ಅಂಕಣಗಳು

ಊಹಾ ಪ್ರಪಂಚದ ಮೆರವಣಿಗೆಯಲ್ಲಿ 'ಕೈ'ಸುಟ್ಟ ಸಚಿವರ ಸಾಲು!

ಕೆಲವೊಮ್ಮೆ ತೀವ್ರ ಮಾನಸಿಕ ಆಘಾತಗಳು ಮನುಷ್ಯನನ್ನು ವಿಕಲ್ಪಕ್ಕೆ...

ಕೆಲವೊಮ್ಮೆ ತೀವ್ರ ಮಾನಸಿಕ ಆಘಾತಗಳು ಮನುಷ್ಯನನ್ನು ವಿಕಲ್ಪಕ್ಕೆ ಒಳಪಡಿಸುತ್ತವೆ. ತಾನೇನು ಮಾಡುತ್ತಿದ್ದೇನೆಂಬ ಅರಿವನ್ನು ಈ ವಿಕಲ್ಪ ನುಂಗಿ ಹಾಕುತ್ತದೆ. ಆಗ ಸಹಜವಾಗಿಯೇ ಆತನ ವರ್ತನೆ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾಗೂ ಪ್ರದೇಶ ಕಾಂಗ್ರೆಸ್ ನಾಯಕರ ವರ್ತನೆಯನ್ನು ನೋಡಿದಾಗ ಈ ಮಾತು ನಿಜವೆನಿಸಬಹುದು.
ಲೋಕಸಭೆ ಚುನಾವಣೆ ಫಲಿತಾಂಶದ 'ಷಾಕ್'ನಿಂದಾಗಿ ರಾಜ್ಯ ಕಾಂಗ್ರೆಸ್ ನಾಯಕರು ಹೀಗೆ ಆಡುತ್ತಿರಬಹುದೇ? ಗೊತ್ತಿಲ್ಲ. ಯಾಕೆಂದರೆ ರಾಷ್ಟ್ರೀಯ ನಾಯಕರಿಗೇ ಏನಾಗಿ ಹೋಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು, ಅರಗಿಸಿಕೊಳ್ಳಲು ಇನ್ನು ಸಾಧ್ಯವಾಗಿಲ್ಲ. ಅವರಿನ್ನೂ 'ಷಾಕ್' ಸ್ಥಿತಿಯಲ್ಲಿಯೇ ಇದ್ದಾರೆ. ಹಾಗಾದರೆ ರಾಜ್ಯ ನಾಯಕರು ಅವರಿಗಿಂತ ವೇಗವಾಗಿ 'ಷಾಕ್'ನಿಂದ ಹೊರಬಂದಿದ್ದಾರೆಯೇ? ಉಹುಂ. ಇಲ್ಲ. ಆದರೆ ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಆಡುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷಕ್ಕೆ ಬಿದ್ದಿರುವ ಹೊಡೆತವನ್ನು ಪಕ್ಕಕ್ಕೆ ಸರಿಸಿ, ರಾಜ್ಯದ ಪರಿಸ್ಥಿತಿಯನ್ನು ಮಾತ್ರ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ನೋಡುತ್ತಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ನಲ್ಲೀಗ 'ಊಹಾ ಪ್ರಪಂಚ'ದ ಮೆರವಣಿಗೆ. ಇಲ್ಲಿ ದಿನಕ್ಕೊಂದರಂತೆ ಸೃಷ್ಟಿ ಆಗುತ್ತಿರುವ 'ಕಾಗಕ್ಕ ಗುಬ್ಬಕ್ಕ' ಕತೆಗಳು ಕಾಂಗ್ರೆಸ್ಸನ್ನು ಮತ್ತಷ್ಟು ಶೋಚನೀಯ ಸ್ಥಿತಿಗೆ ತಳ್ಳುತ್ತಿವೆ.
