೆ ಬರೀ ಇಲ್ಲಗಳ ನಡುವೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಮೋದಿ ಪ್ರಧಾನಿ ಆಗುತ್ತಾರೆ ಅನ್ನೋದು ಬರೀ ಕನಸಿನ ಮಾತು ಎಂದು ಎಲ್ಲರೂ ಮಾತು ಮುಗಿಸುತ್ತಿದ್ದರು.
ಆದರೆ, ಕೊನೆಗೆ ಆದದ್ದಾದರೂ ಏನು? ಬಿಜೆಪಿ ಒಟ್ಟಾರೆ ಸ್ಪರ್ಧಿಸಿದ್ದು 357 ಸ್ಥಾನಗಳಲ್ಲಿ ಅದರಲ್ಲಿ ಅದು ಗೆದ್ದದ್ದು 283ರಲ್ಲಿ. ಇದನ್ನು ಬೇರೆಯವರಲ್ಲ, ಸ್ವತಃ ಆ ಪಕ್ಷವೇ ಊಹೆ ಮಾಡಿರಲಿಲ್ಲ. ಫಲಿತಾಂಶ ಹೊರಬಿದ್ದಾಗ ಬಿಜೆಪಿಯೇ ಒಮ್ಮೆ ಮೈ ಚಿವುಟಿ ನೋಡಿಕೊಂಡಿದ್ದರೆ ಅಚ್ಚರಿಯೇನೂ ಇಲ್ಲ.
ಹಾಗಾದರೆ ಈ ಜಾದೂ ಫಲಿತಾಂಶ ಏನನ್ನು ಸೂಚಿಸುತ್ತದೆ? ಏನಿದರ ಅರ್ಥ? ಯಾರಿದರ ಕರ್ತ? ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚೆಂದರೆ 42 ರಿಂದ 50 ಸೀಟುಗಳು ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು, ಹಾಗೆಯೇ ಎಲ್ಲ ಚುನಾವಣೋತ್ತರ ಫಲಿತಾಂಶಗಳು ಇದನ್ನೇ ಬಿಂಬಿಸಿದ್ದವು, ಅನುಮೋದಿಸಿದ್ದವು. ಆದರೆ ಆದದ್ದು ಏನು? ದಿಲ್ಲಿಯಲ್ಲಿ ಕ್ಲೀನ್ ಸ್ವೀಪ್. ಗುಜರಾತ್ನಲ್ಲಿ ಬೇರೆಯವರನ್ನು ಡೆಟಲ್ ಹಾಕಿ ತೊಳೆದುಬಿಟ್ಟಿದೆ.  ಜಾರ್ಖಂಡ್, ಛತ್ತೀಸಗಢ, ಉತ್ತರಾಂಚಲ, ರಾಜಸ್ಥಾನದಲ್ಲಿ ಬೇರೆಯವರಿಗೆ ಉಪ್ಪಿನಕಾಯಿಯನ್ನೂ ಬಿಡದಂತೆ ಬಿಜೆಪಿ ಅಚ್ಚುಕಟ್ಟಾಗಿ ಬಾಳೆಎಲೆಯನ್ನು ಬಳಿದು ತಿಂದು ಹಾಕಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಗೆ ಬಂದಿರುವ ಐದು ಸ್ಥಾನಗಳೂ ಮುಲಾಯಂ ಕುಟುಂಬಕ್ಕೆ ಮಾತ್ರ ಸೀಮಿತ. ಎರಡು ಕಡೆ ಮುಲಾಯಂ. ಒಂದು ಕಡೆ ಸೊಸೆ, ಮತ್ತೊಂದು ಕಡೆ ತಮ್ಮ, ಇನ್ನೊಂದು ಕಡೆ ತಮ್ಮನ ಮಗ. ಅಲ್ಲಿಗೆ ಮುಗಿಯಿತು ಸಮಾಜವಾದಿ ಪಕ್ಷದ ಸಮಾಧಿ. ಇನ್ನು ಕಾಂಗ್ರೆಸ್ಗೆ ಬಂದದ್ದು ಎರಡು. ಒಂದು ಅಮ್ಮ ಸೋನಿಯಾ ಗಾಂಧಿಯದು. ಮತ್ತೊಂದು ಮಗ ರಾಹುಲ್ದು. ಅಲ್ಲಿಗೆ ಕಾಂಗ್ರೆಸ್ ಚಿರನಿದ್ರೆಗೆ. ಎರಡು ಬಾರಿ ಸಿಎಂ ಆಗಿದ್ದ ಮಾಯಾವತಿಯ ಬಹುಜನ ಸಮಾಜ ಪಕ್ಷ ನಿಜ ಅರ್ಥದಲ್ಲೂ ಮಾಯ. ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣುತ್ತಿಲ್ಲ. ಪಕ್ಷವೇ ಅಪ್ರಸ್ತುತ ಎನ್ನುವ ಮಟ್ಟಿಗೆ ಬಂದಿರುವ ಮಾಯವತಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜನೆ ಮಾಡಿದ್ದಾರೆ. ಅಲ್ಲಿಗೆ ಬಿಎಸ್ಪಿಗೂ ಎಳ್ಳುನೀರು.
ಇನ್ನೂ ನರೇಂದ್ರ ಮೋದಿ ಗುಜರಾತ್ ಅಭಿವೃದ್ಧಿ ಮಾಡಿರುವುದಕ್ಕಿಂತ ಹೆಚ್ಚಾಗಿ ತಾವು ಬಿಹಾರವನ್ನು ಉದ್ಧಾರ ಮಾಡಿರುವುದಾಗಿ ಜಂಭ ಕೊಚ್ಚಿಕೊಳ್ಳುತ್ತಿದ್ದ ನಿತೀಶ್ಕುಮಾರ್ ಸಾರಥ್ಯದ ಜೆಡಿ(ಯು)ಗೆ ಕೇವಲ ಎರಡೇ ಎರಡು ಸ್ಥಾನ. ಲಾಲೂಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿಗೆ ನಾಲ್ಕು. ಈ ಎರಡು ಪಕ್ಷಗಳ ಅಂಗಳಗಳು ಒಟ್ಟೊಟ್ಟಿಗೆ ಸಾರಿಸಿ, ಗುಡಿಸಿ, ರಂಗೋಲಿ ಹಾಕಿಸಿಕೊಂಡಿವೆ. ಒಂದೆಡೆ ಅನ್ಯಪಕ್ಷಗಳು ಸದೃಢವಾಗಿದ್ದ ಕಡೆಯೂ ಬಿಜೆಪಿಯ ದಾಂಗುಡಿ. ಇನ್ನೊಂದೆಡೆ ಹಿಂದೆ ಬಿಜೆಪಿ ಹೀನಾಯ ಸ್ಥಿತಿ ಮುಟ್ಟಿದ್ದ ಜಾಗದಲ್ಲೂ ಅದರದೇ ರುದ್ರ ನರ್ತನ. ಉಳಿದೆಲ್ಲ ಪಕ್ಷಗಳನ್ನು ತರಗೆಲೆ ಮಾಡಿದ ಬಿಜೆಪಿಗೆ 283 ಸ್ಥಾನಗಳು. ಹಾಗಾದರೆ ಇದು ಏನನ್ನು ಸೂಚಿಸುತ್ತದೆ?
ನನಗೆ ಅನ್ನಿಸುವ ಹಾಗೆ ಸಮ್ಮಿಶ್ರ ಸರಕಾರದ ಯುಗ ಮುಗಿದಿದೆ. ಏಡಿಗಳಂತೆ ಒಬ್ಬರ ಕಾಲು ಮತ್ತೊಬ್ಬರು ಎಳೆಯುವ ಹತ್ತಾರು ಪಕ್ಷಗಳ ಬೆರಕೆ ಸರಕಾರ ಕೊಡುತ್ತಿದ್ದ ನರಕ ಯಾತನೆಗೆ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಗೆ ಪ್ರತಿಪಕ್ಷ ಸ್ಥಾನದಲ್ಲೂ ಕೂರುವ ಯೋಗ್ಯತೆಯನ್ನು ಜನ ಕರುಣಿಸಿಲ್ಲ. ನಿಷ್ಕರುಣವಾಗಿ ಬಡಿದು ಬಿಸಾಕಿದ್ದಾರೆ. ಅಧಿಕಾರದಲ್ಲಿದ್ದ ಮಹಾರಾಷ್ಟ್ರದಲ್ಲೂ ಎರಡೇ ಎರಡು ಸೀಟು. ಪ್ರತಿಪಕ್ಷ ಸ್ಥಾನದಲ್ಲೂ ಕೂರಲು ನಾಲಾಯಕ್ ಎಂಬ ಹಣೆಪಟ್ಟಿಯನ್ನು ಕಾಂಗ್ರೆಸ್ಗೆ ಅಂಟಿಸಿಬಿಟ್ಟಿದ್ದಾರೆ.