ಹೌದು, ಪ್ರದೇಶ ಕಾಂಗ್ರೆಸ್ ನಾಯಕರಲ್ಲಿ ಮಡುಗಟ್ಟಿದ್ದ ಅಸಮಾಧಾನ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಒಂದೊಂದಾಗಿ ಹೊರಬೀಳುತ್ತಿದೆ. ಯಾರ್ಯಾರ ಮನಸ್ಸಿನಲ್ಲಿ ಏನೇನು ಅಡಗಿತ್ತೋ ಅದೆಲ್ಲವೂ ಮಿತಿ ಮೀರಿ ಕುಡಿದವರು ವಾಂತಿ ಮಾಡಿಕೊಳ್ಳುವಂತೆ ಆಚೆ ಬರುತ್ತಿದೆ. "ಈಗಲೋ, ಆಗಲೋ ಮಂತ್ರಿ ಮಂಡಲ ಪುನಾರಚನೆ ಆಗುತ್ತದಂತೆ. ಆ ಮಂತ್ರಿಯನ್ನು ಕೈ ಬಿಡುತ್ತಾರಂತೆ, ಈ ಮಂತ್ರಿಯನ್ನು ಬದಲಾಯಿಸುತ್ತಾರಂತೆ. ರಾಜ್ಯದಲ್ಲಿ 18 ಸ್ಥಾನಗಳು ಬರಬಹುದು ಎಂದು ಹೈಕಮಾಂಡ್ ನಿರೀಕ್ಷೆ ಮಾಡಿತ್ತಂತೆ. ಈಗ ಕೇವಲ ಒಂಬತ್ತು ಸ್ಥಾನಗಳು ಅಂದರೆ ಅರ್ಧದಷ್ಟು ಬಂದಿರುವುದರಿಂದ ಸಿದ್ದರಾಮಯ್ಯ ನಾಯಕತ್ವವೇ ಬದಲಾಗುತ್ತದಂತೆ". ಹೀಗೆ, ಹತ್ತು ಹಲವು ವದಂತಿಗಳು ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಾಳಯದಲ್ಲಿ ಗಿರಕಿ ಹೊಡೆಯುತ್ತಿದೆ.    ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಬರೀ ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಚಾಪೆ ಮೇಲೆತ್ತಿ ಹುಡುಕಿ ನೋಡುವಂತೆ ಆಗಿದೆ. ರೈಲಿಗೆ ಸಿಕ್ಕಿ ಚಿಂದಿ-ಚಿಂದಿ ಆದ ದೇಹದ ಅವಯವಗಳನ್ನು ಒಂದೆಡೆ ಜೋಡಿಸಿ ಗುರುತು ಪತ್ತೆ ಮಾಡುವುದು ಎಷ್ಟು ಕಷ್ಟವೋ ಅಂಥ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಹೀಗಿರುವಾಗ ಅದಕ್ಕೆ ಪ್ರಾಣ ತುಂಬಲು ಸಾಧ್ಯವೇ? ಕಾಂಗ್ರೆಸ್ನ ಮೂರ್ಖ ನಾಯಕರು ಇಂಥ ಪವಾಡ ಊಹಿಸಿ, ವರ್ತಿಸುತ್ತಿರುವುದರ ಹಿಂದೆ ಅದೇ ಮಾನಸಿಕ ವಿಕಲ್ಪ ಕೆಲಸ ಮಾಡುತ್ತಿದೆ.
ಕಾಂಗ್ರೆಸ್ ಈಗ ತಲುಪಿರುವ ಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸರ್ಜರಿಗೆ ಕೈ ಹಾಕಲು ಸಾಧ್ಯವೇ? ಹಾಗೇನಾದರೂ ಮಂತ್ರಿ ಮಂಡಲ ಪುನಾರಚನೆಗೆ ಕೈ ಹಾಕಿದರೆ, ತಮ್ಮ ಮೇಲೆ ಎರಗಲು ಕಾಯ್ದು ಕೂತಿದ್ದವರ ಕೈಗೆ ಇವರೇ ದೊಣ್ಣೆ ಕೊಟ್ಟು ಹೊಡೆಸಿಕೊಂಡಂತೆ ಆಗುವುದಿಲ್ಲವೇ? ತಮ್ಮ ಕಾಲೆಳೆಯಲು ಹಲವಾರು ಮಂದಿ ಕಾಯ್ದು ಕುಳಿತಿರುವಾಗ ಇವರಾಗಿಯೇ ನೆಲದ ಮೇಲೆ ಎಣ್ಣೆ ಚೆಲ್ಲಿ ಜಾರಿ ಬೀಳುತ್ತಾರೆಯೇ?
ಇಲ್ಲ, ಇವೆಲ್ಲವೂ ಕೇವಲ ಊಹಾಪೋಹ. ಸದ್ಯಕ್ಕೆ ಸಿದ್ದರಾಮಯ್ಯ ಅವರ ಮುಂದಿರುವುದು ಮುಂದಿನ ತಿಂಗಳು ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ನಡೆಯಲಿರುವ ಚುನಾವಣೆ. ಈ ಎರಡೂ ಕಡೆ ಪ್ರವೇಶಕ್ಕೆ ಸಾಕಷ್ಟು ಆಕಾಂಕ್ಷಿಗಳಿರುವುದರಿಂದ ಅದನ್ನು ಸಂಭಾಳಿಸುವುದರತ್ತ ಅವರ ಗಮನ ನೆಟ್ಟಿದೆ. ಮೊದಲು ಈ ಚುನಾವಣೆ. ನಂತರ ಪಕ್ಷ ಸಂಘಟನೆ. ಆನಂತರ ಬೇರೆ ವಿಚಾರಗಳು. ಆದರೂ ಸಂಪುಟ ಪುನಾರಚನೆ ಸಂಭವ ಸದ್ಯದ ಮಟ್ಟಿಗೆ ತೀರಾ ಕಡಿಮೆ. ಆದರೂ ಈ ಸುದ್ದಿ ಹಬ್ಬಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗಳಿಸದಿದ್ದರೆ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಆಗುತ್ತದೆ ಎಂದು ಹಿಂದೆ ಸುದ್ದಿ ಹಬ್ಬಿಸಿದವರೇ ಈಗಲೂ ಅದೇ ಕೆಲಸ ಮುಂದುವರಿಸಿದ್ದಾರೆ. ಆದರೆ ವಿಷಯ ಬೇರೆ. ಲೋಕಸಭೆ ಚುನಾವಣೆ ಫಲಿತಾಂಶ ಬೆನ್ನಲ್ಲೇ ದಿಲ್ಲಿಗೆ ತೆರಳಿ ಹೈಕಮಾಂಡ್ನಿಂದ ಸಿಎಂ ಸ್ಥಾನದಲ್ಲಿ "ಸುಗಮ ಮುಂದುವರಿಕೆ" ಭರವಸೆ ಪಡೆದು ಬಂದ ನಂತರ ವಿರೋಧಿಗಳ ಪ್ಲೇಟ್ ಬದಲಾಗಿದೆ. ಅದು ಸಂಪುಟ ಪುನಾರಚನೆಯತ್ತ ಹೊರಳಿದೆ.
ನಿಜ. ಕೆಲವು ಕಡೆ ಪಕ್ಷದ ಅಭ್ಯರ್ಥಿಗಳ ಸೋಲಿನ ಹಿಂದೆ ಮಂತ್ರಿಗಳು ಹಾಗೂ ನಾಯಕರ ಕುತಂತ್ರ, ಕುತ್ಸಿತ ಬುದ್ಧಿ, ದ್ವೇಷ, ಅಸೂಯೆ ಕೆಲಸ ಮಾಡಿದೆ. ಈ ಬಗ್ಗೆ ಕೆಲ ಅಭ್ಯರ್ಥಿಗಳು ನೇರವಾಗಿಯೇ ಹೈಕಮಾಂಡ್ಗೆ ದೂರು ನೀಡಿದ್ದಾರೆ. ತಮ್ಮ ಸೋಲಿಗೆ ಕಾರಣವೇನು ಎಂಬುದರ ಬಗ್ಗೆ ವರದಿ ತರಿಸಿಕೊಳ್ಳಲು ಅಭ್ಯರ್ಥಿ ರಮ್ಯಾ ಕೋರಿಕೆ ಸಲ್ಲಿಸಿದ್ದರೆ, ಹಾವೇರಿ ಅಭ್ಯರ್ಥಿ ಸಲೀಂ ಮಹಮದ್ ಸಚಿವ ಎಚ್.