ಹಾಗಾದರೆ ಜನ ಬಿಜೆಪಿಗೆ ಕೊಟ್ಟ ಮತಗಳಾ ಇವು? ಹಾಗೇ ಅಂದುಕೊಳ್ಳಲು ಯಾವುದೇ ಕಾರಣಗಳು ಇಲ್ಲ. ಏಕೆಂದರೆ ಜನ ಬಿಜೆಪಿಯನ್ನು ಈ ಪ್ರಮಾಣದಲ್ಲಿ ಒಪ್ಪಿಕೊಳ್ಳುವಷ್ಟು ಹಠಾತ್ ಸೈದ್ಧಾಂತಿಕ ಬದಲಾವಣೆಗಳೇನೂ ಆ ಪಕ್ಷದಲ್ಲಿ ಆಗಿಲ್ಲ. ಹಾಗೇನಾದರೂ ಆಗಿದ್ದರೆ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯೇ ಸ್ವೀಪ್ ಮಾಡಿ ಅಧಿಕಾರಕ್ಕೆ ಬರಬೇಕಿತ್ತು. ಆಪ್ಗೆ ಅಲ್ಲಿ ಅವಕಾಶವೇ ಇರುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವ್ಯತ್ಯಾಸ ಇಲ್ಲ ಎಂದು ಜನ ಅಂದುಕೊಂಡಿದ್ದರಿಂದಲೇ ಆಪ್ನ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿಯಾದದ್ದು. ಹಾಗಾದರೆ ಈಗ ಬಿಜೆಪಿಗೆ ಬಂದಿರುವ ಸ್ಥಾನಗಳು ಜನ ಆ ಪಕ್ಷದ ಮುಖ ನೋಡಿ ಕೊಟ್ಟದ್ದಾ? ಖಂಡಿತವಾಗಿಯೂ ಇಲ್ಲ. ಜನ ಮೋದಿಗೋಸ್ಕರ, ಮೋದಿ ಪ್ರಧಾನಿ ಆಗಲೆಂದು ಮತ ಕೊಟ್ಟಿದ್ದರಿಂದಲೇ ಬಿಜೆಪಿಗೆ ಈ ಪರಿ ಸ್ಥಾನಗಳು ಬಂದಿದ್ದು. ಇದು ಬಿಜೆಪಿ ಆಣೆಗೂ ನಿಜ!
ನಿಜ, ಈ ಚುನಾವಣೆಯಲ್ಲಿ ಜನ ಮತ ಕೊಟ್ಟದ್ದು ಮೋದಿಗೆ. ಈ ಚುನಾವಣೆಯಲ್ಲಿ ಮೋದಿಯೇ ಬಿಜೆಪಿ ಚಿಹ್ನೆ. ಮೋದಿಯೇ ಬಿಜೆಪಿ ತತ್ವ, ಸಿದ್ಧಾಂತ. ಮೋದಿಯ ವ್ಯಕ್ತಿತ್ವ, ದಿಟ್ಟತನ, ಭಾರತೀಯತೆ, ಗುಜರಾತ್ ಮುಖ್ಯಮಂತ್ರಿಯಾಗಿ ಅವರ ಕಾರ್ಯಕ್ಷಮತೆ, ಬದ್ಧತೆ, ಅಭಿವೃದ್ಧಿ ಪಥದಲ್ಲಿ ಆ ರಾಜ್ಯವನ್ನು ಕೊಂಡೊಯ್ದ ಪರಿ, ಮೋದಿಯ ಸ್ವಚ್ಛ ಆಡಳಿತದ ಕನ್ನಡಿ, ಈ ದೇಶದ ಬಗ್ಗೆ ಅವರಿಗಿರುವ ಕನಸು, ಕನವರಿಕೆ, ಆಶಯ - ಇವೆಲ್ಲವೂ ಬಿಜೆಪಿ ಸಾಧನೆಯಲ್ಲಿ ಮಿಳಿತವಾಗಿದೆ, ಮಡುಗಟ್ಟಿದೆ. ಮೊನ್ನೆಯ ಮೋದಿ ಅವರ ಭಾಷಣದಲ್ಲಿನ ಒಂದು ಅಂಶವನ್ನು ಗಮನಿಸಬೇಕು. 