ಕೆ. ಪಾಟೀಲ್ ಹಾಗೂ ಮುಖಂಡ ಕೋಳಿವಾಡ ವಿರುದ್ಧ ದೂರು ನೀಡಿದ್ದಾರೆ. ಇಂಥ ಅಪಸ್ವರಗಳು ಅಲ್ಲಲ್ಲಿ ಕೇಳಿಬಂದಿವೆ. ಬೇರೆ ಸಂದರ್ಭದಲ್ಲಾಗಿದ್ದರೆ ಈ ದೂರುಗಳು ಗಂಭೀರವಾಗಿ ಪರಿಗಣಿತ ಆಗುತ್ತಿದ್ದವೋ ಏನೋ? ಆದರೆ ಇಡೀ ದೇಶದಲ್ಲೇ ಕಾಂಗ್ರೆಸ್ ಗುಡಿಸಿ, ಗುಂಡಾಂತರ ಆಗಿರುವಾಗ ವ್ಯಕ್ತಿಗತ ಸೋಲಿನ ವಿಶ್ಲೇಷಣೆ ಹಾಗೂ ಅದರ ಹೊಣೆಯನ್ನು ನಿರ್ದಿಷ್ಟ ವ್ಯಕ್ತಿಗಳ ಹಣೆಗೆ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ. ಒಂದೊಮ್ಮೆ ಕಟ್ಟಿದರೂ ಅವರ ಸ್ಥಾನಮಾನಗಳನ್ನು ಕಸಿದುಕೊಳ್ಳುವ ನೈತಿಕ ಹಂತದಲ್ಲಿ ಇಲ್ಲ. ಹಾಗೇನಾದರೂ ಆದರೆ ಅದಕ್ಕಿಂತ ಹೆಚ್ಚು ಸಚಿವರು ಸಿದ್ದರಾಮಯ್ಯ ಸಂಪುಟದಿಂದ ಬರಖಾಸ್ತಾಗಿ ಪದವಿ ಕಳೆದುಕೊಂಡವರದೇ 'ದೊಡ್ಡ ಸಂಪುಟ' ಆಗುತ್ತದೆ.
ಅದೇನೇ ಇರಲಿ, ಸಿದ್ದರಾಮಯ್ಯ ಸಂಪುಟ ಸೇರಲು ದೊಡ್ಡ ದಂಡೇ ಕಾಯ್ದು ಕುಳಿತಿದೆ. ಅದರಲ್ಲೂ ವಿಶೇಷವಾಗಿ ಮೇಲ್ವರ್ಗದವರು. ಇವರ ಜತೆಗೆ ಸರಿಯಾಗಿ 'ಊಟ' ಸಿಗದ ಖಾತೆಯ ಸಚಿವರೂ ಸೇರಿಕೊಂಡಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಮೂಲಕಾಂಗ್ರೆಸ್ಸಿಗರು ಎಂಬುದು ಮತ್ತೊಂದು ವಿಶೇಷ. ಇವರೆಲ್ಲರ ಮೂಲ ಉದ್ದೇಶ ಆಯಕಟ್ಟಿನ ಸ್ಥಾನಗಳನ್ನು ಪಡೆಯುವುದು. ಹಾಗೂ ಸಿದ್ದರಾಮಯ್ಯ ನಾಯಕತ್ವಕ್ಕೆ ಪರ್ಯಾಯವಾಗಿ ಭಿನ್ನ ತಂಡವನ್ನು ರಚಿಸುವುದು. ಆದರೆ ಇಲ್ಲೊಂದು ಸಮಸ್ಯೆ ಆಗಿ ಕೂತಿದೆ. ಆರಂಭದಲ್ಲಿ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗದೇ ಹೋದ ಡಿ.ಕೆ. ಶಿವಕುಮಾರ್ ಭಿನ್ನ ನಾಯಕತ್ವ ವಹಿಸಿಕೊಳ್ಳುತ್ತಾರೆ, ಅದೇ ರೀತಿ ಎಚ್.ಕೆ. ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ 'ಫೈಟ್' ಕೊಡಬಹುದು ಎಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ಇತ್ತು. ಆದರೆ 'ಕಾಲಾಯ ತಸ್ಮೈ ನಮಃ' ಎಂಬಂತೆ ಈ ಇಬ್ಬರೂ ನಾಯಕರು ಇದೀಗ ಸಿದ್ದರಾಮಯ್ಯ 'ಆಪ್ತ ವಲಯ' ಸೇರಿದ್ದಾರೆ. ಹೀಗಾಗಿ 'ಭಿನ್ನಮತೀಯ ಚಟುವಟಿಕೆ' ಎಂಬ ಪದವೇ 'ಸದ್ಯಕ್ಕೆ' ಖದರು ಕಳೆದುಕೊಂಡಿದೆ.
ಯಾವುದೇ ಭಿನ್ನಮತೀಯ ಚಟುವಟಿಕೆ ಎಂಬುದು ಮೊಳಕೆಯೊಡೆಯಲು ಕನಿಷ್ಠ ಒಂದು ವರ್ಷವಾದರೂ ಬೇಕು. ಈಗ ಅಲ್ಲಲ್ಲಿ ಬೀಜ ಬಿತ್ತುವ ಕೆಲಸ ನಡೆದಿದೆ. ಪ್ರಬಲ ನಾಯಕತ್ವ ಇದ್ದರಷ್ಟೇ ಈ ಬೀಜ ಮೊಳಕೆಯೊಡೆಯಲು ಸಾಧ್ಯ. ಸದ್ಯಕ್ಕೀಗ ಬಿತ್ತನೆಗಷ್ಟೇ ಸೀಮಿತವಾಗಿದೆ. ಸಂಪುಟ ಪುನಾರಚನೆ, ಆ ಸಚಿವರ ಸ್ಥಾನ ಕಸಿತ, ಈ ಸಚಿವರ ಸ್ಥಾನ ಕಸಿತ ಎಂಬ ವದಂತಿಗಳು ಈ ಬಿತ್ತನೆಯ ಭಾಗವಷ್ಟೇ.
ಹಾಗೆ ನೋಡಿದರೆ ಸಂಪುಟ ಪುನಾರಚನೆ ಬಗ್ಗೆ ಸಿದ್ದರಾಮಯ್ಯ ಅವರಿಗೂ ಆಸಕ್ತಿ ಇಲ್ಲ. ತಮ್ಮೂರು ಮೈಸೂರಲ್ಲಿ ಸೋತ ಎಚ್.ಕೆ. ವಿಶ್ವನಾಥ್ ಅವರನ್ನೇ ಎಂಎಲ್ಸಿ ಮಾಡಿ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದಾಗ ಸಿದ್ದರಾಮಯ್ಯ 'ಬಿಲ್ಕುಲ್' ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಸೋತವರನ್ನೆಲ್ಲ ಎಂಎಲ್ಸಿ ಹಾಗೂ ಮಂತ್ರಿ ಮಾಡುವುದಾದರೆ ರಾಜ್ಯದಲ್ಲಿ 19 ಜನ ಸೋತಿದ್ದಾರೆ. ಅವರನ್ನೆಲ್ಲ ಮಂತ್ರಿ ಮಾಡಲು ಆಗುತ್ತದಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವರ ಮಾತು ವಿಶ್ವನಾಥ್ ಅವರ ಬಗ್ಗೆಯೇ ಆದರೂ ಗುರಿ ಮಾತ್ರ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಎಂಬುದು ಸುಳ್ಳಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋತ ಒಂದು ವರ್ಷದಿಂದ ಸಂಪುಟ ಸೇರಲು ಯತ್ನಿಸುತ್ತಿರುವ ಪರಮೇಶ್ವರ್ ಅವರನ್ನು ದೂರ ಇಡಲೆಂದೇ ಸಿದ್ದರಾಮಯ್ಯ ಈ ಮಾತು ಆಡಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪರಮೇಶ್ವರ್ ಮಂತ್ರಿಯಾಗಿ ಸಂಪುಟಕ್ಕೆ ಬರುವುದೂ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಹೀಗಾಗಿ ವಿಶ್ವನಾಥ್ ನೆಪ ಮಾಡಿಕೊಂಡು ಪರಮೇಶ್ವರ್ ಮೇಲೆ ಬಾಣಬಿಟ್ಟಿದ್ದಾರೆ.