'ಬಹಳ ಜನ ದೇಶದಲ್ಲಿ ಆಡಳಿತವಿರೋಧಿ ಅಲೆ ಇದೆ ಎಂದುಕೊಂಡರು. ಆದರೆ ಅದು ಸುಳ್ಳು. ಅವರು ಆಸೆ, ವಿಶ್ವಾಸ, ನಂಬಿಕೆ, ಪುನರುತ್ಥಾನ, ಭದ್ರತೆ, ಪ್ರಗತಿಯ ಹೊಂಗನಸಿಗೆ ಮತ ನೀಡಿದ್ದಾರೆ. ಜನ ಮೋದಿ ಅವರ ಮಾತು ಕೇಳಿದರು. ಮತ ಕೊಟ್ಟರು. ಅವರಲ್ಲಿ ಒಬ್ಬ ಚಿಂತಕನನ್ನು ಕಂಡರು, ಪ್ರವಾದಿಯನ್ನು ಅನ್ವೇಷಿಸಿದರು. ತಮ್ಮ ಬಿಂಬವನ್ನೇ ಕಂಡರು. ಮೋದಿ ಬರುತ್ತಾರೆ, ಜಾದು ಮಾಡುತ್ತಾರೆ, ಈ ದೇಶ ಉದ್ದಾರವಾಗುತ್ತದೆ ಅಂದುಕೊಂಡರು. ಹೀಗಾಗಿ ಈ ಚುನಾವಣೆಯಲ್ಲಿ ಕಂಡದ್ದು ಆಡಳಿತವಿರೋಧಿ ಅಲೆ ಅಲ್ಲ. ಬದಲಿಗೆ ಮೋದಿ ಪರ ಅಲೆ. ಮತಯಂತ್ರದಲ್ಲಿ ಮೋದಿಯನ್ನು ಹುಡುಕಿದರು. ಬಿಜೆಪಿ ಅರವಿಂದದ ಮೇಲೆ ಮೋದಿ ಮುಖಾರವಿಂದ ಕಂಡರು. ಅನ್ಯ ಚಿಂತೆ ಮಾಡದೆ ಗುಂಡಿ ಒತ್ತಿ ಬಂದರು. ಬಿಜೆಪಿಗೆ 283 ಅಲ್ಲ,  ಮೋದಿ ಅವರಿಗೆ 283 ಸ್ಥಾನಗಳು ಬಂದವು.
ಉತ್ತರ ಪ್ರದೇಶದಲ್ಲಿ ಸಾಮಾನ್ಯವಾಗಿ ಜಾತಿ ಲೆಕ್ಕಾಚಾರದ ರಾಜಕಾರಣವೇ ಸದಾ ರಾರಾಜಿಸುತ್ತದೆ. ಆದರೆ ಈ ಬಾರಿಯ ಆಶ್ಚರ್ಯವನ್ನು ಗಮನಿಸಬೇಕು. ಅಲ್ಲಿ ಒಬ್ಬೇ ಒಬ್ಬ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಮುಸ್ಲಿಂ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲೂ ಅತಿಹೆಚ್ಚಿನ ಮತದಾನವಾಗಿದೆ. ಅಲ್ಲೆಲ್ಲ ಬಿಜೆಪಿ ಅಭ್ಯರ್ಥಿಗಳೇ ವಿಜಯಿಯಾಗಿದ್ದಾರೆ. ದೇಶದೆಲ್ಲೆಡೆ ಈಗ ಗೆದ್ದು ಬಂದಿರುವ 283 ಪೈಕಿ ಒಬ್ಬರೇ ಒಬ್ಬರು ಮುಸ್ಲಿಂ ಇಲ್ಲ, ಕ್ರಿಶ್ಚಿಯನ್ ಇಲ್ಲ. ಇಲ್ಲಿ ಹಿಂದುತ್ವದ ಸಮರ್ಥನೆ, ಪ್ರದಿಪಾದನೆಯನ್ನು ಕಾಣಬಹುದು, ಅರ್ಥೈಸಬಹುದು. ಅದಕ್ಕಿಂತ ಹೆಚ್ಚಾಗಿ ಧರ್ಮ, ಜಾತಿ, ವರ್ಗ ಮೀರಿ ಮೋದಿ ಅವರಿಗೆ ಜನ ಮತ ಕೊಟ್ಟಿದ್ದಾರೆ ಎಂದು ಧಾರಾಳವಾಗಿ ಭಾವಿಸಬಹುದು.