ಇಲ್ಲಿ ಇನ್ನೂ ಒಂದು ವಿಷಯವಿದೆ. ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ 'ಹಸಿರು ನಿಶಾನೆ' ತೋರಿಸಲು  ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ತಮ್ಮ ಗಮನಕ್ಕೆ ತಂದು ಪೂರ್ವಾನುಮತಿ ಪಡೆಯಬೇಕೆಂಬ ಸೂಚನೆಯನ್ನು ನೀಡಿದೆ. ಹೀಗಾಗಿ ತಮಗೆ ಬೇಡದವರನ್ನು ಕೈಬಿಟ್ಟು ಬೇಕಾದವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಕಡಿವಾಣ ಬಿದ್ದಿದೆ. ಇದು ವಿಶ್ವನಾಥ್ ವಿಚಾರದಲ್ಲಿ ಸಾಂಕೇತಿಕವಾಗಿ ಪ್ರತಿಬಿಂಬಿತವಾಗಿದೆ.  ಹಾಗೆಂದು ಸಿದ್ದರಾಮಯ್ಯ ಸಂಪುಟದ ಸದಸ್ಯರೆಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಯಾರೂ ಭಾವಿಸಬೇಕಿಲ್ಲ. ಅವರ ಬಹುಮುಖ್ಯ ಸಮಸ್ಯೆಯೆಂದರೆ ನಿಷ್ಕ್ರಿಯತೆ. ಅಧಿಕಾರ ವಹಿಸಿಕೊಂಡು ವರ್ಷವಾದರೂ ಬಹುತೇಕ ಸಚಿವರಿಗೆ ತಮ್ಮ ಖಾತೆಗಳೇ ಅರ್ಥವಾಗಿಲ್ಲ. ಬಹಳಷ್ಟು ಸಚಿವರು ಕಾಲಕಾಲಕ್ಕೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿಲ್ಲ. ತಮ್ಮ ಇಲಾಖೆಯ ಬಗ್ಗೆ ಪರಾಮರ್ಶೆ ನಡೆಸುತ್ತಿಲ್ಲ. ಅಲ್ಲಿ ಏನು ಕೆಲಸ ಆಗಿದೆ ಎಂದು ತಿಳಿದುಕೊಳ್ಳಬೇಕಾದರೆ ಆ ಇಲಾಖೆಗಳ ಬಗ್ಗೆ ಪರಾಮರ್ಶೆ ಮಾಡಬೇಕಾದ ದುರ್ದೈವ ಮುಖ್ಯಮಂತ್ರಿಗಳದ್ದಾಗಿದೆ! ಪ್ರತಿಪಕ್ಷಗಳು ಆ ಇಲಾಖೆಗಳ ಬಗ್ಗೆ ಹಾಗೂ ಪಕ್ಷದ ಬಗ್ಗೆ ಟೀಕೆ ಮಾಡಿದರೆ ಅದಕ್ಕೆ ಉತ್ತರ ನೀಡುವ ಕನಿಷ್ಠ ಕೆಲಸವನ್ನೂ ಸಚಿವರು ಮಾಡುತ್ತಿಲ್ಲ.
ಶಾದಿ ಭಾಗ್ಯದಂಥ ಯೋಜನೆಗಳ ಬಗ್ಗೆ ಪ್ರತಿಪಕ್ಷದವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರೂ ಕೂಡ ಸಚಿವರುಗಳು ಉಸಿರೇ ಎತ್ತಲಿಲ್ಲ. ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸಿದರು. ಹೀಗಾಗಿ ಈ ಬಗ್ಗೆ ಜನರಿಗೆ ಉತ್ತರ ನೀಡುವುದು ಸರ್ಕಾರದ ಪ್ರತಿನಿಧಿಯಾಗಿ ಸಿದ್ದರಾಮಯ್ಯ ಅವರಿಗೆ ಕಷ್ಟವಾಗಿದೆ.