ವ್ಯವಸ್ಥೆಯೇ ಉಲ್ಲಟ, ಪಲ್ಲಟವಾದಾಗ ಪ್ರಕೃತಿಯೇ ಸಮತೋಲನ ಕಾಯುತ್ತದೆ ಎಂಬ ಮಾತಿದೆ. ಈಗ ದೇಶದ ರಾಜಕೀಯ ವ್ಯವಸ್ಥೆ ಇಂಥ ಸ್ಥಿತಿಯನ್ನು ಎದುರಿಸುತ್ತಿದ್ದಾಗ ಮೋದಿ ಅವರೇ ಪ್ರಕೃತಿಯಾಗಿ ಆವಿರ್ಭವಿಸಿದ್ದಾರೆ ಎಂದು ಪ್ರಕೃತಿಯ ಶಕ್ತಿಯಲ್ಲಿ ನಂಬಿಕೆ ಇಟ್ಟವರು ಭಾವಿಸಿದರೆ ಅಚ್ಚರಿಪಡಬೇಕಿಲ್ಲ.
ಇಲ್ಲ ಅಂದರೆ ಮೈಸೂರಿನಲ್ಲಿ ಕನ್ನಡಪ್ರಭ ಅಂಕಣಕಾರ ಪ್ರತಾಪಸಿಂಹ ಅವರ ಗೆಲವಿನ ಹಿಂದೆ ಸಾಕಷ್ಟು ಕೆಮಿಸ್ಟ್ರಿಯನ್ನು ಕಾಣಲು ಸಾಧ್ಯವಿರಲಿಲ್ಲ. ಅವರ ಗೆಲವು ಕಾಂಗ್ರೆಸ್ನ ವಿಶ್ವನಾಥ್ ವಿರುದ್ಧ ಮಾತ್ರವಲ್ಲ. ಅವರ ಹೋರಾಟ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇತ್ತು. ಅವರ ಸಂಪುಟದ ನಾಲ್ವರು ಮಂತ್ರಿಗಳ ವಿರುದ್ಧ, ಕಾಂಗ್ರೆಸ್ನ ಆರು ಶಾಸಕರ ವಿರುದ್ಧ, ಹತ್ತಾರು ಕಾರ್ಪೊರೇಟರ್ಗಳ ವಿರುದ್ಧ ಇತ್ತು. ಇಲ್ಲಿ ಪ್ರತಾಪ ಬರೀ ಸಂಕೇತ ಮಾತ್ರ. ನಿಜವಾದ ಶಕ್ತಿ ನರೇಂದ್ರ ಮೋದಿ ಅವರೇ. ಜನ ಅವರಿಗೆ ಮತ ಕೊಟ್ಟರು. ಹಿಂದೆ ಇಂದಿರಾಗಾಂಧಿ ಅವಧಿಯಲ್ಲಿ ಬೇಲಿಭೂತ ನಿಂತರು ಆರಿಸಿ ಬರುತ್ತದೆ ಎಂದು ಜನ ಹೇಳುತ್ತಿದ್ದರು. ಈಗ ಮೋದಿ ಅವರ ಅವಧಿಯಲ್ಲಿ ಅದೇ ಮರುಕಳಿಸಿದೆ.
ನಿಜ ಎಷ್ಟೋ ಕಡೆ ಬಿಜೆಪಿ ಅಭ್ಯರ್ಥಿಗಳು ತಮಗೆ ಮತ ಕೊಡಿ ಎಂದು ಕೇಳಿಲ್ಲ. ಬಿಜೆಪಿಗೆ ಕೊಡಿ ಅಂತಲೂ ಹೇಳಿಲ್ಲ. ಬದಲಿಗೆ ನರೇಂದ್ರ ಮೋದಿ ಅವರಿಗೆ ಕೊಡಿ ಎಂದರು. ಅವರ ಹೆಸರು ಹೇಳಿಕೊಂಡೇ ಅನೇಕರು ಗೆದ್ದರು. ಸೋಲಬೇಕಾದವರು, ಠೇವಣಿ ಕಳೆದುಕೊಳ್ಳಬೇಕಾದವರೆಲ್ಲ ಮೋದಿ ಹೆಸರಡಿ ಬಚಾವಾದರು. ಒಂದು ಕಡೆ ಬಿಜೆಪಿಯವರು ಮೋದಿ ಹೆಸರನ್ನು ಒಂದು ರೀತಿ ಹೇಳಿದರೆ, ಮತ್ತೊಂದು ಕಡೆ ಪ್ರತಿಪಕ್ಷಗಳ ಮುಖಂಡರು ಮತ್ತೊಂದು ರೀತಿಯಲ್ಲಿ ಅವರ ನಾಮಸ್ಮರಣೆ ಮಾಡಿದರು. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಮೋದಿ ಅವರನ್ನು ಟೀಕೆ ಮಾಡಿಕೊಂಡು ಬಂದರು. ದೇಶದ ಎಲ್ಲೆಡೆ ಇದೇ ಕತೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಪಿಲ್ ಸಿಬಲ್, ದಿಗ್ವಿಜಯ್ಸಿಂಗ್, ಮಾಯಾವತಿ, ಮಮತಾ ಬ್ಯಾನರ್ಜಿ, ಒಮರ್ ಅಬ್ದುಲ್ಲಾ, ಲಾಲುಪ್ರಸಾದ್ ಯಾದವ್, ನಿತಿಶ್ಕುಮಾರ್ ಯಾರಿಗೂ ಮೋದಿ ಹೆಸರೇಳದೆ ನಿದ್ದೆಯೇ ಬರುತ್ತಿರಲಿಲ್ಲ. ಪ್ರತಿಯೊಬ್ಬರೂ ಅವರ ಬಗ್ಗೆಯೇ ಮಾತಾಡಿದರು. ಮೋದಿ ಅವರು ದೇಶದ ಉದ್ದಗಲ ಸಂಚರಿಸಿ 419 ಕಡೆ ಮಾಡಿದ ಭಾಷಣ ಒಂದು ಕಡೆಯಾದರೆ, ವಿರೋಧಿಗಳು ಕೊಟ್ಟ ಪರೋಕ್ಷ ಪ್ರಚಾರ ಇನ್ನೊಂದು ಕಡೆ. ಮೋದಿ ಹೋದ ಕಡೆ ಲಕ್ಷ, ಲಕ್ಷ ಜನ ಸೇರಿದರು. ಆ ವಿದ್ಯಮಾನಗಳು ಬರೀ ಅಲ್ಲಿನ ಜನಕ್ಕೆ ಮಾತ್ರ ಸೀಮಿತವಾಗಲಿಲ್ಲ. ಇಂಟರ್ನೆಟ್, ಟಿವಿಗಳ ಮೂಲಕ ಎಲ್ಲೆಡೆಗೂ, ಎಲ್ಲರಿಗೂ ನಿಲುಕಿತು. ಟಿವಿ, ರೇಡಿಯೋ, ಪೇಪರ್, ಬಸ್ಸ್ಟಾಂಡ್, ಹೋಟೆಲ್, ಸ್ಕೂಲು, ಕಾಲೇಜು, ಹೊಲ-ಗದ್ದೆ, ಮನೆ-ಮಠ ಎಲ್ಲೆಡೆ ಮೋದಿಯದ್ದೇ ಮಾತು. ಜನ ಮಾತಾಡಿದರು, ಮತ ನೀಡಿದರು.
ಈಗ ಹೇಳಿ ಜನ ವೋಟು ಕೊಟ್ಟದ್ದು ಮೋದಿಗೋ, ಬಿಜೆಪಿಗೋ? ಮೋದಿ ಬರೀ ಅನ್ಯ ರಾಷ್ಟ್ರೀಯ ಪಕ್ಷಗಳನ್ನು ಮಾತ್ರ ಧೂಳೀಪಟ ಮಾಡಲಿಲ್ಲ. ತಾವು ಪ್ರತಿನಿಧಿಸುವ ಬಿಜೆಪಿಯನ್ನೂ ಬದಿಗೊತ್ತಿ ವಿಜೃಂಭಿಸಿದರು. ಜನ ಮೋದಿಯಲ್ಲಿ ಬಿಜೆಪಿ ಕಂಡರೇ ಹೊರತು, ಬಿಜೆಪಿಯಲ್ಲಿ ಮೋದಿ ಅವರನ್ನು ಕಾಣಲಿಲ್ಲ. ಮೋದಿ ಮಾಡಿದ ಮೋಡಿ ಬಗ್ಗೆ ಹೀಗೊಂದು ಲಘು ಹಾಸ್ಯ ಮಾಡಬಹುದು. ಮೋದಿ ಅವರಿಗೆ ಮನೆಯಲ್ಲಿ ಅಂದರೆ ಬಿಜೆಪಿಯಲ್ಲಿ ಹಿರಿಕಿರಿಯರ ಯಾವುದೇ ಕಿರಿಕಿರಿ ಇಲ್ಲ. ಸಂಸತ್ತಿಗೆ ಬಂದರೆ ಕಿರಿಕಿರಿ ಮಾಡಲು ವಿರೋಧ ಪಕ್ಷಗಳೇ ಇಲ್ಲ!

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