ಸರ್ಕಾರ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ತಂದಿದ್ದರೂ ಕೂಡ ಅದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಂತ್ರಿಗಳು ವಿಫಲರಾಗಿದ್ದಾರೆ ಎನ್ನುವುದು ಲೋಕಸಭೆ ಚುನಾವಣೆಯಲ್ಲಿ ವ್ಯಕ್ತವಾಗಿದೆ. ಯೋಜನೆಯನ್ನು ಘೋಷಿಸುವುದು ದೊಡ್ಡದಲ್ಲ, ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದಿದ್ದರೆ ಕಾಂಗ್ರೆಸ್ ಸ್ಥಿತಿ ಉತ್ತಮವಾಗುತ್ತಿತ್ತೋ ಏನೋ?  ಈಗ ಲೋಕಸಭೆ ಚುನಾವಣೆ ಬೆನ್ನಲ್ಲಿ ಸಂಪುಟ ಪುನಾರಚನೆ ಆಗುತ್ತದೆ ಎಂಬ ಸುದ್ದಿಗಳು ಕೇಳಿಬಂದ ನಂತರ ಈ ಮಂತ್ರಿಗಳು ದಿಢೀರನೇ ಎದ್ದು ಕುಳಿತಿದ್ದಾರೆ. ಪತ್ರಿಕಾಗೋಷ್ಠಿ ನಡೆಸುವುದು, ಅಧಿಕಾರಿಗಳ ಸಭೆ ಕರೆಯುವುದು ಮಾಡುತ್ತಿದ್ದಾರೆ. ಈ ಜ್ಞಾನೋದಯದ ಹಿಂದೆ ತಮ್ಮ ಪದವಿ ಎಲ್ಲಿ ಕಿತ್ತುಕೊಂಡು ಹೋಗುವುದೋ ಎಂಬ ಭಯ ಕೆಲಸ ಮಾಡಿದೆ.
ಒಂದು ವರ್ಷದಲ್ಲಿ ಸರ್ಕಾರ ಇದೆ ಅನ್ನುವುದೂ ಜನರಿಗೆ ಮನವರಿಕೆ ಆಗಿಲ್ಲ. ಇಂಥ ಮಂತ್ರಿಗಳನ್ನು ಇಟ್ಟುಕೊಂಡು ಏನು ಮಾಡಬೇಕು ಅನ್ನುವ ಪ್ರಶ್ನೆ ಕೂಡ ಇದೆ. ಚುನಾವಣಾ ಫಲಿತಾಂಶಕ್ಕೆ ಇವರನ್ನು ಹೊಣೆ ಮಾಡದೇ ಇದ್ದರೂ ಕೂಡ ಇವರ ನಿಷ್ಕ್ರಿಯತೆಗೆ ಬೇರೆಯವರನ್ನು ಹೊಣೆ ಮಾಡುವುದಕ್ಕೆ ಆಗುವುದಿಲ್ಲ.  ಒಂದು ಕಡೆ ಇಂಥ ಮಂತ್ರಿಗಳೊಂದಿಗೆ ಏಗುವುದಕ್ಕೂ ಆಗದೆ, ಕೈ ಬಿಡುವುದಕ್ಕೂ ಆಗದೇ, ಈ ಎರಡೂ ವೈರುಧ್ಯಗಳ ನಡುವೆ ತಮ್ಮ ಪದವಿಯನ್ನು ಉಳಿಸಿಕೊಂಡು ಹೋಗುವಂಥ ಸಂದಿಗ್ಧತೆಯಲ್ಲಿ ಸಿದ್ದರಾಮಯ್ಯ ಸಿಲುಕಿದ್ದಾರೆ. ಸರ್ಕಾರ ಉತ್ತಮವಾಗಿ ಕೆಲಸ ಮಾಡಲಿಲ್ಲವೆಂದರೆ ಮಂತ್ರಿಗಳಿರಲಿ ಮುಖ್ಯಮಂತ್ರಿಗಳೂ ಕೂಡ ಹೊಣೆ ಹೊರಬೇಕಾಗುತ್ತದೆ. ಆ ಹೊಣೆಗಾರಿಕೆಗೆ ಅವರ ಸ್ಥಾನವೂ ಪಣಕ್ಕಿರುತ್ತದೆ.
ಲಗೋರಿ: ವಾಸ್ತವ ಒಪ್ಪಿಕೊಳ್ಳುವುದು 4ವಿಜಯದ ಮೊದಲ ಮೆಟ್ಟಿಲಾಗಬಲ್ಲದು.

-ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!